ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಎಕನಾಮಿಕ್ ಟೈಮ್ಸ್ ಜಾಗತಿಕ ನಾಯಕರ ವೇದಿಕೆ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

Posted On: 23 AUG 2025 9:44PM by PIB Bengaluru

ಜಾಗತಿಕ(ವಿಶ್ವ) ನಾಯಕರ ವೇದಿಕೆಗೆ ಆಗಮಿಸಿರುವ ಎಲ್ಲ ಗೌರವಾನ್ವಿತ ಅತಿಥಿಗಳನ್ನು ನಾನು ಸ್ವಾಗತಿಸುತ್ತೇನೆ. ಈ ವೇದಿಕೆಯ ಸಮಯವು ತುಂಬಾ ಪರಿಪೂರ್ಣವಾಗಿದೆ, ಆದ್ದರಿಂದ ನಾನು ಅದನ್ನು ಪ್ರಶಂಸಿಸುತ್ತೇನೆ. ಕಳೆದ ವಾರವಷ್ಟೇ ನಾನು ಕೆಂಪು ಕೋಟೆಯಿಂದ ಮುಂದಿನ ಪೀಳಿಗೆಯ ಸುಧಾರಣೆಗಳ ಬಗ್ಗೆ ಮಾತನಾಡಿದ್ದೆ, ಈಗ ಈ ವೇದಿಕೆ ಆ ಉತ್ಸಾಹದಲ್ಲಿ ಶಕ್ತಿ ಗುಣಕವಾಗಿ ಕಾರ್ಯ ನಿರ್ವಹಿಸುತ್ತಿದೆ.

ಸ್ನೇಹಿತರೆ,

ಇಲ್ಲಿ ಜಾಗತಿಕ ಸನ್ನಿವೇಶಗಳು ಮತ್ತು ಭೌಗೋಳಿಕ-ಆರ್ಥಿಕತೆ ಕುರಿತು ವಿವರವಾದ ಚರ್ಚೆಗಳು ನಡೆದಿವೆ, ನಾವು ಅದನ್ನು ಜಾಗತಿಕ ಸಂದರ್ಭದಲ್ಲಿ ನೋಡಿದಾಗ, ಭಾರತದ ಆರ್ಥಿಕತೆಯ ಬಲವನ್ನು ನೀವು ಅರಿತುಕೊಳ್ಳುತ್ತೀರಿ. ಇಂದು ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಶೀಘ್ರದಲ್ಲೇ ನಾವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದ್ದೇವೆ. ಜಾಗತಿಕ ಬೆಳವಣಿಗೆಗೆ ಭಾರತದ ಕೊಡುಗೆ ಶೀಘ್ರದಲ್ಲೇ ಸುಮಾರು 20 ಪ್ರತಿಶತದಷ್ಟಿರುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಭಾರತದ ಆರ್ಥಿಕತೆಯಲ್ಲಿ ನಾವು ನೋಡುತ್ತಿರುವ ಈ ಬೆಳವಣಿಗೆ, ಈ ಚೇತರಿಕೆಯು ಕಳೆದ ದಶಕದಲ್ಲಿ ದೇಶಕ್ಕೆ ಬಂದಿರುವ ಬೃಹತ್ ಆರ್ಥಿಕತೆಯ ಸ್ಥಿರತೆಯ ಪರಿಣಾಮವಾಗಿದೆ. ಇಂದು ನಮ್ಮ ವಿತ್ತೀಯ ಕೊರತೆಯು ಶೇಕಡ 4.4ಕ್ಕೆ ತಗ್ಗುತ್ತದೆ ಎಂದು ಅಂದಾಜಿಸಲಾಗಿದೆ. ನಾವು ಕೋವಿಡ್ ನಂತಹ ಬೃಹತ್ ಬಿಕ್ಕಟ್ಟನ್ನು ಎದುರಿಸಿದ್ದೇವೆ. ಇಂದು, ನಮ್ಮ ಕಂಪನಿಗಳು ಬಂಡವಾಳ ಮಾರುಕಟ್ಟೆಗಳಿಂದ ದಾಖಲೆಯ ಹಣವನ್ನು ಸಂಗ್ರಹಿಸುತ್ತಿವೆ. ಇಂದು ನಮ್ಮ ಬ್ಯಾಂಕುಗಳು ಹಿಂದೆಂದಿಗಿಂತಲೂ ಬಲಿಷ್ಠವಾಗಿವೆ. ಹಣದುಬ್ಬರ ತುಂಬಾ ಕಡಿಮೆಯಾಗಿದೆ ಮತ್ತು ಬಡ್ಡಿದರಗಳು ಕಡಿಮೆಯಾಗಿವೆ. ನಮ್ಮ ಚಾಲ್ತಿ ಖಾತೆ ಕೊರತೆ ನಿಯಂತ್ರಣದಲ್ಲಿದೆ. ನಮ್ಮ ವಿದೇಶಿ ವಿನಿಮಯ ಸಂಗ್ರಹ ಕೂಡ ತುಂಬಾ ಪ್ರಬಲವಾಗಿದೆ. ಇದಲ್ಲದೆ, ಪ್ರತಿ ತಿಂಗಳು ಲಕ್ಷಾಂತರ ದೇಶೀಯ ಹೂಡಿಕೆದಾರರು ಎಸ್ಐಪಿಗಳ(ವ್ಯವಸ್ಥಿತ ಹೂಡಿಕೆ ಯೋಜನೆಗಳು) ಮೂಲಕ ಮಾರುಕಟ್ಟೆಗೆ ಸಾವಿರಾರು ಕೋಟಿ ರೂ. ತೊಡಗಿಸುತ್ತಿದ್ದಾರೆ.

ಸ್ನೇಹಿತರೆ,

ನಿಮಗೂ ತಿಳಿದಿದೆ, ಆರ್ಥಿಕತೆಯ ಮೂಲಭೂತ ಅಂಶಗಳು  ಬಲಿಷ್ಠವಾಗಿದ್ದಾಗ ಮತ್ತು ಅದರ ಬುನಾದಿ ಬಲಿಷ್ಠವಾಗಿದ್ದಾಗ, ಅದರ ಪ್ರಭಾವ ಎಲ್ಲೆಡೆ ಕಂಡುಬರುತ್ತದೆ. ನಾನು ಆಗಸ್ಟ್ 5 ರಂದು ಇದರ ಬಗ್ಗೆ ವಿವರವಾಗಿ ಚರ್ಚಿಸಿದ್ದೆ. ನಾನು ಆ ಅಂಶಗಳನ್ನು ಪುನರಾವರ್ತಿಸುವುದಿಲ್ಲ, ಆದರೆ ಆಗಸ್ಟ್ 15ರ ಸುಮಾರು ಮತ್ತು ಅದರ ಮುಂದಿನ ವಾರದಲ್ಲಿ ಏನಾಯಿತು ಎಂಬುದು ಭಾರತದ ಬೆಳವಣಿಗೆಯ ಯಶೋಗಾಥೆಗೆ ಒಂದು ಉತ್ತಮ ಉದಾಹರಣೆಯಾಗಿದೆ.

