ಕೃಷಿ ಸಚಿವಾಲಯ
ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ದೆಹಲಿಯ ಐ.ಸಿ.ಎ.ಆರ್ ಪುಸಾ ಕ್ಯಾಂಪಸ್ ನಲ್ಲಿ ನಡೆದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ವರ್ಚುವಲ್ ಭಾಷಣ ಮಾಡಿದರು
“ಬಾಹ್ಯಾಕಾಶ ವಿಜ್ಞಾನವು ಕೃಷಿಯಲ್ಲಿ ಅದ್ಭುತ ಬದಲಾವಣೆಗಳನ್ನು ತಂದಿದೆ” - ಶ್ರೀ ಶಿವರಾಜ್ ಸಿಂಗ್
“ದೇಶದಲ್ಲಿ ದಾಖಲೆಯ ಉತ್ಪಾದನೆಯು ಬಾಹ್ಯಾಕಾಶ ವಿಜ್ಞಾನದ ಅನುಪಮ ಕೊಡುಗೆಯ ಪರಿಣಾಮವಾಗಿದೆ” - ಶ್ರೀ ಚೌಹಾಣ್
“ಇಸ್ರೋದ ‘ಜಿಯೋ ಪೋರ್ಟಲ್ʼನ ನಿಖರವಾದ ದತ್ತಾಂಶದಿಂದ ರೈತರು ಪ್ರಯೋಜನ ಪಡೆಯುತ್ತಿದ್ದಾರೆ” - ಶ್ರೀ ಶಿವರಾಜ್ ಸಿಂಗ್
“ರಿಮೋಟ್ ಸೆನ್ಸಿಂಗ್ ಬೆಳೆ ಹಾನಿಯ ನಿಖರವಾದ ಮೌಲ್ಯಮಾಪನವನ್ನು ಸಾಧ್ಯವಾಗಿಸಿದೆ” - ಶ್ರೀ ಚೌಹಾಣ್
“ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ ಇಳಿದಿದ್ದು ಇಡೀ ದೇಶಕ್ಕೆ ಹೆಮ್ಮೆಯ ವಿಷಯ” - ಶ್ರೀ ಶಿವರಾಜ್ ಸಿಂಗ್
“ಭಾರತದ ಬಾಹ್ಯಾಕಾಶ ಸಾಧನೆಗಳಿಂದ ಜಗತ್ತು ಬೆರಗಾಗಿದೆ; ಗಗನಯಾತ್ರಿ ಶ್ರೀ ಶುಭಾಂಶು ಶುಕ್ಲಾ ಅವರಿಗೆ ಅಭಿನಂದನೆಗಳು” - ಶ್ರೀ ಚೌಹಾಣ್
Posted On:
23 AUG 2025 4:35PM by PIB Bengaluru
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಷ್ಟ್ರೀಯ ಬಾಹ್ಯಾಕಾಶ ದಿನದ ಸಂದರ್ಭದಲ್ಲಿ ನವದೆಹಲಿಯ ಐ.ಸಿ.ಎ.ಆರ್ ಪುಸಾ ಕ್ಯಾಂಪಸ್ ನಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ವರ್ಚುವಲ್ ಮಾಧ್ಯಮದ ಮೂಲಕ ಉದ್ದೇಶಿಸಿ ಮಾತನಾಡಿದರು. 'ಕೃಷಿ ಪರಿವರ್ತನೆಗಾಗಿ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ' ಕಾರ್ಯಕ್ರಮದ ವಿಷಯವಾಗಿತ್ತು. ಐ.ಸಿ.ಎ.ಆರ್ ಮಹಾನಿರ್ದೇಶಕ ಡಾ. ಎಂ. ಎಲ್. ಜತ್ ಸೇರಿದಂತೆ ಹಿರಿಯ ವಿಜ್ಞಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಐ.ಸಿ.ಎ.ಆರ್ ನಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸುವುದನ್ನು ನೋಡಲು ತಾವು ತುಂಬಾ ಉತ್ಸುಕರಾಗಿದ್ದಾಗಿ ಶ್ರೀ ಚೌಹಾಣ್ ಹೇಳಿದರು. "ಬಾಹ್ಯಾಕಾಶ ವಿಜ್ಞಾನದ ಮೂಲಕ, ನಾವು ಭಾರತ ಮತ್ತು ಪ್ರಪಂಚದಲ್ಲಿ ಬದಲಾವಣೆಯನ್ನು ತರುತ್ತಿದ್ದೇವೆ. ಕೃಷಿಯಲ್ಲಿ ತಂತ್ರಜ್ಞಾನ ಮತ್ತು ವಿಜ್ಞಾನ ಎಷ್ಟು ಮುಖ್ಯ ಎಂಬುದು ನಮಗೆಲ್ಲರಿಗೂ ತಿಳಿದಿದೆ ಮತ್ತು ನಾವು ಅದನ್ನು ಮತ್ತಷ್ಟು ಮುಂದುವರಿಸಬೇಕು" ಎಂದು ಅವರು ಹೇಳಿದರು.

