ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್ ನ ಹನಸಲ್ಪುರದಲ್ಲಿ ನಡೆದ ಗ್ರೀನ್ ಮೊಬಿಲಿಟಿ ಇನಿಶಿಯೇಟಿವ್ ಉದ್ಘಾಟನೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣ

Posted On: 26 AUG 2025 2:21PM by PIB Bengaluru

ಗುಜರಾತಿನ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಭೂಪೇಂದ್ರಭಾಯಿ ಪಟೇಲ್ ಅವರೇ, ಭಾರತದಲ್ಲಿನ ಜಪಾನ್ ರಾಯಭಾರಿಗಳಾದ ಶ್ರೀ ಕೀಚಿ ಒನೊ ಸನ್ ಅವರೇ, ಸುಜುಕಿ ಮೋಟಾರ್ ಕಾರ್ಪೊರೇಷನ್ ನ ಅಧ್ಯಕ್ಷರಾದ ಶ್ರೀ ತೋಶಿಹಿರೋ ಸುಜುಕಿ ಸ್ಯಾನ್ ಅವರೇ, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹಿಸಾಶಿ ಟಕೆಯುಚಿ ಸ್ಯಾನ್ ಅವರೇ, ಅಧ್ಯಕ್ಷರಾದ ಶ್ರೀ ಆರ್.ಸಿ. ಭಾರ್ಗವ ಅವರೇ, ಹಂಸಲ್ಪುರ ಘಟಕದ ಸಮಸ್ತ ನೌಕರರೇ, ಇತರ ಗಣ್ಯ ಅತಿಥಿಗಳೇ, ಮಹಿಳೆಯರೇ ಮತ್ತು ಮಹನೀಯರೇ!

ಗಣೇಶೋತ್ಸವದ ಈ ಸಂಭ್ರಮದ ನಡುವೆ, ಇಂದು ಭಾರತದ 'ಮೇಕ್ ಇನ್ ಇಂಡಿಯಾ' ಪಯಣಕ್ಕೆ ಒಂದು ಹೊಸ ಅಧ್ಯಾಯ ಸೇರ್ಪಡೆಯಾಗುತ್ತಿದೆ. ನಮ್ಮ ಗುರಿಯಾದ 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್' ನಿಟ್ಟಿನಲ್ಲಿ ಇದೊಂದು ದೊಡ್ಡ ಮುನ್ನಡೆಯಾಗಿದೆ. ಇಂದಿನಿಂದ, ಭಾರತದಲ್ಲಿ ತಯಾರಾದ ಎಲೆಕ್ಟ್ರಿಕ್ ವಾಹನಗಳು 100 ದೇಶಗಳಿಗೆ ರಫ್ತಾಗಲಿವೆ. ಇದರ ಜೊತೆಗೆ, ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್ ತಯಾರಿಕೆಯೂ ಇಂದು ಆರಂಭವಾಗುತ್ತಿದೆ. ಈ ದಿನ ಭಾರತ ಮತ್ತು ಜಪಾನ್ ನಡುವಿನ ಸ್ನೇಹಕ್ಕೂ ಒಂದು ಹೊಸ ಆಯಾಮವನ್ನು ನೀಡುತ್ತಿದೆ. ನಾನು ಸಮಸ್ತ ಭಾರತೀಯರಿಗೆ, ಜಪಾನ್ ದೇಶಕ್ಕೆ ಮತ್ತು ಸುಜುಕಿ ಕಂಪನಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಒಂದು ರೀತಿಯಲ್ಲಿ, ಹದಿಮೂರನೇ ವಯಸ್ಸು 'ಟೀನೇಜ್' ಅಂದರೆ ಹದಿಹರೆಯದ ಆರಂಭವನ್ನು ಸೂಚಿಸುತ್ತದೆ. ಹದಿಹರೆಯವೆಂದರೆ ರೆಕ್ಕೆಗಳನ್ನು ಬಿಚ್ಚಿ ಹಾರುವ ಸಮಯ, ಕನಸುಗಳೊಂದಿಗೆ ಗಗನಕ್ಕೇರುವ ಸಮಯ. ಹದಿಹರೆಯದಲ್ಲಿ ಅಸಂಖ್ಯಾತ ಆಕಾಂಕ್ಷೆಗಳು ಮೂಡುತ್ತವೆ; ಕಾಲು ನೆಲದ ಮೇಲೆ ನಿಲ್ಲುವುದಿಲ್ಲ ಎನ್ನುವಂತಹ ಸಮಯವದು. ಇಂದು ಮಾರುತಿ ತನ್ನ ಹದಿಹರೆಯಕ್ಕೆ ಕಾಲಿಡುತ್ತಿದೆ ಎಂಬುದು ನನಗೆ ಅತೀವ ಸಂತೋಷ ತಂದಿದೆ. ಗುಜರಾತಿನ ಈ ನೆಲದಲ್ಲಿ ಮಾರುತಿ ತನ್ನ ಹದಿಹರೆಯಕ್ಕೆ ಕಾಲಿಡುತ್ತಿರುವುದರ ಅರ್ಥ, ಮುಂಬರುವ ದಿನಗಳಲ್ಲಿ ಮಾರುತಿ ಹೊಸ ರೆಕ್ಕೆಗಳನ್ನು ಬಿಚ್ಚಿ, ನವೀನ ಶಕ್ತಿ ಮತ್ತು ಉತ್ಸಾಹದಿಂದ ಮುನ್ನಡೆಯಲಿದೆ. ಈ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ.

ಸ್ನೇಹಿತರೇ, 

ಭಾರತದ ಈ ಯಶೋಗಾಥೆಯ ಬೀಜಗಳನ್ನು ಸುಮಾರು 13 ವರ್ಷಗಳ ಹಿಂದೆಯೇ ಬಿತ್ತಲಾಗಿತ್ತು. 2012 ರಲ್ಲಿ, ನಾನು ಇಲ್ಲಿ ಮುಖ್ಯಮಂತ್ರಿಯಾಗಿದ್ದಾಗ, ನಾವು ಹಂಸಲಪುರದಲ್ಲಿ ಮಾರುತಿ ಸುಜುಕಿಗೆ ಭೂಮಿಯನ್ನು ಹಂಚಿಕೆ ಮಾಡಿದ್ದೆವು. ಆ ಸಮಯದಲ್ಲೂ ಸಹ, 'ಆತ್ಮನಿರ್ಭರ ಭಾರತ' (ಸ್ವಾವಲಂಬಿ ಭಾರತ) ಹಾಗೂ 'ಮೇಕ್ ಇನ್ ಇಂಡಿಯಾ'ದ ದೃಷ್ಟಿಕೋನ ನಮ್ಮ ಮುಂದಿತ್ತು. ಅಂದು ನಾವು ಮಾಡಿದ ಪ್ರಯತ್ನಗಳು, ಇಂದು ರಾಷ್ಟ್ರದ ಆಕಾಂಕ್ಷೆಗಳನ್ನು ಪೂರೈಸುವಲ್ಲಿ ಇಷ್ಟು ದೊಡ್ಡ ಪಾತ್ರವನ್ನು ವಹಿಸುತ್ತಿವೆ.

ಸ್ನೇಹಿತರೇ, 

ಈ ಸಂದರ್ಭದಲ್ಲಿ, ನಾನು ದಿವಂಗತ ಒಸಾಮು ಸುಜುಕಿ ಸ್ಯಾನ್ ಅವರನ್ನು ಪ್ರೀತಿಯಿಂದ ಸ್ಮರಿಸಲು ಬಯಸುತ್ತೇನೆ. ಅವರಿಗೆ 'ಪದ್ಮವಿಭೂಷಣ' ನೀಡಿ ಗೌರವಿಸುವ ಸೌಭಾಗ್ಯ ನಮ್ಮ ಸರ್ಕಾರಕ್ಕೆ ಲಭಿಸಿತ್ತು. ಮಾರುತಿ-ಸುಜುಕಿ ಇಂಡಿಯಾ ಬಗ್ಗೆ ಅವರು ಹೊಂದಿದ್ದ ದೃಷ್ಟಿಕೋನ, ಇಂದು ಭವ್ಯವಾಗಿ ವಿಸ್ತರಣೆಯಾಗುತ್ತಿರುವುದನ್ನು ನೋಡಲು ನನಗೆ ಸಂತೋಷವೆನಿಸುತ್ತಿದೆ.

ಸ್ನೇಹಿತರೇ, 

ಭಾರತದಲ್ಲಿ ಪ್ರಜಾಪ್ರಭುತ್ವದ ಶಕ್ತಿಯಿದೆ, ಮತ್ತು ಜನಸಂಖ್ಯೆಯ ಲಾಭವೂ ಇದೆ. ನಮ್ಮಲ್ಲಿ ಬೃಹತ್ ಪ್ರಮಾಣದ ಕೌಶಲ್ಯಯುತ ಕಾರ್ಯಪಡೆಯೂ ಇದೆ. ಇದು ನಮ್ಮೆಲ್ಲಾ ಪಾಲುದಾರರಿಗೆ ಒಂದು ಗೆಲುವು-ಗೆಲುವಿನ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಇಂದು ನೀವು ನೋಡಬಹುದು, ಸುಜುಕಿ ಜಪಾನ್ ಕಂಪನಿಯು ಭಾರತದಲ್ಲಿ ಉತ್ಪಾದನೆ ಮಾಡುತ್ತಿದೆ ಮತ್ತು ಇಲ್ಲಿ ತಯಾರಾದ ಕಾರುಗಳು ಜಪಾನ್ಗೆ ಮರಳಿ ರಫ್ತಾಗುತ್ತಿವೆ. ಇದು ಕೇವಲ ಭಾರತ-ಜಪಾನ್ ಸಂಬಂಧಗಳ ಬಲವನ್ನು ಪ್ರತಿಬಿಂಬಿಸುವುದಲ್ಲದೆ, ಜಾಗತಿಕ ಕಂಪನಿಗಳು ಭಾರತದ ಮೇಲೆ ಇಟ್ಟಿರುವ ನಂಬಿಕೆಯನ್ನೂ ತೋರಿಸುತ್ತದೆ. ಒಂದು ರೀತಿಯಲ್ಲಿ, ಮಾರುತಿ ಸುಜುಕಿಯಂತಹ ಕಂಪನಿಗಳು 'ಮೇಕ್ ಇನ್ ಇಂಡಿಯಾ'ದ ರಾಯಭಾರಿಗಳಾಗಿವೆ. ಕಳೆದ 4 ಸತತ ವರ್ಷಗಳಿಂದ, ಮಾರುತಿ ಭಾರತದ ಅತಿದೊಡ್ಡ ಕಾರ್ ರಫ್ತುದಾರನಾಗಿದೆ. ಇಂದಿನಿಂದ, ಎಲೆಕ್ಟ್ರಿಕ್ ವಾಹನಗಳ ರಫ್ತು ಕೂಡ ಇದೇ ಪ್ರಮಾಣದಲ್ಲಿ ಆರಂಭವಾಗಲಿದೆ. ಇನ್ನು ಮುಂದೆ, ಜಗತ್ತಿನಾದ್ಯಂತ ಹತ್ತಾರು ದೇಶಗಳಲ್ಲಿ ಓಡಾಡುವ ಎಲೆಕ್ಟ್ರಿಕ್ ವಾಹನಗಳು 'ಮೇಡ್ ಇನ್ ಇಂಡಿಯಾ' ಎಂಬ ಮುದ್ರೆಯನ್ನು ಹೊತ್ತಿರಲಿವೆ!

ಸ್ನೇಹಿತರೇ, 

ಎಲೆಕ್ಟ್ರಿಕ್ ವಾಹನ (EV) ಪರಿಸರ ವ್ಯವಸ್ಥೆಯಲ್ಲಿ ಅತ್ಯಂತ ನಿರ್ಣಾಯಕ ಭಾಗವೆಂದರೆ ಬ್ಯಾಟರಿ ಎಂಬುದು ನಮ್ಮೆಲ್ಲರಿಗೂ ತಿಳಿದಿದೆ. ಕೆಲವು ವರ್ಷಗಳ ಹಿಂದಿನವರೆಗೂ, ಭಾರತದಲ್ಲಿ ಬ್ಯಾಟರಿಗಳನ್ನು ಸಂಪೂರ್ಣವಾಗಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯನ್ನು ಬಲಪಡಿಸಲು, ಭಾರತವೂ ಬ್ಯಾಟರಿಗಳನ್ನು ತಯಾರಿಸುವುದು ಅತ್ಯಗತ್ಯವಾಗಿತ್ತು. ಈ ದೃಷ್ಟಿಕೋನದೊಂದಿಗೆ, ನಾವು 2017ರಲ್ಲಿ ಇಲ್ಲಿ TDSG ಬ್ಯಾಟರಿ ಘಟಕಕ್ಕೆ ಅಡಿಪಾಯ ಹಾಕಿದ್ದೆವು. TDSG ಯ ಹೊಸ ಉಪಕ್ರಮದ ಅಡಿಯಲ್ಲಿ, ಮೂರು ಜಪಾನೀ ಕಂಪನಿಗಳು ಒಟ್ಟಾಗಿ ಈ ಕಾರ್ಖಾನೆಯಲ್ಲಿ ಇದೇ ಮೊದಲ ಬಾರಿಗೆ ಭಾರತದಲ್ಲಿ ಸೆಲ್ಗಳನ್ನು ತಯಾರಿಸಲಿವೆ. ಇನ್ನು ಮುಂದೆ, ಬ್ಯಾಟರಿ ಸೆಲ್ಗಳಿಗೆ ಬೇಕಾದ ಎಲೆಕ್ಟ್ರೋಡ್ಗಳನ್ನೂ ಸಹ ಸ್ಥಳೀಯವಾಗಿ ಭಾರತದಲ್ಲೇ ಉತ್ಪಾದಿಸಲಾಗುವುದು. ಈ ಸ್ಥಳೀಕರಣವು ಭಾರತದ ಸ್ವಾವಲಂಬನೆಗೆ ಹೊಸ ಶಕ್ತಿಯನ್ನು ನೀಡಲಿದೆ. ಇದಲ್ಲದೆ, ಇದು ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳ ಬೆಳವಣಿಗೆಗೂ ವೇಗ ನೀಡಲಿದೆ. ಈ ಐತಿಹಾಸಿಕ ಆರಂಭಕ್ಕಾಗಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ, 

ಕೆಲವು ವರ್ಷಗಳ ಹಿಂದೆ, ಎಲೆಕ್ಟ್ರಿಕ್ ವಾಹನಗಳನ್ನು (EVs) ಕೇವಲ ಒಂದು ಹೊಸ ಪರ್ಯಾಯವೆಂದು ನೋಡಲಾಗುತ್ತಿತ್ತು. ಆದರೆ, ಎಲೆಕ್ಟ್ರಿಕ್ ವಾಹನಗಳು ಅನೇಕ ಸಮಸ್ಯೆಗಳಿಗೆ ಒಂದು ಪರಿಹಾರ ಎಂದು ನಾನು ಯಾವಾಗಲೂ ನಂಬಿದ್ದೇನೆ. ಅದಕ್ಕಾಗಿಯೇ, ಕಳೆದ ವರ್ಷ ನನ್ನ ಸಿಂಗಾಪುರ ಭೇಟಿಯ ಸಮಯದಲ್ಲಿ, ನಾವು ನಮ್ಮ ಹಳೆಯ ವಾಹನಗಳನ್ನು, ನಮ್ಮ ಹಳೆಯ ಆಂಬ್ಯುಲೆನ್ಸ್ಗಳನ್ನು ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಬಹುದು ಎಂದು ಹೇಳಿದ್ದೆ. ಮಾರುತಿ ಸುಜುಕಿ ಈ ಸವಾಲನ್ನು ಸ್ವೀಕರಿಸಿ, ಕೇವಲ 6 ತಿಂಗಳಲ್ಲಿ ಒಂದು ಕಾರ್ಯನಿರ್ವಹಿಸುವ ಮಾದರಿಯನ್ನು (ಪ್ರೋಟೋಟೈಪ್) ಅಭಿವೃದ್ಧಿಪಡಿಸಿತು. ಈಗಷ್ಟೇ ನಾನು ಈ ಹೈಬ್ರಿಡ್ ಆಂಬ್ಯುಲೆನ್ಸ್ನ ಮಾದರಿಯನ್ನು ಖುದ್ದಾಗಿ ನೋಡಿದೆ. ಈ ಹೈಬ್ರಿಡ್ ಆಂಬ್ಯುಲೆನ್ಸ್ಗಳು 'ಪಿಎಂ ಇ-ಡ್ರೈವ್' (PM E-DRIVE) ಯೋಜನೆಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತವೆ. ಸುಮಾರು 11,000 ಕೋಟಿ ರೂಪಾಯಿಗಳ ಈ ಯೋಜನೆಯಲ್ಲಿ, ಇ-ಆಂಬ್ಯುಲೆನ್ಸ್ಗಳಿಗಾಗಿಯೇ ಮೀಸಲಾದ ಬಜೆಟ್ ಅನ್ನು ಸಹ ಇಡಲಾಗಿದೆ. ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳು ಮಾಲಿನ್ಯವನ್ನು ಕಡಿಮೆ ಮಾಡುತ್ತವೆ ಮತ್ತು ಹಳೆಯ ವಾಹನಗಳನ್ನು ಪರಿವರ್ತಿಸಲು ಒಂದು ಆಯ್ಕೆಯನ್ನೂ ಒದಗಿಸುತ್ತವೆ.

ಸ್ನೇಹಿತರೇ, 

ಶುದ್ಧ ಇಂಧನ ಮತ್ತು ಶುದ್ಧ  ಸಂಚಾರ, ಇದೇ ನಮ್ಮ ಭವಿಷ್ಯ. ಇಂತಹ ಪ್ರಯತ್ನಗಳ ಮೂಲಕ, ಭಾರತವು ಶೀಘ್ರದಲ್ಲೇ ಸ್ವಚ್ಛ ಇಂಧನ ಮತ್ತು ಸ್ವಚ್ಛ ಸಂಚಾರಕ್ಕಾಗಿ ಒಂದು ವಿಶ್ವಾಸಾರ್ಹ ಕೇಂದ್ರವಾಗಿ ಹೊರಹೊಮ್ಮಲಿದೆ.

