ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಯಶೋಭೂಮಿ, ದೆಹಲಿಯಲ್ಲಿ ನಡೆದ ಸೆಮಿಕಾನ್ ಇಂಡಿಯಾ 2025 ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

Posted On: 02 SEP 2025 12:55PM by PIB Bengaluru

ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಅಶ್ವಿನಿ ವೈಷ್ಣವ್ ಜೀ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಜೀ, ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಜೀ, ಕೇಂದ್ರ ರಾಜ್ಯ ಸಚಿವ ಜಿತಿನ್ ಪ್ರಸಾದ್ ಜೀ, SEMI ಸಂಸ್ಥೆಯ ಅಧ್ಯಕ್ಷ ಅಜಿತ್ ಮನೋಚಾ ಜೀ, ಭಾರತ ಮತ್ತು ವಿದೇಶಗಳಿಂದ ಆಗಮಿಸಿರುವ ಸೆಮಿಕಂಡಕ್ಟರ್ ಉದ್ಯಮದ ಸಿಇಒಗಳು ಮತ್ತು ಅವರ ಸಹವರ್ತಿಗಳೇ, ವಿವಿಧ ದೇಶಗಳಿಂದ ಬಂದಿರುವ ನಮ್ಮ ಅತಿಥಿಗಳೇ, ಸ್ಟಾರ್ಟಪ್ ಗಳೊಂದಿಗೆ ಸಂಬಂಧ ಹೊಂದಿರುವ ಉದ್ಯಮಿಗಳೇ, ವಿವಿಧ ರಾಜ್ಯಗಳ ನನ್ನ ಯುವ ವಿದ್ಯಾರ್ಥಿ ಮಿತ್ರರೇ, ಮಹಿಳೆಯರೇ ಮತ್ತು ಮಹನೀಯರೇ!

ನಿನ್ನೆ ರಾತ್ರಿ ನಾನು ಜಪಾನ್ ಮತ್ತು ಚೀನಾ ಪ್ರವಾಸದಿಂದ ಹಿಂತಿರುಗಿದ್ದೇನೆ. ನಾನು ಅಲ್ಲಿಗೆ ಹೋಗಿದ್ದಕ್ಕೆ ನೀವು ಚಪ್ಪಾಳೆ ತಟ್ಟುತ್ತಿದ್ದೀರಾ ಅಥವಾ ನಾನು ವಾಪಸ್ ಬಂದಿದ್ದಕ್ಕೆ ಚಪ್ಪಾಳೆ ತಟ್ಟುತ್ತಿದ್ದೀರಾ? ಮತ್ತು ಇಂದು, ನಾನು ಯಶೋಭೂಮಿಯಲ್ಲಿರುವ ಈ ಸಭಾಂಗಣದಲ್ಲಿ, ಆಕಾಂಕ್ಷೆಗಳು ಮತ್ತು ಆತ್ಮವಿಶ್ವಾಸದಿಂದ ತುಂಬಿರುವ ನಿಮ್ಮೆಲ್ಲರ ನಡುವೆ ಇದ್ದೇನೆ. ನಿಮಗೆಲ್ಲಾ ತಿಳಿದಿರುವಂತೆ, ತಂತ್ರಜ್ಞಾನದ ಬಗ್ಗೆ ನನಗೆ ಸಹಜವಾದ ಆಸಕ್ತಿ ಇದೆ. ಇತ್ತೀಚೆಗೆ, ಜಪಾನ್ ಪ್ರವಾಸದ ಸಂದರ್ಭದಲ್ಲಿ, ನಾನು ಜಪಾನ್ ಪ್ರಧಾನಿ ಶಿಗೇರು ಇಶಿಬಾ ಸನ್ ಅವರೊಂದಿಗೆ ಟೋಕಿಯೊ ಎಲೆಕ್ಟ್ರಾನ್ ಕಾರ್ಖಾನೆಗೆ ಭೇಟಿ ನೀಡುವ ಅವಕಾಶ ಪಡೆದೆ. ಅವರ ಸಿಇಒ ಕೂಡ ಈಗಷ್ಟೇ, "ಮೋದಿ ಸಾಹೇಬ್ ಬಂದಿದ್ದರು," ಎಂದು ಹೇಳುತ್ತಿದ್ದರು.

ಸ್ನೇಹಿತರೇ,

ತಂತ್ರಜ್ಞಾನದ ಮೇಲಿನ ನನ್ನ ಆಸಕ್ತಿ ನನ್ನನ್ನು ಪದೇ ಪದೇ ನಿಮ್ಮ ಬಳಿಗೆ ಕರೆತರುತ್ತದೆ. ಅದಕ್ಕಾಗಿಯೇ ನಿಮ್ಮೆಲ್ಲರ ನಡುವೆ ಇರುವುದು ನನಗೆ ಇಂದು ತುಂಬಾ ಸಂತೋಷ ತಂದಿದೆ.

ಸ್ನೇಹಿತರೇ,

ಇಲ್ಲಿ ಜಗತ್ತಿನ ಮೂಲೆ ಮೂಲೆಗಳಿಂದ ಸೆಮಿಕಂಡಕ್ಟರ್ ತಜ್ಞರು ಬಂದಿದ್ದಾರೆ. 40-50ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಇಲ್ಲಿ ಹಾಜರಿದ್ದಾರೆ. ಜೊತೆಗೆ, ಭಾರತದ ಆವಿಷ್ಕಾರ ಮತ್ತು ಯುವ ಶಕ್ತಿಯೂ ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಈ ಎಲ್ಲರ ಈ ಅದ್ಭುತ ಸಂಗಮವು ಒಂದೇ ಒಂದು ಸಂದೇಶವನ್ನು ಸಾರುತ್ತಿದೆ: "ಜಗತ್ತು ಭಾರತವನ್ನು ನಂಬುತ್ತದೆ, ಜಗತ್ತು ಭಾರತದಲ್ಲಿ ವಿಶ್ವಾಸ ಇಟ್ಟಿದೆ, ಮತ್ತು ಜಗತ್ತು ಭಾರತದೊಂದಿಗೆ ಸೇರಿ ಸೆಮಿಕಂಡಕ್ಟರ್ ಕ್ಷೇತ್ರದ ಭವಿಷ್ಯವನ್ನು ರೂಪಿಸಲು ಸಿದ್ಧವಾಗಿದೆ."

ಸೆಮಿಕಾನ್ ಇಂಡಿಯಾಗೆ ಆಗಮಿಸಿರುವ ನಿಮ್ಮೆಲ್ಲ ಗಣ್ಯರಿಗೆ ನಾನು ಹೃತ್ಪೂರ್ವಕ ಸ್ವಾಗತ ಕೋರುತ್ತೇನೆ. ವಿಕಸಿತ ಭಾರತ ಮತ್ತು ಆತ್ಮನಿರ್ಭರ ಭಾರತದ ಈ ಮಹತ್ವದ ಪಯಣದಲ್ಲಿ ನೀವೆಲ್ಲರೂ ನಮ್ಮ ಅತ್ಯಂತ ಪ್ರಮುಖ ಪಾಲುದಾರರು.

ಸ್ನೇಹಿತರೇ,

ಕೆಲವೇ ದಿನಗಳ ಹಿಂದೆ ಈ ವರ್ಷದ ಮೊದಲ ತ್ರೈಮಾಸಿಕದ ಜಿಡಿಪಿ ಸಂಖ್ಯೆಗಳು ಬಿಡುಗಡೆಯಾಗಿವೆ. ಮತ್ತೊಮ್ಮೆ ಭಾರತವು ಎಲ್ಲ ನಿರೀಕ್ಷೆಗಳು ಮತ್ತು ಅಂದಾಜುಗಳನ್ನು ಮೀರಿ ಉತ್ತಮ ಸಾಧನೆ ಮಾಡಿದೆ. ಒಂದು ಕಡೆ, ಜಗತ್ತಿನಾದ್ಯಂತದ ಆರ್ಥಿಕತೆಗಳಲ್ಲಿ ಆತಂಕಗಳು ಮತ್ತು ಆರ್ಥಿಕ ಸ್ವಾರ್ಥದಿಂದ ಸವಾಲುಗಳು ಉದ್ಭವಿಸುತ್ತಿರುವ ಸಮಯದಲ್ಲಿ, ಭಾರತವು ಶೇ. 7.8ರಷ್ಟು ಬೆಳವಣಿಗೆ ಸಾಧಿಸಿದೆ. ಈ ಬೆಳವಣಿಗೆ ಪ್ರತಿಯೊಂದು ವಲಯದಲ್ಲೂ ಕಂಡುಬಂದಿದೆ. ಉತ್ಪಾದನೆ, ಸೇವೆಗಳು, ಕೃಷಿ, ನಿರ್ಮಾಣ - ಎಲ್ಲೆಡೆ ಉತ್ಸಾಹ ಗೋಚರಿಸುತ್ತಿದೆ. ಇಂದು ಭಾರತ ಯಾವ ವೇಗದಲ್ಲಿ ಬೆಳೆಯುತ್ತಿದೆಯೋ, ಆ ವೇಗವು ನಮ್ಮೆಲ್ಲರಲ್ಲೂ, ಉದ್ಯಮದಲ್ಲಿ, ದೇಶದ ಪ್ರತಿಯೊಬ್ಬ ನಾಗರಿಕನಲ್ಲೂ ಹೊಸ ಶಕ್ತಿಯನ್ನು ತುಂಬುತ್ತಿದೆ. ಇದೇ ಬೆಳವಣಿಗೆಯ ದಿಕ್ಕು, ಇದು ಭಾರತವನ್ನು ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವತ್ತ ವೇಗವಾಗಿ ಸಾಗುವುದು ಖಚಿತ.

ಸ್ನೇಹಿತರೇ,

ಸೆಮಿಕಂಡಕ್ಟರ್ ಜಗತ್ತಿನಲ್ಲಿ ಒಂದು ಜನಪ್ರಿಯ ಮಾತು ಇದೆ: "ಕಚ್ಚಾ ತೈಲವು ಕಪ್ಪು ಚಿನ್ನವಾಗಿದ್ದರೆ, ಚಿಪ್ಗಳು ಡಿಜಿಟಲ್ ವಜ್ರಗಳಾಗಿವೆ." ಕಳೆದ ಶತಮಾನವು ತೈಲದ ಸುತ್ತಲೇ ರೂಪುಗೊಂಡಿತು. ತೈಲ ಬಾವಿಗಳೇ ಜಗತ್ತಿನ ಭವಿಷ್ಯವನ್ನು ನಿರ್ಧರಿಸಿದವು. ಆ ತೈಲ ಬಾವಿಗಳಿಂದ ಎಷ್ಟು ಪೆಟ್ರೋಲಿಯಂ ಉತ್ಪಾದನೆಯಾಗುತ್ತದೆ ಎಂಬುದರ ಮೇಲೆ ಜಾಗತಿಕ ಆರ್ಥಿಕತೆಯ ಗತಿ ನಿರ್ಧರಿತವಾಗುತ್ತಿತ್ತು. ಆದರೆ, 21ನೇ ಶತಮಾನದ ಶಕ್ತಿ ಒಂದು ಪುಟ್ಟ ಚಿಪ್ ನಲ್ಲಿ ಅಡಗಿದೆ. ಈ ಚಿಪ್ ಗಳು ಗಾತ್ರದಲ್ಲಿ ಚಿಕ್ಕದಾಗಿರಬಹುದು, ಆದರೆ ಜಗತ್ತಿನ ಪ್ರಗತಿಗೆ ದೊಡ್ಡ ಉತ್ತೇಜನ ನೀಡುವ ಸಾಮರ್ಥ್ಯವನ್ನು ಅವು ಹೊಂದಿವೆ. ಅದಕ್ಕಾಗಿಯೇ ಇಂದು ಸೆಮಿಕಂಡಕ್ಟರ್ಗಳ ಜಾಗತಿಕ ಮಾರುಕಟ್ಟೆ ಬರೋಬ್ಬರಿ 600 ಬಿಲಿಯನ್ ಡಾಲರ್ ಗೆ ತಲುಪಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಇದು ಒಂದು ಟ್ರಿಲಿಯನ್ ಡಾಲರ್ ಗಡಿಯನ್ನು ದಾಟಲಿದೆ. ಭಾರತವು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸಾಗುತ್ತಿರುವ ವೇಗವನ್ನು ನೋಡಿದರೆ, ಈ ಒಂದು ಟ್ರಿಲಿಯನ್ ಮಾರುಕಟ್ಟೆಯಲ್ಲಿ ಭಾರತ ದೊಡ್ಡ ಪಾಲು ಪಡೆಯಲಿದೆ ಎಂದು ನಾನು ದೃಢವಾಗಿ ನಂಬುತ್ತೇನೆ.

ಸ್ನೇಹಿತರೇ,

ಭಾರತದ ವೇಗ ಎಷ್ಟು ಪ್ರಬಲವಾಗಿದೆ ಎಂಬುದನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. 2021ರಲ್ಲಿ ನಾವು 'ಸೆಮಿಕಾನ್ ಇಂಡಿಯಾ' ಕಾರ್ಯಕ್ರಮವನ್ನು ಪ್ರಾರಂಭಿಸಿದೆವು. 2023ರ ವೇಳೆಗೆ ಭಾರತದ ಮೊದಲ ಸೆಮಿಕಂಡಕ್ಟರ್ ಘಟಕಕ್ಕೆ ಅನುಮೋದನೆ ದೊರೆಯಿತು. 2024ರಲ್ಲಿ ನಾವು ಇನ್ನೂ ಕೆಲವು ಘಟಕಗಳನ್ನು ಮಂಜೂರು ಮಾಡಿದೆವು, 2025ರಲ್ಲಿ ಮತ್ತೆ 5 ಹೊಸ ಯೋಜನೆಗಳನ್ನು ಅನುಮೋದಿಸಿದೆವು. ಒಟ್ಟಾರೆಯಾಗಿ, 10 ಸೆಮಿಕಂಡಕ್ಟರ್ ಯೋಜನೆಗಳಲ್ಲಿ ಬರೋಬ್ಬರಿ ಹದಿನೆಂಟು ಬಿಲಿಯನ್ ಡಾಲರ್ ಅಂದರೆ ಒಂದುವರೆ ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚು ಹೂಡಿಕೆ ಮಾಡಲಾಗುತ್ತಿದೆ. ಇದು ಭಾರತದ ಮೇಲೆ ಜಗತ್ತು ಹೊಂದಿರುವ ವಿಶ್ವಾಸ ಎಷ್ಟು ಹೆಚ್ಚಾಗಿದೆ ಎಂಬುದನ್ನು ತೋರಿಸುತ್ತದೆ.

ಸ್ನೇಹಿತರೇ,

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ವೇಗವು ಬಹಳ ಮುಖ್ಯ ಎಂದು ನಿಮಗೆ ತಿಳಿದಿದೆ. ಕಡತದಿಂದ ಕಾರ್ಖಾನೆವರೆಗಿನ ಸಮಯ ಕಡಿಮೆಯಾದಷ್ಟೂ, ಕಾಗದಪತ್ರಗಳ ಕೆಲಸ ಕಡಿಮೆಯಾದಷ್ಟೂ, ವೇಫರ್ ಕೆಲಸ ಬೇಗ ಶುರುವಾಗುತ್ತದೆ. ನಮ್ಮ ಸರ್ಕಾರ ಇದೇ ತತ್ವದ ಮೇಲೆ ಕೆಲಸ ಮಾಡುತ್ತಿದೆ. ನಾವು ನ್ಯಾಷನಲ್ ಸಿಂಗಲ್ ವಿಂಡೋ ಸಿಸ್ಟಂ ಅನ್ನು ಜಾರಿಗೆ ತಂದಿದ್ದೇವೆ. ಇದರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬೇಕಾದ ಎಲ್ಲ ಅನುಮೋದನೆಗಳು ಒಂದೇ ವೇದಿಕೆಯಲ್ಲಿ ಸಿಗುತ್ತಿವೆ. ಇದು ನಮ್ಮ ಹೂಡಿಕೆದಾರರನ್ನು ಸಾಕಷ್ಟು ಕಾಗದಪತ್ರಗಳ ಕೆಲಸದಿಂದ ಮುಕ್ತಗೊಳಿಸಿದೆ. ಇಂದು, ದೇಶಾದ್ಯಂತ ಪ್ಲಗ್ ಅಂಡ್ ಪ್ಲೇ ಇನ್ಫ್ರಾಸ್ಟ್ರಕ್ಚರ್ ಮಾದರಿಯಲ್ಲಿ ಸೆಮಿಕಂಡಕ್ಟರ್ ಪಾರ್ಕ್ಗಳನ್ನು ನಿರ್ಮಿಸಲಾಗುತ್ತಿದೆ. ಈ ಪಾರ್ಕ್ಗಳಲ್ಲಿ ಭೂಮಿ, ವಿದ್ಯುತ್ ಪೂರೈಕೆ, ಬಂದರುಗಳು, ವಿಮಾನ ನಿಲ್ದಾಣಗಳು, ಇವೆಲ್ಲದಕ್ಕೂ ಸಂಪರ್ಕದ ಜೊತೆಗೆ ನುರಿತ ಕಾರ್ಮಿಕರ ಲಭ್ಯತೆಯ ಸೌಲಭ್ಯಗಳಿವೆ. ಮತ್ತು ಇವುಗಳ ಜೊತೆಗೆ ಪ್ರೋತ್ಸಾಹಕಗಳೂ ಸೇರಿದಾಗ, ಉದ್ಯಮವು ಖಂಡಿತವಾಗಿ ಅಭಿವೃದ್ಧಿ ಹೊಂದುತ್ತದೆ. ಅದು ಪಿ ಎಲ್ ಐ ಪ್ರೋತ್ಸಾಹಕಗಳಾಗಿರಲಿ ಅಥವಾ ಡಿಸೈನ್ ಲಿಂಕ್ಡ್ ಗ್ರಾಂಟ್ಸ್ ಆಗಿರಲಿ, ಭಾರತವು ಸಂಪೂರ್ಣ ವ್ಯವಸ್ಥೆಯನ್ನು ನೀಡುತ್ತಿದೆ. ಅದಕ್ಕಾಗಿಯೇ ನಿರಂತರವಾಗಿ ಹೂಡಿಕೆಯೂ ಬರುತ್ತಿದೆ. ಭಾರತವು ಈಗ ಬ್ಯಾಕೆಂಡ್ನಿಂದ ಸಂಪೂರ್ಣ ಫುಲ್ ಸ್ಟಾಕ್ ಸೆಮಿಕಂಡಕ್ಟರ್ ರಾಷ್ಟ್ರವಾಗಿ ಬೆಳೆಯುತ್ತಿದೆ. ಭಾರತದ ಅತೀ ಸಣ್ಣ ಚಿಪ್, ಜಗತ್ತಿನ ಅತೀ ದೊಡ್ಡ ಬದಲಾವಣೆಯನ್ನು ತರುವ ದಿನ ದೂರವಿಲ್ಲ. ಖಂಡಿತ, ನಮ್ಮ ಪಯಣ ತಡವಾಗಿ ಪ್ರಾರಂಭವಾಗಿರಬಹುದು, ಆದರೆ ಈಗ ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ. ನನಗೆ ತಿಳಿದಿರುವಂತೆ, ಸಿಜಿ ಪವರ್ ನ ಪೈಲಟ್ ಘಟಕ 4-5 ದಿನಗಳ ಹಿಂದೆ, ಅಂದರೆ ಆಗಸ್ಟ್ 28 ರಿಂದ ಪ್ರಾರಂಭವಾಗಿದೆ. ಕೆಯ್ನೆಸ್ ನ ಪೈಲಟ್ ಘಟಕವೂ ಸಹ ಶೀಘ್ರದಲ್ಲೇ ಕಾರ್ಯನಿರ್ವಹಿಸಲಿದೆ. ಮೈಕ್ರಾನ್ ಮತ್ತು ಟಾಟಾ ಕಂಪನಿಗಳ ಟೆಸ್ಟ್ ಚಿಪ್ ಗಳು ಈಗಾಗಲೇ ಉತ್ಪಾದನೆಯಾಗುತ್ತಿವೆ. ನಾನು ಈ ಹಿಂದೆ ಹೇಳಿದಂತೆ, ಈ ವರ್ಷವೇ ವಾಣಿಜ್ಯ ಚಿಪ್ ಗಳ ಉತ್ಪಾದನೆ ಪ್ರಾರಂಭವಾಗಲಿದೆ. ಇದು ಸೆಮಿಕಂಡಕ್ಟರ್ ವಲಯದಲ್ಲಿ ಭಾರತ ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂಬುದನ್ನು ತೋರಿಸುತ್ತದೆ.

ಸ್ನೇಹಿತರೇ,

ಭಾರತದ ಸೆಮಿಕಂಡಕ್ಟರ್ ಯಶಸ್ಸಿನ ಕಥೆಯು ಯಾವುದೇ ಒಂದು ನಿರ್ದಿಷ್ಟ ಕ್ಷೇತ್ರ ಅಥವಾ ತಂತ್ರಜ್ಞಾನಕ್ಕೆ ಸೀಮಿತವಾಗಿಲ್ಲ. ನಾವು ಇಲ್ಲಿ ಒಂದು ಸಂಪೂರ್ಣ ಪರಿಸರ ವ್ಯವಸ್ಥೆಯನ್ನೇ ನಿರ್ಮಿಸುತ್ತಿದ್ದೇವೆ. ಈ ವ್ಯವಸ್ಥೆಯಲ್ಲಿ ವಿನ್ಯಾಸ, ಉತ್ಪಾದನೆ, ಪ್ಯಾಕೇಜಿಂಗ್ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸಾಧನಗಳು ಎಲ್ಲವೂ ಭಾರತದಲ್ಲೇ ಲಭ್ಯವಾಗುತ್ತವೆ. ನಮ್ಮ 'ಸೆಮಿಕಂಡಕ್ಟರ್ ಮಿಷನ್' ಕೇವಲ ಒಂದು ಚಿಪ್ ಅಥವಾ ಒಂದು ಕಾರ್ಖಾನೆಯ ನಿರ್ಮಾಣಕ್ಕೆ ಸೀಮಿತವಾಗಿಲ್ಲ. ಬದಲಿಗೆ, ನಾವು ಭಾರತವನ್ನು ಸ್ವಾವಲಂಬಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸುವ ಒಂದು ಸಮಗ್ರ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿದ್ದೇವೆ.

ಸ್ನೇಹಿತರೇ,

ಭಾರತದ ಈ ಸೆಮಿಕಂಡಕ್ಟರ್ ಮಿಷನ್ ಗೆ ಇನ್ನೊಂದು ವಿಶೇಷತೆಯಿದೆ. ಈ ಕ್ಷೇತ್ರದಲ್ಲಿ ಭಾರತವು ವಿಶ್ವದ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಹೆಜ್ಜೆ ಹಾಕುತ್ತಿದೆ. ಭಾರತದಲ್ಲಿ ತಯಾರಾಗುವ ಚಿಪ್ ಗಳು ಉದಯೋನ್ಮುಖ ತಂತ್ರಜ್ಞಾನಗಳಿಗೆ ಹೊಸ ಶಕ್ತಿ ನೀಡಬೇಕು ಎಂಬುದೇ ನಮ್ಮ ಗುರಿ. ನೋಯ್ಡಾ ಮತ್ತು ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ನಮ್ಮ ವಿನ್ಯಾಸ ಕೇಂದ್ರಗಳು ವಿಶ್ವದ ಅತ್ಯಂತ ಸುಧಾರಿತ ಚಿಪ್ ಗಳನ್ನು ತಯಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಈ ಚಿಪ್ ಗಳು ಶತಕೋಟಿ ಟ್ರಾನ್ಸಿಸ್ಟರ್ ಗಳನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು, 21ನೇ ಶತಮಾನದ 'ಇಮ್ಮರ್ಸಿವ್ ತಂತ್ರಜ್ಞಾನ'ಗಳಿಗೆ ಹೊಸ ಶಕ್ತಿ ತುಂಬಲಿವೆ.

ಸ್ನೇಹಿತರೇ,

ಇಂದು ಭಾರತವು ಜಗತ್ತಿನ ಸೆಮಿಕಂಡಕ್ಟರ್ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳ ಮೇಲೆ ನಿರಂತರವಾಗಿ ಕೆಲಸ ಮಾಡುತ್ತಿದೆ. ಇಂದು ನಾವು ನಗರಗಳಲ್ಲಿ ಗಗನಚುಂಬಿ ಕಟ್ಟಡಗಳು ಮತ್ತು ಭವ್ಯವಾದ ಭೌತಿಕ ಮೂಲಸೌಕರ್ಯಗಳನ್ನು ನೋಡುತ್ತೇವೆ. ಇಂತಹ ಮೂಲಸೌಕರ್ಯದ ಅಡಿಪಾಯವೇ ಉಕ್ಕು. ಅದೇ ರೀತಿ ನಮ್ಮ ಡಿಜಿಟಲ್ ಮೂಲಸೌಕರ್ಯದ ಆಧಾರವೇ 'ನಿರ್ಣಾಯಕ ಖನಿಜಗಳು' . ಅದಕ್ಕಾಗಿಯೇ ಭಾರತ ಇಂದು 'ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್' ಮೇಲೆ ಕೆಲಸ ಮಾಡುತ್ತಿದೆ. ನಮ್ಮ ದೇಶದಲ್ಲಿಯೇ ಅಪರೂಪದ ಖನಿಜಗಳ ಬೇಡಿಕೆಯನ್ನು ಪೂರೈಸಲು ನಾವು ಶ್ರಮಿಸುತ್ತಿದ್ದೇವೆ. ಕಳೆದ ನಾಲ್ಕು ವರ್ಷಗಳಲ್ಲಿ, ನಾವು ನಿರ್ಣಾಯಕ ಖನಿಜಗಳ ಯೋಜನೆಗಳ ಮೇಲೆ ವ್ಯಾಪಕವಾಗಿ ಕೆಲಸ ಮಾಡಿದ್ದೇವೆ.

ಸ್ನೇಹಿತರೇ,

ಸೆಮಿಕಂಡಕ್ಟರ್ ಕ್ಷೇತ್ರದ ಬೆಳವಣಿಗೆಯಲ್ಲಿ ಸ್ಟಾರ್ಟಪ್ ಗಳು ಮತ್ತು ಎಂಎಸ್ಎಂಇಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಮ್ಮ ಸರ್ಕಾರ ಬಲವಾಗಿ ನಂಬಿದೆ. ಇಂದು, ವಿಶ್ವದ ಸೆಮಿಕಂಡಕ್ಟರ್ ವಿನ್ಯಾಸದ ಮಾನವ ಸಂಪನ್ಮೂಲದಲ್ಲಿ ಭಾರತದ ಕೊಡುಗೆ ಶೇ.20 ರಷ್ಟಿದೆ. ಭಾರತದ ಯುವಜನರು ಸೆಮಿಕಂಡಕ್ಟರ್ ಉದ್ಯಮಕ್ಕೆ ಅತಿ ದೊಡ್ಡ ಮಾನವ ಬಂಡವಾಳ ಕಾರ್ಖಾನೆಯಾಗಿದ್ದಾರೆ. ನನ್ನ ಯುವ ಉದ್ಯಮಿಗಳು, ಸಂಶೋಧಕರು ಮತ್ತು ಸ್ಟಾರ್ಟಪ್ಗಳಿಗೆ ನಾನು ಹೇಳುವುದೇನೆಂದರೆ, ನೀವು ಮುಂದೆ ಬನ್ನಿ, ಸರ್ಕಾರ ನಿಮ್ಮ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ. 'ಡಿಸೈನ್ ಲಿಂಕ್ಡ್ ಇನ್ಸೆಂಟಿವ್ ಯೋಜನೆ' ಮತ್ತು 'ಚಿಪ್ಸ್-ಟು-ಸ್ಟಾರ್ಟಪ್' ಕಾರ್ಯಕ್ರಮಗಳು ನಿಮಗಾಗಿಯೇ ಇವೆ. ಸರ್ಕಾರವು 'ಡಿಸೈನ್ ಲಿಂಕ್ಡ್ ಇನ್ಸೆಂಟಿವ್ ಯೋಜನೆ'ಯನ್ನು ಮತ್ತಷ್ಟು ಸುಧಾರಿಸಲಿದೆ. ಈ ಕ್ಷೇತ್ರದಲ್ಲಿ ಭಾರತೀಯ 'ಬೌದ್ಧಿಕ ಆಸ್ತಿ'ಯನ್ನು ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶವಾಗಿದೆ. ಇತ್ತೀಚೆಗೆ ಪ್ರಾರಂಭಿಸಲಾದ 'ಅನುಸಂಧಾನ್ ರಾಷ್ಟ್ರೀಯ ಸಂಶೋಧನಾ ನಿಧಿ' ಯೊಂದಿಗಿನ ಸಹಭಾಗಿತ್ವವೂ ನಿಮಗೆ ಸಹಾಯ ಮಾಡಲಿದೆ.

ಸ್ನೇಹಿತರೇ,

ಅನೇಕ ರಾಜ್ಯಗಳು ಸಹ ಇಲ್ಲಿ ಭಾಗವಹಿಸುತ್ತಿವೆ. ಹಲವಾರು ರಾಜ್ಯಗಳು ಸೆಮಿಕಂಡಕ್ಟರ್ ಕ್ಷೇತ್ರಕ್ಕಾಗಿ ವಿಶೇಷ ನೀತಿಗಳನ್ನು ರೂಪಿಸಿವೆ ಮತ್ತು ತಮ್ಮ ರಾಜ್ಯಗಳಲ್ಲಿ ವಿಶೇಷ ಮೂಲಸೌಕರ್ಯಗಳ ಮೇಲೆ ಒತ್ತು ನೀಡುತ್ತಿವೆ. ನಾನು ದೇಶದ ಎಲ್ಲಾ ರಾಜ್ಯಗಳಿಗೆ ಒಂದು ವಿನಂತಿಯನ್ನು ಮಾಡಲು ಬಯಸುತ್ತೇನೆ, ನಿಮ್ಮ ರಾಜ್ಯಗಳಲ್ಲಿ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮತ್ತು ಹೂಡಿಕೆ ವಾತಾವರಣವನ್ನು ಹೆಚ್ಚಿಸಲು ಇತರ ರಾಜ್ಯಗಳೊಂದಿಗೆ ಆರೋಗ್ಯಕರ ಸ್ಪರ್ಧೆ ನಡೆಸಲು ಮುಂದಾಗಿ.

ಸ್ನೇಹಿತರೇ,

ಭಾರತವು 'ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ' (Reform, Perform and Transform) ಎಂಬ ಮಂತ್ರದೊಂದಿಗೆ ಇಲ್ಲಿಯವರೆಗೆ ತಲುಪಿದೆ. ಮುಂದಿನ ದಿನಗಳಲ್ಲಿ, ನಾವು 'ಮುಂದಿನ ಪೀಳಿಗೆಯ ಸುಧಾರಣೆಗಳ' ಹೊಸ ಹಂತವನ್ನು ಪ್ರಾರಂಭಿಸಲಿದ್ದೇವೆ. ನಾವು 'ಭಾರತ ಸೆಮಿಕಂಡಕ್ಟರ್ ಮಿಷನ್'ನ ಮುಂದಿನ ಹಂತದ ಮೇಲೂ ಕಾರ್ಯನಿರ್ವಹಿಸುತ್ತಿದ್ದೇವೆ. ಇಲ್ಲಿ ಉಪಸ್ಥಿತರಿರುವ ಎಲ್ಲಾ ಹೂಡಿಕೆದಾರರನ್ನು ನಾನು ಮುಕ್ತ ಹೃದಯದಿಂದ ಸ್ವಾಗತಿಸುತ್ತೇನೆ. ಮತ್ತು ನಿಮ್ಮ ಭಾಷೆಯಲ್ಲಿ ಹೇಳುವುದಾದರೆ: "ವಿನ್ಯಾಸ ಸಿದ್ಧವಾಗಿದೆ, ಮಾಸ್ಕ್ ಅನ್ನು ಜೋಡಿಸಲಾಗಿದೆ, ಈಗ ನಿಖರತೆಯೊಂದಿಗೆ ಕಾರ್ಯಗತಗೊಳಿಸುವ ಮತ್ತು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವ ಸಮಯ." ನಮ್ಮ ನೀತಿಗಳು ಕೇವಲ ತಾತ್ಕಾಲಿಕವಲ್ಲ, ಅವು ದೀರ್ಘಾವಧಿಯ ಬದ್ಧತೆಗಳಾಗಿವೆ. ನಿಮ್ಮ ಎಲ್ಲ ಅಗತ್ಯಗಳನ್ನು ನಾವು ಪೂರೈಸುತ್ತೇವೆ. ಇಡೀ ಜಗತ್ತು  ಭಾರತದಲ್ಲಿ ವಿನ್ಯಾಸಗೊಳಿಸಿದ್ದು, ಭಾರತದಲ್ಲಿ ತಯಾರಿಸಿದ್ದು, ಇಡೀ ಜಗತ್ತು ನಂಬುವಂತಹದ್ದು ಎಂದು ಹೇಳುವ ದಿನ ದೂರವಿಲ್ಲ. ನಮ್ಮ ಪ್ರತಿಯೊಂದು ಪ್ರಯತ್ನವೂ ಯಶಸ್ವಿಯಾಗಲಿ, ನಮ್ಮ ಪ್ರತಿಯೊಂದು ಆವಿಷ್ಕಾರವೂ ಡಿಜಿಟಲ್ ಲೋಕವನ್ನು ಬೆಳಗಿಸಲಿ, ಮತ್ತು ನಮ್ಮ ಪಯಣವು ದೋಷರಹಿತ ಹಾಗೂ ಅತ್ಯುನ್ನತ ಕಾರ್ಯಕ್ಷಮತೆಯಿಂದ ಕೂಡಿರಲಿ. ಈ ಭಾವನೆಯೊಂದಿಗೆ, ನಿಮ್ಮೆಲ್ಲರಿಗೂ ಶುಭ ಹಾರೈಕೆಗಳು!

ಧನ್ಯವಾದಗಳು!

 

*****
 


(Release ID: 2163201) Visitor Counter : 14