ಪ್ರಧಾನ ಮಂತ್ರಿಯವರ ಕಛೇರಿ
ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ 5,200 ಕೋಟಿ ರೂ.ಗೂ ಅಧಿಕ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಶಂಕುಸ್ಥಾಪನೆ ಮತ್ತು ಉದ್ಘಾಟನೆ
ಕೋಲ್ಕತ್ತಾದಂತಹ ನಗರಗಳು ಭಾರತದ ಇತಿಹಾಸ ಮತ್ತು ಭವಿಷ್ಯ ಎರಡರ ಸಮೃದ್ಧ ಅಸ್ಮಿತೆಯ ಪ್ರತೀಕವಾಗಿವೆ: ಪ್ರಧಾನಮಂತ್ರಿ
ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಭಾರತ ಸಾಗುತ್ತಿರುವಾಗ, ದಮ್ ದಮ್ ಮತ್ತು ಕೋಲ್ಕತ್ತಾದಂತಹ ನಗರಗಳು ಈ ಪ್ರಯಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ: ಪ್ರಧಾನಮಂತ್ರಿ
21ನೇ ಶತಮಾನದ ಭಾರತಕ್ಕೆ 21ನೇ ಶತಮಾನದ ಸಾರಿಗೆ ವ್ಯವಸ್ಥೆ ಅಗತ್ಯ. ಆದ್ದರಿಂದ, ಇಂದು ದೇಶಾದ್ಯಂತ ರೈಲು, ರಸ್ತೆ, ಮೆಟ್ರೋ ಮತ್ತು ವಿಮಾನ ನಿಲ್ದಾಣಗಳಂತಹ ಆಧುನಿಕ ಸಾರಿಗೆ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ, ಸುಲಲಿತ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಅವುಗಳನ್ನು ಸಂಯೋಜಿಸಲಾಗುತ್ತಿದೆ: ಪ್ರಧಾನಮಂತ್ರಿ
Posted On:
22 AUG 2025 6:14PM by PIB Bengaluru
ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ₹5,200 ಕೋಟಿಗೂ ಹೆಚ್ಚು ಮೌಲ್ಯದ ಅನೇಕ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಮತ್ತೊಮ್ಮೆ ವೇಗ ನೀಡುವ ಅವಕಾಶ ದೊರೆತಿದೆ ಎಂದು ಹೇಳಿದರು. ನೋವಾಪಾರಾದಿಂದ ಜೈ ಹಿಂದ್ ವಿಮಾನ ನಿಲ್ದಾಣದವರೆಗಿನ ಕೋಲ್ಕತ್ತಾ ಮೆಟ್ರೋ ಪ್ರಯಾಣದ ತಮ್ಮ ಅನುಭವವನ್ನು ಹಂಚಿಕೊಂಡ ಶ್ರೀ ಮೋದಿ ಅವರು, ಈ ಭೇಟಿಯ ಸಮಯದಲ್ಲಿ ಅನೇಕ ಜನರೊಂದಿಗೆ ಸಂವಾದ ನಡೆಸಿದ್ದಾಗಿ ಮತ್ತು ಕೋಲ್ಕತ್ತಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಆಧುನೀಕರಣದ ಬಗ್ಗೆ ಪ್ರತಿಯೊಬ್ಬರೂ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಪ್ರಧಾನಮಂತ್ರಿ ಅವರು ಆರು-ಪಥಗಳ ಕಮರಿ ಕೋನಾ ಎಕ್ಸ್‌ಪ್ರೆಸ್‌ವೇಗೆ ಶಂಕುಸ್ಥಾಪನೆಯನ್ನು ಸಹ ನೆರವೇರಿಸಿದರು. ಈ ಬಹು-ಸಾವಿರ ಕೋಟಿ ರೂಪಾಯಿಗಳ ಯೋಜನೆಗಳಿಗಾಗಿ ಅವರು ಕೋಲ್ಕತ್ತಾದ ಜನರಿಗೆ ಮತ್ತು ಪಶ್ಚಿಮ ಬಂಗಾಳದ ಎಲ್ಲಾ ನಾಗರಿಕರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
"ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಸಾಗುತ್ತಿರುವಾಗ, ಕೋಲ್ಕತ್ತಾದಂತಹ ನಗರಗಳು ಭಾರತದ ಇತಿಹಾಸ ಮತ್ತು ಭವಿಷ್ಯ ಎರಡರ ಸಮೃದ್ಧ ಪ್ರತೀಕವಾಗಿವೆ. ಈ ಹಾದಿಯಲ್ಲಿ ದಮ್ ದಮ್ ಮತ್ತು ಕೋಲ್ಕತ್ತಾದಂತಹ ನಗರಗಳು ನಿರ್ಣಾಯಕ ಪಾತ್ರವನ್ನು ವಹಿಸಲಿವೆ" ಎಂದು ಶ್ರೀ ಮೋದಿ ಅವರು ಹೇಳಿದರು. ಇಂದಿನ ಕಾರ್ಯಕ್ರಮದ ಸಂದೇಶವು ಕೇವಲ ಮೆಟ್ರೋ ಉದ್ಘಾಟನೆ ಮತ್ತು ಹೆದ್ದಾರಿಯ ಶಂಕುಸ್ಥಾಪನೆಗೆ ಸೀಮಿತವಾಗಿಲ್ಲ ಎಂದು ಅವರು ತಿಳಿಸಿದರು. ಆಧುನಿಕ ಭಾರತವು ತನ್ನ ನಗರ ಪ್ರದೇಶಗಳನ್ನು ಹೇಗೆ ಪರಿವರ್ತಿಸುತ್ತಿದೆ ಎಂಬುದಕ್ಕೆ ಈ ಕಾರ್ಯಕ್ರಮವು ಒಂದು ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು. ಹಸಿರು ಸಾರಿಗೆಯನ್ನು ಉತ್ತೇಜಿಸಲು ಭಾರತದ ನಗರಗಳಾದ್ಯಂತ ಪ್ರಯತ್ನಗಳು ನಡೆಯುತ್ತಿದ್ದು, ಎಲೆಕ್ಟ್ರಿಕ್ ಚಾರ್ಜಿಂಗ್ ಕೇಂದ್ರಗಳು ಮತ್ತು ಎಲೆಕ್ಟ್ರಿಕ್ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. 'ತ್ಯಾಜ್ಯದಿಂದ ಸಂಪತ್ತು' ಉಪಕ್ರಮದ ಅಡಿಯಲ್ಲಿ, ನಗರಗಳು ಈಗ ನಗರದ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುತ್ತಿವೆ ಎಂದು ಅವರು ಮಾಹಿತಿ ನೀಡಿದರು. ಮೆಟ್ರೋ ಸೇವೆಗಳು ಮತ್ತು ಮೆಟ್ರೋ ಜಾಲಗಳು ವಿಸ್ತರಣೆಯಾಗುತ್ತಿರುವುದನ್ನು ಪ್ರಸ್ತಾಪಿಸಿದ ಶ್ರೀ ಮೋದಿ ಅವರು, ಭಾರತವು ಈಗ ವಿಶ್ವದ ಮೂರನೇ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. 2014ಕ್ಕಿಂತ ಮೊದಲು ದೇಶದಲ್ಲಿ ಕೇವಲ 250 ಕಿಲೋಮೀಟರ್ ಮೆಟ್ರೋ ಮಾರ್ಗಗಳಿದ್ದವು, ಆದರೆ ಇಂದು ಭಾರತದಲ್ಲಿ ಮೆಟ್ರೋ ಜಾಲವು 1,000 ಕಿಲೋಮೀಟರ್‌ಗಳಿಗೂ ಅಧಿಕವಾಗಿ ವಿಸ್ತರಿಸಿದೆ ಎಂದು ಅವರು ಗಮನಸೆಳೆದರು. ಕೋಲ್ಕತ್ತಾ ಕೂಡ ತನ್ನ ಮೆಟ್ರೋ ವ್ಯವಸ್ಥೆಯ ನಿರಂತರ ವಿಸ್ತರಣೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಕೋಲ್ಕತ್ತಾದ ಮೆಟ್ರೋ ರೈಲು ಜಾಲಕ್ಕೆ ಸುಮಾರು 14 ಕಿಲೋಮೀಟರ್‌ಗಳಷ್ಟು ಹೊಸ ಮಾರ್ಗಗಳನ್ನು ಸೇರಿಸಲಾಗುತ್ತಿದ್ದು, ಏಳು ಹೊಸ ನಿಲ್ದಾಣಗಳನ್ನು ಕೋಲ್ಕತ್ತಾ ಮೆಟ್ರೋಗೆ ಸಂಯೋಜಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು. ಈ ಎಲ್ಲಾ ಬೆಳವಣಿಗೆಗಳು ಕೋಲ್ಕತ್ತಾದ ಜನರ 'ಸುಗಮ ಜೀವನ' ಮತ್ತು 'ಸುಗಮ ಪ್ರಯಾಣ'ವನ್ನು ಹೆಚ್ಚಿಸಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
"21ನೇ ಶತಮಾನದ ಭಾರತಕ್ಕೆ 21ನೇ ಶತಮಾನದ ಸಾರಿಗೆ ವ್ಯವಸ್ಥೆಯ ಅಗತ್ಯವಿದೆ. ಆದ್ದರಿಂದ, ಇಂದು ದೇಶದಾದ್ಯಂತ ರೈಲ್ವೆ, ರಸ್ತೆ, ಮೆಟ್ರೋ ಮತ್ತು ವಿಮಾನ ನಿಲ್ದಾಣಗಳಂತಹ ಆಧುನಿಕ ಸಾರಿಗೆ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿ, ಪರಸ್ಪರ ಸಂಪರ್ಕಿಸಲಾಗುತ್ತಿದೆ" ಎಂದು ಶ್ರೀ ಮೋದಿ ಅವರು ಒತ್ತಿ ಹೇಳಿದರು. ಸರ್ಕಾರದ ಪ್ರಯತ್ನವು ಕೇವಲ ಒಂದು ನಗರವನ್ನು ಮತ್ತೊಂದು ನಗರಕ್ಕೆ ಸಂಪರ್ಕಿಸುವುದು ಮಾತ್ರವಲ್ಲ, ಜನರ ಮನೆಗಳ ಬಳಿ ಸುಗಮ ಸಾರಿಗೆ ಸಂಪರ್ಕವನ್ನು ಖಚಿತಪಡಿಸುವುದೂ ಆಗಿದೆ ಎಂದು ಅವರು ಹೇಳಿದರು. ಈ ದೃಷ್ಟಿಕೋನದ ಒಂದು ನೋಟವನ್ನು ಕೋಲ್ಕತ್ತಾದ ಬಹು-ಮಾದರಿ ಸಂಪರ್ಕ ವ್ಯವಸ್ಥೆಯಲ್ಲಿ ಕಾಣಬಹುದು ಎಂದು ಅವರು ಉಲ್ಲೇಖಿಸಿದರು. ದೇಶದ ಎರಡು ಅತ್ಯಂತ ಜನನಿಬಿಡ ರೈಲ್ವೆ ನಿಲ್ದಾಣಗಳಾದ ಹೌರಾ ಮತ್ತು ಸಿಯಾಲ್ಡಾ ಗಳು ಈಗ ಮೆಟ್ರೋ ಮೂಲಕ ಸಂಪರ್ಕ ಪಡೆದಿವೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು. ಹಿಂದೆ ಈ ನಿಲ್ದಾಣಗಳ ನಡುವಿನ ಪ್ರಯಾಣಕ್ಕೆ ಸುಮಾರು ಒಂದೂವರೆ ಗಂಟೆ ಬೇಕಾಗುತ್ತಿತ್ತು, ಆದರೆ ಈಗ ಮೆಟ್ರೋ ಮೂಲಕ ಕೆಲವೇ ನಿಮಿಷಗಳಲ್ಲಿ ತಲುಪಬಹುದು ಎಂದು ಅವರು ಹೇಳಿದರು. ಹೌರಾ ನಿಲ್ದಾಣದ ಸಬ್ ವೇ ಕೂಡ ಬಹು-ಮಾದರಿ ಸಂಪರ್ಕವನ್ನು ಖಚಿತಪಡಿಸುತ್ತಿದೆ ಎಂದು ಅವರು ಸೇರಿಸಿದರು. ಹಿಂದೆ, ಪೂರ್ವ ರೈಲ್ವೆ ಅಥವಾ ಆಗ್ನೇಯ ರೈಲ್ವೆಯ ರೈಲುಗಳನ್ನು ಹಿಡಿಯಲು ಪ್ರಯಾಣಿಕರು ದೀರ್ಘ ಬಳಸುದಾರಿಯನ್ನು ಬಳಸಬೇಕಾಗುತ್ತಿತ್ತು. ಆದರೆ, ಈ ಸಬ್ ವೇ ನಿರ್ಮಾಣದಿಂದ ನಿಲ್ದಾಣ ಬದಲಾವಣೆಯ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಶ್ರೀ ಮೋದಿ ಅವರು ಹೇಳಿದರು. ಕೋಲ್ಕತ್ತಾ ವಿಮಾನ ನಿಲ್ದಾಣವು ಈಗ ಮೆಟ್ರೋ ಜಾಲಕ್ಕೆ ಸಂಪರ್ಕಗೊಂಡಿದ್ದು, ಇದರಿಂದ ನಗರದ ದೂರದ ಭಾಗಗಳ ಜನರಿಗೆ ವಿಮಾನ ನಿಲ್ದಾಣವನ್ನು ತಲುಪುವುದು ಸುಲಭವಾಗಲಿದೆ ಎಂದು ಪ್ರಧಾನಮಂತ್ರಿ ಅವರು ಘೋಷಿಸಿದರು.
ಪಶ್ಚಿಮ ಬಂಗಾಳದ ಅಭಿವೃದ್ಧಿಗಾಗಿ ಭಾರತ ಸರ್ಕಾರವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರತಿಪಾದಿಸಿದ ಶ್ರೀ ಮೋದಿ ಅವರು, 100% ರೈಲ್ವೆ ವಿದ್ಯುದೀಕರಣವನ್ನು ಸಾಧಿಸಿದ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳವೂ ಒಂದಾಗಿದೆ ಎಂದು ಒತ್ತಿ ಹೇಳಿದರು. ಪುರುಲಿಯಾ ಮತ್ತು ಹೌರಾ ನಡುವಿನ ಮೆಮು (MEMU) ರೈಲಿಗಾಗಿ ಇದ್ದ ಬಹುಕಾಲದ ಬೇಡಿಕೆಯನ್ನು ಪ್ರಸ್ತಾಪಿಸಿದ ಅವರು, ಭಾರತ ಸರ್ಕಾರವು ಈ ಸಾರ್ವಜನಿಕ ಬೇಡಿಕೆಯನ್ನು ಈಡೇರಿಸಿದೆ ಎಂದು ದೃಢಪಡಿಸಿದರು. ಪ್ರಸ್ತುತ ಪಶ್ಚಿಮ ಬಂಗಾಳದ ವಿವಿಧ ಮಾರ್ಗಗಳಲ್ಲಿ ಒಂಬತ್ತು ವಂದೇ ಭಾರತ್ ರೈಲುಗಳು ಸಂಚರಿಸುತ್ತಿದ್ದು, ಇದರೊಂದಿಗೆ ರಾಜ್ಯದ ಜನರಿಗಾಗಿ ಎರಡು ಹೆಚ್ಚುವರಿ ಅಮೃತ್ ಭಾರತ್ ರೈಲುಗಳು ಕೂಡ ಸಂಚರಿಸುತ್ತಿವೆ ಎಂದು ಪ್ರಧಾನಮಂತ್ರಿಯವರು ಮಾಹಿತಿ ನೀಡಿದರು.
