ಪ್ರಧಾನ ಮಂತ್ರಿಯವರ ಕಛೇರಿ
ಬಿಹಾರದ ಗಯಾದಲ್ಲಿ 12,000 ಕೋಟಿ ರೂ. ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದರು
ಗಯಾಜಿಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯು ಪ್ರಾಚೀನ ಮತ್ತು ಶ್ರೀಮಂತವಾದುದು: ಪ್ರಧಾನಮಂತ್ರಿ
ಆಪರೇಷನ್ ಸಿಂಧೂರ ಭಾರತದ ರಕ್ಷಣಾ ಕಾರ್ಯತಂತ್ರದಲ್ಲಿ ಹೊಸ ಗೆರೆಯನ್ನು ಎಳೆದಿದೆ: ಪ್ರಧಾನಮಂತ್ರಿ
ಬಿಹಾರದ ತ್ವರಿತ ಅಭಿವೃದ್ಧಿ ಕೇಂದ್ರದ ಎನ್ ಡಿ ಎ ಸರ್ಕಾರಕ್ಕೆ ಪ್ರಮುಖ ಆದ್ಯತೆಯಾಗಿದೆ: ಪ್ರಧಾನಮಂತ್ರಿ
ಪ್ರತಿಯೊಬ್ಬ ನುಸುಳುಕೋರರನ್ನು ಮುಲಾಜಿಲ್ಲದೆ ದೇಶದಿಂದ ಹೊರಹಾಕಲಾಗುವುದು: ಪ್ರಧಾನಮಂತ್ರಿ
Posted On:
22 AUG 2025 1:52PM by PIB Bengaluru
ಬಿಹಾರದ ಗಯಾದಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 12,000 ಕೋಟಿ ರೂ. ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು. ಜ್ಞಾನ ಮತ್ತು ಮೋಕ್ಷದ ಪವಿತ್ರ ನಗರವಾದ ಗಯಾಕ್ಕೆ ಪ್ರಧಾನಿಯವರು ನಮನ ಸಲ್ಲಿಸಿದರು ಮತ್ತು ವಿಷ್ಣುಪಾದ ಮಂದಿರದ ಅದ್ಭುತ ಭೂಮಿಯಿಂದ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು. ಗಯಾ ಆಧ್ಯಾತ್ಮಿಕತೆ ಮತ್ತು ಶಾಂತಿಯ ಭೂಮಿ ಎಂದು ಶ್ರೀ ಮೋದಿ ಹೇಳಿದರು. ಭಗವಾನ್ ಬುದ್ಧ ಜ್ಞಾನೋದಯವನ್ನು ಪಡೆದದ್ದು ಈ ಪುಣ್ಯಭೂಮಿಯಲ್ಲಿ ಎಂದು ಅವರು ಹೇಳಿದರು. "ಗಯಾ ಪ್ರಾಚೀನ ಮತ್ತು ಅತ್ಯಂತ ಶ್ರೀಮಂತ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ" ಎಂದು ಶ್ರೀ ಮೋದಿ ಹೇಳಿದರು. ಈ ಪ್ರದೇಶದ ಜನರು ನಗರವನ್ನು "ಗಯಾ" ಎಂದು ಮಾತ್ರ ಕರೆಯಬಾರದು, ಬದಲಿಗೆ ಗೌರವಯುತವಾಗಿ "ಗಯಾಜಿ" ಎಂದು ಕರೆಯಬೇಕೆಂದು ಬಯಸುತ್ತಾರೆ ಎಂದು ಹೇಳಿದ ಪ್ರಧಾನಿ, ಈ ಭಾವನೆಯನ್ನು ಗೌರವಿಸಿದ್ದಕ್ಕಾಗಿ ಬಿಹಾರ ಸರ್ಕಾರವನ್ನು ಅಭಿನಂದಿಸಿದರು. ಗಯಾದ ತ್ವರಿತ ಅಭಿವೃದ್ಧಿಗಾಗಿ ಕೇಂದ್ರ ಮತ್ತು ಬಿಹಾರದಲ್ಲಿರುವ ತಮ್ಮ ಸರ್ಕಾರಗಳು ನಿರಂತರ ಪ್ರಯತ್ನಗಳನ್ನು ಮಾಡುತ್ತಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು.
ಇಂದು ಪವಿತ್ರ ಗಯಾಜಿ ಭೂಮಿಯಿಂದ ಒಂದೇ ದಿನದಲ್ಲಿ ₹12,000 ಕೋಟಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಶಂಕುಸ್ಥಾಪನೆ ಮಾಡಲಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಈ ಯೋಜನೆಗಳು ಇಂಧನ, ಆರೋಗ್ಯ ಮತ್ತು ನಗರಾಭಿವೃದ್ಧಿ ಸೇರಿದಂತೆ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿವೆ ಎಂದು ಹೇಳಿದರು. ಈ ಉಪಕ್ರಮಗಳು ಬಿಹಾರದ ಕೈಗಾರಿಕಾ ಸಾಮರ್ಥ್ಯವನ್ನು ಬಲಪಡಿಸುತ್ತವೆ ಮತ್ತು ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಅವರು ಹೇಳಿದರು ಮತ್ತು ಈ ಪರಿವರ್ತನಾತ್ಮಕ ಯೋಜನೆಗಳಿಗಾಗಿ ಬಿಹಾರದ ಜನರನ್ನು ಅಭಿನಂದಿಸಿದರು. ರಾಜ್ಯದಲ್ಲಿ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಲು ಇಂದು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು. ಇದರೊಂದಿಗೆ ಬಿಹಾರದ ಜನರು ಈಗ ಕ್ಯಾನ್ಸರ್ ಚಿಕಿತ್ಸೆಗೆ ಹೆಚ್ಚುವರಿ ಸೌಲಭ್ಯವನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು.
ಬಡವರ ಜೀವನದಿಂದ ಕಷ್ಟಗಳನ್ನು ನಿವಾರಿಸುವುದು ಮತ್ತು ಮಹಿಳೆಯರ ಜೀವನವನ್ನು ಸುಲಭಗೊಳಿಸುವುದು ಸಾರ್ವಜನಿಕ ಸೇವಕನಾಗಿ ತಮಗೆ ಅತ್ಯಂತ ತೃಪ್ತಿಯನ್ನು ನೀಡುತ್ತದೆ ಎಂದು ಹೇಳಿದ ಪ್ರಧಾನಿ, ಬಡವರಿಗೆ ಪಕ್ಕಾ ಮನೆಗಳನ್ನು ಒದಗಿಸುವುದು ತಮ್ಮ ಪ್ರಮುಖ ಬದ್ಧತೆಗಳಲ್ಲಿ ಒಂದಾಗಿದೆ ಎಂದು ಪುನರುಚ್ಚರಿಸಿದರು. ಪ್ರತಿಯೊಬ್ಬ ನಿರ್ಗತಿಕ ವ್ಯಕ್ತಿಗೂ ಪಕ್ಕಾ ಮನೆ ಸಿಗುವವರೆಗೂ ತಾವು ವಿಶ್ರಮಿಸುವುದಿಲ್ಲ ಎಂದು ಅವರು ಘೋಷಿಸಿದರು. ಈ ಸಂಕಲ್ಪದಡಿಯಲ್ಲಿ ಕಳೆದ 11 ವರ್ಷಗಳಲ್ಲಿ ದೇಶಾದ್ಯಂತ ಬಡವರಿಗಾಗಿ 4 ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಬಿಹಾರವೊಂದರಲ್ಲೇ 38 ಲಕ್ಷಕ್ಕೂ ಹೆಚ್ಚು ಮನೆಗಳ ನಿರ್ಮಾಣ ಮಾಡಲಾಗಿದೆ ಮತ್ತು ಗಯಾ ಜಿಲ್ಲೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಸ್ವಂತ ಪಕ್ಕಾ ಮನೆಗಳನ್ನು ಪಡೆದಿವೆ ಎಂದು ಹೇಳಿದ ಶ್ರೀ ಮೋದಿ, ಇವು ಕೇವಲ ಮನೆಗಳಲ್ಲ, ಬಡವರ ಘನತೆಯ ಸಂಕೇತಗಳಾಗಿವೆ ಎಂದು ಒತ್ತಿ ಹೇಳಿದರು. ಈ ಮನೆಗಳಲ್ಲಿ ವಿದ್ಯುತ್, ನೀರು, ಶೌಚಾಲಯ ಮತ್ತು ಅನಿಲ ಸಂಪರ್ಕದ ಸೌಲಭ್ಯಗಳಿವೆ - ಬಡ ಕುಟುಂಬಗಳು ಸಹ ಸೌಕರ್ಯ, ಭದ್ರತೆ ಮತ್ತು ಘನತೆಯಿಂದ ಬದುಕುವುದನ್ನು ಖಚಿತಪಡಿಸುತ್ತವೆ ಎಂದು ಅವರು ಹೇಳಿದರು.
