ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಗಸ್ಟ್ 22ರಂದು ಬಿಹಾರ ಮತ್ತು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


ಗಯಾದಲ್ಲಿ ಸುಮಾರು 13,000 ಕೋಟಿ ರೂಪಾಯಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಯೋಜನೆಗಳು ಬಹು ವಲಯಗಳಿಗೆ ಸೇರಿವೆ: ವಿದ್ಯುತ್, ರಸ್ತೆ, ಆರೋಗ್ಯ, ನಗರಾಭಿವೃದ್ಧಿ ಮತ್ತು ನೀರು ಸರಬರಾಜು

ಉತ್ತರ ಮತ್ತು ದಕ್ಷಿಣ ಬಿಹಾರದ ನಡುವಿನ ಸಂಪರ್ಕವನ್ನು ಸುಧಾರಿಸುವ ನಿಟ್ಟಿನಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಔಟಾ-ಸಿಮಾರಿಯಾ ಸೇತುವೆಯನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ

ಹೊಸ ಸೇತುವೆಯಿಂದ ಭಾರೀ ವಾಹನಗಳಿಗೆ 100 ಕಿ.ಮೀ.ಗಿಂತ ಹೆಚ್ಚು ದೂರದ ಸುತ್ತು ಹಾದಿ ಕಡಿಮೆಯಾಗಲಿದೆ ಮತ್ತು, ಸಿಮಾರಿಯಾ ಧಾಮಕ್ಕೆ ಸಂಪರ್ಕ ಸುಧಾರಿಸುತ್ತದೆ

ಗಯಾ ಮತ್ತು ದೆಹಲಿ ನಡುವಿನ 'ಅಮೃತ್ ಭಾರತ್ ಎಕ್ಸ್ ಪ್ರೆಸ್' ಹಾಗೂ  ವೈಶಾಲಿ ಮತ್ತು ಕೊಡೆರ್ಮಾ ನಡುವಿನ ಬೌದ್ಧ ಸರ್ಕ್ಯೂಟ್ ರೈಲಿಗೆ ಪ್ರಧಾನಮಂತ್ರಿ ಹಸಿರು ನಿಶಾನೆ ತೋರಲಿದ್ದಾರೆ

ಕೋಲ್ಕತಾದಲ್ಲಿ 5,200 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಕೋಲ್ಕತ್ತಾದಲ್ಲಿ ಹೊಸದಾಗಿ ನಿರ್ಮಿಸಲಾದ ಮೆಟ್ರೋ ರೈಲು ಸೇವೆ ವಿಭಾಗಗಳಿಗೆ ಹಸಿರು ನಿಶಾನೆ ತೋರಲಿರುವ ಪ್ರಧಾನಮಂತ್ರಿ

Posted On: 20 AUG 2025 3:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 22 ರಂದು ಬಿಹಾರ ಮತ್ತು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಅವರು ಬೆಳಿಗ್ಗೆ 11 ಗಂಟೆ ಸುಮಾರಿಗೆ ಬಿಹಾರದ ಗಯಾದಲ್ಲಿ ಸುಮಾರು 13,000 ಕೋಟಿ ರೂ. ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ. ಅವರು ಎರಡು ರೈಲುಗಳಿಗೆ ಹಸಿರು ನಿಶಾನೆ ತೋರಿ, ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ, ಅವರು ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಔಟಾ-ಸಿಮರಿಯಾ ಸೇತುವೆ ಯೋಜನೆಗೆ ಭೇಟಿ ನೀಡಿ, ಅದನ್ನು ಉದ್ಘಾಟಿಸಲಿದ್ದಾರೆ.

