ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಗಸ್ಟ್‌ 2 ರಂದು ವಾರಣಾಸಿಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


ವಾರಣಾಸಿಯಲ್ಲಿ ಸುಮಾರು 2200 ಕೋಟಿ ರೂಪಾಯಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಯೋಜನೆಗಳು ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ನಗರಾಭಿವೃದ್ಧಿ, ಸಾಂಸ್ಕೃತಿಕ ಪರಂಪರೆ ಸೇರಿದಂತೆ ಅನೇಕ ಕ್ಷೇತ್ರಗಳನ್ನು ಪೂರೈಸುತ್ತವೆ

ಸ್ಮಾರ್ಟ್‌ ವಿತರಣಾ ಯೋಜನೆ ಮತ್ತು ವಿದ್ಯುತ್‌ ಮೂಲಸೌಕರ್ಯಗಳ ಭೂಗತಗೊಳಿಸುವ ಅಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಸಾಂಸ್ಕೃತಿಕವಾಗಿ ಮಹತ್ವದ ಜಲಮೂಲಗಳನ್ನು ಸಂರಕ್ಷಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಅವರು ವಿವಿಧ ಕೊಳಗಳಲ್ಲಿ ನೀರು ಶುದ್ಧೀಕರಣ ಮತ್ತು ನಿರ್ವಹಣಾ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ

ಪಿ.ಎಂ.-ಕಿಸಾನ್‌ ಯೋಜನೆಯ 20ನೇ ಕಂತನ್ನು 9.7 ಕೋಟಿ ರೈತರಿಗೆ 20,500 ಕೋಟಿ ರೂ.ಗೂ ಅಧಿಕ ಹಣ ವರ್ಗಾವಣೆ ಮಾಡಲಿರುವ ಪ್ರಧಾನಮಂತ್ರಿ

ಪಿ.ಎಂ.-ಕಿಸಾನ್‌ ಪ್ರಾರಂಭವಾದಾಗಿನಿಂದ ಒಟ್ಟು ವಿತರಣೆ 3.90 ಲಕ್ಷ  ಕೋಟಿ ರೂಪಾಯಿಗೆ ಏರಿಕೆ

Posted On: 31 JUL 2025 6:59PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್‌ 2 ರಂದು ಬೆಳಗ್ಗೆ 11 ಗಂಟೆಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸುಮಾರು 2200 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಈ ಯೋಜನೆಗಳು ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ನಗರಾಭಿವೃದ್ಧಿ ಮತ್ತು ಸಾಂಸ್ಕೃತಿಕ ಪರಂಪರೆ ಸೇರಿದಂತೆ ಅನೇಕ ಕ್ಷೇತ್ರಗಳನ್ನು ಪೂರೈಸುತ್ತವೆ. ಇದು ವಾರಣಾಸಿಯಲ್ಲಿ ಸಮಗ್ರ ನಗರ ಪರಿವರ್ತನೆ, ಸಾಂಸ್ಕೃತಿಕ ಪುನರುಜ್ಜೀವನ, ಸುಧಾರಿತ ಸಂಪರ್ಕ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ವಾರಣಾಸಿಯಲ್ಲಿ ರಸ್ತೆ ಸಂಪರ್ಕವನ್ನು ಸುಧಾರಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಅವರು ಹಲವಾರು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವಾರಣಾಸಿ-ಭದೋಹಿ ರಸ್ತೆ ಮತ್ತು ಚಿಟೌನಿ-ಶೂಲ್‌ ಟಂಕೇಶ್ವರ ರಸ್ತೆಗಳ ಅಗಲೀಕರಣ ಮತ್ತು ಬಲವರ್ಧನೆಯನ್ನು ಅವರು ಉದ್ಘಾಟಿಸಲಿದ್ದಾರೆ. ಮತ್ತು ಮೋಹನ್‌ ಸರಾಯ್‌-ಅದಲ್ಪುರ ರಸ್ತೆಯಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲು ಹರ್ದತ್ಪುರದಲ್ಲಿ ರೈಲ್ವೆ ಮೇಲ್ಸೇತುವೆ, ದಾಲ್ಮಂಡಿ, ಲಹರ್ತಾರಾ-ಕೊಟ್ವಾ, ಗಂಗಾಪುರ್‌, ಬಬತ್ಪುರ್ ಸೇರಿದಂತೆ ಅನೇಕ ಗ್ರಾಮೀಣ ಮತ್ತು ನಗರ ಕಾರಿಡಾರ್‌ಗಳಲ್ಲಿ ಸಮಗ್ರ ರಸ್ತೆ ಅಗಲೀಕರಣ ಮತ್ತು ಬಲವರ್ಧನೆ ಮತ್ತು ಲೆವೆಲ್‌ ಕ್ರಾಸಿಂಗ್‌ 22 ಸಿ ಮತ್ತು ಖಲಿಸ್ಪುರ್ ಯಾರ್ಡ್‌ನಲ್ಲಿ ರೈಲ್ವೆ ಮೇಲ್ಸೇತುವೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಈ ಪ್ರದೇಶದಲ್ಲಿ ವಿದ್ಯುತ್‌ ಮೂಲಸೌಕರ್ಯವನ್ನು ಬಲಪಡಿಸುವ ಪ್ರಧಾನಮಂತ್ರಿ ಅವರು, ಸ್ಮಾರ್ಟ್‌ ವಿತರಣಾ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು 880 ಕೋಟಿ ರೂ.ಗೂ ಅಧಿಕ ಮೌಲ್ಯದ ವಿದ್ಯುತ್‌ ಮೂಲಸೌಕರ್ಯವನ್ನು ಭೂಗತಗೊಳಿಸಲಿದ್ದಾರೆ.

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರು 8 ನದಿ ತೀರದ ಕಚ್ಚಾ ಘಾಟ್‌ಗಳ ಪುನರಾಭಿವೃದ್ಧಿ, ಕಾಳಿಕಾ ಧಾಮ್‌ನಲ್ಲಿ ಅಭಿವೃದ್ಧಿ ಕಾರ್ಯಗಳು, ಶಿವಪುರದ ರಂಗಿಲ್‌ ದಾಸ್‌ ಕುಟಿಯಾದಲ್ಲಿನ ಕೊಳ ಮತ್ತು ಘಾಟ್‌ನ ಸೌಂದರ್ಯೀಕರಣ ಮತ್ತು ದುರ್ಗಾಕುಂಡದ ಪುನರುಜ್ಜೀವನ ಮತ್ತು ನೀರಿನ ಶುದ್ಧೀಕರಣವನ್ನು ಉದ್ಘಾಟಿಸಲಿದ್ದಾರೆ. ಅವರು ಕರ್ದಮೇಶ್ವರ ಮಹಾದೇವ್‌ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಜನ್ಮಸ್ಥಳವಾದ ಕಾರ್ಖಿಯಾನ್‌ ಅಭಿವೃದ್ಧಿ; ಸಾರನಾಥ್‌, ರಿಷಿ ಮಾಂಡ್ವಿ ಮತ್ತು ರಾಮನಗರ್ ವಲಯಗಳಲ್ಲಿ ನಗರ ಸೌಲಭ್ಯ ಕೇಂದ್ರಗಳು; ಲಮಾಹಿಯಲ್ಲಿರುವ ಮುನ್ಷಿ ಪ್ರೇಮ್‌ ಚಂದ್‌ ಅವರ ಪೂರ್ವಜರ ಮನೆಯ ಪುನರಾಭಿವೃದ್ಧಿ ಮತ್ತು ವಸ್ತುಸಂಗ್ರಹಾಲಯವನ್ನು ಮೇಲ್ದರ್ಜೆಗೇರಿಸುವುದು ಮುಂತಾದವು ಸೇರಿವೆ. ಕಾಂಚನಪುರದಲ್ಲಿ ನಗರ ಮಿಯಾವಾಕಿ ಅರಣ್ಯದ ಅಭಿವೃದ್ಧಿ ಮತ್ತು ಶಹೀದ್‌ ಉದ್ಯಾನ್‌ ಮತ್ತು ಇತರ 21 ಉದ್ಯಾನಗಳ ಪುನರಾಭಿವೃದ್ಧಿ ಮತ್ತು ಸೌಂದರ್ಯೀಕರಣಕ್ಕೂ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಇದಲ್ಲದೆ, ಸಾಂಸ್ಕೃತಿಕವಾಗಿ ಮಹತ್ವದ ಜಲಮೂಲಗಳನ್ನು ಸಂರಕ್ಷಿಸಲು, ರಾಮಕುಂಡ್‌, ಮಂದಾಕಿನಿ, ಶಂಕುಲ್ಧಾರಾ ಮತ್ತು ಇತರ ಕುಂಡಗಳಲ್ಲಿ ನೀರು ಶುದ್ಧೀಕರಣ ಮತ್ತು ನಿರ್ವಹಣಾ ಕಾರ್ಯಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ನಾಲ್ಕು ತೇಲುವ ಪೂಜಾ ವೇದಿಕೆಗಳನ್ನು ಸ್ಥಾಪಿಸಲಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಪ್ರಧಾನಮಂತ್ರಿ ಅವರು ಜಲ ಜೀವನ್‌ ಮಿಷನ್‌ ಅಡಿಯಲ್ಲಿ 47 ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ಎಲ್ಲರಿಗೂ ಗುಣಮಟ್ಟದ ಶಿಕ್ಷಣದ ತಮ್ಮ ದೃಷ್ಟಿಕೋನವನ್ನು ಮುಂದುವರಿಸುತ್ತಾ, ಪ್ರಧಾನಮಂತ್ರಿ ಅವರು ಪುರಸಭೆಯ ಗಡಿಯೊಳಗೆ 53 ಶಾಲಾ ಕಟ್ಟಡಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯವನ್ನು ಉದ್ಘಾಟಿಸಲಿದ್ದಾರೆ. ಹೊಸ ಜಿಲ್ಲಾ ಗ್ರಂಥಾಲಯ ನಿರ್ಮಾಣ ಮತ್ತು ಲಾಲ್ಪುರದ ಜಖಿನಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಗಳ ಪುನರುಜ್ಜೀವನ ಸೇರಿದಂತೆ ಹಲವಾರು ಶೈಕ್ಷಣಿಕ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಆರೋಗ್ಯ ಮೂಲಸೌಕರ್ಯಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರು ಮಹಾಮನ ಪಂಡಿತ್‌ ಮದನ್‌ ಮೋಹನ್‌ ಮಾಳವೀಯ ಕ್ಯಾನ್ಸರ್‌ ಕೇಂದ್ರ ಮತ್ತು ಹೋಮಿ ಭಾಭಾ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ರೊಬೊಟಿಕ್‌ ಶಸ್ತ್ರ ಚಿಕಿತ್ಸೆ ಮತ್ತು ಸೀ.ಟಿ. ಸ್ಕ್ಯಾ‌ನ್‌ ಸೌಲಭ್ಯಗಳು ಸೇರಿದಂತೆ ಸುಧಾರಿತ ವೈದ್ಯಕೀಯ ಉಪಕರಣಗಳ ಸ್ಥಾಪನೆಯನ್ನು ಉದ್ಘಾಟಿಸಲಿದ್ದಾರೆ. ಅವರು ಹೋಮಿಯೋಪತಿ ಕಾಲೇಜು ಮತ್ತು ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದಲ್ಲದೆ, ಅವರು ಪ್ರಾಣಿ ಜನನ ನಿಯಂತ್ರಣ ಕೇಂದ್ರ ಮತ್ತು ಸಂಬಂಧಿತ ಶ್ವಾನ ಆರೈಕೆ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.

ವಾರಣಾಸಿಯಲ್ಲಿ ವಿಶ್ವದರ್ಜೆಯ ಕ್ರೀಡಾ ಮೂಲಸೌಕರ್ಯಕ್ಕಾಗಿ ತಮ್ಮ ದೃಷ್ಟಿಕೋನವನ್ನು ಮುಂದುವರಿಸಿದ ಪ್ರಧಾನಮಂತ್ರಿ ಅವರು, ಡಾ. ಭೀಮರಾವ್‌ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಹಾಕಿ ಟರ್ಫ್‌ಅನ್ನು ಉದ್ಘಾಟಿಸಲಿದ್ದಾರೆ. ಕಾನೂನು ಜಾರಿ ಸಿಬ್ಬಂದಿಗೆ ಸೌಲಭ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರು ರಾಮನಗರದ ಪ್ರದೇಶ ಸಶಸ್ತ್ರ ಪೊಲೀಸ್‌ ಪಡೆ (ಪಿ.ಎ.ಸಿ)ಯಲ್ಲಿ 300 ಸಾಮರ್ಥ್ಯ‌ದ ವಿವಿಧೋದ್ದೇಶ ಸಭಾಂಗಣವನ್ನು ಉದ್ಘಾಟಿಸಲಿದ್ದಾರೆ ಮತ್ತು ತ್ವರಿತ ಪ್ರತಿಕ್ರಿಯೆ ತಂಡ (ಕ್ಯೂ.ಆರ್‌.ಟಿ) ಬ್ಯಾರಕ್‌ಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ರೈತರ ಕಲ್ಯಾಣದ ಮಹತ್ವದ ಹೆಜ್ಜೆಯಾಗಿ, ಪ್ರಧಾನಮಂತ್ರಿ ಅವರು ಪಿ.ಎಂ.-ಕಿಸಾನ್‌ನ 20ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ದೇಶಾದ್ಯಂತ 9.7 ಕೋಟಿ ರೈತರ ಬ್ಯಾಂಕ್‌ ಖಾತೆಗಳಿಗೆ 20,500 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ನೇರವಾಗಿ ವರ್ಗಾಯಿಸಲಾಗುವುದು. ಈ ಬಿಡುಗಡೆಯೊಂದಿಗೆ, ಯೋಜನೆಯ ಪ್ರಾರಂಭದಿಂದಲೂ ಒಟ್ಟು ವಿತರಣೆಯು 3.90 ಲಕ್ಷ  ಕೋಟಿ ರೂ.ಗಳನ್ನು ಮೀರುತ್ತದೆ.

ಸ್ಕೆಚಿಂಗ್‌ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಛಾಯಾಗ್ರಹಣ ಸ್ಪರ್ಧೆ, ಖೇಲ್‌-ಕೂದ್ ಪ್ರತಿಯೋಗಿತ, ಜ್ಞಾನ ಪ್ರತಿಯೋಗಿತ ಮತ್ತು ರೋಜ್ಗಾರ್‌ ಮೇಳ ಸೇರಿದಂತೆ ಕಾಶಿ ಸಂಸದ್‌ ಪ್ರತಿಯೋಗಿತಾ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳಿಗೆ ನೋಂದಣಿ ಪೋರ್ಟಲ್‌ ಅನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ. ಪ್ರಧಾನಮಂತ್ರಿ ಅವರು ವಿವಿಧ ದಿವ್ಯಾಂಗರು ಮತ್ತು ಹಿರಿಯ ಫಲಾನುಭವಿಗಳಿಗೆ 7,400 ಕ್ಕೂ ಹೆಚ್ಚು ಸಹಾಯಕ ಸಾಧನಗಳನ್ನು ವಿತರಿಸಲಿದ್ದಾರೆ.

 

*****
 


(Release ID: 2151191)