ಇತ್ತೀಚಿನ ದತ್ತಾಂಶವು ಜೂನ್ ತಿಂಗಳಲ್ಲಿ ಪ್ರಕಟವಾಗಿದೆ - ಹೌದು, ನಾನು ಕೇವಲ 1 ತಿಂಗಳ ಬಗ್ಗೆ ಮಾತನಾಡುತ್ತಿದ್ದೇನೆ - ಇಪಿಎಫ್‌ಒ ದತ್ತಾಂಶದ ಪ್ರಕಾರ, 22 ಲಕ್ಷ ಹೊಸ ಔಪಚಾರಿಕ ಉದ್ಯೋಗಗಳು ಸೇರ್ಪಡೆಯಾಗಿವೆ ಎಂದು ತೋರಿಸುತ್ತದೆ, ಈ ಸಂಖ್ಯೆ ಯಾವುದೇ ತಿಂಗಳಿನಲ್ಲಿ ಇದುವರೆಗಿನ ಅತ್ಯಧಿಕ ದತ್ತಾಂಶವಾಗಿದೆ. ಭಾರತದ ಚಿಲ್ಲರೆ ಹಣದುಬ್ಬರವು 2017ರಿಂದಲೂ ಅತ್ಯಂತ ಕಡಿಮೆ ಮಟ್ಟದಲ್ಲಿದೆ. ನಮ್ಮ ವಿದೇಶಿ ವಿನಿಮಯ ಸಂಗ್ರಹ ದಾಖಲೆಯ ಗರಿಷ್ಠ ಮಟ್ಟದಲ್ಲಿದೆ. 2014ರಲ್ಲಿ, ನಮ್ಮ ಸೌರ ಪಿವಿ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವು ಸುಮಾರು 2.5 ಗಿಗಾ ವ್ಯಾಟ್‌ಗಳಷ್ಟಿತ್ತು. ಇತ್ತೀಚಿನ ಅಂಕಿಅಂಶದ ಪ್ರಕಾರ, ಈ ಸಾಮರ್ಥ್ಯವು 100 ಗಿಗಾ ವ್ಯಾಟ್‌ಗಳ ಐತಿಹಾಸಿಕ ಮೈಲಿಗಲ್ಲು ತಲುಪಿದೆ ಎಂದು ತೋರಿಸುತ್ತದೆ. ದೆಹಲಿಯ ನಮ್ಮ ವಿಮಾನ ನಿಲ್ದಾಣವು ಜಾಗತಿಕ ವಿಮಾನ ನಿಲ್ದಾಣಗಳ ಗಣ್ಯ 100 ದಶಲಕ್ಷಕ್ಕಿಂತಲೂ ಹೆಚ್ಚಿನ ಕ್ಲಬ್‌ಗೆ ಪ್ರವೇಶಿಸಿದೆ. ಇಂದು, ಈ ವಿಮಾನ ನಿಲ್ದಾಣದ ವಾರ್ಷಿಕ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯ 100 ದಶಲಕ್ಷಕ್ಕಿತಲೂ ಹೆಚ್ಚಾಗಿದೆ. ವಿಶ್ವದ 6 ವಿಮಾನ ನಿಲ್ದಾಣಗಳು ಮಾತ್ರ ಈ ವಿಶೇಷ ಗುಂಪಿನ ಭಾಗವಾಗಿವೆ.

ಸ್ನೇಹಿತರೆ,

ಇತ್ತೀಚಿನ ದಿನಗಳಲ್ಲಿ, ಮತ್ತೊಂದು ಸುದ್ದಿ ಚರ್ಚೆಯಲ್ಲಿದೆ. ಎಸ್ & ಪಿ ಗ್ಲೋಬಲ್ ರೇಟಿಂಗ್ಸ್ ಭಾರತದ ಕ್ರೆಡಿಟ್ ರೇಟಿಂಗ್ ಅನ್ನು ಮೇಲ್ದರ್ಜೆಗೆ ಏರಿಸಿದೆ. ಇದು ಸುಮಾರು 2 ದಶಕಗಳ ನಂತರ ಸಂಭವಿಸಿದೆ. ಇದರರ್ಥ ಭಾರತವು ತನ್ನ ಆರ್ಥಿಕ ಚೇತರಿಕೆ ಮತ್ತು ಶಕ್ತಿಯಿಂದ, ಪ್ರಪಂಚದ ಉಳಿದ ಭಾಗಗಳಿಗೆ ಭರವಸೆಯ ಸಂಕೇತವಾಗಿದೆ.

ಸ್ನೇಹಿತರೆ,

ಸಾಮಾನ್ಯ ಸಂಭಾಷಣೆಗಳಲ್ಲಿ, ನಾವು ಆಗಾಗ್ಗೆ ಕೇಳುವ ಒಂದು ಸಾಲಿದೆ, ಕೆಲವೊಮ್ಮೆ ನಾವು ಅದನ್ನು ನಾವೇ ಹೇಳುತ್ತೇವೆ, ಕೆಲವೊಮ್ಮೆ ನಾವು ಅದನ್ನು ಇತರರಿಂದ ಕೇಳುತ್ತೇವೆ - "ಬಸ್ ಮಿಸ್ ಆಗುತ್ತಿದೆ." ಅಂದರೆ, ಒಂದು ಅವಕಾಶ ಬರುತ್ತದೆ ಮತ್ತು ಅದು ಹಾದುಹೋಗುತ್ತದೆ. ನಮ್ಮ ದೇಶದಲ್ಲಿ, ಹಿಂದಿನ ಸರ್ಕಾರಗಳು ತಂತ್ರಜ್ಞಾನ ಮತ್ತು ಉದ್ಯಮದ ಅನೇಕ ಬಸ್‌ಗಳನ್ನು ತಪ್ಪಿಸಿದವು. ನಾನು ಯಾರನ್ನೂ ಟೀಕಿಸುವ ಉದ್ದೇಶದಿಂದ ಇಲ್ಲಿಗೆ ಬಂದಿಲ್ಲ, ಆದರೆ ಕೆಲವೊಮ್ಮೆ ಹೋಲಿಕೆಗಳನ್ನು ಮಾಡುವುದು ಪ್ರಜಾಪ್ರಭುತ್ವದಲ್ಲಿ ಪರಿಸ್ಥಿತಿಯನ್ನು ಸರಿ ಮಾಡಲು ಸಹಾಯ ಮಾಡುತ್ತದೆ.

