ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಕರ್ನಾಟಕ, ತೆಲಂಗಾಣ, ಬಿಹಾರ ಮತ್ತು ಅಸ್ಸಾಂಗಳಿಗೆ ಪ್ರಯೋಜನಕಾರಿಯಾದ 3 ಯೋಜನೆಗಳ ಮಲ್ಟಿ-ಟ್ರ್ಯಾಕಿಂಗ್ ವ್ಯವಸ್ಥೆಗೆ ಮತ್ತು ಗುಜರಾತ್ ರಾಜ್ಯದ ಕಚ್ ನ ದೂರದ ಪ್ರದೇಶಗಳನ್ನು ಸಂಪರ್ಕಿಸಲು ಒಂದು ಹೊಸ ರೈಲು ಮಾರ್ಗಕ್ಕೆ ಕೇಂದ್ರ ಸಂಪುಟ ಸಭೆಯು ಅನುಮೋದನೆ ನೀಡಿದೆ
ಪ್ರಯಾಣಿಕರು ಮತ್ತು ಸರಕುಗಳೆರಡಕ್ಕೂ ಪ್ರಯೋಜನವನ್ನು ನೀಡುವ ನಿರ್ಧಾರ ಇದಾಗಿದೆ; ಕಚ್ ನಲ್ಲಿ ನೂತನವಾಗಿ ನಿರ್ಮಿಸಲಿರುವ ಈ ಹೊಸ ರೈಲು ಮಾರ್ಗ ಗಡಿಯಲ್ಲಿರುವ ರನ್ ಆಫ್ ಕಚ್, ಹರಪ್ಪನ್ ತಾಣ ಧೋಲವಿರ, ಕೋಟೇಶ್ವರ ದೇವಸ್ಥಾನ, ನಾರಾಯಣ ಸರೋವರ ಮತ್ತು ಲಖ್ ಪತ್ ಕೋಟೆಯನ್ನು ಸಂಪರ್ಕಿಸುವ ಮೂಲಕ ಪ್ರವಾಸೋದ್ಯಮವನ್ನು
ಹೆಚ್ಚಿಸಲಿದೆ
ರೈಲ್ವೆಯ ತನ್ನ ಅಸ್ತಿತ್ವದಲ್ಲಿರುವ ಜಾಲಕ್ಕೆ 565 ಕಿ.ಮೀ ಮಾರ್ಗವನ್ನು ಸೇರಿಸುವುದರಿಂದ, ಕಲ್ಲಿದ್ದಲು, ಸಿಮೆಂಟ್, ಕ್ಲಿಂಕರ್ (ಸಿಮೆಂಟ್ ತಯಾರಿಕೆಯಲ್ಲಿ ಬಳಸುವ ವಸ್ತು) ಹಾರುಬೂದಿ, ಉಕ್ಕು, ಕಂಟೇನರ್‌ಗಳು (ಸರಕು ಸಾಗಣೆಯ ದೊಡ್ಡ ಲೋಹದ ಪೆಟ್ಟಿಗೆ),ರಸಗೊಬ್ಬರಗಳು, ಕೃಷಿ ಸರಕುಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಇತ್ಯಾದಿಗಳ ಸಾಗಣೆಗೆ ಉತ್ತೇಜನ ದೊರೆಯುತ್ತದೆ
Posted On:
27 AUG 2025 4:50PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಒಟ್ಟು 12,328 ಕೋಟಿ ರೂ.ಗಳ (ಅಂದಾಜು) ವೆಚ್ಚದ ಕೇಂದ್ರ ರೈಲ್ವೆ ಸಚಿವಾಲಯದ ನಾಲ್ಕು ಯೋಜನೆಗಳಿಗೆ ಅನುಮೋದನೆ ನೀಡಿದೆ.
ಈ ಯೋಜನೆಗಳು ಕೆಳಗಿನವುಗಳನ್ನು ಒಳಗೊಂಡಿವೆ: -
(1) ದೇಶಲ್ಪರ್ - ಹಾಜಿಪಿರ್ - ಲೂನಾ ಮತ್ತು ವಾಯೋರ್ - ಲಖ್‌ಪತ್ ಹೊಸ ಮಾರ್ಗ
(2) ಸಿಕಂದರಾಬಾದ್ (ಸನತ್‌ನಗರ) - ವಾಡಿ 3ನೇ ಮತ್ತು 4ನೇ ಮಾರ್ಗ
(3) ಭಾಗಲ್ಪುರ್ - ಜಮಾಲ್ಪುರ್ 3ನೇ ಮಾರ್ಗ
(4) ಫರ್ಕೇಟಿಂಗ್ - ಹೊಸ ಟಿನ್ಸುಕಿಯಾ ದ್ವಿಗುಣಗೊಳಿಸುವಿಕೆ
ಮೇಲಿನ ಯೋಜನೆಗಳು ಪ್ರಯಾಣಿಕರು ಮತ್ತು ಸರಕುಗಳ ಸುಗಮ ಮತ್ತು ವೇಗದ ಸಾಗಣೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿವೆ. ಈ ಉಪಕ್ರಮಗಳು ಸಂಪರ್ಕವನ್ನು ಒದಗಿಸುತ್ತವೆ ಮತ್ತು ಪ್ರಯಾಣದ ಅನುಕೂಲತೆಯನ್ನು ಸುಧಾರಿಸುತ್ತವೆ, ಜೊತೆಗೆ ಲಾಜಿಸ್ಟಿಕ್ (ಸರಕುಗಳ ಸಾಗಣೆ) ವೆಚ್ಚವನ್ನು ಕಡಿಮೆ ಮಾಡುತ್ತವೆ ಮತ್ತು ತೈಲ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತವೆ. ಹೆಚ್ಚುವರಿಯಾಗಿ, ಯೋಜನೆಗಳು ಕಡಿಮೆ CO2 (ಇಂಗಾಲದ ಡೈಆಕ್ಸೈಡ್) ಹೊರಸೂಸುವಿಕೆಗೆ ಸಹಾಯಕವಾಗಿವೆ, ಇದರಿಂದಾಗಿ ಸುಸ್ಥಿರ ಮತ್ತು ಪರಿಣಾಮಕಾರಿ ರೈಲು ಕಾರ್ಯಾಚರಣೆಗಳನ್ನು ಬೆಂಬಲಿಸುತ್ತವೆ. ಯೋಜನೆಗಳು ಅದರ ನಿರ್ಮಾಣದ ಸಮಯದಲ್ಲಿ ಸುಮಾರು 251 (ಎರಡು ನೂರ ಐವತ್ತೊಂದು) ಲಕ್ಷ ಮಾನವ-ದಿನಗಳ ನೇರ ಉದ್ಯೋಗವನ್ನು ಸೃಷ್ಟಿಸುತ್ತವೆ.
ಪ್ರಸ್ತಾವಿತ ಹೊಸ ಮಾರ್ಗವು ಕಚ್ ಪ್ರದೇಶದ ದೂರದ ಪ್ರದೇಶಕ್ಕೆ ಸಂಪರ್ಕವನ್ನು ಒದಗಿಸುತ್ತದೆ. ಇದು ಗುಜರಾತ್ ನಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ರೈಲ್ವೆ ಜಾಲಕ್ಕೆ 145 ಕಿ.ಮೀ ಮಾರ್ಗ ಮತ್ತು 164 ಕಿ.ಮೀ ಹಳಿಗಳನ್ನು ಸೇರಿಸುತ್ತದೆ, ಇದರ ಅಂದಾಜು ವೆಚ್ಚ 2526 ಕೋಟಿ ರೂಪಾಯಿಗಳಾಗಿದೆ. ಯೋಜನೆಯ ಪೂರ್ಣಗೊಳಿಸುವಿಕೆಗೆ 3 ವರ್ಷಗಳ ಸಮಯವಾಗಿದೆ. ಗುಜರಾತ್ ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜೊತೆಗೆ, ಹೊಸ ರೈಲು ಮಾರ್ಗವು ಉಪ್ಪು, ಸಿಮೆಂಟ್, ಕಲ್ಲಿದ್ದಲು, ಕ್ಲಿಂಕರ್ ಮತ್ತು ಬೆಂಟೋನೈಟ್ ಸಾಗಣೆಕೆಗೆ ಸಹಾಯ ಮಾಡುತ್ತದೆ. ಈ ಯೋಜನೆಯ ಕಾರ್ಯತಂತ್ರದ ಪ್ರಾಮುಖ್ಯತೆಯೆಂದರೆ ಇದು ರನ್ ಆಫ್ ಕಚ್ ಗೆ ಸಂಪರ್ಕವನ್ನು ಒದಗಿಸುತ್ತದೆ. ಹರಪ್ಪಾ ತಾಣ ಧೋಲವಿರ, ಕೋಟೇಶ್ವರ ದೇವಸ್ಥಾನ, ನಾರಾಯಣ ಸರೋವರ ಮತ್ತು ಲಖ್ ಪತ್ ಕೋಟೆ ಕೂಡ ರೈಲು ಜಾಲದ ವ್ಯಾಪ್ತಿಗೆ ಬರಲಿದ್ದು, 13 ಹೊಸ ರೈಲು ನಿಲ್ದಾಣಗಳು ಸೇರ್ಪಡೆಯಾಗಲಿದ್ದು, 866 ಹಳ್ಳಿಗಳು ಮತ್ತು ಸುಮಾರು 16 ಲಕ್ಷ ಜನಸಂಖ್ಯೆಗೆ ಪ್ರಯೋಜನವಾಗಲಿದೆ.
ಪ್ರಮುಖ ಸಂಪರ್ಕ ವರ್ಧನೆಯಲ್ಲಿ, ಅನುಮೋದಿತ ನೂತನ ಮಲ್ಟಿ-ಟ್ರ್ಯಾಕಿಂಗ್ ಯೋಜನೆಗಳು ಸುಮಾರು 3,108 ಹಳ್ಳಿಗಳು ಮತ್ತು ಸುಮಾರು 47.34 ಲಕ್ಷ ಜನಸಂಖ್ಯೆಗೆ ಅನುಕೂಲವಾಗಲಿದೆ ಮತ್ತು ಕರ್ನಾಟಕ, ತೆಲಂಗಾಣ, ಬಿಹಾರ ಮತ್ತು ಅಸ್ಸಾಂ ರಾಜ್ಯಗಳಿಗೆ ಪ್ರಯೋಜನವನ್ನು ನೀಡುವ ಒಂದು ಮಹತ್ವಾಕಾಂಕ್ಷೆಯ ಜಿಲ್ಲೆಗೆ (ಕಲಬುರಗಿ) ಸಂಪರ್ಕವನ್ನು ಹೆಚ್ಚಿಸುತ್ತವೆ. 5012 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗುವ ಕರ್ನಾಟಕ ಮತ್ತು ತೆಲಂಗಾಣದಲ್ಲಿ ವ್ಯಾಪಿಸಿರುವ 173 ಕಿ.ಮೀ ಉದ್ದದ ಸಿಕಂದರಾಬಾದ್ (ಸನತ್ ನಗರ) - ವಾಡಿ 3ನೇ ಮತ್ತು 4ನೇ ಮಾರ್ಗದ ಪೂರ್ಣಗೊಳ್ಳುವ ಸಮಯ ಐದು ವರ್ಷಗಳಾಗಿದೆ, ಬಿಹಾರದ 53 ಕಿ.ಮೀ ಉದ್ದದ ಭಾಗಲ್ಪುರ್ - ಜಮಾಲ್ಪುರ್ 3ನೇ ಮಾರ್ಗದ ಪೂರ್ಣಗೊಳ್ಳುವ ಸಮಯ ಮೂರು ವರ್ಷಗಳು ಹಾಗೂ ತಗಲುವ ವೆಚ್ಚ 1156 ಕೋಟಿ ರೂಪಾಯಿಗಳು. ಹಾಗೂ ಇದರ ಜೊತೆಗೆ 3634 ಕೋಟಿ ರೂಪಾಯಿಗಳ ವೆಚ್ಚದ 194 ಕಿ.ಮೀ ಉದ್ದದ ಫರ್ಕೇಟಿಂಗ್ - ನ್ಯೂ ಟಿನ್ಸುಕಿಯಾ ದ್ವಿಗುಣಗೊಳಿಸುವ ಕೆಲಸವು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.
ಹೆಚ್ಚಿದ ಮಾರ್ಗ ಸಾಮರ್ಥ್ಯವು ಚಲನಶೀಲತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ, ಇದರ ಪರಿಣಾಮವಾಗಿ ಭಾರತೀಯ ರೈಲ್ವೆಗಳಿಗೆ ಸುಧಾರಿತ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಉಂಟಾಗುತ್ತದೆ. ಈ ಬಹು-ಟ್ರ್ಯಾಕಿಂಗ್ ಪ್ರಸ್ತಾವನೆಗಳು ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಮತ್ತು ದಟ್ಟಣೆಯನ್ನು ಕಡಿಮೆ ಮಾಡಲು ಸಿದ್ಧವಾಗಿವೆ. ಈ ಯೋಜನೆಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನವ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿವೆ, ಇದು ಈ ಪ್ರಾಂತ್ಯದ ಜನರನ್ನು ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿಯ ಮೂಲಕ "ಆತ್ಮನಿರ್ಭರ"ರನ್ನಾಗಿ ಮಾಡುತ್ತದೆ, ಇದು ಆ ಪ್ರದೇಶದವರಲ್ಲಿ ಉದ್ಯೋಗ / ಸ್ವ-ಉದ್ಯೋಗ ಅವಕಾಶಗಳನ್ನು ಹೆಚ್ಚಿಸುತ್ತದೆ.
ಈ ಯೋಜನೆಗಳನ್ನು ಪ್ರಧಾನಮಂತ್ರಿ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಯೋಜಿಸಲಾಗಿದ್ದು, ಸಮಗ್ರ ಯೋಜನೆ ಮತ್ತು ಪಾಲುದಾರರ ಸಮಾಲೋಚನೆಗಳ ಮೂಲಕ ಬಹು-ಮಾದರಿ ಸಂಪರ್ಕ ಮತ್ತು ಸಾಗಣೆ (ಲಾಜಿಸ್ಟಿಕ್) ದಕ್ಷತೆಯನ್ನು ಹೆಚ್ಚಿಸುವತ್ತ ಗಮನ ಹರಿಸಲಾಗಿದೆ. ಗುಜರಾತ್, ಕರ್ನಾಟಕ, ತೆಲಂಗಾಣ, ಬಿಹಾರ ಮತ್ತು ಅಸ್ಸಾಂ ರಾಜ್ಯಗಳಾದ್ಯಂತ 13 ಜಿಲ್ಲೆಗಳನ್ನು ಒಳಗೊಂಡ ನಾಲ್ಕು ಯೋಜನೆಗಳು ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವನ್ನು ಸುಮಾರು 565 ಕಿ.ಮೀ.ಗಳಷ್ಟು ಹೆಚ್ಚಿಸುತ್ತವೆ.
ಕಲ್ಲಿದ್ದಲು, ಸಿಮೆಂಟ್, ಕ್ಲಿಂಕರ್, ಹಾರುಬೂದಿ, ಉಕ್ಕು, ಕಂಟೇನರ್‌ಗಳು, ರಸಗೊಬ್ಬರಗಳು, ಕೃಷಿ ಸರಕುಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಮುಂತಾದ ಸರಕುಗಳ ಸಾಗಣೆಗೆ ಇವು ಅತ್ಯಗತ್ಯ ಮಾರ್ಗಗಳಾಗಿವೆ. ಸಾಮರ್ಥ್ಯ ವೃದ್ಧಿ ಕಾರ್ಯಗಳು 68 ಎಂ.ಟಿ.ಪಿ.ಎ. (ವಾರ್ಷಿಕ ಮಿಲಿಯನ್ ಟನ್) ಗಳಷ್ಟು ಹೆಚ್ಚುವರಿ ಸರಕು ಸಾಗಣೆಗೆ ಕಾರಣವಾಗುತ್ತವೆ. ರೈಲ್ವೆಗಳು ಪರಿಸರ ಸ್ನೇಹಿ ಮತ್ತು ಇಂಧನ ದಕ್ಷ ಸಾರಿಗೆ ವಿಧಾನವಾಗಿರುವುದರಿಂದ, ಹವಾಮಾನ ಗುರಿಗಳನ್ನು ಸಾಧಿಸಲು ಮತ್ತು ದೇಶದ ಸಾಗಣೆ (ಲಾಜಿಸ್ಟಿಕ್ಸ್ ) ವೆಚ್ಚವನ್ನು ಕಡಿಮೆ ಮಾಡಲು, ತೈಲ ಆಮದು (56 ಕೋಟಿ ಲೀಟರ್ ಗಳು) ಕಡಿಮೆ ಮಾಡಲು ಮತ್ತು ಇಂಗಾಲದ ಡೈಆಕ್ಸೈಡ್(CO2) ಹೊರಸೂಸುವಿಕೆಯನ್ನು (360 ಕೋಟಿ ಕೆಜಿ) ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು 14 ಕೋಟಿ ಮರಗಳನ್ನು ನೆಡುವುದಕ್ಕೆ ಸಮಾನವಾಗಿರುತ್ತದೆ.
ಪ್ರಸ್ತಾವಿತ ಯೋಜನೆಗಳು ಕಲ್ಲಿದ್ದಲು, ಕಂಟೇನರ್‌ಗಳು, ಸಿಮೆಂಟ್, ಕೃಷಿ ಸರಕುಗಳು, ಆಟೋಮೊಬೈಲ್ (ವಾಹನೋದ್ಯಮ), ಪಿಒಎಲ್ (ಪೆಟ್ರೋಲಿಯಂ, ತೈಲ,ಕೀಲೆಣ್ಣೆ) ಕಬ್ಬಿಣ ಮತ್ತು ಉಕ್ಕು ಮತ್ತು ಇತರ ಸರಕುಗಳ ಸಾಗಣೆಗೆ ನಿರ್ಣಾಯಕ ಮಾರ್ಗಗಳಲ್ಲಿ ಲೈನ್ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಸಾಗಣೆ (ಲಾಜಿಸ್ಟಿಕ್) ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಈ ಸುಧಾರಣೆಗಳು ಪೂರೈಕೆ ಸರಪಳಿಗಳನ್ನು ಅತ್ಯುತ್ತಮವಾಗಿಸುವ ನಿರೀಕ್ಷೆಯಿದೆ, ಇದರಿಂದಾಗಿ ವೇಗವರ್ಧಿತ ಆರ್ಥಿಕ ಬೆಳವಣಿಗೆಗೆ ಕೂಡ ಬಹಳಷ್ಟು ಅನುಕೂಲವಾಗುತ್ತದೆ.
*****
(Release ID: 2161309)
Read this release in:
Odia
,
English
,
Urdu
,
Marathi
,
Hindi
,
Nepali
,
Bengali
,
Bengali-TR
,
Assamese
,
Punjabi
,
Gujarati
,
Tamil
,
Telugu
,
Malayalam