ಪ್ರಧಾನ ಮಂತ್ರಿಯವರ ಕಛೇರಿ
ಮಾಲ್ಡೀವ್ಸ್ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ
Posted On:
25 JUL 2025 8:48PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಾಲೆಯಲ್ಲಿರುವ ಅಧ್ಯಕ್ಷರ ಕಚೇರಿಯಲ್ಲಿ ಮಾಲ್ಡೀವ್ಸ್ ಗಣರಾಜ್ಯದ ಘನತೆವೆತ್ತ ಅಧ್ಯಕ್ಷರಾದ ಡಾ. ಮೊಹಮ್ಮದ್ ಮುಯಿಝು ಅವರನ್ನು ಭೇಟಿಯಾದರು. ಸಭೆಗೂ ಮುನ್ನ, ಅಧ್ಯಕ್ಷ ಮುಯಿಝು ಅವರು ಪ್ರಧಾನ ಮಂತ್ರಿಯವರನ್ನು ಬರಮಾಡಿಕೊಂಡು ಗಣರಾಜ್ಯ ಚೌಕದಲ್ಲಿ ಅವರಿಗೆ ಔಪಚಾರಿಕ ಸ್ವಾಗತ ನೀಡಿದರು. ಸಭೆಯು ಆತ್ಮೀಯವಾಗಿತ್ತು ಮತ್ತು ಎರಡೂ ದೇಶಗಳ ನಡುವಿನ ಆಳವಾದ ಸ್ನೇಹವನ್ನು ದೃಢೀಕರಿಸಿತು.
ತಮಗೆ ಮತ್ತು ತಮ್ಮ ನಿಯೋಗಕ್ಕೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ಪ್ರಧಾನಿಯವರು ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಮತ್ತು ಮಾಲ್ಡೀವ್ಸ್ ನ 60ನೇ ಸ್ವಾತಂತ್ರ್ಯೋತ್ಸವದ ಐತಿಹಾಸಿಕ ಸಂದರ್ಭದಲ್ಲಿ ಮತ್ತು ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 60ನೇ ವಾರ್ಷಿಕೋತ್ಸವದ ವಿಶೇಷ ಸಂದರ್ಭದಲ್ಲಿ ಶುಭಾಶಯಗಳನ್ನು ತಿಳಿಸಿದರು.
ಶತಮಾನಗಳಿಂದ ನಿರ್ಮಿಸಲಾದ ಮತ್ತು ಜನರು-ಜನರ ನಡುವಿನ ಶಕ್ತಿಯುತವಾದ ಸಂಬಂಧಗಳಿಂದ ಬಲಗೊಂಡಿರುವ ಸ್ನೇಹ ಮತ್ತು ವಿಶ್ವಾಸದ ಆಳವಾದ ಬಂಧಗಳನ್ನು ಇಬ್ಬರೂ ನಾಯಕರು ಪ್ರತಿಬಿಂಬಿಸಿದರು. ಅಕ್ಟೋಬರ್ 2024 ರಲ್ಲಿ ಮಾಲ್ಡೀವ್ಸ್ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಳವಡಿಸಿಕೊಂಡ 'ಸಮಗ್ರ ಆರ್ಥಿಕ ಮತ್ತು ಕಡಲ ಭದ್ರತಾ ಪಾಲುದಾರಿಕೆ'ಗಾಗಿ ಭಾರತ-ಮಾಲ್ಡೀವ್ಸ್ ಜಂಟಿ ದೃಷ್ಟಿಕೋನದ ಅನುಷ್ಠಾನದಲ್ಲಿ ಆಗಿರುವ ಪ್ರಗತಿಯನ್ನು ಇಬ್ಬರೂ ನಾಯಕರು ಪರಿಶೀಲಿಸಿದರು. "ನೆರೆಹೊರೆಯವರು ಮೊದಲು" ಮತ್ತು "ಮಹಾಸಾಗರ ದೃಷ್ಟಿಕೋನ" ನೀತಿಗಳಿಗೆ ಅನುಗುಣವಾಗಿ ಮಾಲ್ಡೀವ್ಸ್ ಜೊತೆಗಿನ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಭಾರತದ ಬದ್ಧತೆಯನ್ನು ಪ್ರಧಾನಿಯವರು ಪುನರುಚ್ಚರಿಸಿದರು. ಮಾಲ್ಡೀವ್ಸ್ ಯಾವುದೇ ಬಿಕ್ಕಟ್ಟುಗಳನ್ನು ಎದುರಿಸುವಾಗ ಅದಕ್ಕೆ ಮೊದಲ ಪ್ರತಿಸ್ಪಂದಕನಾಗಿರುವ ಭಾರತದ ಬದ್ಧತೆಯನ್ನು ಅಧ್ಯಕ್ಷ ಮುಯಿಝು ಶ್ಲಾಘಿಸಿದರು. ಅಭಿವೃದ್ಧಿ ಪಾಲುದಾರಿಕೆ, ಮೂಲಸೌಕರ್ಯ ಬೆಂಬಲ, ಸಾಮರ್ಥ್ಯ ವೃದ್ಧಿ, ಹವಾಮಾನ ಕ್ರಮ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸಹಕಾರದ ಕುರಿತು ಉಭಯ ನಾಯಕರು ಚರ್ಚಿಸಿದರು. ರಕ್ಷಣೆ ಮತ್ತು ಕಡಲ ಭದ್ರತಾ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಅವರು ಕರೆ ನೀಡಿದರು ಮತ್ತು ಈ ನಿಟ್ಟಿನಲ್ಲಿ, ಕೊಲಂಬೊ ಭದ್ರತಾ ಸಮಾವೇಶದ ಅಡಿಯಲ್ಲಿ ಎರಡೂ ದೇಶಗಳ ನಡುವಿನ ಸಹಯೋಗವನ್ನು ಗಮನಿಸಿದರು.
ಉಭಯ ನಾಯಕರು ಎರಡೂ ದೇಶಗಳ ನಡುವಿನ ಆರ್ಥಿಕ ಪಾಲುದಾರಿಕೆಯನ್ನು ಸಹ ಪರಿಶೀಲಿಸಿದರು. ಪ್ರಸ್ತಾವಿತ ಮುಕ್ತ ವ್ಯಾಪಾರ ಒಪ್ಪಂದ ಮತ್ತು ದ್ವಿಪಕ್ಷೀಯ ಹೂಡಿಕೆ ಒಪ್ಪಂದವು ಎರಡೂ ಕಡೆಯವರಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಪ್ರವಾಸೋದ್ಯಮವನ್ನು ಉತ್ತೇಜಿಸಲು ಎರಡೂ ದೇಶಗಳು ಡಿಜಿಟಲ್ ಆರ್ಥಿಕತೆಯನ್ನು ಬಳಸಿಕೊಳ್ಳಬೇಕು ಎಂದು ಹೇಳಿದ ಅವರು, ಯುಪಿಐ ಅಳವಡಿಕೆ, ರುಪೇ ಕಾರ್ಡ್ ಗಳ ಸ್ವೀಕಾರ ಮತ್ತು ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರದ ಕುರಿತ ಇತ್ತೀಚಿನ ಒಪ್ಪಂದಗಳನ್ನು ಸ್ವಾಗತಿಸಿದರು. ಎರಡೂ ದೇಶಗಳ ನಡುವಿನ ನಿಕಟ ಅಭಿವೃದ್ಧಿ ಪಾಲುದಾರಿಕೆಯು ಈಗಾಗಲೇ ಬಲವಾದ ಜನರು- ಜನರ ನಡುವಿನ ಸಂಬಂಧಗಳಿಗೆ ಇನ್ನೂ ಹೆಚ್ಚಿನ ಮೌಲ್ಯವನ್ನು ಸೇರಿಸುತ್ತಿದೆ ಎಂದು ಇಬ್ಬರೂ ನಾಯಕರು ಒತ್ತಿ ಹೇಳಿದರು.
ಜಾಗತಿಕ ದಕ್ಷಿಣದ ಪಾಲುದಾರರಾಗಿ ಹವಾಮಾನ ಬದಲಾವಣೆ, ನವೀಕರಿಸಬಹುದಾದ ಇಂಧನ ಉತ್ತೇಜನ, ವಿಪತ್ತು ಅಪಾಯ ಕಡಿತ ಮತ್ತು ಹವಾಮಾನ ವಿಜ್ಞಾನದಂತಹ ವಿಷಯಗಳ ಮೇಲೆ ಗ್ರಹ ಮತ್ತು ಅದರ ಜನರ ಹಿತದೃಷ್ಟಿಯಿಂದ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಇಬ್ಬರೂ ನಾಯಕರು ಹೇಳಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಕ್ಕಾಗಿ ಮತ್ತು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೀಡಲಾದ ಬೆಂಬಲಕ್ಕೆ ಅಧ್ಯಕ್ಷ ಮುಯಿಝು ಅವರಿಗೆ ಪ್ರಧಾನಮಂತ್ರಿಯವರು ಧನ್ಯವಾದ ತಿಳಿಸಿದರು.
ಮೀನುಗಾರಿಕೆ ಮತ್ತು ಜಲಕೃಷಿ, ಹವಾಮಾನ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಯುಪಿಐ, ಭಾರತೀಯ ಫಾರ್ಮಾ ಮತ್ತು ರಿಯಾಯಿತಿ ಸಾಲ ಸೌಲಭ್ಯ ಕ್ಷೇತ್ರಗಳಲ್ಲಿ ಇಬ್ಬರು ನಾಯಕರ ನಡುವೆ ಆರು ತಿಳುವಳಿಕೆ ಒಪ್ಪಂದಗಳನ್ನು (ಎಂಒಯು) ವಿನಿಮಯ ಮಾಡಿಕೊಳ್ಳಲಾಯಿತು. ಹೊಸ ಲೈನ್ ಆಫ್ ಕ್ರೆಡಿಟ್ ಮಾಲ್ಡೀವ್ಸ್‌ನಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಇತರ ಚಟುವಟಿಕೆಗಳಿಗೆ 4850 ಕೋಟಿ ರೂ. (ಸುಮಾರು 550 ಮಿಲಿಯನ್ ಡಾಲರ್) ಒದಗಿಸುತ್ತದೆ. ಅಸ್ತಿತ್ವದಲ್ಲಿರುವ ಸಾಲಗಳಿಗೆ ತಿದ್ದುಪಡಿ ಒಪ್ಪಂದವನ್ನು ಸಹ ವಿನಿಮಯ ಮಾಡಿಕೊಳ್ಳಲಾಯಿತು. ಇದು ಮಾಲ್ಡೀವ್ಸ್‌ನ ವಾರ್ಷಿಕ ಸಾಲ ಮರುಪಾವತಿ ಬಾಧ್ಯತೆಗಳನ್ನು (51 ಮಿಲಿಯನ್ ನಿಂದ 29 ಮಿಲಿಯನ್ ಡಾಲರ್ ಗೆ) ಶೇ.40 ರಷ್ಟು ಕಡಿಮೆ ಮಾಡುತ್ತದೆ. ಪ್ರಸ್ತಾವಿತ ಮುಕ್ತ ವ್ಯಾಪಾರ ಒಪ್ಪಂದದ ನಿಯಮಗಳನ್ನು ಎರಡೂ ಕಡೆಯವರು ವಿನಿಮಯ ಮಾಡಿಕೊಂಡರು.
ಉಭಯ ನಾಯಕರು ಅಡ್ಡು ನಗರದಲ್ಲಿ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ ಯೋಜನೆಯನ್ನು ಮತ್ತು ಇತರ ನಗರಗಳಲ್ಲಿ ಆರು ಹೆಚ್ಚು ಪರಿಣಾಮ ಬೀರುವ ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ವರ್ಚುವಲ್ ಆಗಿ ಉದ್ಘಾಟಿಸಿದರು. ಪ್ರಧಾನಿಯವರು 3,300 ಸಾಮಾಜಿಕ ವಸತಿ ಘಟಕಗಳು ಮತ್ತು 72 ವಾಹನಗಳನ್ನು ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ ಮತ್ತು ವಲಸೆ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಪ್ರಧಾನಮಂತ್ರಿಯವರು ಮಾಲ್ಡೀವ್ಸ್ ಸರ್ಕಾರಕ್ಕೆ ಎರಡು ಸೆಟ್ ಆರೋಗ್ಯ ಮೈತ್ರೀ ಹೆಲ್ತ್ ಕ್ಯೂಬ್ (ಭೀಷ್ಮ) ಗಳನ್ನು ಹಸ್ತಾಂತರಿಸಿದರು. ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಹೊಂದಿರುವ ಈ ಕ್ಯೂಬ್ 200 ಗಾಯಾಳುಗಳಿಗೆ ವೈದ್ಯಕೀಯ ನೆರವು ನೀಡಬಲ್ಲದು ಮತ್ತು ಆರು ವೈದ್ಯಕೀಯ ಸಿಬ್ಬಂದಿಯ ತಂಡವು 72 ಗಂಟೆಗಳ ಕಾಲ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸುತ್ತದೆ.
ಪ್ರಕೃತಿ ಸಂರಕ್ಷಣೆಗೆ ತಮ್ಮ ಆಳವಾದ ಬದ್ಧತೆಗೆ ಅನುಗುಣವಾಗಿ, ಇಬ್ಬರು ನಾಯಕರು ಭಾರತದ "ತಾಯಿಗಾಗಿ ಒಂದು ಗಿಡ" ಮತ್ತು ಮಾಲ್ಡೀವ್ಸ್‌ನ "5 ಮಿಲಿಯನ್ ಗಿಡಗಳನ್ನು ನೆಡುವ ಪ್ರತಿಜ್ಞೆ" ಅಭಿಯಾನಗಳ ಅಡಿಯಲ್ಲಿ ಮಾವಿನ ಸಸಿಗಳನ್ನು ನೆಟ್ಟರು.
ಮಾಲ್ಡೀವ್ಸ್ ಮತ್ತು ಅದರ ಜನರನ್ನು ಅವರ ಅಗತ್ಯತೆಗಳು ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಬೆಂಬಲಿಸುವ ಮತ್ತು ಹಿಂದೂ ಮಹಾಸಾಗರ ಪ್ರದೇಶದ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಭಾರತದ ಬದ್ಧತೆಯನ್ನು ಪ್ರಧಾನಿ ಪುನರುಚ್ಚರಿಸಿದರು.
*****
(Release ID: 2148686)
Read this release in:
Malayalam
,
English
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Tamil
,
Telugu