ಸ್ನೇಹಿತರೆ,

ಹಿಂದಿನ ಸರ್ಕಾರಗಳು ದೇಶವನ್ನು ಮತ-ಬ್ಯಾಂಕ್ ರಾಜಕೀಯದಲ್ಲಿ ಸಿಲುಕಿಸಿದ್ದವು. ಅವರ ಚಿಂತನೆ ಚುನಾವಣೆಗಳನ್ನು ಮೀರಿ ಹೋಗಲಿಲ್ಲ. ಅತ್ಯಾಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಅಭಿವೃದ್ಧಿ ಹೊಂದಿದ ದೇಶಗಳ ಕೆಲಸ ಎಂದು ಅವರು ನಂಬಿದ್ದರು. ನಮಗೆ ಎಂದಾದರೂ ಅದು ಅಗತ್ಯವಿದ್ದರೆ, ನಾವು ಅದನ್ನು ಅಲ್ಲಿಂದ ಆಮದು ಮಾಡಿಕೊಳ್ಳುತ್ತೇವೆ. ಅದಕ್ಕಾಗಿಯೇ, ವರ್ಷಗಳ ಕಾಲ, ನಮ್ಮ ದೇಶವು ಪ್ರಪಂಚದ ಇತರ ಹಲವು ರಾಷ್ಟ್ರಗಳಿಗಿಂತ ಹಿಂದುಳಿದಿತ್ತು - ನಮಗೆ ಬಸ್ ಸಿಗುತ್ತಿರಲಿಲ್ಲ. ನಾನು ನಿಮಗೆ ಕೆಲವು ಉದಾಹರಣೆಗಳನ್ನು ನೀಡುತ್ತೇನೆ. ನಮ್ಮ ಸಂವಹನ ವಲಯವನ್ನು ತೆಗೆದುಕೊಳ್ಳಿ. ಪ್ರಪಂಚದಾದ್ಯಂತ ಇಂಟರ್ನೆಟ್ ಯುಗ ಪ್ರಾರಂಭವಾದಾಗ, ಆ ಕಾಲದ ಸರ್ಕಾರ ಗೊಂದಲದಲ್ಲಿತ್ತು. ನಂತರ 2ಜಿ ಯುಗ ಬಂದಿತು - ಮತ್ತೆ ಏನಾಯಿತು ಎಂದು ನಾವೆಲ್ಲರೂ ನೋಡಿದ್ದೇವೆ. ನಾವು ಆ ಬಸ್ ಅನ್ನು ತಪ್ಪಿಸಿಕೊಂಡೆವು. 2ಜಿ, 3ಜಿ ಮತ್ತು 4ಜಿಗಾಗಿಯೂ ಸಹ ನಾವು ವಿದೇಶಗಳ ಮೇಲೆ ಅವಲಂಬಿತರಾಗಿದ್ದೆವು. ಆದರೆ ಇದು ಎಷ್ಟು ಕಾಲ ಮುಂದುವರಿಯಬಹುದು? ಅದಕ್ಕಾಗಿಯೇ, 2014ರ ನಂತರ, ಭಾರತವು ತನ್ನ ಕಾರ್ಯವಿಧಾನವನ್ನು ಬದಲಾಯಿಸಿತು. ಭಾರತವು ಯಾವುದೇ ಬಸ್ ತಪ್ಪಿಸಿಕೊಳ್ಳಬಾರದು, ಬದಲಿಗೆ ನಾವು ಚಾಲಕನ ಸೀಟಿನಲ್ಲಿ ಕುಳಿತು ಮುಂದುವರಿಯಬೇಕು ಎಂದು ನಿರ್ಧರಿಸಿದೆವು. ಆದ್ದರಿಂದ, ನಾವು ನಮ್ಮ ಸಂಪೂರ್ಣ 5ಜಿ ತಂತ್ರಜ್ಞಾನವನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ್ದೇವೆ. ನಾವು ಮೇಡ್-ಇನ್-ಇನ್ 5ಜಿ ಅನ್ನು ತಯಾರಿಸಿದ್ದಲ್ಲದೆ, ಅದನ್ನು ದೇಶಾದ್ಯಂತ ವೇಗವಾಗಿ ಬಿಡುಗಡೆ ಮಾಡಿದ್ದೇವೆ. ಈಗ, ನಾವು ಮೇಡ್-ಇನ್-ಇನ್ 6ಜಿನಲ್ಲಿ ವೇಗವಾಗಿ ಕೆಲಸ ಮಾಡುತ್ತಿದ್ದೇವೆ.

ಮತ್ತು ಸ್ನೇಹಿತರೆ,

ಭಾರತದಲ್ಲಿ ಸೆಮಿಕಂಡಕ್ಟರ್ ಗಳ ಉತ್ಪಾದನೆಯು 50-60 ವರ್ಷಗಳ ಹಿಂದೆಯೇ ಪ್ರಾರಂಭವಾಗಬಹುದಿತ್ತು ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಭಾರತವು ಆ ಬಸ್ ಅನ್ನು ಸಹ ತಪ್ಪಿಸಿಕೊಂಡಿತು, ಇದು ಹಲವು ವರ್ಷಗಳ ಕಾಲ ಮುಂದುವರೆಯಿತು. ಇಂದು ನಾವು ಈ ಪರಿಸ್ಥಿತಿಯನ್ನು ಬದಲಾಯಿಸಿದ್ದೇವೆ. ಭಾರತದಲ್ಲಿ ಸೆಮಿಕಂಡಕ್ಟರ್ ಕಾರ್ಖಾನೆಗಳು ಈಗಾಗಲೇ ಸ್ಥಾಪನೆಯಾಗಲು ಪ್ರಾರಂಭಿಸಿವೆ, ಈ ವರ್ಷದ ಅಂತ್ಯದ ವೇಳೆಗೆ, ಮೊದಲ ಮೇಡ್-ಇನ್-ಇಂಡಿಯಾ ಚಿಪ್ ಮಾರುಕಟ್ಟೆಗೆ ಬರಲಿದೆ.

ಸ್ನೇಹಿತರೆ,

ಇಂದು ರಾಷ್ಟ್ರೀಯ ಬಾಹ್ಯಾಕಾಶ ದಿನವೂ ಆಗಿದೆ. ಈ ಸಂದರ್ಭದಲ್ಲಿ ನಾನು ನಿಮ್ಮೆಲ್ಲರಿಗೂ ಶುಭಾಶಯಗಳನ್ನು ಸಲ್ಲಿಸುತ್ತೇನೆ, ಇದರೊಂದಿಗೆ, ನಾನು ಈ ವಲಯದ ಬಗ್ಗೆಯೂ ಮಾತನಾಡುತ್ತೇನೆ. 2014ರ ಮೊದಲು, ನಮ್ಮ ಬಾಹ್ಯಾಕಾಶ ಕಾರ್ಯಾಚರಣೆಗಳು ಸೀಮಿತವಾಗಿದ್ದವು, ಅವುಗಳ ವ್ಯಾಪ್ತಿಯೂ ಸೀಮಿತವಾಗಿತ್ತು. ಆದರೆ 21ನೇ ಶತಮಾನದಲ್ಲಿ, ಪ್ರತಿಯೊಂದು ಪ್ರಮುಖ ದೇಶವು ಬಾಹ್ಯಾಕಾಶದಲ್ಲಿ ಸಾಧ್ಯತೆಗಳನ್ನು ಅನ್ವೇಷಿಸುತ್ತಿರುವಾಗ, ಭಾರತವು ಹಿಂದೆ ಉಳಿಯಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ಬಾಹ್ಯಾಕಾಶ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಕೈಗೊಂಡಿದ್ದೇವೆ, ಅದನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಿದ್ದೇವೆ. ನಾನು ನಿಮ್ಮೊಂದಿಗೆ ಒಂದು ಅಂಕಿ ಅಂಶವನ್ನು ಹಂಚಿಕೊಳ್ಳುತ್ತೇನೆ. 1979ರಿಂದ 2014ರ ವರೆಗೆ, ಭಾರತವು ಕೇವಲ 42 ಕಾರ್ಯಾಚರಣೆಗಳನ್ನು ನಡೆಸಿತು. ಅಂದರೆ, 35 ವರ್ಷಗಳಲ್ಲಿ ಕೇವಲ 42 ಕಾರ್ಯಾಚರಣೆಗಳು. ಕಳೆದ 11 ವರ್ಷಗಳಲ್ಲಿ, 60ಕ್ಕೂ ಹೆಚ್ಚು ಕಾರ್ಯಾಚರಣೆಗಳು ಪೂರ್ಣಗೊಂಡಿವೆ ಎಂದು ತಿಳಿದರೆ ನಿಮಗೆ ಸಂತೋಷವಾಗುತ್ತದೆ. ಮುಂಬರುವ ಸಮಯಕ್ಕೆ ಇನ್ನೂ ಅನೇಕ ಕಾರ್ಯಾಚರಣೆಗಳು ಸಾಲಾಗಿ ನಿಂತಿವೆ. ಈ ವರ್ಷವೇ, ನಾವು ಬಾಹ್ಯಾಕಾಶ ಡಾಕಿಂಗ್ ಸಾಮರ್ಥ್ಯವನ್ನು ಸಹ ಸಾಧಿಸಿದ್ದೇವೆ. ಇದು ನಮ್ಮ ಭವಿಷ್ಯದ ಕಾರ್ಯಾಚರಣೆಗಳಿಗೆ ಬಹಳ ದೊಡ್ಡ ಸಾಧನೆಯಾಗಿದೆ. ಈಗ, ಭಾರತವು ಗಗನಯಾನ ಮಿಷನ್ ಮೂಲಕ ತನ್ನ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ತಯಾರಿ ನಡೆಸುತ್ತಿದೆ. ಇದರಲ್ಲಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರ ಅನುಭವವು ನಮಗೆ ಹೆಚ್ಚು ಸಹಾಯ ಮಾಡುತ್ತದೆ.

ಸ್ನೇಹಿತರೆ,

ಬಾಹ್ಯಾಕಾಶ ವಲಯಕ್ಕೆ ಹೊಸ ಶಕ್ತಿ ತುಂಬಲು, ಅದನ್ನು ಪ್ರತಿಯೊಂದು ನಿರ್ಬಂಧದಿಂದ ಮುಕ್ತಗೊಳಿಸುವುದು ಅಗತ್ಯವಾಗಿತ್ತು. ಅದಕ್ಕಾಗಿಯೇ, ಮೊದಲ ಬಾರಿಗೆ, ನಾವು ಖಾಸಗಿ ಭಾಗವಹಿಸುವಿಕೆಗಾಗಿ ಸ್ಪಷ್ಟ ನಿಯಮಗಳನ್ನು ರೂಪಿಸಿದ್ದೇವೆ, ಮೊದಲ ಬಾರಿಗೆ ಸ್ಪೆಕ್ಟ್ರಮ್ ಹಂಚಿಕೆ ಪಾರದರ್ಶಕವಾಯಿತು, ಮೊದಲ ಬಾರಿಗೆ ವಿದೇಶಿ ಹೂಡಿಕೆಯನ್ನು ಉದಾರೀಕರಣಗೊಳಿಸಲಾಯಿತು. ಈ ವರ್ಷದ ಬಜೆಟ್‌ನಲ್ಲಿ, ಬಾಹ್ಯಾಕಾಶ ಸ್ಟಾರ್ಟಪ್‌ಗಳಿಗಾಗಿ ನಾವು 1,000 ಕೋಟಿ ರೂಪಾಯಿ ಮೊತ್ತದ ಸಾಹಸೋದ್ಯಮ ಬಂಡವಾಳ ನಿಧಿಯನ್ನು ಸಹ ನಿಗದಿಪಡಿಸಿದ್ದೇವೆ.

ಸ್ನೇಹಿತರೆ,

ಇಂದು ಭಾರತದ ಬಾಹ್ಯಾಕಾಶ ವಲಯವು ಈ ಸುಧಾರಣೆಗಳ ಯಶಸ್ಸಿಗೆ ಸಾಕ್ಷಿಯಾಗುತ್ತಿದೆ. 2014ರಲ್ಲಿ ಭಾರತವು ಕೇವಲ ಒಂದು ಬಾಹ್ಯಾಕಾಶ ನವೋದ್ಯಮ ಹೊಂದಿತ್ತು, ಇಂದು 300ಕ್ಕೂ ಹೆಚ್ಚು ಇವೆ. ನಾವು ನಮ್ಮದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಹೊಂದುವ ದಿನ ದೂರವಿಲ್ಲ.

ಸ್ನೇಹಿತರೆ,

ನಾವು ಹೆಚ್ಚುತ್ತಿರುವ ಬದಲಾವಣೆಗಳಿಗಾಗಿ ಮುಂದುವರಿಯುತ್ತಿಲ್ಲ, ಆದರೆ ಬಹುದೊಡ್ಡ ಜಿಗಿತ ಸಾಧಿಸುವ ಗುರಿಯೊಂದಿಗೆ ಮುಂದುವರಿಯುತ್ತಿದ್ದೇವೆ. ನಮಗೆ ಸುಧಾರಣೆಗಳು ಕಡ್ಡಾಯವಲ್ಲ, ಅಥವಾ ಬಿಕ್ಕಟ್ಟು-ಚಾಲಿತವೂ ಅಲ್ಲ. ಅವು ನಮ್ಮ ಬದ್ಧತೆ ಮತ್ತು ದೃಢನಿಶ್ಚಯ! ಸಮಗ್ರ ಕಾರ್ಯವಿಧಾನದೊಂದಿಗೆ, ನಾವು ಒಂದು ವಲಯವನ್ನು ಆಳವಾಗಿ ಪರಿಶೀಲಿಸುತ್ತೇವೆ, ನಂತರ ಆ ವಲಯದಲ್ಲಿ ಒಂದೊಂದಾಗಿ ಸುಧಾರಣೆಗಳನ್ನು ಕೈಗೊಳ್ಳುತ್ತೇವೆ.

ಸ್ನೇಹಿತರೆ,

ಕೆಲವೇ ದಿನಗಳ ಹಿಂದೆ, ಸಂಸತ್ತಿನ ಮಳೆಗಾಲದ ಅಧಿವೇಶನ ಮುಕ್ತಾಯವಾಯಿತು. ಈ ಮಳೆಗಾಲದ ಅಧಿವೇಶನದಲ್ಲೇ, ಸುಧಾರಣೆಗಳ ನಿರಂತರತೆಯನ್ನು ನೀವು ನೋಡಬಹುದು. ವಿರೋಧ ಪಕ್ಷಗಳು ಸೃಷ್ಟಿಸಿದ ಹಲವಾರು ಅಡಚಣೆಗಳ ಹೊರತಾಗಿಯೂ, ನಾವು ಸುಧಾರಣೆಗಳಿಗೆ ಸಂಪೂರ್ಣವಾಗಿ ಬದ್ಧರಾಗಿದ್ದೇವೆ. ಈ ಮಳೆಗಾಲದ ಅಧಿವೇಶನದಲ್ಲಿ, ಜನ್ ವಿಶ್ವಾಸ್ 2.೦ ಪರಿಚಯಿಸಲಾಯಿತು - ನಂಬಿಕೆ ಆಧಾರಿತ ಆಡಳಿತ ಮತ್ತು ಜನಪರ ಆಡಳಿತದೊಂದಿಗೆ ಸಂಪರ್ಕ ಹೊಂದಿದ ಒಂದು ದೊಡ್ಡ ಸುಧಾರಣೆ. ಜನ್ ವಿಶ್ವಾಸ್ ನ ಮೊದಲ ಆವೃತ್ತಿಯಲ್ಲಿ, ನಾವು ಸುಮಾರು 200 ಸಣ್ಣ ಅಪರಾಧ ಪ್ರಕರಣಗಳನ್ನು ಅಪರಾಧ ಮುಕ್ತಗೊಳಿಸಿದ್ದೇವೆ. ಈಗ, ಕಾನೂನಿನ ಈ 2ನೇ ಆವೃತ್ತಿಯಲ್ಲಿ, ನಾವು 300ಕ್ಕೂ ಹೆಚ್ಚು ಸಣ್ಣ ಪ್ರಕರಣಗಳನ್ನು ಅಪರಾಧ ಮುಕ್ತಗೊಳಿಸಿದ್ದೇವೆ. ಅದೇ ಅಧಿವೇಶನದಲ್ಲಿ, ಆದಾಯ ತೆರಿಗೆ ಕಾನೂನಿನಲ್ಲಿಯೂ ಸುಧಾರಣೆಗಳನ್ನು ಮಾಡಲಾಗಿದೆ. 60 ವರ್ಷಗಳಿಂದ ಜಾರಿಯಲ್ಲಿರುವ ಈ ಕಾನೂನನ್ನು ಈಗ ಮತ್ತಷ್ಟು ಸರಳೀಕರಿಸಲಾಗಿದೆ. ಇಲ್ಲಿ ಒಂದು ವಿಶೇಷ ಅಂಶವಿದೆ - ಮೊದಲು, ಈ ಕಾನೂನಿನ ಭಾಷೆ ವಕೀಲರು ಅಥವಾ ಸಿಎಗಳು ಮಾತ್ರ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಂತಿತ್ತು. ಆದರೆ ಈಗ, ಆದಾಯ ತೆರಿಗೆ ಮಸೂದೆಯನ್ನು ಸಾಮಾನ್ಯ ತೆರಿಗೆದಾರರ ಭಾಷೆಯಲ್ಲಿ ರಚಿಸಲಾಗಿದೆ. ನಮ್ಮ ಸರ್ಕಾರವು ನಾಗರಿಕರ ಹಿತಾಸಕ್ತಿಗಳಿಗೆ ಎಷ್ಟು ಸೂಕ್ಷ್ಮವಾಗಿದೆ ಎಂಬುದನ್ನು ಇದು ತೋರಿಸುತ್ತದೆ.

ಸ್ನೇಹಿತರೆ,

ಈ ಮಳೆಗಾಲದ ಅಧಿವೇಶನದಲ್ಲಿಯೇ, ಗಣಿಗಾರಿಕೆಗೆ ಸಂಬಂಧಿಸಿದ ಕಾನೂನುಗಳಿಗೂ ಗಮನಾರ್ಹ ತಿದ್ದುಪಡಿಗಳನ್ನು ಮಾಡಲಾಯಿತು. ಹಡಗು ಸಾಗಣೆ ಮತ್ತು ಬಂದರುಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಸಹ ಬದಲಾಯಿಸಲಾಯಿತು. ಬ್ರಿಟಿಷ್ ಯುಗದಿಂದಲೂ ಈ ಕಾನೂನುಗಳು ಬದಲಾಗದೆ ಮುಂದುವರೆದವು. ಈಗ ನಡೆದಿರುವ ಸುಧಾರಣೆಗಳು ಭಾರತದ ನೀಲಿ ಆರ್ಥಿಕತೆ ಮತ್ತು ಬಂದರು-ನೇತೃತ್ವದ ಅಭಿವೃದ್ಧಿಯನ್ನು ಉತ್ತೇಜಿಸುತ್ತವೆ. ಅದೇ ರೀತಿ, ಕ್ರೀಡಾ ವಲಯದಲ್ಲಿಯೂ ಹೊಸ ಸುಧಾರಣೆಗಳನ್ನು ಮಾಡಲಾಗಿದೆ. ಪ್ರಮುಖ ಜಾಗತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಮತ್ತು ಕ್ರೀಡಾ ಆರ್ಥಿಕತೆಯ ಸಂಪೂರ್ಣ ಪರಿಸರ ವ್ಯವಸ್ಥೆ ನಿರ್ಮಿಸಲು ನಾವು ಭಾರತವನ್ನು ಸಿದ್ಧಪಡಿಸುತ್ತಿದ್ದೇವೆ. ಅದಕ್ಕಾಗಿಯೇ ಸರ್ಕಾರವು ಹೊಸ ರಾಷ್ಟ್ರೀಯ ಕ್ರೀಡಾ ನೀತಿಯನ್ನು ಪರಿಚಯಿಸಿದೆ - ಖೇಲೋ ಭಾರತ್ ನೀತಿ.

ಸಾಧಿಸಿದ ಕೆಲಸಗಳಿಂದ ಮಾತ್ರ ತೃಪ್ತರಾಗಿ, "ಇಷ್ಟು ಸಾಕು, ಮೋದಿ ಈಗ ವಿಶ್ರಾಂತಿ ಪಡೆಯಬಹುದು" ಎಂದು ಯೋಚಿಸುವುದು - ಅದು ನನ್ನ ಸ್ವಭಾವದಲ್ಲಿಲ್ಲ. ಸುಧಾರಣೆಗಳಿಗೂ ಇದು ಅನ್ವಯಿಸುತ್ತದೆ. ನಾವು ನಿರಂತರವಾಗಿ ಭವಿಷ್ಯಕ್ಕಾಗಿ ತಯಾರಿ ನಡೆಸುತ್ತೇವೆ ಮತ್ತು ನಾವು ಮುಂದೆ ಸಾಗಬೇಕಾಗಿದೆ. ಈಗ ನಾನು ಸುಧಾರಣೆಗಳ ಸಂಪೂರ್ಣ ಹೊಸ ಶಸ್ತ್ರಾಸ್ತ್ರಗಳೊಂದಿಗೆ ಬರುತ್ತಿದ್ದೇನೆ. ಇದಕ್ಕಾಗಿ, ನಾವು ಹಲವಾರು ರಂಗಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಅನಗತ್ಯ ಕಾನೂನುಗಳನ್ನು ತೆಗೆದುಹಾಕುತ್ತಿದ್ದೇವೆ, ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಸರಳೀಕರಿಸುತ್ತಿದ್ದೇವೆ, ಪ್ರಕ್ರಿಯೆಗಳು ಮತ್ತು ಅನುಮೋದನೆಗಳನ್ನು ಡಿಜಿಟಲೀಕರಣಗೊಳಿಸುತ್ತಿದ್ದೇವೆ, ಹಲವಾರು ನಿಬಂಧನೆಗಳನ್ನು ಅಪರಾಧ ಮುಕ್ತಗೊಳಿಸುತ್ತಿದ್ದೇವೆ. ಇದರ ಭಾಗವಾಗಿ, ಜಿಎಸ್ಟಿಯಲ್ಲಿ ಒಂದು ಪ್ರಮುಖ ಸುಧಾರಣೆಯನ್ನು ಸಹ ಕೈಗೊಳ್ಳಲಾಗುತ್ತಿದೆ. ಈ ದೀಪಾವಳಿಯ ವೇಳೆಗೆ, ಈ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. ಇದು ಜಿಎಸ್ಟಿಯನ್ನು ಇನ್ನಷ್ಟು ಸರಳಗೊಳಿಸುತ್ತದೆ ಮತ್ತು ಬೆಲೆಗಳನ್ನು ಕಡಿಮೆ ಮಾಡುತ್ತದೆ.

ಸ್ನೇಹಿತರೆ,

ಮುಂದಿನ ಪೀಳಿಗೆಯ ಸುಧಾರಣೆಗಳೊಂದಿಗೆ ಭಾರತದಲ್ಲಿ ಉತ್ಪಾದನೆ ಹೆಚ್ಚಾಗುತ್ತದೆ, ಮಾರುಕಟ್ಟೆ ಬೇಡಿಕೆ ಬೆಳೆಯುತ್ತದೆ, ಉದ್ಯಮವು ಹೊಸ ಶಕ್ತಿ ಪಡೆಯುತ್ತದೆ, ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ, ಜೀವನ ಸುಲಭತೆ ಮತ್ತು ವ್ಯವಹಾರ ಮಾಡುವ ಸುಲಭತೆ ಎರಡೂ ಸುಧಾರಿಸುತ್ತದೆ.

ಸ್ನೇಹಿತರೆ,

ಇಂದು ಭಾರತವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಂಪೂರ್ಣ ಬದ್ಧವಾಗಿದೆ, 'ವಿಕಸಿತ ಭಾರತ'(ಅಭಿವೃದ್ಧಿ ಹೊಂದಿದ ಭಾರತ)ದ ಅಡಿಪಾಯ 'ಆತ್ಮನಿರ್ಭರ ಭಾರತ'(ಸ್ವಾವಲಂಬಿ ಭಾರತ)ವಾಗಿದೆ. ನಾವು ಆತ್ಮನಿರ್ಭರ ಭಾರತವನ್ನು 3 ನಿಯತಾಂಕಗಳ ಮೂಲಕ ನೋಡಬೇಕಾಗಿದೆ, ಈ ನಿಯತಾಂಕಗಳೆಂದರೆ ವೇಗ, ಪ್ರಮಾಣ ಮತ್ತು ವ್ಯಾಪ್ತಿ. ಜಾಗತಿಕ ಸಾಂಕ್ರಾಮಿಕ ಕೋವಿಡ್ ಸಮಯದಲ್ಲಿ ಭಾರತದ ವೇಗ, ಪ್ರಮಾಣ ಮತ್ತು ವ್ಯಾಪ್ತಿಯನ್ನು ನೀವು ನೋಡಿದ್ದೀರಿ. ಆ ಸಮಯದಲ್ಲಿ, ಇದ್ದಕ್ಕಿದ್ದಂತೆ ಅನೇಕ ವಿಷಯಗಳಿಗೆ ತ್ವರಿತ ಕಾರ್ಯ ಅಗತ್ಯವಿತ್ತು, ಆದರೆ ಜಾಗತಿಕ ಪೂರೈಕೆ ಸರಪಳಿ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ನಂತರ, ನಾವು ದೇಶದೊಳಗೆ ಅಗತ್ಯ ವಸ್ತುಗಳನ್ನು ತಯಾರಿಸಲು ಕ್ರಮಗಳನ್ನು ತೆಗೆದುಕೊಂಡೆವು. ಸ್ವಲ್ಪ ಸಮಯದಲ್ಲೇ, ನಾವು ಹೆಚ್ಚಿನ ಸಂಖ್ಯೆಯ ಪರೀಕ್ಷಾ ಕಿಟ್‌ಗಳು, ವೆಂಟಿಲೇಟರ್‌ಗಳನ್ನು ತಯಾರಿಸಿದ್ದೇವೆ, ದೇಶಾದ್ಯಂತ ಆಸ್ಪತ್ರೆಗಳಲ್ಲಿ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಿದ್ದೇವೆ. ಈ ಎಲ್ಲಾ ಪ್ರಯತ್ನಗಳಲ್ಲಿ ಭಾರತದ ವೇಗವು ಸ್ಪಷ್ಟವಾಗಿತ್ತು. ನಾವು ನಮ್ಮ ನಾಗರಿಕರಿಗೆ 220 ಕೋಟಿಗೂ ಹೆಚ್ಚು ಮೇಡ್-ಇನ್-ಇಂಡಿಯಾ ಲಸಿಕೆಗಳನ್ನು ಸಂಪೂರ್ಣ ಉಚಿತವಾಗಿ ನೀಡಿದ್ದೇವೆ. ಇದು ಭಾರತದ ಪ್ರಮಾಣವನ್ನು ಪ್ರದರ್ಶಿಸುತ್ತದೆ. ಕೋಟ್ಯಂತರ ಜನರಿಗೆ ತ್ವರಿತವಾಗಿ ಲಸಿಕೆ ಹಾಕಲು ನಾವು ಕೋವಿನ್ ವೇದಿಕೆ ಅಭಿವೃದ್ಧಿಪಡಿಸಿದ್ದೇವೆ. ಇದು ಭಾರತದ ವ್ಯಾಪ್ತಿಯನ್ನು ಪ್ರತಿಬಿಂಬಿಸುತ್ತದೆ. ಇದು ವಿಶ್ವದ ಅತ್ಯಂತ ವಿಶಿಷ್ಟ ವ್ಯವಸ್ಥೆಯಾಗಿದ್ದು, ಅದರ ಮೂಲಕ ನಾವು ದಾಖಲೆ ಸಮಯದಲ್ಲಿ ಲಸಿಕೆಯನ್ನು ಪೂರ್ಣಗೊಳಿಸಿದ್ದೇವೆ.

ಸ್ನೇಹಿತರೆ,

ಅದೇ ರೀತಿ, ಇಂಧನ ಕ್ಷೇತ್ರದಲ್ಲಿ ಭಾರತದ ವೇಗ, ಪ್ರಮಾಣ ಮತ್ತು ವ್ಯಾಪ್ತಿಯನ್ನು ಜಗತ್ತು ನೋಡುತ್ತಿದೆ. 2030ರ ವೇಳೆಗೆ, ನಮ್ಮ ಒಟ್ಟು ವಿದ್ಯುತ್ ಸಾಮರ್ಥ್ಯದ 50 ಪ್ರತಿಶತವನ್ನು ಉರವಲುಯೇತರ(ನಾನ್-ಫಾಸಿಲ್) ಇಂಧನಗಳಿಂದ ಉತ್ಪಾದಿಸಲು ನಾವು ನಿರ್ಧರಿಸಿದ್ದೇವೆ. ಅದು 2030ರ ಗುರಿಯಾಗಿತ್ತು - ಆದರೆ ನಾವು ಈ ಗುರಿಯನ್ನು 5 ವರ್ಷಗಳ ಹಿಂದೆಯೇ 2025 ರಲ್ಲೇ ಸಾಧಿಸಿದ್ದೇವೆ.

ಸ್ನೇಹಿತರೆ,

ಹಿಂದಿನ ಕಾಲದಲ್ಲಿ, ಬಹುತೇಕ ನೀತಿಗಳು ಆಮದಿನ ಮೇಲೆ ಹೆಚ್ಚು ಗಮನ ಹರಿಸಿದ್ದವು. ಜನರಿಗೆ ತಮ್ಮದೇ ಆದ ಹಿತಾಸಕ್ತಿಗಳು, ತಮ್ಮದೇ ಆದ ಆಟಗಳು ಇದ್ದವು. ಆದರೆ ಇಂದು, ಆತ್ಮನಿರ್ಭರ ಭಾರತವು ರಫ್ತಿನಲ್ಲೂ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಕಳೆದ ವರ್ಷವಷ್ಟೇ ನಾವು 4 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕೃಷಿ ಉತ್ಪನ್ನಗಳನ್ನು ರಫ್ತು ಮಾಡಿದ್ದೇವೆ. ಕಳೆದ ವರ್ಷದಲ್ಲಿ, 800 ಕೋಟಿ ಲಸಿಕೆ ಡೋಸ್‌ಗಳನ್ನು ವಿಶ್ವಾದ್ಯಂತ ತಯಾರಿಸಲಾಗಿದ್ದು, ಅದರಲ್ಲಿ 400 ಕೋಟಿ ಭಾರತದಲ್ಲೇ ಉತ್ಪಾದಿಸಲಾಗಿದೆ. ಸ್ವಾತಂತ್ರ್ಯದ ನಂತರದ ಆರೂವರೆ ದಶಕಗಳಲ್ಲಿ, ನಮ್ಮ ಎಲೆಕ್ಟ್ರಾನಿಕ್ಸ್ ರಫ್ತು ಕೇವಲ 35,000 ಕೋಟಿ ರೂಪಾಯಿಗಳನ್ನು ತಲುಪಿತ್ತು. ಇಂದು, ಈ ಅಂಕಿಅಂಶವು ಸುಮಾರು 3.25 ಲಕ್ಷ ಕೋಟಿ ರೂಪಾಯಿ ತಲುಪುತ್ತಿದೆ.

ಸ್ನೇಹಿತರೆ,

2014ರ ವರೆಗೆ, ಭಾರತದ ಆಟೋಮೊಬೈಲ್ ರಫ್ತು ಸುಮಾರು 50,000 ಕೋಟಿ ರೂಪಾಯಿಗಳಷ್ಟಿತ್ತು. ಇಂದು ಭಾರತವು ಒಂದೇ ವರ್ಷದಲ್ಲಿ 1.2 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಟೋಮೊಬೈಲ್‌ ಸರಕುಗಳನ್ನು ರಫ್ತು ಮಾಡುತ್ತಿದೆ. ಇಂದು ನಾವು ಮೆಟ್ರೋ ಕೋಚ್‌ಗಳು, ರೈಲು ಕೋಚ್‌ಗಳಿಂದ ಹಿಡಿದು ರೈಲು ಲೋಕೋಮೋಟಿವ್‌ಗಳವರೆಗೆ ಎಲ್ಲವನ್ನೂ ರಫ್ತು ಮಾಡುತ್ತಿದ್ದೇವೆ. ನಾನು ನಿಮ್ಮ ನಡುವೆ ಇರುವುದರಿಂದ, ಭಾರತದ ಮತ್ತೊಂದು ಯಶಸ್ಸನ್ನು ಹಂಚಿಕೊಳ್ಳಲು ನನಗೆ ಅವಕಾಶ ನೀಡಿ - ಶೀಘ್ರದಲ್ಲೇ, ಭಾರತವು ವಿಶ್ವದ 100 ದೇಶಗಳಿಗೆ ವಿದ್ಯುತ್ ವಾಹನಗಳನ್ನು ರಫ್ತು ಮಾಡಲಿದೆ. ವಾಸ್ತವವಾಗಿ, ಇದಕ್ಕೆ ಸಂಬಂಧಿಸಿದ ಒಂದು ಪ್ರಮುಖ ಕಾರ್ಯಕ್ರಮವು ಕೇವಲ 2 ದಿನಗಳಲ್ಲಿ ಅಂದರೆ ಆಗಸ್ಟ್ 26ರಂದು ನಡೆಯಲಿದೆ.

ಸ್ನೇಹಿತರೆ,

ಸಂಶೋಧನೆಯು ರಾಷ್ಟ್ರದ ಪ್ರಗತಿಗೆ ಭದ್ರ ಬುನಾದಿ ಎಂದು ನಿಮಗೆಲ್ಲರಿಗೂ ತಿಳಿದಿದೆ. ಆಮದು ಮಾಡಿಕೊಂಡ ಸಂಶೋಧನೆಯು ನಮಗೆ ಬದುಕಲು ಸಹಾಯ ಮಾಡಬಹುದು, ಆದರೆ ಅದು ನಮ್ಮ ನಿರ್ಣಯಗಳನ್ನು ಪೂರೈಸಲು ನಮಗೆ ಸಹಾಯ ಮಾಡುವುದಿಲ್ಲ. ಅದಕ್ಕಾಗಿಯೇ, ಸಂಶೋಧನಾ ಕ್ಷೇತ್ರದಲ್ಲಿ, ನಮಗೆ ತುರ್ತು ಮತ್ತು ಸರಿಯಾದ ಮನಸ್ಥಿತಿ ಬೇಕು. ಈ ನಿಟ್ಟಿನಲ್ಲಿ ಸಂಶೋಧನೆ ಪ್ರೋತ್ಸಾಹಿಸಲು ನಾವು ವೇಗವಾಗಿ ಕೆಲಸ ಮಾಡುತ್ತಿದ್ದೇವೆ. ಇದಕ್ಕಾಗಿ ಅಗತ್ಯವಿರುವ ನೀತಿಗಳು ಮತ್ತು ವೇದಿಕೆಗಳ ಮೇಲೆ ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಇಂದು ಭಾರತದ ಸಂಶೋಧನೆ ಮತ್ತು ಅಭಿವೃದ್ಧಿ ವೆಚ್ಚವು 2014ರಲ್ಲಿ ಇದ್ದ ವೆಚ್ಚಕ್ಕಿಂತ 2 ಪಟ್ಟು ಹೆಚ್ಚಾಗಿದೆ. 2014ಕ್ಕೆ ಹೋಲಿಸಿದರೆ, ಸಲ್ಲಿಸಲಾದ ಪೇಟೆಂಟ್‌ಗಳ ಸಂಖ್ಯೆ 17 ಪಟ್ಟು ಹೆಚ್ಚಾಗಿದೆ. ನಾವು ಸುಮಾರು 6,000 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೋಶಗಳನ್ನು ಸ್ಥಾಪಿಸಿದ್ದೇವೆ. ನಮ್ಮ ವಿದ್ಯಾರ್ಥಿಗಳಿಗೆ ವಿಶ್ವ ದರ್ಜೆಯ ಸಂಶೋಧನಾ ನಿಯತಕಾಲಿಕೆಗಳಿಗೆ ಪ್ರವೇಶವನ್ನು ಸುಲಭಗೊಳಿಸಿದ "ಒಂದು ರಾಷ್ಟ್ರ, ಒಂದು ಚಂದಾದಾರಿಕೆ" ಉಪಕ್ರಮದ ಬಗ್ಗೆಯೂ ನಿಮಗೆ ತಿಳಿದಿದೆ. ನಾವು 50,000 ಕೋಟಿ ರೂಪಾಯಿಗಳ ಬಜೆಟ್‌ನೊಂದಿಗೆ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಸ್ಥಾಪಿಸಿದ್ದೇವೆ,  ನಾವು 1 ಲಕ್ಷ ಕೋಟಿ ರೂಪಾಯಿಗಳ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ಯೋಜನೆಯನ್ನು ಸಹ ಅನುಮೋದಿಸಿದ್ದೇವೆ. ಖಾಸಗಿ ವಲಯದಲ್ಲಿ, ವಿಶೇಷವಾಗಿ ಉದಯೋನ್ಮುಖ ಮತ್ತು ಕಾರ್ಯತಂತ್ರ ಕ್ಷೇತ್ರಗಳಲ್ಲಿ ಹೊಸ ಸಂಶೋಧನೆ ಬೆಂಬಲಿಸುವುದು ನಮ್ಮ ಗುರಿಯಾಗಿದೆ.

ಸ್ನೇಹಿತರೆ,

ಈ ಶೃಂಗಸಭೆಯಲ್ಲಿ, ಉದ್ಯಮದ ಅನೇಕ ದಿಗ್ಗಜರು ಉಪಸ್ಥಿತರಿದ್ದಾರೆ. ಇಂದಿನ ಬೇಡಿಕೆಯೆಂದರೆ, ಉದ್ಯಮ ಮತ್ತು ಖಾಸಗಿ ವಲಯವು ವಿಶೇಷವಾಗಿ ಸ್ವಚ್ಛ ಇಂಧನ, ಕ್ವಾಂಟಮ್ ತಂತ್ರಜ್ಞಾನ, ಬ್ಯಾಟರಿ ಸಂಗ್ರಹಣೆ, ಸುಧಾರಿತ ವಸ್ತುಗಳು ಮತ್ತು ಜೈವಿಕ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಮುಂದೆ ಬಂದು ಸಂಶೋಧನೆಯಲ್ಲಿ ತಮ್ಮ ಪ್ರಯತ್ನಗಳು ಮತ್ತು ಹೂಡಿಕೆಗಳನ್ನು ಹೆಚ್ಚಿಸಬೇಕು. ಇದು 'ವಿಕಸಿತ ಭಾರತ' ನಿರ್ಮಿಸುವ ನಿರ್ಣಯಕ್ಕೆ ಹೊಸ ಶಕ್ತಿ ನೀಡುತ್ತದೆ.

ಸ್ನೇಹಿತರೆ,

ಸುಧಾರಣೆ, ಸಾಧನೆ, ಪರಿವರ್ತನೆ ಎಂಬ ಮಂತ್ರದೊಂದಿಗೆ, ಭಾರತವು ಇಂದು ನಿಧಾನಗತಿಯ ಬೆಳವಣಿಗೆಯಿಂದ ಜಗತ್ತು ಹೊರಹೊಮ್ಮಲು ಸಹಾಯ ಮಾಡುವ ಸ್ಥಾನದಲ್ಲಿದೆ. ನಿಂತ ನೀರಿನ ದಡದಲ್ಲಿ ಕುಳಿತು ಮನರಂಜನೆಗಾಗಿ ಕಲ್ಲುಗಳನ್ನು ಎಸೆಯುವ ಜನರಲ್ಲ - ನಾವು ವೇಗವಾಗಿ ಹರಿಯುವ ನದಿಗಳ ಹಾದಿಯನ್ನು ಬದಲಾಯಿಸುವ ಜನರು ನಾವಾಗಿದ್ದೇವೆ. ನಾನು ಕೆಂಪುಕೋಟೆಯಿಂದ ಹೇಳಿದಂತೆ, ಭಾರತವು ಇಂದು ಕಾಲದ ಹಾದಿಯನ್ನು ಬದಲಿಸುವ ಶಕ್ತಿ ಹೊಂದಿದೆ.

ಸ್ನೇಹಿತರೆ,

ನಿಮ್ಮೆಲ್ಲರನ್ನೂ ಮತ್ತೊಮ್ಮೆ ಭೇಟಿಯಾಗಲು ನನಗೆ ಈ ಅವಕಾಶ ನೀಡಿದ್ದಕ್ಕಾಗಿ ನಾನು ಎಕನಾಮಿಕ್ ಟೈಮ್ಸ್‌ಗೆ ಕೃತಜ್ಞನಾಗಿದ್ದೇನೆ. ಇಲ್ಲಿ ಉಪಸ್ಥಿತರಿರುವ ನಿಮ್ಮೆಲ್ಲರಿಗೂ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಮತ್ತು ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ಧನ್ಯವಾದಗಳು!

 

*****

 

 

 


(Release ID: 2160362)