ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ಯುನೈಟೆಡ್ ಕಿಂಗ್ ಡಮ್ ಪ್ರಧಾನಮಂತ್ರಿಯನ್ನು ಭೇಟಿಯಾದರು

Posted On: 24 JUL 2025 7:29PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜುಲೈ 23-24, 2025 ರಂದು ಯುನೈಟೆಡ್ ಕಿಂಗ್ ಡಮ್ ಗೆ ಅಧಿಕೃತ ಭೇಟಿ ನೀಡಿದ್ದ ಸಂದರ್ಭದಲ್ಲಿ ಯುನೈಟೆಡ್ ಕಿಂಗ್ ಡಮ್ ನ ಪ್ರಧಾನಮಂತ್ರಿ ಗೌರವಾನ್ವಿತ ಸರ್ ಕೀರ್ ಸ್ಟಾರ್ಮರ್ ಅವರನ್ನು ಭೇಟಿಯಾದರು. ಬಕಿಂಗ್‌ಹ್ಯಾಮ್‌ಶೈರ್‌ನಲ್ಲಿರುವ ಯುಕೆ ಪ್ರಧಾನಮಂತ್ರಿಗಳ ನಿವಾಸವಾದ ಚೆಕರ್ಸ್‌ನಲ್ಲಿ ಪ್ರಧಾನಿ ಸ್ಟಾರ್ಮರ್ ಅವರಿಗೆ ಆತ್ಮೀಯ ಸ್ವಾಗತ ಕೋರಿದರು. ನಂತರ ಇಬ್ಬರು ನಾಯಕರು ಮುಖಾಮುಖಿ ಸಭೆ ಮತ್ತು ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಿದರು.

ಭಾರತ ಮತ್ತು ಯುನೈಟೆಡ್ ಕಿಂಗ್‌ ಡಮ್ ನಡುವಿನ ಐತಿಹಾಸಿಕ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದಕ್ಕೆ (CETA) ಸಹಿ ಹಾಕಿರುವುದನ್ನು ಉಭಯ ಪ್ರಧಾನಮಂತ್ರಿಗಳು ಸ್ವಾಗತಿಸಿದರು. ಈ ಒಪ್ಪಂದವು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲಿದ್ದು, ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ, ಆರ್ಥಿಕ ಸಹಯೋಗ ಮತ್ತು ಎರಡೂ ಆರ್ಥಿಕತೆಗಳಲ್ಲಿ ಉದ್ಯೋಗ ಸೃಷ್ಟಿಯನ್ನು ಗಣನೀಯವಾಗಿ ಹೆಚ್ಚಿಸಲಿದೆ. CETA ಒಪ್ಪಂದದ ಜೊತೆಗೇ ಜಾರಿಗೆ ಬರುವಂತಹ 'ದ್ವಿ-ಕೊಡುಗೆ ಒಡಂಬಡಿಕೆ' (Double Contribution Convention) ಬಗ್ಗೆ ಮಾತುಕತೆ ನಡೆಸಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದರು. ಈ ಒಡಂಬಡಿಕೆಯು, ಸ್ಪರ್ಧಾತ್ಮಕತೆಯನ್ನು ಉತ್ತೇಜಿಸುವುದು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ವ್ಯಾಪಾರದ ವೆಚ್ಚವನ್ನು ಕಡಿಮೆ ಮಾಡುವುದರ ಮೂಲಕ ಎರಡೂ ದೇಶಗಳ ವೃತ್ತಿಪರರು ಮತ್ತು ಸೇವಾ ವಲಯಕ್ಕೆ ನೆರವಾಗಲಿದೆ. ಬಂಡವಾಳ ಮಾರುಕಟ್ಟೆಗಳು ಮತ್ತು ಹಣಕಾಸು ಸೇವೆಗಳ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಸಹಕಾರವನ್ನು ಗಮನಿಸಿದ ಪ್ರಧಾನಿ ಮೋದಿ, ಭಾರತದ ಮೊದಲ ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರವಾದ ಗುಜರಾತ್‌ನ 'ಗಿಫ್ಟ್ ಸಿಟಿ' ಮತ್ತು ಯುಕೆಯ ಕ್ರಿಯಾಶೀಲ ಹಣಕಾಸು ಪರಿಸರ ವ್ಯವಸ್ಥೆಯ ನಡುವೆ ಹೆಚ್ಚಿನ ಸಂವಾದವನ್ನು ಉತ್ತೇಜಿಸಲು ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡಬಹುದು ಎಂದು ಒತ್ತಿ ಹೇಳಿದರು.

ಇಬ್ಬರೂ ನಾಯಕರು ದ್ವಿಪಕ್ಷೀಯ ಸಂಬಂಧಗಳ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ, 'ಭಾರತ-ಯುಕೆ ವಿಷನ್‌ 2035' ಅನ್ನು ಅಂಗೀಕರಿಸಿದರು. ಈ 'ವಿಷನ್‌ 2035' ದಾಖಲೆಯು, ಆರ್ಥಿಕತೆ ಮತ್ತು ಬೆಳವಣಿಗೆ, ತಂತ್ರಜ್ಞಾನ, ನಾವೀನ್ಯತೆ, ಸಂಶೋಧನೆ ಮತ್ತು ಶಿಕ್ಷಣ, ರಕ್ಷಣೆ ಮತ್ತು ಭದ್ರತೆ, ಹವಾಮಾನ ಕ್ರಮ, ಆರೋಗ್ಯ ಮತ್ತು ಜನರ ನಡುವಿನ ಸಂಪರ್ಕದಂತಹ ಪ್ರಮುಖ ಕ್ಷೇತ್ರಗಳಲ್ಲಿ ಮುಂದಿನ ಹತ್ತು ವರ್ಷಗಳ ಕಾಲ ಸಂಬಂಧವನ್ನು ಮುನ್ನಡೆಸುವ ಮೂಲಕ 'ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ'ಗೆ ಹೆಚ್ಚಿನ ಮಹತ್ವಾಕಾಂಕ್ಷೆ ಮತ್ತು ಹೊಸ ಚೈತನ್ಯವನ್ನು ತುಂಬಲಿದೆ.

ಎರಡೂ ದೇಶಗಳು ಹಾಗೂ ವಿಶ್ವ ಮಾರುಕಟ್ಟೆಯ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ರಕ್ಷಣಾ ಉತ್ಪನ್ನಗಳ ಸಹ-ವಿನ್ಯಾಸ, ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯಲ್ಲಿ ಸಹಯೋಗವನ್ನು ಉತ್ತೇಜಿಸುವ 'ರಕ್ಷಣಾ ಕೈಗಾರಿಕಾ ಮಾರ್ಗಸೂಚಿ'ಯನ್ನು ಅಂತಿಮಗೊಳಿಸಿರುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಎರಡೂ ದೇಶಗಳ ಸಶಸ್ತ್ರ ಪಡೆಗಳ ನಡುವಿನ ನಿಯಮಿತ ಸಹಭಾಗಿತ್ವವನ್ನು ಸ್ವಾಗತಿಸಿದ ಅವರು, ಬಲಗೊಳ್ಳುತ್ತಿರುವ ರಕ್ಷಣೆ ಮತ್ತು ಭದ್ರತಾ ಪಾಲುದಾರಿಕೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಬೆಳೆಯುತ್ತಿರುವ ಸಹಯೋಗದ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಟೆಲಿಕಾಂ, ನಿರ್ಣಾಯಕ ಖನಿಜಗಳು, AI, ಜೈವಿಕ ತಂತ್ರಜ್ಞಾನ ಮತ್ತು ಆರೋಗ್ಯ ತಂತ್ರಜ್ಞಾನ, ಸೆಮಿಕಂಡಕ್ಟರ್‌ ಗಳು, ಸುಧಾರಿತ ವಸ್ತುಗಳು ಮತ್ತು ಕ್ವಾಂಟಮ್ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ ತಂತ್ರಜ್ಞಾನ ಮತ್ತು ಭದ್ರತಾ ಉಪಕ್ರಮದ (Technology and Security Initiative - TSI) ತ್ವರಿತ ಅನುಷ್ಠಾನಕ್ಕೆ ಅವರು ಕರೆ ನೀಡಿದರು. TSI ಇಂದು ಒಂದು ವರ್ಷ ಪೂರೈಸಿದೆ.

ಭಾರತ ಮತ್ತು ಯುಕೆ ನಡುವೆ ಶಿಕ್ಷಣ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಪಾಲುದಾರಿಕೆಯನ್ನು ಸಹ ಉಭಯ ಪ್ರಧಾನಮಂತ್ರಿಗಳು ಸ್ವಾಗತಿಸಿದರು. ಹೊಸ ಶಿಕ್ಷಣ ನೀತಿಯ (New Education Policy - NEP) ಅಡಿಯಲ್ಲಿ ಆರು ಯುಕೆ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಕ್ಯಾಂಪಸ್‌ ಗಳನ್ನು ತೆರೆಯಲು ಕಾರ್ಯೋನ್ಮುಖವಾಗಿವೆ. 2025ರ ಜೂನ್ 16ರಂದು ಗುರುಗ್ರಾಮ್‌ ನಲ್ಲಿ ತನ್ನ ಕ್ಯಾಂಪಸ್ ತೆರೆದ ಸೌತಾಂಪ್ಟನ್ ವಿಶ್ವವಿದ್ಯಾಲಯ, NEP ಅಡಿಯಲ್ಲಿ ಭಾರತದಲ್ಲಿ ತನ್ನ ಕ್ಯಾಂಪಸ್ ತೆರೆದ ಮೊದಲ ವಿದೇಶಿ ವಿಶ್ವವಿದ್ಯಾಲಯವಾಗಿದೆ.

ಯುಕೆಯಲ್ಲಿರುವ ಭಾರತೀಯ ವಲಸಿಗರ ಸಮುದಾಯವು ಶೈಕ್ಷಣಿಕ, ಕಲೆ, ಸಾಹಿತ್ಯ, ವೈದ್ಯಕೀಯ, ವಿಜ್ಞಾನ, ಕ್ರೀಡೆ, ವ್ಯಾಪಾರ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ನೀಡುತ್ತಿರುವ ಅಮೂಲ್ಯ ಕೊಡುಗೆಯನ್ನು ಉಭಯ ನಾಯಕರು ಶ್ಲಾಘಿಸಿದರು. ಈ 'ಜೀವಂತ ಸೇತುವೆ'ಯು ಭಾರತ-ಯುಕೆ ಸಂಬಂಧಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪ್ರಮುಖ ಆಧಾರಸ್ತಂಭವಾಗಿದೆ ಎಂದು ಅವರು ಒಪ್ಪಿಕೊಂಡರು.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತದ ಜನರಿಗೆ ನೀಡಿದ ಬಲವಾದ ಬೆಂಬಲ ಮತ್ತು ಸಹಾನುಭೂತಿಗಾಗಿ ಪ್ರಧಾನಿ ಮೋದಿ ಅವರು ಪ್ರಧಾನಿ ಸ್ಟಾರ್ಮರ್ ಅವರಿಗೆ ಧನ್ಯವಾದ ಅರ್ಪಿಸಿದರು. ಭಯೋತ್ಪಾದನೆ ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಲು ಇಬ್ಬರೂ ನಾಯಕರು ಬದ್ಧತೆಯನ್ನು ವ್ಯಕ್ತಪಡಿಸಿದರು. ಉಗ್ರವಾದ ಮತ್ತು ಮೂಲಭೂತವಾದವು ಎರಡೂ ಸಮಾಜಗಳಿಗೆ ಅಪಾಯಕಾರಿ ಎಂದು ಗಮನಿಸಿದ ಅವರು, ಈ ಪಿಡುಗನ್ನು ಎದುರಿಸಲು ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ಒಪ್ಪಿಕೊಂಡರು. ಆರ್ಥಿಕ ಅಪರಾಧಿಗಳು ಮತ್ತು ಪರಾರಿಯಾದವರನ್ನು ನ್ಯಾಯದ ವ್ಯಾಪ್ತಿಗೆ ತರಲು ಪ್ರಧಾನಿ ಮೋದಿ ಅವರು ಯುಕೆಯ ಸಹಕಾರವನ್ನು ಕೋರಿದರು.

ಇಂಡೋ-ಪೆಸಿಫಿಕ್, ಪಶ್ಚಿಮ ಏಷ್ಯಾ ಮತ್ತು ರಷ್ಯಾ-ಉಕ್ರೇನ್ ಸಂಘರ್ಷದ ಬೆಳವಣಿಗೆಗಳನ್ನು ಒಳಗೊಂಡಂತೆ, ಪರಸ್ಪರ ಹಿತಾಸಕ್ತಿಯ ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಇಬ್ಬರೂ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ಕೊನೆಯಲ್ಲಿ, ತಮ್ಮ ಆತ್ಮೀಯ ಆತಿಥ್ಯಕ್ಕಾಗಿ ಪ್ರಧಾನಿ ಸ್ಟಾರ್ಮರ್ ಅವರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ ಮೋದಿ, ತಮ್ಮ ಅನುಕೂಲಕ್ಕೆ ತಕ್ಕಂತೆ ಶೀಘ್ರದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಅವರನ್ನು ಆಹ್ವಾನಿಸಿದರು.

ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳು ಸಹಿ ಹಾಕಿದ/ಅಂಗೀಕರಿಸಿದ ದಾಖಲೆಗಳು:

● ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ [CETA]

● ಭಾರತ-ಯುಕೆ ವಿಷನ್ 2035 [Link]

● ರಕ್ಷಣಾ ಕೈಗಾರಿಕಾ ಮಾರ್ಗಸೂಚಿ

● ತಂತ್ರಜ್ಞಾನ ಮತ್ತು ಭದ್ರತಾ ಉಪಕ್ರಮದ ಕುರಿತು ಹೇಳಿಕೆ [Link]

● ಭಾರತದ ಕೇಂದ್ರ ತನಿಖಾ ದಳ ಮತ್ತು ಯುಕೆಯ ರಾಷ್ಟ್ರೀಯ ಅಪರಾಧ ಸಂಸ್ಥೆ ನಡುವಿನ ಒಪ್ಪಂದ

 

*****
 


(Release ID: 2148266)