ಪ್ರಧಾನ ಮಂತ್ರಿಯವರ ಕಛೇರಿ
ಭೋಪಾಲ್‌ನಲ್ಲಿ ನಡೆದ ದೇವಿ ಅಹಲ್ಯಾಬಾಯಿ ಮಹಿಳಾ ಸಶಕ್ತೀಕರಣ ಮಹಾಸಮ್ಮೇಳನ; ವಿವಿಧ ಯೋಜನೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
31 MAY 2025 4:18PM by PIB Bengaluru
ಮಧ್ಯಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಮಂಗುಭಾಯಿ ಪಟೇಲ್ ಜಿ, ನಮ್ಮ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಮೋಹನ್ ಯಾದವ್ ಜಿ, ವೀಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಹಾಜರಿರುವ ಕೇಂದ್ರ ಸಚಿವರೆ, ಇಂದೋರ್‌ನ ತೋಖಾನ್ ಸಾಹು ಜಿ, ದಾತಿಯಾದಿಂದ ಸೇರಿರುವ ರಾಮ್ ಮೋಹನ್ ನಾಯ್ಡು ಜಿ, ಸತ್ನಾದಿಂದ ಮುರಳೀಧರ್ ಮೊಹೋಲ್ ಜಿ, ಇಲ್ಲಿರುವ ಉಪಮುಖ್ಯಮಂತ್ರಿಗಳಾದ ಶ್ರೀ ಜಗದೀಶ್ ದೇವದಾ ಜಿ ಮತ್ತು ಶ್ರೀ ರಾಜೇಂದ್ರ ಶುಕ್ಲಾ ಜಿ, ಲೋಕಸಭೆಯ ನನ್ನ ಸಹೋದ್ಯೋಗಿ ಶ್ರೀ ವಿ.ಡಿ. ಶರ್ಮಾ ಜಿ, ಎಲ್ಲಾ ಸಚಿವರೆ, ಜನಪ್ರತಿನಿಧಿಗಳೆ ಮತ್ತು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರುವ ನನ್ನ ಪ್ರೀತಿಯ ಸಹೋದರ ಸಹೋದರಿಯರೆ!
ಮೊದಲನೆಯದಾಗಿ, ನಾನು ಭಾರತ ಮಾತೆ ಮತ್ತು ಭಾರತದ ಮಹಿಳೆಯರಿಗೆ ನಮಸ್ಕರಿಸುತ್ತೇನೆ. ಇಂದು ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಈ ಬೃಹತ್ ಸಭೆಯಲ್ಲಿ ಭಾರತ ಮಾತೆಯ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೀರಿ, ನಿಮ್ಮೆಲ್ಲರನ್ನೂ ಭೇಟಿಯಾಗುವ ಅವಕಾಶ ಸಿಕ್ಕಿದ್ದು ನನಗೆ ನಿಜಕ್ಕೂ ಧನ್ಯತೆಯಾಗಿದೆ.
ಸಹೋದರ ಸಹೋದರಿಯರೆ,
ಇಂದು ಲೋಕಮಾತಾ ದೇವಿ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆ. 140 ಕೋಟಿ ಭಾರತೀಯರು ಸ್ಫೂರ್ತಿ ಪಡೆದು ರಾಷ್ಟ್ರ ನಿರ್ಮಾಣದ ಮಹತ್ವದ ಕಾರ್ಯಕ್ಕೆ ಕೊಡುಗೆ ನೀಡಲು ಇದು ಒಂದು ಸ್ಮರಣೀಯ ಸಂದರ್ಭವಾಗಿದೆ. ಜನರಿಗೆ ಸೇವೆ ಸಲ್ಲಿಸುವುದು ಮತ್ತು ಅವರ ಜೀವನ ಸುಧಾರಿಸುವುದರಲ್ಲಿ ನಿಜವಾದ ಆಡಳಿತ ಅಡಗಿದೆ ಎಂದು ಲೋಕಮಾತೆ ದೇವಿ ಅಹಲ್ಯಾಬಾಯಿ ಹೇಳುತ್ತಿದ್ದರು. ಇಂದಿನ ಕಾರ್ಯಕ್ರಮವು ಅವರ ಆಳವಾದ ದೃಷ್ಟಿಕೋನವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಇಂದೋರ್ ಮೆಟ್ರೋ ಇಂದು ಉದ್ಘಾಟನೆಗೊಂಡಿದೆ. ಈಗ ದಾತಿಯಾ ಮತ್ತು ಸತ್ನಾದಿಂದ ವಿಮಾನ ಸೇವೆಗಳು ಪ್ರಾರಂಭವಾಗಿವೆ. ಈ ಯೋಜನೆಗಳು ಮಧ್ಯಪ್ರದೇಶದಲ್ಲಿ ಸಾರ್ವಜನಿಕ ಸೌಲಭ್ಯಗಳನ್ನು ಹೆಚ್ಚಿಸುತ್ತವೆ, ಅಭಿವೃದ್ಧಿಯನ್ನು ವೇಗಗೊಳಿಸುತ್ತವೆ ಮತ್ತು ಹಲವಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ಈ ಶುಭ ದಿನದಂದು, ಈ ಮಹತ್ವದ ಅಭಿವೃದ್ಧಿಯ ಹೆಜ್ಜೆಗಳಿಗಾಗಿ ನಿಮ್ಮೆಲ್ಲರಿಗೂ ಮತ್ತು ಇಡೀ ಮಧ್ಯಪ್ರದೇಶ ರಾಜ್ಯಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಲೋಕಮಾತೆ ದೇವಿ ಅಹಲ್ಯಾಬಾಯಿ ಹೋಳ್ಕರ್ ಅವರ ಹೆಸರೇ ಆಳವಾದ ಭಕ್ತಿಯನ್ನು ಹುಟ್ಟುಹಾಕುತ್ತದೆ. ಅವರ ವ್ಯಕ್ತಿತ್ವದ ಶ್ರೇಷ್ಠತೆ ವಿವರಿಸಲು ಪದಗಳು ಸಾಕಾಗುವುದಿಲ್ಲ. ದೇವಿ ಅಹಲ್ಯಾಬಾಯಿ ಅವರು ಇಚ್ಛಾಶಕ್ತಿ ಮತ್ತು ದೃಢ ಸಂಕಲ್ಪದಿಂದ, ಎಷ್ಟೇ ಪ್ರತಿಕೂಲ ಸಂದರ್ಭಗಳಿದ್ದರೂ ಗಮನಾರ್ಹ ಫಲಿತಾಂಶಗಳನ್ನು ಸಾಧಿಸಬಹುದು ಎಂಬ ಕಲ್ಪನೆಯ ಸಂಕೇತವಾಗಿದ್ದಾರೆ. ಎರಡೂವರೆ ಮೂರು ಶತಮಾನಗಳ ಹಿಂದೆ, ನಮ್ಮ ರಾಷ್ಟ್ರ ವಸಾಹತುಶಾಹಿ ಆಳ್ವಿಕೆಯಲ್ಲಿದ್ದಾಗ, ಅವರು ಅಸಾಧಾರಣ ಸಾಧನೆಗಳನ್ನು ಸಾಧಿಸಿದರು, ನಂತರದ ತಲೆಮಾರುಗಳು ಸಹ ಅವರ ಬಗ್ಗೆ ಮಾತನಾಡುತ್ತಲೇ ಇರುತ್ತವೆ. ಇಂದು ಅಂತಹ ಸಾಧನೆಗಳ ಬಗ್ಗೆ ಮಾತನಾಡುವುದು ಸುಲಭವಾದರೂ, ಆ ಸವಾಲಿನ ಕಾಲದಲ್ಲಿ ಅವುಗಳನ್ನು ಸಾಧಿಸುವುದು ಸುಲಭವಾಗಿರಲಿಲ್ಲ.
ಸ್ನೇಹಿತರೆ,
ಲೋಕಮಾತೆ ಅಹಲ್ಯಾಬಾಯಿ ದೇವರ ಸೇವೆ ಮತ್ತು ಜನರ ಸೇವೆಯನ್ನು ಪ್ರತ್ಯೇಕ ಕರ್ತವ್ಯಗಳಾಗಿ ಎಂದಿಗೂ ನೋಡಲಿಲ್ಲ. ಅವರು ಯಾವಾಗಲೂ ತಮ್ಮೊಂದಿಗೆ ಶಿವಲಿಂಗವನ್ನು ಹೊತ್ತೊಯ್ಯುತ್ತಿದ್ದರು ಎಂದು ಹೇಳಲಾಗುತ್ತದೆ. ಅಂತಹ ಪ್ರಕ್ಷುಬ್ಧ ಅವಧಿಯಲ್ಲಿ ರಾಜ್ಯವನ್ನು ಮುನ್ನಡೆಸುವುದು ಮುಳ್ಳಿನ ಕಿರೀಟವನ್ನು ಧರಿಸುವುದಕ್ಕೆ ಹೋಲಿಸಬಹುದು. ಆ ಜವಾಬ್ದಾರಿಯ ಹೊರೆಯನ್ನು ಯಾರೊಬ್ಬರು ಊಹಿಸಬಹುದು. ಆದರೂ, ಲೋಕಮಾತೆ ಅಹಲ್ಯಾಬಾಯಿ ತಮ್ಮ ರಾಜ್ಯದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದರು. ಬಡವರಲ್ಲಿ ಬಡವರನ್ನು ಸಹ ಸಬಲೀಕರಣಗೊಳಿಸಲು ಅವರು ತಮ್ಮನ್ನು ತಾವು ಅರ್ಪಿಸಿಕೊಂಡರು. ದೇವಿ ಅಹಲ್ಯಾಬಾಯಿ ಭಾರತದ ಪರಂಪರೆಯ ಕಟ್ಟಾ ರಕ್ಷಕಿಯಾಗಿದ್ದರು. ನಮ್ಮ ದೇವಾಲಯಗಳು, ತೀರ್ಥಯಾತ್ರೆ ಸ್ಥಳಗಳು ಮತ್ತು ಸಾಂಸ್ಕೃತಿಕ ಹೆಗ್ಗುರುತುಗಳು ಅಪಾಯದಲ್ಲಿರುವ ಸಮಯದಲ್ಲಿ, ಲೋಕಮಾತೆ ಅವುಗಳನ್ನು ರಕ್ಷಿಸಲು ಉಪಕ್ರಮಗಳನ್ನು ತೆಗೆದುಕೊಂಡರು. ಅವರು ಕಾಶಿ ವಿಶ್ವನಾಥ ದೇವಾಲಯ ಸೇರಿದಂತೆ ಭಾರತದಾದ್ಯಂತ ಹಲವಾರು ದೇವಾಲಯಗಳು ಮತ್ತು ಪವಿತ್ರ ಸ್ಥಳಗಳನ್ನು ಮರುಸ್ಥಾಪಿಸಿದರು ಮತ್ತು ಪುನರ್ನಿರ್ಮಿಸಿದರು. ಲೋಕಮಾತೆ ಅಹಲ್ಯಾಬಾಯಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ವ್ಯಾಪಕವಾಗಿ ಕೈಗೊಂಡ ಕಾಶಿ ನಗರಕ್ಕೆ ಈಗ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಇಂದು ನೀವು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದರೆ, ಅಲ್ಲಿ ದೇವಿ ಅಹಲ್ಯಾಬಾಯಿಯ ಪ್ರತಿಮೆಯನ್ನು ಸಹ ನೀವು ಕಾಣಬಹುದು.
ಸ್ನೇಹಿತರೆ,
ಮಾತೆ ಅಹಲ್ಯಾಬಾಯಿ ಬಡವರು ಮತ್ತು ಸಂಕಷ್ಟದಲ್ಲಿ ಇದ್ದವರಿಗೆ ಹೆಚ್ಚಿನ ಆದ್ಯತೆ ನೀಡುವ ಒಂದು ಅನುಕರಣೀಯ ಆಡಳಿತ ಮಾದರಿ ಅಳವಡಿಸಿಕೊಂಡರು. ಉದ್ಯೋಗ ಮತ್ತು ಉದ್ಯಮಶೀಲತೆ ಉತ್ತೇಜಿಸಲು ಅವರು ವಿವಿಧ ಯೋಜನೆಗಳನ್ನು ಪ್ರಾರಂಭಿಸಿದರು. ಅವರು ಕೃಷಿಯನ್ನು ಪ್ರೋತ್ಸಾಹಿಸಿದರು, ಜತೆಗೆ ಅರಣ್ಯ ಆಧಾರಿತ ಗುಡಿ ಕೈಗಾರಿಕೆಗಳು ಮತ್ತು ಕರಕುಶಲ ವಸ್ತುಗಳನ್ನು ಸಹ ಪ್ರೋತ್ಸಾಹಿಸಿದರು. ಕೃಷಿಯನ್ನು ಬೆಂಬಲಿಸಲು ಅವರು ಸಣ್ಣ ಕಾಲುವೆಗಳ ಸಂಕೀರ್ಣ ಜಾಲವನ್ನು ನಿರ್ಮಿಸಿದರು. 3 ಶತಮಾನಗಳ ಹಿಂದೆ ಅವರಲ್ಲಿದ್ದ ದೂರದೃಷ್ಟಿಯನ್ನು ಊಹಿಸಿ. ನೀರಿನ ಸಂರಕ್ಷಣೆ ಉತ್ತೇಜಿಸಲು ಅವರು ಹಲವಾರು ಕೊಳಗಳನ್ನು ಸಹ ನಿರ್ಮಿಸಿದರು. ಇಂದು, ನಾವು "ಮಳೆಯ ಪ್ರತಿ ನೀರಿನ ಹನಿಯನ್ನು ಉಳಿಸಿ" ಎಂಬ ಸಂದೇಶಕ್ಕೆ ಒತ್ತು ನೀಡುತ್ತಿದ್ದೇವೆ. ಆದರೆ, ದೇವಿ ಅಹಲ್ಯಾಬಾಯಿ 250ರಿಂದ 300 ವರ್ಷಗಳ ಹಿಂದೆಯೇ ನಮಗೆ ಈ ಸಂದೇಶವನ್ನು ನೀಡಿದ್ದರು. ರೈತರ ಆದಾಯ ಹೆಚ್ಚಿಸಲು ಅವರು ಹತ್ತಿ ಮತ್ತು ಮಸಾಲೆಗಳ ಕೃಷಿಯನ್ನು ಉತ್ತೇಜಿಸಿದರು. ಇಂದಿಗೂ, ನಾವು ರೈತರು ತಮ್ಮ ಬೆಳೆಗಳನ್ನು ವೈವಿಧ್ಯಗೊಳಿಸಬೇಕೆಂದು, ಭತ್ತ ಅಥವಾ ಕಬ್ಬಿಗೆ ಮಾತ್ರ ಸೀಮಿತವಾಗಿರಬಾರದು ಎಂದು ಪದೇಪದೆ ಒತ್ತಾಯಿಸುತ್ತೇವೆ. ದೇಶಕ್ಕೆ ಅಗತ್ಯವಿರುವ ಎಲ್ಲವನ್ನೂ ನಾವು ಬೆಳೆಯಬೇಕು. ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳಿಗೆ, ಅವರು ಖಾಲಿ ಭೂಮಿಯನ್ನು ಕೃಷಿಗಾಗಿ ಬಳಸಿಕೊಳ್ಳುವ ಯೋಜನೆಗಳನ್ನು ರೂಪಿಸಿದರು. ಇಂದು ಭಾರತದ ರಾಷ್ಟ್ರಪತಿಯಾಗಿರುವ ಬುಡಕಟ್ಟು ಸಮುದಾಯದ ಮಗಳ ನೇತೃತ್ವದಲ್ಲಿ ನಾನು ಈಗ ನನ್ನ ಬುಡಕಟ್ಟು ಸಹೋದರ ಸಹೋದರಿಯರಿಗೆ ಸೇವೆ ಸಲ್ಲಿಸುತ್ತಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ದೇವಿ ಅಹಲ್ಯಾಬಾಯಿ ಅವರು ಈಗ ವಿಶ್ವಪ್ರಸಿದ್ಧವಾಗಿರುವ ಮಹೇಶ್ವರಿ ಸೀರೆಗಳನ್ನು ಉತ್ತೇಜಿಸಲು ಹೊಸ ಕೈಗಾರಿಕೆಗಳನ್ನು ಸ್ಥಾಪಿಸಿದ್ದರು. ಅವರು ಕೌಶಲ್ಯ ಮತ್ತು ಕರಕುಶಲತೆಯ ಬಗ್ಗೆ ಅದ್ಭುತ ಮೆಚ್ಚುಗೆ ಪಡೆದಿದ್ದರು ಎಂದು ಕೆಲವೇ ಜನರಿಗೆ ತಿಳಿದಿರಬಹುದು. ಅವರು ಗುಜರಾತ್‌ನ ಜುನಾಗಢದಿಂದ ಕೆಲವು ಕುಟುಂಬಗಳನ್ನು ಮಹೇಶ್ವರಕ್ಕೆ ಕರೆತಂದು, ಅವರನ್ನು ಒಗ್ಗೂಡಿಸಿ, ಮಹೇಶ್ವರಿ ಸೀರೆಗಳ ಕರಕುಶಲತೆಯನ್ನು ಅಭಿವೃದ್ಧಿಪಡಿಸಿದ್ದರು. 250ರಿಂದ 300 ವರ್ಷಗಳ ಹಿಂದೆ ಅವರು ಸ್ಥಾಪಿಸಿದ ಪರಂಪರೆ ಅನೇಕ ಕುಟುಂಬಗಳ ಜೀವನವನ್ನು ಶ್ರೀಮಂತಗೊಳಿಸುತ್ತಲೇ ಇದೆ, ನಮ್ಮ ನೇಕಾರರಿಗೆ ಅಪಾರ ಪ್ರಯೋಜನವನ್ನು ನೀಡಿದೆ.
ಸ್ನೇಹಿತರೆ,
ಅನೇಕ ದೂರಗಾಮಿ ಸಾಮಾಜಿಕ ಸುಧಾರಣೆಗಳಿಂದಾಗಿ ದೇವಿ ಅಹಲ್ಯಾಬಾಯಿ ಅವರು ಶಾಶ್ವತವಾಗಿ ಸ್ಮರಣೀಯರು. ಇಂದು, ನಾವು ಹೆಣ್ಣು ಮಕ್ಕಳ ಮದುವೆಯ ಕಾನೂನುಬದ್ಧ ವಯಸ್ಸನ್ನು ಹೆಚ್ಚಿಸುವ ಬಗ್ಗೆ ಮಾತನಾಡುವಾಗ, ನಮ್ಮ ದೇಶದ ಕೆಲವು ವ್ಯಕ್ತಿಗಳು ಅದನ್ನು ಜಾತ್ಯತೀತತೆಗೆ ಬೆದರಿಕೆ ಎಂದು ನೋಡುತ್ತಾರೆ ಅಥವಾ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವೆಂದು ಪರಿಗಣಿಸುತ್ತಾರೆ. ಆದರೆ ದೇವಿ ಅಹಲ್ಯಾಬಾಯಿ ಅವರನ್ನು ನೋಡಿ - ಶತಮಾನಗಳ ಹಿಂದೆ, ಮಹಿಳೆಯರ ಘನತೆ ಮತ್ತು ಸಾಮರ್ಥ್ಯದ ಗೌರವದಿಂದ, ಅವರು ಆಗಲೇ ಹುಡುಗಿಯ ಮದುವೆಗೆ ಸೂಕ್ತ ವಯಸ್ಸನ್ನು ಯೋಚಿಸುತ್ತಿದ್ದರು. ಅವರು ಸ್ವತಃ ಚಿಕ್ಕ ವಯಸ್ಸಿನಲ್ಲಿಯೇ ವಿವಾಹವಾದರೂ, ಹೆಣ್ಣು ಮಕ್ಕಳ ಅಭಿವೃದ್ಧಿ ಮತ್ತು ಸಬಲೀಕರಣ ಖಚಿತಪಡಿಸಿಕೊಳ್ಳುವ ಮಾರ್ಗ ಯಾವುದು ಎಂಬುದರ ಬಗ್ಗೆ ಅವರಿಗೆ ಸ್ಪಷ್ಟವಾದ ತಿಳುವಳಿಕೆ ಇತ್ತು. ದೇವಿ ಅಹಲ್ಯಾಬಾಯಿಯವರ ದೃಷ್ಟಿಕೋನ ಹೀಗಿತ್ತು. ಮಹಿಳೆಯರಿಗೆ ಆಸ್ತಿಯ ಹಕ್ಕು ಇರಬೇಕು ಮತ್ತು ಅಕಾಲಿಕವಾಗಿ ಗಂಡನನ್ನು ಕಳೆದುಕೊಂಡ ವಿಧವೆಯರಿಗೆ ಮರುಮದುವೆಯಾಗಲು ಅವಕಾಶ ನೀಡಬೇಕು ಎಂದು ಅವರು ಪ್ರತಿಪಾದಿಸಿದ್ದರು. ಅವರ ಅವಧಿಯಲ್ಲಿ, ಅಂತಹ ವಿಷಯಗಳ ಬಗ್ಗೆ ಚರ್ಚಿಸುವುದು ಸಹ ತುಂಬಾ ಕಷ್ಟಕರವಾಗಿತ್ತು, ಆದರೂ ದೇವಿ ಅಹಲ್ಯಾಬಾಯಿ ಈ ಪ್ರಗತಿಪರ ಸುಧಾರಣೆಗಳನ್ನು ದೃಢವಾಗಿ ಬೆಂಬಲಿಸಿದರು. ಅವರು ಮಾಲ್ವಾ ಸೈನ್ಯದೊಳಗೆ ವಿಶೇಷ ಮಹಿಳಾ ತುಕಡಿಯನ್ನು ಸಹ ಸಂಘಟಿಸಿದರು. ಪಾಶ್ಚಿಮಾತ್ಯ ಜಗತ್ತಿನ ಜನರಿಗೆ ಇದರ ಬಗ್ಗೆ ತಿಳಿದಿಲ್ಲ. ಎರಡೂವರೆ ಮೂರು ಶತಮಾನಗಳ ಹಿಂದೆ, ಭಾರತವು ತನ್ನ ಸೈನ್ಯದಲ್ಲಿ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದರು ಎಂಬುದು ತಿಳಿದಿರಲಿಲ್ಲ, ಆದರೆ ಅವರು ಆಗಾಗ್ಗೆ ಮಹಿಳೆಯರ ಹಕ್ಕುಗಳ ಬಗ್ಗೆ ನಮ್ಮನ್ನು ಟೀಕಿಸುತ್ತಾರೆ ಮತ್ತು ಅವಹೇಳನ ಮಾಡಲು ಪ್ರಯತ್ನಿಸುತ್ತಾರೆ.
ಸ್ನೇಹಿತರೆ,
ಮಹಿಳೆಯರ ರಕ್ಷಣೆಗಾಗಿ, ಅವರು ಹಳ್ಳಿಗಳಲ್ಲಿ 'ನಾರಿ ಸುರಕ್ಷಾ ತೋಳಿಸ್' - ಮಹಿಳಾ ಸುರಕ್ಷತಾ ಗುಂಪುಗಳನ್ನು ಸ್ಥಾಪಿಸಿದರು. ಮೂಲಭೂತವಾಗಿ, ಮಾತೆ ಅಹಲ್ಯಾಬಾಯಿ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಮಹಿಳೆಯರ ಅಮೂಲ್ಯ ಪಾತ್ರವನ್ನು ಸಂಕೇತಿಸುತ್ತಾರೆ. ಇಂದು ನಾನು ದೇವಿ ಅಹಲ್ಯಾಬಾಯಿ ಜಿ ಅವರಿಗೆ ಅಪಾರ ಗೌರವದಿಂದ ನಮಸ್ಕರಿಸುತ್ತೇನೆ, ಅವರು ಸಮಾಜದಲ್ಲಿ ಅಂತಹ ಆಳವಾದ ಬದಲಾವಣೆಯನ್ನು ತಂದರು. ನಾನು ಅವರ ಪಾದಗಳಿಗೆ ನಮಸ್ಕರಿಸುತ್ತೇನೆ. ಅವರು ಎಲ್ಲಿದ್ದರೂ, ಅವರು ನಮ್ಮೆಲ್ಲರ ಮೇಲೆ ತಮ್ಮ ಆಶೀರ್ವಾದಗಳನ್ನು ಸುರಿಸುತ್ತಲೇ ಇರಬೇಕೆಂದು ಪ್ರಾರ್ಥಿಸುತ್ತೇನೆ.
ಸ್ನೇಹಿತರೆ,
ದೇವಿ ಅಹಲ್ಯಾಬಾಯಿ ಮಾಡಿದ ಒಂದು ಪ್ರಬಲ ಹೇಳಿಕೆ ಇದೆ, ಅದು ಯಾವಾಗಲೂ ನಮಗೆ ಸ್ಫೂರ್ತಿ ನೀಡುತ್ತದೆ, ಅದನ್ನು ನಾವು ಎಂದಿಗೂ ಮರೆಯಬಾರದು. ಅವರ ಮಾತುಗಳ ಸಾರಾಂಶ ಹೀಗಿತ್ತು: 'ನಾವು ಏನನ್ನು ಸ್ವೀಕರಿಸುತ್ತೇವೆಯೋ ಅದು ಸಾರ್ವಜನಿಕರು ನೀಡಿದ ಸಾಲ, ಮತ್ತು ಅದನ್ನು ಮರುಪಾವತಿಸುವುದು ನಮ್ಮ ಕರ್ತವ್ಯ. ಇಂದು ನಮ್ಮ ಸರ್ಕಾರವು ಲೋಕಮಾತೆ ಅಹಲ್ಯಾಬಾಯಿ ಪ್ರತಿಪಾದಿಸಿದ ಈ ಮೌಲ್ಯಗಳಿಂದಲೇ ಮಾರ್ಗದರ್ಶಿನ ಪಡೆದಿದೆ. "ನಾಗರಿಕ ದೇವೋ ಭವ" - ನಾಗರಿಕನೇ ದೇವರು – ಇದು ನಮ್ಮ ಆಡಳಿತದ ಮಂತ್ರವಾಗಿದೆ. ನಮ್ಮ ಸರ್ಕಾರವು ಮಹಿಳೆಯರ ನೇತೃತ್ವದ ಅಭಿವೃದ್ಧಿಯನ್ನು ಅದರ ಅಭಿವೃದ್ಧಿ ಕಾರ್ಯತಂತ್ರದ ಹೃದಯ ಭಾಗದಲ್ಲಿ ಇಟ್ಟುಕೊಂಡಿದೆ. ಸರ್ಕಾರದ ಪ್ರತಿಯೊಂದು ಪ್ರಮುಖ ಯೋಜನೆಯಲ್ಲೂ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳೇ ಕೇಂದ್ರಬಿಂದುವಾಗಿದ್ದಾರೆ. ಬಡವರಿಗಾಗಿ 4 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ, ಇವುಗಳಲ್ಲಿ ಹೆಚ್ಚಿನವು ನಮ್ಮ ತಾಯಂದಿರು ಮತ್ತು ಸಹೋದರಿಯರ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿವೆ, ಅವರಿಗೆ ಕಾನೂನುಬದ್ಧ ಮಾಲೀಕತ್ವ ನೀಡಲಾಗಿದೆ ಎಂಬುದು ನಿಮಗೆ ತಿಳಿದಿದೆ. ಈ ಮಹಿಳೆಯರಲ್ಲಿ ಅನೇಕರಿಗೆ, ಅವರ ಜೀವನದಲ್ಲಿ ಮೊದಲ ಬಾರಿಗೆ ಆಸ್ತಿಯನ್ನು ಅವರ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಇದರರ್ಥ ನಮ್ಮ ದೇಶದಲ್ಲಿ ಕೋಟ್ಯಂತರ ಮಹಿಳೆಯರು ಮೊದಲ ಬಾರಿಗೆ ಮನೆ ಮಾಲೀಕರಾಗಿದ್ದಾರೆ.
ಸ್ನೇಹಿತರೆ,
ಇಂದು, ಪ್ರತಿ ಮನೆಗೂ ನಲ್ಲಿ ನೀರು ಸಿಗುವಂತೆ ನೋಡಿಕೊಳ್ಳಲು ಸರ್ಕಾರ ಕೆಲಸ ಮಾಡುತ್ತಿದೆ, ಇದರಿಂದಾಗಿ ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ನೀರು ತರುವ ಕಷ್ಟ ತಪ್ಪುತ್ತದೆ, ನಮ್ಮ ಹೆಣ್ಣುಮಕ್ಕಳು ತಮ್ಮ ಓದಿನ ಮೇಲೆ ಗಮನ ಹರಿಸಬಹುದು. ಹಿಂದೆ, ಕೋಟ್ಯಂತರ ಮಹಿಳೆಯರಿಗೆ ವಿದ್ಯುತ್, ಎಲ್‌ಪಿಜಿ ಗ್ಯಾಸ್ ಮತ್ತು ಶೌಚಾಲಯಗಳಂತಹ ಮೂಲಭೂತ ಸೌಕರ್ಯಗಳ ಲಭ್ಯವಿರಲಿಲ್ಲ. ನಮ್ಮ ಸರ್ಕಾರ ಈ ಸೌಲಭ್ಯಗಳನ್ನು ಖಚಿತಪಡಿಸಿದೆ. ಇವು ಕೇವಲ ಅನುಕೂಲಗಳಲ್ಲ, ಅವು ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಗೌರವದ ಪ್ರಾಮಾಣಿಕ ಸೂಚಕವಾಗಿದೆ. ಈ ಕ್ರಮಗಳು ಬಡ ಕುಟುಂಬಗಳು ಮತ್ತು ಗ್ರಾಮೀಣ ಪ್ರದೇಶಗಳ ಮಹಿಳೆಯರು ಎದುರಿಸುತ್ತಿರುವ ಅನೇಕ ದೈನಂದಿನ ಹೋರಾಟಗಳನ್ನು ಕಡಿಮೆ ಮಾಡಿವೆ.
ಸ್ನೇಹಿತರೆ,
ಹಿಂದಿನ ಕಾಲದಲ್ಲಿ, ಅನೇಕ ಮಹಿಳೆಯರು ಅನಾರೋಗ್ಯ ಬಳಲುತ್ತಿದ್ದು, ಗರ್ಭಾವಸ್ಥೆಯಲ್ಲೂ ಸಹ, ವೈದ್ಯಕೀಯ ವೆಚ್ಚಗಳು ಕುಟುಂಬದ ಮೇಲೆ ಹೊರೆಯಾಗಬಹುದೆಂಬ ಭಯದಿಂದ ಅವರು ಆಸ್ಪತ್ರೆಗೆ ಹೋಗುವುದನ್ನು ತಪ್ಪಿಸಿದರು. ಪರಿಣಾಮವಾಗಿ, ಅವರು ನೋವನ್ನು ಮೌನವಾಗಿ ಸಹಿಸಿಕೊಂಡರು.ಆದರೆ ಆಯುಷ್ಮಾನ್ ಭಾರತ್ ಯೋಜನೆಯು ಅವರನ್ನು ಈ ಚಿಂತೆಯಿಂದ ಮುಕ್ತಗೊಳಿಸಿದೆ. ಈಗ, ಅವರೂ ಸಹ 5 ಲಕ್ಷ ರೂ.ವರೆಗೆ ಉಚಿತ ಆಸ್ಪತ್ರೆ ಚಿಕಿತ್ಸೆಯನ್ನು ಪಡೆಯಬಹುದು.
ಸ್ನೇಹಿತರೆ,
ಶಿಕ್ಷಣ ಮತ್ತು ಆರೋಗ್ಯ ಸೇವೆಯ ಜತೆಗೆ, ಮಹಿಳಾ ಸಬಲೀಕರಣಕ್ಕೆ ಅತ್ಯಂತ ನಿರ್ಣಾಯಕ ಅಂಶವೆಂದರೆ ಆದಾಯ ಗಳಿಕೆ. ಮಹಿಳೆ ತನ್ನ ಸ್ವಂತ ಹಣ ಗಳಿಸಿದಾಗ, ಮನೆಯೊಳಗೆ ಅವಳ ಸ್ವಾಭಿಮಾನ ಹೆಚ್ಚಾಗುತ್ತದೆ, ಕುಟುಂಬ ನಿರ್ಧಾರಗಳಲ್ಲಿ ಅವಳ ಪಾತ್ರ ಹೆಚ್ಚು ಮಹತ್ವದ್ದಾಗಿದೆ. ಕಳೆದ 11 ವರ್ಷಗಳಲ್ಲಿ ನಮ್ಮ ಸರ್ಕಾರವು ಭಾರತದ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ನಿರಂತರವಾಗಿ ಕೆಲಸ ಮಾಡಿದೆ. ಊಹಿಸಿ, 2014ಕ್ಕಿಂತ ಮೊದಲು, ನೀವು ನನಗೆ ಸೇವೆಯ ಜವಾಬ್ದಾರಿ ವಹಿಸುವ ಮೊದಲು, ದೇಶದಲ್ಲಿ 30 ಕೋಟಿಗೂ ಹೆಚ್ಚು ಮಹಿಳೆಯರಿಗೆ ಬ್ಯಾಂಕ್ ಖಾತೆಯೂ ಇರಲಿಲ್ಲ. ನಮ್ಮ ಸರ್ಕಾರ ಜನಧನ ಯೋಜನೆ ಪ್ರಾರಂಭಿಸಿ, ಅವರೆಲ್ಲರಿಗೂ ಬ್ಯಾಂಕ್ ಖಾತೆಗಳನ್ನು ತೆರೆದಿದೆ. ಈ ಖಾತೆಗಳ ಮೂಲಕ ಸರ್ಕಾರವು ಈಗ ವಿವಿಧ ಯೋಜನೆಗಳ ಹಣವನ್ನು ನೇರವಾಗಿ ಅವರ ಕೈಗೆ ವರ್ಗಾಯಿಸುತ್ತಿದೆ. ಇಂದು ಅವರು ಹಳ್ಳಿಗಳಲ್ಲಿ ಅಥವಾ ನಗರಗಳಲ್ಲಿ ವಾಸಿಸುತ್ತಿರಲಿ, ಮಹಿಳೆಯರು ಸ್ವ-ಉದ್ಯೋಗ ಮಾಡಿ, ಜೀವನೋಪಾಯ ಗಳಿಸುತ್ತಿದ್ದಾರೆ, ಆರ್ಥಿಕವಾಗಿ ಸ್ವತಂತ್ರರಾಗುತ್ತಿದ್ದಾರೆ. 'ಮುದ್ರಾ ಯೋಜನೆ' ಮೂಲಕ, ಅವರು ಮೇಲಾಧಾರ-ಮುಕ್ತ ಸಾಲಗಳನ್ನು ಪಡೆಯುತ್ತಿದ್ದಾರೆ. ಮುದ್ರಾ ಯೋಜನೆಯ ಫಲಾನುಭವಿಗಳಲ್ಲಿ 75%ಕ್ಕಿಂತ ಹೆಚ್ಚಿನ ಜನರು ನಮ್ಮ ಮಹಿಳೆಯರಾಗಿದ್ದಾರೆ.
ಸ್ನೇಹಿತರೆ,
ಇಂದು ದೇಶಾದ್ಯಂತ 10 ಕೋಟಿ ಮಹಿಳೆಯರು ಸ್ವಸಹಾಯ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದು, ವಿವಿಧ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರವು ಈ ಮಹಿಳೆಯರಿಗೆ ಹೊಸ ಆದಾಯದ ಮೂಲಗಳನ್ನು ಸೃಷ್ಟಿಸುವಲ್ಲಿ ಸಹಾಯ ಮಾಡುತ್ತಿದೆ, ಹಲವಾರು ಲಕ್ಷ ರೂಪಾಯಿ ಮೊತ್ತದ ಬೆಂಬಲ ನೀಡುತ್ತಿದೆ. ನಾವು ಅಂತಹ 3 ಕೋಟಿ ಮಹಿಳೆಯರನ್ನು ಲಕ್ಷಪತಿ ದೀದಿಗಳನ್ನಾಗಿ ಮಾಡಲು ಸಂಕಲ್ಪ ಮಾಡಿದ್ದೇವೆ. 1.5 ಕೋಟಿಗೂ ಹೆಚ್ಚು ಸಹೋದರಿಯರು ಈಗಾಗಲೇ ಈ ಮೈಲಿಗಲ್ಲು ಸಾಧಿಸಿದ್ದಾರೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಪ್ರತಿ ಹಳ್ಳಿಯಲ್ಲಿ, ಬ್ಯಾಂಕ್ ಸಖಿಗಳು ಈಗ ಜನರನ್ನು ಬ್ಯಾಂಕಿಂಗ್ ಸೇವೆಗಳಿಗೆ ಸಂಪರ್ಕಿಸುತ್ತಿದ್ದಾರೆ. ಸರ್ಕಾರವು 'ಬಿಮಾ ಸಖಿ'ಗಳಿಗೆ ತರಬೇತಿ ನೀಡುವ ಅಭಿಯಾನವನ್ನು ಸಹ ಪ್ರಾರಂಭಿಸಿದೆ. ದೇಶಾದ್ಯಂತ ವಿಮಾ ರಕ್ಷಣೆ ಒದಗಿಸುವಲ್ಲಿ ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಮಹತ್ವದ ಪಾತ್ರ ವಹಿಸುತ್ತಿದ್ದಾರೆ.
ಸ್ನೇಹಿತರೆ,
ಮಹಿಳೆಯರನ್ನು ಹೊಸ ತಂತ್ರಜ್ಞಾನ ಪ್ರವೇಶದಿಂದ ಹೊರಗಿಡುತ್ತಿದ್ದ ಕಾಲವಿತ್ತು. ಇಂದು ನಮ್ಮ ರಾಷ್ಟ್ರವು ಆ ಯುಗವನ್ನು ಬಹಳ ಹಿಂದಕ್ಕೆ ಹಾಕಿದೆ. ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಆಧುನಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವಂತೆ ಖಚಿತಪಡಿಸಿಕೊಳ್ಳಲು ಸರ್ಕಾರ ಕೆಲಸ ಮಾಡುತ್ತಿದೆ. ಉದಾಹರಣೆಗೆ, ಕೃಷಿಯಲ್ಲಿ, ನಾವು ಡ್ರೋನ್ ಕ್ರಾಂತಿಯನ್ನು ನೋಡುತ್ತಿದ್ದೇವೆ, ನಮ್ಮ ಗ್ರಾಮೀಣ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. 'ನಮೋ ಡ್ರೋನ್ ದೀದಿ' ಉಪಕ್ರಮವು ಹಳ್ಳಿಯ ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿದೆ, ಅವರ ಆದಾಯ ಹೆಚ್ಚಿಸುತ್ತಿದೆ, ಅವರ ಸಮುದಾಯಗಳಲ್ಲಿ ಅವರಿಗೆ ಮನ್ನಣೆ ಗಳಿಸುತ್ತಿದೆ.
ಸ್ನೇಹಿತರೆ,
ನಮ್ಮ ಹೆಣ್ಣು ಮಕ್ಕಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‌ಗಳು ಮತ್ತು ಪೈಲಟ್‌ಗಳಾಗುತ್ತಿದ್ದಾರೆ. ವಿಜ್ಞಾನ ಮತ್ತು ಗಣಿತದಲ್ಲಿ ಅಧ್ಯಯನ ಮಾಡುವ ಯುವತಿಯರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ನಮ್ಮ ಎಲ್ಲಾ ಪ್ರಮುಖ ಬಾಹ್ಯಾಕಾಶ ಯಾನಗಳಲ್ಲಿ ಅನೇಕ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳು ವಿಜ್ಞಾನಿಗಳಾಗಿ ಕೊಡುಗೆ ನೀಡುತ್ತಿದ್ದಾರೆ. 100ಕ್ಕೂ ಹೆಚ್ಚು ಮಹಿಳಾ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಪಾತ್ರ ವಹಿಸಿದ ಚಂದ್ರಯಾನ-3 ಕಾರ್ಯಾಚರಣೆಯ ಬಗ್ಗೆ ಇಡೀ ರಾಷ್ಟ್ರವು ಹೆಮ್ಮೆಪಡುತ್ತದೆ. ಅದೇ ರೀತಿ, ಸ್ಟಾರ್ಟಪ್‌ಗಳ ಯುಗದಲ್ಲಿ, ನಮ್ಮ ಹೆಣ್ಣು ಮಕ್ಕಳು ಅಸಾಧಾರಣ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ದೇಶದಲ್ಲಿ ಸುಮಾರು 45% ಸ್ಟಾರ್ಟಪ್‌ಗಳಲ್ಲಿ, ಕನಿಷ್ಠ ಒಬ್ಬ ಮಹಿಳೆ - ನಮ್ಮ ಸಹೋದರಿಯರು ಅಥವಾ ಹೆಣ್ಣು ಮಕ್ಕಳಲ್ಲಿ ಒಬ್ಬರು ಇದ್ದಾರೆ, ಈ ಸಂಖ್ಯೆ ಸ್ಥಿರವಾಗಿ ಏರುತ್ತಲೇ ಇದೆ.
ಸ್ನೇಹಿತರೆ,
ನೀತಿ ನಿರೂಪಣೆಯಲ್ಲಿ ಹುಡುಗಿಯರು ಮತ್ತು ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ. ಕಳೆದ ದಶಕದಲ್ಲಿ, ಈ ದಿಕ್ಕಿನಲ್ಲಿ ಅನೇಕ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಮ್ಮ ಸರ್ಕಾರ ಮೊದಲ ಬಾರಿ, ಪೂರ್ಣಾವಧಿಯ ಮಹಿಳಾ ರಕ್ಷಣಾ ಸಚಿವೆಯನ್ನು ನೇಮಿಸಿತ್ತು. ಮೊದಲ ಬಾರಿಗೆ, ದೇಶವು ಮಹಿಳಾ ಹಣಕಾಸು ಸಚಿವೆಯನ್ನು ಹೊಂದಿದೆ. ಪಂಚಾಯಿತಿಗಳಿಂದ ಹಿಡಿದು ಸಂಸತ್ತಿನವರೆಗೆ, ಮಹಿಳಾ ಪ್ರತಿನಿಧಿಗಳ ಸಂಖ್ಯೆ ಸ್ಥಿರವಾಗಿ ಹೆಚ್ಚುತ್ತಿದೆ. ಪ್ರಸ್ತುತ ಸಂಸತ್ತಿನಲ್ಲಿ, 75 ಮಹಿಳಾ ಸಂಸದರಿದ್ದಾರೆ. ಆದಾಗ್ಯೂ, ಈ ಭಾಗವಹಿಸುವಿಕೆಯನ್ನು ಇನ್ನಷ್ಟು ಮುಂದುವರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಇದೇ ದೃಷ್ಟಿಕೋನದಿಂದಲೇ 'ನಾರಿ ಶಕ್ತಿ ವಂದನ್ ಅಧಿನಿಯಮ' ಜಾರಿಗೆ ತರಲಾಯಿತು. ಅನೇಕ ವರ್ಷಗಳಿಂದ ಬಾಕಿ ಉಳಿದಿದ್ದ ಈ ಶಾಸನವನ್ನು ಈಗ ನಮ್ಮ ಸರ್ಕಾರ ಅಂಗೀಕರಿಸಿದೆ. ಇದರ ಪರಿಣಾಮವಾಗಿ, ಸಂಸತ್ತು ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳಾ ಮೀಸಲಾತಿ ವಾಸ್ತವವಾಗಿದೆ. ಮೂಲಭೂತವಾಗಿ, ಬಿಜೆಪಿ ಸರ್ಕಾರವು ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳನ್ನು ಪ್ರತಿಯೊಂದು ಹಂತದಲ್ಲೂ, ಪ್ರತಿಯೊಂದು ಕ್ಷೇತ್ರದಲ್ಲೂ ಸಬಲೀಕರಣಗೊಳಿಸಲು ಕೆಲಸ ಮಾಡುತ್ತಿದೆ.
ಸ್ನೇಹಿತರೆ,
ಭಾರತವು ಸಂಸ್ಕೃತಿ ಮತ್ತು ಸಂಪ್ರದಾಯದ ಭೂಮಿ. ನಮ್ಮ ಸಂಪ್ರದಾಯಗಳಲ್ಲಿ, ಸಿಂದೂರವು ಸ್ತ್ರೀಶಕ್ತಿಯ ಪೂಜ್ಯ ಸಂಕೇತವಾಗಿದೆ. ಭಗವಾನ್ ರಾಮನಿಗೆ ಆಳವಾಗಿ ಭಕ್ತಿ ಹೊಂದಿರುವ ಹನುಮಂತನಿಗೆ ಸಿಂದೂರ ಇಟ್ಟು ಚಿತ್ರಿಸಲಾಗಿದೆ. ನಾವು ದೇವಿ ಪೂಜೆಯ ಸಮಯದಲ್ಲಿ ಸಿಂದೂರವನ್ನು ಅರ್ಪಿಸುತ್ತೇವೆ. ಇಂದು, ಇದೇ ಸಿಂದೂರವು ಭಾರತದ ಶೌರ್ಯ ಮತ್ತು ಧೈರ್ಯದ ಸಂಕೇತವಾಗಿದೆ.
ಸ್ನೇಹಿತರೆ,
ಪಹಲ್ಗಾಮ್‌ನಲ್ಲಿ, ಭಯೋತ್ಪಾದಕರು ಭಾರತೀಯರ ರಕ್ತವನ್ನು ಚೆಲ್ಲಿದ್ದಾರೆ, ಮಾತ್ರವಲ್ಲದೆ ಅವರು ನಮ್ಮ ಸಂಸ್ಕೃತಿಯ ಮೇಲೆ ದಾಳಿ ನಡೆಸಿದ್ದಾರೆ. ಅವರು ನಮ್ಮ ಸಮಾಜವನ್ನು ವಿಭಜಿಸಲು ಪ್ರಯತ್ನಿಸಿದ್ದಾರೆ. ಮುಖ್ಯವಾಗಿ, ಈ ಭಯೋತ್ಪಾದಕರು ಭಾರತದ ಮಹಿಳೆಯರಿಗೆ ನೇರವಾಗಿ ಸವಾಲು ಹಾಕಿದ್ದಾರೆ. ಆ ಸವಾಲು ಭಯೋತ್ಪಾದಕರು ಮತ್ತು ಅವರ ಬೆಂಬಲಿಗರಿಗೆ ಮರಣದಂಡನೆ ವಿಧಿಸಿದೆ. 'ಆಪರೇಷನ್ ಸಿಂದೂರ' ಭಾರತದ ಇತಿಹಾಸದಲ್ಲಿ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಾಗಿದೆ. ನಮ್ಮ ಸಶಸ್ತ್ರ ಪಡೆಗಳು ಆಳವಾಗಿ ದಾಳಿ ಮಾಡಿವೆ. ಶತ್ರು ಪ್ರದೇಶಕ್ಕೆ ನೂರಾರು ಕಿಲೋಮೀಟರ್ ನುಸುಳಿ ಪಾಕಿಸ್ತಾನಿ ಸೈನ್ಯವು ಸಹ ನಿರೀಕ್ಷಿಸದ ಪ್ರದೇಶಗಳಲ್ಲಿ ಭಯೋತ್ಪಾದಕ ಅಡಗುತಾಣಗಳನ್ನು ನಾಶ ಮಾಡಿದೆ. ಈ ಕಾರ್ಯಾಚರಣೆಯು ನಿಸ್ಸಂದಿಗ್ಧವಾದ ಸಂದೇಶವನ್ನು ಕಳುಹಿಸಿದೆ: ಭಯೋತ್ಪಾದನೆಯ ಮೂಲಕ ಪರ್ಯಾಯ(ಪ್ರಾಕ್ಸಿ) ಯುದ್ಧಗಳ ಯುಗ ಮುಗಿದಿದೆ. ಇಂದಿನಿಂದ, ನಾವು ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಭಯೋತ್ಪಾದನೆಗೆ ಆಶ್ರಯ ನೀಡುವ ಮತ್ತು ಬೆಂಬಲಿಸುವವರ ಹೃದಯದ ಮೇಲೆ ನಾವು ದಾಳಿ ಮಾಡುತ್ತೇವೆ, ಅವರು ಅದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ. ಇಂದು 140 ಕೋಟಿ ಭಾರತೀಯರ ಒಗ್ಗಟ್ಟಿನ ಧ್ವನಿಯಾದ ಪ್ರತಿಯೊಬ್ಬ ಭಾರತೀಯ ನಾಗರಿಕನು ಘೋಷಿಸುತ್ತಿದ್ದಾರೆ: "ನೀವು ಗುಂಡು ಹಾರಿಸಿದರೆ, ಪ್ರತಿಕ್ರಿಯೆಯಾಗಿ ಗುಂಡಿನ ದಾಳಿಗೆ ಸಿದ್ಧರಾಗಿರಿ."
ಸ್ನೇಹಿತರೆ,
ಆಪರೇಷನ್ ಸಿಂದೂರ್ ನಮ್ಮ ಮಹಿಳೆಯರ ಶಕ್ತಿಯ ಪ್ರಬಲ ಸಂಕೇತವಾಗಿದೆ. ಈ ಕಾರ್ಯಾಚರಣೆಯಲ್ಲಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ವಹಿಸಿದ ಮಹತ್ವದ ಪಾತ್ರದ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಜಮ್ಮುವಿನಿಂದ ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್‌ನ ಗಡಿಗಳವರೆಗೆ, ನಮ್ಮ ಬಿಎಸ್‌ಎಫ್‌ನ ಹೆಚ್ಚಿನ ಸಂಖ್ಯೆಯ ಹೆಣ್ಣು ಮಕ್ಕಳು ಮುಂಚೂಣಿಯಲ್ಲಿ ನಿಂತು, ನಮ್ಮ ರಾಷ್ಟ್ರವನ್ನು ಧೈರ್ಯದಿಂದ ರಕ್ಷಿಸಿದರು. ಅವರು ಗಡಿಯಾಚೆಗಿನ ಗುಂಡಿನ ದಾಳಿಗೆ ನಿರ್ಣಾಯಕವಾಗಿ ಪ್ರತಿಕ್ರಿಯಿಸಿದರು. ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳಿಂದ ಶತ್ರು ಠಾಣಾಗಳ ನಾಶದವರೆಗೆ, ಬಿಎಸ್‌ಎಫ್‌ನ ಧೈರ್ಯಶಾಲಿ ಹೆಣ್ಣು ಮಕ್ಕಳು ಗಮನಾರ್ಹ ಶೌರ್ಯ ಪ್ರದರ್ಶಿಸಿದರು.
ಸ್ನೇಹಿತರೆ,
ಇಂದು ರಾಷ್ಟ್ರದ ರಕ್ಷಣಾ ಕ್ಷೇತ್ರದಲ್ಲಿ ಭಾರತದ ಹೆಣ್ಣು ಮಕ್ಕಳ ಅಸಾಧಾರಣ ಸಾಮರ್ಥ್ಯಗಳನ್ನು ಜಗತ್ತು ನೋಡುತ್ತಿದೆ. ಈ ಕ್ಷೇತ್ರದಲ್ಲಿ ಅವರನ್ನು ಸಬಲೀಕರಣಗೊಳಿಸಲು ಸರ್ಕಾರ ಕಳೆದ ದಶಕದಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಶಾಲೆಗಳಿಂದ ಯುದ್ಧ ಭೂಮಿಯವರೆಗೆ, ದೇಶವು ಈಗ ತನ್ನ ಹೆಣ್ಣು ಮಕ್ಕಳ ಧೈರ್ಯ ಮತ್ತು ಶಕ್ತಿಯ ಮೇಲೆ ಅಭೂತಪೂರ್ವ ನಂಬಿನ್ನು ಇರಿಸಿದೆ. ಮೊದಲ ಬಾರಿಗೆ, ನಮ್ಮ ಸಶಸ್ತ್ರ ಪಡೆಗಳು ಹೆಣ್ಣು ಮಕ್ಕಳಿಗೆ ಸೈನಿಕ ಶಾಲೆಗಳ ಬಾಗಿಲುಗಳನ್ನು ತೆರೆದಿವೆ. 2014ಕ್ಕಿಂತ ಮೊದಲು, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್(NCC)ನಲ್ಲಿ ಕೇವಲ 25% ಕೆಡೆಟ್‌ಗಳು ಹೆಣ್ಣು ಮಕ್ಕಳಿದ್ದರು. ಇಂದು, ಆ ಅಂಕಿಅಂಶವು 50% ತಲುಪುತ್ತಿದೆ. ನಿನ್ನೆ, ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಲಾಗಿದೆ. ಮಹಿಳಾ ಕೆಡೆಟ್‌ಗಳ ಮೊದಲ ಬ್ಯಾಚ್ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ(NDA) ಪದವಿ ಪಡೆದಿರುವುದನ್ನು ನೀವು ಪತ್ರಿಕೆಗಳಲ್ಲಿ ನೋಡಿರಬೇಕು. ಇಂದು ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಮಹಿಳೆಯರನ್ನು ಮುಂಚೂಣಿಯಲ್ಲಿ ನಿಯೋಜಿಸಲಾಗುತ್ತಿದೆ. ಫೈಟರ್ ಜೆಟ್‌ಗಳಿಂದ ಹಿಡಿದು 'ಐಎನ್‌ಎಸ್ ವಿಕ್ರಾಂತ್' ಯುದ್ಧ ನೌಕೆಯವರೆಗೆ, ಮಹಿಳಾ ಅಧಿಕಾರಿಗಳು ತಮ್ಮ ಧೈರ್ಯ ಮತ್ತು ಸಾಮರ್ಥ್ಯವನ್ನು ನಿರ್ಭಯವಾಗಿ ಪ್ರದರ್ಶಿಸುತ್ತಿದ್ದಾರೆ.
ಸ್ನೇಹಿತರೆ,
ನಮ್ಮ ನೌಕಾಪಡೆಯ ಧೈರ್ಯಶಾಲಿ ಹೆಣ್ಣು ಮಕ್ಕಳ ಶೌರ್ಯದ ಇತ್ತೀಚಿನ ಮತ್ತು ಸ್ಫೂರ್ತಿದಾಯಕ ಉದಾಹರಣೆ ನಮ್ಮಲ್ಲಿದೆ. ನಾನು 'ನಾವಿಕಾ ಸಾಗರ್ ಪರಿಕ್ರಮ'ದ ಮೇಲೆ ಬೆಳಕು ಚೆಲ್ಲಲು ಬಯಸುತ್ತೇನೆ. ಭಾರತೀಯ ನೌಕಾಪಡೆಯ ಇಬ್ಬರು ಧೈರ್ಯಶಾಲಿ ಮಹಿಳಾ ಅಧಿಕಾರಿಗಳು ಸುಮಾರು 250 ದಿನಗಳ ಕಾಲ ಸಮುದ್ರಯಾನ ಕೈಗೊಂಡರು, ಜಗತ್ತನ್ನು ಸುತ್ತಿದರು. ಈ ಅದ್ಭುತ ಪ್ರಯಾಣವು ಎಂಜಿನ್‌ನಿಂದಲ್ಲ, ಬದಲಾಗಿ ಗಾಳಿಯ ಸಹಾಯದಿಂದ ನಡೆಸಲ್ಪಟ್ಟ ದೋಣಿಯಲ್ಲಿ ಪೂರ್ಣಗೊಂಡಿತು. ಊಹಿಸಿಕೊಳ್ಳಿ - ಸಮುದ್ರದಲ್ಲಿ 250 ದಿನಗಳು, ಭೂಮಿಯ ದೃಷ್ಟಿ ಇಲ್ಲದೆ ವಾರಗಟ್ಟಲೆ, ಮತ್ತು ಭೀಕರ ಬಿರುಗಾಳಿಗಳು ಮತ್ತು ಪ್ರಕ್ಷುಬ್ಧ ಹವಾಮಾನ ಎದುರಿಸುತ್ತಿದ್ದಾಗ. ಆದರೂ, ಅವರು ಪ್ರತಿಯೊಂದು ಸವಾಲನ್ನು ಜಯಿಸಿದರು. ಎಷ್ಟೇ ಭೀಕರ ಅಡಚಣೆಯಿದ್ದರೂ, ಭಾರತದ ಹೆಣ್ಣು ಮಕ್ಕಳು ಅದನ್ನು ಜಯಿಸುವ ಶಕ್ತಿ ಹೊಂದಿದ್ದಾರೆ ಎಂಬುದಕ್ಕೆ ಇದು ಪುರಾವೆಯಾಗಿದೆ.
ಸ್ನೇಹಿತರೆ,
ನಕ್ಸಲೀಯರ ದಂಗೆ ಎದುರಿಸುವುದಾಗಲಿ ಅಥವಾ ಗಡಿಯಾಚೆಗಿನ ಭಯೋತ್ಪಾದನೆ ಎದುರಿಸುವುದಾಗಲಿ, ಇಂದು ನಮ್ಮ ಹೆಣ್ಣು ಮಕ್ಕಳು ರಾಷ್ಟ್ರವನ್ನು ರಕ್ಷಿಸುವಲ್ಲಿ ಅಸಾಧಾರಣ ಗುರಾಣಿಯಾಗುತ್ತಿದ್ದಾರೆ. ದೇವಿ ಅಹಲ್ಯೆಯ ಈ ಪವಿತ್ರ ಭೂಮಿಯಿಂದ, ನಾನು ಮತ್ತೊಮ್ಮೆ ಭಾರತದ ಮಹಿಳೆಯರಿಗೆ ನನ್ನ ಗೌರವಯುತ ನಮನಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ದೇವಿ ಅಹಲ್ಯೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಲ್ಲದೆ, ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಹ ಸಂರಕ್ಷಿಸಿದ್ದಾರೆ. ಇಂದಿನ ಭಾರತವೂ ಅಭಿವೃದ್ಧಿ ಮತ್ತು ಪರಂಪರೆಯ 2 ಹಾದಿಗಳಲ್ಲಿ ಮುನ್ನಡೆಯುತ್ತಿದೆ. ಇಂದಿನ ಕಾರ್ಯಕ್ರಮವು ದೇಶಾದ್ಯಂತ ಆಧುನಿಕ ಮೂಲಸೌಕರ್ಯಗಳು ಎಷ್ಟು ವೇಗವಾಗಿ ನಿರ್ಮಾಣವಾಗುತ್ತಿವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇಂದು, ಮಧ್ಯಪ್ರದೇಶವು ತನ್ನ ಮೊದಲ ಮೆಟ್ರೋ ಸೇವೆಯನ್ನು ಪಡೆದುಕೊಂಡಿದೆ. ಸ್ವಚ್ಛತೆಗಾಗಿ ಈಗಾಗಲೇ ಜಾಗತಿಕವಾಗಿ ಮೆಚ್ಚುಗೆ ಪಡೆದ ಇಂದೋರ್, ಈಗ ಮೆಟ್ರೋ ಸಂಪರ್ಕಕ್ಕೆ ಹೆಸರುವಾಸಿಯಾಗಲಿದೆ. ಭೋಪಾಲ್‌ನಲ್ಲಿಯೂ ಸಹ, ಮೆಟ್ರೋ ಕೆಲಸ ವೇಗವಾಗಿ ಪ್ರಗತಿಯಲ್ಲಿದೆ. ಮಧ್ಯಪ್ರದೇಶದಾದ್ಯಂತ, ರೈಲ್ವೆ ವಲಯದಲ್ಲಿ ವ್ಯಾಪಕ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಕೆಲವೇ ದಿನಗಳ ಹಿಂದೆ, ಕೇಂದ್ರ ಸರ್ಕಾರವು ರತ್ಲಂ-ನಾಗ್ಡಾ ಮಾರ್ಗವನ್ನು ಚತುಷ್ಪಥ ಮಾರ್ಗವಾಗಿ ಪರಿವರ್ತಿಸಲು ಅನುಮೋದನೆ ನೀಡಿತು. ಇದು ಹೆಚ್ಚಿನ ರೈಲುಗಳ ಸಂಚಾರ ಮತ್ತು ಈ ಪ್ರದೇಶದಲ್ಲಿ ದಟ್ಟಣೆ ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ. ಕೇಂದ್ರ ಸರ್ಕಾರವು ಇಂದೋರ್-ಮನ್ಮಾಡ್ ರೈಲ್ವೆ ಯೋಜನೆಗೆ ಅನುಮೋದನೆ ನೀಡಿದೆ.
ಸ್ನೇಹಿತರೆ,
ಮಧ್ಯಪ್ರದೇಶದ ದಾತಿಯಾ ಮತ್ತು ಸತ್ನಾ ಈಗ ವಿಮಾನ ಪ್ರಯಾಣ ಜಾಲಕ್ಕೆ ಸಂಯೋಜಿಸಲ್ಪಟ್ಟಿವೆ. ಈ 2 ವಿಮಾನ ನಿಲ್ದಾಣಗಳು ಬುಂದೇಲ್‌ಖಂಡ್ ಮತ್ತು ವಿಂಧ್ಯ ಪ್ರದೇಶಗಳಲ್ಲಿ ವಾಯು ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ. ಇದು ಮಾತೆ ಪೀತಾಂಬರ, ಮಾತೆ ಶಾರದಾ ದೇವಿ ಮತ್ತು ಪೂಜ್ಯ ಚಿತ್ರಕೂಟ ಧಾಮದ ಪವಿತ್ರ ಸ್ಥಳಗಳಿಗೆ ಭೇಟಿ ನೀಡಲು ಹೆಚ್ಚು ಅನುಕೂಲಕರವಾಗಿಸುತ್ತದೆ.
ಸ್ನೇಹಿತರೆ,
ಭಾರತವು ತನ್ನ ಇತಿಹಾಸದ ಒಂದು ಪ್ರಮುಖ ಘಟ್ಟದಲ್ಲಿದೆ - ನಾವು ನಮ್ಮ ಭದ್ರತೆಯನ್ನು ಬಲಪಡಿಸಬೇಕಾದ, ನಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸುವ ಮತ್ತು ಪ್ರತಿ ಹಂತದಲ್ಲೂ ನಮ್ಮ ಸಾಂಸ್ಕೃತಿಕ ಗುರುತು ಕಾಪಾಡಿಕೊಳ್ಳಬೇಕಾದ ಸಮಯ. ಇದನ್ನು ಸಾಧಿಸಲು, ನಮ್ಮ ಮಹಿಳೆಯರು - ನಮ್ಮ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ನಾವು ಲೋಕಮಾತೆ ದೇವಿ ಅಹಲ್ಯಾಬಾಯಿಯಿಂದ ಸ್ಫೂರ್ತಿ ಪಡೆದಿದ್ದೇವೆ. ರಾಣಿ ಲಕ್ಷ್ಮಿಬಾಯಿ, ರಾಣಿ ದುರ್ಗಾವತಿ, ರಾಣಿ ಕಮಲಾಪತಿ, ಅವಂತಿಬಾಯಿ ಲೋಧಿ, ಕಿತ್ತೂರಿನ ರಾಣಿ ಚೆನ್ನಮ್ಮ, ರಾಣಿ ಗೈಡಿನ್ಲಿಯು, ವೇಲು ನಾಚಿಯಾರ್ ಮತ್ತು ಸಾವಿತ್ರಿಬಾಯಿ ಫುಲೆ - ಇವರೆಲ್ಲರೂ ನಮ್ಮ ಹೃದಯಗಳನ್ನು ಅಪಾರ ಹೆಮ್ಮೆಯಿಂದ ತುಂಬಿದ್ದಾರೆ. ಲೋಕಮಾತೆ ಅಹಲ್ಯಾಬಾಯಿ ಅವರ 300ನೇ ಜನ್ಮ ದಿನಾಚರಣೆಯು ಮುಂದಿನ ಪೀಳಿಗೆಗೆ ಬಲಿಷ್ಠ ಮತ್ತು ಹೆಚ್ಚು ಚೇತರಿಕೆಯ ಭಾರತವನ್ನು ನಿರ್ಮಿಸಲು ನಮಗೆ ಸ್ಫೂರ್ತಿ ನೀಡಲಿ. ಈ ಸಂಕಲ್ಪದೊಂದಿಗೆ, ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ.
ಈಗ, ನಿಮ್ಮ ತ್ರಿವರ್ಣ ಧ್ವಜವನ್ನು ಎತ್ತಿ ನನ್ನೊಂದಿಗೆ ಹೀಗೆ ಹೇಳಿ:
ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ!
ವಂದೇ ಮಾತರಂ!
ವಂದೇ ಮಾತರಂ
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
*****
(Release ID: 2158700)
Visitor Counter : 10
Read this release in:
English
,
Urdu
,
हिन्दी
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam