ಪ್ರಧಾನ ಮಂತ್ರಿಯವರ ಕಛೇರಿ
ನವದೆಹಲಿಯಲ್ಲಿ ಸಂಸದರಿಗಾಗಿ ಹೊಸದಾಗಿ ನಿರ್ಮಿಸಲಾದ ವಸತಿ ಸಮುಚ್ಚಯವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು
ಕೆಲವೇ ದಿನಗಳ ಹಿಂದೆ, ನಾನು ಕರ್ತವ್ಯ ಪಥದಲ್ಲಿ ಸಾಮಾನ್ಯ ಕೇಂದ್ರ ಸಚಿವಾಲಯವನ್ನು, ಅಂದರೆ ಕರ್ತವ್ಯ ಭವನವನ್ನು ಉದ್ಘಾಟನೆ ಮಾಡಿದ್ದೇನೆ ಮತ್ತು ಇಂದು, ಸಂಸತ್ತಿನ ನನ್ನ ಸಹೋದ್ಯೋಗಿಗಳಿಗಾಗಿ ಈ ವಸತಿ ಸಮುಚ್ಚಯವನ್ನು ಉದ್ಘಾಟಿಸುವ ಅವಕಾಶ ನನಗೆ ದೊರೆತಿದೆ: ಪ್ರಧಾನಮಂತ್ರಿ
ಇಂದು, ದೇಶವು ತನ್ನ ಸಂಸದರಿಗೆ ಹೊಸ ಮನೆಗಳ ಅಗತ್ಯವನ್ನು ಈಡೇರಿಸಿದೆ, ಹಾಗೆಯೇ ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೂಲಕ 4 ಕೋಟಿ ಬಡ ಜನರಿಗೆ ಗೃಹಪ್ರವೇಶದ ಅವಕಾಶವನ್ನೂ ನೀಡಿದೆ: ಪ್ರಧಾನಮಂತ್ರಿ
ಇಂದು, ದೇಶವು ಕರ್ತವ್ಯ ಪಥ ಮತ್ತು ಕರ್ತವ್ಯ ಭವನದ ನಿರ್ಮಾಣ ಮಾತ್ರವಲ್ಲದೆ, ಲಕ್ಷಾಂತರ ನಾಗರಿಕರಿಗೆ ಕೊಳವೆ ಮೂಲಕ ನೀರು ಒದಗಿಸುವ ಕರ್ತವ್ಯವನ್ನೂ ಪೂರೈಸುತ್ತಿದೆ: ಪ್ರಧಾನಮಂತ್ರಿ
ಸೌರಶಕ್ತಿ ಚಾಲಿತ ಮೂಲಸೌಕರ್ಯದಿಂದ ಸೌರಶಕ್ತಿಯಲ್ಲಿ ದೇಶದ ಹೊಸ ದಾಖಲೆಗಳವರೆಗೆ, ದೇಶವು ಸುಸ್ಥಿರ ಅಭಿವೃದ್ಧಿಯ ದೃಷ್ಟಿಕೋನವನ್ನು ನಿರಂತರವಾಗಿ ಮುನ್ನಡೆಸುತ್ತಿದೆ: ಪ್ರಧಾನಮಂತ್ರಿ
Posted On:
11 AUG 2025 11:19AM by PIB Bengaluru
ನವದೆಹಲಿಯ ಬಾಬಾ ಖರಕ್ ಸಿಂಗ್ ಮಾರ್ಗದಲ್ಲಿ ಸಂಸತ್ ಸದಸ್ಯರಿಗಾಗಿ ಹೊಸದಾಗಿ ನಿರ್ಮಿಸಲಾದ 184 ಟೈಪ್-VII ಬಹುಮಹಡಿ ವಸತಿ ಸಮುಚ್ಚಯವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕರ್ತವ್ಯ ಪಥದಲ್ಲಿರುವ ಕರ್ತವ್ಯ ಭವನ ಎಂದು ಕರೆಯಲಾಗುವ ಸಾಮಾನ್ಯ ಕೇಂದ್ರ ಸಚಿವಾಲಯವನ್ನು ಇತ್ತೀಚೆಗೆ ಉದ್ಘಾಟಿಸಿದೆ ಮತ್ತು ಇಂದು ಸಂಸದರಿಗಾಗಿ ಹೊಸದಾಗಿ ನಿರ್ಮಿಸಲಾದ ವಸತಿ ಸಮುಚ್ಚಯವನ್ನು ಉದ್ಘಾಟಿಸುವ ಅವಕಾಶ ದೊರೆತಿದೆ ಎಂದು ಹೇಳಿದರು. ಭಾರತದ ನಾಲ್ಕು ಮಹಾ ನದಿಗಳಾದ ಕೃಷ್ಣಾ, ಗೋದಾವರಿ, ಕೋಸಿ ಮತ್ತು ಹೂಗ್ಲಿ ಹೆಸರುಗಳನ್ನು ಸಮುಚ್ಚಯದ ನಾಲ್ಕು ಗೋಪುರಗಳಿಗೆ ಇಡಲಾಗಿದೆ. ಲಕ್ಷಾಂತರ ಜನರಿಗೆ ಬದುಕು ನೀಡುವ ಈ ನದಿಗಳು ಈಗ ಸಾರ್ವಜನಿಕ ಪ್ರತಿನಿಧಿಗಳ ಜೀವನದಲ್ಲಿ ಹೊಸ ಸಂತೋಷದ ಅಲೆಯನ್ನು ತರುತ್ತವೆ ಎಂದು ಅವರು ಹೇಳಿದರು. ನದಿಗಳಿಗೆ ಹೆಸರಿಡುವ ಸಂಪ್ರದಾಯವು ದೇಶವನ್ನು ಏಕತೆಯ ಎಳೆಯಲ್ಲಿ ಬಂಧಿಸುತ್ತದೆ ಎಂದು ಅವರು ಹೇಳಿದರು. ಈ ಹೊಸ ಸಮುಚ್ಚಯವು ದೆಹಲಿಯಲ್ಲಿ ಸಂಸದರ ಜೀವನವನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ದೆಹಲಿಯಲ್ಲಿ ಸಂಸದರಿಗೆ ಸರ್ಕಾರಿ ವಸತಿ ಸೌಕರ್ಯಗಳು ಈಗ ಹೆಚ್ಚಾಗಲಿವೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿಯವರು ಎಲ್ಲಾ ಸಂಸದರನ್ನು ಅಭಿನಂದಿಸಿದರು ಮತ್ತು ವಸತಿ ಸಮುಚ್ಚಯ ನಿರ್ಮಾಣದಲ್ಲಿ ಭಾಗಿಯಾದ ಎಂಜಿನಿಯರ್ ಗಳು ಮತ್ತು ಕಾರ್ಮಿಕರನ್ನು ಶ್ಲಾಘಿಸಿದರು. ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ಅವರು ಶ್ಲಾಘಿಸಿದರು.
ಸಂಸದರಿಗಾಗಿ ಹೊಸದಾಗಿ ನಿರ್ಮಿಸಲಾದ ವಸತಿ ಸಮುಚ್ಚಯದಲ್ಲಿ ಮಾದರಿ ಫ್ಲಾಟ್ ಗೆ ಭೇಟಿ ನೀಡುವ ಅವಕಾಶ ಸಿಕ್ಕಿತು ಎಂದು ಪ್ರಧಾನಮಂತ್ರಿ ಹೇಳಿದರು. ಸಂಸದರ ಹಳೆಯ ನಿವಾಸಗಳ ಸ್ಥಿತಿಯನ್ನು ವೀಕ್ಷಿಸುವ ಸಂದರ್ಭಗಳೂ ತಮಗೆ ದೊರೆತಿವೆ ಎಂದು ಅವರು ಹೇಳಿದರು. ಹಳೆಯ ನಿವಾಸಗಳು ಹೆಚ್ಚಾಗಿ ನಿರ್ಲಕ್ಷ್ಯಕ್ಕೊಳಗಾಗಿದ್ದವು ಮತ್ತು ಶಿಥಿಲಗೊಂಡಿದ್ದವು ಎಂದ ಶ್ರೀ ಮೋದಿ, ಸಂಸದರು ತಮ್ಮ ಹಳೆಯ ನಿವಾಸಗಳ ಕಳಪೆ ಸ್ಥಿತಿಯಿಂದಾಗಿ ಎದುರಿಸುತ್ತಿರುವ ತೊಂದರೆಗಳನ್ನು ಎತ್ತಿ ತೋರಿಸಿದರು. ಹೊಸ ವಸತಿಗಳು ಸಂಸದರನ್ನು ಅಂತಹ ಸವಾಲುಗಳಿಂದ ಮುಕ್ತವಾಗಿಸುತ್ತವೆ ಎಂದು ಅವರು ಹೇಳಿದರು. ಸಂಸದರು ತಮ್ಮ ವೈಯಕ್ತಿಕ ವಸತಿ ಸಮಸ್ಯೆಗಳಿಂದ ಮುಕ್ತರಾದಾಗ, ಅವರು ತಮ್ಮ ಸಮಯ ಮತ್ತು ಶಕ್ತಿಯನ್ನು ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚು ಪರಿಣಾಮಕಾರಿಯಾಗಿ ವಿನಿಯೋಗಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.
ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದವರು ದೆಹಲಿಯಲ್ಲಿ ವಸತಿ ಪಡೆಯುವಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಒಪ್ಪಿಕೊಂಡ ಶ್ರೀ ಮೋದಿ, ಹೊಸದಾಗಿ ನಿರ್ಮಿಸಲಾದ ಕಟ್ಟಡಗಳು ಈ ತೊಂದರೆಗಳನ್ನು ನಿವಾರಿಸುತ್ತವೆ ಎಂದು ಹೇಳಿದರು. ಈ ಬಹುಮಹಡಿ ಕಟ್ಟಡಗಳು ಏಕಕಾಲದಲ್ಲಿ 180 ಕ್ಕೂ ಹೆಚ್ಚು ಸಂಸದರಿಗೆ ಅವಕಾಶ ಕಲ್ಪಿಸುತ್ತವೆ ಎಂದು ಅವರು ಹೇಳಿದರು. ಮತ್ತು ಹೊಸ ವಸತಿ ಉಪಕ್ರಮದ ಪ್ರಮುಖ ಆರ್ಥಿಕ ಆಯಾಮವನ್ನು ಒತ್ತಿ ಹೇಳಿದರು. ಕರ್ತವ್ಯ ಭವನದ ಉದ್ಘಾಟನೆಯನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ, ಅನೇಕ ಸಚಿವಾಲಯಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕವಾಗಿ ಸುಮಾರು 1,500 ಕೋಟಿ ರೂ. ಬಾಡಿಗೆಯನ್ನು ಭರಿಸುತ್ತಿವೆ ಮತ್ತು ಇದು ಸಾರ್ವಜನಿಕ ಹಣದ ವ್ಯರ್ಥವಾಗಿದೆ ಎಂದು ಅವರು ಅವರು ಹೇಳಿದರು. ಅದೇ ರೀತಿ, ಸಂಸದರಿಗೆ ಸಾಕಷ್ಟು ನಿವಾಸಗಳ ಕೊರತೆಯೂ ಸರ್ಕಾರಿ ವೆಚ್ಚದಲ್ಲಿ ಹೆಚ್ಚಳಕ್ಕೆ ಕಾರಣವಾಯಿತು ಎಂದು ಅವರು ಒತ್ತಿ ಹೇಳಿದರು. ಸಂಸದರ ನಿವಾಸಗಳ ಕೊರತೆಯಿದ್ದರೂ, 2004 ಮತ್ತು 2014 ರ ನಡುವೆ ಲೋಕಸಭಾ ಸಂಸದರಿಗೆ ಒಂದೇ ಒಂದು ಹೊಸ ನಿವಾಸವನ್ನು ನಿರ್ಮಿಸಲಾಗಿಲ್ಲ ಎಂದು ಶ್ರೀ ಮೋದಿ ಗಮನಸೆಳೆದರು. 2014 ರ ನಂತರ, ನಮ್ಮ ಸರ್ಕಾರ ಈ ಕಾರ್ಯವನ್ನು ಒಂದು ಧ್ಯೇಯವಾಗಿ ತೆಗೆದುಕೊಂಡಿದೆ ಮತ್ತು ಹೊಸದಾಗಿ ಉದ್ಘಾಟನೆಯಾದ ಫ್ಲಾಟ್ ಗಳು ಒಳಗೊಂಡಂತೆ, 2014 ರಿಂದ ಸುಮಾರು 350 ಸಂಸದರ ನಿವಾಸಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಈ ನಿವಾಸಗಳು ಪೂರ್ಣಗೊಂಡ ನಂತರ, ಸಾರ್ವಜನಿಕ ಹಣ ಈಗ ಉಳಿತಾಯವಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.
"21ನೇ ಶತಮಾನದ ಭಾರತವು ಅಭಿವೃದ್ಧಿಗೆ ಉತ್ಸುಕವಾಗಿರುವಂತೆಯೇ ಜವಾಬ್ದಾರಿಗಳಿಗೂ ಅಷ್ಟೇ ಸೂಕ್ಷ್ಮವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ದೇಶವು ಒಂದೆಡೆ ಕರ್ತವ್ಯ ಪಥ ಮತ್ತು ಕರ್ತವ್ಯ ಭವನವನ್ನು ನಿರ್ಮಿಸುತ್ತಿದ್ದರೆ, ಮತ್ತೊಂದೆಡೆ ಲಕ್ಷಾಂತರ ನಾಗರಿಕರಿಗೆ ಕೊಳವೆ ನೀರು ಒದಗಿಸುವ ಕರ್ತವ್ಯವನ್ನು ಪೂರೈಸುತ್ತಿದೆ ಎಂದು ಅವರು ಹೇಳಿದರು. ದೇಶವು ತನ್ನ ಸಂಸದರಿಗೆ ಹೊಸ ನಿವಾಸಗಳ ನಿರ್ಮಾಣವನ್ನು ಪೂರ್ಣಗೊಳಿಸುತ್ತಿದೆ, ಮತ್ತೊಂದೆಡೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ 4 ಕೋಟಿ ಬಡ ಕುಟುಂಬಗಳಿಗೆ ಮನೆ ಮಾಲೀಕತ್ವವನ್ನು ಒದಗಿಸುತ್ತಿದೆ ಎಂದು ಅವರು ಹೇಳಿದರು. ದೇಶವು ಹೊಸ ಸಂಸತ್ ಕಟ್ಟಡವನ್ನು ನಿರ್ಮಿಸಿದೆ ಮತ್ತು ನೂರಾರು ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುತ್ತಿದೆ. ಈ ಉಪಕ್ರಮಗಳ ಪ್ರಯೋಜನಗಳು ಸಮಾಜದ ಪ್ರತಿಯೊಂದು ವರ್ಗವನ್ನು ತಲುಪುತ್ತಿವೆ ಎಂದು ಅವರು ಹೇಳಿದರು.
ಹೊಸದಾಗಿ ನಿರ್ಮಿಸಲಾದ ಸಂಸದರ ನಿವಾಸಗಳಲ್ಲಿ ಸುಸ್ಥಿರ ಅಭಿವೃದ್ಧಿಯ ಪ್ರಮುಖ ಅಂಶಗಳನ್ನು ಅಳವಡಿಸಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದ ಶ್ರೀ ಮೋದಿ, ಈ ಉಪಕ್ರಮವು ದೇಶದ ಪರಿಸರ ಪರ ಮತ್ತು ಭವಿಷ್ಯ-ಸುರಕ್ಷಿತ ದೃಷ್ಟಿಕೋನಕ್ಕೆ ಅನುಗುಣವಾಗಿದೆ ಎಂದು ಹೇಳಿದರು. ವಸತಿ ಸಮುಚ್ಚಯದಲ್ಲಿ ಸೌರಶಕ್ತಿ ಚಾಲಿತ ಮೂಲಸೌಕರ್ಯವನ್ನು ಸೇರಿಸುವ ಬಗ್ಗೆ ಪ್ರಧಾನಮಂತ್ರಿಯವರು ಗಮನಸೆಳೆದರು. ಸೌರಶಕ್ತಿ ಕ್ಷೇತ್ರದಲ್ಲಿನ ತನ್ನ ಸಾಧನೆಗಳು ಮತ್ತು ಹೊಸ ಮೈಲಿಗಲ್ಲುಗಳಲ್ಲಿ ಪ್ರತಿಫಲಿಸಿದಂತೆ ಭಾರತವು ಸುಸ್ಥಿರ ಅಭಿವೃದ್ಧಿಯ ದೃಷ್ಟಿಕೋನವನ್ನು ನಿರಂತರವಾಗಿ ಮುನ್ನಡೆಸುತ್ತಿದೆ ಎಂದು ಅವರು ಹೇಳಿದರು.
ಹೊಸ ವಸತಿ ಸಮುಚ್ಚಯ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಂಸದರಿಗೆ ಹಲವಾರು ಮನವಿಗಳನ್ನು ಮಾಡಿದರು. ದೇಶದ ವಿವಿಧ ರಾಜ್ಯಗಳು ಮತ್ತು ಪ್ರದೇಶಗಳ ಸಂಸದರು ಈಗ ಒಟ್ಟಿಗೆ ವಾಸಿಸುತ್ತಾರೆ ಮತ್ತು ಅವರ ಉಪಸ್ಥಿತಿಯು 'ಏಕ್ ಭಾರತ್, ಶ್ರೇಷ್ಠ ಭಾರತ್'ನ ಮನೋಭಾವವನ್ನು ಸಂಕೇತಿಸಬೇಕು ಎಂದು ಅವರು ಹೇಳಿದರು. ಅದರ ಸಾಂಸ್ಕೃತಿಕ ಚೈತನ್ಯವನ್ನು ಹೆಚ್ಚಿಸಲು ಶ್ರೀ ಮೋದಿ ಸಂಕೀರ್ಣದೊಳಗೆ ಪ್ರಾದೇಶಿಕ ಹಬ್ಬಗಳ ಸಾಮೂಹಿಕ ಆಚರಣೆಗೆ ಕರೆ ನೀಡಿದರು. ಹೆಚ್ಚಿನ ಸಾರ್ವಜನಿಕ ಭಾಗವಹಿಸುವಿಕೆಯನ್ನು ಬೆಳೆಸಲು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮತದಾರರನ್ನು ಆಹ್ವಾನಿಸಲು ಅವರು ಸಲಹೆ ನೀಡಿದರು. ಭಾಷಾ ಸಾಮರಸ್ಯವನ್ನು ಉತ್ತೇಜಿಸುವ ಮೂಲಕ ಪರಸ್ಪರ ಪ್ರಾದೇಶಿಕ ಭಾಷೆಗಳಿಂದ ಪದಗಳನ್ನು ಕಲಿಸಲು ಮತ್ತು ಕಲಿಯಲು ಸಂಸದರನ್ನು ಪ್ರಧಾನಮಂತ್ರಿ ಒತ್ತಾಯಿಸಿದರು. ಸುಸ್ಥಿರತೆ ಮತ್ತು ಶುಚಿತ್ವವು ಸಂಕೀರ್ಣದ ವೈಶಿಷ್ಟ್ಯಗಳಾಗಿರಬೇಕು ಮತ್ತು ಈ ಬದ್ಧತೆಯನ್ನು ಎಲ್ಲರೂ ಹಂಚಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ನಿವಾಸಗಳು ಮಾತ್ರವಲ್ಲ, ಇಡೀ ಆವರಣವನ್ನು ಸ್ವಚ್ಛ ಮತ್ತು ಆರೋಗ್ಯಕರ ರೀತಿಯಲ್ಲಿ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಎಲ್ಲಾ ಸಂಸದರು ಒಂದು ತಂಡವಾಗಿ ಒಟ್ಟಾಗಿ ಕೆಲಸ ಮಾಡುತ್ತಾರೆ ಮತ್ತು ಅವರ ಸಾಮೂಹಿಕ ಪ್ರಯತ್ನಗಳು ರಾಷ್ಟ್ರಕ್ಕೆ ಮಾದರಿಯಾಗುತ್ತವೆ ಎಂಬ ಆಶಯವನ್ನು ವ್ಯಕ್ತಪಡಿಸುವ ಮೂಲಕ ಪ್ರಧಾನಮಂತ್ರಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಸಂಸದರ ವಿವಿಧ ವಸತಿ ಸಂಕೀರ್ಣಗಳ ನಡುವೆ ಸ್ವಚ್ಛತಾ ಸ್ಪರ್ಧೆಗಳನ್ನು ಆಯೋಜಿಸುವಂತೆ ಅವರು ಸಚಿವಾಲಯ ಮತ್ತು ವಸತಿ ಸಮಿತಿಯನ್ನು ಒತ್ತಾಯಿಸಿದರು. ಈ ಸಂಕಲ್ಪದೊಂದಿಗೆ, ಅವರು ಮತ್ತೊಮ್ಮೆ ಎಲ್ಲಾ ಸಂಸದರನ್ನು ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ ಲೋಕಸಭಾಧ್ಯಕ್ಷ ಶ್ರೀ ಓಂ ಬಿರ್ಲಾ, ಕೇಂದ್ರ ಸಚಿವರು ಮತ್ತು ಸಂಸತ್ ಸದಸ್ಯರು ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ಹಿನ್ನೆಲೆ
ನವದೆಹಲಿಯ ಬಾಬಾ ಖರಕ್ ಸಿಂಗ್ ಮಾರ್ಗದಲ್ಲಿ ಸಂಸದರಿಗಾಗಿ ಹೊಸದಾಗಿ ನಿರ್ಮಿಸಲಾದ 184 ಟೈಪ್-VII ಬಹುಮಹಡಿ ವಸತಿ ಸಮುಚ್ಚಯ ಉದ್ಘಾಟನೆಯ ಸಂದರ್ಭದಲ್ಲಿ, ಪ್ರಧಾನಮಂತ್ರಿಗಳು ವಸತಿ ಸಮುಚ್ಚಯದ ಆವರಣದಲ್ಲಿ ಸಿಂಧೂರ ಗಿಡವನ್ನು ನೆಟ್ಟರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.
ಈ ವಸತಿ ಸಂಕೀರ್ಣವನ್ನು ಸ್ವಾವಲಂಬಿಯಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಸಂಸದರ ಕ್ರಿಯಾತ್ಮಕ ಅವಶ್ಯಕತೆಗಳನ್ನು ಪೂರೈಸಲು ಆಧುನಿಕ ಸೌಕರ್ಯಗಳೊಂದಿಗೆ ಸಜ್ಜುಗೊಳಿಸಲಾಗಿದೆ. ಹಸಿರು ತಂತ್ರಜ್ಞಾನವನ್ನು ಸಂಯೋಜಿಸುವ ಈ ಯೋಜನೆಯು ಗೃಹ (GRIHA) 3-ಸ್ಟಾರ್ ರೇಟಿಂಗ್ ಮಾನದಂಡಗಳಿಗೆ ಬದ್ಧವಾಗಿದೆ ಮತ್ತು ರಾಷ್ಟ್ರೀಯ ಕಟ್ಟಡ ಸಂಹಿತೆ (ಎನ್ ಬಿ ಸಿ) 2016 ಕ್ಕೆ ಅನುಗುಣವಾಗಿದೆ. ಈ ಪರಿಸರ ಸುಸ್ಥಿರ ವೈಶಿಷ್ಟ್ಯಗಳು ಇಂಧನ ಸಂರಕ್ಷಣೆ, ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆಗೆ ಕೊಡುಗೆ ನೀಡುತ್ತವೆ. ಸುಧಾರಿತ ನಿರ್ಮಾಣ ತಂತ್ರಗಳ ಬಳಕೆಯು - ನಿರ್ದಿಷ್ಟವಾಗಿ, ಅಲ್ಯೂಮಿನಿಯಂ ಶಟರಿಂಗ್ ನೊಂದಿಗೆ ಮೊನೊಲಿಥಿಕ್ ಕಾಂಕ್ರೀಟ್ – ಕಟ್ಟಡದ ಬಾಳಿಕೆಯನ್ನು ಖಚಿತಪಡಿಸಿಕೊಂಡು, ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗಿಸಿತು. ಸಂಕೀರ್ಣವು ದಿವ್ಯಾಂಗ ಸ್ನೇಹಿಯಾಗಿದೆ, ಇದು ಎಲ್ಲರನ್ನೂ ಒಳಗೊಳ್ಳುವ ವಿನ್ಯಾಸಕ್ಕೆ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಸಂಸತ್ ಸದಸ್ಯರಿಗೆ ಸಾಕಷ್ಟು ವಸತಿ ಕೊರತೆಯಿಂದಾಗಿ ಈ ಯೋಜನೆಯು ಅಗತ್ಯವಾಗಿತ್ತು. ಭೂಮಿಯ ಸೀಮಿತ ಲಭ್ಯತೆಯಿಂದಾಗಿ, ಭೂ ಬಳಕೆಯನ್ನು ಅತ್ಯುತ್ತಮವಾಗಿಸುವ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಲಂಬ ವಸತಿ ಅಭಿವೃದ್ಧಿಗೆ ನಿರಂತರ ಒತ್ತು ನೀಡಲಾಗುತ್ತಿದೆ.
ಪ್ರತಿಯೊಂದು ವಸತಿ ಘಟಕವು ಸರಿಸುಮಾರು 5,000 ಚದರ ಅಡಿ ವಿಸ್ತೀರ್ಣದ ಕಾರ್ಪೆಟ್ ಪ್ರದೇಶವನ್ನು ಹೊಂದಿದ್ದು, ವಸತಿ ಮತ್ತು ಅಧಿಕೃತ ಕಾರ್ಯಕ್ರಮಗಳಿಗೆ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತದೆ. ಕಚೇರಿಗಳು, ಸಿಬ್ಬಂದಿ ವಸತಿ ಮತ್ತು ಸಮುದಾಯ ಕೇಂದ್ರಕ್ಕಾಗಿ ಮೀಸಲಾದ ಪ್ರದೇಶಗಳನ್ನು ಸೇರಿಸುವುದರಿಂದ ಸಂಸತ್ತಿನ ಸದಸ್ಯರು ಸಾರ್ವಜನಿಕ ಪ್ರತಿನಿಧಿಗಳಾಗಿ ತಮ್ಮ ಜವಾಬ್ದಾರಿಗಳನ್ನು ಪೂರೈಸಲು ಸಹಾಯ ಮಾಡುತ್ತದೆ.
ಸಮುಚ್ಚಯದಲ್ಲಿರುವ ಎಲ್ಲಾ ಕಟ್ಟಡಗಳನ್ನು ಆಧುನಿಕ ರಚನಾತ್ಮಕ ವಿನ್ಯಾಸ ಮಾನದಂಡಗಳ ಪ್ರಕಾರ ಭೂಕಂಪ ನಿರೋಧಕವಾಗಿ ನಿರ್ಮಿಸಲಾಗಿದೆ. ಎಲ್ಲಾ ನಿವಾಸಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಮಗ್ರ ಮತ್ತು ಬಲಿಷ್ಠ ಭದ್ರತಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
*****
(Release ID: 2155083)
Read this release in:
Bengali
,
Bengali-TR
,
English
,
Urdu
,
Marathi
,
Hindi
,
Manipuri
,
Assamese
,
Gujarati
,
Odia
,
Tamil
,
Telugu
,
Malayalam