ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಈಶಾನ್ಯ ಭಾರತದ ಸಬಲೀಕರಣ: ಎನ್ ಎಫ್ ಡಿ ಸಿ ಯಿಂದ ಯುವಕರಿಗೆ ಉಚಿತ ವಸತಿ ಸಹಿತ ವಿ ಎಫ್ ಎಕ್ಸ್ ಮತ್ತು ಅನಿಮೇಷನ್ ತರಬೇತಿ
3ಡಿ ಅನಿಮೇಷನ್ ಮತ್ತು ವಿ ಎಫ್ ಎಕ್ಸ್ ನಲ್ಲಿ ಉಚಿತ 8 ತಿಂಗಳ ವಸತಿ ಸಹಿತ ತರಬೇತಿ; ಸಂಪೂರ್ಣ ಅನುದಾನಿತ ಕೌಶಲ್ಯ ಕಾರ್ಯಕ್ರಮಕ್ಕೆ 100 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 15 ಆಗಸ್ಟ್ 2025
Posted On:
02 AUG 2025 11:05AM by PIB Bengaluru
ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆಶ್ರಯದಲ್ಲಿ ಭಾರತೀಯ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ), ಭಾರತದ ಈಶಾನ್ಯ ಪ್ರದೇಶದ ಮಹತ್ವಾಕಾಂಕ್ಷಿ ವೃತ್ತಿಪರರಿಗಾಗಿ ಪ್ರತ್ಯೇಕವಾಗಿ 3ಡಿ ಅನಿಮೇಷನ್ ಮತ್ತು ದೃಶ್ಯ ಪರಿಣಾಮಗಳಲ್ಲಿ (ವಿ ಎಫ್ ಎಕ್ಸ್) ಸಂಪೂರ್ಣ ವಸತಿ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ಈ ಕಾರ್ಯಕ್ರಮವು ಎಂಟು ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದ ಯಾವುದೇ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ಅರ್ಜಿದಾರರು ಜೂನ್ 2025 ರ ವೇಳೆಗೆ ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಭಾಗವಹಿಸುವ ಎಲ್ಲರೂ ಎನ್ ಎಫ್ ಡಿ ಸಿ ಮತ್ತು ರಾಷ್ಟ್ರೀಯ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಮಂಡಳಿ (ಎನ್ ಸಿ ವಿ ಇ ಟಿ) ನೀಡುವ ಜಂಟಿ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ.
ಅಗತ್ಯವಿರುವ ಕನಿಷ್ಠ ಅರ್ಹತೆಯೆಂದರೆ 10+2 ಉತ್ತೀರ್ಣರಾಗಿರಬೇಕು ಅಥವಾ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು, ಸಂಬಂಧಿತ ಉದ್ಯಮದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು. ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ₹1,180 (ತೆರಿಗೆ ಸೇರಿ) ನಾಮಮಾತ್ರ, ಮರುಪಾವತಿಸಲಾಗದ ನೋಂದಣಿ ಶುಲ್ಕ ಅನ್ವಯಿಸುತ್ತದೆ. ಆಸಕ್ತ ಅಭ್ಯರ್ಥಿಗಳು ಎನ್ ಎಫ್ ಡಿ ಸಿ ಯ ಅಧಿಕೃತ ವೆಬ್‌ಸೈಟ್ http://www.nfdcindia.com ಗೆ ಭೇಟಿ ನೀಡುವ ಮೂಲಕ ಅಥವಾ ಮೀಸಲಾದ ನೋಂದಣಿ ಪೋರ್ಟಲ್ https://skill.nfdcindia.com/Specialproject ಗೆ ನೇರವಾಗಿ ಭೇಟಿ ನೀಡುವ ಮೂಲಕ ಆನ್‌ಲೈನ್ ನಲ್ಲಿ ನೋಂದಾಯಿಸಿಕೊಳ್ಳಬಹುದು. ನೋಂದಣಿಗೆ ಕೊನೆಯ ದಿನಾಂಕ ಆಗಸ್ಟ್ 15, 2025. ಅರ್ಜಿ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಶ್ನೆಗಳು ಅಥವಾ ಸಹಾಯಕ್ಕಾಗಿ, ಅಭ್ಯರ್ಥಿಗಳು skillindia@nfdcindia.com ಗೆ ಬರೆಯಬಹುದು.
ಎನ್ ಎಫ್ ಡಿ ಸಿ ಯ ತರಬೇತಿ ಪಾಲುದಾರ ಆಪ್ಟೆಕ್ ಲಿಮಿಟೆಡ್ ಸಹಯೋಗದೊಂದಿಗೆ ನಡೆಸಲಾಗುವ ಈ ತೀವ್ರವಾದ 8 ತಿಂಗಳ ವಸತಿ ತರಬೇತಿ ಕಾರ್ಯಕ್ರಮಕ್ಕಾಗಿ ಒಟ್ಟು 100 ಅಭ್ಯರ್ಥಿಗಳನ್ನು ತಪಾಸಣೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಕಾರ್ಯಕ್ರಮವನ್ನು ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿರುವ ಸಂಪೂರ್ಣ ಸುಸಜ್ಜಿತ ತರಬೇತಿ ಕೇಂದ್ರದಲ್ಲಿ ನಡೆಸಲಾಗುವುದು ಮತ್ತು ಇದನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುವುದು: 3ಡಿ ಅನಿಮೇಷನ್ ಮತ್ತು ವಿ ಎಫ್ ಎಕ್ಸ್ ನಲ್ಲಿ ಆರು ತಿಂಗಳ ಕಠಿಣ ತರಗತಿ ಆಧಾರಿತ ತರಬೇತಿ, ನಂತರ ಕೆಲಸದ ತರಬೇತಿಯ ಮೂಲಕ ಎರಡು ತಿಂಗಳ ಉದ್ಯಮ ಅನುಭವ. ಪ್ರಾಯೋಗಿಕ ಕಲಿಕೆಯ ಮಾಡ್ಯೂಲ್ ಗಳು, ಉದ್ಯಮ-ಸಂಬಂಧಿತ ಯೋಜನೆಗಳು ಮತ್ತು ಚಲನಚಿತ್ರ ಸ್ಟುಡಿಯೋಗಳು ಮತ್ತು ಕಂಟೆಂಟ್ ಸೃಷ್ಟಿ ಕಂಪನಿಗಳಲ್ಲಿ ಬಳಸುವ ನೈಜ-ಪ್ರಪಂಚದ ಕೆಲಸದ ಅನುಭವಗಳಿಗೆ ಒಡ್ಡಿಕೊಳ್ಳುವುದು ತರಬೇತಿಯಲ್ಲಿ ಒಳಗೊಂಡಿರುತ್ತದೆ.
ಕಾರ್ಯಕ್ರಮದ ಉದ್ದಕ್ಕೂ ಕಲಿಕೆಗೆ ಬೆಂಬಲ ನೀಡಲು ಆಯ್ಕೆಯಾದ ಪ್ರತಿಯೊಬ್ಬರಿಗೂ ಉನ್ನತ ಕಾರ್ಯಕ್ಷಮತೆಯ ಲ್ಯಾಪ್‌ಟಾಪ್ ಒದಗಿಸಲಾಗುತ್ತದೆ.
ಇನ್ನೂ ಮುಖ್ಯವಾದ ವಿಷಯವೆಂದರೆ, ವಸತಿ ಮತ್ತು ಊಟ ಸೇರಿದಂತೆ ತರಬೇತಿಯನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ವಸತಿ, ದಿನಕ್ಕೆ ಮೂರು ಊಟ ಮತ್ತು ತರಬೇತಿ ಸಂಪನ್ಮೂಲಗಳಿಗೆ ಪ್ರವೇಶ ಮತ್ತು ಮಾರ್ಗದರ್ಶನ ಬೆಂಬಲವನ್ನು ಯಾವುದೇ ಆರ್ಥಿಕ ಹೊರೆಯಿಲ್ಲದೆ ಒದಗಿಸಲಾಗುತ್ತದೆ. ಆರ್ಥಿಕವಾಗಿ ಮತ್ತು ಭೌಗೋಳಿಕವಾಗಿ ಹಿಂದುಳಿದ ಪ್ರದೇಶಗಳ ಪ್ರತಿಭಾನ್ವಿತ ಯುವಜನರು ಭಾರತದ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆಯಲ್ಲಿ ಸಮಾನ ಹೆಜ್ಜೆಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳುವುದು ಈ ಉಪಕ್ರಮದ ಗುರಿಯಾಗಿದೆ.
ಭಾರತದ ಈಶಾನ್ಯ ರಾಜ್ಯಗಳ ವಿಶಾಲವಾದ ಆದರೆ ಬಳಕೆಯಾಗದ ಸೃಜನಶೀಲ ಸಾಮರ್ಥ್ಯವನ್ನು ಗುರುತಿಸಿ, ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಮೂಲಸೌಕರ್ಯಕ್ಕೆ ಪ್ರವೇಶಕ್ಕೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆಗಳನ್ನು ಪರಿಹರಿಸಲು ಎನ್ ಎಫ್ ಡಿ ಸಿ ಈ ಉಪಕ್ರಮವನ್ನು ಕಾರ್ಯತಂತ್ರವಾಗಿ ವಿನ್ಯಾಸಗೊಳಿಸಿದೆ. ಇದು ಈಶಾನ್ಯದ ಯುವಕರಿಗೆ ಮೀಸಲಾಗಿರುವ ಎನ್ ಎಫ್ ಡಿ ಸಿ ಯ ವಸತಿ ಕಾರ್ಯಕ್ರಮದ ಮೂರನೇ ಆವೃತ್ತಿಯಾಗಿದ್ದು, ಈ ಪ್ರದೇಶದ ಕೌಶಲ್ಯಪೂರ್ಣ ಡಿಜಿಟಲ್ ಕಲಾವಿದರು ಮತ್ತು ಅನಿಮೇಷನ್ ವೃತ್ತಿಪರರ ಸಮೂಹವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮವು ಭಾಗವಹಿಸುವವರನ್ನು ಹೆಚ್ಚಿನ ಬೇಡಿಕೆಯ ತಾಂತ್ರಿಕ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವುದಲ್ಲದೆ, ಉದ್ಯೋಗಾವಕಾಶ, ಉದ್ಯಮಶೀಲತೆ ಮತ್ತು ದೀರ್ಘಕಾಲೀನ ಆರ್ಥಿಕ ಸಬಲೀಕರಣಕ್ಕೆ ಚಿಮ್ಮುಹಲಗೆಯಾಗಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದೆ.
ಭಾರತ ಸರ್ಕಾರದ ಉದ್ಯಮವಾದ ಎನ್ ಎಫ್ ಡಿ ಸಿ, ದೇಶದ ಸಿನಿಮಾ ಮತ್ತು ಸೃಜನಶೀಲ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಸಂಸ್ಥೆಯಾಗಿದೆ. ಅರ್ಥಪೂರ್ಣ ಭಾರತೀಯ ಸಿನಿಮಾದ ಸೃಷ್ಟಿ ಮತ್ತು ಪ್ರಚಾರದಲ್ಲಿ ತನ್ನ ಪಾತ್ರಕ್ಕಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟಿರುವ ಜೊತೆಗೆ, ಎನ್ ಎಫ್ ಡಿ ಸಿ ಕೌಶಲ್ಯ ಅಭಿವೃದ್ಧಿಗಾಗಿ ವಿಶ್ವಾಸಾರ್ಹ ಅನುಷ್ಠಾನ ಸಂಸ್ಥೆಯಾಗಿ ಹೊರಹೊಮ್ಮಿದೆ, ತರಬೇತಿ, ಮೌಲ್ಯಮಾಪನ, ಪ್ರಮಾಣೀಕರಣ ಮತ್ತು ನಿಯೋಜನೆ ನೆರವು ಸೇರಿದಂತೆ ಸಮಗ್ರ ಪರಿಹಾರಗಳನ್ನು ಒದಗಿಸುತ್ತದೆ. ಅನಿಮೇಷನ್, ಚಲನಚಿತ್ರ ನಿರ್ಮಾಣ, ವಿ ಎಫ್ ಎಕ್ಸ್, ಗೇಮಿಂಗ್, ಡಿಜಿಟಲ್ ಕಂಟೆಂಟ್ ರಚನೆ ಮತ್ತು ಜಾಹೀರಾತು ಮುಂತಾದ ಕ್ಷೇತ್ರಗಳಲ್ಲಿ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಉದಯೋನ್ಮುಖ ಬೇಡಿಕೆಗಳನ್ನು ಪೂರೈಸುವ ರಚನಾತ್ಮಕ ಕಾರ್ಯಕ್ರಮಗಳನ್ನು ಒದಗಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ.
*****
(Release ID: 2151838)
Read this release in:
English
,
Urdu
,
Marathi
,
Hindi
,
Manipuri
,
Bengali-TR
,
Assamese
,
Punjabi
,
Gujarati
,
Tamil
,
Malayalam