ಕಳೆದ 11 ವರ್ಷಗಳಲ್ಲಿ ಭಾರತ ಸರ್ಕಾರವು ಈ ಪ್ರದೇಶದಲ್ಲಿ ಹಲವಾರು ಪ್ರಮುಖ ಹೆದ್ದಾರಿ ಯೋಜನೆಗಳನ್ನು ಪೂರ್ಣಗೊಳಿಸಿದ್ದು, ಇನ್ನೂ ಅನೇಕ ಮೂಲಸೌಕರ್ಯ ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು. ಆರು ಪಥಗಳ ಕೋನಾ ಎಕ್ಸ್ ಪ್ರೆಸ್ ವೇ ಪೂರ್ಣಗೊಂಡ ನಂತರ, ಅದು ಬಂದರು ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸಲಿದೆ ಎಂದು ಅವರು ಹೇಳಿದರು. ಈ ವರ್ಧಿತ ಸಂಪರ್ಕವು ಕೋಲ್ಕತ್ತಾ ಮತ್ತು ಪಶ್ಚಿಮ ಬಂಗಾಳದ ಉತ್ತಮ ಭವಿಷ್ಯಕ್ಕೆ ಅಡಿಪಾಯವನ್ನು ಬಲಪಡಿಸುತ್ತದೆ ಎಂದು ಹೇಳುವ ಮೂಲಕ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಡಾ. ಸಿ.ವಿ. ಆನಂದ ಬೋಸ್, ಕೇಂದ್ರ ಸಚಿವರಾದ ಶ್ರೀ ಶಂತನು ಠಾಕೂರ್, ಶ್ರೀ ರವನೀತ್ ಸಿಂಗ್ ಬಿಟ್ಟು, ಡಾ. ಸುಕಾಂತ ಮಜುಂದಾರ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಹಿನ್ನೆಲೆ
ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಸುಧಾರಿತ ನಗರ ಸಂಪರ್ಕದ ಕುರಿತಾದ ತಮ್ಮ ಬದ್ಧತೆಗೆ ಅನುಗುಣವಾಗಿ, ಕೋಲ್ಕತ್ತಾದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೆಟ್ರೋ ರೈಲ್ವೆ ಯೋಜನೆಗಳನ್ನು ಉದ್ಘಾಟಿಸಿದರು. ಅವರು 13.61 ಕಿಲೋಮೀಟರ್ ಉದ್ದದ ಹೊಸದಾಗಿ ನಿರ್ಮಿಸಲಾದ ಮೆಟ್ರೋ ಜಾಲವನ್ನು ಉದ್ಘಾಟಿಸಿದರು ಮತ್ತು ಈ ಮಾರ್ಗಗಳಲ್ಲಿ ಮೆಟ್ರೋ ಸೇವೆಗಳನ್ನು ಪ್ರಾರಂಭಿಸಿದರು. ಅವರು ಜೆಸ್ಸೋರ್ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿಂದ ನೋವಾಪಾರಾ–ಜೈ ಹಿಂದ್ ಬಿಮಾನಬಂದರ್ ಮೆಟ್ರೋ ಸೇವೆಗೆ ಹಸಿರು ನಿಶಾನೆ ತೋರಿದರು. ಇದಲ್ಲದೆ, ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ಸೀಲ್ಡಾ–ಎಸ್ಪ್ಲಾನೇಡ್ ಮೆಟ್ರೋ ಸೇವೆ ಮತ್ತು ಬೆಲೆಘಾಟಾ–ಹೇಮಂತ ಮುಖೋಪಾಧ್ಯಾಯ ಮೆಟ್ರೋ ಸೇವೆಗೂ ಚಾಲನೆ ನೀಡಿದರು. ಅವರು ಜೆಸ್ಸೋರ್ ರಸ್ತೆ ಮೆಟ್ರೋ ನಿಲ್ದಾಣದಿಂದ ಜೈ ಹಿಂದ್ ಬಿಮಾನಬಂದರ್‌ಗೆ ಮೆಟ್ರೋ ಪ್ರಯಾಣವನ್ನು ಸಹ ಕೈಗೊಂಡರು.
ಸಾರ್ವಜನಿಕ ಕಾರ್ಯಕ್ರಮದಲ್ಲಿ, ಪ್ರಧಾನಮಂತ್ರಿ ಈ ಮೆಟ್ರೋ ವಿಭಾಗಗಳನ್ನು ಮತ್ತು ಹೌರಾ ಮೆಟ್ರೋ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಿಸಲಾದ ಸುರಂಗಮಾರ್ಗವನ್ನು ಉದ್ಘಾಟಿಸಿದರು. ನೋವಾಪಾರಾ–ಜೈ ಹಿಂದ್ ಬಿಮಾನಬಂದರ್ ಮೆಟ್ರೋ ಸೇವೆಯು ವಿಮಾನ ನಿಲ್ದಾಣಕ್ಕೆ ಪ್ರಯಾಣವನ್ನು ಗಣನೀಯವಾಗಿ ಸುಧಾರಿಸಲಿದೆ. ಸೀಲ್ಡಾ–ಎಸ್ಪ್ಲಾನೇಡ್ ಮೆಟ್ರೋ ಎರಡು ಸ್ಥಳಗಳ ನಡುವಿನ ಪ್ರಯಾಣದ ಸಮಯವನ್ನು ಸುಮಾರು 40 ನಿಮಿಷಗಳಿಂದ ಕೇವಲ 11 ನಿಮಿಷಗಳಿಗೆ ಕಡಿಮೆ ಮಾಡಲಿದೆ. ಬೆಲೆಘಾಟಾ–ಹೇಮಂತ ಮುಖೋಪಾಧ್ಯಾಯ ಮೆಟ್ರೋ ವಿಭಾಗವು ಐಟಿ ಕೇಂದ್ರದೊಂದಿಗಿನ ಸಂಪರ್ಕವನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಈ ಮೆಟ್ರೋ ಮಾರ್ಗಗಳು ಕೋಲ್ಕತ್ತಾದ ಕೆಲವು ಅತಿ ಹೆಚ್ಚು ಜನನಿಬಿಡ ಪ್ರದೇಶಗಳನ್ನು ಸಂಪರ್ಕಿಸಿ, ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಿ, ಮತ್ತು ಬಹು-ಮಾದರಿ ಸಂಪರ್ಕವನ್ನು ಬಲಪಡಿಸಿ, ಲಕ್ಷಾಂತರ ದೈನಂದಿನ ಪ್ರಯಾಣಿಕರಿಗೆ ಪ್ರಯೋಜನ ನೀಡಲಿವೆ.
ಪ್ರದೇಶದಲ್ಲಿನ ರಸ್ತೆ ಮೂಲಸೌಕರ್ಯಕ್ಕೆ ಒಂದು ಪ್ರಮುಖ ಉತ್ತೇಜನವಾಗಿ, ಪ್ರಧಾನಮಂತ್ರಿ ಅವರು ₹1,200 ಕೋಟಿಗೂ ಹೆಚ್ಚು ವೆಚ್ಚದ 7.2 ಕಿಲೋಮೀಟರ್ ಉದ್ದದ ಆರು-ಪಥಗಳ ಮೇಲ್ಸೇತುವೆಯ ಕೋನಾ ಎಕ್ಸ್ ಪ್ರೆಸ್ ವೇಗೆ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಇದು ಹೌರಾ, ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳು, ಮತ್ತು ಕೋಲ್ಕತ್ತಾ ನಡುವಿನ ಸಂಪರ್ಕವನ್ನು ಹೆಚ್ಚಿಸಲಿದೆ, ಇದು ಪ್ರಯಾಣದ ಗಂಟೆಗಟ್ಟಲೆ ಸಮಯವನ್ನು ಉಳಿತಾಯ ಮಾಡುವುದರ ಜೊತೆಗೆ, ಪ್ರದೇಶದಲ್ಲಿನ ವ್ಯಾಪಾರ, ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೆ ಗಣನೀಯ ಉತ್ತೇಜನ ನೀಡಲಿದೆ.
*****
(Release ID: 2159976)
Read this release in:
Malayalam
,
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu