ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರು ಕೇರಳದ ಕೊಚ್ಚಿಯಲ್ಲಿ ಮನೋರಮಾ ನ್ಯೂಸ್‌ ಸಮಾವೇಶ - 2025 ಉದ್ದೇಶಿಸಿ ಭಾಷಣ ಮಾಡಿದರು


ನರೇಂದ್ರ ಮೋದಿ ಜೀ ಪ್ರಧಾನಮಂತ್ರಿಯಾದ ನಂತರ, ದೇಶವು ಜಾತಿವಾದ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣದ ಬದಲಿಗೆ ಕಾರ್ಯಕ್ಷಮತೆಯ ರಾಜಕೀಯದ ಹೊಸ ಯುಗವನ್ನು ಪ್ರಾರಂಭಿಸಿದೆ

ಭಾರತ ಶ್ರೇಷ್ಠವಾಗುವವರೆಗೂ ನಾವು ವಿಶ್ರಾಂತಿ ಪಡೆಯುವುದಿಲ್ಲ

ಡಿಲಿಮಿಟೇಶನ್‌ ಸಂಭವಿಸಿದಾಗಲೆಲ್ಲಾ ದಕ್ಷಿಣದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ

ಎಡಪಂಥೀಯ ಸಿದ್ಧಾಂತದಿಂದ ಉದ್ಭವಿಸುವ ನಿಶ್ಚಲ ಅಭಿವೃದ್ಧಿ ಮಾದರಿ ಕೇರಳದ ಬೆಳವಣಿಗೆಗೆ ಅಡ್ಡಿಯಾಗಿದೆ

ಮತ ಬ್ಯಾಂಕ್‌ ರಾಜಕೀಯದಿಂದಾಗಿ, ಕೇರಳದಲ್ಲಿ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಕೆಳಮಟ್ಟಕ್ಕೆ ಹದಗೆಟ್ಟಿದೆ; ನಮ್ಮ ಪಕ್ಷವು ಈ ಪರಿಸ್ಥಿತಿಯನ್ನು ಸುಧಾರಿಸುತ್ತದೆ

ಕೇರಳ ಸರ್ಕಾರವು ಪಿಎಫ್‌ಐನಂತಹ ಸಂಘಟನೆಗಳನ್ನು ಸಮಯಕ್ಕೆ ಸರಿಯಾಗಿ ಏಕೆ ನಿಲ್ಲಿಸಲಿಲ್ಲ? ನರೇಂದ್ರ ಮೋದಿ ಸರ್ಕಾರ ಇಲ್ಲದಿದ್ದರೆ ಬಹುಶಃ ಕೇರಳ ಸರ್ಕಾರ ಪಿಎಫ್‌ಐ ಅನ್ನು ನಿಷೇಧಿಸುತ್ತಿರಲಿಲ್ಲ

ಕೇರಳದ ಜನರು ಈಗಾಗಲೇ ಸಾರ್ವಜನಿಕರಿಗಾಗಿ ಕೆಲಸ ಮಾಡುವ ಸರ್ಕಾರವನ್ನು ಬಯಸುತ್ತಾರೆ, ಕಾರ್ಯಕರ್ತರಿಗಾಗಿ ಕೆಲಸ ಮಾಡುವ ಸರ್ಕಾರವಲ್ಲ ಎಂದು ನಿರ್ಧರಿಸಿದ್ದಾರೆ

ರಾಜಕೀಯಕ್ಕಾಗಿ ಕುಟುಂಬ ಮತ್ತು ಮನೆಯನ್ನು ತ್ಯಜಿಸುವ ಮೂಲಕ ರಾಷ್ಟ್ರ ಸೇವೆಗೆ ನರೇಂದ್ರ ಮೋದಿ ಜೀ ಆದರ್ಶ ಉದಾಹರಣೆಯಾಗಿದ್ದಾರೆ

2004 ಮತ್ತು 2014 ರ ನಡುವೆ, ವಿಪತ್ತು ನಿರ್ವಹಣೆಗಾಗಿ ಕೇಂದ್ರವು 1,342 ಕೋಟಿ ರೂಪಾಯಿಗಳನ್ನು ಒದಗಿಸಿದರೆ, ನರೇಂದ್ರ ಮೋದಿ ಜೀ ಕಳೆದ 10 ವರ್ಷಗಳಲ್ಲಿ5,100 ಕೋಟಿ ರೂಪಾಯಿಗಳನ್ನು ಒದಗಿಸಿದ್ದಾರೆ

Posted On: 22 AUG 2025 4:42PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರು ಇಂದು ಕೇರಳದ ಕೊಚ್ಚಿಯಲ್ಲಿ ಮನೋರಮಾ ನ್ಯೂಸ್‌ ಸಮಾವೇಶ 2025 ಅನ್ನುದ್ದೇಶಿಸಿ ಮಾತನಾಡಿದರು. ಉತ್ತಮ ಉದ್ದೇಶಗಳೊಂದಿಗೆ ಬಹುಪಕ್ಷೀಯ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದರೂ, ಸ್ವಾತಂತ್ರ್ಯದ ಮೂರನೇ ದಶಕದಿಂದ ಹಲವಾರು ನ್ಯೂನತೆಗಳು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಕಲುಷಿತಗೊಳಿಸಲು ಪ್ರಾರಂಭಿಸಿದವು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಜಾತಿವಾದ, ವಂಶಪಾರಂಪರ್ಯ ರಾಜಕೀಯ ಮತ್ತು ತುಷ್ಟೀಕರಣ ಎಂಬ ಮೂರು ವಿಷಯಗಳು ದೇಶದ ಜನಾದೇಶದ ಮೇಲೆ ಗಾಯದಂತೆ ಪರಿಣಾಮ ಬೀರುತ್ತಿವೆ ಎಂದು ಅವರು ಒತ್ತಿ ಹೇಳಿದರು. ಇದಲ್ಲದೆ, ನಾಲ್ಕನೇ ವಿಷಯವಾದ ಭ್ರಷ್ಟಾಚಾರವು ರಾಷ್ಟ್ರದ ಪ್ರಗತಿಗೆ ಅಡ್ಡಿಯಾಗುವುದಲ್ಲದೆ, ಜನರ ಆದೇಶವನ್ನು ಅಣಕಿಸುತ್ತಿದೆ.

ಅಸ್ಥಿರತೆಯ ವಾತಾವರಣದಿಂದಾಗಿ ದೇಶವು ದೀರ್ಘಕಾಲೀನ ನೀತಿಗಳಿಂದ ವಂಚಿತವಾಗಿದೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಶ್ರೀ ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಮಂತ್ರಿಯಾದ ನಂತರ, ಜಾತಿವಾದ, ವಂಶಪಾರಂಪರ್ಯ ರಾಜಕೀಯ ಮತ್ತು ತುಷ್ಟೀಕರಣದ ಬದಲಿಗೆ ಕಾರ್ಯಕ್ಷಮತೆಯ ರಾಜಕೀಯದ ಹೊಸ ಯುಗ ಪ್ರಾರಂಭವಾಯಿತು ಮತ್ತು ಇಡೀ ದೇಶವು ಇಂದು ಈ ಪರಿವರ್ತನೆಯನ್ನು ಅನುಭವಿಸುತ್ತಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವ್ಯವಸ್ಥಿತವಾಗಿ ಮತ್ತು ನೀತಿ ಕ್ರಮಗಳ ಮೂಲಕ ಭ್ರಷ್ಟಾಚಾರವನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಿದ್ದಾರೆ ಎಂದು ಅವರು ಹೇಳಿದರು. ದೇಶದ ಸ್ಥಿರತೆಯಿಂದಾಗಿ, ಆಂತರಿಕ ಮತ್ತು ಬಾಹ್ಯ ಭದ್ರತೆಯನ್ನು ಖಾತ್ರಿಪಡಿಸುವುದು, ಮೂಲಸೌಕರ್ಯ ಅಭಿವೃದ್ಧಿಯ ಹೊಸ ಹಂತವನ್ನು ಪ್ರಾರಂಭಿಸುವುದು ಅಥವಾ ರಾಷ್ಟ್ರವನ್ನು ಸಮೃದ್ಧಗೊಳಿಸುವುದು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಂದು ಕ್ಷೇತ್ರದಲ್ಲೂ ದೀರ್ಘಕಾಲೀನ ಮತ್ತು ಸ್ಪಷ್ಟ ನೀತಿಗಳ ಹೊಸ ಯುಗವನ್ನು ಪ್ರಾರಂಭಿಸಿದ್ದಾರೆ ಎಂದು ಶ್ರೀ ಅಮಿತ್‌ ಶಾ ಒತ್ತಿ ಹೇಳಿದರು. ಹನ್ನೊಂದು ವರ್ಷಗಳ ಹಿಂದೆ, ದೇಶದ ಜನರ ಮನಸ್ಸಿನಲ್ಲಿ ಒಂದು ಪ್ರಶ್ನೆ ಇತ್ತು: ಈ ರಾಷ್ಟ್ರದ ಭವಿಷ್ಯ ಏನು? ಇಂದು 140 ಕೋಟಿ ಜನರ ಮನಸ್ಸಿನಲ್ಲಿ ಯಾವುದೇ ಗೊಂದಲವಿಲ್ಲ. 2047ರ ವೇಳೆಗೆ ಭಾರತವು ವಿಶ್ವದ ಮುಂಚೂಣಿಯಲ್ಲಿರುತ್ತದೆ ಮತ್ತು ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಲ್ಲರೂ ನಂಬುತ್ತಾರೆ ಎಂದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ಈ ಹಿಂದೆ ದೇಶವು ಆರ್ಥಿಕ ಅಸ್ಥಿರತೆಗೆ ಬಲಿಪಶುವಾಗಿತ್ತು ಎಂದು ಹೇಳಿದರು. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ನಮ್ಮ ಆರ್ಥಿಕತೆಯನ್ನು ಜಾಗತಿಕವಾಗಿ 11ನೇ ಸ್ಥಾನಕ್ಕೆ ಯಶಸ್ವಿಯಾಗಿ ತಂದರು. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಪ್ರಶಂಸನೀಯ ಕೆಲಸ ಮಾಡಿದರು ಮತ್ತು ಆರ್ಥಿಕತೆಯು 11 ನೇ ಸ್ಥಾನದಿಂದ 12ನೇ ಸ್ಥಾನಕ್ಕೆ ಕುಸಿಯದಂತೆ ನೋಡಿಕೊಂಡರು, ಅದರ ಸ್ಥಿರತೆಯನ್ನು ಕಾಪಾಡಿಕೊಂಡರು. ಕಳೆದ 11 ವರ್ಷಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ನಮ್ಮ ಆರ್ಥಿಕತೆಯನ್ನು 11ನೇ ಸ್ಥಾನದಿಂದ ವಿಶ್ವದ ಅಗ್ರ ನಾಲ್ಕು ಆರ್ಥಿಕತೆಗಳಲ್ಲಿ ಒಂದಕ್ಕೆ ಏರಿಸಿದ್ದಾರೆ ಎಂದು ಅವರು ಹೇಳಿದರು. ಮೂಲಸೌಕರ್ಯ ಅಭಿವೃದ್ಧಿ, ಮುಂದಿನ 25 ವರ್ಷಗಳಲ್ಲಿ ಜಾಗತಿಕ ಆರ್ಥಿಕತೆಯ ಮೇಲೆ ಪ್ರಭಾವ ಬೀರುವ ಹೊಸ ಆರ್ಥಿಕತೆಗಳು ಮತ್ತು ತಂತ್ರಜ್ಞಾನಗಳಲ್ಲಿ ಮುಂಚೂಣಿಯಲ್ಲಿರುವುದು ಅಥವಾ ಜಾಗತಿಕ ವೇದಿಕೆಯಲ್ಲಿ ತಮ್ಮನ್ನು ತಾವು ಬಿಂಬಿಸಿಕೊಳ್ಳಲು ಯುವಕರಿಗೆ ಅವಕಾಶಗಳನ್ನು ಒದಗಿಸಲು ನವೋದ್ಯಮಗಳಿಗೆ ದೃಢವಾದ ಬೆಂಬಲ ವ್ಯವಸ್ಥೆಯನ್ನು ರಚಿಸುವುದು ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.

ನರೇಂದ್ರ ಮೋದಿ ಸರ್ಕಾರವು ಪ್ರತಿಯೊಂದು ಕ್ಷೇತ್ರದಲ್ಲೂಸುಧಾರಣೆಗಳನ್ನು ಜಾರಿಗೆ ತಂದಿದೆ, ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದೆ ಮತ್ತು ಜಿಎಸ್‌ಟಿಯಂತಹ ಅಸಾಧ್ಯವಾದ ಕಾರ್ಯಗಳನ್ನು ಕನಿಷ್ಠ ವಿವಾದದೊಂದಿಗೆ ಮತ್ತು ಅನುಕರಣೀಯ ರೀತಿಯಲ್ಲಿ ಕಾರ್ಯಗತಗೊಳಿಸಿದೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಇದರ ಪರಿಣಾಮವಾಗಿ, ದೇಶದ ಆರ್ಥಿಕತೆಯು ಈಗ ವಿಶ್ವದ ಅಗ್ರ ನಾಲ್ಕು ಆರ್ಥಿಕತೆಗಳಲ್ಲಿಒಂದಾಗಿದೆ. ಭದ್ರತಾ ರಂಗದಲ್ಲಿ, ಮಿಲಿಟರಿಯನ್ನು ಸಂಪೂರ್ಣವಾಗಿ ಆಧುನೀಕರಿಸಲಾಗಿದೆ, ರಕ್ಷಣಾ ಆಧುನೀಕರಣದಲ್ಲಿ ಸ್ವಾವಲಂಬನೆಗೆ ಒತ್ತು ನೀಡಲಾಗಿದೆ ಮತ್ತು ಆಂತರಿಕ ಭದ್ರತೆಗಾಗಿ ದೃಢವಾದ ಮತ್ತು ಸುಸ್ಥಿರ ನೀತಿಗಳನ್ನು ಸ್ಥಾಪಿಸಲಾಗಿದೆ ಎಂದು ಶ್ರೀ ಅಮಿತ್‌ ಶಾ ತಿಳಿಸಿದರು.

ಈಶಾನ್ಯ, ಎಡಪಂಥೀಯ ಉಗ್ರವಾದ ಮತ್ತು ಜಮ್ಮು ಮತ್ತು ಕಾಶ್ಮೀರ ಆಂತರಿಕ ಭದ್ರತೆಗೆ ನಿರಂತರ ಸವಾಲುಗಳಾಗಿವೆ ಎಂದು ಗೃಹ ಸಚಿವರು ಹೇಳಿದರು. ಈ ಮೂರು ಪ್ರದೇಶಗಳಲ್ಲಿ, ಹಿಂಸಾತ್ಮಕ ಘಟನೆಗಳಲ್ಲಿ ಶೇ.70 ರಷ್ಟು ಇಳಿಕೆ, ಮರಣ ದರದಲ್ಲಿ ಶೇ.70 ರಷ್ಟು ಇಳಿಕೆ ಮತ್ತು ಭದ್ರತಾ ಪಡೆಗಳ ಸಾವುಗಳಲ್ಲಿ ಶೇ.74 ರಷ್ಟು ಇಳಿಕೆ ಕಂಡುಬಂದಿದೆ. ಬಹಳ ಕಡಿಮೆ ಅವಧಿಯಲ್ಲಿ, ನಾವು ಈ ಮೂರು ಸಮಸ್ಯೆಗಳಿಂದ ಶಾಶ್ವತವಾಗಿ ಮುಕ್ತರಾಗುತ್ತೇವೆ ಎಂಬ ಸಂಪೂರ್ಣ ವಿಶ್ವಾಸವನ್ನು ದೇಶ ಈಗ ಹೊಂದಿದೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಈ ವಿಶ್ವಾಸವನ್ನು ಪ್ರಧಾನಿ ನರೇಂದ್ರ ಮೋದಿ ತುಂಬಿದ್ದಾರೆ ಎಂದು ಅವರು ಹೇಳಿದರು.

ಭಯೋತ್ಪಾದನೆಯನ್ನು ಎದುರಿಸಲು ನಾವು ದೃಢವಾದ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಿದ್ದೇವೆ, ಇದು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಮೂರು ಅವಧಿಗಳಲ್ಲಿ, ಗಡಿಯಾಚೆಯಿಂದ ದಾಳಿ ಮಾಡಲು ಹಲವಾರು ಪ್ರಯತ್ನಗಳು ನಡೆದವು.ಮೊದಲು ಉರಿ, ನಂತರ ಪುಲ್ವಾಮಾ ಮತ್ತು ನಂತರ ಪಹಲ್ಗಾಮ್ ಪ್ರತಿ ಬಾರಿಯೂ ನಾವು ನಿರ್ಣಾಯಕವಾಗಿ ಪ್ರತಿಕ್ರಿಯಿಸಿದೆವು. ಮೊದಲು ಸರ್ಜಿಕಲ್‌ ಸ್ಟ್ರೈಕ್‌, ನಂತರ ವೈಮಾನಿಕ ದಾಳಿ, ಮತ್ತು ಈ ಬಾರಿ ‘ಆಪರೇಷನ್‌ ಸಿಂಧೂರ್‌’ ಮೂಲಕ ಭಾರತೀಯ ಸೇನೆಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಪ್ರವೇಶಿಸಿದ್ದಲ್ಲದೆ, ಭಯೋತ್ಪಾದಕ ಪ್ರಧಾನ ಕಚೇರಿಗಳನ್ನು ನಾಶಪಡಿಸಲು ಪಾಕಿಸ್ತಾನದ ಒಳಕ್ಕೆ ನುಸುಳಿತು. ಇದು ಇಡೀ ಜಗತ್ತಿಗೆ ಪ್ರಬಲ ಸಂದೇಶವನ್ನು ಸಾರಿತು ಎಂದು ಸಚಿವರು ಹೇಳಿದರು.

ದೇಶದ ಇತಿಹಾಸವನ್ನು ಮತ್ತೆ ಬರೆದಾಗಲೆಲ್ಲಾ, ನರೇಂದ್ರ ಮೋದಿ ಜೀ ಅವರ 11 ವರ್ಷಗಳ ಆಡಳಿತವನ್ನು ಶಾಂತಿ ಮತ್ತು ಅಭಿವೃದ್ಧಿಯ ದೃಷ್ಟಿಕೋನದಿಂದ ಸುವರ್ಣಾಕ್ಷರಗಳಲ್ಲಿ ಕೆತ್ತಲಾಗುವುದು ಎಂದು ಗೃಹ ಸಚಿವರು ಹೇಳಿದರು. 11 ವರ್ಷಗಳ ಹಿಂದೆ ಇದ್ದ ಕೇರಳ ಇಂದು ಅದೇ ಸ್ಥಾನದಲ್ಲಿದೆ ಎಂದು ಅವರು ಉಲ್ಲೇಖಿಸಿದರು. ಕೇರಳವು ಅಪಾರ ಸಾಮರ್ಥ್ಯ‌ವನ್ನು ಹೊಂದಿದೆ, ಆದರೆ ವಿಚಿತ್ರ ರೀತಿಯ ಸೈದ್ಧಾಂತಿಕ ಉದಾಸೀನತೆಯು ಈ ಅವಕಾಶಗಳ ಅನ್ವೇಷಣೆ ಮತ್ತು ಬಳಕೆಗೆ ಅಡ್ಡಿಯಾಗಿದೆ. ಎಡಪಂಥೀಯ ಸಿದ್ಧಾಂತದಿಂದ ಹುಟ್ಟಿಕೊಂಡ ಉದಾಸೀನ ಅಭಿವೃದ್ಧಿ ಮಾದರಿ ಕೇರಳದ ಪ್ರಗತಿಗೆ ಅಡ್ಡಿಯಾಗಿದೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಮುಂಬರುವ ದಿನಗಳಲ್ಲಿಕೇರಳವೂ ಅಭಿವೃದ್ಧಿಯ ಈ ಪಯಣಕ್ಕೆ ಸೇರುವ ಅಭಿಯಾನವನ್ನು ಕೈಗೊಳ್ಳಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಕೇರಳದ ಜನರು ಭ್ರಷ್ಟಾಚಾರವನ್ನು ಸಹಿಸುವುದಿಲ್ಲಎಂದು ಶ್ರೀ ಅಮಿತ್‌ ಶಾ ಹೇಳಿದರು. ಮತ ಬ್ಯಾಂಕ್‌ ರಾಜಕೀಯದಿಂದಾಗಿ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಯೂ ಕೆಳಮಟ್ಟಕ್ಕೆ ಹದಗೆಟ್ಟಿದೆ. ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಪಿಎಫ್‌ಐ ಎಂಬ ಸಂಘಟನೆ ಕೇರಳದಿಂದ ಉತ್ತರ ಪ್ರದೇಶ, ಬಿಹಾರ ಮತ್ತು ಗುಜರಾತ್‌ಗೆ ಹರಡಿದೆ ಎಂದು ಅವರು ಹೇಳಿದರು. ಈ ಸಂಸ್ಥೆಯನ್ನು ಸಮಯಕ್ಕೆ ಸರಿಯಾಗಿ ಏಕೆ ನಿಲ್ಲಿಸಲಿಲ್ಲಎಂದು ಶ್ರೀ ಅಮಿತ್‌ ಶಾ ಪ್ರಶ್ನಿಸಿದರು. ನರೇಂದ್ರ ಮೋದಿ ಸರ್ಕಾರ ಅಧಿಕಾರದಲ್ಲಿರದಿದ್ದರೆ, ಬಹುಶಃ ಕೇರಳ ಸರ್ಕಾರ ಪಿಎಫ್‌ಐಅನ್ನು ನಿಷೇಧಿಸುತ್ತಿರಲಿಲ್ಲ ಎಂದು ಅವರು ಟೀಕಿಸಿದರು.

ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಕೇರಳವು ಶೇ. 100 ರಷ್ಟು ಸಾಕ್ಷ ರತಾ ಪ್ರಮಾಣವನ್ನು ಹೊಂದಿರುವ ದೇಶದ ಅತ್ಯಂತ ಸಾಕ್ಷರತಾ ರಾಜ್ಯವಾಗಿದೆ. ಆದರೂ ಇಲ್ಲಿಏಕೆ ಇಷ್ಟೊಂದು ನಿರುದ್ಯೋಗವಿದೆ? ಕೇರಳವು ದೇಶದಲ್ಲಿ ಅತಿ ಹೆಚ್ಚು ಸಾಕ್ಷ ರತಾ ಪ್ರಮಾಣವನ್ನು ಹೊಂದಿದೆ ಮತ್ತು ಅತಿ ಹೆಚ್ಚು ನಿರುದ್ಯೋಗವನ್ನು ಹೊಂದಿದೆ ಎಂದು ಅವರು ಹೇಳಿದರು. ಕೇರಳವು ಅಪಾರ ಸಾಮರ್ಥ್ಯ‌ವನ್ನು ಹೊಂದಿದೆ, ಆದರೆ ಅದನ್ನು ಬಳಸಿಕೊಳ್ಳಲಾಗಿಲ್ಲಎಂದು ಶ್ರೀ ಅಮಿತ್‌ ಶಾ ಹೇಳಿದರು. ಅಭಿವೃದ್ಧಿಗಾಗಿ ಐಟಿ, ಅರೆವಾಹಕ, ಬಂದರು ಮತ್ತು ಜ್ಞಾನಾಧಾರಿತ ಕೈಗಾರಿಕೆಗಳ ಸ್ಥಾಪನೆಯನ್ನು ಕೇರಳದ ಜನರು ಬಯಸುತ್ತಾರೆ. ಇಲ್ಲಿಯವರೆಗೆ, ಕಾರ್ಯಕರ್ತರಿಗೆ ಪ್ರಯೋಜನವಾಗುವುದರ ಬಗ್ಗೆ ಮಾತ್ರ ಗಮನ ಹರಿಸಲಾಗಿದೆಯೇ ಹೊರತು ಸಾರ್ವಜನಿಕರಿಗೆ ಅಲ್ಲಎಂದು ಅವರು ಹೇಳಿದರು. ಕೇರಳದ ಜನರು ಈಗ ಜನರಿಗಾಗಿ ಕೆಲಸ ಮಾಡುವ ಸರ್ಕಾರವನ್ನು ಬಯಸಿದ್ದಾರೆಯೇ ಹೊರತು ಕಾರ್ಯಕರ್ತರಿಗೆ ಸೇವೆ ಸಲ್ಲಿಸುವ ಸರ್ಕಾರವಲ್ಲ ಎಂದು ಗೃಹ ಸಚಿವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ರಚಿಸಿದ ಅಭಿವೃದ್ಧಿ ಮಾದರಿ ಜಾತಿವಾದ ಮತ್ತು ತುಷ್ಟೀಕರಣ ಮುಕ್ತ ರಾಜಕೀಯದ ಮಾದರಿಯಾಗಿದೆ, ಇದನ್ನು ‘ಕಾರ್ಯಕ್ಷಮತೆಯ ರಾಜಕೀಯ’ ಎಂದು ಕರೆಯಬಹುದು ಎಂದು ಶ್ರೀ ಅಮಿತ್‌ ಶಾ ಹೇಳಿದರು. ಕೇರಳದ ಯುವಕರು ಈ ಕಾರ್ಯಕ್ಷಮತೆಯ ರಾಜಕೀಯದೊಂದಿಗೆ ಮುಂದೆ ಸಾಗುತ್ತಾರೆ. 2004 ರಿಂದ 2014 ರವರೆಗೆ ಕೇಂದ್ರ ಸರ್ಕಾರವು ವಿಪತ್ತು ನಿರ್ವಹಣೆಗಾಗಿ ಕೇರಳಕ್ಕೆ 1,342 ಕೋಟಿ ರೂಪಾಯಿಗಳನ್ನು ಒದಗಿಸಿದ್ದರೆ, ನರೇಂದ್ರ ಮೋದಿ ಜೀ 10 ವರ್ಷಗಳಲ್ಲಿ5,100 ಕೋಟಿ ರೂಪಾಯಿಗಳನ್ನು ಒದಗಿಸಿದ್ದಾರೆ ಎಂದು ಅವರು ಹೇಳಿದರು.

ಡಿಲಿಮಿಟೇಶನ್‌ ಕುರಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್‌ ಶಾ, ಡಿಲಿಮಿಟೇಶನ್‌ ಬಗ್ಗೆ ತಮಿಳುನಾಡಿನಲ್ಲಿ ಎದ್ದಿರುವ ಆತಂಕಗಳು ಆಧಾರರಹಿತವಾಗಿವೆ ಎಂದು ಹೇಳಿದರು. ರಾಜ್ಯದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರ, ಅರಾಜಕತೆ ಮತ್ತು ತಮ್ಮ ಮಗನನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಮುಖ್ಯಮಂತ್ರಿಯ ಉದ್ದೇಶದಿಂದ ತಮಿಳುನಾಡಿನ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದು ಈ ಆತಂಕಗಳನ್ನು ಎತ್ತುವ ಉದ್ದೇಶವಾಗಿದೆ ಎಂದು ಅವರು ಹೇಳಿದರು. 2027ರಲ್ಲಿಜನಗಣತಿ ಪೂರ್ಣಗೊಳ್ಳಲಿದೆ ಮತ್ತು ಅದರ ನಂತರವೇ ಡಿಲಿಮಿಟೇಶನ್‌ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಡಿಲಿಮಿಟೇಶನ್‌ ನಡೆದಾಗಲೆಲ್ಲಾ ದಕ್ಷಿಣದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲಎಂದು ದಕ್ಷಿಣ ರಾಜ್ಯಗಳ ಎಲ್ಲಾ ಮತದಾರರಿಗೆ ಭರವಸೆ ನೀಡಲು ಬಯಸುತ್ತೇನೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಇದು ದಕ್ಷಿಣ ರಾಜ್ಯಗಳ ಜನರಿಗೆ ನಮ್ಮ ಸರ್ಕಾರದ ಭರವಸೆಯಾಗಿದೆ.

ಸಂಸತ್ತಿನಲ್ಲಿಇತ್ತೀಚೆಗೆ ಪರಿಚಯಿಸಲಾದ ಸಂವಿಧಾನ (ನೂರ ಮೂವತ್ತನೇ ತಿದ್ದುಪಡಿ) ಮಸೂದೆ, 2025, ಕೇಂದ್ರಾಡಳಿತ ಪ್ರದೇಶ (ತಿದ್ದುಪಡಿ) ಮಸೂದೆ, 2025 ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ, 2025 ರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್‌ ಶಾ, ಜೈಲಿನಿಂದ ಸರ್ಕಾರವನ್ನು ನಡೆಸಲು ದೇಶದ ಜನರು ಮುಖ್ಯಮಂತ್ರಿಯನ್ನು ಬಯಸುತ್ತಾರೆಯೇ ಎಂದು ಪ್ರಶ್ನಿಸಿದರು. ಪ್ರಧಾನಿ ಜೈಲಿನಿಂದ ಆಡಳಿತ ನಡೆಸಬೇಕೆಂದು ಸಾರ್ವಜನಿಕರು ಬಯಸುತ್ತಾರೆಯೇ? ಇದು ನೈತಿಕತೆಯ ವಿಷಯವಾಗಿದೆ ಮತ್ತು ಸಂವಿಧಾನವನ್ನು ರಚಿಸಿದಾಗ, ಜೈಲಿನಲ್ಲಿದ್ದರೂ ರಾಜೀನಾಮೆ ನೀಡಲು ನಿರಾಕರಿಸುವ ವ್ಯಕ್ತಿಗಳನ್ನು ಯಾರೂ ಊಹಿಸಿರಲಿಲ್ಲ ಎಂದು ಅವರು ಹೇಳಿದರು. ಕಳೆದ 75 ವರ್ಷಗಳಲ್ಲಿ, ಹಲವಾರು ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ಜೈಲಿಗೆ ಹೋಗಿದ್ದಾರೆ, ಆದರೆ ಅವರೆಲ್ಲರೂ ಹಾಗೆ ಮಾಡುವ ಮೊದಲು ರಾಜೀನಾಮೆ ನೀಡಿದ್ದಾರೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಕೆಲವು ತಿಂಗಳ ಹಿಂದೆ, ಆಗಿನ ದೆಹಲಿ ಮುಖ್ಯಮಂತ್ರಿ ಜೈಲಿನಿಂದ ಸರ್ಕಾರವನ್ನು ನಡೆಸುವುದನ್ನು ಮುಂದುವರಿಸಿದರು ಎಂದು ಅವರು ಗಮನಸೆಳೆದರು. ಪ್ರಜಾಪ್ರಭುತ್ವದ ನೈತಿಕ ಮಾನದಂಡಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಆಡಳಿತ ಪಕ್ಷ  ಮತ್ತು ಪ್ರತಿಪಕ್ಷ ಗಳೆರಡೂ ಹಂಚಿಕೊಳ್ಳುತ್ತವೆ ಎಂದು ಶ್ರೀ ಅಮಿತ್‌ ಶಾ ಒತ್ತಿ ಹೇಳಿದರು.

ಎಸ್‌ಐಆರ್‌ (ವಿಶೇಷ ತೀವ್ರ ಪರಿಷ್ಕರಣೆ) ಕುರಿತ ಪ್ರಶ್ನೆಗೆ ಉತ್ತರಿಸಿದ ಶ್ರೀ ಅಮಿತ್‌ ಶಾ, ಯಾವುದೇ ಪಕ್ಷ  ಅಥವಾ ನಾಗರಿಕರಿಗೆ ಆಕ್ಷೇಪಣೆಗಳಿದ್ದರೆ, ಅವರು ಸಂಬಂಧಪಟ್ಟ ವಿಧಾನಸಭೆಯ ರಿಟರ್ನಿಂಗ್‌ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು ಎಂದು ಹೇಳಿದರು. ಅಲ್ಲಿತೃಪ್ತರಾಗದಿದ್ದರೆ, ಅವರು ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು ಮತ್ತು ಇನ್ನೂ ಅತೃಪ್ತಿ ಇದ್ದರೆ, ಅವರು ಮುಖ್ಯ ಚುನಾವಣಾ ಅಧಿಕಾರಿಯನ್ನು (ಸಿಇಒ) ಸಂಪರ್ಕಿಸಬಹುದು. ಈ ಉದ್ದೇಶಕ್ಕಾಗಿ ಮೂರು ಹಂತದ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ, ಪ್ರಮುಖ ವಿರೋಧ ಪಕ್ಷ ವು ಎಸ್‌ಐಆರ್‌ ಬಗ್ಗೆ ಒಂದೇ ಒಂದು ದೂರು ದಾಖಲಿಸಿಲ್ಲ ಎಂದು ಅವರು ಹೇಳಿದರು. ದೇಶಾದ್ಯಂತ ಎಸ್‌ಐಆರ್‌ಅನ್ನು ಜಾರಿಗೆ ತರಲು ಚುನಾವಣಾ ಆಯೋಗ ನಿರ್ಧರಿಸಿದೆ, ಇದು ವಾಡಿಕೆಯ ಪ್ರಕ್ರಿಯೆಯಾಗಿದೆ. ಬಿಹಾರದ ಮತದಾರರ ಪಟ್ಟಿಯಲ್ಲಿ22 ಲಕ್ಷ  ಜನರು ನಿಧನರಾಗಿದ್ದಾರೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಇದು ಅವರ ಹೆಸರುಗಳನ್ನು ಬಳಸಿಕೊಂಡು ಮೋಸದ ಮತದಾನದ ಸಾಧ್ಯತೆಯನ್ನು ಸೃಷ್ಟಿಸಿತು. ಅವರ ಹೆಸರುಗಳನ್ನು ತೆಗೆದುಹಾಕಬಾರದೇ? ಅವರು ಕೂಡ ಸಾರ್ವಜನಿಕರ ನಡುವೆ ಹೋಗಿ ಸಾಂವಿಧಾನಿಕ ಸಂಸ್ಥೆಗಳು ಮತ್ತು ದೇಶದ ಪ್ರಧಾನಿಯ ವಿರುದ್ಧ ಬಳಸುತ್ತಿರುವ ಭಾಷೆ ಸೂಕ್ತವಲ್ಲಎಂದು ವಿವರಿಸುತ್ತಾರೆ ಎಂದು ಅವರು ತಿಳಿಸಿದರು. ಈ ಪ್ರಕ್ರಿಯೆಯಲ್ಲಿಯಾವುದೇ ನ್ಯೂನತೆಗಳು ಕಂಡುಬಂದರೆ ತಮ್ಮ ಕಳವಳಗಳನ್ನು ಚುನಾವಣಾ ಆಯೋಗದ ಮುಂದೆ ಪ್ರಸ್ತುತಪಡಿಸುವಂತೆ ಅವರು ವಿರೋಧ ಪಕ್ಷ ಗಳಿಗೆ ಮನವಿ ಮಾಡಿದರು.

‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಮಾತನಾಡಿದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್‌ ಶಾ, ಇದು ಎಲ್ಲಾ ಪಕ್ಷಗಳಿಗೂ ಸಮಾನವಾಗಿ ಅನ್ವಯಿಸುತ್ತದೆ ಎಂದು ಹೇಳಿದರು. ಯಾವುದೇ ಆಕ್ಷೇಪಣೆಗಳು ಅಥವಾ ಸಮಸ್ಯೆಗಳಿದ್ದರೆ, ಅವುಗಳನ್ನು ಜಂಟಿ ಸಂಸದೀಯ ಸಮಿತಿಯಲ್ಲಿ(ಜೆಪಿಸಿ) ಎತ್ತಬಹುದು ಮತ್ತು ಚರ್ಚಿಸಬಹುದು ಎಂದು ಅವರು ಹೇಳಿದರು.

ಕಳೆದ ಆರು ವರ್ಷಗಳಿಂದ, ಮಣಿಪುರದಲ್ಲಿ ತಮ್ಮ ಪಕ್ಷ ದ ಸರ್ಕಾರ ಅಧಿಕಾರದಲ್ಲಿತ್ತು, ಈ ಸಮಯದಲ್ಲಿಯಾವುದೇ ಬಂದ್‌ಗಳು, ಮುಷ್ಕರಗಳು ಮತ್ತು ಜನಾಂಗೀಯ ಹಿಂಸಾಚಾರ ನಡೆದಿಲ್ಲಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಆದಾಗ್ಯೂ, ನ್ಯಾಯಾಲಯದ ತೀರ್ಪಿನಿಂದಾಗಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತು. ಪ್ರಮುಖ ವಿರೋಧ ಪಕ್ಷ ದ ಆಡಳಿತದ ಅವಧಿಯಲ್ಲಿ, ಇನ್ನೂ ಹೆಚ್ಚಿನ ಜನಾಂಗೀಯ ಹಿಂಸಾಚಾರ ಕಂಡುಬಂದಿದೆ, ಇದು ಪ್ರತಿ ಬಾರಿಯೂ ಒಂದು, ಒಂದೂವರೆ ಅಥವಾ ಎರಡೂವರೆ ವರ್ಷಗಳ ಕಾಲ ನಡೆಯಿತು ಎಂದು ಅವರು ಹೇಳಿದರು. ಈಗ ಅಲ್ಲಿ ಶಾಂತಿ ನೆಲೆಸಿದೆ. ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಎರಡೂ ಸಮುದಾಯಗಳೊಂದಿಗೆ ನಾಲ್ಕು ಪ್ರತ್ಯೇಕ ಸಭೆಗಳನ್ನು ನಡೆಸಿದೆ ಮತ್ತು ಜಂಟಿ ಸಭೆಯನ್ನು ಆಯೋಜಿಸಿದೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಶೀಘ್ರದಲ್ಲೇ ಸಹಜ ಸ್ಥಿತಿಗೆ ಮರಳಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಶಾಂತಿಯನ್ನು ಪುನಃಸ್ಥಾಪಿಸುವುದು ಅವರ ಮೊದಲ ಗುರಿಯಾಗಿದೆ, ಅದನ್ನು ಸಾಧಿಸಲಾಗಿದೆ ಎಂದು ಅವರು ಹೇಳಿದರು. ಮಣಿಪುರದಲ್ಲಿ ನಡೆದ ಹಿಂಸಾಚಾರಕ್ಕೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಅದು ಜನಾಂಗೀಯ ಹಿಂಸಾಚಾರವಾಗಿತ್ತು ಎಂದು ಅವರು ತಿಳಿಸಿದರು.

ಈಶಾನ್ಯದಲ್ಲಿ 20ಕ್ಕೂ ಹೆಚ್ಚು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದರ ಪರಿಣಾಮವಾಗಿ 10,000 ಜನರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಮರಳಿದ್ದಾರೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಶಸ್ತ್ರಾಸ್ತ್ರಗಳನ್ನು ಹೊಂದಿರುವವರೊಂದಿಗೆ ಮಾತುಕತೆ ಸಾಧ್ಯವಿಲ್ಲ ಎಂದು ಅವರು ಹೇಳಿದರು. ದಂಗೆಕೋರರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಂವಿಧಾನದ ಚೌಕಟ್ಟಿನೊಳಗೆ ಬಂದಾಗ ಮಾತ್ರ ಚರ್ಚೆಗಳು ನಡೆಯಬಹುದು, ಇದು ನಮ್ಮ ದೃಢ ನೀತಿಯಾಗಿದೆ ಎಂದು ತಿಳಿಸಿದರು.

ಮೂರು ಹೊಸ ಕ್ರಿಮಿನಲ್‌ ಕಾನೂನುಗಳ ಬಗ್ಗೆ ಮಾತನಾಡಿದ ಶ್ರೀ ಅಮಿತ್‌ ಶಾ, ಬ್ರಿಟಿಷ್‌ ಆಳ್ವಿಕೆಯಲ್ಲಿ ಮಾಡಿದ ಕಾನೂನುಗಳು ಭಾರತದಲ್ಲಿ ಬ್ರಿಟಿಷ್‌ ಸರ್ಕಾರವನ್ನು ಬಲಪಡಿಸುವ ಗುರಿಯನ್ನು ಹೊಂದಿದ್ದವು, ನಮ್ಮ ನಾಗರಿಕರ ಸುರಕ್ಷ ತೆಯನ್ನು ಖಚಿತಪಡಿಸಿಕೊಳ್ಳಲು ಅಲ್ಲಎಂದು ಹೇಳಿದರು. ಆದ್ದರಿಂದ, ಭಾರತೀಯ ದಂಡ ಸಂಹಿತೆಯನ್ನು ಈಗ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್‌) ಎಂದು ಮರುನಾಮಕರಣ ಮಾಡಲಾಗಿದೆ. ಈ ಮೂರು ಕಾನೂನುಗಳು ಸಂಪೂರ್ಣವಾಗಿ ಜಾರಿಗೆ ಬಂದಾಗ, ಭಾರತೀಯ ಅಪರಾಧ ನ್ಯಾಯ ವ್ಯವಸ್ಥೆಯು ವಿಶ್ವದ ಅತ್ಯಂತ ಆಧುನಿಕ ನ್ಯಾಯ ವ್ಯವಸ್ಥೆಯಾಗಲಿದೆ ಎಂದು ಅವರು ಹೇಳಿದರು. ಹೊಸ ಕಾನೂನುಗಳು ಮುಂಬರುವ ವರ್ಷಗಳಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಕಾನೂನು ವ್ಯಾಖ್ಯಾನಗಳನ್ನು ಒಳಗೊಂಡಿವೆ ಎಂದು ಗೃಹ ಸಚಿವರು ಹೇಳಿದರು. ಈಗ, ಇಡೀ ವಿಚಾರಣೆ ಪ್ರಕ್ರಿಯೆಯು ಆನ್‌ಲೈನ್‌ನಲ್ಲಿರಲಿದೆ, ಹಾಜರಾತಿಗಳು ಆನ್‌ಲೈನ್‌ನಲ್ಲಿರುತ್ತವೆ ಮತ್ತು ಎಫ್‌ಐಆರ್‌ ದಾಖಲಾದ ಮೂರು ವರ್ಷಗಳಲ್ಲಿನ್ಯಾಯವನ್ನು ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದು 21ನೇ ಶತಮಾನದ ಅತ್ಯಂತ ಮಹತ್ವದ ಸುಧಾರಣೆ ಎಂದು ಅವರು ಬಣ್ಣಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡಿದ ಶ್ರೀ ಅಮಿತ್‌ ಶಾ, ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಯಶಸ್ವಿ ಮುಖ್ಯಮಂತ್ರಿ, ಅತ್ಯಂತ ಯಶಸ್ವಿ ಪ್ರಧಾನಿ ಮತ್ತು ರಾಜ್ಯ ಮತ್ತು ರಾಷ್ಟ್ರದ ದೀರ್ಘಕಾಲ ಸೇವೆ ಸಲ್ಲಿಸಿದ ನಾಯಕ ಎಂದು ಹೇಳಿದರು. ಅವರು ನಿಸ್ವಾರ್ಥ ವ್ಯಕ್ತಿ ಮತ್ತು ಅತ್ಯುತ್ತಮ ಕೇಳುಗ. ರಾಜಕೀಯಕ್ಕಾಗಿ ಕುಟುಂಬ ಮತ್ತು ಮನೆಯನ್ನು ತ್ಯಜಿಸುವ ಮೂಲಕ ಮೋದಿ ಜೀ ರಾಷ್ಟ್ರದ ಸೇವೆಗೆ ಆದರ್ಶ ಉದಾಹರಣೆಯಾಗಿದ್ದಾರೆ ಎಂದು ಅವರು ಹೇಳಿದರು. ವಂಶಪಾರಂಪರ್ಯ ರಾಜಕಾರಣದ ಈ ಯುಗದಲ್ಲಿ, ನರೇಂದ್ರ ಮೋದಿ ಜೀ ಅವರ ಕುಟುಂಬ ಮತ್ತು ಅವರು ತಮ್ಮ ಜೀವನವನ್ನು ಹೇಗೆ ನಡೆಸುತ್ತಾರೆ ಎಂಬುದನ್ನು ಗಮನಿಸಿದ್ದೇನೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಸಾರ್ವಜನಿಕ ಜೀವನದ ಇಂತಹ ಕಠಿಣ ಮಾನದಂಡಗಳನ್ನು ಅನುಸರಿಸುವುದು ಅತ್ಯಂತ ಸವಾಲಿನ ಸಂಗತಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಗೆ ಯಾವುದೇ ವೈಯಕ್ತಿಕ ಕುಟುಂಬವಿಲ್ಲ. ಪ್ರತಿಯೊಬ್ಬರೂ ಅವರವರು, ಮತ್ತು ಭಾರತದ 140 ಕೋಟಿ ಜನರು ಅವರ ಕುಟುಂಬವಾಗಿದೆ ಎಂದು ಹೇಳಿದರು.

 

*****
 


(Release ID: 2159979)