ಪ್ರಧಾನ ಮಂತ್ರಿಯವರ ಕಛೇರಿ
ಮಿಯಾಗಿ ಪ್ರಾಂತ್ಯದ ಸೆಂಡೈನಲ್ಲಿರುವ ಅರೆವಾಹಕ (ಸೆಮಿಕಂಡಕ್ಟರ್) ಸೌಲಭ್ಯಕ್ಕೆ ಪ್ರಧಾನಮಂತ್ರಿ ಭೇಟಿ
Posted On:
30 AUG 2025 11:52AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಘನತೆವೆತ್ತ ಶ್ರೀ ಶಿಗೆರು ಇಶಿಬಾ ಅವರೊಂದಿಗೆ ಇಂದು ಮಿಯಾಗಿ ಪ್ರಾಂತ್ಯದ ಸೆಂಡೈಗೆ ಪ್ರಯಾಣ ಬೆಳೆಸಿದರು. ಸೆಂಡೈನಲ್ಲಿ, ಉಭಯ ನಾಯಕರು ಅರೆವಾಹಕ (ಸೆಮಿಕಂಡಕ್ಟರ್) ವಲಯದಲ್ಲಿ ಜಪಾನಿನ ಪ್ರಮುಖ ಕಂಪನಿಯಾದ ಟೋಕಿಯೊ ಎಲೆಕ್ಟ್ರಾನ್ ಮಿಯಾಗಿ ಲಿಮಿಟೆಡ್ (ಟಿಇಎಲ್ ಮಿಯಾಗಿ) ಗೆ ಭೇಟಿ ನೀಡಿದರು. ಜಾಗತಿಕ ಅರೆವಾಹಕ ಮೌಲ್ಯ ಸರಪಳಿಯಲ್ಲಿ ಟೆಲ್ ನ ಪಾತ್ರ, ಅದರ ಸುಧಾರಿತ ಉತ್ಪಾದನಾ ಸಾಮರ್ಥ್ಯಗಳು ಮತ್ತು ಭಾರತದೊಂದಿಗೆ ನಡೆಯುತ್ತಿರುವ ಮತ್ತು ಯೋಜಿತ ಸಹಯೋಗಗಳ ಬಗ್ಗೆ ಪ್ರಧಾನಮಂತ್ರಿಯವರಿಗೆ ವಿವರಿಸಲಾಯಿತು. ಕಾರ್ಖಾನೆ ಭೇಟಿಯು ಸೆಮಿಕಂಡಕ್ಟರ್ ಪೂರೈಕೆ ಸರಪಳಿ, ಫ್ಯಾಬ್ರಿಕೇಷನ್ ಮತ್ತು ಪರೀಕ್ಷೆ ಕ್ಷೇತ್ರದಲ್ಲಿ ಸಹಯೋಗವನ್ನು ರೂಪಿಸಲು ಉಭಯ ದೇಶಗಳ ನಡುವೆ ಇರುವ ಅವಕಾಶಗಳ ಬಗ್ಗೆ ಪ್ರಾಯೋಗಿಕ ತಿಳುವಳಿಕೆಯನ್ನು ನಾಯಕರಿಗೆ ನೀಡಿತು.
ಸೆಂಡೈ ಭೇಟಿಯು ಭಾರತದ ಬೆಳೆಯುತ್ತಿರುವ ಅರೆವಾಹಕ ಉತ್ಪಾದನಾ ಪರಿಸರ ವ್ಯವಸ್ಥೆ ಮತ್ತು ಸುಧಾರಿತ ಅರೆವಾಹಕ ಉಪಕರಣಗಳು ಮತ್ತು ತಂತ್ರಜ್ಞಾನದಲ್ಲಿ ಜಪಾನ್ ನ ಸಾಮರ್ಥ್ಯಗಳ ನಡುವಿನ ಪೂರಕತೆಯನ್ನು ಬಿಂಬಿಸಿತು. ಜಪಾನ್-ಭಾರತ ಅರೆವಾಹಕ ಪೂರೈಕೆ ಸರಪಳಿ ಪಾಲುದಾರಿಕೆ ಮತ್ತು ಭಾರತ-ಜಪಾನ್ ಕೈಗಾರಿಕಾ ಸ್ಪರ್ಧಾತ್ಮಕತೆ ಪಾಲುದಾರಿಕೆ ಮತ್ತು ಆರ್ಥಿಕ ಭದ್ರತಾ ಸಂವಾದದ ಅಡಿಯಲ್ಲಿ ನಡೆಯುತ್ತಿರುವ ಪಾಲುದಾರಿಕೆ ಕುರಿತ ಸಹಕಾರ ಒಪ್ಪಂದವನ್ನು ನಿರ್ಮಿಸುವ ಮೂಲಕ ಈ ವಲಯದಲ್ಲಿ ಸಹಕಾರವನ್ನು ಆಳಗೊಳಿಸುವ ಬದ್ಧತೆಯನ್ನು ಎರಡೂ ಕಡೆಯ ನಾಯಕರು ಪುನರುಚ್ಚರಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪ್ರಧಾನಮಂತ್ರಿ ಇಶಿಬಾ ಅವರ ಈ ಜಂಟಿ ಭೇಟಿಯು ದೃಢವಾದ, ಸ್ಥಿತಿಸ್ಥಾಪಕ ಮತ್ತು ವಿಶ್ವಾಸಾರ್ಹ ಅರೆವಾಹಕ ಪೂರೈಕೆ ಸರಪಳಿಗಳನ್ನು ಅಭಿವೃದ್ಧಿಪಡಿಸುವ ಭಾರತ ಮತ್ತು ಜಪಾನ್ ನ ಹಂಚಿಕೆಯ ದೃಷ್ಟಿಕೋನವನ್ನು ಒತ್ತಿಹೇಳಿತು. ಈ ಭೇಟಿಯಲ್ಲಿ ತಮ್ಮೊಂದಿಗೆ ಸೇರಿಕೊಂಡಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಇಶಿಬಾ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಈ ಕಾರ್ಯತಂತ್ರದ ಕ್ಷೇತ್ರದಲ್ಲಿ ಜಪಾನ್ ನೊಂದಿಗೆ ನಿಕಟವಾಗಿ ಕೆಲಸ ಮಾಡಲು ಭಾರತ ಸಿದ್ಧವಿದೆ ಎಂದು ಪುನರುಚ್ಚರಿಸಿದರು.
ಪ್ರಧಾನಮಂತ್ರಿ ಇಶಿಬಾ ಅವರು ಸೆಂಡೈನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಗೌರವಾರ್ಥ ಭೋಜನಕೂಟ ಏರ್ಪಡಿಸಿದ್ದರು. ಮಿಯಾಗಿ ಪ್ರಾಂತ್ಯದ ರಾಜ್ಯಪಾಲರು ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****
(Release ID: 2162213)
Visitor Counter : 25
Read this release in:
Odia
,
Malayalam
,
English
,
Urdu
,
Marathi
,
Hindi
,
Manipuri
,
Bengali-TR
,
Bengali
,
Assamese
,
Punjabi
,
Gujarati
,
Tamil
,
Telugu