ಸಂಪುಟ
ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ವಾಪಸ್ಸಾಗಿದ್ದನ್ನು ಸ್ವಾಗತಿಸಿ ನಿರ್ಣಯ ಕೈಗೊಂಡ ಕೇಂದ್ರ ಸಚಿವ ಸಂಪುಟ
Posted On:
16 JUL 2025 3:02PM by PIB Bengaluru
ಭಾರತದ ಅನಂತ ಆಕಾಂಕ್ಷೆಗಳನ್ನು ಪ್ರತಿನಿಧಿಸುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ತಮ್ಮ ಬಾಹ್ಯಾಕಾಶ ಪ್ರಯಾಣದಿಂದ 2025ರ ಜುಲೈ 15 ರಂದು ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಇದು ಇಡೀ ರಾಷ್ಟ್ರಕ್ಕೆ ಹೆಮ್ಮೆ, ವೈಭವ ಮತ್ತು ಸಂತೋಷದ ಕ್ಷಣವಾಗಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಮ್ಮ ಐತಿಹಾಸಿಕ 18 ದಿನಗಳ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಭೂಮಿಗೆ ಹಿಂತಿರುಗಿರುವುದರ ರಾಷ್ಟ್ರದ ಸಂಭ್ರಮಾಚರಣೆಗೆ ಸಚಿವ ಸಂಪುಟವು ಕೈ ಜೋಡಿಸುತ್ತದೆ.
ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಮಿಷನ್ ಪೈಲಟ್ ಆಗಿ 2025ರ ಜೂನ್ 25 ರಂದು ಆರಂಭಿಸಲಾದ ಈ ಕಾರ್ಯಾಚರಣೆಯು ಒಂದು ಆನಂದದ ಕ್ಷಣವನ್ನು ಸೃಷ್ಟಿಸಿತು - ಭಾರತೀಯ ಗಗನಯಾತ್ರಿಯೊಬ್ಬರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಮೊದಲ ಬಾರಿಗೆ ಪಯಣ ಬೆಳೆಸಿದರು. ಇದು ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ ಮತ್ತು ನಮ್ಮ ಭವಿಷ್ಯದ ಬಾಹ್ಯಾಕಾಶ ಕಾರ್ಯಕ್ರಮದ ಸುವರ್ಣ ನೋಟವನ್ನು ಕಟ್ಟಿಕೊಡುತ್ತದೆ.
ಈ ಸಾಧನೆಯನ್ನು ಸಾಧ್ಯವಾಗಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ನಮ್ಮ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ಇಡೀ ಸಮುದಾಯವನ್ನು ಸಂಪುಟ ಶ್ಲಾಘಿಸಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಮ್ಮ ಅವಧಿಯಲ್ಲಿ, ಗ್ರೂಪ್ ಕ್ಯಾಪ್ಟನ್ ಶುಕ್ಲಾ ಅವರು ಆಕ್ಸಿಯಮ್ -4 ಕ್ರೂ ಮತ್ತು ಎಕ್ಸ್‌ಪೆಡಿಷನ್ 73 ರ ಸಹ ಸದಸ್ಯರೊಂದಿಗೆ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಿದರು, ಆ ಮೂಲಕ ಅಂತಾರಾರಾಷ್ಟ್ರೀಯ ಬಾಹ್ಯಾಕಾಶ ಸಹಕಾರದಲ್ಲಿ ಭಾರತದ ಬೆಳೆಯುತ್ತಿರುವ ನಾಯಕತ್ವವನ್ನು ಸಾಕಾರಗೊಳಿಸಿದರು.
ಅಲ್ಲಿ ಅವರು ಸ್ನಾಯು ಪುನರುತ್ಪಾದನೆ, ಪಾಚಿ ಮತ್ತು ಸೂಕ್ಷ್ಮಜೀವಿಯ ಬೆಳವಣಿಗೆ, ಬೆಳೆ ಬೆಳೆಯುವ ಕಾರ್ಯಸಾಧ್ಯತೆ, ಸೂಕ್ಷ್ಮಜೀವಿಯ ಬದುಕುಳಿಯುವಿಕೆ, ಬಾಹ್ಯಾಕಾಶದಲ್ಲಿ ಅರಿವಿನ ಕಾರ್ಯಕ್ಷಮತೆ ಮತ್ತು ಸೈನೋಬ್ಯಾಕ್ಟೀರಿಯಾದ ನಡವಳಿಕೆಯಂತಹ ವಿಷಯಗಳ ಮೇಲೆ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಮಹತ್ವದ ಪ್ರಯೋಗಗಳನ್ನು ನಡೆಸಿದರು. ಈ ಅಧ್ಯಯನಗಳು ಮಾನವ ಬಾಹ್ಯಾಕಾಶ ಹಾರಾಟ ಮತ್ತು ಸೂಕ್ಷ್ಮ ಗುರುತ್ವಾಕರ್ಷಣೆಯ ವಿಜ್ಞಾನದ ಜಾಗತಿಕ ತಿಳಿವಳಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಭಾರತದ ಭವಿಷ್ಯದ ಕಾರ್ಯಾಚರಣೆಗಳಿಗೆ ನಿರ್ಣಾಯಕ ಮಾಹಿತಿಗಳನ್ನು ಒದಗಿಸುತ್ತದೆ.
ಈ ಯಶಸ್ವಿ ಕಾರ್ಯಾಚರಣೆಯು ಬಾಹ್ಯಾಕಾಶ ಅನ್ವೇಷಣೆಯಲ್ಲಿ ಭಾರತದ ಜಾಗತಿಕ ಸ್ಥಾನವನ್ನು ಗಮನಾರ್ಹವಾಗಿ ಎತ್ತರಕ್ಕೇರಿಸಿದೆ. ಗಗನಯಾನ ಮತ್ತು ಭಾರತೀಯ ಅಂತರಿಕ್ಷ ನಿಲ್ದಾಣ ಸೇರಿದಂತೆ ಭಾರತದ ಸ್ವತಃ ಮಾನವ ಬಾಹ್ಯಾಕಾಶ ಹಾರಾಟದ ಮಹತ್ವಾಕಾಂಕ್ಷೆಯತ್ತ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ. ಮಾನವ ಬಾಹ್ಯಾಕಾಶ ಅನ್ವೇಷಣೆಯ ಮುಂಚೂಣಿಯಲ್ಲಿರುವ ಭಾರತದ ಸಂಕಲ್ಪವನ್ನು ಇದು ಪುನರುಚ್ಚರಿಸುತ್ತದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿ ಮತ್ತು ನಿರ್ಣಾಯಕ ನಾಯಕತ್ವವನ್ನು ಸಂಪುಟ ಶ್ಲಾಘಿಸುತ್ತದೆ, ಅವರ ದೂರದೃಷ್ಟಿಯ ಕಾರ್ಯತಂತ್ರ, ಭಾರತದ ಬಾಹ್ಯಾಕಾಶ ಸಾಮರ್ಥ್ಯದಲ್ಲಿ ಅಚಲ ನಂಬಿಕೆ ಮತ್ತು ಸ್ಥಿರ ಮಾರ್ಗದರ್ಶನವು ದೇಶವು ಹೊಸ ಹೆಜ್ಜೆ ಗುರುತುಗಳನ್ನು ಮೂಡಿಸಲು ಮತ್ತು ಬಾಹ್ಯಾಕಾಶ ಯಾನ ರಾಷ್ಟ್ರಗಳಲ್ಲಿ ನಾಯಕನಾಗಿ ಹೊರಹೊಮ್ಮಲು ಅನುವು ಮಾಡಿಕೊಟ್ಟಿದೆ.
ಭಾರತದ ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಇತಿಹಾಸದಲ್ಲಿ ದಾಖಲಿಸಲ್ಪಟ್ಟ 2023ರ ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ಚಂದ್ರಯಾನ-3 ಐತಿಹಾಸಿಕ ಇಳಿಯುವಿಕೆ ಸೇರಿದಂತೆ ಭಾರತದ ಇತ್ತೀಚಿನ ಮಹತ್ವದ ಸಾಧನೆಗಳನ್ನು ಸಂಪುಟವು ಹೆಮ್ಮೆಯಿಂದ ಸ್ಮರಿಸಿಕೊಂಡಿತು. ಅದೇ ರೀತಿ 2023 ರಲ್ಲಿ ಆರಂಭಿಸಲಾದ ಭಾರತದ ಆದಿತ್ಯ-L1 ಮಿಷನ್ ಸೌರ ಚಟುವಟಿಕೆಯ ಬಗ್ಗೆ ಮಾನವೀಯತೆಯ ತಿಳಿವಳಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಈ ಸಾಧನೆಗಳು ವೈಜ್ಞಾನಿಕ ಶ್ರೇಷ್ಠತೆ ಮತ್ತು ರಾಷ್ಟ್ರೀಯ ಸ್ವಾವಲಂಬನೆಯ ಮನೋಭಾವವನ್ನು ಪ್ರತಿಬಿಂಬಿಸುತ್ತವೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ನಿರಂತರ ಸುಧಾರಣೆಗಳ ಮೂಲಕ ಕೇಂದ್ರ ಸರ್ಕಾರವು ಭಾರತದ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಅದ್ಭುತ ಬೆಳವಣಿಗೆಗೆ ನಾಂದಿ ಹಾಡಿದೆ. ಈ ವಲಯದಲ್ಲಿ ಸುಮಾರು 300 ಹೊಸ ನವೋದ್ಯಮಗಳ ಉದಯದೊಂದಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ. ಜೊತೆಗೆ ನಾವೀನ್ಯತೆ, ಉದ್ಯಮಶೀಲತೆ ಮತ್ತು ತಂತ್ರಜ್ಞಾನ ಆಧಾರಿತ ಅಭಿವೃದ್ಧಿಯ ಸಕ್ರೀಯ ವ್ಯವಸ್ಥೆಯನ್ನು ಪೋಷಿಸುತ್ತಿದೆ.
ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರ ಜಯಭೇರಿ, ಕೇವಲ ವೈಯಕ್ತಿಕ ವಿಜಯವಲ್ಲ - ಇದು ಹೊಸ ಪೀಳಿಗೆಯ ಯುವ ಭಾರತೀಯರಿಗೆ ಸ್ಫೂರ್ತಿಯ ದಾರಿದೀಪವಾಗಿದೆ. ಇದು ವೈಜ್ಞಾನಿಕ ಮನೋಭಾವವನ್ನು ಹುಟ್ಟುಹಾಕುತ್ತದೆ, ಕುತೂಹಲವನ್ನು ಉತ್ತೇಜಿಸುತ್ತದೆ ಮತ್ತು ವಿಜ್ಞಾನದಲ್ಲಿ ವೃತ್ತಿ ಜೀವನವನ್ನು ಮುಂದುವರಿಸಲು ಮತ್ತು ನವೀನ ಪ್ರಯೋಗಗಳನ್ನು ಮಾಡಲು ಅಸಂಖ್ಯಾತ ಯುವಕರನ್ನು ಪ್ರೇರೇಪಿಸುತ್ತದೆ.
ಪ್ರಧಾನಮಂತ್ರಿಗಳ ಕನಸಿನಂತೆ 2047ರ ವೇಳೆಗೆ ವಿಕಸಿತ ಭಾರತ - ಅಭಿವೃದ್ಧಿ ಹೊಂದಿದ ಭಾರತ - ನಿರ್ಮಿಸುವ ರಾಷ್ಟ್ರೀಯ ಸಂಕಲ್ಪಕ್ಕೆ ಈ ಮಿಷನ್ ಹೊಸ ಚೈತನ್ಯ ತುಂಬಲಿದೆ ಎಂಬ ದೃಢ ನಂಬಿಕೆಯನ್ನು ಸಂಪುಟವು ಪುನರುಚ್ಚರಿಸಿತು.
*****
(Release ID: 2145239)
Visitor Counter : 5
Read this release in:
Hindi
,
English
,
Urdu
,
Marathi
,
Assamese
,
Bengali
,
Bengali-TR
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam