ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮಾಡಿದ ಪ್ರಮುಖ ಘೋಷಣೆಗಳು

Posted On: 15 AUG 2025 10:32AM by PIB Bengaluru

ತಮ್ಮ 12ನೇ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆಂಪು ಕೋಟೆಯನ್ನು ಭಾರತದ ಪ್ರಗತಿಯ ಮುಂದಿನ ಅಧ್ಯಾಯದ ಉಡಾವಣಾ ವೇದಿಕೆಯನ್ನಾಗಿ ಪರಿವರ್ತಿಸಿದರು. 79ನೇ ಸ್ವಾತಂತ್ರ್ಯ ದಿನದಂದು, ಅವರು ಹಲವಾರು ದಿಟ್ಟ ಘೋಷಣೆಗಳನ್ನು ಮಾಡಿದರು, ಅವುಗಳು ರಾಷ್ಟ್ರವು ಭವಿಷ್ಯದತ್ತ ಹೆಜ್ಜೆ ಹಾಕುವುದು ಮಾತ್ರವಲ್ಲ, ಜಿಗಿಯಲು ಸಿದ್ಧವಾಗಿದೆ ಎಂಬುದನ್ನು ಸೂಚಿಸುತ್ತವೆ.

ಭಾರತದ ಮೊದಲ ಸೆಮಿಕಂಡಕ್ಟರ್ ಚಿಪ್ ತಯಾರಿಕೆಯಿಂದ ಜೆಟ್ ಎಂಜಿನ್‌ ಗಳನ್ನು ನಿರ್ಮಿಸುವವರೆಗೆ, ಹತ್ತು ಪಟ್ಟು ಪರಮಾಣು ವಿಸ್ತರಣೆಯಿಂದ ಯುವಜನರ ಉದ್ಯೋಗಕ್ಕಾಗಿ ₹1 ಲಕ್ಷ ಕೋಟಿ ಉತ್ತೇಜನದವರೆಗೆ, ಅವರ ಸಂದೇಶವು ಸ್ಪಷ್ಟವಾಗಿತ್ತು: ಭಾರತವು ತನ್ನ ಭವಿಷ್ಯವನ್ನು ತಾನೇ ವ್ಯಾಖ್ಯಾನಿಸುತ್ತದೆ, ತನ್ನದೇ ಆದ ನಿಯಮಗಳನ್ನು ಸ್ಥಾಪಿಸುತ್ತದೆ ಮತ್ತು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ಹೊಂದಿದೆ.

ಪ್ರಮುಖ ಘೋಷಣೆಗಳು:

  1. ಸೆಮಿಕಂಡಕ್ಟರ್ಗಳು: ಕಳೆದುಕೊಂಡ ದಶಕಗಳಿಂದ ಮಿಷನ್ ಮೋಡ್ವರೆಗೆ

50-60 ವರ್ಷಗಳ ಹಿಂದೆ ಸೆಮಿಕಂಡಕ್ಟರ್ ಕಾರ್ಖಾನೆಗಳನ್ನು ಸ್ಥಾಪಿಸುವ ಪ್ರಯತ್ನಗಳು "ಹುಟ್ಟಿನಲ್ಲೇ ಕೊಲ್ಲಲ್ಪಟ್ಟವು" ಮತ್ತು ಇತರ ರಾಷ್ಟ್ರಗಳು ಅಭಿವೃದ್ಧಿ ಹೊಂದಿದವು ಎಂಬುದನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ ಮೋದಿ, ಭಾರತ ಈಗ ಮಿಷನ್ ಮೋಡ್‌ ನಲ್ಲಿದೆ ಎಂದು ಘೋಷಿಸಿದರು. ಈ ವರ್ಷದ ಅಂತ್ಯದ ವೇಳೆಗೆ, ರಾಷ್ಟ್ರವು ತನ್ನ ಮೊದಲ ಮೇಡ್ ಇನ್ ಇಂಡಿಯಾ ಚಿಪ್ ಅನ್ನು ಹೊರತರಲಿದೆ.

  1. 2047 ವೇಳೆಗೆ ಪರಮಾಣು ಇಂಧನ ಸಾಮರ್ಥ್ಯ ಹತ್ತು ಪಟ್ಟು ಹೆಚ್ಚಾಗಲಿದೆ

ಮುಂದಿನ ಎರಡು ದಶಕಗಳಲ್ಲಿ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹತ್ತು ಪಟ್ಟು ಹೆಚ್ಚಿಸುವ ಭಾರತದ ಧ್ಯೇಯದ ಭಾಗವಾಗಿ 10 ಹೊಸ ಪರಮಾಣು ರಿಯಾಕ್ಟರ್‌ ಗಳು ನಿರ್ಮಾಣ ಹಂತದಲ್ಲಿವೆ.

  1. ಜಿ.ಎಸ್‌.ಟಿ ಸುಧಾರಣೆಗಳು - ದೀಪಾವಳಿ ಉಡುಗೊರೆ

ದೀಪಾವಳಿಯಂದು ಮುಂದಿನ ಪೀಳಿಗೆಯ ಜಿ.ಎಸ್‌.ಟಿ ಸುಧಾರಣೆಗಳನ್ನು ಅನಾವರಣಗೊಳಿಸಲಾಗುವುದು, ಇವು ಅಗತ್ಯ ವಸ್ತುಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡುತ್ತವೆ ಮತ್ತು ಎಂ.ಎಸ್.ಎಂ.ಇ, ಸ್ಥಳೀಯ ಮಾರಾಟಗಾರರು ಮತ್ತು ಗ್ರಾಹಕರಿಗೆ ಪರಿಹಾರವನ್ನು ನೀಡುತ್ತವೆ.

  1. 10 ಟ್ರಿಲಿಯನ್ ಡಾಲರ್ಭಾರತಕ್ಕಾಗಿ ಸುಧಾರಣಾ ಕಾರ್ಯಪಡೆ

ಮುಂದಿನ ಪೀಳಿಗೆಯ ಸುಧಾರಣೆಗಳನ್ನು ಮುನ್ನಡೆಸಲು ಮೀಸಲಾದ ಸುಧಾರಣಾ ಕಾರ್ಯಪಡೆಯನ್ನು ರಚಿಸುವುದಾಗಿ ಪ್ರಧಾನಮಂತ್ರಿ ಮೋದಿ ಘೋಷಿಸಿದರು. ಇದರ ಉದ್ದೇಶ: ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವುದು, ಕೆಂಪು ಪಟ್ಟಿಯನ್ನು ಕಡಿತಗೊಳಿಸುವುದು, ಆಡಳಿತವನ್ನು ಆಧುನೀಕರಿಸುವುದು ಮತ್ತು 2047ರ ವೇಳೆಗೆ 10 ಟ್ರಿಲಿಯನ್ ಡಾಲರ್‌ ಆರ್ಥಿಕತೆಯ ಅಗತ್ಯಗಳಿಗೆ ಭಾರತವನ್ನು ಸಿದ್ಧಪಡಿಸುವುದು.

  1.  ₹1 ಲಕ್ಷ ಕೋಟಿ ಪ್ರಧಾನ ಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ

ಪ್ರಧಾನಮಂತ್ರಿ ಮೋದಿ ₹1 ಲಕ್ಷ ಕೋಟಿ ಮೌಲ್ಯದ ಪ್ರಮುಖ ಉದ್ಯೋಗ ಯೋಜನೆಯನ್ನು ಪ್ರಾರಂಭಿಸಿದರು, ಇದರ ಅಡಿಯಲ್ಲಿ ಹೊಸದಾಗಿ ಉದ್ಯೋಗಕ್ಕೆ ಸೇರುವ ಯುವಜನರು ತಿಂಗಳಿಗೆ ₹15,000 ಪಡೆಯುತ್ತಾರೆ. ಈ ಯೋಜನೆಯು 3 ಕೋಟಿ ಯುವ ಭಾರತೀಯರಿಗೆ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿದೆ, ಇದು ಸ್ವತಂತ್ರ ಭಾರತದಿಂದ ಸಮೃದ್ಧ ಭಾರತಕ್ಕೆ ಸೇತುವೆಯನ್ನು ಬಲಪಡಿಸುತ್ತದೆ.

  1. ಉನ್ನತ-ಅಧಿಕಾರದ ಜನಸಂಖ್ಯಾ ಮಿಷನ್

ಗಡಿ ಪ್ರದೇಶಗಳಲ್ಲಿ ಒಳನುಸುಳುವಿಕೆ ಮತ್ತು ಅಕ್ರಮ ವಲಸೆಯಿಂದ ಉಂಟಾಗುವ ಜನಸಂಖ್ಯಾ ಅಸಮತೋಲನದ ಅಪಾಯಗಳನ್ನು ಪ್ರಧಾನಮಂತ್ರಿ ಮೋದಿ ಒತ್ತಿ ಹೇಳಿದರು. ಈ ರಾಷ್ಟ್ರೀಯ ಭದ್ರತಾ ಸವಾಲನ್ನು ಎದುರಿಸಲು, ಭಾರತದ ನಾಗರಿಕರ ಏಕತೆ, ಸಮಗ್ರತೆ ಮತ್ತು ಹಕ್ಕುಗಳನ್ನು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಅವರು ಉನ್ನತ-ಅಧಿಕಾರದ ಜನಸಂಖ್ಯಾ ಮಿಷನ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದರು.

  1. ಇಂಧನ ಸ್ವಾತಂತ್ರ್ಯ - ಸಮುದ್ರ ಮಂಥನ ಆರಂಭ

ಭಾರತದ ಬಜೆಟ್‌ ನ ಹೆಚ್ಚಿನ ಪಾಲು ಇನ್ನೂ ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಆಮದು ಮಾಡಿಕೊಳ್ಳಲು ಹೋಗುತ್ತಿದೆ ಎಂದು ಪ್ರಧಾನಮಂತ್ರಿ ಮೋದಿ ಗಮನಸೆಳೆದರು. ಸೌರ, ಹೈಡ್ರೋಜನ್, ಜಲ ಮತ್ತು ಪರಮಾಣು ವಿದ್ಯುತ್‌ ನಲ್ಲಿ ಪ್ರಮುಖ ವಿಸ್ತರಣೆಗಳ ಜೊತೆಗೆ ಸಾಗರ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ರಾಷ್ಟ್ರೀಯ ಆಳ ನೀರಿನ ಪರಿಶೋಧನಾ ಮಿಷನ್ ಅನ್ನು ಪ್ರಾರಂಭಿಸುವುದಾಗಿ ಅವರು ಘೋಷಿಸಿದರು.

  1. ಭಾರತದಲ್ಲಿ ನಿರ್ಮಿತ ಜೆಟ್ ಎಂಜಿನ್ಗಳು - ರಾಷ್ಟ್ರೀಯ ಸವಾಲು

ಕೋವಿಡ್ ಸಮಯದಲ್ಲಿ ನಾವು ಲಸಿಕೆಗಳನ್ನು ತಯಾರಿಸಿದಂತೆ ಮತ್ತು ಡಿಜಿಟಲ್ ಪಾವತಿಗಳಿಗಾಗಿ ಯು.ಪಿ.ಐ ಅನ್ನು ಬಳಸಿದಂತೆಯೇ, ನಮ್ಮ ಜೆಟ್ ಗಳಿಗೂ ನಮ್ಮದೇ ಆದ ಜೆಟ್ ಎಂಜಿನ್‌ಗಳನ್ನು ನಿರ್ಮಿಸಬೇಕು ಎಂದು ಪ್ರಧಾನಮಂತ್ರಿ ಮೋದಿ ಘೋಷಣೆ ಮಾಡಿದರು ಮತ್ತು ನಮ್ಮ ವಿಜ್ಞಾನಿಗಳು ಮತ್ತು ಯುವಜನರು ಇದನ್ನು ನೇರ ಸವಾಲಾಗಿ ಸ್ವೀಕರಿಸುವಂತೆ ಕರೆ ನೀಡಿದರು.

 

****


(Release ID: 2156733)