ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2025ರ ಮುಂಗಾರು ಅಧಿವೇಶನದ ಆರಂಭದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

Posted On: 21 JUL 2025 11:47AM by PIB Bengaluru

ನಮಸ್ಕಾರ, ಸ್ನೇಹಿತರೇ!

ಮಾಧ್ಯಮ ಕ್ಷೇತ್ರದ ಎಲ್ಲಾ ಸ್ನೇಹಿತರಿಗೂ ಮುಂಗಾರು ಅಧಿವೇಶನಕ್ಕೆ ಸ್ವಾಗತ.

ಸ್ನೇಹಿತರೇ,

ಮುಂಗಾರು ಎಂದರೆ ಹೊಸತನ ಮತ್ತು ಸೃಷ್ಟಿಯ ಸಂಕೇತ. ಇಲ್ಲಿಯವರೆಗೆ ಬಂದಿರುವ ವರದಿಗಳ ಪ್ರಕಾರ, ಇಡೀ ದೇಶದಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ವಲಯಕ್ಕೆ ಲಾಭವಾಗುವ ವಾತಾವರಣ ನಿರ್ಮಾಣವಾಗಿದೆ. ಮಳೆಯು ನಮ್ಮ ರೈತರ ಆರ್ಥಿಕತೆಗೆ ಮಾತ್ರವಲ್ಲದೆ, ದೇಶದ ಆರ್ಥಿಕತೆಗೂ, ಗ್ರಾಮೀಣ ಆರ್ಥಿಕತೆಗೂ ಮತ್ತು ಪ್ರತಿಯೊಂದು ಮನೆಯ ಆರ್ಥಿಕತೆಗೂ ಪ್ರಮುಖ ಪಾತ್ರ ವಹಿಸುತ್ತದೆ. ನಾನು ಪಡೆದಿರುವ ಮಾಹಿತಿಯ ಪ್ರಕಾರ, ಈ ವರ್ಷ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣವು ಕಳೆದ ಹತ್ತು ವರ್ಷಗಳ ದಾಖಲೆಗಿಂತ ಸುಮಾರು ಮೂರು ಪಟ್ಟು ಹೆಚ್ಚಿದೆ. ಇದು ಮುಂಬರುವ ದಿನಗಳಲ್ಲಿ ದೇಶದ ಆರ್ಥಿಕತೆಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ.

ಸ್ನೇಹಿತರೇ,

ಈ ಮುಂಗಾರು ಅಧಿವೇಶನವು ರಾಷ್ಟ್ರಕ್ಕೆ ಅಪಾರ ಹೆಮ್ಮೆಯ ವಿಷಯವಾಗಿದೆ. ಈ ಅಧಿವೇಶನವು, ದೇಶದ ಪಾಲಿಗೆ ಒಂದು ವಿಜಯೋತ್ಸವವೇ ಆಗಿದೆ. ಈ ಅಧಿವೇಶನವು ರಾಷ್ಟ್ರೀಯ ಹೆಮ್ಮೆ ಮತ್ತು ವಿಜಯದ ಸಂಭ್ರಮವಾಗಿದೆ ಎಂದು ಹೇಳುವುದಕ್ಕೆ ಪ್ರಮುಖ ಕಾರಣವೆಂದರೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (International Space Station) ಮೊದಲ ಬಾರಿಗೆ ಭಾರತದ ತ್ರಿವರ್ಣ ಧ್ವಜ ಹಾರಾಡಿದ್ದು. ಇದು ಪ್ರತಿಯೊಬ್ಬ ಭಾರತೀಯನಿಗೂ ಅಪಾರ ಹೆಮ್ಮೆ ತರುವ ಕ್ಷಣವಾಗಿದೆ. ಈ ಯಶಸ್ವಿ ಪಯಣವು, ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯ ಬಗ್ಗೆ ನವೋತ್ಸಾಹ ಮತ್ತು ನವಚೈತನ್ಯವನ್ನು ತುಂಬಿದೆ. ಇಡೀ ಸಂಸತ್ತು – ಲೋಕಸಭೆ ಮತ್ತು ರಾಜ್ಯಸಭೆ ಎರಡೂ – ದೇಶದ ನಾಗರಿಕರೊಂದಿಗೆ ಸೇರಿ, ಈ ಸಾಧನೆಯನ್ನು ಒಕ್ಕೊರಲಿನಿಂದ ಅಭಿನಂದಿಸಲಿವೆ. ಈ ಒಕ್ಕೊರಲ ಶ್ಲಾಘನೆಯು, ಇನ್ನಷ್ಟು ಎತ್ತರವನ್ನು ತಲುಪುವ ಗುರಿ ಹೊಂದಿರುವ ಭಾರತದ ಮುಂಬರುವ ಬಾಹ್ಯಾಕಾಶ ಯೋಜನೆಗಳಿಗೆ ಸ್ಫೂರ್ತಿ ಮತ್ತು ಪ್ರೋತ್ಸಾಹವನ್ನು ಸಹ ನೀಡಲಿದೆ.

ಸ್ನೇಹಿತರೇ,

ಈ ಮುಂಗಾರು ಅಧಿವೇಶನವು ನಿಜಕ್ಕೂ ವಿಜಯದ ಆಚರಣೆಯಾಗಿದೆ. ಭಾರತದ ಮಿಲಿಟರಿ ಶಕ್ತಿಯ ಸಾಮರ್ಥ್ಯವನ್ನು ಇಡೀ ಜಗತ್ತು ಕಂಡಿದೆ. ಆಪರೇಷನ್ ಸಿಂಧೂರ್ ನಲ್ಲಿ, ಭಾರತೀಯ ಸಶಸ್ತ್ರ ಪಡೆಗಳು ತಮ್ಮ ಉದ್ದೇಶಗಳನ್ನು ನೂರಕ್ಕೆ ನೂರು ಪ್ರತಿಶತ ಯಶಸ್ಸಿನೊಂದಿಗೆ ಸಾಧಿಸಿವೆ. ಕೇವಲ 22 ನಿಮಿಷಗಳಲ್ಲಿ, ಮಿಷನ್ ಶತ್ರುವಿನ ಪ್ರದೇಶದೊಳಗೆ ತನ್ನ ಗುರಿಯನ್ನು ನಾಶಪಡಿಸಿದೆ. ನಾನು ಈ ಬಗ್ಗೆ ಬಿಹಾರದಲ್ಲಿ ಒಂದು ಕಾರ್ಯಕ್ರಮದಲ್ಲಿ ಘೋಷಿಸಿದ್ದೆ, ಮತ್ತು ನಮ್ಮ ಸಶಸ್ತ್ರ ಪಡೆಗಳು ಅದನ್ನು ಅಲ್ಪಾವಧಿಯಲ್ಲಿಯೇ ಸಾಧಿಸಿ ತೋರಿಸಿವೆ. ನಮ್ಮ ‘ಮೇಡ್ ಇನ್ ಇಂಡಿಯಾ’ ಸೇನಾ ಶಕ್ತಿಯ ಹೊಸ ಮುಖವು ಜಾಗತಿಕ ಗಮನವನ್ನು ಸೆಳೆದಿದೆ. ಈ ದಿನಗಳಲ್ಲಿ, ನಾನು ಜಾಗತಿಕ ನಾಯಕರನ್ನು ಭೇಟಿಯಾದಾಗ, ಭಾರತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಸ್ವದೇಶಿ ನಿರ್ಮಿತ ರಕ್ಷಣಾ ಉಪಕರಣಗಳ ಬಗ್ಗೆ ಹೆಚ್ಚಿನ ಆಸಕ್ತಿ ವ್ಯಕ್ತವಾಗುತ್ತಿದೆ. ಈ ಅಧಿವೇಶನದಲ್ಲಿ ಸಂಸತ್ತು ಒಕ್ಕೊರಲಿನಿಂದ ವಿಜಯದ ಭಾವನೆಗಳನ್ನು ವ್ಯಕ್ತಪಡಿಸಿದಾಗ, ಅದು ನಮ್ಮ  ಸಶಸ್ತ್ರ ಪಡೆಗಳನ್ನು ಇನ್ನಷ್ಟು ಬಲಪಡಿಸುತ್ತದೆ ಮತ್ತು ಅವರಿಗೆ ಸ್ಫೂರ್ತಿ ನೀಡುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಇದು ದೇಶಕ್ಕೆ ಪ್ರೇರಣೆಯಾಗಲಿದೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಉತ್ಪಾದನೆಗೆ ದೊಡ್ಡ ಉತ್ತೇಜನವನ್ನು ನೀಡಲಿದೆ. ‘ಮೇಡ್ ಇನ್ ಇಂಡಿಯಾ’ ರಕ್ಷಣಾ ಉಪಕರಣಗಳು ಮತ್ತಷ್ಟು ವೇಗವನ್ನು ಪಡೆದುಕೊಳ್ಳಲಿದ್ದು, ನಮ್ಮ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ.

ಸ್ನೇಹಿತರೇ,

ಈ ದಶಕವನ್ನು ಶಾಂತಿ ಮತ್ತು ಪ್ರಗತಿಗಳು ಜೊತೆಜೊತೆಯಾಗಿ ಸಾಗುತ್ತಿರುವ ಸಮಯ ಎಂದು ಬಣ್ಣಿಸಬಹುದು. ನಾವು ಹೆಜ್ಜೆಹೆಜ್ಜೆಗೂ ಅಭಿವೃದ್ಧಿಯನ್ನು ಕಾಣುತ್ತಿದ್ದೇವೆ. ಸ್ವಾತಂತ್ರ್ಯ ಬಂದಾಗಿನಿಂದ, ದೇಶವು ಭಯೋತ್ಪಾದನೆಯಾಗಲಿ ಅಥವಾ ನಕ್ಸಲ್‌ ವಾದವಾಗಲಿ, ಹೀಗೆ ವಿವಿಧ ರೀತಿಯ ಹಿಂಸಾಚಾರಗಳಿಂದ ಬಹಳಷ್ಟು ನಲುಗಿದೆ. ಈ ಸಮಸ್ಯೆಗಳಲ್ಲಿ ಕೆಲವು ಮೊದಲು ಹುಟ್ಟಿಕೊಂಡಿದ್ದರೆ, ಇನ್ನು ಕೆಲವು ನಂತರದಲ್ಲಿ ತಲೆದೋರಿದವು. ಆದರೆ, ಇಂದು ನಕ್ಸಲ್ ವಾದ ಮತ್ತು ಮಾವೋವಾದದ ಪ್ರಭಾವದ ವಲಯವು ವೇಗವಾಗಿ ಕ್ಷೀಣಿಸುತ್ತಿದೆ. ಮಾವೋವಾದ ಮತ್ತು ನಕ್ಸಲ್ ವಾದವನ್ನು ಬುಡಸಮೇತ ಕಿತ್ತೊಗೆಯುವ ದೃಢ ಸಂಕಲ್ಪದೊಂದಿಗೆ, ನಮ್ಮ ರಕ್ಷಣಾ ಪಡೆಗಳು ಹೊಸ ಆತ್ಮವಿಶ್ವಾಸದೊಂದಿಗೆ ವೇಗವಾಗಿ ಯಶಸ್ಸಿನತ್ತ ಮುನ್ನಡೆಯುತ್ತಿವೆ. ಒಂದು ಕಾಲದಲ್ಲಿ ನಕ್ಸಲ್ ಪ್ರಭಾವಕ್ಕೆ ಒಳಗಾಗಿದ್ದ ದೇಶದ ನೂರಾರು ಜಿಲ್ಲೆಗಳು ಇಂದು ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡುತ್ತಿವೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಬಾಂಬ್, ಬಂದೂಕು ಮತ್ತು ಪಿಸ್ತೂಲುಗಳ ಮೇಲೆ ನಮ್ಮ ಸಂವಿಧಾನವು ಜಯ ಸಾಧಿಸುತ್ತಿದೆ ಎಂಬುದು ನಮಗೆ ಹೆಮ್ಮೆಯ ವಿಷಯ. ನಮ್ಮ ಸಂವಿಧಾನ ವಿಜಯಶಾಲಿಯಾಗುತ್ತಿದೆ. ಒಂದು ಕಾಲದಲ್ಲಿ ‘ರೆಡ್ ಕಾರಿಡಾರ್’ ಎಂದು ಕರೆಯಲ್ಪಡುತ್ತಿದ್ದ ಪ್ರದೇಶಗಳು ಇಂದು 'ಹಸಿರು ಅಭಿವೃದ್ಧಿ'ಯ ವಲಯಗಳಾಗಿ ಪರಿವರ್ತನೆಯಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದು ದೇಶದ ಉಜ್ವಲ ಭವಿಷ್ಯವನ್ನು ಸಂಕೇತಿಸುತ್ತಿದೆ.

ಸ್ನೇಹಿತರೇ,

ರಾಷ್ಟ್ರದ ಸೇವೆ ಮತ್ತು ಕಲ್ಯಾಣಕ್ಕಾಗಿ ಈ ಸದನವನ್ನು ಪ್ರವೇಶಿಸಿರುವ ಪ್ರತಿಯೊಬ್ಬ ಗೌರವಾನ್ವಿತ ಸಂಸತ್ ಸದಸ್ಯರಿಗೂ, ಒಂದರ ನಂತರ ಒಂದರಂತೆ ನಡೆಯುವ ಇಂತಹ ಘಟನೆಗಳು ಹೆಮ್ಮೆಯ ಕ್ಷಣಗಳಾಗಿವೆ. ಮತ್ತು ಈ ಸಂಸತ್ತಿನ ಅಧಿವೇಶನದಲ್ಲಿ, ಇಡೀ ದೇಶವು ಈ ಹೆಮ್ಮೆಯ ಗಾಥೆಯನ್ನು ಕೇಳಲಿದೆ – ಪ್ರತಿಯೊಬ್ಬ ಸಂಸದರಿಂದ, ಪ್ರತಿಯೊಂದು ರಾಜಕೀಯ ಪಕ್ಷದಿಂದ.

ಸ್ನೇಹಿತರೇ,

2014ರಲ್ಲಿ ನೀವು ನಮಗೆ ಜವಾಬ್ದಾರಿಯನ್ನು ವಹಿಸಿಕೊಟ್ಟಾಗ, ದೇಶವು 'ಫ್ರಜೈಲ್ ಫೈವ್' (Fragile Five) ಆರ್ಥಿಕತೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದ್ದ ಹಂತದಲ್ಲಿತ್ತು. 2014ಕ್ಕಿಂತ ಮೊದಲು, ಜಾಗತಿಕ ಆರ್ಥಿಕತೆಯಲ್ಲಿ ನಾವು 10ನೇ ಸ್ಥಾನದಲ್ಲಿದ್ದೆವು. ಇಂದು, ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಮುನ್ನಡೆಯುತ್ತಿದೆ. ಈ ದಿನಗಳಲ್ಲಿ, 25 ಕೋಟಿ ಬಡವರನ್ನು ಬಡತನದಿಂದ ಮೇಲೆತ್ತಿರುವುದನ್ನು ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳು ವ್ಯಾಪಕವಾಗಿ ಶ್ಲಾಘಿಸುತ್ತಿವೆ. 2014ಕ್ಕಿಂತ ಮೊದಲು ದೇಶದಲ್ಲಿ ಹಣದುಬ್ಬರ ದರವು ಎರಡಂಕಿಯಲ್ಲಿರುತ್ತಿದ್ದ ಕಾಲವಿತ್ತು. ಇಂದು, ಹಣದುಬ್ಬರವು ಸುಮಾರು 2 ಪ್ರತಿಶತಕ್ಕೆ ಇಳಿದಿರುವುದು ಸಾಮಾನ್ಯ ಮನುಷ್ಯನಿಗೆ ನೆಮ್ಮದಿ ಮತ್ತು ಸಮಾಧಾನವನ್ನು ತಂದಿದೆ. ಕಡಿಮೆ ಹಣದುಬ್ಬರ ಮತ್ತು ಹೆಚ್ಚಿನ ಬೆಳವಣಿಗೆಯು, ಆರೋಗ್ಯಕರ ಮತ್ತು ಪ್ರಗತಿಪರ ಅಭಿವೃದ್ಧಿ ಪಯಣವನ್ನು ಪ್ರತಿಬಿಂಬಿಸುತ್ತದೆ.

ಸ್ನೇಹಿತರೇ,

‘ಡಿಜಿಟಲ್ ಇಂಡಿಯಾ’ ಮತ್ತು ‘ಯುಪಿಐ’ ಮೂಲಕ ಭಾರತದ ಹೊಸ ಸಾಮರ್ಥ್ಯಗಳನ್ನು ಜಗತ್ತು ಈಗ ನೋಡುತ್ತಿದೆ ಮತ್ತು ಗುರುತಿಸುತ್ತಿದೆ. ಇವು ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಆಸಕ್ತಿಯನ್ನು ಸೃಷ್ಟಿಸುತ್ತಿವೆ. ‘ಫಿನ್ಟೆಕ್’ ಜಗತ್ತಿನಲ್ಲಿ ‘ಯುಪಿಐ’ ತನ್ನದೇ ಆದ ವಿಶಿಷ್ಟ ಗುರುತನ್ನು ಮೂಡಿಸಿದೆ. ರಿಯಲ್‌ ಟೈಮ್ ಡಿಜಿಟಲ್ ವಹಿವಾಟುಗಳಲ್ಲಿ ಭಾರತವು ಇಂದು ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ.

ಸ್ನೇಹಿತರೇ,

ಇತ್ತೀಚೆಗೆ, ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ILO) ಜಾಗತಿಕ ಸಮ್ಮೇಳನವಿತ್ತು, ಅಲ್ಲಿ ಭಾರತವು ಒಂದು ಪ್ರಮುಖ ಮೈಲಿಗಲ್ಲನ್ನು ಸಾಧಿಸಿತು. ILO ಪ್ರಕಾರ, ಭಾರತದಲ್ಲಿ 90 ಕೋಟಿಗೂ ಹೆಚ್ಚು ಜನರು ಈಗ ಸಾಮಾಜಿಕ ಭದ್ರತೆಯ ವ್ಯಾಪ್ತಿಗೆ ಬಂದಿದ್ದಾರೆ. ಇದುವೇ ಒಂದು ಮಹತ್ತರವಾದ ಸಾಧನೆಯಾಗಿದೆ. ಅದೇ ರೀತಿ, ವಿಶ್ವ ಆರೋಗ್ಯ ಸಂಸ್ಥೆಯು (WHO), ಭಾರತವನ್ನು ಟ್ರಕೋಮಾ ಮುಕ್ತ ಎಂದು ಘೋಷಿಸಿದೆ. ಇದು ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ಕಣ್ಣಿನ ಕಾಯಿಲೆಯಾಗಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಇದು ಭಾರತದ ಮತ್ತೊಂದು ಮಹತ್ವದ ಸಾಧನೆಯಾಗಿದೆ.

ಸ್ನೇಹಿತರೇ,

ಪಹಲ್ಗಾಮ್ ನಲ್ಲಾದ ಕ್ರೂರ ಹತ್ಯೆ, ದೌರ್ಜನ್ಯ ಮತ್ತು ನರಮೇಧವು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಭಯೋತ್ಪಾದಕರು ಮತ್ತು ಅವರ ಸೂತ್ರಧಾರರ ಕಡೆಗೆ ಎಲ್ಲರ ಗಮನ ಹರಿಯಿತು. ಆ ಕ್ಷಣದಲ್ಲಿ, ಪಕ್ಷ ಹಿತಾಸಕ್ತಿಗಳನ್ನು ಬದಿಗಿಟ್ಟು, ರಾಷ್ಟ್ರ ಹಿತಕ್ಕಾಗಿ ಹೆಚ್ಚಿನ ರಾಜಕೀಯ ಪಕ್ಷಗಳ ಮತ್ತು ರಾಜ್ಯಗಳ ಪ್ರತಿನಿಧಿಗಳು ವಿಶ್ವದಾದ್ಯಂತ ವಿವಿಧ ದೇಶಗಳಿಗೆ ಪ್ರಯಾಣಿಸಿ, ಭಯೋತ್ಪಾದನೆಯ ಕೇಂದ್ರವಾದ ಪಾಕಿಸ್ತಾನವನ್ನು ಜಗತ್ತಿನ ಮುಂದೆ ಬಯಲು ಮಾಡುವ ಯಶಸ್ವಿ ಅಭಿಯಾನವನ್ನು ನಡೆಸಿದರು. ರಾಷ್ಟ್ರ ಹಿತಕ್ಕಾಗಿ ಮಾಡಿದ ಈ ಮಹತ್ವದ ಕಾರ್ಯಕ್ಕಾಗಿ ಆ ಎಲ್ಲಾ ಸಂಸತ್ ಸದಸ್ಯರನ್ನು ಮತ್ತು ರಾಜಕೀಯ ಪಕ್ಷಗಳನ್ನು ಇಂದು ನಾನು ಅಭಿನಂದಿಸಲು ಬಯಸುತ್ತೇನೆ. ಅವರ ಪ್ರಯತ್ನಗಳು ದೇಶದಲ್ಲಿ ಒಂದು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಿದವು. ಭಾರತದ ನಿಲುವನ್ನು ಕೇಳಲು ಮತ್ತು ಸ್ವೀಕರಿಸಲು ಜಗತ್ತು ತನ್ನ ಬಾಗಿಲುಗಳನ್ನು ತೆರೆಯಿತು. ಇದಕ್ಕಾಗಿ ನಮ್ಮ ಸಂಸತ್ ಸದಸ್ಯರು ಮತ್ತು ರಾಜಕೀಯ ಪಕ್ಷಗಳನ್ನು ಅಭಿನಂದಿಸುವುದು ನನ್ನ ಸೌಭಾಗ್ಯವೆಂದು ನಾನು ಪರಿಗಣಿಸುತ್ತೇನೆ.

ಸ್ನೇಹಿತರೇ,

ಒಗ್ಗಟ್ಟಿನ ಭಾವನೆ ಮತ್ತು ಒಕ್ಕೊರಲಿನ ಧ್ವನಿಯು ರಾಷ್ಟ್ರದಲ್ಲಿ ಎಂತಹ ಮಹಾನ್ ಉತ್ಸಾಹವನ್ನು ತುಂಬುತ್ತದೆ ಎಂಬುದು ನಮಗೆ ತಿಳಿದಿದೆ. ಈ ವಿಜಯೋತ್ಸವವು ಅದೇ ಸ್ಪೂರ್ತಿಯೊಂದಿಗೆ ಮುಂಗಾರು ಅಧಿವೇಶನದಲ್ಲೂ ಪ್ರತಿಧ್ವನಿಸಲಿದೆ. ಇದು ನಮ್ಮ ಸಶಸ್ತ್ರ ಪಡೆಗಳ ಶಕ್ತಿಯನ್ನು ಶ್ಲಾಘಿಸುತ್ತದೆ, ರಾಷ್ಟ್ರದ ಸಾಮರ್ಥ್ಯಗಳನ್ನು ಗೌರವಿಸುತ್ತದೆ ಮತ್ತು 140 ಕೋಟಿ ಭಾರತೀಯರಿಗೆ ಹೊಸ ಸ್ಫೂರ್ತಿಯ ಸೆಲೆಯಾಗಲಿದೆ. ನಾವೆಲ್ಲರೂ ಒಟ್ಟಾಗಿ ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆಗಾಗಿ ನಮ್ಮ ಪ್ರಯತ್ನಗಳನ್ನು ಬಲಪಡಿಸಬೇಕು ಮತ್ತು ನಮ್ಮ ಸಶಸ್ತ್ರ ಪಡೆಗಳ ಪರಾಕ್ರಮವನ್ನು ಶ್ಲಾಘಿಸಬೇಕು ಎಂದು ನಾನು ದೃಢವಾಗಿ ನಂಬುತ್ತೇನೆ. ಒಗ್ಗಟ್ಟಿನ ಶಕ್ತಿ ಮತ್ತು ಒಕ್ಕೊರಲಿನ ಬಲವನ್ನು ರಾಷ್ಟ್ರವು ಕಂಡಿದೆ ಎಂದು ಇಂದು ನಾನು ದೇಶದ ಜನರಿಗೆ ಮತ್ತು ಎಲ್ಲಾ ರಾಜಕೀಯ ಪಕ್ಷಗಳಿಗೆ ಹೇಳಲೇಬೇಕು. ಗೌರವಾನ್ವಿತ ಸಂಸತ್ ಸದಸ್ಯರು ಈ ಸದನದೊಳಗೆ ಈ ಭಾವನೆಯನ್ನು ಇನ್ನಷ್ಟು ಬಲಪಡಿಸಬೇಕು ಮತ್ತು ಮುಂದುವರಿಸಬೇಕು. ರಾಜಕೀಯ ಪಕ್ಷಗಳು ಬೇರೆ ಬೇರೆಯಾಗಿವೆ, ಪ್ರತಿಯೊಂದಕ್ಕೂ ತನ್ನದೇ ಆದ ಕಾರ್ಯಸೂಚಿ, ತನ್ನದೇ ಆದ ಪಾತ್ರವಿದೆ ಎಂಬ ವಾಸ್ತವವನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಪಕ್ಷ ಹಿತಾಸಕ್ತಿಗಳಲ್ಲಿ ಮನಸ್ಸುಗಳು ಒಂದಾಗದಿದ್ದರೂ, ರಾಷ್ಟ್ರ ಹಿತಕ್ಕಾಗಿ ಅವು ಒಂದಾಗಲೇಬೇಕು ಅನ್ನುವ ಈ ಸತ್ಯವನ್ನೂ ನಾನು ಒಪ್ಪಿಕೊಳ್ಳುತ್ತೇನೆ. ಇದೇ ಭಾವನೆಯೊಂದಿಗೆ, ರಾಷ್ಟ್ರದ ಅಭಿವೃದ್ಧಿಯ ಪಯಣವನ್ನು ಬಲಪಡಿಸುವ, ದೇಶದ ಪ್ರಗತಿಯನ್ನು ಮುನ್ನಡೆಸುವ ಮತ್ತು ಅದರ ನಾಗರಿಕರನ್ನು ಸಬಲೀಕರಣಗೊಳಿಸುವ ಅನೇಕ ಪ್ರಮುಖ ವಿಧೇಯಕಗಳನ್ನು ಈ ಮುಂಗಾರು ಅಧಿವೇಶನಕ್ಕಾಗಿ ಪ್ರಸ್ತಾಪಿಸಲಾಗಿದೆ. ಸದನವು ವಿಸ್ತೃತ ಚರ್ಚೆಗಳನ್ನು ನಡೆಸಿ ಅವುಗಳನ್ನು ಅಂಗೀಕರಿಸುತ್ತದೆ ಎಂದು ನನಗೆ ವಿಶ್ವಾಸವಿದೆ.

ಎಲ್ಲಾ ಗೌರವಾನ್ವಿತ ಸಂಸತ್ ಸದಸ್ಯರಿಗೆ ಅರ್ಥಪೂರ್ಣ ಮತ್ತು ರಚನಾತ್ಮಕ ಚರ್ಚೆಗಳಿಗಾಗಿ ನನ್ನ ಶುಭ ಹಾರೈಕೆಗಳು.

ಧನ್ಯವಾದಗಳು!


ಸೂಚನೆ -  ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿದೆ.

 

*****
 


(Release ID: 2146346)