ವಿಜ್ಞಾನಿಗಳನ್ನು "ಆಧುನಿಕ ಋಷಿಗಳು" ಎಂದು ಕರೆದ ಶ್ರೀ ಚೌಹಾಣ್, "ನಾವು ಕೃಷಿಯ ದಿಕ್ಕನ್ನು ಬದಲಾಯಿಸಿದ್ದೇವೆ ಮತ್ತು ರೈತರ ಜೀವನವನ್ನು ಪರಿವರ್ತಿಸಿದ್ದೇವೆ. ನಾವು ಜನರಿಗೆ ಆಹಾರ ಭದ್ರತೆಯನ್ನು ಖಚಿತಪಡಿಸಿದ್ದೇವೆ. ನಾವು ದಾಖಲೆಯ ಆಹಾರ ಧಾನ್ಯ ಉತ್ಪಾದನೆಯನ್ನು ಸಾಧಿಸಿದ್ದೇವೆ ಮತ್ತು ಬಾಹ್ಯಾಕಾಶ ವಿಜ್ಞಾನವು ಇದಕ್ಕೆ ಅನುಪಮ ಕೊಡುಗೆ ನೀಡಿದೆ ಎಂದು ಹೇಳಿದರು. ಬೆಳೆ ಇಳುವರಿ ಅಂದಾಜು, ಬೆಳೆ ವ್ಯವಸ್ಥೆಗಳು, ಗೋಧಿ, ಅಕ್ಕಿ, ಸಾಸಿವೆ, ಹತ್ತಿ, ಕಬ್ಬು ಉತ್ಪಾದನೆ, ಪ್ರದೇಶದ ಅಂದಾಜಿನಿಂದ ಹವಾಮಾನ ಮಾಹಿತಿಯವರೆಗೆ ಬಾಹ್ಯಾಕಾಶ ಅಪ್ಲಿಕೇಶನ್ ಗಳು ಈಗ ಕೃಷಿಯ ಕೇಂದ್ರಬಿಂದುವಾಗಿವೆ ಬಾಹ್ಯಾಕಾಶ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಅವರು ಹೇಳಿದರು.
ಹಿಂದಿನ ಹವಾಮಾನ ಮುನ್ಸೂಚನೆಗಳು ಜಾನಪದ ಮತ್ತು ಊಹೆಗಳನ್ನು ಆಧರಿಸಿದ್ದವು. ಆದರೆ ಇಂದು ಇಸ್ರೋದ ಜಿಯೋ ಪೋರ್ಟಲ್ ಮಳೆ, ಬರ ಮತ್ತು ಹವಾಮಾನದ ಬಗ್ಗೆ ಬಹುತೇಕ ನಿಖರವಾದ ಮಾಹಿತಿಯನ್ನು ಒದಗಿಸುತ್ತಿದೆ ಎಂದು ಅವರು ಹೇಳಿದರು. "ರೈತರು ಈಗ ಇದರ ಆಧಾರದ ಮೇಲೆ ತಮ್ಮ ಕೃಷಿಯನ್ನು ಯೋಜಿಸುತ್ತಾರೆ. ಈ ಪೋರ್ಟಲ್ ಮಣ್ಣಿನ ತೇವಾಂಶದ ಬಗ್ಗೆ ಮಾಹಿತಿಯನ್ನು ನೀಡುತ್ತದೆ, ಬೆಳೆ ಆರೋಗ್ಯ ಡೇಟಾವನ್ನು ಸಂಯೋಜಿಸುತ್ತದೆ ಮತ್ತು ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ" ಎಂದು ಸಚಿವರು ಹೇಳಿದರು.

ರೈತರು ಅಪ್ಲೋಡ್ ಮಾಡಿದ ಛಾಯಾಚಿತ್ರಗಳಿಂದ ಕೀಟಗಳನ್ನು ಪತ್ತೆಹಚ್ಚಲು ಮತ್ತು ಗೋಧಿಯ ಬಿತ್ತನೆ ಮತ್ತು ಕೊಯ್ಲು ಪ್ರದೇಶದ ನೈಜ-ಸಮಯದ ಮೇಲ್ವಿಚಾರಣೆಯನ್ನು ನಿರ್ಣಯಿಸಲು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಶ್ರೀ ಚೌಹಾಣ್ ಮಾಹಿತಿ ನೀಡಿದರು. ಕೃಷಿ ಸಚಿವಾಲಯದ ದತ್ತಾಂಶವನ್ನು ಈಗ ಎನ್.ಆರ್.ಎಸ್.ಸಿಯ ಬೆಳೆ ಚೌಕಟ್ಟು (ಬೆಳೆ ಪ್ರಗತಿ ಕುರಿತ ಸಮಗ್ರ ದೂರಸ್ಥ ಸಂವೇದನಾ ಅವಲೋಕನ) ದತ್ತಾಂಶದೊಂದಿಗೆ ಹೊಂದಿಸಲಾಗಿದೆ. ನಾಸಾ-ಇಸ್ರೋದ ಎನ್.ಎಸ್.ಐ.ಆರ್ ಕಾರ್ಯಾಚರಣೆಯೊಂದಿಗೆ, ಸಣ್ಣ ಜಮೀನುಗಳಿಂದ ದೊಡ್ಡ ಜಮೀನುಗಳವರೆಗೆ ಮಣ್ಣಿನ ತೇವಾಂಶ, ಬೆಳೆ ಆರೋಗ್ಯ ಮತ್ತು ಜೀವರಾಶಿಯನ್ನು ನಿಖರವಾಗಿ ಅಂದಾಜು ಮಾಡಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆಯ ಬಗ್ಗೆ ಬೆಳೆ ಕಟಾವು ಪ್ರಯೋಗಗಳಲ್ಲಿನ ದೋಷಗಳು ಮತ್ತು ಪಾರದರ್ಶಕತೆಯ ಕೊರತೆಯಂತಹ ಕಳವಳಗಳು ಈ ಹಿಂದೆ ಇದ್ದವು ಎಂದು ಅವರು ಹೇಳಿದರು. "ಕೆಲವೊಮ್ಮೆ ಬೆಳೆ ನಾಶವಾದ ರೈತರಿಗೆ ಪರಿಹಾರ ಸಿಗುತ್ತಿರಲಿಲ್ಲ, ಆದರೆ ಬೆಳೆ ಹಾನಿಯಾಗದ ರೈತರಿಗೆ ಪರಿಹಾರ ಸಿಗುತ್ತಿತ್ತು. ಆದರೆ ಉಪಗ್ರಹ ಆಧಾರಿತ ರಿಮೋಟ್ ಸೆನ್ಸಿಂಗ್ ಸಹಾಯದಿಂದ, ಈಗ ಬೆಳೆ ಹಾನಿಯನ್ನು ನಿಖರವಾಗಿ ನಿರ್ಣಯಿಸಬಹುದು, ಇದರಿಂದಾಗಿ ಉಪಗ್ರಹ ಚಿತ್ರಗಳ ಮೂಲಕ ಸೂಕ್ತ ಪರಿಹಾರವನ್ನು ಪಡೆಯಲು ಸಾಧ್ಯವಾಗುತ್ತದೆ" ಎಂದು ಅವರು ಹೇಳಿದರು.
ಹೆಚ್ಚುತ್ತಿರುವ ತಾಪಮಾನ, ಬಿರುಗಾಳಿಗಳು ಅಥವಾ ಬರಗಾಲದ ಸಮಯದಲ್ಲಿ ಬಾಹ್ಯಾಕಾಶ ವಿಜ್ಞಾನವು ಸಮಯೋಚಿತ ಎಚ್ಚರಿಕೆಗಳನ್ನು ನೀಡಲು ಸಹಾಯ ಮಾಡುತ್ತದೆ, ವಿಪತ್ತು ನಿರ್ವಹಣೆ ಮತ್ತು ಬೆಳೆ ರಕ್ಷಣೆಗೆ ಸಹಾಯ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು. ಮಾಹಿತಿಯು ನೇರವಾಗಿ ರೈತರನ್ನು ತಲುಪಬೇಕು ಮತ್ತು ಜಾಗೃತಿ ಮೂಡಿಸುವುದು ಅತ್ಯಗತ್ಯ. ಕೃಷಿಯಲ್ಲಿನ ವೈಜ್ಞಾನಿಕ ಸಾಧನೆಗಳನ್ನು ನೇರವಾಗಿ ರೈತರಿಗೆ ತಲುಪಿಸಲು 'ವಿಕಸಿತ ಕೃಷಿ ಸಂಕಲ್ಪ ಅಭಿಯಾನ'ವನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.
"ರೈತರು ತಮ್ಮ ಕೃಷಿ ನಿರ್ಧಾರಗಳಲ್ಲಿ ಪ್ರಯೋಜನ ಪಡೆಯುವಂತೆ ಅವರಿಗೆ ನೈಜ-ಸಮಯದ ಮಾಹಿತಿಯನ್ನು ಒದಗಿಸುವುದು ನಮ್ಮ ಪ್ರಸ್ತುತ ಸವಾಲಾಗಿದೆ. ನಮ್ಮ ವಿಜ್ಞಾನಿಗಳ ಸಾಮರ್ಥ್ಯಗಳಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ" ಎಂದು ಅವರು ಹೇಳಿದರು. ಅಭಿಯಾನದ ಸಮಯದಲ್ಲಿ, ರೈತರು ನಕಲಿ ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಪತ್ತೆಹಚ್ಚಲು ಮತ್ತು ಪ್ರಮಾಣೀಕರಿಸಲು ಉಪಕರಣಗಳು ಸೇರಿದಂತೆ ಹಲವು ಪ್ರಾಯೋಗಿಕ ಬೇಡಿಕೆಗಳನ್ನು ಮುಂದಿಟ್ಟರು. "ರೈತರು ನಷ್ಟ ಅನುಭವಿಸುತ್ತಿರುವುದರಿಂದ ಇದು ಗಂಭೀರ ಸಮಸ್ಯೆಯಾಗಿದೆ. ಸೋಯಾಬೀನ್ ಹೊಲಗಳಲ್ಲಿ ಕೀಟನಾಶಕಗಳ ಬಳಕೆಯಿಂದಾಗಿ ಬೆಳೆಗಳು ಸುಟ್ಟುಹೋಗಿವೆ. ವಿಜ್ಞಾನಿಗಳು ಈ ಬಗ್ಗೆ ತುರ್ತಾಗಿ ಕೆಲಸ ಮಾಡಬೇಕೆಂದು ನಾನು ಒತ್ತಾಯಿಸುತ್ತೇನೆ" ಎಂದು ಅವರು ಹೇಳಿದರು.
ವಿಜ್ಞಾನ ಎಂದರೆ ಕೇವಲ ಬಾಹ್ಯಾಕಾಶ ವಿಜ್ಞಾನವಲ್ಲ ಎಂದು ಶ್ರೀ ಚೌಹಾಣ್ ಸ್ಪಷ್ಟಪಡಿಸಿದರು. "ಬಾಹ್ಯಾಕಾಶ ವಿಜ್ಞಾನ ಎಲ್ಲೆಲ್ಲಿ ಉಪಯುಕ್ತವಾಗಿದೆಯೋ ಅಲ್ಲಿ ಅದನ್ನು ಅನ್ವಯಿಸಿ. ಆದರೆ ಅದೇ ಸಮಯದಲ್ಲಿ, ಇತರ ಕೃಷಿ ವಿಜ್ಞಾನಗಳಲ್ಲಿನ ಸಂಶೋಧನೆ ಮತ್ತು ಪ್ರಯೋಗಗಳು ಪ್ರಗತಿಯ ಹೊಸ ಆಯಾಮಗಳನ್ನು ವ್ಯಾಖ್ಯಾನಿಸಬೇಕು. ಈ ಅಭಿಯಾನದಿಂದ ಸುಮಾರು 500 ಹೊಸ ಸಂಶೋಧನಾ ವಿಷಯಗಳು ಹೊರಹೊಮ್ಮಿವೆ ಮತ್ತು ಇವುಗಳ ಮೇಲೆ ಕೆಲಸ ಮಾಡಬೇಕಾಗಿದೆ. 'ಒಂದು ರಾಷ್ಟ್ರ - ಒಂದು ತಂಡ - ಒಂದು ಗುರಿ' ಎಂಬ ಮನೋಭಾವದೊಂದಿಗೆ ಮುಂದುವರಿಯಬೇಕು. ತಾರ್ಕಿಕ ಫಲಿತಾಂಶಗಳನ್ನು ಸಾಧಿಸಲು ಒಂದು ತಂಡವು ಒಂದು ವಿಷಯದ ಮೇಲೆ ಸಂಶೋಧನೆಯನ್ನು ಕೇಂದ್ರೀಕರಿಸಬೇಕು" ಎಂದು ಅವರು ಹೇಳಿದರು.
"ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ನಾವು ರೈತರ ಜೀವನವನ್ನು ಪರಿವರ್ತಿಸಿದ್ದೇವೆ - ಆದರೆ ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ಸಣ್ಣ ಹಿಡುವಳಿದಾರರ ಜಮೀನುಗಳಿಗೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು, ಕಬ್ಬು ಮತ್ತು ಹತ್ತಿಯಲ್ಲಿ ವೈರಾಣು ದಾಳಿಗೆ ಪರಿಹಾರಗಳನ್ನು ಕಂಡುಹಿಡಿಯಬೇಕು ಮತ್ತು ದ್ವಿದಳ ಧಾನ್ಯಗಳು, ಎಣ್ಣೆಬೀಜಗಳು ಮತ್ತು ಸೋಯಾಬೀನ್ ಗಳ ಉತ್ಪಾದಕತೆಯನ್ನು ಹೆಚ್ಚಿಸಬೇಕು" ಎಂದು ಅವರು ಹೇಳಿದರು.
ಭಾರತದ ಬಾಹ್ಯಾಕಾಶ ಸಾಧನೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಶ್ರೀ ಚೌಹಾಣ್, "ಇಂದು ಜಗತ್ತು ನಮ್ಮ ಬಾಹ್ಯಾಕಾಶ ಸಾಧನೆಗಳಿಂದ ಬೆರಗಾಗಿದೆ. ಗಗನಯಾತ್ರಿ ಶ್ರೀ ಶುಭಾಂಶು ಶುಕ್ಲಾ ಅವರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಅವರ ಯಶಸ್ವಿ ಮಿಷನ್ ಈ ಕ್ಷೇತ್ರದಲ್ಲಿ ತ್ವರಿತ ಪ್ರಗತಿಗೆ ಹೊಸ ಬಾಗಿಲುಗಳನ್ನು ತೆರೆದಿದೆ. ಈ ಮಿಷನ್ ಯಾವಾಗಲೂ ಮನುಕುಲಕ್ಕೆ ಶುಭಕರವಾಗಿರುತ್ತದೆ" ಎಂದು ಹೇಳಿದರು.
ಭಾರತದ ವೈಜ್ಞಾನಿಕ ಸಂಪ್ರದಾಯವನ್ನು ಪ್ರಾಚೀನವಾದುದು ಎಂದು ಬಣ್ಣಿಸಿದ ಅವರು, "ನಾವು ಇತರರಿಂದ ಕಲಿತಿಲ್ಲ, ಬದಲಾಗಿ ಜಗತ್ತಿಗೆ ಕಲಿಸಿದ್ದೇವೆ. ಸಾವಿರಾರು ವರ್ಷಗಳ ಹಿಂದೆ ಆರ್ಯಭಟ ಗಣಿತ ಮತ್ತು ಖಗೋಳಶಾಸ್ತ್ರಕ್ಕೆ ಅಡಿಪಾಯ ಹಾಕಿದರು. ನಾವು ಆ ಸಂಪ್ರದಾಯವನ್ನು ಮುಂದುವರಿಸುತ್ತಿದ್ದೇವೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ ಇಳಿದಿದ್ದು ಬಹಳ ಹೆಮ್ಮೆಯ ವಿಷಯ. ಇಂದು ನಾವು ಗಗನಯಾನಕ್ಕೆ ತಯಾರಿ ನಡೆಸುತ್ತಿದ್ದೇವೆ ಮತ್ತು ನಮ್ಮ ದೇಶವು ವೇಗವಾಗಿ ಮುಂದುವರಿಯುತ್ತಿದೆ" ಎಂದು ಹೇಳಿದರು.
ಕೃಷಿಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನ - ಹಿಂದಿನ ಮತ್ತು ಭವಿಷ್ಯದ - ಕೃಷಿ ಸಮೀಕ್ಷೆಗಳು, ಜಾನುವಾರು, ತೋಟಗಾರಿಕೆ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಮತ್ತು ವಿವಿಧ ಬೆಳೆಗಳಂತಹ ವಿಷಯಗಳ ಕುರಿತು ವ್ಯಾಪಕವಾಗಿ ಚರ್ಚಿಸಲು ಕೇಂದ್ರ ಸಚಿವರು ವಿಜ್ಞಾನಿಗಳಿಗೆ ಕರೆ ನೀಡಿದರು. "ಇಂದಿನ ಅಧಿವೇಶನದಲ್ಲಿ ಹಂಚಿಕೊಂಡ ವಿಚಾರಗಳು ಕೃಷಿ ಅಭಿವೃದ್ಧಿಗೆ ಅಮೃತದಂತಹ ಮಾರ್ಗಸೂಚಿಯನ್ನು ನೀಡುತ್ತವೆ" ಎಂದು ಅವರು ಹೇಳಿದರು.
ರಾಷ್ಟ್ರೀಯ ಬಾಹ್ಯಾಕಾಶ ದಿನದ ಶುಭಾಶಯಗಳನ್ನು ತಿಳಿಸಿದ ಶ್ರೀ ಚೌಹಾಣ್, ಕೃಷಿ, ಪಶುಸಂಗೋಪನೆ ಮತ್ತು ಕೃಷಿಯಲ್ಲಿ ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಎಲ್ಲರಿಗೂ ಕರೆ ನೀಡಿದರು. ಇದರಿಂದ ಉತ್ತಮ ಫಲಿತಾಂಶಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. "ಭಾರತದಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ನಮ್ಮ ವಿಜ್ಞಾನಿಗಳ ಸಾಮರ್ಥ್ಯ ಅಸಾಧಾರಣವಾಗಿದೆ ಮತ್ತು ನಾನು ಅವರನ್ನು ಮತ್ತೆ ಮತ್ತೆ ವಂದಿಸುತ್ತೇನೆ. ಅವರು ತಮ್ಮ ಕೌಶಲ್ಯ ಮತ್ತು ಸಾಮರ್ಥ್ಯದಿಂದ ಗಮನಾರ್ಹ ಸಾಧನೆಗಳನ್ನು ಮುಂದುವರಿಸುತ್ತಾರೆ ಎಂಬ ವಿಶ್ವಾಸ ನನಗಿದೆ" ಎಂದು ಹೇಳಿದರು.
*****
(Release ID: 2160201)