ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಭಾರತವು ತೈಲ ಮತ್ತು ಅನಿಲ ಪರಿಶೋಧನೆಯಲ್ಲಿ ತ್ವರಿತ ಪ್ರಗತಿ ಸಾಧಿಸಿದೆ: ಪೆಟ್ರೋಲಿಯಂ ಸಚಿವರಾದ ಹರ್‌ದೀಪ್ ಎಸ್ ಪುರಿ
2015 ರಿಂದ 172 ಹೈಡ್ರೋಕಾರ್ಬನ್ ನಿಕ್ಷೇಪ ಶೋಧನೆಗಳು ವರದಿಯಾಗಿವೆ, ಇದರಲ್ಲಿ 62 ಕಡಲು ಪ್ರದೇಶದಲ್ಲಿವೆ
ಭಾರತದ ಇಂಧನ ಪರಿಶೋಧನೆಯಲ್ಲಿ ಅಂಡಮಾನ್ ಜಲಾನಯನ ಪ್ರದೇಶವು ಪ್ರಮುಖ ನಿಕ್ಷೇಪ ರೇಖೆಯಾಗಿ ಹೊರಹೊಮ್ಮಿದೆ
Posted On:
29 JUL 2025 3:49PM by PIB Bengaluru
ಭಾರತವು ತೈಲ ಮತ್ತು ಅನಿಲ ನಿಕ್ಷೇಪ ಪರಿಶೋಧನೆಯಲ್ಲಿ, ವಿಶೇಷವಾಗಿ ಕಡಲು ಪ್ರದೇಶಗಳಲ್ಲಿ, ಹೊಸ ಪ್ರಗತಿಯನ್ನು ಕಾಣುತ್ತಿದೆ, ಇದು ದೇಶದ ವಿಶಾಲವಾದ ಹೈಡ್ರೋಕಾರ್ಬನ್ ಸಾಮರ್ಥ್ಯವನ್ನು ಒತ್ತಿಹೇಳುತ್ತದೆ. ರಾಜ್ಯಸಭೆಯಲ್ಲಿ ನಕ್ಷತ್ರ ಗುರುತಿನ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್‌ದೀಪ್ ಸಿಂಗ್ ಪುರಿ, 2022 ರಲ್ಲಿ ಸುಮಾರು ಒಂದು ಮಿಲಿಯನ್ ಚದರ ಕಿಲೋಮೀಟರ್ನಷ್ಟು ಕಡಲಿನೊಳಗಿನ 'ನೋ-ಗೋ' ಪ್ರದೇಶಗಳನ್ನು ತೆರೆದಿರುವುದು ಒಂದು ಹೆಗ್ಗುರುತು ಅಭಿವೃದ್ಧಿಯಾಗಿದೆ ಎಂದು ಹೇಳಿದ್ದಾರೆ. ಈ ಕ್ರಮವು ಗಮನಾರ್ಹವಾದ ಪರಿಶೋಧನಾ ರೇಖೆಗಳನ್ನು ಅನಾವರಣ (ಅನ್ಲಾಕ್) ಮಾಡಿದೆ, ವಿಶೇಷವಾಗಿ ಅಂಡಮಾನ್-ನಿಕೋಬಾರ್ (ಎ.ಎನ್.) ಕಡಲ ದಂಡೆಯಾಚೆಯ ಜಲಾನಯನ ಪ್ರದೇಶದಂತಹ ಆಳವಾದ ನೀರು ಮತ್ತು ಗಡಿ ಪ್ರದೇಶಗಳಲ್ಲಿ, ಮತ್ತು ಕಡಲಾಚೆಯ ಕಾರ್ಯ ಚಟುವಟಿಕೆಗಳಲ್ಲಿ ಪ್ರಸ್ತುತ ತ್ವರಿತಗತಿಯನ್ನು ಪ್ರಚೋದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
2015 ರಿಂದ, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶೋಧನೆ ಮತ್ತು ಉತ್ಪಾದನೆ (ಇ & ಪಿ) ಕಂಪನಿಗಳು 172 ಹೈಡ್ರೋಕಾರ್ಬನ್ ಆವಿಷ್ಕಾರಗಳನ್ನು ವರದಿ ಮಾಡಿವೆ, ಅವುಗಳಲ್ಲಿ 62 ಕಡಲಾಚೆಯ ಪ್ರದೇಶಗಳಲ್ಲಿ ಸೇರಿವೆ. ಬಂಗಾಳ-ಅರಕನ್ ಸೆಡಿಮೆಂಟರಿ ವ್ಯವಸ್ಥೆಯೊಳಗೆ ಅಂಡಮಾನ್ ಮತ್ತು ನಿಕೋಬಾರ್ ಜಲಾನಯನ ಪ್ರದೇಶಗಳ ಸಂಧಿಸುವಿಕೆಯಲ್ಲಿರುವ (ಜಂಕ್ಷನ್) ಎಎನ್ ಜಲಾನಯನ ಪ್ರದೇಶದ ಭೌಗೋಳಿಕ ಮಹತ್ವವನ್ನು ಸಚಿವರು ಎತ್ತಿ ತೋರಿಸಿದರು. ಭಾರತೀಯ ಮತ್ತು ಬರ್ಮೀಸ್ ಶಿಲಾ ಪದರಗಳ ಗಡಿಯಲ್ಲಿರುವ ಟೆಕ್ಟೋನಿಕ್ ಸೆಟ್ಟಿಂಗ್, ಹೈಡ್ರೋಕಾರ್ಬನ್ ಸಂಗ್ರಹಣೆಗೆ ಅನುಕೂಲಕರವಾದ ಹಲವಾರು ಸ್ಟ್ರಾಟಿಗ್ರಾಫಿಕ್ ವ್ಯವಸ್ಥೆಗಳ ರಚನೆಗೆ ಕಾರಣವಾಗಿದೆ. ಮ್ಯಾನ್ಮಾರ್ ಮತ್ತು ಉತ್ತರ ಸುಮಾತ್ರಾದಲ್ಲಿ ಈಗಾಗಲೇ ಸಾಬೀತಾಗಿರುವ ಪೆಟ್ರೋಲಿಯಂ ವ್ಯವಸ್ಥೆಗಳಿಗೆ ಜಲಾನಯನ ಪ್ರದೇಶದ ಸಾಮೀಪ್ಯದಿಂದಾಗಿ ಈ ಭೌಗೋಳಿಕ ಭರವಸೆ ಮತ್ತಷ್ಟು ವರ್ಧಿತವಾಗಿದೆ. ದಕ್ಷಿಣ ಅಂಡಮಾನ್ ಕಡಲಾಚೆಯ ಇಂಡೋನೇಷ್ಯಾದಲ್ಲಿ ಗಮನಾರ್ಹ ಅನಿಲ ಆವಿಷ್ಕಾರಗಳ ನಂತರ ಈ ಪ್ರದೇಶವು ನವೀಕರಿಸಿದ ಜಾಗತಿಕ ಆಸಕ್ತಿಯನ್ನು ಆಕರ್ಷಿಸಿದೆ, ಇದು ಪ್ರದೇಶದಾದ್ಯಂತ ಭೌಗೋಳಿಕ ನಿರಂತರತೆಯನ್ನು ಒತ್ತಿಹೇಳುತ್ತದೆ.
ಅನುಕೂಲಕರ ಭೂವಿಜ್ಞಾನವು ಬಲವಾದ ಅಡಿಪಾಯವನ್ನು ಹಾಕುತ್ತಿದ್ದರೂ, ಸರ್ಕಾರದ ಕಾರ್ಯತಂತ್ರದ ನೀತಿ ಮಧ್ಯಸ್ಥಿಕೆಗಳು ಮತ್ತು ಹೊಸ ಪರಿಶೋಧನಾ ವಿಧಾನದಿಂದ ನೈಜ ಪ್ರಗತಿ ಬಂದಿದೆ ಎಂದು ಶ್ರೀ ಪುರಿ ಒತ್ತಿ ಹೇಳಿದರು. ಪರಿಷ್ಕೃತ ಕಾರ್ಯತಂತ್ರವು ಭೂಕಂಪನ ದತ್ತಾಂಶದ ಸಂಗ್ರಹಣೆ್, ಸ್ಟ್ರಾಟಿಗ್ರಾಫಿಕ್ ಮತ್ತು ಪರಿಶೋಧನಾ ಕೊರೆಯುವಿಕೆಯನ್ನು ಪ್ರಾರಂಭಿಸಲು ಮತ್ತು ಅಂತಾರಾಷ್ಟ್ರೀಯ ಪರಿಶೋಧನಾ ಪಾಲುದಾರರೊಂದಿಗೆ ಹೆಚ್ಚಿನ ತೊಡಗಿಸಿಕೊಳ್ಳುವಿಕೆಯನ್ನು ಸಕ್ರಿಯಗೊಳಿಸಿದೆ, ಅವರಲ್ಲಿ ಹಲವರು ಹೊಸದಾಗಿ ಪ್ರವೇಶಿಸಬಹುದಾದ ಗಡಿರೇಖಾ ಬ್ಲಾಕ್‌ಗಳಲ್ಲಿ ತೀವ್ರ ಆಸಕ್ತಿಯನ್ನು ತೋರಿಸಿದ್ದಾರೆ.
ರಾಷ್ಟ್ರೀಯ ತೈಲ ಕಂಪನಿಗಳು ಎ.ಎನ್. (ಅಂಡಮಾನ್-ನಿಕೋಬಾರ್) ಜಲಾನಯನ ಪ್ರದೇಶದಲ್ಲಿ ಒಂದು ಸೇರಿದಂತೆ ನಾಲ್ಕು ಕಡಲಾಚೆಯ ಸ್ಟ್ರಾಟಿಗ್ರಾಫಿಕ್ ಬಾವಿಗಳನ್ನು ಕೊರೆಯಲು ಯೋಜಿಸಿವೆ. ಈ ವೈಜ್ಞಾನಿಕ ಬಾವಿಗಳನ್ನು ಭೌಗೋಳಿಕ ಮಾದರಿಗಳನ್ನು ಪರೀಕ್ಷಿಸಲು, ಪೆಟ್ರೋಲಿಯಂ ವ್ಯವಸ್ಥೆಗಳ ಅಸ್ತಿತ್ವವನ್ನು ಮೌಲ್ಯೀಕರಿಸಲು ಮತ್ತು ಭವಿಷ್ಯದ ವಾಣಿಜ್ಯ ಪರಿಶೋಧನೆಯನ್ನು ಅಪಾಯದಿಂದ ಮುಕ್ತಗೊಳಿಸಲು ಸಹಾಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ವಾಣಿಜ್ಯ ಸಂಗ್ರಹಣೆಯನ್ನು ಇನ್ನೂ ದೃಢೀಕರಿಸಲಾಗಿಲ್ಲವಾದರೂ, ಈ ಪ್ರಯತ್ನಗಳು ವ್ಯವಸ್ಥಿತ ಮತ್ತು ಜ್ಞಾನ-ಚಾಲಿತ ಹೈಡ್ರೋಕಾರ್ಬನ್ ಪರಿಶೋಧನೆಯಲ್ಲಿ ಒಂದು ಪ್ರಮುಖ ಹೆಜ್ಜೆಯನ್ನು ಸೂಚಿಸುತ್ತವೆ.
ಮಹತ್ವದ ಬೆಳವಣಿಗೆಯಲ್ಲಿ, ಒ.ಎನ್.ಜಿ.ಸಿ ಮತ್ತು ಆಯಿಲ್ ಇಂಡಿಯಾ ಲಿಮಿಟೆಡ್ (ಒ.ಐ.ಎಲ್.)ಗಳು ಅಂಡಮಾನ್ ನ ಭಾರೀ ಆಳದ ನೀರಿನ (ಅಲ್ಟ್ರಾ-ಡೀಪ್ ವಾಟರ್) ಪ್ರದೇಶದಲ್ಲಿ ಮಹತ್ವಾಕಾಂಕ್ಷೆಯ ಪರಿಶೋಧನಾ ಅಭಿಯಾನವನ್ನು ಪ್ರಾರಂಭಿಸಿವೆ. ಮೊದಲ ಬಾರಿಗೆ, ಕೊರೆಯುವ ಕಾರ್ಯಾಚರಣೆಗಳು 5000 ಮೀಟರ್‌ಗಳವರೆಗಿನ ಆಳವನ್ನು ಗುರಿಯಾಗಿರಿಸಿಕೊಂಡಿವೆ. ಪೂರ್ವ ಅಂಡಮಾನ್ ಬ್ಯಾಕ್ ಆರ್ಕ್ ಪ್ರದೇಶದಲ್ಲಿ ಕಾರ್ಬೊನೇಟ್ ಬಂಡೆಗಳಲ್ಲಿ ಅಡಗಿರುವ ತೈಲ ಮತ್ತು ಅನಿಲ ಪತ್ತೆಗಾಗಿ ಕೊರೆಯಲಾದ ಅಂತಹ ಒಂದು ಶೋಧನಾ ಬಾವಿ (ಈ ಹಿಂದೆ ತೈಲ ನಿಕ್ಷೇಪ ಇರುವ ಬಗ್ಗೆ ಮಾಹಿತಿ ಇರದ ಪ್ರದೆಷಗಳಲ್ಲಿ ಕೊರೆಯುವ ಶೋಧನಾ ಬಾವಿ-ವೈಲ್ಡ್‌ಕ್ಯಾಟ್ ಬಾವಿ, ಎ.ಎನ್.ಡಿ.ಡಬ್ಲ್ಯು. 7 (ANDW-7), ಉತ್ತೇಜಕ ಭೂವೈಜ್ಞಾನಿಕ ಒಳನೋಟಗಳನ್ನು ನೀಡಿದೆ. ಇವುಗಳಲ್ಲಿ ಕತ್ತರಿಸಿದ ಮಾದರಿಗಳಲ್ಲಿ ಸ್ವಲ್ಪ ಪ್ರಮಾಣದ ಕಚ್ಚಾ ತೈಲ ಮತ್ತು ಸಾಂದ್ರತೆಯ ಕುರುಹುಗಳು, ತೈಲ ನಿಕ್ಷೇಪ ಶೋಧಕ್ಕಾಗಿ ಬಾವಿ ಕೊರೆಯುವ ಸಂದರ್ಭದಲ್ಲಿ ಅದರೊಳಗೆ ರವಾನಿಸಲ್ಪಡುವ ಅನಿಲಗಳಲ್ಲಿ (ಟ್ರಿಪ್ ಗ್ಯಾಸ್) ಸಿ-5 ನಿಯೋ-ಪೆಂಟೇನ್‌ನಂತಹ ಭಾರವಾದ ಹೈಡ್ರೋಕಾರ್ಬನ್‌ಗಳು ಮತ್ತು ಅನಿಲ ಹಾಗು ತೈಲ ದಾಸ್ತಾನು ಇರುವ ಹಾಗು ಅದನ್ನು ಹೊರಸೂಸುವ ಸಾಮರ್ಥ್ಯದ ಬಂಡೆಗಳು ಇರುವುದೂ ಪತ್ತೆಯಾಗಿದೆ. ಈ ಸಂಶೋಧನೆಗಳು ಮೊದಲ ಬಾರಿಗೆ, ಮ್ಯಾನ್ಮಾರ್ ಮತ್ತು ಉತ್ತರ ಸುಮಾತ್ರಾದಲ್ಲಿರುವುದಕ್ಕೆ ಹೋಲಿಸಬಹುದಾದ - ಸಾವಯವ ವಸ್ತುಗಳು ಆಳದಲ್ಲಿ ಅತ್ಯಂತ ಒತ್ತಡ ಮತ್ತು ಅತಿ ಹೆಚ್ಚು ಉಷ್ಣಾಂಶದಲ್ಲಿ ವಿಭಜನೆಗೊಂಡು ಉಂಟಾಗುವ ಸಕ್ರಿಯ (ಥರ್ಮೋಜೆನಿಕ್) ಪೆಟ್ರೋಲಿಯಂ ವ್ಯವಸ್ಥೆಯ ಅಸ್ತಿತ್ವವನ್ನು ತೋರಿಸಿಕೊಟ್ಟಿವೆ. ವಾಣಿಜ್ಯ ನಿಕ್ಷೇಪಗಳು ಇನ್ನಷ್ಟೇ ಪತ್ತೆಯಾಗಬೇಕಾಗಿದ್ದರೂ, ಈ ಅಭಿಯಾನವು ಪೆಟ್ರೋಲಿಯಂ ವ್ಯವಸ್ಥೆಯೊಂದು ಇರುವ ಸಾಧ್ಯತೆಯನ್ನು ಮೌಲ್ಯೀಕರಿಸಿದೆ ಮತ್ತು ಈ ಪ್ರದೇಶದಲ್ಲಿ ಗಮನ ಕೇಂದ್ರೀಕೃತ ಪರಿಶೋಧನೆಗೆ ಅಡಿಪಾಯ ಹಾಕಿದೆ.
ಇಲ್ಲಿಯವರೆಗಿನ ಪರಿಶೋಧನಾ ಫಲಿತಾಂಶಗಳ ಅವಲೋಕನವನ್ನು ಒದಗಿಸಿದ ಸಚಿವರು, ಒ.ಎನ್.ಜಿ.ಸಿ. 20 ಬ್ಲಾಕ್‌ಗಳಲ್ಲಿ ಹೈಡ್ರೋಕಾರ್ಬನ್ ಆವಿಷ್ಕಾರಗಳನ್ನು ಮಾಡಿದೆ, ಇದು ಅಂದಾಜು 75 ಮಿಲಿಯನ್ ಮೆಟ್ರಿಕ್ ಟನ್ ತೈಲಕ್ಕೆ ಸಮಾನ (MMTOE) ಮೀಸಲು ಹೊಂದಿದೆ ಎಂದೂ ಮಾಹಿತಿ ನೀಡಿದರು. ಕಳೆದ ನಾಲ್ಕು ವರ್ಷಗಳಲ್ಲಿ ಒ.ಐ.ಎಲ್ (OIL) ಏಳು ತೈಲ ಮತ್ತು ಅನಿಲ ಆವಿಷ್ಕಾರಗಳನ್ನು ಮಾಡಿದೆ, ಇದರಲ್ಲಿ 9.8 ಮಿಲಿಯನ್ ಬ್ಯಾರೆಲ್ ತೈಲ ಮತ್ತು 2,706.3 ಮಿಲಿಯನ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ ಅನಿಲ ನಿಕ್ಷೇಪಗಳಿವೆ ಎಂದು ಅಂದಾಜಿಸಲಾಗಿದೆ.
ಎ.ಎನ್. ಬೇಸಿನ್‌ನ ಹೈಡ್ರೋಕಾರ್ಬನ್ ಸಾಮರ್ಥ್ಯವನ್ನು 371 ಎಂ.ಎಂ.ಟಿ.ಒ.ಇ. (MMTOE) ಎಂದು ಅಂದಾಜಿಸಿದ 2017ರ ಹೈಡ್ರೋಕಾರ್ಬನ್ ಸಂಪನ್ಮೂಲ ಮೌಲ್ಯಮಾಪನ ಅಧ್ಯಯನ (HRAS) ವನ್ನು ಉಲ್ಲೇಖಿಸಿದ ಅವರು, ಎ.ಎನ್. ಕಡಲು ಪ್ರದೇಶ ಸೇರಿದಂತೆ ಭಾರತದ ವಿಶೇಷ/ಪ್ರತ್ಯೇಕ ಆರ್ಥಿಕ ವಲಯದ ಸುಮಾರು 80,000 ಲೈನ್ ಕಿಲೋಮೀಟರ್‌ಗಳನ್ನು (LKM) ಒಳಗೊಂಡ 2ಡಿ ಬ್ರಾಡ್‌ಬ್ಯಾಂಡ್ ಭೂಕಂಪನ ಸಮೀಕ್ಷೆಯನ್ನು 2024 ರಲ್ಲಿ ಪೂರ್ಣಗೊಳಿಸಲಾಗಿದೆ ಎಂದೂ ಸಚಿವರು ತಿಳಿಸಿದರು. ಹೆಚ್ಚುವರಿಯಾಗಿ, 2021–22 ರಲ್ಲಿ ನಡೆಸಿದ ಡೀಪ್ ಅಂಡಮಾನ್ ಆಳ ಸಮುದ್ರ ಸಮೀಕ್ಷೆಯ ಸಮಯದಲ್ಲಿ ಒ.ಐ.ಎಲ್. (OIL) 22,555 ಲೈನ್ ಕಿಲೋ ಮೀಟರ್ (LKM ) 2ಡಿ ಭೂಕಂಪನ ಡೇಟಾವನ್ನು ಪಡೆದುಕೊಂಡಿದೆ. ಈ ಡೇಟಾದಿಂದ ಹಲವಾರು ಭರವಸೆಯ ಭೌಗೋಳಿಕ ವೈಶಿಷ್ಟ್ಯಗಳು ಅರಿವಿಗೆ ಬಂದಿವೆ, ಇವುಗಳನ್ನು ಈಗ ಒ.ಎನ್.ಜಿ.ಸಿ ಮತ್ತು ಒ.ಐ.ಎಲ್. ನಿಂದ ನಡೆಯುತ್ತಿರುವ ಕೊರೆಯುವ ಅಭಿಯಾನಗಳ ಮೂಲಕ ಮೌಲ್ಯೀಕರಿಸಲಾಗುತ್ತಿದೆ.
2014 ರಿಂದ ಅಳವಡಿಸಿಕೊಳ್ಳಲಾದ ಪ್ರಗತಿಪರ ನೀತಿ ಸುಧಾರಣೆಗಳ ಸರಣಿಯ ಪರಿಣಾಮವೇ ಕಡಲೊಳಗಿನ ಮತ್ತು ಗಡಿನಾಡಿನ ಪರಿಶೋಧನೆಯಲ್ಲಿ ಪ್ರಸ್ತುತ ಲಭಿಸಿರುವ ವೇಗದ ಗತಿ ಎಂದು ಶ್ರೀ ಪುರಿ ಒತ್ತಿ ಹೇಳಿದರು. ಇವುಗಳಲ್ಲಿ 2015 ರಲ್ಲಿ ಉತ್ಪಾದನಾ ಹಂಚಿಕೆ ಒಪ್ಪಂದ (ಪಿ.ಎಸ್.ಸಿ.-PSC) ಆಡಳಿತದಿಂದ ಆದಾಯ ಹಂಚಿಕೆ ಒಪ್ಪಂದ (ಆರ್.ಎಸ್.ಸಿ.-RSC) ಮಾದರಿಗೆ ಪರಿವರ್ತನೆ, 2016 ರಲ್ಲಿ ಹೈಡ್ರೋಕಾರ್ಬನ್ ಪರಿಶೋಧನೆ ಮತ್ತು ಪರವಾನಗಿ ನೀತಿ ಹೆಲ್ಪ್-(HELP) ಮತ್ತು ಮುಕ್ತ ಎಕರೆಜ್ ಪರವಾನಗಿ ಕಾರ್ಯಕ್ರಮ (ಒ.ಎ.ಎಲ್.ಪಿ-OALP) ಪ್ರಾರಂಭ, 2017–18 ರಲ್ಲಿ ರಾಷ್ಟ್ರೀಯ ದತ್ತಾಂಶ ಸಂಗ್ರಹದ ಸ್ಥಾಪನೆ ಮತ್ತು 2022 ರಲ್ಲಿ ಕಚ್ಚಾ ತೈಲ ಮಾರುಕಟ್ಟೆಯನ್ನು ನಿಯಂತ್ರಣ ಮುಕ್ತಗೊಳಿಸಿರುವ ಕ್ರಮಗಳು ಇದರಲ್ಲಿ ಅಡಕವಾಗಿವೆ. ಮತ್ತು ಈ ಕ್ರಮಗಳು ಒಟ್ಟಾಗಿ, ಗಡಿನಾಡಿನ ಪರಿಶೋಧನೆ, ಸ್ಟ್ರಾಟಿಗ್ರಾಫಿಕ್ ಕೊರೆಯುವಿಕೆ ಹಾಗು ದತ್ತಾಂಶ ಸ್ವಾಧೀನಕ್ಕಾಗಿ ಗುರಿ ಕೇಂದ್ರಿತ ಪ್ರೋತ್ಸಾಹಗಳಿಂದ ಬೆಂಬಲಿತವಾದ ಉದಾರ, ಹೂಡಿಕೆದಾರ ಸ್ನೇಹಿ ಪರಿಶೋಧನಾ ವಾತಾವರಣವನ್ನು ಬೆಳೆಸಿವೆ.
ಈ ಸುಧಾರಣೆಗಳು ಅಂಡಮಾನ್-ನಿಕೋಬಾರ್ ಕಡಲು ಪ್ರದೇಶ ಮತ್ತು ಇತರ ಆಳ ಸಮುದ್ರ ಪ್ರದೇಶಗಳಲ್ಲಿ ಈಗ ನಡೆಯುತ್ತಿರುವ ದಿಟ್ಟ, ಅಪಾಯ-ಮಾಹಿತಿಯುಕ್ತ ಮತ್ತು ವೈಜ್ಞಾನಿಕ ಪರಿಶೋಧನೆಗೆ ಅನುವು ಮಾಡಿಕೊಟ್ಟಿವೆ, ಇದು ಭಾರತದ ಇಂಧನ ಭದ್ರತೆ ಮತ್ತು ಸ್ವಾವಲಂಬನೆಯನ್ನು ಗಮನಾರ್ಹವಾಗಿ ಹೆಚ್ಚಿಸುವ ಸಾಮರ್ಥ್ಯವನ್ನು ನೀಡುತ್ತದೆ.
*****
(Release ID: 2149968)
Read this release in:
Urdu
,
English
,
Hindi
,
Nepali
,
Manipuri
,
Bengali-TR
,
Assamese
,
Punjabi
,
Gujarati
,
Tamil
,
Malayalam