ಈ ಉಪಕ್ರಮವನ್ನು ಮುಂದುವರೆಸುತ್ತಾ, ಬಿಹಾರದ ಮಗಧ ಪ್ರದೇಶದಲ್ಲಿ 16,000 ಕ್ಕೂ ಹೆಚ್ಚು ಕುಟುಂಬಗಳು ಈಗ ಸ್ವಂತ ಪಕ್ಕಾ ಮನೆಗಳನ್ನು ಪಡೆದಿವೆ ಎಂದು ಪ್ರಧಾನಿ ಹೇಳಿದರು. ಈ ವರ್ಷ, ಈ ಮನೆಗಳಲ್ಲಿ ದೀಪಾವಳಿ ಮತ್ತು ಛತ್ ಪೂಜಾ ಆಚರಣೆಗಳು ಇನ್ನಷ್ಟು ಉತ್ಸಾಹಭರಿತವಾಗಿರುತ್ತವೆ ಎಂದು ಅವರು ಹೇಳಿದರು. ಮನೆಗಳನ್ನು ಪಡೆದ ಎಲ್ಲಾ ಫಲಾನುಭವಿ ಕುಟುಂಬಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ ಶ್ರೀ ಮೋದಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಇನ್ನೂ ಪ್ರಯೋಜನಗಳಿಗಾಗಿ ಕಾಯುತ್ತಿರುವವರಿಗೆ ಪ್ರತಿಯೊಬ್ಬ ಬಡ ನಾಗರಿಕನಿಗೆ ಪಕ್ಕಾ ಮನೆ ಸಿಗುವವರೆಗೆ ಅಭಿಯಾನ ಮುಂದುವರಿಯುತ್ತದೆ ಎಂದು ಭರವಸೆ ನೀಡಿದರು.
"ಬಿಹಾರವು ಚಂದ್ರಗುಪ್ತ ಮೌರ್ಯ ಮತ್ತು ಚಾಣಕ್ಯನ ನಾಡು. ಭಾರತ ತನ್ನ ಶತ್ರುಗಳಿಂದ ಸವಾಲುಗಳನ್ನು ಎದುರಿಸಿದಾಗಲೆಲ್ಲಾ ಬಿಹಾರ ರಾಷ್ಟ್ರದ ಗುರಾಣಿಯಾಗಿ ನಿಂತಿದೆ" ಎಂದು ಶ್ರೀ ಮೋದಿ ಹೇಳಿದರು. ಬಿಹಾರದ ನೆಲದಲ್ಲಿ ತೆಗೆದುಕೊಂಡ ಯಾವುದೇ ಸಂಕಲ್ಪ ಎಂದಿಗೂ ಈಡೇರದೆ ಹೋಗುವುದಿಲ್ಲ ಎಂದು ಒತ್ತಿ ಹೇಳಿದರು. ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿ, ಅಮಾಯಕ ನಾಗರಿಕರನ್ನು ಅವರ ಧರ್ಮವನ್ನು ಕೇಳಿ ಕೊಲ್ಲಲಾಯಿತು ಎಂದ ಪ್ರಧಾನಿಯವರು, ಭಯೋತ್ಪಾದನೆಯನ್ನು ತೊಡೆದುಹಾಕಲು ಪ್ರತಿಜ್ಞೆ ಮಾಡಿದ್ದು ಬಿಹಾರದ ನೆಲದಿಂದಲೇ ಎಂದು ನೆನಪಿಸಿಕೊಂಡರು. ಇಂದು, ಬಿಹಾರದ ನೆಲದಲ್ಲಿ ತೆಗೆದುಕೊಂಡ ಆ ಸಂಕಲ್ಪದ ಈಡೇರಿಕೆಗೆ ಜಗತ್ತು ಸಾಕ್ಷಿಯಾಗುತ್ತಿದೆ ಎಂದು ಅವರು ಹೇಳಿದರು. ಪಾಕಿಸ್ತಾನವು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದ್ದರೆ, ಭಾರತವು ಆ ಕ್ಷಿಪಣಿಗಳನ್ನು ಗಾಳಿಯಲ್ಲಿಯೇ ತಡೆದು ತರಗೆಲೆಗಳಂತೆ ನಾಶಮಾಡಿತು ಎಂದು ಶ್ರೀ ಮೋದಿ ರಾಷ್ಟ್ರಕ್ಕೆ ನೆನಪಿಸಿದರು. ಪಾಕಿಸ್ತಾನದ ಒಂದೇ ಒಂದು ಕ್ಷಿಪಣಿಯೂ ಭಾರತಕ್ಕೆ ಹಾನಿ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ದೃಢಪಡಿಸಿದರು.
"ಆಪರೇಷನ್ ಸಿಂಧೂರವು ಭಾರತದ ರಕ್ಷಣಾ ಕಾರ್ಯತಂತ್ರದಲ್ಲಿ ಹೊಸ ರೇಖೆಯನ್ನು ಎಳೆದಿದೆ" ಎಂದು ಶ್ರೀ ಮೋದಿ ಹೇಳಿದರು, ಈಗ ಭಯೋತ್ಪಾದಕರನ್ನು ಭಾರತದೊಳಗೆ ಕಳುಹಿಸಿದ ನಂತರ ಅಥವಾ ದಾಳಿಗಳನ್ನು ನಡೆಸಿದ ನಂತರ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು. ಭಯೋತ್ಪಾದಕರು ಪಾತಾಳದಲ್ಲಿ ಅಡಗಿಕೊಂಡರೂ, ಭಾರತದ ಕ್ಷಿಪಣಿಗಳು ಅವರನ್ನು ಅಲ್ಲಿಯೇ ಸಮಾಧಿ ಮಾಡುತ್ತವೆ ಎಂದು ಅವರು ಹೇಳಿದರು.
"ಬಿಹಾರದ ತ್ವರಿತ ಅಭಿವೃದ್ಧಿ ಕೇಂದ್ರದ ಎನ್ ಡಿ ಎ ಸರ್ಕಾರಕ್ಕೆ ಪ್ರಮುಖ ಆದ್ಯತೆಯಾಗಿದೆ" ಎಂದು ಪ್ರಧಾನಿ ಒತ್ತಿ ಹೇಳಿದರು, ಬಿಹಾರ ಈಗ ಸಮಗ್ರ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ ಎಂದು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ, ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲಾಗಿದೆ ಮತ್ತು ಪ್ರಗತಿಗೆ ಹೊಸ ಮಾರ್ಗಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು. "ಲಾಟೀನು ಆಳ್ವಿಕೆ"ಯ ಸಮಯದಲ್ಲಿನ ಭೀಕರ ಪರಿಸ್ಥಿತಿಗಳನ್ನು ನೆನಪಿಸಿಕೊಂಡ ಶ್ರೀ ಮೋದಿ, ಆ ಅವಧಿಯಲ್ಲಿ, ಈ ಪ್ರದೇಶವು ಕೆಂಪು ಭಯೋತ್ಪಾದನೆಯಿಂದ ಆವರಿಸಲ್ಪಟ್ಟಿತ್ತು ಮತ್ತು ಮಾವೋವಾದಿ ಚಟುವಟಿಕೆಗಳಿಂದಾಗಿ, ಸೂರ್ಯಾಸ್ತದ ನಂತರ ಓಡಾಡುವುದು ಅತ್ಯಂತ ಕಷ್ಟಕರವಾಗಿತ್ತು ಎಂದು ಹೇಳಿದರು. ಗಯಾಜಿಯಂತಹ ನಗರಗಳು ಲಾಟೀನು ಆಳ್ವಿಕೆಯ ಅಡಿಯಲ್ಲಿ ಕತ್ತಲೆಯಲ್ಲಿ ಮುಳುಗಿದ್ದವು ಎಂದು ಅವರು ಹೇಳಿದರು. ಸಾವಿರಾರು ಹಳ್ಳಿಗಳಿಗೆ ವಿದ್ಯುತ್ ಕಂಬಗಳಂತಹ ಮೂಲಭೂತ ಮೂಲಸೌಕರ್ಯವೂ ಇರಲಿಲ್ಲ ಎಂದು ಪ್ರಧಾನಿ ಗಮನಸೆಳೆದರು. ಲಾಟೀನು ಯುಗದಲ್ಲಿ ಆಡಳಿತ ನಡೆಸಿದವರು ಬಿಹಾರದ ಭವಿಷ್ಯವನ್ನು ಕತ್ತಲೆಗೆ ತಳ್ಳಿದರು. ಶಿಕ್ಷಣ ಅಥವಾ ಉದ್ಯೋಗವಿಲ್ಲದ ಪರಿಸ್ಥಿತಿಗಳಿಂದಾಗಿ ಅನೇಕ ತಲೆಮಾರುಗಳ ಬಿಹಾರಿಗಳು ವಲಸೆ ಹೋಗಬೇಕಾಯಿತು ಎಂದು ಅವರು ಒತ್ತಿ ಹೇಳಿದರು.
ವಿರೋಧ ಪಕ್ಷ ಮತ್ತು ಅದರ ಮಿತ್ರಪಕ್ಷಗಳು ಬಿಹಾರದ ಜನರನ್ನು ಕೇವಲ ಮತ ಬ್ಯಾಂಕ್ ಆಗಿ ಪರಿಗಣಿಸುತ್ತವೆ ಎಂದು ಶ್ರೀ ಮೋದಿ ಹೇಳಿದರು. ಬಡವರ ಸುಖ-ದುಃಖಗಳ ಬಗ್ಗೆಯಾಗಲಿ ಅಥವಾ ಅವರ ಘನತೆಯ ಬಗ್ಗೆಯಾಗಲಿ ಅವರಿಗೆ ಕಾಳಜಿ ಇಲ್ಲ ಎಂದು ಅವರು ಹೇಳಿದರು. ಒಂದು ಪಕ್ಷದ ಮಾಜಿ ಮುಖ್ಯಮಂತ್ರಿಯೊಬ್ಬರು ಬಿಹಾರದ ಜನರನ್ನು ತಮ್ಮ ರಾಜ್ಯಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಒಮ್ಮೆ ವೇದಿಕೆಯಿಂದ ಸಾರ್ವಜನಿಕವಾಗಿ ಘೋಷಿಸಿದ್ದರು ಎಂದು ಪ್ರಧಾನಿ ನೆನಪಿಸಿದರು. ಅಂತಹ ನಾಯಕರು ಬಿಹಾರದ ಜನರ ಬಗ್ಗೆ ಹೊಂದಿರುವ ಆಳವಾದ ದ್ವೇಷ ಮತ್ತು ತಿರಸ್ಕಾರವನ್ನು ಬಲವಾಗಿ ಟೀಕಿಸಿದ ಶ್ರೀ ಮೋದಿ, ಇಂತಹ ದೌರ್ಜನ್ಯವನ್ನು ಕಂಡರೂ ವಿರೋಧ ಪಕ್ಷದ ನಾಯಕತ್ವ ಗಾಢ ನಿದ್ರೆಯಲ್ಲಿತ್ತು ಎಂದು ಹೇಳಿದರು.
ವಿರೋಧ ಪಕ್ಷಗಳ ಮೈತ್ರಿಕೂಟಗಳ ವಿಭಜನಾ ಅಭಿಯಾನಕ್ಕೆ ಪ್ರಸ್ತುತ ಬಿಹಾರ ಸರ್ಕಾರ ಪ್ರತಿಕ್ರಿಯಿಸುತ್ತಿದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದರು. ಬಿಹಾರದ ಪುತ್ರರು ಮತ್ತು ಪುತ್ರಿಯರಿಗೆ ರಾಜ್ಯದೊಳಗೆ ಉದ್ಯೋಗ ಸಿಗುವಂತೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ, ಬಿಹಾರದಾದ್ಯಂತ ಪ್ರಮುಖ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಗಯಾಜಿ ಜಿಲ್ಲೆಯ ದೋಭಿಯಲ್ಲಿ ಬಿಹಾರದ ಅತಿದೊಡ್ಡ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಲಾಗುತ್ತಿದೆ ಮತ್ತು ಗಯಾಜಿಯಲ್ಲಿ ತಂತ್ರಜ್ಞಾನ ಕೇಂದ್ರವನ್ನು ಸಹ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು. ಇಂದು ನಡೆದ ಬಕ್ಸಾರ್ ಉಷ್ಣ ವಿದ್ಯುತ್ ಸ್ಥಾವರ ಉದ್ಘಾಟನೆಯನ್ನು ಸಹ ಅವರು ಉಲ್ಲೇಖಿಸಿದರು. ಕೆಲವು ತಿಂಗಳ ಹಿಂದೆ ಔರಂಗಾಬಾದ್ ನ ನಬಿನಗರ ಸೂಪರ್ ಉಷ್ಣ ವಿದ್ಯುತ್ ಯೋಜನೆಗೆ ಅಡಿಪಾಯವನ್ನು ಹಾಕಿದ್ದನ್ನು ನೆನಪಿಸಿಕೊಂಡ ಶ್ರೀ ಮೋದಿ, ಭಾಗಲ್ಪುರದ ಪಿರಪೈಂತಿಯಲ್ಲಿ ಹೊಸ ಉಷ್ಣ ವಿದ್ಯುತ್ ಸ್ಥಾವರವನ್ನು ನಿರ್ಮಿಸಲಾಗುವುದು. ಈ ವಿದ್ಯುತ್ ಸ್ಥಾವರಗಳು ಬಿಹಾರದಲ್ಲಿ ವಿದ್ಯುತ್ ಪೂರೈಕೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ ಎಂದು ಅವರು ಹೇಳಿದರು. ಹೆಚ್ಚಿನ ವಿದ್ಯುತ್ ಉತ್ಪಾದನೆಯು ಮನೆಗಳಿಗೆ ವಿದ್ಯುತ್ ಲಭ್ಯತೆಯನ್ನು ಸುಧಾರಿಸುತ್ತದೆ ಮತ್ತು ಕೈಗಾರಿಕೆಗಳಿಗೆ ಪೂರೈಕೆಯನ್ನು ಹೆಚ್ಚಿಸುತ್ತದೆ. ಇಂಧನ ಮೂಲಸೌಕರ್ಯದಲ್ಲಿನ ಈ ವಿಸ್ತರಣೆಯು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.
