ಹಣಕಾಸು ಸಚಿವಾಲಯ
ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ರಾಷ್ಟ್ರಕ್ಕೆ ಹೇಗೆ ಪ್ರಯೋಜನಕಾರಿಯಾದ ಮಹತ್ವದ ಸುಧಾರಣೆಯಾಗಿದೆ ಎಂಬ ಬಗ್ಗೆ 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ವಿವರಣೆ
'ಆತ್ಮನಿರ್ಭರ ಭಾರತ'ವನ್ನು ರೂಪಿಸಲು ರಚನಾತ್ಮಕ ಸುಧಾರಣೆಗಳು, ದರ ತರ್ಕಬದ್ಧಗೊಳಿಸುವಿಕೆ ಮತ್ತು ಸುಲಲಿತ ಜೀವನ ಎಂಬ 3 ಸ್ತಂಭಗಳ ಮೇಲೆ ಕೇಂದ್ರೀಕರಿಸಿರುವ ಜಿ.ಎಸ್.ಟಿಯ ಮಹತ್ವದ ಸುಧಾರಣೆಗಳು ಕೇಂದ್ರ ಸರ್ಕಾರದಿಂದ ಪ್ರಸ್ತಾಪ
ಸಮಾಜದ ಎಲ್ಲಾ ವರ್ಗಗಳಿಗೆ, ವಿಶೇಷವಾಗಿ ಸಾಮಾನ್ಯ ಜನರು, ಮಹಿಳೆಯರು, ವಿದ್ಯಾರ್ಥಿಗಳು, ಮಧ್ಯಮ ವರ್ಗ ಮತ್ತು ರೈತರಿಗೆ ಅನುಕೂಲವಾಗುವಂತೆ ತೆರಿಗೆ ದರಗಳ ತರ್ಕಬದ್ಧಗೊಳಿಸುವಿಕೆ ಇತ್ಯಾದಿಯು ಸುಧಾರಣೆಗೆ ಗುರುತಿಸಿರುವ ಭವಿಷ್ಯದ ಪ್ರಮುಖ ಕ್ಷೇತ್ರಗಳು
ವರ್ಗೀಕರಣ-ಸಂಬಂಧಿತ ವಿವಾದಗಳನ್ನು ಕಡಿಮೆ ಮಾಡುವುದು, ನಿರ್ದಿಷ್ಟ ವಲಯಗಳಲ್ಲಿ ಸುಂಕ ರಚನೆಗಳನ್ನು ಸರಿಪಡಿಸುವುದು, ಹೆಚ್ಚಿನ ದರ ಸ್ಥಿರತೆಯನ್ನು ಖಚಿತಪಡಿಸುವುದು ಮತ್ತು ಸುಲಲಿತ ವ್ಯವಹಾರ ವರ್ಧಿಸುವುದು ಕೂಡ ಈ ಸುಧಾರಣೆಗಳ ಉದ್ದೇಶ
ಜಿ.ಎಸ್.ಟಿ ಸುಧಾರಣೆಯಿಂದ ಪ್ರಮುಖ ಆರ್ಥಿಕ ವಲಯಗಳ ಬಲವರ್ಧನೆ, ಆರ್ಥಿಕ ಚಟುವಟಿಕೆಯ ಉತ್ತೇಜನ ಮತ್ತು ವಲಯ ವಿಸ್ತರಣೆಗೆ ಅನುವು
Posted On:
15 AUG 2025 10:51AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, 2017ರಲ್ಲಿ ಜಾರಿಗೆ ತರಲಾದ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ರಾಷ್ಟ್ರಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬ ಬಗ್ಗೆ ವಿವರಿಸಿದ್ದಾರೆ.
ಜಿ.ಎಸ್.ಟಿ ಅಡಿಯಲ್ಲಿ ಭವಿಷ್ಯದ ಸುಧಾರಣೆಗಳ ಮಹತ್ವವನ್ನು ಒತ್ತಿ ಹೇಳಿರುವ ಪ್ರಧಾನಮಂತ್ರಿಗಳು, ಇದರಿಂದ ಸಾಮಾನ್ಯ ಜನರು, ರೈತರು, ಮಧ್ಯಮ ವರ್ಗ ಮತ್ತು ಎಂ.ಎಸ್.ಎಂ.ಇ ಗಳಿಗೆ ಅನುಕೂಲವಾಗಲಿದೆ ಎಂದಿದ್ದಾರೆ.
'ಆತ್ಮನಿರ್ಭರ ಭಾರತ'ವನ್ನು ನಿರ್ಮಿಸಲು, ಕೇಂದ್ರ ಸರ್ಕಾರವು ಜಿ.ಎಸ್.ಟಿಯಡಿ ಗಮನಾರ್ಹ ಸುಧಾರಣೆಗಳನ್ನು ಪ್ರಸ್ತಾಪಿಸುತ್ತಿದೆ. ಇದು ಈ ಕೆಳಗಿನ ಮೂರು ಸ್ತಂಭಗಳ ಮೇಲೆ ಕೇಂದ್ರೀಕರಿಸಿದೆ:
1. ರಚನಾತ್ಮಕ ಸುಧಾರಣೆಗಳು
2. ದರ ತರ್ಕಬದ್ಧಗೊಳಿಸುವಿಕೆ ಮತ್ತು
3. ಸುಲಲಿತ ಜೀವನ
ಜಿ.ಎಸ್.ಟಿ ದರ ತರ್ಕಬದ್ಧಗೊಳಿಸುವಿಕೆ ಮತ್ತು ಸುಧಾರಣೆಗಳ ಕುರಿತಾದ ಪ್ರಸ್ತಾವನೆಯ ಪರಿಶೀಲನೆಗಾಗಿ ಕೇಂದ್ರ ಸರ್ಕಾರವು ತನ್ನ ಪ್ರಸ್ತಾವನೆಯನ್ನು ಜಿ.ಎಸ್.ಟಿ ಮಂಡಳಿಯು ರಚಿಸಿರುವ ಸಚಿವರ ಗುಂಪಿಗೆ (ಜಿ.ಒ.ಎಂ) ಕಳುಹಿಸಿದೆ.
ಸಮಾಜದ ಎಲ್ಲಾ ವರ್ಗಗಳಿಗೆ, ವಿಶೇಷವಾಗಿ ಸಾಮಾನ್ಯ ಜನರು, ಮಹಿಳೆಯರು, ವಿದ್ಯಾರ್ಥಿಗಳು, ಮಧ್ಯಮ ವರ್ಗ ಮತ್ತು ರೈತರಿಗೆ ಅನುಕೂಲವಾಗುವಂತೆ ತೆರಿಗೆ ದರಗಳ ತರ್ಕಬದ್ಧಗೊಳಿಸುವಿಕೆಯು ಭವಿಷ್ಯದ ಪ್ರಮುಖ ಸುಧಾರಣೆಗಳ ಪೈಕಿ ಸೇರಿದೆ.
ವರ್ಗೀಕರಣ-ಸಂಬಂಧಿತ ವಿವಾದಗಳನ್ನು ಕಡಿಮೆ ಮಾಡುವುದು, ನಿರ್ದಿಷ್ಟ ವಲಯಗಳಲ್ಲಿ ಇನ್‌ಪುಟ್ ತೆರಿಗೆಯ ಸುಂಕ ರಚನೆಗಳನ್ನು ಸರಿಪಡಿಸುವುದು, ಹೆಚ್ಚಿನ ದರ ಸ್ಥಿರತೆಯನ್ನು ಖಚಿತಪಡಿಸುವುದು ಮತ್ತು ಸುಲಲಿತ ವ್ಯವಹಾರ ವರ್ಧಿಸುವುದು ಕೂಡ ಸುಧಾರಣೆಯ ಉದ್ದೇಶವಾಗಿದೆ. ಈ ಕ್ರಮಗಳು ಪ್ರಮುಖ ಆರ್ಥಿಕ ವಲಯಗಳನ್ನು ಬಲಪಡಿಸುವ ಜೊತೆಗೆ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತದೆ ಮತ್ತು ವಲಯ ವಿಸ್ತರಣೆಯನ್ನು ಸಾಧ್ಯವಾಗಿಸಲಿದೆ.
ಕೇಂದ್ರದ ಪ್ರಸ್ತಾವಿತ ಸುಧಾರಣೆಗಳ ಪ್ರಮುಖ ಆಧಾರಸ್ತಂಭಗಳು:
ಸ್ತಂಭ 1: ರಚನಾತ್ಮಕ ಸುಧಾರಣೆಗಳು
- ಸುಂಕ ರಚನೆ ತಿದ್ದುಪಡಿ: ಜಿ.ಎಸ್.ಟಿಯಡಿ ಖರೀದಿ ಮತ್ತು ಮಾರಾಟದ ಮೇಲಿನ ತೆರಿಗೆ ದರಗಳಾದ ಇನ್ಪುಟ್ ಮತ್ತು ಔಟ್ಪುಟ್ ತೆರಿಗೆ ದರಗಳನ್ನು ಸರಿಪಡಿಸಿಲು ಸುಂಕ ರಚನೆಗಳ ತಿದ್ದುಪಡಿ. ಇದರಿಂದಾಗಿ ಇನ್ಪುಟ್ ತೆರಿಗೆ ಕ್ರೆಡಿಟ್ ಪ್ರಮಾಣ ಕಡಿಮೆಯಾಗಿ ದೇಶೀಯ ಮೌಲ್ಯವರ್ಧನೆ ಸಾಧ್ಯವಾಗಲಿದೆ.
- ವರ್ಗೀಕರಣ ಸಮಸ್ಯೆಗಳಿಗೆ ಪರಿಹಾರ: ವಲಯಗಳಾದ್ಯಂತ ದರ ರಚನೆಗಳನ್ನು ವ್ಯವಸ್ಥಿತಗೊಳಿಸಲು, ವಿವಾದಗಳನ್ನು ಕಡಿಮೆ ಮಾಡಲು, ನಿಯಮಪಾಲನಾ ಪ್ರಕ್ರಿಯೆಗಳನ್ನು ಸರಳಗೊಳಿಸಲು ಹಾಗೂ ಹೆಚ್ಚಿನ ಸಮಾನತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ವರ್ಗೀಕರಣ ಸಮಸ್ಯೆಗಳಿಗೆ ಪರಿಹಾರ.
- ಸ್ಥಿರತೆ ಮತ್ತು ಅಂದಾಜು: ಉದ್ಯಮದ ವಿಶ್ವಾಸವನ್ನು ಹೆಚ್ಚಿಸಲು ಮತ್ತು ಉತ್ತಮ ವ್ಯಾಪಾರ ಯೋಜನೆಗೆ ಬೆಂಬಲ ನೀಡಲು ದರಗಳು ಮತ್ತು ನೀತಿ ನಿರ್ದೇಶನಗಳ ಬಗ್ಗೆ ದೀರ್ಘಾವಧಿಯ ಸ್ಪಷ್ಟತೆ ಒದಗಿಸುವಿಕೆ
ಸ್ತಂಭ 2: ದರ ತರ್ಕಬದ್ಧಗೊಳಿಸುವಿಕೆ:
- ಸಾಮಾನ್ಯ ಜನರ ವಸ್ತುಗಳು ಮತ್ತು ಮಹತ್ವಾಕಾಂಕ್ಷೆಯ ಸರಕುಗಳ ಮೇಲಿನ ತೆರಿಗೆ ಕಡಿತ: ಇದರಿಂದ ಕೈಗೆಟುಕುವಿಕೆ ವರ್ಧಿಸಿ, ಬಳಕೆಗೆ ಉತ್ತೇಜನ ದೊರೆತು ಎಲ್ಲಾ ಅಗತ್ಯ ಮತ್ತು ಮಹತ್ವಾಕಾಂಕ್ಷೆಯ ಸರಕುಗಳು ಹೆಚ್ಚಿನ ಸಂಖ್ಯೆಯ ಜನರಿಗೆ ಲಭ್ಯವಾಗುವಂತಾಗಲಿದೆ.
- ತೆರಿಗೆ ಸ್ಲ್ಯಾಬ್ ಕಡಿತ: ಮೂಲಭೂತವಾಗಿ ಸ್ಟ್ಯಾಂಡರ್ಡ್ ಮತ್ತು ಮೆರಿಟ್ ಎಂಬ 2 ಸ್ಲ್ಯಾಬ್ ಗಳೊಂದಿಗೆ ಸರಳ ತೆರಿಗೆ ಅನುಸರಿಸುವುದು. ಆಯ್ದ ಕೆಲವು ವಸ್ತುಗಳಿಗೆ ಮಾತ್ರ ವಿಶೇಷ ದರಗಳು.
- ಪರಿಹಾರ ಸೆಸ್: ಪರಿಹಾರ ಸೆಸ್ ಕೊನೆಯಾಗಲಿರುವುದು ದೀರ್ಘಾವಧಿಯ ಸುಸ್ಥಿರತೆಗಾಗಿ ಜಿ.ಎಸ್.ಟಿ ಚೌಕಟ್ಟಿನೊಳಗೆ ತೆರಿಗೆ ದರಗಳನ್ನು ತರ್ಕಬದ್ಧಗೊಳಿಸಲು ಮತ್ತು ಸರಿಪಡಿಸಲು ಹೆಚ್ಚಿನ ಒಗ್ಗಿಕೊಳ್ಳುವಿಕೆಯನ್ನು ಒದಗಿಸುತ್ತಾ ಸಾರ್ವಜನಿಕ ವೆಚ್ಚಕ್ಕಾಗಿ ಸುಸ್ಥಿರತೆಯೊಂದಿಗೆ ರಾಜಿಯಾಗದಂತೆ ಸರ್ಕಾರವು ಸಂಪನ್ಮೂಲಗಳನ್ನು ಒದಗಿಸಬಹುದಾದ ಅವಕಾಶ (ಫಿಸ್ಕಲ್ ಸ್ಪೇಸ್) ನೀಡಿದೆ.
ಸ್ತಂಭ 3: ಸುಲಲಿತ ಜೀವನ
- ನೋಂದಣಿ: ತಡೆರಹಿತ, ತಂತ್ರಜ್ಞಾನ ಆಧಾರಿತ ಮತ್ತು ಸಮಯಾಧಾರಿತ ನೋಂದಣಿ ವಿಶೇಷವಾಗಿ ಕಿರು ಉದ್ಯಮಗಳು ಮತ್ತು ನವೋದ್ಯಮಗಳಿಗಾಗಿ
- ರಿಟರ್ನ್: ಮೊದಲೇ ಭರ್ತಿ ಮಾಡಿದ ರಿಟರ್ನ್ ಗಳನ್ನು ಕಾರ್ಯಗತಗೊಳಿಸುವ ಮೂಲಕ ಪ್ರತಿಯೊಂದು ವಿವರಗಳನ್ನು ವ್ಯಕ್ತಿಗಳು ಭರ್ತಿ ಮಾಡುವ ಪ್ರಕ್ರಿಯೆಯನ್ನು ಕಡಿಮೆ ಮಾಡುತ್ತಾ ಹೊಂದಾಣಿಕೆಯಾಗದಿರುವಿಕೆಯ ನಿವಾರಣೆ
- ಮರುಪಾವತಿ: ರಫ್ತುದಾರರಿಗೆ ಮತ್ತು ಇನ್ವರ್ಟೆಡ್ ಸುಂಕ ರಚನೆಯ ವ್ಯಾಪ್ತಿಯಡಿ ಸೇರುವವರಿಗೆ ಮರುಪಾವತಿಯನ್ನು ವೇಗಗೊಳಿಸಲು ಸ್ವಯಂಚಾಲಿತ ಪ್ರಕ್ರಿಯೆ.
ಮೇಲೆ ತಿಳಿಸಿರುವ ಮೂರು ಮೂಲಭೂತ ಸ್ತಂಭಗಳ ಮೇಲೆ ಆಧಾರಿತವಾದ ಕೇಂದ್ರದ ಪ್ರಸ್ತಾವನೆಯನ್ನು, ಹೆಚ್ಚಿನ ಚರ್ಚೆಗಾಗಿ GoM ನೊಂದಿಗೆ ಹಂಚಿಕೊಳ್ಳಲಾಗಿದೆ. ಎಲ್ಲಾ ಸಂಬಂಧಿತರಲ್ಲಿ ರಚನಾತ್ಮಕ, ಅಂತರ್ಗತ ಮತ್ತು ಒಮ್ಮತ ಆಧಾರಿತ ಸಂವಾದದ ಗುರಿಯೊಂದಿಗೆ ಕೇಂದ್ರವು ಈ ಉಪಕ್ರಮವನ್ನು ಕೈಗೊಂಡಿದೆ.
ಸಹಕಾರಿ ಒಕ್ಕೂಟ ವ್ಯವಸ್ಥೆಯ ನಿಜವಾದ ಚೈತನ್ಯದೊಂದಿಗೆ, ಕೇಂದ್ರವು ರಾಜ್ಯಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ಬದ್ಧವಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಮುನ್ನೋಟದಂತೆ ಮುಂದಿನ ಪೀಳಿಗೆಯ ಸುಧಾರಣೆಗಳನ್ನು ಜಾರಿಗೆ ತರಲು ಮುಂಬರುವ ವಾರಗಳಲ್ಲಿ ರಾಜ್ಯಗಳೊಂದಿಗೆ ಒಮ್ಮತಕ್ಕಾಗಿ ಮಾತುಕತೆ ನಡೆಸಲಾಗುವುದು.
ಜಿ.ಎಸ್.ಟಿ ಮಂಡಳಿಯ ಮುಂದಿನ ಸಭೆಯಲ್ಲಿ ಸಚಿವರ ತಂಡದ ಶಿಫಾರಸುಗಳ ಕುರಿತು ಚರ್ಚೆ ನಡೆಯಲಿದೆ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲೇ ಉದ್ದೇಶಿತ ಅನುಕೂಲಗಳು ಸಿಗುವಂತಾಗಲು ಶೀಘ್ರ ಅನುಷ್ಠಾನಕ್ಕೆ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು.
#InclusiveGrowth ಗೆ ಪೂರಕವಾಗಿರುವ, ಔಪಚಾರಿಕ ಆರ್ಥಿಕತೆಯನ್ನು ಬಲಪಡಿಸುವ ಮತ್ತು ದೇಶಾದ್ಯಂತ ಸುಲಲಿತ ವ್ಯವಹಾರ (EoDB) ವರ್ಧಿಸುವ ಸರಳ, ಸ್ಥಿರ ಮತ್ತು ಪಾರದರ್ಶಕ ತೆರಿಗೆ ವ್ಯವಸ್ಥೆಯಾಗಿ ಜಿ.ಎಸ್.ಟಿಯನ್ನು ಹೊರಹೊಮ್ಮುವಂತೆ ಮಾಡುವ ತನ್ನ ಬದ್ಧತೆಯನ್ನು ಸರ್ಕಾರ ಪುನರುಚ್ಚರಿಸಿದೆ.
(Release ID: 2156775)
Read this release in:
Marathi
,
Gujarati
,
Assamese
,
English
,
Urdu
,
Hindi
,
Nepali
,
Bengali
,
Punjabi
,
Tamil
,
Telugu
,
Malayalam