ಸ್ನೇಹಿತರೇ, 

ಇಂದು, ಇಡೀ ಜಗತ್ತು ಸಪ್ಲೈ ಚೈನ್  ಅಡೆತಡೆಗಳಿಂದ ಬಳಲುತ್ತಿರುವಾಗ, ಕಳೆದ ದಶಕದಲ್ಲಿ ಭಾರತ ರೂಪಿಸಿದ ನೀತಿಗಳು ನಮ್ಮ ದೇಶಕ್ಕೆ ಎಷ್ಟು ಉಪಯುಕ್ತವಾಗಿವೆ ಎಂಬುದು ಸ್ಪಷ್ಟವಾಗುತ್ತಿದೆ. 2014 ರಲ್ಲಿ, ನನಗೆ ದೇಶ ಸೇವೆ ಮಾಡುವ ಅವಕಾಶ ಸಿಕ್ಕಾಗ, ನಾವು ತಕ್ಷಣವೇ ಇದಕ್ಕಾಗಿ ಸಿದ್ಧತೆಗಳನ್ನು ಆರಂಭಿಸಿದೆವು. ನಾವು 'ಮೇಕ್ ಇನ್ ಇಂಡಿಯಾ' ಅಭಿಯಾನವನ್ನು ಪ್ರಾರಂಭಿಸಿದೆವು ಮತ್ತು ಜಾಗತಿಕ ಹಾಗೂ ದೇಶೀಯ ತಯಾರಕರಿಬ್ಬರಿಗೂ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆವು. ಭಾರತದಲ್ಲಿನ ತಯಾರಿಕೆಯನ್ನು ದಕ್ಷ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು, ನಾವು ಕೈಗಾರಿಕಾ ಕಾರಿಡಾರ್ ಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ, 'ಪ್ಲಗ್ ಅಂಡ್ ಪ್ಲೇ' ಮೂಲಸೌಕರ್ಯವನ್ನು ರಚಿಸುತ್ತಿದ್ದೇವೆ ಮತ್ತು ಲಾಜಿಸ್ಟಿಕ್ಸ್ ಪಾರ್ಕ್ಗಳನ್ನು ನಿರ್ಮಿಸುತ್ತಿದ್ದೇವೆ. ಭಾರತವು ಹಲವಾರು ವಲಯಗಳ ತಯಾರಕರಿಗೆ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ (PLI) ಪ್ರಯೋಜನಗಳನ್ನು ಸಹ ನೀಡುತ್ತಿದೆ.

ಸ್ನೇಹಿತರೇ, 

ಪ್ರಮುಖ ಸುಧಾರಣೆಗಳ ಮೂಲಕ, ಹೂಡಿಕೆದಾರರು ಎದುರಿಸುತ್ತಿದ್ದ ಹಳೆಯ ತೊಂದರೆಗಳನ್ನು ನಾವು ತೆಗೆದುಹಾಕಿದ್ದೇವೆ. ಇದು ಹೂಡಿಕೆದಾರರಿಗೆ ಭಾರತದ ತಯಾರಿಕಾ ವಲಯದಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಲು ಸುಲಭವಾಗಿಸಿದೆ. ಫಲಿತಾಂಶಗಳು ನಮ್ಮ ಕಣ್ಣ ಮುಂದಿವೆ: ಈ ದಶಕದಲ್ಲಿ, ಎಲೆಕ್ಟ್ರಾನಿಕ್ಸ್ ಉತ್ಪಾದನೆಯು ಸುಮಾರು 500 ಪ್ರತಿಶತದಷ್ಟು ಹೆಚ್ಚಾಗಿದೆ. 2014 ಕ್ಕೆ ಹೋಲಿಸಿದರೆ ಮೊಬೈಲ್ ಫೋನ್ ಉತ್ಪಾದನೆಯು 2,700 ಪ್ರತಿಶತದಷ್ಟು ಹೆಚ್ಚಾಗಿದೆ. ಕಳೆದ ದಶಕದಲ್ಲಿ ರಕ್ಷಣಾ ಉತ್ಪಾದನೆಯೂ ಕೂಡ 200 ಪ್ರತಿಶತಕ್ಕಿಂತ ಹೆಚ್ಚು ಬೆಳೆದಿದೆ. ಈ ಯಶಸ್ಸುಗಳು ಭಾರತದ ಎಲ್ಲಾ ರಾಜ್ಯಗಳನ್ನು, ಪ್ರತಿಯೊಂದು ರಾಜ್ಯವನ್ನು, ಸುಧಾರಣೆಗಳಲ್ಲಿ ಮತ್ತು ಹೂಡಿಕೆಗಳನ್ನು ಆಕರ್ಷಿಸುವುದರಲ್ಲಿ ಸ್ಪರ್ಧಿಸಲು ಪ್ರೇರೇಪಿಸುತ್ತಿವೆ. ಈ ಆರೋಗ್ಯಕರ ಸ್ಪರ್ಧೆಯು ಇಡೀ ದೇಶಕ್ಕೆ ಪ್ರಯೋಜನವನ್ನು ನೀಡುತ್ತಿದೆ.

ನಾನು ಪ್ರತಿಯೊಂದು ಸಭೆಯಲ್ಲೂ,, ವೈಯಕ್ತಿಕ ಸಂಭಾಷಣೆಗಳಲ್ಲಿ, ಹಾಗೂ ಸಾರ್ವಜನಿಕವಾಗಿ ಎಲ್ಲಾ ರಾಜ್ಯಗಳಿಗೆ ಹೇಳುತ್ತಲೇ ಬಂದಿದ್ದೇನೆ, ನಾವು ಪೂರ್ವಭಾವಿಯಾಗಿ ಕಾರ್ಯಪ್ರವೃತ್ತರಾಗಬೇಕು. ನಾವು ಅಭಿವೃದ್ಧಿ-ಪರ ನೀತಿಗಳನ್ನು ರೂಪಿಸಬೇಕು. ನಾವು ಸಿಂಗಲ್ ವಿಂಡೋ ಕ್ಲಿಯರೆನ್ಸ್ ವ್ಯವಸ್ಥೆಗೆ  ಒತ್ತು ನೀಡಬೇಕು. ನಾವು ಕಾನೂನುಗಳಲ್ಲಿನ ಸುಧಾರಣೆಗಳಿಗೆ ಒತ್ತು ನೀಡಬೇಕು ಮತ್ತು ಇದು ಸ್ಪರ್ಧೆಯ ಯುಗ. ಒಂದು ರಾಜ್ಯವು ತನ್ನ ನೀತಿಗಳನ್ನು 'ಹಾಗಿದ್ದರೆ-ಹೀಗಿದ್ದರೆ' ಎನ್ನದೆ, ಎಷ್ಟು ವೇಗವಾಗಿ ಅಚ್ಚುಕಟ್ಟಾಗಿ ಮತ್ತು ಸ್ಪಷ್ಟವಾಗಿ ಇಡುತ್ತದೆಯೋ, ಅಷ್ಟೇ ಹೂಡಿಕೆದಾರರ ವಿಶ್ವಾಸವೂ ಹೆಚ್ಚುತ್ತದೆ. ಹೂಡಿಕೆದಾರರು ಬರಲು ಧೈರ್ಯ ಮಾಡುತ್ತಾರೆ. ಇಂದು ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಯಾವುದೇ ರಾಜ್ಯ ಹಿಂದೆ ಉಳಿಯಬಾರದು. ಪ್ರತಿಯೊಂದು ರಾಜ್ಯವೂ ಅವಕಾಶವನ್ನು ಬಳಸಿಕೊಳ್ಳಬೇಕು. ಎಂತಹ ಸ್ಪರ್ಧೆ ಇರಬೇಕೆಂದರೆ, ಭಾರತಕ್ಕೆ ಬರುವ ಹೂಡಿಕೆದಾರನಿಗೆ ಈ ರಾಜ್ಯಕ್ಕೆ ಹೋಗುವುದೋ ಅಥವಾ ಆ ರಾಜ್ಯಕ್ಕೆ ಹೋಗುವುದೋ ಎಂದು ಯೋಚಿಸಲು ಕಷ್ಟವಾಗಬೇಕು. ಅಂತಹ ಸ್ಪಷ್ಟವಾದ ಸ್ಪರ್ಧೆ ಇರಬೇಕು, ಇದರಿಂದ ದೇಶಕ್ಕೆ ಲಾಭವಾಗುತ್ತದೆ. ಆದ್ದರಿಂದ ನಾನು ಎಲ್ಲಾ ರಾಜ್ಯಗಳಿಗೆ ಆಹ್ವಾನ ನೀಡುತ್ತೇನೆ - ಸುಧಾರಣೆಗಳಿಗಾಗಿ ಸ್ಪರ್ಧಿಸಿ, ಉತ್ತಮ ಆಡಳಿತಕ್ಕಾಗಿ ಸ್ಪರ್ಧಿಸಿ, ಅಭಿವೃದ್ಧಿ-ಪರ ನೀತಿಗಳಿಗಾಗಿ ಸ್ಪರ್ಧಿಸಿ ಮತ್ತು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ವೇಗವಾಗಿ ಸಾಧಿಸುವಲ್ಲಿ ನಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಿ.

ಸ್ನೇಹಿತರೇ,

ಭಾರತವು ಇಷ್ಟಕ್ಕೇ ತೃಪ್ತವಾಗುವುದಿಲ್ಲ. ನಾವು ಉತ್ತಮ ಸಾಧನೆ ಮಾಡಿದ ವಲಯಗಳಲ್ಲಿ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಇದಕ್ಕಾಗಿ, ನಾವು 'ಮಿಷನ್ ಮ್ಯಾನುಫ್ಯಾಕ್ಚರಿಂಗ್' (ಉತ್ಪಾದನಾ ಮಿಷನ್) ಮೇಲೆ ಗಮನಹರಿಸಿದ್ದೇವೆ. ಮುಂಬರುವ ದಿನಗಳಲ್ಲಿ, ನಮ್ಮ ಗಮನ ಭವಿಷ್ಯದ ಕೈಗಾರಿಕೆಗಳ ಮೇಲೆ ಇರುತ್ತದೆ. ಸೆಮಿಕಂಡಕ್ಟರ್ ವಲಯದಲ್ಲಿ ಭಾರತವು ಯಶಸ್ಸಿನತ್ತ ಮುನ್ನಡೆಯುತ್ತಿದೆ. ದೇಶದಲ್ಲಿ ಆರು ಹೊಸ ಘಟಕಗಳು ಶೀಘ್ರದಲ್ಲಿಯೇ ಸಿದ್ಧಗೊಳ್ಳಲಿವೆ. ನಾವು ಸೆಮಿಕಂಡಕ್ಟರ್ ತಯಾರಿಕೆಯನ್ನು ಮತ್ತಷ್ಟು ಮುನ್ನಡೆಸಬೇಕು.

ಸ್ನೇಹಿತರೇ,

ಅಪರೂಪದ ಭೂಮಿಯ ಕಾಂತಗಳ (ರೇರ್ ಅರ್ಥ್ ಮ್ಯಾಗ್ನೆಟ್ಸ್) ಕೊರತೆಯಿಂದಾಗಿ ಆಟೋ ಉದ್ಯಮವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಭಾರತ ಸರ್ಕಾರಕ್ಕೂ ತಿಳಿದಿದೆ. ಈ ದಿಕ್ಕಿನಲ್ಲಿ ದೇಶದ ಸಾಮರ್ಥ್ಯವನ್ನು ಹೆಚ್ಚಿಸಲು, ನಾವು 'ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್' ಅನ್ನು ಸಹ ಆರಂಭಿಸಿದ್ದೇವೆ. ಇದರ ಅಡಿಯಲ್ಲಿ, ದೇಶದ ವಿವಿಧ ಸ್ಥಳಗಳಲ್ಲಿ 1,200ಕ್ಕೂ ಹೆಚ್ಚು ಪರಿಶೋಧನೆಗಳನ್ನು ಕೈಗೊಳ್ಳಲಾಗುವುದು ಮತ್ತು ನಿರ್ಣಾಯಕ ಖನಿಜಗಳಿಗಾಗಿ ಹುಡುಕಾಟ ನಡೆಸಲಾಗುವುದು.

ಸ್ನೇಹಿತರೇ,

ನಾನು ಮುಂದಿನ ವಾರ ಜಪಾನ್ಗೆ ಹೋಗುತ್ತಿದ್ದೇನೆ. ಭಾರತ ಮತ್ತು ಜಪಾನ್ ನಡುವಿನ ಸಂಬಂಧ ಕೇವಲ ರಾಜತಾಂತ್ರಿಕ ಸಂಬಂಧವನ್ನು ಮೀರಿದ್ದಾಗಿದೆ, ಇದು ಸಾಂಸ್ಕೃತಿಕ ಮತ್ತು ವಿಶ್ವಾಸ ಆಧಾರಿತ ಸಂಬಂಧವಾಗಿದೆ. ನಾವು ಪರಸ್ಪರರ ಪ್ರಗತಿಯಲ್ಲಿ ನಮ್ಮ ಪ್ರಗತಿಯನ್ನು ಕಾಣುತ್ತೇವೆ. ಮಾರುತಿ ಸುಜುಕಿಯೊಂದಿಗೆ ನಾವು ಪ್ರಾರಂಭಿಸಿದ ಪಯಣ ಈಗ ಬುಲೆಟ್ ರೈಲಿನ ವೇಗವನ್ನು ತಲುಪಿದೆ.

ಭಾರತ-ಜಪಾನ್ ಪಾಲುದಾರಿಕೆಯ ಕೈಗಾರಿಕಾ ಸಾಧ್ಯತೆಗಳನ್ನು ಸಾಕಾರಗೊಳಿಸುವ ಪ್ರಮುಖ ಉಪಕ್ರಮವು ಇದೇ ಗುಜರಾತಿನಲ್ಲಿ ಆರಂಭವಾಯಿತು. ನನಗೆ ನೆನಪಿದೆ, 20 ವರ್ಷಗಳ ಹಿಂದೆ ನಾವು 'ವೈಬ್ರೆಂಟ್ ಗುಜರಾತ್ ಶೃಂಗಸಭೆ'ಯನ್ನು ಆರಂಭಿಸಿದಾಗ, ಜಪಾನ್ ಪ್ರಮುಖ ಪಾಲುದಾರರಲ್ಲಿ ಒಂದಾಗಿತ್ತು. ಒಮ್ಮೆ ಯೋಚಿಸಿ ನೋಡಿ, ಒಂದು ಅಭಿವೃದ್ಧಿಶೀಲ ದೇಶ, ಒಂದು ಸಣ್ಣ ರಾಜ್ಯವು ಹೂಡಿಕೆ ಶೃಂಗಸಭೆಯನ್ನು ಆಯೋಜಿಸುವುದು, ಮತ್ತು ಜಪಾನ್ನಂತಹ ಅಭಿವೃದ್ಧಿ ಹೊಂದಿದ ದೇಶ ಅದಕ್ಕೆ ಪಾಲುದಾರನಾಗುವುದು. ಭಾರತ-ಜಪಾನ್ ಸಂಬಂಧಗಳ ಅಡಿಪಾಯ ಎಷ್ಟು ಬಲಿಷ್ಠವಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಇಂದು, 'ವೈಬ್ರೆಂಟ್ ಗುಜರಾತ್' ಪಯಣವನ್ನು ನಾನು ಸ್ಮರಿಸಿಕೊಳ್ಳುವಾಗ, ಇಲ್ಲಿ ಕುಳಿತಿರುವ ನನ್ನ ಸ್ನೇಹಿತರನ್ನು ನಾನು ನೋಡುತ್ತಿದ್ದೇನೆ. ಅವರಲ್ಲಿ ಒಬ್ಬರು 2003 ರಲ್ಲಿ ಭಾರತಕ್ಕೆ ಜಪಾನ್ನ ರಾಯಭಾರಿಯಾಗಿದ್ದರು. ಅವರು ಈಗ ನಿವೃತ್ತರಾಗಿದ್ದಾರೆ, ಆದರೆ ಭಾರತ ಮತ್ತು ಗುಜರಾತ್ ಮೇಲಿನ ಅವರ ಪ್ರೀತಿ ಹಾಗೆಯೇ ಉಳಿದಿದೆ. ನಾನು ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಗುಜರಾತಿನ ಜನರೂ ಸಹ ಜಪಾನಿನ ಜನರ ಬಗ್ಗೆ ಅಷ್ಟೇ ಪ್ರೀತಿಯಿಂದ ಕಾಳಜಿ ವಹಿಸಿದ್ದರು. ನಾವು ಕೈಗಾರಿಕೆಗೆ ಸಂಬಂಧಿಸಿದ ನಿಯಮಗಳು ಮತ್ತು ನಿಬಂಧನೆಗಳನ್ನು ಜಪಾನೀ ಭಾಷೆಯಲ್ಲಿಯೂ ಮುದ್ರಿಸುತ್ತಿದ್ದೆವು. ನಾನು ಗುಜರಾತಿನಲ್ಲಿದ್ದಾಗ, ಪ್ರತಿಯೊಂದು ಸಣ್ಣ ವಿಷಯದ ಬಗ್ಗೆಯೂ ಗಮನ ಹರಿಸುತ್ತಿದ್ದೆ. ನನ್ನ ವಿಸಿಟಿಂಗ್ ಕಾರ್ಡ್ ಅನ್ನು ಕೂಡ ಜಪಾನೀ ಭಾಷೆಯಲ್ಲಿ ಮುದ್ರಿಸಲಾಗಿತ್ತು. ನಾವು ಪ್ರಚಾರದ ವೀಡಿಯೊಗಳನ್ನು ಮಾಡಿದಾಗಲೆಲ್ಲಾ, ಅವುಗಳಿಗೆ ಜಪಾನೀ ಡಬ್ಬಿಂಗ್ ಇರುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದೆವು. ಈ ಹಾದಿಯಲ್ಲಿ ನಾನು ಬಲವಾಗಿ ಮುನ್ನಡೆಯಬೇಕು ಎಂದು ನನಗೆ ಚೆನ್ನಾಗಿ ತಿಳಿದಿತ್ತು. ಅದಕ್ಕಾಗಿಯೇ ನಾನು ಇತರ ಎಲ್ಲಾ ರಾಜ್ಯಗಳಿಗೆ ಹೇಳುತ್ತೇನೆ, ಸ್ನೇಹಿತರೇ, ಆಕಾಶ ತೆರೆದಿದೆ, ಕಷ್ಟಪಟ್ಟು ಕೆಲಸ ಮಾಡಿ, ಮುಂದೆ ಬನ್ನಿ, ಮತ್ತು ನಿಮಗೆ ಬಹಳಷ್ಟು ಲಾಭವಾಗುತ್ತದೆ.

ಆರಂಭದ ದಿನಗಳಲ್ಲಿ ನಮ್ಮ ಜಪಾನೀ ಸ್ನೇಹಿತರು ಭೇಟಿ ನೀಡುತ್ತಿದ್ದಾಗ, ಕ್ರಮೇಣ ನಾನು ಅವರಿಗೆ ಹತ್ತಿರವಾಗಿ ಅವರ ಜೀವನಶೈಲಿಯನ್ನು ಅರ್ಥಮಾಡಿಕೊಳ್ಳಲು ಆರಂಭಿಸಿದೆ ಎಂಬುದು ನನಗೆ ನೆನಪಿದೆ. ನಾನು ಜಪಾನೀಯರ ಬಗ್ಗೆ ಒಂದು ವಿಷಯವನ್ನು ಗಮನಿಸಿದೆ: ಅವರ ಸಾಂಸ್ಕೃತಿಕ ಪರಿಸರ ವ್ಯವಸ್ಥೆಯು ಯಾವಾಗಲೂ ಅವರ ಮೊದಲ ಆದ್ಯತೆಯಾಗಿರುತ್ತದೆ. ಅವರಿಗೆ ತಮ್ಮ ಜಪಾನೀ ಆಹಾರವೇ ಬೇಕು. ಇದು ಗುಜರಾತಿನ ಜನರನ್ನು ಬಹಳವಾಗಿ ಹೋಲುತ್ತದೆ. ಗುಜರಾತಿನಲ್ಲಿ, ಅವರು ಶನಿವಾರ ಅಥವಾ ಭಾನುವಾರ ಹೊರಗೆ ಹೋದರೆ, ರೆಸ್ಟೋರೆಂಟ್ಗೆ ಹೋಗಿ ಮೆಕ್ಸಿಕನ್ ಅಥವಾ ಇಟಾಲಿಯನ್ ಆಹಾರವನ್ನು ಕೇಳಬಹುದು. ಆದರೆ ಅವರು ಗುಜರಾತಿನಿಂದ ಹೊರಗೆ ಪ್ರಯಾಣಿಸಿದರೆ, ಅವರು ಯಾವಾಗಲೂ ಗುಜರಾತಿ ಆಹಾರವನ್ನೇ ಹುಡುಕುತ್ತಾರೆ. ಇದೇ ಸ್ವಭಾವವನ್ನು ನಾನು ಜಪಾನೀ ಜನರಲ್ಲಿ ಕಂಡೆ. ಅದಕ್ಕಾಗಿಯೇ ನಾನು ಗುಜರಾತಿನಲ್ಲಿ ಜಪಾನೀ ಪಾಕಪದ್ಧತಿಗೆ ವ್ಯವಸ್ಥೆ ಮಾಡಿದೆ ಮತ್ತು ಅದನ್ನು ಒದಗಿಸಲು ಒಂದು ಹೋಟೆಲ್ ಸಮೂಹವನ್ನೂ ಆಹ್ವಾನಿಸಿದೆ. ನಂತರ, ಜಪಾನೀಯರಿಗೆ ಗಾಲ್ಫ್ ಇಲ್ಲದ ಜೀವನ ಅಪೂರ್ಣವೆಂದು ನನಗೆ ತಿಳಿಸಲಾಯಿತು. ಆದ್ದರಿಂದ, ನಾನದಕ್ಕೂ ಆದ್ಯತೆ ನೀಡಿದೆ. ನಮ್ಮ ಜಪಾನೀ ಸ್ನೇಹಿತರನ್ನು ಗಮನದಲ್ಲಿಟ್ಟುಕೊಂಡು, ನಾವು ಗುಜರಾತಿನಲ್ಲಿ 7-8 ಹೊಸ ಗಾಲ್ಫ್ ಕೋರ್ಸ್ ಗಳನ್ನು ಅಭಿವೃದ್ಧಿಪಡಿಸಿದೆವು, ಅಲ್ಲಿ ಈ ಹಿಂದೆ ಗಾಲ್ಫ್ನ ಅಸ್ತಿತ್ವವೇ ಇರಲಿಲ್ಲ. ನೋಡಿ, ನೀವು ಅಭಿವೃದ್ಧಿಯನ್ನು ಬಯಸಿದರೆ, ನೀವು ಹೂಡಿಕೆ ತರಲು ಬಯಸಿದರೆ, ನೀವು ಜಗತ್ತನ್ನು ಆಕರ್ಷಿಸಲು ಬಯಸಿದರೆ, ನೀವು ಪ್ರತಿಯೊಂದು ಸಣ್ಣ  ವಿಚಾರಕ್ಕೂ ಗಮನ ಕೊಡಬೇಕು. ನಮ್ಮ ದೇಶದ ಅನೇಕ ರಾಜ್ಯಗಳು ಇದನ್ನು ಮಾಡುತ್ತಿವೆ. ಇನ್ನೂ ಹಿಂದೆ ಉಳಿದಿರುವ ರಾಜ್ಯಗಳಿಗೆ ನಾನು ಹೇಳುವುದೇನೆಂದರೆ, ಪ್ರತಿಯೊಂದು ವಿವರವನ್ನೂ ಒಂದು ಅವಕಾಶವೆಂದು ಪರಿಗಣಿಸಿ ಮತ್ತು ಅಭಿವೃದ್ಧಿಯ ಹೊಸ ದಿಕ್ಕಿನಲ್ಲಿ ಮುನ್ನಡೆಯಿರಿ. ಅಷ್ಟೇ ಅಲ್ಲ, ಸ್ನೇಹಿತರೇ, ನಮ್ಮ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ, ಜಪಾನೀ ಭಾಷೆಯನ್ನು ಕಲಿಸುವುದಕ್ಕೆ ಬಹಳ ಒತ್ತು ನೀಡಲಾಗುತ್ತಿದೆ. ಇಂದು, ಅನೇಕ ಜಪಾನೀ ಭಾಷಾ ಶಿಕ್ಷಕರು ಗುಜರಾತಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವಾರು ಶಾಲೆಗಳಲ್ಲಿ ಜಪಾನೀ ಭಾಷೆಯನ್ನು ಕಲಿಸಲಾಗುತ್ತಿದೆ.

ಸ್ನೇಹಿತರೇ,

ನಮ್ಮ ಪ್ರಯತ್ನಗಳ ಮೂಲಕ ಭಾರತ ಮತ್ತು ಜಪಾನ್ ನಡುವಿನ ಜನರ ಸಂಪರ್ಕವು ಅಸಾಧಾರಣವಾಗಿ ಬೆಳೆದಿದೆ. ಕೌಶಲ್ಯ ಮತ್ತು ಮಾನವ ಸಂಪನ್ಮೂಲಗಳ ವಿಷಯದಲ್ಲಿ ನಾವು ಪರಸ್ಪರರ ಅಗತ್ಯಗಳನ್ನು ಪೂರೈಸಲು ಸಹ ಸಮರ್ಥರಾಗಿದ್ದೇವೆ. ಮಾರುತಿ-ಸುಜುಕಿಯಂತಹ ಕಂಪನಿಗಳು ಕೂಡ ಇಂತಹ ಉಪಕ್ರಮಗಳ ಭಾಗವಾಗಿ ಯುವ ವಿನಿಮಯ ಕಾರ್ಯಕ್ರಮಗಳನ್ನು ವಿಸ್ತರಿಸಬೇಕು ಎಂದು ನಾನು ಬಯಸುತ್ತೇನೆ.

ಸ್ನೇಹಿತರೇ,

ಅದೇ ರೀತಿ, ಮುಂಬರುವ ದಿನಗಳಲ್ಲಿ ನಾವು ಎಲ್ಲಾ ಪ್ರಮುಖ ವಲಯಗಳಲ್ಲಿ ಮುನ್ನಡೆಯಬೇಕು. ಇಂದು ನಾವು ತೆಗೆದುಕೊಳ್ಳುತ್ತಿರುವ ಕ್ರಮಗಳು 2047ರ 'ವಿಕಸಿತ ಭಾರತ'ದ ಬುನಾದಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂಬ ವಿಶ್ವಾಸ ನನಗಿದೆ. ಈ ಯಾತ್ರೆಯಲ್ಲಿ ಜಪಾನ್ ನಮ್ಮ ವಿಶ್ವಾಸಾರ್ಹ ಪಾಲುದಾರನಾಗಿ ಮುಂದುವರಿಯಲಿದೆ, ನಮ್ಮ ಸ್ನೇಹ ಅಚಲವಾಗಿರುತ್ತದೆ ಎಂಬ ವಿಶ್ವಾಸವೂ ನನಗಿದೆ. ಭಾರತ-ಜಪಾನ್ ಸಂಬಂಧಗಳ ಬಗ್ಗೆ ನಾನು ಆಗಾಗ್ಗೆ ಹೇಳುತ್ತೇನೆ, ಇದು "ಒಬ್ಬರಿಗಾಗಿ ಒಬ್ಬರು" ಎಂಬ ಪಾಲುದಾರಿಕೆ. ಇಂದು, ನಾನು ಮಾರುತಿಗೆ ವಿಶೇಷವಾಗಿ ಶುಭ ಹಾರೈಸುತ್ತೇನೆ. ನೀವು ಈಗ ನಿಮ್ಮ ಹದಿಹರೆಯದ ಆರಂಭದಲ್ಲಿ ಇದ್ದೀರಿ. ನೀವು ನಿಮ್ಮ ರೆಕ್ಕೆಗಳನ್ನು ಹರಡಬೇಕು, ಹೊಸ ಕನಸುಗಳನ್ನು ನೇಯಬೇಕು. ನಿಮ್ಮ ಸಂಕಲ್ಪಗಳಿಗೆ, ಅವುಗಳ ಪೂರೈಕೆಗೆ ನಾವು ನಿಮ್ಮೊಂದಿಗೆ ಸಂಪೂರ್ಣ ಶಕ್ತಿಯಿಂದ ಇದ್ದೇವೆ. ಈ ವಿಶ್ವಾಸದೊಂದಿಗೆ, ನಾವೆಲ್ಲರೂ 'ಆತ್ಮನಿರ್ಭರ ಭಾರತ' (ಸ್ವಾವಲಂಬಿ ಭಾರತ) ಅಭಿಯಾನವನ್ನು ಮುನ್ನಡೆಸೋಣ. 'ವೋಕಲ್ ಫಾರ್ ಲೋಕಲ್' ಆಗೋಣ. ಸ್ನೇಹಿತರೇ, ಸ್ವದೇಶಿ ನಮ್ಮ ಜೀವನ ಮಂತ್ರವಾಗಬೇಕು, ಸ್ವದೇಶಿಯತ್ತ ಹೆಮ್ಮೆಯಿಂದ ಹೆಜ್ಜೆ ಹಾಕಿ. ಮತ್ತು ಜಪಾನ್ ಇಲ್ಲಿ ಏನು ಉತ್ಪಾದಿಸುತ್ತಿದೆಯೋ, ಅದೂ ಕೂಡ ಸ್ವದೇಶಿಯೇ. ಸ್ವದೇಶಿಯ ಬಗ್ಗೆ ನನ್ನ ವ್ಯಾಖ್ಯಾನ ಬಹಳ ಸರಳವಾಗಿದೆ: ಯಾರ ಹಣ ಹೂಡಿಕೆಯಾಗಿದೆ ಎಂಬುದು ಮುಖ್ಯವಲ್ಲ, ಅದು ಡಾಲರ್ ಆಗಿರಲಿ, ಪೌಂಡ್ ಆಗಿರಲಿ, ಆ ಹಣ ಕಪ್ಪಾಗಿರಲಿ ಅಥವಾ ಬಿಳಿಯಾಗಿರಲಿ, ಅದು ನನಗೆ ಮುಖ್ಯವಲ್ಲ. ಮುಖ್ಯವಾದುದು ಏನೆಂದರೆ, ಉತ್ಪಾದನೆಯಲ್ಲಿ ಹರಿಯುವ ಬೆವರು ನನ್ನ ದೇಶದ ಜನರದ್ದಾಗಿರಬೇಕು. ಹಣ ಬೇರೆಯವರದ್ದಾಗಿರಬಹುದು, ಆದರೆ ಬೆವರು ನಮ್ಮದು. ಆ ಉತ್ಪಾದನೆಯು ನನ್ನ ತಾಯ್ನಾಡಿನ, ಭಾರತದ ಮಣ್ಣಿನ ಸುವಾಸನೆಯನ್ನು ಹೊಂದಿರಬೇಕು. ಈ ಸ್ಪೂರ್ತಿಯೊಂದಿಗೆ, ನನ್ನೊಂದಿಗೆ ಬನ್ನಿ, ಸ್ನೇಹಿತರೇ. 2047 ರ ವೇಳೆಗೆ ನಾವು ಎಂತಹ ಭಾರತವನ್ನು ನಿರ್ಮಿಸೋಣವೆಂದರೆ, ನಿಮ್ಮ ಮುಂದಿನ ಪೀಳಿಗೆಯು ನಿಮ್ಮ ತ್ಯಾಗಗಳ ಬಗ್ಗೆ ಹೆಮ್ಮೆ ಪಡಬೇಕು, ನಿಮ್ಮ ಕೊಡುಗೆಗಳ ಬಗ್ಗೆ ಹೆಮ್ಮೆ ಪಡಬೇಕು. ನಿಮ್ಮ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ, 'ಆತ್ಮನಿರ್ಭರ ಭಾರತ' ಮಂತ್ರಕ್ಕಾಗಿ, ಸ್ವದೇಶಿ ಪಥಕ್ಕಾಗಿ, ಇಂದು ನಾನು ನನ್ನೆಲ್ಲಾ ದೇಶಬಾಂಧವರನ್ನು ಆಹ್ವಾನಿಸುತ್ತೇನೆ. ಬನ್ನಿ, ನಾವೆಲ್ಲರೂ ಒಟ್ಟಾಗಿ ಮುನ್ನಡೆಯೋಣ. 2047 ರ ವೇಳೆಗೆ ನಾವು ಖಂಡಿತವಾಗಿಯೂ 'ವಿಕಸಿತ ಭಾರತ' ವನ್ನು ನಿರ್ಮಿಸುತ್ತೇವೆ. ಜಗತ್ತಿನ ಕಲ್ಯಾಣಕ್ಕಾಗಿ ಭಾರತ ತನ್ನ ಕೊಡುಗೆಯನ್ನು ಹೆಚ್ಚಿಸುತ್ತಲೇ ಇರುತ್ತದೆ. ಈ ಸ್ಪೂರ್ತಿಯೊಂದಿಗೆ, ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ! 

ನಿಮಗೆಲ್ಲರಿಗೂ ಧನ್ಯವಾದಗಳು!

 

*****
 


(Release ID: 2160937)