ಬಿಹಾರದ ಯುವಜನರಿಗೆ ಶಾಶ್ವತ ಸರ್ಕಾರಿ ಉದ್ಯೋಗಗಳನ್ನು ಒದಗಿಸಲು ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಅವರು ಪ್ರಮುಖ ಅಭಿಯಾನವನ್ನು ಪ್ರಾರಂಭಿಸಿದ್ದಾರೆ ಎಂದು ಶ್ರೀ ಮೋದಿ ಹೇಳಿದರು. ಶ್ರೀ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ಸಂಪೂರ್ಣ ಪಾರದರ್ಶಕತೆಯಿಂದ ನಡೆದಿದೆ ಎಂದು ಅವರು ಹೇಳಿದರು. ಬಿಹಾರದ ಗರಿಷ್ಠ ಸಂಖ್ಯೆಯ ಯುವಜನರು ಉದ್ಯೋಗಕ್ಕಾಗಿ ವಲಸೆ ಹೋಗದೆ ರಾಜ್ಯದಲ್ಲೇ ಉದ್ಯೋಗ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಕೇಂದ್ರ ಸರ್ಕಾರದ ಹೊಸ ಉಪಕ್ರಮವು ಈ ಗುರಿಯನ್ನು ಸಾಧಿಸಲು ಗಣನೀಯವಾಗಿ ಕೊಡುಗೆ ನೀಡುತ್ತದೆ ಎಂದು ಹೇಳಿದ ಪ್ರಧಾನಿ, ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆಯನ್ನು ಘೋಷಿಸಿರುವುದಾಗಿ ಹೇಳಿದರು. ಈ ಯೋಜನೆಯಡಿಯಲ್ಲಿ, ಯುವಕನೊಬ್ಬ ಖಾಸಗಿ ವಲಯದಲ್ಲಿ ತನ್ನ ಮೊದಲ ಉದ್ಯೋಗವನ್ನು ಆರಂಭಿಸಿದಾಗ, ಕೇಂದ್ರ ಸರ್ಕಾರವು ನೇರವಾಗಿ ಅವನಿಗೆ ₹ 15,000 ನೀಡುತ್ತದೆ. ಯುವಕರನ್ನು ನೇಮಿಸಿಕೊಳ್ಳುವ ಖಾಸಗಿ ಕಂಪನಿಗಳು ಸಹ ಆರ್ಥಿಕ ಸಹಾಯವನ್ನು ಪಡೆಯುತ್ತವೆ ಎಂದು ಅವರು ಹೇಳಿದರು. ಬಿಹಾರದ ಯುವಜನರು ಈ ಯೋಜನೆಯಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ ಎಂದು ಪ್ರಧಾನಿ ಹೇಳಿದರು.
ವಿರೋಧ ಪಕ್ಷಗಳು ಮತ್ತು ಅವರ ಸರ್ಕಾರಗಳು ಸಾರ್ವಜನಿಕ ಹಣಕ್ಕೆ ಬೆಲೆ ಕೊಡುವುದಿಲ್ಲ ಎಂದು ಆರೋಪಿಸಿದ ಶ್ರೀ ಮೋದಿ, ಸಾರ್ವಜನಿಕ ಹಣವು ಅವರ ಖಜಾನೆಯನ್ನು ತುಂಬುವ ಒಂದು ಸಾಧನವಾಗಿದೆ ಎಂದು ಹೇಳಿದರು. ವಿರೋಧ ಪಕ್ಷದ ಆಳ್ವಿಕೆಯಲ್ಲಿ, ಯೋಜನೆಗಳು ವರ್ಷಗಳ ಕಾಲ ಅಪೂರ್ಣವಾಗಿದ್ದವು ಎಂದು ಅವರು ಒತ್ತಿ ಹೇಳಿದರು. ಒಂದು ಯೋಜನೆಯಲ್ಲಿ ವಿಳಂಬವಾದಷ್ಟೂ, ಅವರು ಅದರಿಂದ ಹೆಚ್ಚು ಹಣವನ್ನು ಗಳಿಸುತ್ತಿದ್ದರು. ತಮ್ಮ ಸರ್ಕಾರವು ಈ ದೋಷಪೂರಿತ ಮನೋಭಾವವನ್ನು ಬದಲಾಯಿಸಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಶಿಲಾನ್ಯಾಸ ಮಾಡಿದ ನಂತರ, ಕೆಲಸವನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಇಂದಿನ ಕಾರ್ಯಕ್ರಮವನ್ನು ಈ ವಿಧಾನದ ಉದಾಹರಣೆಯಾಗಿ ಉಲ್ಲೇಖಿಸಿದ ಶ್ರೀ ಮೋದಿ, ತಾವು ಶಿಲಾನ್ಯಾಸ ಮಾಡಿದ ಔಂಥಾ-ಸಿಮಾರಿಯಾ ವಿಭಾಗವನ್ನು ಈಗ ತಾವೇ ಉದ್ಘಾಟಿಸುತ್ತಿರುವುದನ್ನು ನೆನಪಿಸಿಕೊಂಡರು. ಈ ಸೇತುವೆಯು ರಸ್ತೆಗಳನ್ನು ಸಂಪರ್ಕಿಸುವುದಲ್ಲದೆ ಉತ್ತರ ಮತ್ತು ದಕ್ಷಿಣ ಬಿಹಾರವನ್ನು ಸಹ ಸಂಪರ್ಕಿಸುತ್ತದೆ ಎಂದು ಅವರು ಹೇಳಿದರು. ಈ ಹಿಂದೆ ಗಾಂಧಿ ಸೇತು ಮೂಲಕ 150 ಕಿ.ಮೀ. ಪರ್ಯಾಯ ಮಾರ್ಗವನ್ನು ತೆಗೆದುಕೊಳ್ಳಬೇಕಾಗಿದ್ದ ಭಾರೀ ವಾಹನಗಳು ಈಗ ನೇರ ಮಾರ್ಗವನ್ನು ಪಡೆಯಲಿವೆ ಎಂದು ಅವರು ಹೇಳಿದರು. ಇದು ವ್ಯಾಪಾರವನ್ನು ಉತ್ತೇಜಿಸುತ್ತದೆ, ಕೈಗಾರಿಕೆಗಳನ್ನು ಬಲಪಡಿಸುತ್ತದೆ ಮತ್ತು ಯಾತ್ರಾರ್ಥಿಗಳಿಗೆ ಪ್ರಯಾಣವನ್ನು ಸುಲಭಗೊಳಿಸುತ್ತದೆ ಎಂದು ಪ್ರಧಾನಿ ಹೇಳಿದರು. ತಮ್ಮ ಸರ್ಕಾರದ ಅಡಿಯಲ್ಲಿ ಪ್ರಾರಂಭಿಸಲಾದ ಅಭಿವೃದ್ಧಿ ಯೋಜನೆಗಳು ಪೂರ್ಣಗೊಳ್ಳುತ್ತವೆ, ಅದು ಖಚಿತ ಎಂದು ಅವರು ಹೇಳಿದರು.
ಬಿಹಾರದಲ್ಲಿ ರೈಲ್ವೆ ಅಭಿವೃದ್ಧಿಯನ್ನು ಮುನ್ನಡೆಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೇಗವಾಗಿ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ಹೇಳಿದರು. ಅಮೃತ ಭಾರತ ನಿಲ್ದಾಣ ಯೋಜನೆಯಡಿಯಲ್ಲಿ, ಗಯಾಜಿ ರೈಲು ನಿಲ್ದಾಣವನ್ನು ಪ್ರಯಾಣಿಕರಿಗೆ ವಿಮಾನ ನಿಲ್ದಾಣದಂತಹ ಸೌಲಭ್ಯಗಳನ್ನು ನೀಡಲು ಆಧುನೀಕರಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಗಯಾ ಈಗ ರಾಜಧಾನಿ, ಜನ ಶತಾಬ್ದಿ ಮತ್ತು ಭಾರತದಲ್ಲಿ ತಯಾರಿಸಿದ ವಂದೇ ಭಾರತ್ ರೈಲುಗಳನ್ನು ಹೊಂದಿರುವ ನಗರವಾಗಿದೆ ಎಂದು ಶ್ರೀ ಮೋದಿ ಹೇಳಿದರು. ಗಯಾಜಿಯಿಂದ ಸಸಾರಾಮ್, ಪ್ರಯಾಗರಾಜ್ ಮತ್ತು ಕಾನ್ಪುರದ ಮೂಲಕ ದೆಹಲಿಗೆ ನೇರ ರೈಲು ಸಂಪರ್ಕವು ಬಿಹಾರದ ಯುವಜನರು ಮತ್ತು ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು.
2014ರಲ್ಲಿ ಪ್ರಧಾನಿಯಾಗಿ ತಮ್ಮ ಅಧಿಕಾರಾವಧಿಯನ್ನು ಪ್ರಾರಂಭಿಸಲು ಅನುವು ಮಾಡಿಕೊಟ್ಟ ರಾಷ್ಟ್ರದ ಆಶೀರ್ವಾದ ಮತ್ತು ಅಚಲ ನಂಬಿಕೆಗೆ ಕೃತಜ್ಞತೆ ಸಲ್ಲಿಸಿದ ಶ್ರೀ ಮೋದಿ, ಇಷ್ಟು ವರ್ಷಗಳಲ್ಲಿ, ತಮ್ಮ ಸರ್ಕಾರದ ಮೇಲೆ ಭ್ರಷ್ಟಾಚಾರದ ಒಂದೇ ಒಂದು ಕಲೆಯೂ ಕಂಡುಬಂದಿಲ್ಲ ಎಂದು ಹೇಳಿದರು. ಇದಕ್ಕೆ ವ್ಯತಿರಿಕ್ತವಾಗಿ, ಸ್ವಾತಂತ್ರ್ಯದ ನಂತರ ಆರರಿಂದ ಆರುವರೆ ದಶಕಗಳ ಕಾಲ ಆಡಳಿತ ನಡೆಸಿದ ವಿರೋಧ ಪಕ್ಷಗಳ ಸರ್ಕಾರಗಳು ಭ್ರಷ್ಟಾಚಾರ ಪ್ರಕರಣಗಳ ದೀರ್ಘ ಪಟ್ಟಿಯನ್ನು ಹೊಂದಿವೆ ಎಂದು ಅವರು ಹೇಳಿದರು ಮತ್ತು ವಿರೋಧ ಪಕ್ಷಗಳ ಭ್ರಷ್ಟಾಚಾರವು ಬಿಹಾರದ ಪ್ರತಿಯೊಂದು ಮಗುವಿಗೂ ತಿಳಿದಿದೆ ಎಂದು ಹೇಳಿದರು. ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಅದರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು, ಯಾರೂ ಕ್ರಮದ ವ್ಯಾಪ್ತಿಯಿಂದ ಹೊರಗಿರಬಾರದು ಎಂದು ಪ್ರಧಾನಿ ಸ್ಪಷ್ಟವಾಗಿ ಹೇಳಿದರು. ಕಿರಿಯ ಸರ್ಕಾರಿ ನೌಕರನನ್ನು 48 ಗಂಟೆಗಳ ಕಾಲ ಕಸ್ಟಡಿಯಲ್ಲಿಟ್ಟರೆ ಸ್ವಯಂಚಾಲಿತವಾಗಿ ಅಮಾನತುಗೊಳಿಸಲಾಗುತ್ತದೆ ಎಂಬ ಪ್ರಸ್ತುತ ಕಾನೂನನ್ನು ಅವರು ಎತ್ತಿ ತೋರಿಸಿದರು. ಮುಖ್ಯಮಂತ್ರಿ ಅಥವಾ ಸಚಿವರು ಜೈಲಿನಲ್ಲಿದ್ದಾಗಲೂ ಅಧಿಕಾರದ ಸವಲತ್ತುಗಳನ್ನು ಅನುಭವಿಸಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು. ಕಡತಗಳಿಗೆ ಸಹಿ ಹಾಕಲಾಗುತ್ತಿರುವ ಮತ್ತು ಜೈಲಿನಿಂದ ನೇರವಾಗಿ ಅಧಿಕೃತ ಆದೇಶಗಳನ್ನು ಹೊರಡಿಸಲಾಗುತ್ತಿರುವ ಇತ್ತೀಚಿನ ನಿದರ್ಶನಗಳನ್ನು ಅವರು ಉಲ್ಲೇಖಿಸಿದರು. ರಾಜಕೀಯ ನಾಯಕರಿ ಈ ಮನೋಭಾವ ಮುಂದುವರೆಸಿದರೆ, ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಹೇಗೆ ಪರಿಣಾಮಕಾರಿಯಾಗಿರುತ್ತದೆ ಎಂದು ಶ್ರೀ ಮೋದಿ ಹೇಳಿದರು.
ಭಾರತ ಸಂವಿಧಾನವು ಪ್ರತಿಯೊಬ್ಬ ಸಾರ್ವಜನಿಕ ಪ್ರತಿನಿಧಿಯಿಂದ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ನಿರೀಕ್ಷಿಸುತ್ತದೆ ಎಂದು ಒತ್ತಿ ಹೇಳಿದ ಪ್ರಧಾನಿ, ಸಂವಿಧಾನದ ಘನತೆಯು ಮುಕ್ಕಾಗಲು ಬಿಡಬಾರದು ಎಂದು ಒತ್ತಿ ಹೇಳಿದರು. ತಮ್ಮ ಸರ್ಕಾರವು ದೇಶದ ಪ್ರಧಾನ ಮಂತ್ರಿಗೂ ಅನ್ವಯಿಸುವ ಕಠಿಣ ಭ್ರಷ್ಟಾಚಾರ ವಿರೋಧಿ ಕಾನೂನನ್ನು ತರುತ್ತಿದೆ ಎಂದು ಅವರು ಘೋಷಿಸಿದರು. ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ಸಹ ಈ ಕಾನೂನಿನ ವ್ಯಾಪ್ತಿಗೆ ಬರುತ್ತಾರೆ ಎಂದು ಅವರು ಹೇಳಿದರು. ಇದನ್ನು ಮತ್ತಷ್ಟು ವಿವರಿಸಿದ ಶ್ರೀ ಮೋದಿ, ಈ ಕಾನೂನು ಜಾರಿಗೆ ಬಂದ ನಂತರ, ಯಾವುದೇ ಪ್ರಧಾನಿ, ಮುಖ್ಯಮಂತ್ರಿ ಅಥವಾ ಸಚಿವರು ಬಂಧಿಸಲ್ಪಟ್ಟ 30 ದಿನಗಳಲ್ಲಿ ಜಾಮೀನು ಪಡೆಯಬೇಕಾಗುತ್ತದೆ. ಜಾಮೀನು ಸಿಗದಿದ್ದರೆ, ಅವರು 31 ನೇ ದಿನದಂದು ತಮ್ಮ ಸ್ಥಾನವನ್ನು ಖಾಲಿ ಮಾಡಬೇಕಾಗುತ್ತದೆ. ಅಂತಹ ಕಠಿಣ ಕಾನೂನನ್ನು ಜಾರಿಗೆ ತರುವ ಉದ್ದೇಶದಿಂದ ಸರ್ಕಾರ ಮುಂದುವರಿಯುತ್ತಿದೆ ಎಂದು ಅವರು ಹೇಳಿದರು.
ಈ ಕಾನೂನನ್ನು ವಿರೋಧಿಸುತ್ತಿರುವ ವಿರೋಧ ಪಕ್ಷಗಳನ್ನು ಟೀಕಿಸಿದ ಶ್ರೀ ಮೋದಿ, ಅವರ ಕೋಪವು ಭಯದಿಂದ ಹುಟ್ಟಿಕೊಂಡಿದೆ ಎಂದು ಹೇಳಿದರು - ತಪ್ಪುಗಳನ್ನು ಮಾಡಿದವರು ಅವುಗಳನ್ನು ಇತರರಿಂದ ಮರೆಮಾಚಬಹುದು, ಆದರೆ ಅವರಿಗೇ ತಮ್ಮ ಕೆಲಸಗಳ ಬಗ್ಗೆ ತಿಳಿದಿರುತ್ತದೆ. ವಿರೋಧ ಪಕ್ಷಗಳ ಕೆಲವು ನಾಯಕರು ಜಾಮೀನಿನ ಮೇಲೆ ಹೊರಗಿದ್ದಾರೆ, ಇತರರು ಹಗರಣಗಳಿಗೆ ಸಂಬಂಧಿಸಿದ ಕಾನೂನು ಕ್ರಮಗಳಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಈ ವ್ಯಕ್ತಿಗಳು ಜೈಲಿಗೆ ಹೋದರೆ ತಮ್ಮ ರಾಜಕೀಯ ಕನಸುಗಳು ಭಗ್ನಗೊಳ್ಳುತ್ತವೆ ಎಂದು ಭಯಪಡುತ್ತಿದ್ದಾರೆ. ಅದಕ್ಕಾಗಿಯೇ ಅವರು ಪ್ರಸ್ತಾವಿತ ಕಾನೂನನ್ನು ವಿರೋಧಿಸುತ್ತಿದ್ದಾರೆ ಎಂದು ಅವರು ಹೇಳಿದರು. ರಾಜೇಂದ್ರ ಬಾಬು ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ನಾಯಕರು ಅಧಿಕಾರದ ದಾಹವುಳ್ಳ ವ್ಯಕ್ತಿಗಳು ಭ್ರಷ್ಟಾಚಾರ ಮಾಡಿ ಜೈಲಿನಲ್ಲಿದ್ದಾಗಲೂ ಅಧಿಕಾರಕ್ಕೆ ಅಂಟಿಕೊಂಡಿರುತ್ತಾರೆ ಎಂದು ಎಂದಿಗೂ ಊಹಿಸಿರಲಿಲ್ಲ ಎಂದು ಪ್ರಧಾನಿ ಹೇಳಿದರು. ಹೊಸ ಕಾನೂನಿನ ಅಡಿಯಲ್ಲಿ, ಭ್ರಷ್ಟ ವ್ಯಕ್ತಿಗಳು ಜೈಲಿಗೆ ಹೋಗುವುದಲ್ಲದೆ, ತಮ್ಮ ಅಧಿಕಾರ ಸ್ಥಾನಗಳನ್ನು ಕಳೆದುಕೊಳ್ಳುತ್ತಾರೆ ಎಂದು ಅವರು ಪ್ರತಿಪಾದಿಸಿದರು. "ಭಾರತವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಸಂಕಲ್ಪವು ಕೋಟ್ಯಂತರ ನಾಗರಿಕರ ಸಾಮೂಹಿಕ ಬದ್ಧತೆಯಾಗಿದೆ - ಮತ್ತು ಈ ಸಂಕಲ್ಪವು ಈಡೇರುತ್ತದೆ" ಎಂದು ಪ್ರಧಾನಿ ಹೇಳಿದರು.
ದೇಶದಲ್ಲಿ ಹೆಚ್ಚುತ್ತಿರುವ ನುಸುಳುಕೋರರ ಸಂಖ್ಯೆ ಗಂಭೀರ ಕಳವಳಕಾರಿ ವಿಷಯವಾಗಿದ್ದು, ಈ ಕುರಿತು ಕೆಂಪು ಕೋಟೆಯಿಂದ ತಾವು ಎತ್ತಿದ ಕಳವಳವನ್ನು ಉಲ್ಲೇಖಿಸಿದರು. ಬಿಹಾರದ ಗಡಿ ಜಿಲ್ಲೆಗಳ ಜನಸಂಖ್ಯಾ ವಿವರ ವೇಗವಾಗಿ ಬದಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು ಮತ್ತು ನುಸುಳುಕೋರರು ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸಲು ಬಿಡುವುದಿಲ್ಲ ಎಂದು ತಮ್ಮ ಸರ್ಕಾರ ದೃಢನಿಶ್ಚಯ ಮಾಡಿದೆ. ನುಸುಳುಕೋರರು ಬಿಹಾರದ ಯುವಕರಿಂದ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳಲು ಬಿಡುವುದಿಲ್ಲ ಎಂದು ಪ್ರಧಾನಿ ಒತ್ತಿ ಹೇಳಿದರು. ಭಾರತೀಯ ನಾಗರಿಕರಿಗೆ ಮೀಸಲಾದ ಸೌಲಭ್ಯಗಳನ್ನು ನುಸುಳುಕೋರರು ಲೂಟಿ ಮಾಡಲು ಬಿಡುವುದಿಲ್ಲ. ಈ ಬೆದರಿಕೆಯನ್ನು ಪರಿಹರಿಸಲು, ಪ್ರಧಾನ ಮಂತ್ರಿ ಅವರು ಜನಸಂಖ್ಯಾ ಮಿಷನ್ ಅನ್ನು ಪ್ರಾರಂಭಿಸುವುದಾಗಿ ಅವರು ಘೋಷಿಸಿದರು, ಅದು ಶೀಘ್ರದಲ್ಲೇ ಕಾರ್ಯಾಚರಣೆಯನ್ನು ಆರಂಭಿಸುತ್ತದೆ. ನುಸುಳುಕೋರರನ್ನು ದೇಶದಿಂದ ಹೊರಹಾಕಲಾಗುವುದು ಎಂದು ಅವರು ಹೇಳಿದರು. ದೇಶದೊಳಗೆ ನುಸುಳುಕೋರರನ್ನು ಬೆಂಬಲಿಸುವವರ ವಿರುದ್ಧ ಬಿಹಾರದ ಜನರು ಜಾಗರೂಕರಾಗಿರಬೇಕೆಂದು ಒತ್ತಾಯಿಸಿದರು. ಬಿಹಾರಿಗಳ ಹಕ್ಕುಗಳನ್ನು ಕಸಿದುಕೊಂಡು ಅವುಗಳನ್ನು ನುಸುಳುಕೋರರಿಗೆ ಹಸ್ತಾಂತರಿಸಲು ಪ್ರಯತ್ನಿಸುತ್ತಿರುವ ವಿರೋಧ ಪಕ್ಷಗಳನ್ನು ಶ್ರೀ ಮೋದಿ ತೀವ್ರವಾಗಿ ಟೀಕಿಸಿದರು. ಓಲೈಕೆ ಮತ್ತು ಮತಬ್ಯಾಂಕ್ ರಾಜಕೀಯಕ್ಕಾಗಿ, ಆ ಪಕ್ಷಗಳು ಯಾವುದೇ ಮಟ್ಟಕ್ಕೂ ಹೋಗಲು ಸಿದ್ಧವಾಗಿವೆ. ಬಿಹಾರದ ಜನರು ಇವರ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು ಎಂದು ಪ್ರಧಾನಿ ಕರೆ ನೀಡಿದರು.
ವಿರೋಧ ಪಕ್ಷಗಳ ದುರುದ್ದೇಶಪೂರಿತ ಯೋಜನೆಗಳಿಂದ ಬಿಹಾರವನ್ನು ರಕ್ಷಿಸುವ ಬಗ್ಗೆ ಒತ್ತಿ ಹೇಳಿದ ಶ್ರೀ ಮೋದಿ, ಇದು ಬಿಹಾರಕ್ಕೆ ಬಹಳ ನಿರ್ಣಾಯಕ ಸಮಯ ಎಂದು ಹೇಳಿದರು. ಬಿಹಾರದ ಯುವಜನರ ಕನಸುಗಳು ನನಸಾಗುತ್ತವೆ ಮತ್ತು ಬಿಹಾರದ ಜನರ ಆಕಾಂಕ್ಷೆಗಳಿಗೆ ಹೊಸ ತಿರುವು ಸಿಗುತ್ತದೆ ಎಂದು ಅವರು ಆಶಿಸಿದರು. ಈ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರವು ಶ್ರೀ ನಿತೀಶ್ ಕುಮಾರ್ ಅವರೊಂದಿಗೆ ಜೊತೆಯಾಗಿ ಕೆಲಸ ಮಾಡುತ್ತಿದೆ. ಬಿಹಾರದಲ್ಲಿ ಅಭಿವೃದ್ಧಿಯ ಆವೇಗವನ್ನು ಕಾಯ್ದುಕೊಳ್ಳಲು, ಕೇಂದ್ರ ಮತ್ತು ರಾಜ್ಯದಲ್ಲಿರುವ ಅವರ ಸರ್ಕಾರಗಳು ನಿರಂತರವಾಗಿ ಶ್ರಮಿಸುತ್ತಿವೆ. ಇಂದಿನ ಅಭಿವೃದ್ಧಿ ಯೋಜನೆಗಳು ಈ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಯಾಗಿವೆ ಎಂದು ಹೇಳಿದ ಪ್ರಧಾನಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಕಾರ್ಯಕ್ರಮದಲ್ಲಿ ಬಿಹಾರ ರಾಜ್ಯಪಾಲ ಶ್ರೀ ಆರಿಫ್ ಮೊಹಮ್ಮದ್ ಖಾನ್, ಬಿಹಾರ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್, ಕೇಂದ್ರ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್, ಶ್ರೀ ಜಿತನ್ ರಾಮ್ ಮಾಂಜಿ, ಶ್ರೀ ಗಿರಿರಾಜ್ ಸಿಂಗ್, ಶ್ರೀ ಚಿರಾಗ್ ಪಾಸ್ವಾನ್, ಶ್ರೀ ನಿತ್ಯಾನಂದ ರೈ, ಶ್ರೀ ರಾಮ್ ನಾಥ್ ಠಾಕೂರ್, ಡಾ. ರಾಜ್ ಭೂಷಣ್ ಚೌಧರಿ, ಶ್ರೀ ಸತೀಶ್ ಚಂದ್ರ ದುಬೆ ಮತ್ತಿತರರು ಉಪಸ್ಥಿತರಿದ್ದರು.
ಹಿನ್ನೆಲೆ
ಸಂಪರ್ಕವನ್ನು ಸುಧಾರಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು ರಾಷ್ಟ್ರೀಯ ಹೆದ್ದಾರಿ-31 ರಲ್ಲಿ 8.15 ಕಿ.ಮೀ ಉದ್ದದ ಔಂಟಾ - ಸಿಮಾರಿಯಾ ಸೇತುವೆ ಯೋಜನೆಯನ್ನು ಉದ್ಘಾಟಿಸಿದರು, ಇದರಲ್ಲಿ 1,870 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಗಂಗಾ ನದಿಯ ಮೇಲೆ ನಿರ್ಮಿಸಲಾದ 1.86 ಕಿ.ಮೀ ಉದ್ದದ 6 ಪಥದ ಸೇತುವೆಯೂ ಸೇರಿದೆ. ಇದು ಪಾಟ್ನಾದ ಮೊಕಾಮಾ ಮತ್ತು ಬೇಗುಸರಾಯ್ ನಡುವೆ ನೇರ ಸಂಪರ್ಕವನ್ನು ಒದಗಿಸುತ್ತದೆ.
ಈ ಸೇತುವೆಯನ್ನು ಹಳೆಯ ದ್ವಿಪಥದ ಶಿಥಿಲಗೊಂಡ ರೈಲು-ಕಮ್-ರೋಡ್ ಸೇತುವೆ "ರಾಜೇಂದ್ರ ಸೇತು" ಗೆ ಸಮಾನಾಂತರವಾಗಿ ನಿರ್ಮಿಸಲಾಗಿದೆ, ಹಳೆಯ ಸೇತುವೆಯು ಕಳಪೆ ಸ್ಥಿತಿಯಲ್ಲಿದ್ದು, ಭಾರೀ ವಾಹನಗಳು ಮಾರ್ಗ ಬದಲಾಯಿಸಬೇಕಿದೆ. ಹೊಸ ಸೇತುವೆಯು ಉತ್ತರ ಬಿಹಾರ (ಬೇಗುಸರಾಯ್, ಸುಪೌಲ್, ಮಧುಬನಿ, ಪೂರ್ನಿಯಾ, ಅರಾರಿಯಾ ಇತ್ಯಾದಿ) ಮತ್ತು ದಕ್ಷಿಣ ಬಿಹಾರ ಪ್ರದೇಶಗಳ (ಶೇಖಪುರ, ನವಾಡ, ಲಖಿಸರಾಯ್ ಇತ್ಯಾದಿ) ನಡುವೆ ಪ್ರಯಾಣಿಸುವ ಭಾರೀ ವಾಹನಗಳಿಗೆ 100 ಕಿ.ಮೀ.ಗಿಂತ ಹೆಚ್ಚಿನ ಹೆಚ್ಚುವರಿ ಪ್ರಯಾಣದ ದೂರವನ್ನು ಕಡಿಮೆ ಮಾಡುತ್ತದೆ. ಇದು ಈ ಪ್ರದೇಶದ ಇತರ ಭಾಗಗಳಲ್ಲಿ ವಾಹನಗಳು ಬಳಸಬೇಕಾದ ಪರ್ಯಾಯ ಮಾರ್ಗದಿಂದಾಗಿ ಉಂಟಾಗುವ ಸಂಚಾರ ದಟ್ಟಣೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಇದು ಪಕ್ಕದ ಪ್ರದೇಶಗಳಲ್ಲಿ, ವಿಶೇಷವಾಗಿ ಉತ್ತರ ಬಿಹಾರದಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಏಕೆಂದರೆ ಅವುಗಳು ಅಗತ್ಯ ಕಚ್ಚಾ ವಸ್ತುಗಳನ್ನು ಪಡೆಯಲು ದಕ್ಷಿಣ ಬಿಹಾರ ಮತ್ತು ಜಾರ್ಖಂಡ್ ಅನ್ನು ಅವಲಂಬಿಸಿವೆ. ಪ್ರಸಿದ್ಧ ಕವಿ ದಿವಂಗತ ಶ್ರೀ ರಾಮಧಾರಿ ಸಿಂಗ್ ದಿನಕರ್ ಅವರ ಜನ್ಮಸ್ಥಳವೂ ಆಗಿರುವ ಪ್ರಸಿದ್ಧ ಯಾತ್ರಾ ಸ್ಥಳವಾದ ಸಿಮಾರಿಯಾ ಧಾಮಕ್ಕೆ ಇದು ಉತ್ತಮ ಸಂಪರ್ಕವನ್ನು ಒದಗಿಸುತ್ತದೆ.
ಪ್ರಧಾನಮಂತ್ರಿಯವರು ರಾಷ್ಟ್ರೀಯ ಹೆದ್ದಾರಿ-31 ರ ಭಕ್ತಿಯಾರಪುರದಿಂದ ಮೊಕಾಮಾವರೆಗಿನ ಚತುಷ್ಪಥ ವಿಭಾಗವನ್ನು ಉದ್ಘಾಟಿಸಿದರು, ಇದರ ಅಂದಾಜು ವೆಚ್ಚ 1,900 ಕೋಟಿ ರೂ.ಗಳಾಗಿದ್ದು, ಇದು ವಾಹನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣಿಕರು ಮತ್ತು ಸರಕು ಸಾಗಣೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಬಿಹಾರದ ರಾಷ್ಟ್ರೀಯ ಹೆದ್ದಾರಿ-120 ರ ಬಿಕ್ರಮಗಂಜ್-ದಾವತ್-ನವನಗರ-ಡುಮ್ರಾನ್ ವಿಭಾಗದ ದ್ವಿಪಥದ ಸುಧಾರಣೆಯು ಗ್ರಾಮೀಣ ಪ್ರದೇಶಗಳಲ್ಲಿ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಸ್ಥಳೀಯ ಜನರಿಗೆ ಹೊಸ ಆರ್ಥಿಕ ಅವಕಾಶಗಳನ್ನು ಒದಗಿಸುತ್ತದೆ.
ಬಿಹಾರದಲ್ಲಿ ವಿದ್ಯುತ್ ವಲಯದ ಮೂಲಸೌಕರ್ಯವನ್ನು ಬಲಪಡಿಸುವ ಸಲುವಾಗಿ, ಪ್ರಧಾನಮಂತ್ರಿಯವರು ಸುಮಾರು 6,880 ಕೋಟಿ ರೂ. ಮೌಲ್ಯದ ಬಕ್ಸಾರ್ ಉಷ್ಣ ವಿದ್ಯುತ್ ಸ್ಥಾವರವನ್ನು (660x1 ಮೆಗಾವ್ಯಾಟ್) ಉದ್ಘಾಟಿಸಿದರು. ಇದು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ, ಇಂಧನ ಸುರಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಈ ಪ್ರದೇಶದ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸುತ್ತದೆ.
ಆರೋಗ್ಯ ಮೂಲಸೌಕರ್ಯಕ್ಕೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಮಂತ್ರಿ ಅವರು ಮುಜಫರಪುರದಲ್ಲಿ ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದರು. ಈ ಕೇಂದ್ರವು ಸುಧಾರಿತ ಆಂಕೊಲಾಜಿ ಒಪಿಡಿ, ಐಪಿಡಿ ವಾರ್ಡ್, ಆಪರೇಷನ್ ಥಿಯೇಟರ್, ಆಧುನಿಕ ಪ್ರಯೋಗಾಲಯ, ರಕ್ತ ಬ್ಯಾಂಕ್ ಮತ್ತು 24 ಹಾಸಿಗೆಗಳ ಐಸಿಯು (ತೀವ್ರ ನಿಗಾ ಘಟಕ) ಮತ್ತು ಎಚ್ ಡಿ ಯು (ಹೈ ಡಿಪೆಂಡೆನ್ಸಿ ಯುನಿಟ್) ಗಳನ್ನು ಒಳಗೊಂಡಿದೆ. ಈ ಅತ್ಯಾಧುನಿಕ ಸೌಲಭ್ಯವು ಬಿಹಾರ ಮತ್ತು ನೆರೆಯ ರಾಜ್ಯಗಳ ರೋಗಿಗಳಿಗೆ ಸುಧಾರಿತ ಮತ್ತು ಕೈಗೆಟುಕುವ ಕ್ಯಾನ್ಸರ್ ಆರೈಕೆಯನ್ನು ಒದಗಿಸುತ್ತದೆ, ಚಿಕಿತ್ಸೆಗಾಗಿ ದೂರದ ಮಹಾನಗರಗಳಿಗೆ ಪ್ರಯಾಣಿಸುವ ಅಗತ್ಯವನ್ನು ಕಡಿಮೆ ಮಾಡುತ್ತದೆ.
ಸ್ವಚ್ಛ ಭಾರತದ ಚಿಂತನೆ ಮತ್ತು ಗಂಗಾ ನದಿಯ ನಿರಂತರ ಮತ್ತು ಶುದ್ಧ ಹರಿವನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿಯವರು ಮುಂಗೇರ್ ನಲ್ಲಿ ನಮಾಮಿ ಗಂಗೆ ಯೋಜನೆಯಡಿಯಲ್ಲಿ 520 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಒಳಚರಂಡಿ ಸಂಸ್ಕರಣಾ ಘಟಕ (ಎಸ್ ಟಿ ಪಿ) ಮತ್ತು ಒಳಚರಂಡಿ ಜಾಲವನ್ನು ಉದ್ಘಾಟಿಸಿದರು. ಇದು ಗಂಗಾ ನದಿಯಲ್ಲಿನ ಮಾಲಿನ್ಯದ ಹೊರೆ ಕಡಿಮೆ ಮಾಡಲು ಮತ್ತು ಆ ಪ್ರದೇಶದಲ್ಲಿ ನೈರ್ಮಲ್ಯ ಸೌಲಭ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಸುಮಾರು 1,260 ಕೋಟಿ ರೂ. ಮೌಲ್ಯದ ನಗರ ಮೂಲಸೌಕರ್ಯ ಸರಣಿ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಇವುಗಳಲ್ಲಿ ಔರಂಗಾಬಾದ್ ಮತ್ತು ಜೆಹಾನಾಬಾದ್ ನ ದೌದ್‌ನಗರದಲ್ಲಿ ಎಸ್‌ಟಿಪಿ ಮತ್ತು ಒಳಚರಂಡಿ ಜಾಲ; ಲಖಿಸರಾಯ್ ನ ಬರ್ಹಿಯಾ ಮತ್ತು ಜಮುಯಿಯಲ್ಲಿ ಎಸ್ ಟಿ ಪಿ ತಿರುವು ಕಾರ್ಯಗಳು ಸೇರಿವೆ. ಅಮೃತ್ 2.0 ಅಡಿಯಲ್ಲಿ, ಅವರು ಔರಂಗಾಬಾದ್, ಬೋಧ್ ಗಯಾ ಮತ್ತು ಜೆಹಾನಾಬಾದ್ ನಲ್ಲಿ ನೀರು ಸರಬರಾಜು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳು ಶುದ್ಧ ಕುಡಿಯುವ ನೀರು, ಆಧುನಿಕ ಒಳಚರಂಡಿ ವ್ಯವಸ್ಥೆ ಮತ್ತು ಸುಧಾರಿತ ನೈರ್ಮಲ್ಯವನ್ನು ಒದಗಿಸುತ್ತವೆ, ಇದು ಈ ಪ್ರದೇಶದಲ್ಲಿ ಆರೋಗ್ಯ ಗುಣಮಟ್ಟ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ.
ಈ ಪ್ರದೇಶದಲ್ಲಿ ರೈಲು ಸಂಪರ್ಕವನ್ನು ಸುಧಾರಿಸುವ ಸಲುವಾಗಿ, ಪ್ರಧಾನ ಮಂತ್ರಿ ಅವರು ಎರಡು ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಗಯಾ ಮತ್ತು ದೆಹಲಿ ನಡುವಿನ ಅಮೃತ ಭಾರತ ಎಕ್ಸ್‌ಪ್ರೆಸ್, ಇದು ಆಧುನಿಕ ಸೌಲಭ್ಯಗಳು, ಸೌಕರ್ಯ ಮತ್ತು ಸುರಕ್ಷತೆಯೊಂದಿಗೆ ಪ್ರಯಾಣಿಕರ ಅನುಕೂಲತೆಯನ್ನು ಸುಧಾರಿಸುತ್ತದೆ ಮತ್ತು ವೈಶಾಲಿ ಮತ್ತು ಕೊಡೆರ್ಮಾ ನಡುವಿನ ಬೌದ್ಧ ಸರ್ಕ್ಯೂಟ್ ರೈಲು, ಇದು ಈ ಪ್ರದೇಶದ ಪ್ರಮುಖ ಬೌದ್ಧ ತಾಣಗಳಲ್ಲಿ ಪ್ರವಾಸೋದ್ಯಮ ಮತ್ತು ತೀರ್ಥಕ್ಷೇತ್ರಗಳ ಪ್ರಯಾಣಕ್ಕೆ ಉತ್ತೇಜನ ನೀಡುತ್ತದೆ.
ಪ್ರಧಾನಮಂತ್ರಿ ಆವಾಸ್ ಯೋಜನೆ-ಗ್ರಾಮೀಣ ಅಡಿಯಲ್ಲಿ 12,000 ಗ್ರಾಮೀಣ ಫಲಾನುಭವಿಗಳು ಮತ್ತು ಪ್ರಧಾನಮಂತ್ರಿ ಆವಾಸ್ ಯೋಜನೆ-ನಗರ ಅಡಿಯಲ್ಲಿ 4,260 ಫಲಾನುಭವಿಗಳ ಗೃಹ ಪ್ರವೇಶ ಸಮಾರಂಭಗಳು ಸಹ ನಡೆದವು, ಇದರಲ್ಲಿ ಪ್ರಧಾನಮಂತ್ರಿಗಳು ಕೆಲವು ಫಲಾನುಭವಿಗಳಿಗೆ ಸಾಂಕೇತಿಕವಾಗಿ ಕೀಲಿಗಳನ್ನು ಹಸ್ತಾಂತರಿಸಿದರು, ಇದರಿಂದಾಗಿ ಸಾವಿರಾರು ಕುಟುಂಬಗಳ ಸ್ವಂತ ಮನೆ ಹೊಂದುವ ಕನಸು ನನಸಾಯಿತು.
*****
(Release ID: 2159786)
Read this release in:
English
,
Urdu
,
Marathi
,
Hindi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam