ಕೃಷಿ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಭಾರತ ರತ್ನ ಡಾ. ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದರು


"ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪ್ರೇರಣೆಯಿಂದ 'ಪ್ರಯೋಗಾಲಯದಿಂದ ಜಮೀನಿಗೆ' ಅಭಿಯಾನ ಸೇರಿದಂತೆ ಹಲವು ಉಪಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ" - ಶ್ರೀ ಶಿವರಾಜ್ ಸಿಂಗ್

"ಡಾ. ಸ್ವಾಮಿನಾಥನ್ ತೋರಿಸಿದ ಮಾರ್ಗವನ್ನು ಅನುಸರಿಸುವ ಮೂಲಕ, ನಮ್ಮ ದೇಶ ಅಥವಾ ಜಗತ್ತು ಹಸಿವು ಮತ್ತು ಅಭಾವದಿಂದ ಬಳಲದಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ" - ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್

"ಭವಿಷ್ಯದ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ಅನ್ನು ಪ್ರಾರಂಭಿಸಲಾಗಿದೆ" - ಶ್ರೀ ಶಿವರಾಜ್ ಸಿಂಗ್ ಚೌಹಾಣ್

Posted On: 07 AUG 2025 5:21PM by PIB Bengaluru

ನವದೆಹಲಿಯ ಪುಸಾದಲ್ಲಿ ಇಂದು ನಡೆದ ಭಾರತ ರತ್ನ ಡಾ. ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತರರಾಷ್ಟ್ರೀಯ ಸಮ್ಮೇಳನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 2025ರ ಆಗಸ್ಟ್ 7–9 ರವರೆಗೆ ನವದೆಹಲಿಯ ಪುಸಾ ಆವರಣದಲ್ಲಿ ಆಯೋಜಿಸಲಾಗಿರುವ ಈ ಸಮ್ಮೇಳನವು ಕೃಷಿ ವಿಜ್ಞಾನದಲ್ಲಿ ಶ್ರೇಷ್ಠ ವ್ಯಕ್ತಿತ್ವ ಮತ್ತು ಆಹಾರ ಭದ್ರತೆಯ ಪ್ರವರ್ತಕ ಪ್ರೊ. ಡಾ. ಎಂ.ಎಸ್. ಸ್ವಾಮಿನಾಥನ್ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥವಾಗಿದೆ. ಈ ಕಾರ್ಯಕ್ರಮವನ್ನು ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐ.ಸಿ.ಎ.ಆರ್) ಮತ್ತು ರಾಷ್ಟ್ರೀಯ ಕೃಷಿ ವಿಜ್ಞಾನ ಅಕಾಡೆಮಿಯ ಸಹಯೋಗದೊಂದಿಗೆ ನಡೆಸಲಾಗುತ್ತಿದೆ. ಸಮ್ಮೇಳನದ ವಿಷಯ 'ನಿತ್ಯಹಸಿರು ಕ್ರಾಂತಿ – ಜೈವಿಕ ಸಂತೋಷದ ಹಾದಿ'.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಶಿವರಾಜ್ ಸಿಂಗ್, ಜೀವನದ ನಿಜವಾದ ಅರ್ಥವನ್ನು ಒತ್ತಿ ಹೇಳಿದರು, "ಇತರರಿಗಾಗಿ ಬದುಕುವುದು ಜೀವನದ ನಿಜವಾದ ಸಾರ - ರಾಷ್ಟ್ರಕ್ಕಾಗಿ, ಸಮಾಜಕ್ಕಾಗಿ ಮತ್ತು ಇತರರಿಗಾಗಿ ಬದುಕುವವರು ತಮ್ಮ ಅಸ್ತಿತ್ವವನ್ನು ನಿಜವಾಗಿಯೂ ಅರ್ಥಪೂರ್ಣಗೊಳಿಸುತ್ತಾರೆ" ಎಂದು ಹೇಳಿದರು. ಡಾ. ಸ್ವಾಮಿನಾಥನ್ ಅವರು ಇತರರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ವ್ಯಕ್ತಿತ್ವ ಎಂದು ಸಚಿವರು ಹೇಳಿದರು. ಡಾ. ಸ್ವಾಮಿನಾಥನ್ ಅವರು ತೋರಿಸಿದ ಮಾರ್ಗವನ್ನು ಅನುಸರಿಸುವ ಮೂಲಕ, "ಭಾರತ ಅಥವಾ ಜಗತ್ತು ಹಸಿವು ಅಥವಾ ಅಭಾವವನ್ನು ಎದುರಿಸದಂತೆ ನಾವು ಖಚಿತಪಡಿಸುತ್ತೇವೆ" ಎಂದು ಅವರು ಹೇಳಿದರು.

ಡಾ. ಸ್ವಾಮಿನಾಥನ್ ಅವರ ಕೊಡುಗೆಗಳನ್ನು ಸ್ಮರಿಸಿದ ಕೇಂದ್ರ ಸಚಿವರು, 1942-43ರ ಬಂಗಾಳದ ಕ್ಷಾಮವು ಲಕ್ಷಾಂತರ ಜನರನ್ನು ಹಸಿವಿನ ಅಂಚಿಗೆ ತಳ್ಳಿತು. ಅದು ಡಾ. ಸ್ವಾಮಿನಾಥನ್ ಅವರನ್ನು ತೀವ್ರವಾಗಿ ಕಲಕಿತು. ನಂತರ, ಡಾ. ಸ್ವಾಮಿನಾಥನ್ ತಮ್ಮ ಜೀವನವನ್ನು ಕೃಷಿ, ರೈತರು ಮತ್ತು ಹಸಿವು ನಿರ್ಮೂಲನೆಗೆ ಮುಡಿಪಾಗಿಟ್ಟರು. 1966 ರಲ್ಲಿ, 18,000 ಟನ್ ಮೆಕ್ಸಿಕನ್ ಗೋಧಿಯನ್ನು ಆಮದು ಮಾಡಿಕೊಳ್ಳಲಾಯಿತು, ಇದನ್ನು ಪಂಜಾಬಿನಲ್ಲಿ ಸ್ಥಳೀಯ ಪ್ರಭೇದಗಳೊಂದಿಗೆ ಮಿಶ್ರತಳಿ ಮಾಡಲಾಯಿತು, ಇದರಿಂದಾಗಿ ಹೊಸ ಹೈಬ್ರಿಡ್ ತಳಿ ಸೃಷ್ಟಿಯಾಯಿತು ಎಂದು ಶ್ರೀ ಚೌಹಾಣ್ ನೆನಪಿಸಿಕೊಂಡರು. ಇದರಿಂದಾಗಿ, ಒಂದು ವರ್ಷದೊಳಗೆ ಗೋಧಿ ಉತ್ಪಾದನೆಯು 50 ಲಕ್ಷ ಟನ್ಗಳಿಂದ 17 ಲಕ್ಷ ಟನ್ ಗಳಿಗೆ ಏರಿತು. ಡಾ. ಸ್ವಾಮಿನಾಥನ್ ಹಸಿರು ಕ್ರಾಂತಿಯ ಪಿತಾಮಹ ಮತ್ತು ಅವರು ನಿರ್ಮಿಸಲು ಸಹಾಯ ಮಾಡಿದ ಕೃಷಿ ಸಂಶೋಧನಾ ವ್ಯವಸ್ಥೆಗಳು ಇಂದಿಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಶ್ರೀ ಚೌಹಾಣ್ ಹೇಳಿದರು.

ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣದ ಬಗ್ಗೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಶ್ರೀ ಚೌಹಾಣ್, ಪ್ರಧಾನಿ ಶ್ರೀ ಮೋದಿಯವರು ಹೇಳುವ ಪ್ರತಿಯೊಂದು ಮಾತು ಮಾರ್ಗದರ್ಶಿ ಮಂತ್ರದಂತಿದೆ ಎಂದು ಹೇಳಿದರು. ಒಂದು ವರ್ಷದ ಹಿಂದೆ, ಪುಸಾಗೆ ಭೇಟಿ ನೀಡಿದ ಸಂದರ್ಭದಲ್ಲಿ, ಪ್ರಧಾನಿ ಮೋದಿಯವರು "ಪ್ರಯೋಗಾಲಯವನ್ನು ಜಮೀನಿನೊಂದಿಗೆ ಸಂಪರ್ಕಿಸಲು" ಸಲಹೆ ನೀಡಿದ್ದರು ಮತ್ತು ವಿಜ್ಞಾನ ಮತ್ತು ಕೃಷಿಯ ಏಕೀಕರಣವಾಗದ ಹೊರತು, ಕೃಷಿ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದರಿಂದ ಪ್ರೇರಿತರಾಗಿ, 'ಪ್ರಯೋಗಾಲಯದಿಂದ ಜಮೀನಿಗೆ' ಉಪಕ್ರಮ, 'ಕೃಷಿ ಚೌಪಾಲ್' ಮತ್ತು 'ವಿಕಸಿತ ಕೃಷಿ ಸಂಕಲ್ಪ ಅಭಿಯಾನ' ಸೇರಿದಂತೆ ಹಲವಾರು ಅಭಿಯಾನಗಳನ್ನು ಪ್ರಾರಂಭಿಸಲಾಗಿದೆ ಎಂದು ಸಚಿವರು ಹೇಳಿದರು.

'ವಿಕಸಿತ ಕೃಷಿ ಸಂಕಲ್ಪ ಅಭಿಯಾನ'ದ ಅಡಿಯಲ್ಲಿ ಒಟ್ಟು 2,170 ವಿಜ್ಞಾನಿಗಳ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು 64,000 ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿ 1 ಕೋಟಿಗೂ ಹೆಚ್ಚು (10 ಮಿಲಿಯನ್) ರೈತರೊಂದಿಗೆ ನೇರವಾಗಿ ತೊಡಗಿಸಿಕೊಂಡವು ಎಂದು ಶ್ರೀ ಚೌಹಾಣ್ ಮಾಹಿತಿ ನೀಡಿದರು.

ಆಹಾರ ಉತ್ಪಾದನೆಯ ಕುರಿತು ಮಾತನಾಡಿದ ಶ್ರೀ ಚೌಹಾಣ್, ಭಾರತದ ಆಹಾರ ಧಾನ್ಯಗಳ ದಾಸ್ತಾನು ಗಮನಾರ್ಹವಾಗಿ ಸುಧಾರಿಸಿದೆ ಎಂದು ಹೇಳಿದರು. "ದೇಶವು ಹೆಚ್ಚುವರಿ ಅಕ್ಕಿಯನ್ನು ಹೊಂದಿದೆ, ಗೋಧಿಯಲ್ಲಿ ಸ್ವಾವಲಂಬಿಯಾಗಿದೆ ಮತ್ತು ಬಲಿಷ್ಠ ಆಹಾರ ಧಾನ್ಯ ಸಂಗ್ರಹಣಾ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ" ಎಂದು ಅವರು ಹೇಳಿದರು. ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ, ಪ್ರಸ್ತುತ 80 ಕೋಟಿ (800 ಮಿಲಿಯನ್) ಜನರಿಗೆ ಉಚಿತ ಪಡಿತರವನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಪ್ರತಿ ಹೆಕ್ಟೇರ್ ಉತ್ಪಾದಕತೆಯನ್ನು ಹೆಚ್ಚಿಸುವ ಬಗ್ಗೆಯೂ ಅವರು ಒತ್ತಿ ಹೇಳಿದರು. ಪ್ರಧಾನಮಂತ್ರಿಯವರ ಮಾರ್ಗದರ್ಶನದಲ್ಲಿ ಸೋಯಾಬೀನ್, ನೆಲಗಡಲೆ, ಸಾಸಿವೆ, ಎಳ್ಳು, ಕಡಲೆ, ಮಸೂರ, ಉದ್ದು ಮತ್ತು ಅರ್ಹರ್ ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಸಚಿವರು ಹೇಳಿದರು.

ಪ್ರಧಾನಮಂತ್ರಿ ಅವರ ನೇತೃತ್ವದಲ್ಲಿ 'ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್' ಅನ್ನು ಪ್ರಾರಂಭಿಸಲಾಗಿದೆ. ಭೂಮಿಯು ಭವಿಷ್ಯದ ಪೀಳಿಗೆಗೆ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ನೀಡುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಮಿಷನ್ ಹೊಂದಿದೆ ಮತ್ತು ಇದನ್ನು ಸಾಧಿಸಲು ವೈಜ್ಞಾನಿಕ ವಿಧಾನಗಳನ್ನು ಗಂಭೀರವಾಗಿ ಅನ್ವಯಿಸಲಾಗುತ್ತಿದೆ ಎಂದು ಹೇಳಿದ ಶ್ರೀ ಚೌಹಾಣ್ ತಮ್ಮ ಮಾತು ಮುಗಿಸಿದರು.

ಶ್ರೀ ಶಿವರಾಜ್ ಸಿಂಗ್ ಅವರು ಪ್ರೊ. ಸ್ವಾಮಿನಾಥನ್ ಅವರ ಜೀವನ ಪಯಣ ಮತ್ತು ಅಮೂಲ್ಯ ಕೊಡುಗೆಗಳನ್ನು ಸಾರುವ ಪ್ರದರ್ಶನಕ್ಕೂ ಭೇಟಿ ನೀಡಿದರು.

ಈ ಕಾರ್ಯಕ್ರಮದಲ್ಲಿ ನೀತಿ ಆಯೋಗದ ಸದಸ್ಯರಾದ ಡಾ. ರಮೇಶ್ ಚಂದ್, ಡಾ. ಸೌಮ್ಯ ಸ್ವಾಮಿನಾಥನ್ (ಡಾ. ಎಂ.ಎಸ್. ಸ್ವಾಮಿನಾಥನ್ ಅವರ ಪುತ್ರಿ), ಕೃಷಿ ತಜ್ಞರು, ವಿಜ್ಞಾನಿಗಳು, ರೈತರು ಮತ್ತು ಇತರ ಗಣ್ಯ ಅತಿಥಿಗಳು ಭಾಗವಹಿಸಿದ್ದರು.

 

*****
 


(Release ID: 2153908)