ಪ್ರಧಾನ ಮಂತ್ರಿಯವರ ಕಛೇರಿ
ಭಾರತ ಸಿಂಗಾಪುರ ಜಂಟಿ ಹೇಳಿಕೆ
Posted On:
04 SEP 2025 8:04PM by PIB Bengaluru
ಸಿಂಗಾಪುರ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಲಾರೆನ್ಸ್ ವಾಂಗ್ ಅವರ ಭಾರತ ಗಣರಾಜ್ಯಕ್ಕೆ ಅಧಿಕೃತ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಸಿಂಗಾಪುರ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಮಾರ್ಗಸೂಚಿಯ ಕುರಿತು ಜಂಟಿ ಹೇಳಿಕೆ
1. ಭಾರತ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ಸಿಂಗಾಪುರ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಲಾರೆನ್ಸ್ ವಾಂಗ್ ಅವರು 2025ರ ಸೆಪ್ಟೆಂಬರ್ 2 ರಿಂದ 4 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದರು.
2. ಸೆಪ್ಟೆಂಬರ್ 4, 2025 ರಂದು, ಪ್ರಧಾನಮಂತ್ರಿ ಮೋದಿ ಮತ್ತು ಪ್ರಧಾನಮಂತ್ರಿ ವಾಂಗ್ ವ್ಯಾಪಕ ಚರ್ಚೆಗಳನ್ನು ನಡೆಸಿದರು. ನಂತರ, ನಾಯಕರು ವಿವಿಧ ತಿಳುವಳಿಕಾ ಒಡಂಬಡಿಕೆಗಳ ವಿನಿಮಯಕ್ಕೆ ಸಾಕ್ಷಿಯಾದರು. ಪ್ರಧಾನಮಂತ್ರಿ ವಾಂಗ್ ಪ್ರಧಾನಮಂತ್ರಿ ಮೋದಿ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದರು. ಅವರು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಸಹ ಭೇಟಿ ಮಾಡಿದರು. ಮಹಾತ್ಮಾ ಗಾಂಧಿ ಅವರಿಗೆ ಪುಷ್ಪ ನಮನ ಸಲ್ಲಿಸಲು ಪ್ರಧಾನಮಂತ್ರಿ ವಾಂಗ್ ರಾಜ್ ಘಾಟ್‌ಗೆ ಭೇಟಿ ನೀಡಿದರು. ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಪ್ರಧಾನಮಂತ್ರಿ ವಾಂಗ್ ಅವರನ್ನು ಭೇಟಿ ಮಾಡಿದರು.
3.ಈ ವರ್ಷ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 60 ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. ಉಭಯ ಪ್ರಧಾನಮಂತ್ರಿಗಳು ಭಾರತ ಮತ್ತು ಸಿಂಗಾಪುರದ ನಡುವಿನ ನಂಬಿಕೆ ಮತ್ತು ಪರಸ್ಪರ ಗೌರವ ಹಾಗು ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ವ್ಯಾಪಕ ಸಹಕಾರವನ್ನು ಆಧರಿಸಿದ ಸ್ನೇಹದ ದೀರ್ಘ ಸಂಪ್ರದಾಯವನ್ನು ಗುರುತಿಸಿದರು. 2024ರ ಸೆಪ್ಟೆಂಬರ್ ನಲ್ಲಿ ಪ್ರಧಾನಮಂತ್ರಿ ಮೋದಿ ಅವರ ಸಿಂಗಾಪುರಕ್ಕೆ ಅಧಿಕೃತ ಭೇಟಿ, 2025ರ ಜನವರಿಯಲ್ಲಿ ಸಿಂಗಾಪುರ ಗಣರಾಜ್ಯದ ಅಧ್ಯಕ್ಷ ಗೌರವಾನ್ವಿತ ಶ್ರೀ ಥರ್ಮನ್ ಷಣ್ಮುಗರತ್ನಂ ಅವರ ಭಾರತಕ್ಕೆ ಅಧಿಕೃತ ಭೇಟಿ ಮತ್ತು 2025 ರ ಆಗಸ್ಟ್ ನಲ್ಲಿ ಹೊಸದಿಲ್ಲಿಯಲ್ಲಿ ನಡೆದ 3 ನೇ ಭಾರತ-ಸಿಂಗಾಪುರ ಸಚಿವರ ದುಂಡುಮೇಜಿನ ಸಭೆಯಂತಹ ಇತ್ತೀಚಿನ ಉನ್ನತ ಮಟ್ಟದ ಕಾರ್ಯಕ್ರಮಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧದಲ್ಲಿನ ಪ್ರಗತಿಯನ್ನು ಅವರು ಪರಿಶೀಲಿಸಿದರು ಮತ್ತು ತೃಪ್ತಿ ವ್ಯಕ್ತಪಡಿಸಿದರು. ರಾಜಕೀಯ, ಆರ್ಥಿಕ, ಭದ್ರತೆ, ತಂತ್ರಜ್ಞಾನ, ಶಿಕ್ಷಣ, ಜನರಿಂದ ಜನರಿಗೆ ಮತ್ತು ಸಾಂಸ್ಕೃತಿಕ ಸಂಪರ್ಕಗಳ ಕ್ಷೇತ್ರಗಳನ್ನು ಒಳಗೊಂಡಂತೆ ಈ ಸಂಬಂಧಗಳು ಸರ್ವತೋಮುಖ ಸಹಕಾರವಾಗಿ ಬೆಳೆದಿವೆ.
4.ಸೆಪ್ಟೆಂಬರ್ 2024 ರಲ್ಲಿ ಪ್ರಧಾನಮಂತ್ರಿ ಮೋದಿ ಅವರು ಸಿಂಗಾಪುರಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ (CSP) ಗೆ ಏರಿಸುವ ಒಪ್ಪಂದವನ್ನು ಇಬ್ಬರೂ ಪ್ರಧಾನಮಂತ್ರಿಗಳು ನೆನಪಿಸಿಕೊಂಡರು. ಇದರ ಆಧಾರದ ಮೇಲೆ, ಮುಂದಿನ ಹಂತದ ದ್ವಿಪಕ್ಷೀಯ ಸಂಬಂಧಗಳಿಗೆ ಮುಂದಿನ ಹಾದಿ ಮತ್ತು ನಿರ್ದೇಶನವನ್ನು ನಿಗದಿಪಡಿಸುವ ಮತ್ತು ಎಂಟು ಕ್ಷೇತ್ರಗಳಲ್ಲಿ ಸಹಕಾರವನ್ನು ಗಾಢವಾಗಿಸುವ ಸಿ.ಎಸ್.ಪಿ.ಗಾಗಿ ಮುನ್ನೋಟ ಮತ್ತು ವಸ್ತುನಿಷ್ಠ ಮಾರ್ಗಸೂಚಿಯನ್ನು ಅಳವಡಿಸಿಕೊಳ್ಳಲು ಅವರು ಒಪ್ಪಿಕೊಂಡರು: (i) ಆರ್ಥಿಕ ಸಹಕಾರ; (ii) ಕೌಶಲ್ಯ ಅಭಿವೃದ್ಧಿ; (iii) ಡಿಜಿಟಲೀಕರಣ; (iv) ಸುಸ್ಥಿರತೆ; (v) ಸಂಪರ್ಕ; (vi) ಆರೋಗ್ಯ ರಕ್ಷಣೆ ಮತ್ತು ಔಷಧ; (vii) ಜನತೆ ಮತ್ತು ಜನತೆಯ ನಡುವೆ ಸಂಪರ್ಕ ಮತ್ತು ಸಾಂಸ್ಕೃತಿಕ ವಿನಿಮಯ; ಹಾಗು (viii) ರಕ್ಷಣಾ ಮತ್ತು ಭದ್ರತಾ ಸಹಕಾರ.
ಸಿ.ಎಸ್.ಪಿ. ಗಾಗಿ ಮಾರ್ಗಸೂಚಿ
ಆರ್ಥಿಕ ಸಹಕಾರ: ಹೊಸ ಮತ್ತು ಭವಿಷ್ಯದ ಕ್ಷೇತ್ರಗಳಲ್ಲಿ ಆರ್ಥಿಕ ಸಂಬಂಧಗಳನ್ನು ಬಲಪಡಿಸುವುದು ಮತ್ತು ಸಹಯೋಗವನ್ನು ಹೆಚ್ಚಿಸುವುದು
• ಸಮಗ್ರ ಆರ್ಥಿಕ ಸಹಕಾರ ಒಪ್ಪಂದವನ್ನು (CECA) ನಿರ್ಮಿಸುವ ಮೂಲಕ ಮತ್ತು ವ್ಯಾಪಾರ ಹಾಗು ಹೂಡಿಕೆಗಳ ಜಂಟಿ ಕಾರ್ಯಕಾರಿ ಗುಂಪಿನ ವಾರ್ಷಿಕ ಸಭೆಯ ಮೂಲಕ ಎರಡೂ ದೇಶಗಳ ವ್ಯಾಪಾರ ಆದ್ಯತೆಗಳನ್ನು ಪರಿಗಣಿಸಿ ದ್ವಿಪಕ್ಷೀಯ ವ್ಯಾಪಾರ ಮತ್ತು ಮಾರುಕಟ್ಟೆಗಳಿಗೆ ಪ್ರವೇಶವನ್ನು ಗಾಢವಾಗಿಸುವುದು;
• ಎರಡೂ ಕಡೆಯವರು ಸಂವಾದದಲ್ಲಿ ತೊಡಗಿಸಿಕೊಳ್ಳುವುದನ್ನು ಮುಂದುವರಿಸುವುದು ಮತ್ತು ಸಿ.ಇ.ಸಿ.ಎ. ಯ ಮೂರನೇ ಪರಿಶೀಲನೆಯನ್ನು ಪ್ರಾರಂಭಿಸುವಲ್ಲಿ ಪ್ರಗತಿ ಸಾಧಿಸುವುದು ಮತ್ತು 2025 ರಲ್ಲಿ ಅಸಿಯಾನ್ ಭಾರತ ಸರಕುಗಳ ವ್ಯಾಪಾರ ಒಪ್ಪಂದದ (AITIGA) ಪರಿಶೀಲನೆಯನ್ನು ಕೈಗೊಳ್ಳುವುದು.
• ಭಾರತ-ಸಿಂಗಾಪುರ ಸೆಮಿಕಂಡಕ್ಟರ್ ನೀತಿ ಸಂವಾದದ ಅಡಿಯಲ್ಲಿ ಸಹಕಾರದ ಮೂಲಕ ಭಾರತದ ಸೆಮಿಕಂಡಕ್ಟರ್ ಉದ್ಯಮ ಮತ್ತು ಪರಿಸರ ವ್ಯವಸ್ಥೆಯ ಬೆಳವಣಿಗೆಯನ್ನು ಬೆಂಬಲಿಸುವುದು; ಸಿಂಗಾಪುರ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ಸುಗಮಗೊಳಿಸುವುದು; ಸ್ಥಿತಿಸ್ಥಾಪಕತ್ವದ ಸೆಮಿಕಂಡಕ್ಟರ್ ಪೂರೈಕೆ ಸರಪಳಿಗಳನ್ನು ಮುಂದುವರಿಸುವುದು; ಪರಸ್ಪರ ಪ್ರಯೋಜನಕಾರಿ ಸಂಶೋಧನೆ ಮತ್ತು ಅಭಿವೃದ್ಧಿ ಸಹಯೋಗಗಳನ್ನು ಅನ್ವೇಷಿಸುವುದು; ಕಾರ್ಯಪಡೆಯ ಅಭಿವೃದ್ಧಿಯನ್ನು ಉತ್ತೇಜಿಸುವುದು; ಮತ್ತು ಮಾಹಿತಿ ಹಂಚಿಕೆ, ಉತ್ತಮ ಪದ್ಧತಿ/ಅಭ್ಯಾಸಗಳ ವಿನಿಮಯ, ನೇರ ಹೂಡಿಕೆಗಳು ಮತ್ತು ಭಾರತೀಯ ಹಾಗು ಸಿಂಗಾಪುರ ಸಂಸ್ಥೆಗಳ ನಡುವಿನ ಸಂಭಾವ್ಯ ಪಾಲುದಾರಿಕೆಗಳ ಮೂಲಕ ವ್ಯವಹಾರದಿಂದ ವ್ಯವಹಾರಕ್ಕೆ ಸಹಕಾರವನ್ನು ಪ್ರೋತ್ಸಾಹಿಸುವುದು;
• ಉದ್ಯಮಗಳು ಮತ್ತು ಪಾಲುದಾರಿಕೆಗಳನ್ನು ಸುಗಮಗೊಳಿಸುವುದು, ಜ್ಞಾನ ಹಂಚಿಕೆ, ಸಾಮರ್ಥ್ಯ ತರಬೇತಿ, ಹಸಿರು ಮಾನದಂಡಗಳ ಅನುಷ್ಠಾನ, ಮಹಾ (ಮಾಸ್ಟರ್) ಯೋಜನೆ ಮತ್ತು ಉತ್ತೇಜನದಲ್ಲಿ ಸರ್ಕಾರದಿಂದ ಸರ್ಕಾರಕ್ಕೆ ಸಹಕಾರ ಸೇರಿದಂತೆ ಮುಂದುವರಿದ ಉತ್ಪಾದನಾ ಸಾಮರ್ಥ್ಯಗಳೊಂದಿಗೆ ಸುಸ್ಥಿರ ಕೈಗಾರಿಕಾ ಉದ್ಯಾನವನಗಳು ಮತ್ತು ಮುಂದಿನ ಪೀಳಿಗೆಯ ಕೈಗಾರಿಕಾ ಉದ್ಯಾನವನಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವುದು;
• ಭಾರತ-ಸಿಂಗಾಪುರ ಬಂಡವಾಳ ಮಾರುಕಟ್ಟೆ ಸಂಪರ್ಕವನ್ನು ಜಂಟಿಯಾಗಿ ವರ್ಧಿಸುವುದು ಮತ್ತು ಎನ್.ಎಸ್.ಇ.-ಐ.ಎಫ್.ಎಸ್.ಸಿ.-ಎಸ್.ಜಿ.ಎಕ್ಸ್. ಜಿ.ಐ.ಎಫ್.ಟಿ. (-NSE-IFSC-SGX GIFT) ಕನೆಕ್ಟ್‌ನಂತಹ ಜಂಟಿ ಉಪಕ್ರಮಗಳಲ್ಲಿ ನಿಕಟ ಸಹಯೋಗವನ್ನು ಬೆಳೆಸುವುದು;
• ಭಾರತ ಮತ್ತು ಸಿಂಗಾಪುರದಲ್ಲಿನ ವ್ಯಾಪಾರ ಸಮುದಾಯಗಳ ನಡುವಿನ ಪಾಲುದಾರಿಕೆ ಮತ್ತು ಸಹಯೋಗವನ್ನು ಬಲಪಡಿಸುವುದು, ವಿಶೇಷವಾಗಿ ದ್ವಿಪಕ್ಷೀಯ ಸಹಕಾರ ಕಾರ್ಯಸೂಚಿಗೆ ಪೂರಕವಾದ ಕ್ಷೇತ್ರಗಳಲ್ಲಿ ಮತ್ತು ಭಾರತ-ಸಿಂಗಾಪುರ ವ್ಯಾಪಾರ ದುಂಡುಮೇಜಿನ (ISBR) ಮೂಲಕ ವ್ಯವಹಾರದಿಂದ ವ್ಯವಹಾರಕ್ಕೆ ತೊಡಗಿಸಿಕೊಳ್ಳುವಿಕೆಯನ್ನು ಗಾಢವಾಗಿಸುವುದು;
• ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತೇಜನ ಮತ್ತು ಅಧಿಕೃತ ಕೇಂದ್ರ (IN-SPACe) ಹಾಗು ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಕೈಗಾರಿಕಾ ಕಚೇರಿ, ಸಿಂಗಾಪುರ ಹಾಗು ಎರಡೂ ದೇಶಗಳ ಬಾಹ್ಯಾಕಾಶ ಕೈಗಾರಿಕೆಗಳ ನಡುವೆ ಸೇರಿದಂತೆ ಬಾಹ್ಯಾಕಾಶ ವಲಯದಲ್ಲಿ ಜಂಟಿ ಸಹಯೋಗವನ್ನು ಉತ್ತೇಜಿಸುವುದು; ಬಾಹ್ಯಾಕಾಶ ನೀತಿ ಮತ್ತು ಕಾನೂನಿನಲ್ಲಿ; ಮತ್ತು ಭೂಮಿಯ ವೀಕ್ಷಣೆ ಮತ್ತು ಉಪಗ್ರಹ ಸಂವಹನ ತಂತ್ರಜ್ಞಾನಗಳು ಮತ್ತು ಅವುಗಳ ಅನ್ವಯಿಕೆಗಳಂತಹ ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಲ್ಲಿ ಜಂಟಿ ಸಹಯೋಗದ ಉತ್ತೇಜನ.
• ಭಾರತ ಮತ್ತು ಸಿಂಗಾಪುರದ ಸಂಬಂಧಿತ ಸಚಿವಾಲಯಗಳ ಒಳಗೊಳ್ಳುವಿಕೆಯ ಮೂಲಕ ಎರಡೂ ಕಡೆಯ ವ್ಯವಹಾರಗಳ ಅಗತ್ಯಗಳನ್ನು ಪರಿಹರಿಸುವ ದೃಷ್ಟಿಯಿಂದ, ಸಾಧ್ಯವಾದಲ್ಲೆಲ್ಲಾ ಕಾನೂನು ಮತ್ತು ವಿವಾದ ಪರಿಹಾರ ಸಹಕಾರವನ್ನು ಹೆಚ್ಚಿಸುವುದು;
ಕೌಶಲ್ಯ ಅಭಿವೃದ್ಧಿ: ಕೌಶಲ್ಯ ಅಭಿವೃದ್ಧಿ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ಪಾಲುದಾರಿಕೆ
• ಉದ್ಯಮ ಸಂಪರ್ಕವನ್ನು ಹೆಚ್ಚಿಸುವುದು ಮತ್ತು ಪಠ್ಯಕ್ರಮದಲ್ಲಿನ ಮಾನದಂಡಗಳ ಮೇಲೆ ಸಹಯೋಗ, ತರಬೇತುದಾರರಿಗೆ ತರಬೇತಿ ನೀಡುವುದು, ಕೌಶಲ್ಯ ಪ್ರಮಾಣೀಕರಣ ಚೌಕಟ್ಟನ್ನು ಅಭಿವೃದ್ಧಿಪಡಿಸುವುದು ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಲು ಅವಧಿಬದ್ಧ, ಆವರ್ತಕ ಪರಿಶೀಲನೆ ಮತ್ತು ಮೌಲ್ಯಮಾಪನದ ಮೇಲೆ ಗಮನ ಕೇಂದ್ರೀಕರಿಸುವ ಸುಧಾರಿತ ಉತ್ಪಾದನೆಯ ಕುರಿತು ತಮಿಳುನಾಡಿನ ಚೆನ್ನೈನಲ್ಲಿ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರವನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವುದು; ಹಾಗು ಸುಧಾರಿತ ಉತ್ಪಾದನೆ, ವಾಯುಯಾನ ಮತ್ತು ನಿರ್ವಹಣೆ ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ (ಎಂ.ಆರ್.ಒ.-MRO) ಸೇರಿದಂತೆ ಪರಸ್ಪರ ಆಸಕ್ತಿಯ ವಲಯಗಳಲ್ಲಿ ಕೌಶಲ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ವಲಯದೊಂದಿಗೆ ಸಹಯೋಗ;
• ತಾಂತ್ರಿಕ ವೃತ್ತಿಪರ ಶಿಕ್ಷಣ ಮತ್ತು ತರಬೇತಿ (ಟಿ.ವಿ.ಇ.ಟಿ.-TVET) ಹಾಗು ಕೌಶಲ್ಯ ಅಭಿವೃದ್ಧಿಯಲ್ಲಿ ಸಾಮರ್ಥ್ಯ ಅಭಿವೃದ್ಧಿಯಲ್ಲಿ ಸಹಕಾರವನ್ನು ಉತ್ತೇಜಿಸುವುದು; ಉನ್ನತ ಶಿಕ್ಷಣ ಸಂಸ್ಥೆಗಳ ನಡುವೆ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಸಹಯೋಗ; ಕಾರ್ಯಪಡೆಯ ಮರುಕೌಶಲ್ಯ ಮತ್ತು ಉನ್ನತೀಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಮತ್ತು ಉತ್ತಮ ಅಭ್ಯಾಸಗಳ ವಿನಿಮಯ; ವಿದ್ಯಾರ್ಥಿ ಮತ್ತು ಸಿಬ್ಬಂದಿ ವಿನಿಮಯ; ವಿದ್ಯಾರ್ಥಿ ಇಂಟರ್ನ್‌ಶಿಪ್‌ಗಳು ಮತ್ತು ಅಧ್ಯಾಪಕರ ಕೈಗಾರಿಕಾ ಸಂಬಂಧಗಳನ್ನು ಸುಗಮಗೊಳಿಸುವುದು ಮತ್ತು ಶಿಕ್ಷಕರ ತರಬೇತಿ. ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಸೂಚಿಯಲ್ಲಿ ಪ್ರಗತಿಯನ್ನು ಸುಗಮಗೊಳಿಸಲು ಮತ್ತು ಪರಿಶೀಲಿಸಲು ಎರಡೂ ಕಡೆಯವರು ಜಂಟಿ ಕಾರ್ಯಪಡೆಯನ್ನು ಸ್ಥಾಪಿಸುವುದು;
• ಸಿಂಗಾಪುರ-ಅಸ್ಸಾಂ ನರ್ಸಿಂಗ್ ಪ್ರತಿಭಾ ಕೌಶಲ್ಯ ಸಹಕಾರದಂತಹ ಸಿಂಗಾಪುರದೊಂದಿಗೆ ರಾಜ್ಯ ಮಟ್ಟದ ಕೌಶಲ್ಯ ಸಹಕಾರವನ್ನು ಬೆಂಬಲಿಸಲು, ಸಿಂಗಾಪುರ ಕೌಶಲ್ಯ ಪರಿಸರ ವ್ಯವಸ್ಥೆ ಮತ್ತು ಭಾರತದ ನಡುವೆ ಬಲವಾದ ಸಹಯೋಗವನ್ನು ನಿರ್ಮಿಸುವುದು;
ಡಿಜಿಟಲೀಕರಣ: ಡಿಜಿಟಲ್ ಮತ್ತು ಹಣಕಾಸು ತಂತ್ರಜ್ಞಾನಗಳಲ್ಲಿ ಸಹಕಾರವನ್ನು ಆಳಗೊಳಿಸುವುದು
• ಭಾರತ ಮತ್ತು ಸಿಂಗಾಪುರ ನಡುವೆ ಡಿಜಿಟಲ್ ಹಣಕಾಸು ಮತ್ತು ಫಿನ್‌ಟೆಕ್ ಸಹಕಾರವನ್ನು ಬಲಪಡಿಸುವುದು, ಜೊತೆಗೆ ಫಿನ್‌ಟೆಕ್ ಜಂಟಿ ಕಾರ್ಯ ಗುಂಪು ಸೇರಿದಂತೆ ಸೈಬರ್ ಭದ್ರತೆ ಮತ್ತು ಬಂಡವಾಳ ಮಾರುಕಟ್ಟೆ ಸಂಪರ್ಕಗಳನ್ನು ಬಲಪಡಿಸುವುದು;
• ಡಿಜಿಟಲ್ ಪರಿಹಾರಗಳಲ್ಲಿ ಅನುಭವಗಳನ್ನು ಹಂಚಿಕೊಳ್ಳುವುದು ಮತ್ತು ತಾಂತ್ರಿಕ ಪರಿಣತಿಯನ್ನು ವಿನಿಮಯ ಮಾಡಿಕೊಳ್ಳುವುದು ಮತ್ತು ಪೈಲಟ್ ಯೋಜನೆಗಳ ಮೂಲಕ ಅವುಗಳ ಅನುಷ್ಠಾನವನ್ನು ಅನ್ವೇಷಿಸುವುದು;
• ಡಿಜಿಟಲ್ ಡೊಮೇನ್‌ನಲ್ಲಿ ಪಾಲುದಾರಿಕೆಗಳನ್ನು ಸುಗಮಗೊಳಿಸುವ ಉದ್ದೇಶದಿಂದ ಎರಡೂ ಕಡೆಯ ಸ್ಟಾರ್ಟ್-ಅಪ್ (ನವೋದ್ಯಮ) ಮತ್ತು ಸಣ್ಣ ಹಾಗು ಮಧ್ಯಮ ಉದ್ಯಮ ಪರಿಸರ ವ್ಯವಸ್ಥೆಗಳ ನಡುವಿನ ಸಹಯೋಗವನ್ನು ಹೆಚ್ಚಿಸುವುದು;
• ಸೈಬರ್ ನೀತಿಗಳು, ಸಿ.ಇ.ಆರ್.ಟಿ-ಸಿ.ಇ.ಆರ್.ಟಿ. (CERT-CERT) ಮಾಹಿತಿ ವಿನಿಮಯ, ಸೈಬರ್ ಭದ್ರತಾ ಸಾಮರ್ಥ್ಯ ವೃದ್ಧಿ ಮತ್ತು ಸೈಬರ್ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ಎರಡೂ ಕಡೆಯ ಪಾಲುದಾರರ ನಡುವಿನ ಸಹಕಾರವನ್ನು ಬಲಪಡಿಸುವುದು;
• ಗಿಫ್ಟ್ (ಜಿ.ಐ.ಎಫ್.ಟಿ.) ಸಿಟಿ-ಸಿಂಗಾಪುರ್ ಸಹಕಾರಕ್ಕೆ ಸಂಬಂಧಿಸಿದಂತೆ, ಭಾರತ ಮತ್ತು ಸಿಂಗಾಪುರದಲ್ಲಿನ ಸಂಬಂಧಿತ ಏಜೆನ್ಸಿಗಳು ಮತ್ತು ನಿಯಂತ್ರಕ ಅಧಿಕಾರಿಗಳು ಚೌಕಟ್ಟಿನ ಕುರಿತು ಚರ್ಚೆಗಳನ್ನು ಪ್ರಾರಂಭಿಸಲು ಹಾಗೂ ಚೌಕಟ್ಟು ಅನ್ವಯಿಸಬಹುದಾದ ಡೇಟಾ ಪ್ರಕಾರಗಳಂತಹ ಸಂಭಾವ್ಯ ಬಳಕೆಯ ಪ್ರಕರಣಗಳನ್ನು ಗುರುತಿಸಲು ಮತ್ತು ಪ್ರಯೋಗ ನಡೆಸಲು ಜಂಟಿ ಕಾರ್ಯ ಗುಂಪಿನ ಸಭೆ ಕರೆಯಲಿದ್ದಾರೆ;
• ಡಿಜಿಟಲ್ ತಂತ್ರಜ್ಞಾನಗಳ ಮೇಲಿನ ಅಸ್ತಿತ್ವದಲ್ಲಿರುವ ಜಂಟಿ ಕಾರ್ಯಗುಂಪಿನ ಅಡಿಯಲ್ಲಿ, ನಾವೀನ್ಯತೆ, ಸಮಗ್ರ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು, ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಹಯೋಗದ ಅವಕಾಶಗಳನ್ನು ಅನ್ವೇಷಿಸುವುದು;
• ಕೃಷಿ, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಎ.ಐ.-ಸಿದ್ಧ ಡೇಟಾ ಸೆಟ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು ಡೇಟಾ-ಚಾಲಿತ ಎ.ಐ. ಬಳಕೆಯ ಪ್ರಕರಣಗಳನ್ನು ರೂಪಿಸಲು ಉತ್ತಮ ಅಭ್ಯಾಸಗಳ ಹಂಚಿಕೆಯ ಮೂಲಕ ಕೃತಕ ಬುದ್ಧಿಮತ್ತೆಯ ಸಹಕಾರವನ್ನು ಅನ್ವೇಷಿಸುವುದು;
• ಯು.ಪಿ.ಐ.-ಪೇ ನೌ ಲಿಂಕೇಜ್ ಅನ್ನು ಅಡಿಪಾಯವಾಗಿ ಬಳಸಿಕೊಂಡು ಕಾಗದರಹಿತ ಮತ್ತು ಸುರಕ್ಷಿತ ಗಡಿಯಾಚೆಗಿನ ವ್ಯಾಪಾರಿ ಮತ್ತು ವೈಯಕ್ತಿಕ ಪಾವತಿಗಳ ಸಾಮರ್ಥ್ಯವನ್ನು ವಿಸ್ತರಿಸುವುದು ಮತ್ತು ಗರಿಷ್ಠಗೊಳಿಸುವುದು;
• ಪರಸ್ಪರ ಕಾರ್ಯಸಾಧ್ಯವಾದ ಇ-ಬಿಲ್‌ಗಳಿಗೆ ಸಂಬಂಧಿಸಿ ಸರಕು ಸಾಗಣೆಗಾಗಿ ಭಾರತ ಮತ್ತು ಸಿಂಗಾಪುರ ನಡುವಿನ ಟ್ರೇಡ್‌ಟ್ರಸ್ಟ್ ಚೌಕಟ್ಟು ಅಳವಡಿಸಿಕೊಳ್ಳುವಿಕೆಯನ್ನು ಬಲಪಡಿಸುವುದು ಮತ್ತು ಹೆಚ್ಚು ವಿಶ್ವಾಸಾರ್ಹ ಹಾಗು ಸುರಕ್ಷಿತ ವ್ಯಾಪಾರ ದಾಖಲೆಗಳಿಗೆ ಅನುವು ಮಾಡಿಕೊಡುವುದು.
ಸುಸ್ಥಿರತೆ: ಸುಸ್ಥಿರ ಅಭಿವೃದ್ಧಿ ಮತ್ತು ಹಸಿರು ವ್ಯಾಪಾರದಲ್ಲಿ ಸಹಯೋಗದ ಅವಕಾಶಗಳನ್ನು ಅನ್ವೇಷಿಸುವುದು
• ಹಸಿರು ಹೈಡ್ರೋಜನ್ ಮತ್ತು ಅಮೋನಿಯಾ ಉತ್ಪಾದನೆ ಹಾಗು ವ್ಯಾಪಾರ ಸೇರಿದಂತೆ ಚಾಲ್ತಿಯಲ್ಲಿರುವ ಮತ್ತು ಹೊಸ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವುದು;
• ನಗರ ನೀರು ನಿರ್ವಹಣೆಯ ಕ್ಷೇತ್ರದಲ್ಲಿ ಸಹಕಾರವನ್ನು ಅನ್ವೇಷಿಸುವುದು;
• ನಾಗರಿಕ ಪರಮಾಣು ಕ್ಷೇತ್ರದಲ್ಲಿ ಸಹಕಾರದ ಮಾರ್ಗಗಳನ್ನು ಅನ್ವೇಷಿಸುವುದು;
• ಹವಾಮಾನ ಬದಲಾವಣೆಯ ಸವಾಲನ್ನು ಎದುರಿಸಲು ಪ್ಯಾರಿಸ್ ಒಪ್ಪಂದದ ಆರ್ಟಿಕಲ್ 6.2 ರ ಅಡಿಯಲ್ಲಿ ಪರಸ್ಪರ ಪ್ರಯೋಜನಕಾರಿ ದ್ವಿಪಕ್ಷೀಯ ಸಹಕಾರ ಚೌಕಟ್ಟಿನತ್ತ ಕೆಲಸ ಮಾಡುವುದು;
• ಸಿಂಗಾಪುರ ಸದಸ್ಯ ರಾಷ್ಟ್ರವಾಗಿರುವ ಅಂತರರಾಷ್ಟ್ರೀಯ ಸೌರ ಒಕ್ಕೂಟ ಮತ್ತು ಜಾಗತಿಕ ಜೈವಿಕ ಇಂಧನ ಒಕ್ಕೂಟದಂತಹ ಸಂಬಂಧಿತ ಬಹುಪಕ್ಷೀಯ ಚೌಕಟ್ಟುಗಳಲ್ಲಿ ಹಸಿರು ಮತ್ತು ಸುಸ್ಥಿರ ಉಪಕ್ರಮಗಳಲ್ಲಿ ಸಹಕರಿಸುವುದು;
• ಭಾರತ ಮತ್ತು ಸಿಂಗಾಪುರದ ನಡುವೆ ಮತ್ತು ಮೂರನೇ ದೇಶಗಳಿಗೆ ಆಹಾರ ಉತ್ಪನ್ನಗಳ ರಫ್ತುಗಳನ್ನು ಉತ್ತೇಜಿಸುವ ಮೂಲಕ, ಆಯ್ದ ರಫ್ತುಗಳಿಗೆ ದೇಶ ಮಟ್ಟದ ಮಾನ್ಯತೆಯನ್ನು ಅನ್ವೇಷಿಸುವ ಮೂಲಕ ಆಹಾರ ಭದ್ರತೆಯ ಕುರಿತು ಸಹಕಾರವನ್ನು ಹೆಚ್ಚಿಸುವುದು;
ಸಂಪರ್ಕ: ಕಡಲ ಮತ್ತು ವಾಯುಯಾನ ಸಂಪರ್ಕವನ್ನು ವಿಸ್ತರಿಸುವುದು
• ಸಿಂಗಾಪುರ ಬಂದರು ಮತ್ತು ಭಾರತದ ಬಂದರುಗಳ ನಡುವೆ ಭಾರತ-ಸಿಂಗಾಪುರ ಹಸಿರು ಮತ್ತು ಡಿಜಿಟಲ್ ಶಿಪ್ಪಿಂಗ್ ಕಾರಿಡಾರ್ (ಜಿ.ಡಿ.ಎಸ್.ಸಿ-GDSC) ಸ್ಥಾಪನೆಗೆ ಬೆಂಬಲ ನೀಡಿ, ಕಡಲ ಸಂಪರ್ಕವನ್ನು ಗಾಢವಾಗಿಸಲು ಮತ್ತು ಹಸಿರು ಕಡಲ ಇಂಧನ ಕಾರಿಡಾರ್ ಸ್ಥಾಪನೆಯತ್ತ ಕೆಲಸ ಮಾಡುವುದು;
• ಸಿಂಗಾಪುರದ ಪರಿಣತಿಯ ಹಂಚಿಕೆ ಮತ್ತು ಕೌಶಲ್ಯಾಭಿವೃದ್ಧಿ ಅವಕಾಶಗಳನ್ನು ಒದಗಿಸುವುದು ಸೇರಿದಂತೆ, ಈ ವಲಯಗಳಲ್ಲಿನ ಭಾರತೀಯ ಮತ್ತು ಸಿಂಗಾಪುರ ಕಂಪನಿಗಳ ನಡುವಿನ ಪಾಲುದಾರಿಕೆಗಳ ಮೂಲಕ ಭಾರತದ ಬೆಳೆಯುತ್ತಿರುವ ವಾಯುಯಾನ ಮತ್ತು ಏರೋಸ್ಪೇಸ್ ಎಂ.ಆರ್.ಒ. (MRO) ವಲಯಗಳಲ್ಲಿ ಪರಿಸರ ವ್ಯವಸ್ಥೆಯ ಸಹಯೋಗವನ್ನು ಹೆಚ್ಚಿಸುವುದು;
• ಎರಡೂ ದೇಶಗಳ ನಡುವಿನ ಪ್ರಯಾಣ ಬೇಡಿಕೆಯಲ್ಲಿನ ಬೆಳವಣಿಗೆಯನ್ನು ಉಭಯ ಪ್ರಧಾನಮಂತ್ರಿಗಳು ಗುರುತಿಸಿದರು ಮತ್ತು ವಾಯು ಸಂಪರ್ಕವನ್ನು ಹೆಚ್ಚಿಸಲು ದ್ವಿಪಕ್ಷೀಯ ವಾಯು ಸೇವೆಗಳ ಒಪ್ಪಂದವನ್ನು ವಿಸ್ತರಿಸುವ ಬಗ್ಗೆ ಚರ್ಚಿಸಲು ಎರಡೂ ದೇಶಗಳ ನಾಗರಿಕ ವಿಮಾನಯಾನ ಅಧಿಕಾರಿಗಳನ್ನು ಪ್ರೋತ್ಸಾಹಿಸಿದರು;
• ಭಾರತೀಯ ವಿಮಾನ ನಿಲ್ದಾಣಗಳಿಗೆ ವಿಮಾನ ನಿಲ್ದಾಣ ಸಲಹಾ ಮತ್ತು ನಿರ್ವಹಣಾ ಸೇವೆಗಳಲ್ಲಿ ಅನುಭವ ಮತ್ತು ಪರಿಣತಿಯ ವಿನಿಮಯ ಸೇರಿದಂತೆ ಸಾಮರ್ಥ್ಯ ವೃದ್ಧಿ ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿಯಲ್ಲಿ ಪಾಲುದಾರಿಕೆಗಳನ್ನು ಅನ್ವೇಷಿಸುವುದು;
• ವಾಯುಯಾನ ವಲಯದಲ್ಲಿ ಶುದ್ಧ ಮತ್ತು ಸುಸ್ಥಿರ ಇಂಧನ ಪರಿಹಾರಗಳನ್ನು ಉತ್ತೇಜಿಸುವ ಕಡೆಗೆ ಸುಸ್ಥಿರ ವಾಯುಯಾನ ಇಂಧನ (ಎಸ್.ಎ.ಎಫ್.-SAF) ಮೇಲಿನ ಸಹಕಾರವನ್ನು ಹೆಚ್ಚಿಸಲು ಎರಡೂ ಕಡೆಯವರು ಬದ್ಧರಾಗಿದ್ದಾರೆ;
ಆರೋಗ್ಯ ಮತ್ತು ಔಷಧ: ಆರೋಗ್ಯ ರಕ್ಷಣೆ ಮತ್ತು ಔಷಧ ಸಹಕಾರವನ್ನು ಬಲಪಡಿಸುವುದು
• ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರದ ಕುರಿತಾದ ತಿಳುವಳಿಕಾ ಒಡಂಬಡಿಕೆಯಡಿಯಲ್ಲಿ ಆರೋಗ್ಯ ಮತ್ತು ಔಷಧ ಕ್ಷೇತ್ರಗಳಲ್ಲಿ ಸಹಯೋಗವನ್ನು ಹೆಚ್ಚಿಸುವುದು, ಇದರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ, ಡಿಜಿಟಲ್ ಆರೋಗ್ಯ ಮಧ್ಯಪ್ರವೇಶ ಮತ್ತು ರೋಗ ಕಣ್ಗಾವಲು, ತಾಯಂದಿರು ಮತ್ತು ಮಕ್ಕಳ ಆರೋಗ್ಯ ಹಾಗು ಪೋಷಣೆ, ಆರೋಗ್ಯ ನೀತಿ, ವೈದ್ಯಕೀಯ ಉತ್ಪನ್ನಗಳ ಪ್ರವೇಶ/ಲಭ್ಯತೆ ಮತ್ತು ಸಹಯೋಗದ ಸಂಶೋಧನೆಯ ನಿಯಂತ್ರಕ ಸೌಲಭ್ಯ, ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳನ್ನು ಎದುರಿಸುವುದು, ಆರೋಗ್ಯ ಸುರಕ್ಷತೆ ಮತ್ತು ಭದ್ರತೆ ಹಾಗು ಸಂಶೋಧನೆ ಮತ್ತು ನಾವೀನ್ಯತೆ ಸೇರಿದಂತೆ ಸಹಯೋಗದ ವರ್ಧನೆ
• ಆರೋಗ್ಯ ಸಹಕಾರದ ಕುರಿತಾದ ಜಂಟಿ ಕಾರ್ಯ ಗುಂಪಿನ ಸಭೆಯನ್ನು ನಿಯಮಿತವಾಗಿ ಆಯೋಜಿಸುವುದು.
• ನರ್ಸಿಂಗ್ ಕೌಶಲ್ಯ ತರಬೇತಿಯಲ್ಲಿ ಮಾಹಿತಿ ಮತ್ತು ಜ್ಞಾನದ ವಿನಿಮಯದ ಮೂಲಕ ನರ್ಸಿಂಗ್ ಕೌಶಲ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸುವುದು ಮತ್ತು ನರ್ಸಿಂಗ್ ಪ್ರತಿಭಾ ಕೌಶಲ್ಯ ಸಹಕಾರದ ಕುರಿತು ಸಿಂಗಾಪುರ ಮತ್ತು ಅಸ್ಸಾಂ ನಡುವಿನ ತಿಳುವಳಿಕಾ ಒಡಂಬಡಿಕೆ ಅಡಿಯಲ್ಲಿ ಸಿಂಗಾಪುರದಲ್ಲಿ ಉದ್ಯೋಗಾವಕಾಶವನ್ನು ಹೆಚ್ಚಿಸುವುದು;
• ಸಹಯೋಗಿ ಕೈಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ನಡೆಯುತ್ತಿರುವ ಸಹಯೋಗವನ್ನು ಹೆಚ್ಚಿಸುವುದು ಮತ್ತು ಡಿಜಿಟಲ್ ಆರೋಗ್ಯ/ವೈದ್ಯಕೀಯ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಹೊಸ ಜಂಟಿ ಸಂಶೋಧನಾ ಯೋಜನೆಗಳನ್ನು ಬೆಂಬಲಿಸುವುದು;
ಜನರಿಂದ ಜನರಿಗೆ ಮತ್ತು ಸಾಂಸ್ಕೃತಿಕ ವಿನಿಮಯಗಳು: ಜನರಿಂದ ಜನರಿಗೆ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಬೆಂಬಲಿಸುವುದು
• ಸಮುದ್ರ ಪರಂಪರೆಯಲ್ಲಿ ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರವನ್ನು ಅನ್ವೇಷಿಸುವ ಮೂಲಕ ಭಾರತ ಮತ್ತು ಸಿಂಗಾಪುರ ನಡುವಿನ ದೀರ್ಘಕಾಲೀನ ಸಾಮಾಜಿಕ, ಸಾಂಸ್ಕೃತಿಕ ಮತ್ತು ಜನರಿಂದ ಜನರಿಗೆ ಸಂಪರ್ಕಗಳನ್ನು ಮತ್ತಷ್ಟು ಬಲಪಡಿಸುವುದು;
• ಸಿಂಗಾಪುರ-ಭಾರತ ಪಾಲುದಾರಿಕೆ ಪ್ರತಿಷ್ಠಾನ (ಎಸ್.ಐ.ಪಿ.ಇ.-SIPF) ಅಡಿಯಲ್ಲಿ ಇಮ್ಮರ್ಶನ್ ಕಾರ್ಯಕ್ರಮಗಳು ಅಂದರೆ ಆಳವಾದ ಅಧ್ಯಯನದ ಮೂಲಕ ಶೈಕ್ಷಣಿಕ ಮತ್ತು ಪ್ರಾಯೋಗಿಕ ಕಲಿಕೆಯ ಸಂಯೋಜನೆ ಕಾರ್ಯಕ್ರಮಗಳು ಮತ್ತು ಇಂಟರ್ನ್‌ಶಿಪ್‌ಗಳು ಸೇರಿದಂತೆ ವಿವಿಧ ಉಪಕ್ರಮಗಳ ಮೂಲಕ ಕೈಗಾರಿಕಾ ತರಬೇತಿ ಸಂಸ್ಥೆಗಳ (ಐ.ಟಿ.ಐ.-ITI) ವಿದ್ಯಾರ್ಥಿಗಳು ಒಳಗೊಂಡಂತೆ ವಿದ್ಯಾರ್ಥಿ ವಿನಿಮಯವನ್ನು ಉತ್ತೇಜಿಸುವುದು ಮತ್ತು ವಿಸ್ತರಿಸುವುದು, ಇದರಲ್ಲಿ ಸಿಂಗಾಪುರ-ಭಾರತ ಪಾಲುದಾರಿಕೆ ಪ್ರತಿಷ್ಠಾನ (SIPF) ಅಡಿಯಲ್ಲಿ ಇಮ್ಮರ್ಶನ್ ಕಾರ್ಯಕ್ರಮಗಳು ಮತ್ತು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ-ಎಂಟರ್‌ಪ್ರೈಸ್ ಸಿಂಗಾಪುರ್ ಇಂಡಿಯಾ ರೆಡಿ ಟ್ಯಾಲೆಂಟ್ (IRT) ಕಾರ್ಯಕ್ರಮದ ಅಡಿಯಲ್ಲಿ ಭಾರತ ಮೂಲದ ಕಂಪನಿಗಳಿಗೆ ಸಿಂಗಾಪುರದ ಇಂಟರ್ನ್‌ಗಳನ್ನು ನೇಮಿಸುವುದು ಸೇರಿವೆ;
• ವಿನಿಮಯ ಕಾರ್ಯಕ್ರಮಗಳ ಮೂಲಕ ಆಳವಾದ ಸಂಸದೀಯ ತೊಡಗಿಸಿಕೊಳ್ಳುವಿಕೆಯನ್ನು ಪ್ರೋತ್ಸಾಹಿಸುವುದು;
• ಅಧ್ಯಯನ ಭೇಟಿಗಳ ಮೂಲಕ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಸಾರ್ವಜನಿಕ ಸೇವಾ ವಿನಿಮಯ ಮತ್ತು ತರಬೇತಿಯನ್ನು ಸುಗಮಗೊಳಿಸುವುದು;
• ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ತಾತ್ಕಾಲಿಕ ಸಮಾಲೋಚನೆಗಳು ಸೇರಿದಂತೆ ಸಂಬಂಧಿತ ಅಧಿಕಾರಿಗಳ ನಡುವೆ ಕಾನ್ಸುಲರ್ ವಿಷಯಗಳ ಕುರಿತು ನಿಯಮಿತ ಸಂವಾದವನ್ನು ಮುಂದುವರಿಸುವುದು;
• ಎರಡೂ ದೇಶಗಳಲ್ಲಿನ ಚಿಂತಕರ ಚಾವಡಿಗಳು, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ನಿರಂತರ ಮಟ್ಟದ ತೊಡಗಿಸಿಕೊಳ್ಳುವಿಕೆ ಮತ್ತು ಸಂವಹನವನ್ನು ಪ್ರೋತ್ಸಾಹಿಸುವುದು;
• ಕಲಾವಿದರು, ಕಲಾ ಗುಂಪುಗಳು ಮತ್ತು ಪ್ರದರ್ಶನಗಳು ಸೇರಿದಂತೆ ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುವುದನ್ನು ಮುಂದುವರಿಸುವುದು;
ರಕ್ಷಣಾ ಮತ್ತು ಭದ್ರತಾ ಸಹಕಾರ: ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ಕಾರ್ಯತಂತ್ರದ ಸಹಕಾರ
• ರಕ್ಷಣಾ ಮಂತ್ರಿಗಳ ಸಂವಾದದ ಮೂಲಕ ಇಬ್ಬರು ರಕ್ಷಣಾ ಮಂತ್ರಿಗಳ ನಡುವೆ ಮತ್ತು ರಕ್ಷಣಾ ನೀತಿ ಸಂವಾದದ ಮೂಲಕ ಹಿರಿಯ ರಕ್ಷಣಾ ಸಚಿವಾಲಯದ ಅಧಿಕಾರಿಗಳ ನಡುವೆ ನಿಯಮಿತ ಸಭೆಗಳು ಸೇರಿದಂತೆ ಎಲ್ಲಾ ಹಂತಗಳಲ್ಲಿ ರಕ್ಷಣಾ ಮತ್ತು ಭದ್ರತಾ ಸಹಕಾರದ ಕುರಿತು ನಿರಂತರ ವಿನಿಮಯ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಪ್ರೋತ್ಸಾಹಿಸುವುದು; • ವಿವಿಧ ಸ್ವರೂಪಗಳಲ್ಲಿ ಸೇನೆ, ನೌಕಾ ಮತ್ತು ವಾಯುಪಡೆಯ ಜಂಟಿ ಸಮರಾಭ್ಯಾಸಗಳ ಮೂಲಕ ಮಿಲಿಟರಿ ಸಹಕಾರ ಮತ್ತು ವಿನಿಮಯವನ್ನು ಮುಂದುವರಿಸುವುದು;
• ಕ್ವಾಂಟಮ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ (ಎ.ಐ.) , ಆಟೊಮೇಷನ್ ಮತ್ತು ಮಾನವರಹಿತ ಹಡಗುಗಳಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ರಕ್ಷಣಾ ತಂತ್ರಜ್ಞಾನ ಸಹಕಾರವನ್ನು ಆಳಗೊಳಿಸುವುದು;
• ಸಮುದ್ರ ಭದ್ರತೆ ಮತ್ತು ಜಲಾಂತರ್ಗಾಮಿ ರಕ್ಷಣಾದಲ್ಲಿ ಸಹಕಾರವನ್ನು ಮುಂದುವರಿಸುವುದು, ಜೊತೆಗೆ ಇಂಡೋ-ಪೆಸಿಫಿಕ್ ಮತ್ತು ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮದ ಕುರಿತಾದ ಆಸಿಯಾನ್ ದೃಷ್ಟಿಕೋನದ ಸಹಕಾರದ ತತ್ವಗಳು ಮತ್ತು ಕ್ಷೇತ್ರಗಳಿಗೆ ಅನುಗುಣವಾಗಿ ಪ್ರಾದೇಶಿಕ ಭದ್ರತಾ ರಚನೆಗಳಲ್ಲಿ/ವಾಸ್ತುಶಿಲ್ಪಗಳಲ್ಲಿ ನಿಕಟವಾಗಿ ಕೆಲಸ ಮಾಡುವುದು;
• ಅಂತರರಾಷ್ಟ್ರೀಯ ಸಂಪರ್ಕ ಅಧಿಕಾರಿಗಳ ಮೂಲಕವೂ ಸೇರಿದಂತೆ ಆಯಾ ಮಾಹಿತಿ ಸಮ್ಮಿಳನ ಕೇಂದ್ರಗಳ ನಡುವೆ ಕಡಲ ಡೊಮೇನ್ ಜಾಗೃತಿಯಲ್ಲಿ ಸಹಕಾರವನ್ನು ಬಲಪಡಿಸುವುದು;
• ಮಲಕ್ಕಾ ಜಲಸಂಧಿ ಗಸ್ತು ವ್ಯವಸ್ಥೆಯಲ್ಲಿ ಭಾರತದ ಆಸಕ್ತಿಯನ್ನು ಸಿಂಗಾಪುರ ಮೆಚ್ಚುಗೆಯಿಂದ ಗುರುತಿಸಿದೆ/ ಒಪ್ಪಿಕೊಂಡಿದೆ;
• ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಭಯೋತ್ಪಾದನೆಯನ್ನು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಎದುರಿಸಲು ಬಲವಾದ ಬದ್ಧತೆಯನ್ನು ಪುನರುಚ್ಚರಿಸುತ್ತಾ ಮತ್ತು ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯನ್ನು ಪುನರುಚ್ಚರಿಸುತ್ತಾ, ಯು.ಎನ್.ಎಸ್.ಸಿ. 1267 ನಿರ್ಬಂಧಗಳ ಸಮಿತಿಯಿಂದ ನಿಷೇಧಿಸಲ್ಪಟ್ಟವುಗಳು ಸೇರಿದಂತೆ ಜಾಗತಿಕ ಮತ್ತು ಪ್ರಾದೇಶಿಕ ಭಯೋತ್ಪಾದನೆ ಮತ್ತು ಭಯೋತ್ಪಾದಕ ಸಂಘಟನೆಗಳ ವಿರುದ್ಧ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವುದರ ವಿರುದ್ಧ ದ್ವಿಪಕ್ಷೀಯ ಕಾರ್ಯವಿಧಾನಗಳು, ಎಫ್.ಎ.ಟಿ.ಎಫ್.(FATF) ಮತ್ತು ಇತರ ಬಹುಪಕ್ಷೀಯ ವೇದಿಕೆಗಳ ಮೂಲಕ ಹೋರಾಡಲು ಎರಡೂ ದೇಶಗಳು ಸಹಕಾರವನ್ನು ಬಲಪಡಿಸುತ್ತವೆ;
• ಅಪರಾಧ ತನಿಖೆಗಳು ಮತ್ತು ವಿಚಾರಣೆಗಳಲ್ಲಿ ಎರಡೂ ದೇಶಗಳ ನಡುವಿನ ಸಹಕಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ದ್ವಿಪಕ್ಷೀಯ ಪರಸ್ಪರ ಕಾನೂನು ಸಹಾಯ ಒಪ್ಪಂದದ ಅಡಿಯಲ್ಲಿ ಸಹಕಾರವನ್ನು ಬಲಪಡಿಸುವುದು;
• ಸಿಂಗಾಪುರದ ವಿದೇಶಾಂಗ ಸಚಿವಾಲಯ ಮತ್ತು ಭಾರತದ ವಿದೇಶಾಂಗ ಸಚಿವಾಲಯದ ನಡುವಿನ ವಿದೇಶಾಂಗ ಕಚೇರಿ ಸಮಾಲೋಚನೆಗಳ ಮೂಲಕ ದ್ವಿಪಕ್ಷೀಯ ಸಂಬಂಧಗಳಲ್ಲಿನ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸುವುದು;
5. ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಅನುಷ್ಠಾನದಲ್ಲಿನ ಪ್ರಗತಿಯನ್ನು ವಾರ್ಷಿಕವಾಗಿ ಮೇಲ್ವಿಚಾರಣೆ ಮಾಡಲು ಭಾರತ-ಸಿಂಗಾಪುರ ಸಚಿವರ ದುಂಡುಮೇಜಿನ ಸಭೆಯನ್ನು ಪ್ರಮುಖ ಕಾರ್ಯವಿಧಾನವಾಗಿ ಸಾಂಸ್ಥಿಕರಣಗೊಳಿಸಲು ಉಭಯ ಪ್ರಧಾನಮಂತ್ರಿಗಳು ಒಪ್ಪಿಕೊಂಡರು.
****
(Release ID: 2164160)
Visitor Counter : 2