ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ಯುನೈಟೆಡ್ ಕಿಂಗ್‌ಡಮ್‌ ನ ಮಹಾರಾಜ ಚಾರ್ಲ್ಸ್ III ಅವರನ್ನು ಭೇಟಿಯಾದರು

Posted On: 24 JUL 2025 11:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಜರ ಬೇಸಿಗೆಯ ನಿವಾಸವಾದ ಸ್ಯಾಂಡ್ರಿಂಗ್‌ಹ್ಯಾಮ್ ಎಸ್ಟೇಟ್‌ ನಲ್ಲಿ ಮಹಾರಾಜ ಮೂರನೇ ಚಾರ್ಲ್ಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಮಹಾರಾಜರ ಆರೋಗ್ಯ ಚೇತರಿಕೆ ಮತ್ತು ಅವರು ತಮ್ಮ ರಾಜಮನೆತನದ ಕರ್ತವ್ಯಗಳನ್ನು ಪುನರಾರಂಭಿಸಿದ್ದಕ್ಕಾಗಿ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ಮತ್ತು ಮಹಾರಾಜರು ಆರೋಗ್ಯ ಮತ್ತು ಸುಸ್ಥಿರ ಜೀವನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ, ವಿಶೇಷವಾಗಿ ಆಯುರ್ವೇದ ಮತ್ತು ಯೋಗ ಹಾಗೂ ಅವುಗಳ ಪ್ರಯೋಜನಗಳನ್ನು ವಿಶ್ವದಾದ್ಯಂತ ಜನರಿಗೆ ತಲುಪಿಸುವ ಮಾರ್ಗಗಳ ಕುರಿತು ಚರ್ಚಿಸಿದರು.

ಇಬ್ಬರೂ ನಾಯಕರು ದ್ವಿಪಕ್ಷೀಯ ಸಂಬಂಧಗಳ ಬಗ್ಗೆಯೂ ಸಮಾಲೋಚನೆ ನಡೆಸಿದರು. ಐತಿಹಾಸಿಕ 'ಭಾರತ-ಯುಕೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ'ಕ್ಕೆ ಸಹಿ ಹಾಕುವುದು ಉಭಯ ದೇಶಗಳ ಪಾಲುದಾರಿಕೆಗೆ ಹೊಸ ಚೈತನ್ಯವನ್ನು ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಭಾರತವು ನವೀಕರಿಸಬಹುದಾದ ಇಂಧನ ವಲಯದಲ್ಲಿ ಸಾಧಿಸಿರುವ ಪ್ರಗತಿಯ ಬಗ್ಗೆ ಪ್ರಧಾನಮಂತ್ರಿಯವರು ಮಹಾರಾಜರಿಗೆ ಮಾಹಿತಿ ನೀಡಿದರು. ಹವಾಮಾನ ಬದಲಾವಣೆ ಮತ್ತು ಸುಸ್ಥಿರತೆಗೆ ಸಂಬಂಧಿಸಿದಂತೆ ತಮ್ಮ ಹಂಚಿಕೆಯ ದೃಷ್ಟಿಕೋನವನ್ನು ಉತ್ತೇಜಿಸಲು ಮತ್ತು ಪರಸ್ಪರ ಸಹಕರಿಸುವ ಮಾರ್ಗಗಳ ಬಗ್ಗೆಯೂ ಅವರು ಚರ್ಚಿಸಿದರು.

ಕಾಮನ್‌ ವೆಲ್ತ್‌ ನಲ್ಲಿ ಯುಕೆ ಮತ್ತು ಭಾರತ ಹೇಗೆ ಒಟ್ಟಾಗಿ ಕೆಲಸ ಮಾಡಬಹುದು ಎಂಬುದರ ಕುರಿತು ಪ್ರಧಾನಮಂತ್ರಿ ಮತ್ತು ಮಹಾರಾಜರು ಚರ್ಚಿಸಿದರು.

'ಏಕ್ ಪೇಡ್ ಮಾ ಕೆ ನಾಮ್' [ತಾಯಿಯ ಹೆಸರಿನಲ್ಲಿ ಒಂದು ಗಿಡ] ಎಂಬ ಹಸಿರು ಅಭಿಯಾನಕ್ಕೆ ಕೈಜೋಡಿಸಿದ್ದಕ್ಕಾಗಿ ಪ್ರಧಾನಮಂತ್ರಿಯವರು ಮಹಾರಾಜರಿಗೆ ಧನ್ಯವಾದಗಳನ್ನು ತಿಳಿಸಿದರು. ಅಲ್ಲದೆ, ಮುಂಬರುವ ಶರತ್ಕಾಲದ ಸಸಿ ನೆಡುವ ಋತುವಿನಲ್ಲಿ ಸ್ಯಾಂಡ್ರಿಂಗ್‌ಹ್ಯಾಮ್ ಎಸ್ಟೇಟ್‌ ನಲ್ಲಿ ನೆಡಲು ಒಂದು ಸಸಿಯನ್ನು ಹಸ್ತಾಂತರಿಸಿದರು.

ಆತಿಥ್ಯಕ್ಕಾಗಿ ಮಹಾರಾಜರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿಯವರು, ಭಾರತಕ್ಕೆ ಅಧಿಕೃತ ಭೇಟಿ ನೀಡುವಂತೆ ಅವರನ್ನು ಆಹ್ವಾನಿಸಿದರು.

 

*****
 


(Release ID: 2148272)