ಪ್ರಧಾನಮಂತ್ರಿ ಅವರು ಸಂಜೆ 4:15ರ ಸುಮಾರಿಗೆ ಕೋಲ್ಕತ್ತಾದಲ್ಲಿ ಹೊಸದಾಗಿ ನಿರ್ಮಿಸಲಾದ ವಿಭಾಗಗಳಲ್ಲಿ ಮೆಟ್ರೋ ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ.  ಜೆಸ್ಸೋರ್ ರಸ್ತೆ ಮೆಟ್ರೋ ನಿಲ್ದಾಣದಿಂದ ಜೈ ಹಿಂದ್ ಬಿಮನ್‌ಬಂದರ್ ವರೆಗೆ ಮತ್ತು ಅಲ್ಲಿಂದ ಅದೇ ಮಾರ್ಗದಲ್ಲಿ ಹಿಂತಿರುಗಿ ಮೆಟ್ರೋ ಪ್ರಯಾಣ ಕೈಗೊಳ್ಳಲಿದ್ದಾರೆ. ಇದಲ್ಲದೆ, ಅವರು ಕೋಲ್ಕತ್ತಾದಲ್ಲಿ 5,200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಬಿಹಾರದಲ್ಲಿ ಪ್ರಧಾನಮಂತ್ರಿ

ಸಂಪರ್ಕ ಸುಧಾರಣೆಗೆ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು ರಾಷ್ಟ್ರೀಯ ಹೆದ್ದಾರಿ-31 ರಲ್ಲಿ 8.15 ಕಿ.ಮೀ ಉದ್ದದ ಔಟಾ - ಸಿಮಾರಿಯಾ ಸೇತುವೆ ಯೋಜನೆಯನ್ನು ಉದ್ಘಾಟಿಸಲಿದ್ದಾರೆ, ಇದರಲ್ಲಿ ಗಂಗಾ ನದಿಯ ಮೇಲೆ 1,870 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ 1.86 ಕಿ.ಮೀ ಉದ್ದದ 6 ಪಥದ ಸೇತುವೆಯೂ ಸೇರಿದೆ. ಇದು ಪಾಟ್ನಾದ ಮೊಕಾಮಾ ಮತ್ತು ಬೇಗುಸರಾಯ್ ನಡುವೆ ನೇರ ಸಂಪರ್ಕವನ್ನು ಒದಗಿಸುತ್ತದೆ.

ಈ ಸೇತುವೆಯನ್ನು ಹಳೆಯ 2-ಪಥದ ಶಿಥಿಲಗೊಂಡ ರೈಲು-ಮತ್ತು-ರಸ್ತೆ ಜಂಟಿ ಸೇತುವೆ "ರಾಜೇಂದ್ರ ಸೇತು"ಗೆ ಸಮಾನಾಂತರವಾಗಿ ನಿರ್ಮಿಸಲಾಗಿದೆ. ಹಳೆಯ ಸೇತುವೆ ಕಳಪೆ ಸ್ಥಿತಿಯಲ್ಲಿದ್ದು, ಭಾರೀ ವಾಹನಗಳು ಬದಲಿ ಮಾರ್ಗದಲ್ಲಿ ಚಲಿಸುವುದು ಅನಿವಾರ್ಯವಾಗಿತ್ತು. ಹೊಸ ಸೇತುವೆಯು ಉತ್ತರ ಬಿಹಾರ (ಬೇಗುಸರಾಯ್, ಸುಪೌಲ್, ಮಧುಬನಿ, ಪೂರ್ಣಿಯಾ, ಅರಾರಿಯಾ ಇತ್ಯಾದಿ) ಮತ್ತು ದಕ್ಷಿಣ ಬಿಹಾರ ಪ್ರದೇಶಗಳ (ಶೇಖ್‌ಪುರ, ನವಾಡ, ಲಖಿಸರಾಯ್ ಇತ್ಯಾದಿ) ನಡುವೆ ಪ್ರಯಾಣಿಸುವ ಭಾರೀ ವಾಹನಗಳಿಗೆ 100 ಕಿ.ಮೀ.ಗಿಂತ ಹೆಚ್ಚಿನ ಹೆಚ್ಚುವರಿ ಪ್ರಯಾಣದ ದೂರವನ್ನು ಕಡಿಮೆ ಮಾಡುತ್ತದೆ. ಈ ವಾಹನಗಳು ಪರ್ಯಾಯ ಮಾರ್ಗ ಬಳಸುವುದು ತಪ್ಪುವುದರಿಂದ ಈ ಪ್ರದೇಶದ ಇತರ ಭಾಗಗಳಲ್ಲಿ ಸಂಚಾರ ದಟ್ಟಣೆಯ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

ಇದು ನೆರೆಯ ಪ್ರದೇಶಗಳಲ್ಲಿ, ವಿಶೇಷವಾಗಿ ಉತ್ತರ ಬಿಹಾರದಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಏಕೆಂದರೆ ಆ ಪ್ರದೇಶಗಳು ಅಗತ್ಯ ಕಚ್ಚಾ ವಸ್ತುಗಳನ್ನು ಪಡೆಯಲು ದಕ್ಷಿಣ ಬಿಹಾರ ಮತ್ತು ಜಾರ್ಖಂಡ್ ಅನ್ನು ಅವಲಂಬಿಸಿವೆ. ಪ್ರಸಿದ್ಧ ಕವಿ ದಿವಂಗತ ಶ್ರೀ ರಾಮಧಾರಿ ಸಿಂಗ್ ದಿನಕರ್ ಅವರ ಜನ್ಮಸ್ಥಳವೂ ಆಗಿರುವ ಪ್ರಸಿದ್ಧ ಯಾತ್ರಾ ಸ್ಥಳವಾದ ಸಿಮಾರಿಯಾ ಧಾಮಕ್ಕೆ ಇದು ಉತ್ತಮ ಸಂಪರ್ಕವನ್ನು ಒದಗಿಸುತ್ತದೆ.

ಪ್ರಧಾನಮಂತ್ರಿಯವರು ರಾಷ್ಟ್ರೀಯ ಹೆದ್ದಾರಿ-31 ರ ಭಕ್ತಿಯಾರ್ ಪುರದಿಂದ ಮೊಕಾಮಾವರೆಗಿನ ನಾಲ್ಕು ಪಥಗಳ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಇದರ ಅಂದಾಜು ವೆಚ್ಚ ಸುಮಾರು 1,900 ಕೋಟಿ ರೂ.ಗಳಾಗಿದ್ದು, ಇದು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ಪ್ರಯಾಣದ ಸಮಯವನ್ನು ಇಳಿಸುತ್ತದೆ, ಜೊತೆಗೆ ಪ್ರಯಾಣಿಕರು ಮತ್ತು ಸರಕು ಸಾಗಣೆ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಬಿಹಾರದ ರಾಷ್ಟ್ರೀಯ ಹೆದ್ದಾರಿ-120 ರ ಬಿಕ್ರಮ್‌ಗಂಜ್-ದಾವತ್-ನವನಗರ-ಡುಮ್ರಾನ್ ವಿಭಾಗದ ದ್ವಿಪಥದ ಸುಸಜ್ಜಿತ ರಸ್ತೆ ಅಭಿವೃದ್ಧಿಯು ಗ್ರಾಮೀಣ ಪ್ರದೇಶಗಳಲ್ಲಿ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಸ್ಥಳೀಯ ಜನರಿಗೆ ಹೊಸ ಆರ್ಥಿಕ ಅವಕಾಶಗಳನ್ನು ಒದಗಿಸುತ್ತದೆ.

ಬಿಹಾರದಲ್ಲಿ ವಿದ್ಯುತ್ ವಲಯದ ಮೂಲಸೌಕರ್ಯವನ್ನು ಬಲಪಡಿಸುವ ಸಲುವಾಗಿ, ಪ್ರಧಾನಮಂತ್ರಿಯವರು ಸುಮಾರು 6,880 ಕೋಟಿ ರೂ. ಮೌಲ್ಯದ ಬಕ್ಸಾರ್ ಉಷ್ಣ ವಿದ್ಯುತ್ ಸ್ಥಾವರವನ್ನು (660x1 ಮೆಗಾವ್ಯಾಟ್) ಉದ್ಘಾಟಿಸಲಿದ್ದಾರೆ. ಇದು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ, ಇಂಧನ ಸುರಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಈ ಪ್ರದೇಶದ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸುತ್ತದೆ.

ಆರೋಗ್ಯ ಮೂಲಸೌಕರ್ಯಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಮಂತ್ರಿ ಅವರು ಮುಜಫರ್ಪುರ್ ದಲ್ಲಿ ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಈ ಕೇಂದ್ರವು ಸುಧಾರಿತ ಆಂಕೊಲಾಜಿ ಒಪಿಡಿ, ಐಪಿಡಿ ವಾರ್ಡ್‌ಗಳು, ಆಪರೇಷನ್ ಥಿಯೇಟರ್‌ಗಳು, ಆಧುನಿಕ ಪ್ರಯೋಗಾಲಯ, ರಕ್ತ ಬ್ಯಾಂಕ್ ಮತ್ತು 24 ಹಾಸಿಗೆಗಳ ಐಸಿಯು (ತೀವ್ರ ನಿಗಾ ಘಟಕ) ಮತ್ತು 'ಎಚ್‌ಡಿಯು' (ಹೈ ಡಿಪೆಂಡೆನ್ಸಿ ಘಟಕ) ವನ್ನು ಒಳಗೊಂಡಿದೆ. ಈ ಅತ್ಯಾಧುನಿಕ ಸೌಲಭ್ಯವು ಬಿಹಾರ ಮತ್ತು ನೆರೆಯ ರಾಜ್ಯಗಳ ರೋಗಿಗಳಿಗೆ ಸುಧಾರಿತ ಮತ್ತು ಕೈಗೆಟುಕುವ ಕ್ಯಾನ್ಸರ್ ಆರೈಕೆಯನ್ನು ಒದಗಿಸುತ್ತದೆ, ಚಿಕಿತ್ಸೆಗಾಗಿ ದೂರದ ಮಹಾನಗರಗಳಿಗೆ ಪ್ರಯಾಣಿಸುವ ಅಗತ್ಯವನ್ನು ಕಡಿಮೆ ಮಾಡುತ್ತದೆ.

'ಸ್ವಚ್ಛ ಭಾರತ'ದ ದೃಷ್ಟಿಕೋನವನ್ನು ಮುಂದುವರೆಸುವ ಹಾಗೂ ಗಂಗಾ ನದಿಯ ಅವಿರತ ಮತ್ತು ಸ್ವಚ್ಛ ಹರಿವನ್ನು  ಖಚಿತಪಡಿಸಿಕೊಳ್ಳುವ ಸಲುವಾಗಿ, ಪ್ರಧಾನಮಂತ್ರಿಯವರು ಮುಂಗೇರ್‌ನಲ್ಲಿ 'ನಮಾಮಿ ಗಂಗಾ' ಅಡಿಯಲ್ಲಿ 520 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಒಳಚರಂಡಿ ಸಂಸ್ಕರಣಾ ಘಟಕ (ಎಸ್‌ಟಿಪಿ) ಮತ್ತು ಒಳಚರಂಡಿ ಜಾಲವನ್ನು ಉದ್ಘಾಟಿಸಲಿದ್ದಾರೆ. ಇದು ಗಂಗಾ ನದಿಯ ಮೇಲೆ  ಮಾಲಿನ್ಯದ ಹೊರೆ ಕಡಿಮೆ ಮಾಡಲು ಮತ್ತು ಈ ಪ್ರದೇಶದಲ್ಲಿ ನೈರ್ಮಲ್ಯ ಸೌಲಭ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಪ್ರಧಾನಮಂತ್ರಿಯವರು ಸುಮಾರು 1,260 ಕೋಟಿ ರೂ. ಮೌಲ್ಯದ ನಗರ ಮೂಲಸೌಕರ್ಯ ಯೋಜನೆಗಳ ಸರಣಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇವುಗಳಲ್ಲಿ ಔರಂಗಾಬಾದ್‌ನ ದೌದ್‌ನಗರ ಮತ್ತು ಜೆಹಾನಾಬಾದ್‌ನಲ್ಲಿ ಎಸ್‌ಟಿಪಿ ಮತ್ತು ಒಳಚರಂಡಿ ಜಾಲ; ಲಖಿಸರಾಯ್‌ನ ಬರಹಿಯಾ ಮತ್ತು ಜಮುಯಿಯಲ್ಲಿ ಎಸ್‌ಟಿಪಿ ಹಾಗೂ ಮಧ್ಯಸ್ಥಿಕೆ ಮತ್ತು ತಿರುವು ಕಾರ್ಯಗಳು ಸೇರಿವೆ. 'ಅಮೃತ್ 2.0' ಅಡಿಯಲ್ಲಿ ಔರಂಗಾಬಾದ್, ಬೋಧಗಯಾ ಮತ್ತು ಜೆಹಾನಾಬಾದ್‌ನಲ್ಲಿ ನೀರು ಸರಬರಾಜು ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ಶುದ್ಧ ಕುಡಿಯುವ ನೀರು, ಆಧುನಿಕ ಒಳಚರಂಡಿ ವ್ಯವಸ್ಥೆಗಳು ಮತ್ತು ಸುಧಾರಿತ ನೈರ್ಮಲ್ಯವನ್ನು ಒದಗಿಸುತ್ತವೆ. ಇದರಿಂದಾಗಿ ಈ ಪ್ರದೇಶದಲ್ಲಿ ಆರೋಗ್ಯ ಗುಣಮಟ್ಟ ಮತ್ತು ಜೀವನದ ಗುಣಮಟ್ಟ ಸುಧಾರಿಸಲಿದೆ.

ಈ ಪ್ರದೇಶದಲ್ಲಿ ರೈಲು ಸಂಪರ್ಕವನ್ನು ಹೆಚ್ಚಿಸುವ ಸಲುವಾಗಿ, ಪ್ರಧಾನಮಂತ್ರಿ ಅವರು ಎರಡು ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಗಯಾ ಮತ್ತು ದೆಹಲಿ ನಡುವಿನ 'ಅಮೃತ್ ಭಾರತ್ ಎಕ್ಸ್‌ಪ್ರೆಸ್' ಇವುಗಳಲ್ಲಿ ಒಂದಾಗಿದೆ. ಇದು ಆಧುನಿಕ ಸೌಲಭ್ಯಗಳು, ಸೌಕರ್ಯ ಮತ್ತು ಸುರಕ್ಷತೆಯೊಂದಿಗೆ ಪ್ರಯಾಣಿಕರ ಅನುಕೂಲತೆಯನ್ನು ಸುಧಾರಿಸುತ್ತದೆ. ಜೊತೆಗೆ ವೈಶಾಲಿ ಮತ್ತು ಕೊಡೆರ್ಮಾ ನಡುವಿನ 'ಬುದ್ಧ ಸರ್ಕ್ಯೂಟ್' ರೈಲಿಗೂ ಚಾಲನೆ ನೀಡಲಿದ್ದಾರೆ. ಇದು ಈ ಪ್ರದೇಶದ ಪ್ರಮುಖ ಬೌದ್ಧ ತಾಣಗಳಲ್ಲಿ ಪ್ರವಾಸೋದ್ಯಮ ಮತ್ತು ಧಾರ್ಮಿಕ ಯಾತ್ರೆಗೆ ಉತ್ತೇಜನ ನೀಡಲಿದೆ.

ಪಿಎಂ ಆವಾಸ ಯೋಜನೆ-ಗ್ರಾಮೀಣ ಅಡಿಯಲ್ಲಿ 12,000 ಗ್ರಾಮೀಣ ಫಲಾನುಭವಿಗಳು ಮತ್ತು ಪಿಎಂ ಆವಾಸ ಯೋಜನೆ-ನಗರ ಯೋಜನೆಯಡಿ 4,260 ಫಲಾನುಭವಿಗಳ ಗೃಹ ಪ್ರವೇಶ ಸಮಾರಂಭ ನಡೆಯಲಿದೆ. ಪ್ರಧಾನ ಮಂತ್ರಿಯವರಿಂದ ಕೆಲವು ಫಲಾನುಭವಿಗಳಿಗೆ ಸಾಂಕೇತಿಕವಾಗಿ ಕೀಲಿಗಳನ್ನು ಹಸ್ತಾಂತರಿಸುವುದರೊಂದಿಗೆ ಈ ಕಾರ್ಯಕ್ರಮ ನೆರವೇರಲಿದೆ. ಆ ಮೂಲಕ ಸಾವಿರಾರು ಕುಟುಂಬಗಳ ಸ್ವಂತ ಸೂರಿನ ಕನಸು ನನಸಾಗಲಿದೆ.

ಪಶ್ಚಿಮ ಬಂಗಾಳದಲ್ಲಿ ಪ್ರಧಾನಮಂತ್ರಿ

ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಅಭಿವೃದ್ಧಿ ಹೊಂದಿದ ನಗರ ಸಂಪರ್ಕಕ್ಕೆ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಿಯವರು ಕೋಲ್ಕತ್ತಾದಲ್ಲಿ ಮೆಟ್ರೋ ರೈಲು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಹೊಸದಾಗಿ ನಿರ್ಮಿಸಲಾದ 13.61 ಕಿ.ಮೀ ಉದ್ದದ ಮೆಟ್ರೋ ಜಾಲವನ್ನು ಉದ್ಘಾಟಿಸಲಾಗುವುದು ಮತ್ತು ಈ ಮಾರ್ಗಗಳಲ್ಲಿ ಮೆಟ್ರೋ ಸೇವೆಗಳನ್ನು ಪ್ರಾರಂಭಿಸಲಾಗುವುದು. ಪ್ರಧಾನಿಯವರು ಜೆಸ್ಸೋರ್ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಲಿದ್ದಾರೆ, ಅಲ್ಲಿ ಅವರು ಜೆಸ್ಸೋರ್ ರಸ್ತೆಯಿಂದ ನೊಪಾರ-ಜೈ ಹಿಂದ್ ಬಿಮನ್‌ಬಂದರ್ ಮೆಟ್ರೋ ಸೇವೆಗೆ ಹಸಿರು ನಿಶಾನೆ ತೋರಲಿದ್ದಾರೆ. ಇದಲ್ಲದೆ, ವೀಡಿಯೊ ಕಾನ್ಫರೆನ್ಸ್ ಮೂಲಕ, ಅವರು ಸೀಲ್ಡಾ-ಎಸ್ಪ್ಲನೇಡ್ ಮೆಟ್ರೋ ಸೇವೆ ಮತ್ತು ಬೆಲೆಘಾಟ-ಹೇಮಂತ ಮುಖ್ಯೋಪಾಧ್ಯಾಯ ಮೆಟ್ರೋ ಸೇವೆಗೆ ಸಹ ಹಸಿರು ನಿಶಾನೆ ತೋರಲಿದ್ದಾರೆ. ಪ್ರಧಾನಿಯವರು ಜೆಸ್ಸೋರ್ ರಸ್ತೆ ಮೆಟ್ರೋ ನಿಲ್ದಾಣದಿಂದ ಜೈ ಹಿಂದ್ ಬಿಮನ್‌ಬಂದರ್ ಗೆ ಮತ್ತು ಅದೇ ಮಾರ್ಗದಲ್ಲಿ ಹಿಂತಿರುಗಿ ಮೆಟ್ರೋ ಪ್ರಯಾಣ ಕೈಗೊಳ್ಳಲಿದ್ದಾರೆ.

ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನ ಮಂತ್ರಿಗಳು ಈ ಮೆಟ್ರೋ ವಿಭಾಗಗಳನ್ನು ಮತ್ತು ಹೌರಾ ಮೆಟ್ರೋ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಿಸಲಾದ ಸಬ್‌ವೇಯನ್ನು ಉದ್ಘಾಟಿಸಲಿದ್ದಾರೆ. ನೊಪಾರ-ಜೈ ಹಿಂದ್ ಬಿಮನ್‌ಬಂದರ್ ಮೆಟ್ರೋ ಸೇವೆಯು ವಿಮಾನ ನಿಲ್ದಾಣಕ್ಕೆ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಸೀಲ್ಡಾ-ಎಸ್ಪ್ಲನೇಡ್ ಮೆಟ್ರೋ ಎರಡು ಬಿಂದುಗಳ ನಡುವಿನ ಪ್ರಯಾಣದ ಸಮಯವನ್ನು ಸುಮಾರು 40 ನಿಮಿಷಗಳಿಂದ ಕೇವಲ 11 ನಿಮಿಷಗಳಿಗೆ ಇಳಿಸುತ್ತದೆ. ಬೆಲೆಘಾಟ-ಹೇಮಂತ ಮುಖ್ಯೋಪಾಧ್ಯಾಯ ಮೆಟ್ರೋ ವಿಭಾಗವು ಐಟಿ ಕೇಂದ್ರದೊಂದಿಗೆ ಸಂಪರ್ಕವನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಮೆಟ್ರೋ ಮಾರ್ಗಗಳು ಕೋಲ್ಕತ್ತಾದ ಕೆಲವು ಜನನಿಬಿಡ ಪ್ರದೇಶಗಳನ್ನು ಸಂಪರ್ಕಿಸುತ್ತವೆ, ಪ್ರಯಾಣದ ಸಮಯದಲ್ಲಿ ಗಮನಾರ್ಹ ಕಡಿತ ಮಾಡುತ್ತವೆ  ಮತ್ತು ಬಹು ಮಾದರಿ  ಸಂಪರ್ಕವನ್ನು ಬಲಪಡಿಸುತ್ತವೆ. ಇದರಿಂದ ಲಕ್ಷಾಂತರ ದೈನಂದಿನ ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ.

ಈ ಪ್ರದೇಶದಲ್ಲಿ ರಸ್ತೆ ಮೂಲಸೌಕರ್ಯಕ್ಕೆ ಭಾರಿ ಉತ್ತೇಜನ ನೀಡುವ ಸಲುವಾಗಿ, ಪ್ರಧಾನಮಂತ್ರಿ ಅವರು 1,200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 7.2 ಕಿ.ಮೀ ಉದ್ದದ ಆರು ಪಥಗಳ ಎತ್ತರಿಸಿದ 'ಕೋನಾ ಎಕ್ಸ್‌ಪ್ರೆಸ್‌ವೇ'ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ಹೌರಾ, ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳು ಮತ್ತು ಕೋಲ್ಕತ್ತಾ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ, ಪ್ರಯಾಣದ ಸಮಯವನ್ನು ಉಳಿಸುತ್ತದೆ ಮತ್ತು ಈ ಪ್ರದೇಶದಲ್ಲಿ ವ್ಯಾಪಾರ, ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೆ ಭಾರಿ ಉತ್ತೇಜನ ನೀಡಲಿದೆ.

 

*****
 


(Release ID: 2158441)