ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರೋಜ್‌ಗಾರ್ ಮೇಳದ ಅಡಿಯಲ್ಲಿ 51,000 ಕ್ಕೂ ಹೆಚ್ಚು ನೇಮಕಾತಿ ಪತ್ರಗಳ ವಿತರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅವತರಣಿಕೆ

Posted On: 12 JUL 2025 2:32PM by PIB Bengaluru

ನಮಸ್ಕಾರ!

ಕೇಂದ್ರ ಸರ್ಕಾರದಲ್ಲಿ ಯುವಜನರಿಗೆ ಶಾಶ್ವತ ಉದ್ಯೋಗಗಳನ್ನು ಒದಗಿಸುವ ನಮ್ಮ ಅಭಿಯಾನವು ಸ್ಥಿರವಾಗಿ ಮುಂದುವರಿಯುತ್ತಿದೆ. ಮತ್ತು ನಾವು ಇದಕ್ಕೆ ಹೆಸರುವಾಸಿಯಾಗಿದ್ದೇವೆ - ಯಾವುದೇ ಶಿಫಾರಸು ಇಲ್ಲ, ಭ್ರಷ್ಟಾಚಾರವಿಲ್ಲ. ಇಂದು, 51,000 ಕ್ಕೂ ಹೆಚ್ಚು ಯುವಜನರಿಗೆ ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ಲಕ್ಷಾಂತರ ಯುವಜನರು ಈಗಾಗಲೇ ಇಂತಹ ರೋಜ್‌ಗಾರ್ ಮೇಳಗಳ (ಉದ್ಯೋಗ ಮೇಳಗಳು) ಮೂಲಕ ಭಾರತ ಸರ್ಕಾರದಲ್ಲಿ ಶಾಶ್ವತ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ. ಈ ಯುವ ಜನರು ಈಗ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಇಂದು, ನಿಮ್ಮಲ್ಲಿ ಅನೇಕರು ಭಾರತೀಯ ರೈಲ್ವೆಯಲ್ಲಿ ನಿಮ್ಮ ಜವಾಬ್ದಾರಿಗಳನ್ನು ಪ್ರಾರಂಭಿಸಿದ್ದೀರಿ. ಕೆಲವರು ಈಗ ರಾಷ್ಟ್ರದ ಭದ್ರತೆಯ ರಕ್ಷಕರಾಗುತ್ತಾರೆ, ಅಂಚೆ ಇಲಾಖೆಯಲ್ಲಿ ನೇಮಕಗೊಂಡ ಇತರರು ಪ್ರತಿ ಹಳ್ಳಿಗೆ ಸರ್ಕಾರಿ ಸೇವೆಗಳನ್ನು ತಲುಪಿಸಲು ಸಹಾಯ ಮಾಡುತ್ತಾರೆ, ಕೆಲವರು ಎಲ್ಲರಿಗೂ ಆರೋಗ್ಯ ಮಿಷನ್‌ನ ಕಾಲಾಳುಗಳಾಗುತ್ತಾರೆ, ಅನೇಕ ಯುವ ವೃತ್ತಿಪರರು ಆರ್ಥಿಕ ಸೇರ್ಪಡೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತಾರೆ ಮತ್ತು ಇತರರು ಭಾರತದ ಕೈಗಾರಿಕಾ ಅಭಿವೃದ್ಧಿಯನ್ನು ಮುಂದಕ್ಕೆ ಕೊಂಡೊಯ್ಯುತ್ತಾರೆ. ನಿಮ್ಮ ಇಲಾಖೆಗಳು ವಿಭಿನ್ನವಾಗಿರಬಹುದು, ಆದರೆ ಗುರಿ ಒಂದೇ ಆಗಿರುತ್ತದೆ. ಮತ್ತು ಆ ಗುರಿ ಏನು? ನಾವು ಇದನ್ನು ಮತ್ತೆ ಮತ್ತೆ ನೆನಪಿನಲ್ಲಿಟ್ಟುಕೊಳ್ಳಬೇಕು: ಇಲಾಖೆ, ಕಾರ್ಯ, ಸ್ಥಾನ ಅಥವಾ ಪ್ರದೇಶ ಏನೇ ಇರಲಿ - ಒಂದೇ ಮತ್ತು ಏಕೈಕ ಗುರಿ ರಾಷ್ಟ್ರಕ್ಕೆ ಸೇವೆ. ಮಾರ್ಗದರ್ಶಿ ತತ್ವ ಯಾವುದೆಂದರೆ : ನಾಗರಿಕ ಮೊದಲು. ದೇಶದ ಜನರಿಗೆ ಸೇವೆ ಸಲ್ಲಿಸಲು ನಿಮಗೆ ಉತ್ತಮ ವೇದಿಕೆ ನೀಡಲಾಗಿದೆ. ಜೀವನದ ಇಂತಹ ಮಹತ್ವದ ಹಂತದಲ್ಲಿ ಈ ದೊಡ್ಡ ಯಶಸ್ಸನ್ನು ಸಾಧಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ನಿಮ್ಮ ವೃತ್ತಿಜೀವನದ ಈ ಹೊಸ ಪ್ರಯಾಣಕ್ಕೆ ನನ್ನ ಶುಭಾಶಯಗಳನ್ನು ಕೋರುತ್ತೇನೆ.

ಸ್ನೇಹಿತರೇ,

ಇಂದು ಜಗತ್ತು ಭಾರತಕ್ಕೆ ಎರಡು ಅಪರಿಮಿತ ಶಕ್ತಿಗಳಿವೆ ಎಂದು ಒಪ್ಪಿಕೊಂಡಿದೆ: ಒಂದು ಜನಸಂಖ್ಯಾಶಾಸ್ತ್ರ, ಮತ್ತು ಇನ್ನೊಂದು ಪ್ರಜಾಪ್ರಭುತ್ವ - ಇದು ಅತಿ ಹೆಚ್ಚು ಯುವ ಜನಸಂಖ್ಯೆ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ. ಈ ಯುವ ಶಕ್ತಿಯು ಭಾರತದ ಉಜ್ವಲ ಭವಿಷ್ಯಕ್ಕೆ ದೊಡ್ಡ ಆಸ್ತಿ ಮತ್ತು ಅಷ್ಟೇ ಬಲವಾದ ಖಾತರಿಯಾಗಿದೆ. ಈ ಶಕ್ತಿಯನ್ನು ಸಮೃದ್ಧಿಯ ಸೂತ್ರವನ್ನಾಗಿ ಪರಿವರ್ತಿಸಲು ನಮ್ಮ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ, ನಾನು ಐದು ದೇಶಗಳಿಗೆ ಭೇಟಿ ನೀಡಿ ಹಿಂತಿರುಗಿದ್ದೇನೆ. ಪ್ರತಿಯೊಂದು ದೇಶದಲ್ಲಿಯೂ, ಭಾರತದ ಯುವ ಶಕ್ತಿಯ ಪ್ರಶಂಸೆ ಮತ್ತು ಮನ್ನಣೆಯನ್ನು ನಾನು ಕೇಳಲು ಸಾಧ್ಯವಾಯಿತು. ಈ ಭೇಟಿಗಳ ಸಮಯದಲ್ಲಿ ಸಹಿ ಹಾಕಲಾದ ಎಲ್ಲಾ ಒಪ್ಪಂದಗಳೂ  ಖಂಡಿತವಾಗಿಯೂ ಭಾರತದ ಯುವಜನರಿಗೆ, ದೇಶ ಮತ್ತು ವಿದೇಶಗಳಲ್ಲಿ ಪ್ರಯೋಜನವನ್ನು ನೀಡುತ್ತವೆ. ರಕ್ಷಣೆ, ಔಷಧಗಳು, ಡಿಜಿಟಲ್ ತಂತ್ರಜ್ಞಾನ, ಇಂಧನ ಮತ್ತು ಅಪರೂಪದ ಖನಿಜಗಳಂತಹ ಕ್ಷೇತ್ರಗಳಲ್ಲಿ, ಮಾಡಿಕೊಂಡ ಒಪ್ಪಂದಗಳು ಮುಂಬರುವ ದಿನಗಳಲ್ಲಿ ಭಾರತಕ್ಕೆ ಗಮನಾರ್ಹ ಪ್ರಯೋಜನಗಳನ್ನು ತರುತ್ತವೆ. ಅವು ಭಾರತದ ಉತ್ಪಾದನೆ ಮತ್ತು ಸೇವಾ ವಲಯಗಳಿಗೆ ಬಲವಾದ ಉತ್ತೇಜನವನ್ನು ನೀಡುತ್ತವೆ.

ಸ್ನೇಹಿತರೇ,

ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ, 21 ನೇ ಶತಮಾನದಲ್ಲಿ ಉದ್ಯೋಗಗಳ ಸ್ವರೂಪವೂ ವಿಕಸನಗೊಳ್ಳುತ್ತಿದೆ ಮತ್ತು ಹೊಸ ವಲಯಗಳು ನಿರಂತರವಾಗಿ ಹೊರಹೊಮ್ಮುತ್ತಿವೆ. ಅದಕ್ಕಾಗಿಯೇ, ಕಳೆದ ದಶಕದಲ್ಲಿ ಭಾರತವು ತನ್ನ ಯುವಜನರನ್ನು ಈ ಬದಲಾವಣೆಗಳಿಗೆ ಸಿದ್ಧಪಡಿಸುವತ್ತ ಗಮನಹರಿಸಿದೆ. ಪ್ರಸ್ತುತ ಯುಗದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಆಧುನಿಕ ನೀತಿಗಳನ್ನು ರೂಪಿಸಲಾಗಿದೆ. ಇಂದು ದೇಶದಲ್ಲಿ ರೂಪುಗೊಳ್ಳುತ್ತಿರುವ ನವೋದ್ಯಮಗಳು (ಸ್ಟಾರ್ಟ್-ಅಪ್‌ಗಳು), ನಾವೀನ್ಯತೆ ಮತ್ತು ಸಂಶೋಧನೆಯ ಪರಿಸರ ವ್ಯವಸ್ಥೆಯು ನಮ್ಮ ಯುವಜನರ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ. ತಮ್ಮದೇ ಆದ ಸ್ಟಾರ್ಟ್-ಅಪ್‌ಗಳನ್ನು ಪ್ರಾರಂಭಿಸಲು ಆಶಿಸುವ ಯುವಜನರನ್ನು ನಾನು ನೋಡಿದಾಗ, ಅದು ನನ್ನ ಸ್ವಂತ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇದೀಗ, ಡಾ. ಜಿತೇಂದ್ರ ಸಿಂಗ್ ಜೀ ಅವರು ಸ್ಟಾರ್ಟ್-ಅಪ್‌ಗಳ ಕುರಿತು ಕೆಲವು ವಿವರವಾದ ಅಂಕಿಅಂಶಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದಾರೆ. ನನ್ನ ದೇಶದ ಯುವಜನರು ಉತ್ತಮ ದೃಷ್ಟಿಕೋನ, ವೇಗ ಮತ್ತು ಶಕ್ತಿಯೊಂದಿಗೆ, ಹೊಸದನ್ನು ಮಾಡುವ ಬಯಕೆಯೊಂದಿಗೆ ಮುಂದುವರಿಯುತ್ತಿರುವುದನ್ನು ನೋಡಿ ನನಗೆ ಹೆಮ್ಮೆಯ ಭಾವನೆ ಮೂಡುತ್ತದೆ.

ಸ್ನೇಹಿತರೇ,

ಭಾರತ ಸರ್ಕಾರವು ಖಾಸಗಿ ವಲಯದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವತ್ತ ಗಮನ ಹರಿಸುತ್ತಿದೆ. ಇತ್ತೀಚೆಗೆ, ಸರ್ಕಾರವು ಹೊಸ ಯೋಜನೆಯನ್ನು ಅನುಮೋದಿಸಿದೆ - ಉದ್ಯೋಗ ಸಂಬಂಧಿತ ಪ್ರೋತ್ಸಾಹಕ ಯೋಜನೆ. ಈ ಯೋಜನೆಯಡಿಯಲ್ಲಿ, ಖಾಸಗಿ ವಲಯದಲ್ಲಿ ಮೊದಲ ಉದ್ಯೋಗ ಪಡೆಯುವ ಯುವಜನರಿಗೆ ಸರ್ಕಾರವು 15,000 ರೂಪಾಯಿಗಳನ್ನು ನೀಡುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸರ್ಕಾರವು ಮೊದಲ ಕೆಲಸದ ಮೊದಲ ಸಂಬಳಕ್ಕೆ ಕೊಡುಗೆ ನೀಡುತ್ತದೆ. ಇದಕ್ಕಾಗಿ, ಸರ್ಕಾರವು ಸುಮಾರು 1 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ನಿಗದಿಪಡಿಸಿದೆ. ಈ ಯೋಜನೆಯು ಸುಮಾರು 3.5 ಕೋಟಿ ಹೊಸ ಉದ್ಯೋಗಗಳ ಸೃಷ್ಟಿಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಸ್ನೇಹಿತರೇ,

ಇಂದು, ಭಾರತದ ಅತಿದೊಡ್ಡ ಶಕ್ತಿಗಳಲ್ಲಿ ಒಂದು ನಮ್ಮ ಉತ್ಪಾದನಾ ವಲಯ. ಉತ್ಪಾದನೆಯಲ್ಲಿ ಹೆಚ್ಚಿನ ಸಂಖ್ಯೆಯ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಈ ವಲಯವನ್ನು ಉತ್ತೇಜಿಸಲು, ಈ ವರ್ಷದ ಕೇಂದ್ರ ಬಜೆಟ್ “ಮಿಷನ್ ಮ್ಯಾನುಫ್ಯಾಕ್ಚರಿಂಗ್” (ಉತ್ಪಾದನಾ ಮಿಷನ್ )  ಪ್ರಾರಂಭಿಸುವುದಾಗಿ ಘೋಷಿಸಿದೆ. ಕಳೆದ ಕೆಲವು ವರ್ಷಗಳಲ್ಲಿ, ನಾವು ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಬಲಪಡಿಸಿದ್ದೇವೆ. ಪಿಎಲ್ಐ (ಉತ್ಪಾದನೆ ಸಂಬಂಧಿತ ಪ್ರೋತ್ಸಾಹ) ಯೋಜನೆಯ ಮೂಲಕ, ದೇಶದಲ್ಲಿ 11 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ. ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ಸ್ ವಲಯಗಳು ಅಭೂತಪೂರ್ವ ಬೆಳವಣಿಗೆಯನ್ನು ಕಂಡಿವೆ. ಇಂದು, ಭಾರತದಲ್ಲಿ ಸುಮಾರು 11 ಲಕ್ಷ ಕೋಟಿ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ಸ್ ಉತ್ಪಾದನೆ ನಡೆಯುತ್ತಿದೆ. ಅದು ಕಳೆದ 11 ವರ್ಷಗಳಲ್ಲಿ ಐದು ಪಟ್ಟು ಹೆಚ್ಚಳವಾಗಿದೆ. ಈ ಹಿಂದೆ, ಭಾರತವು ಕೇವಲ 2 ಅಥವಾ 4 ಮೊಬೈಲ್ ಫೋನ್ ಉತ್ಪಾದನಾ ಘಟಕಗಳನ್ನು ಹೊಂದಿತ್ತು. ಈಗ, ನಮ್ಮಲ್ಲಿ ಮೊಬೈಲ್ ಫೋನ್ ತಯಾರಿಕೆಗೆ ಸಂಬಂಧಿಸಿದ ಸುಮಾರು 300 ಘಟಕಗಳಿವೆ, ಇದು ಲಕ್ಷಾಂತರ ಯುವಜನರಿಗೆ ಉದ್ಯೋಗ ನೀಡುತ್ತದೆ. ಮತ್ತೊಂದು ಪ್ರಮುಖ ವಲಯವೆಂದರೆ ರಕ್ಷಣಾ ಉತ್ಪಾದನೆ, ಇದು ಆಪರೇಷನ್ ಸಿಂಧೂರ್ ನಂತರ ಇನ್ನಷ್ಟು ಗಮನ ಮತ್ತು ಹೆಮ್ಮೆಯನ್ನು ಗಳಿಸುತ್ತಿದೆ. ಭಾರತ ರಕ್ಷಣಾ ಉತ್ಪಾದನೆಯಲ್ಲಿ ಹೊಸ ದಾಖಲೆಗಳನ್ನು ಸ್ಥಾಪಿಸುತ್ತಿದೆ. ನಮ್ಮ ರಕ್ಷಣಾ ಉತ್ಪಾದನೆ ಈಗ 1.25 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಭಾರತ ಲೋಕೋಮೋಟಿವ್ ವಲಯದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಸಾಧಿಸಿದೆ - ನಾವು ಈಗ ವಿಶ್ವದ ಅತಿದೊಡ್ಡ ಲೋಕೋಮೋಟಿವ್‌ಗಳ ಉತ್ಪಾದಕರಾಗಿದ್ದೇವೆ. ಅದು ಲೋಕೋಮೋಟಿವ್‌ಗಳಾಗಿರಲಿ, ರೈಲು ಕೋಚ್‌ಗಳಾಗಿರಲಿ ಅಥವಾ ಮೆಟ್ರೋ ಕೋಚ್‌ಗಳಾಗಿರಲಿ, ಭಾರತ ಅವುಗಳನ್ನು ಅನೇಕ ದೇಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ರಫ್ತು ಮಾಡುತ್ತಿದೆ. ನಮ್ಮ ಆಟೋಮೊಬೈಲ್ ವಲಯವು ಅಭೂತಪೂರ್ವ ಬೆಳವಣಿಗೆಯನ್ನು ಅನುಭವಿಸುತ್ತಿದೆ.

ಕಳೆದ 5 ವರ್ಷಗಳಲ್ಲಿ, ಈ ವಲಯವು ಸುಮಾರು $40 ಬಿಲಿಯನ್ ಎಫ್‌ಡಿಐ (ವಿದೇಶಿ ನೇರ ಹೂಡಿಕೆ) ಪಡೆದಿದೆ. ಅಂದರೆ ಹೊಸ ಕಂಪನಿಗಳು ಬಂದಿವೆ, ಹೊಸ ಕಾರ್ಖಾನೆಗಳು ಸ್ಥಾಪನೆಯಾಗಿವೆ, ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ - ಮತ್ತು ಅದೇ ಸಮಯದಲ್ಲಿ, ವಾಹನಗಳ ಬೇಡಿಕೆ ಹೆಚ್ಚಾಗಿದೆ, ಭಾರತದಲ್ಲಿ ದಾಖಲೆಯ ವಾಹನಗಳ ಮಾರಾಟವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಭಾರತದ ಪ್ರಗತಿ ಮತ್ತು ಈ ಉತ್ಪಾದನಾ ದಾಖಲೆಗಳು ತಾವಾಗಿಯೇ ಸಂಭವಿಸಿದಂತಹವಲ್ಲ. ಹೆಚ್ಚು ಹೆಚ್ಚು ಯುವಜನರು ಉದ್ಯೋಗಗಳನ್ನು ಪಡೆಯುತ್ತಿರುವುದರಿಂದ ಮಾತ್ರ ಅವು ಸಾಧ್ಯ. ಅವರ ಕಠಿಣ ಪರಿಶ್ರಮ, ಬುದ್ಧಿಶಕ್ತಿ ಮತ್ತು ಸಮರ್ಪಣೆಯೇ ಇದನ್ನು ಸಾಧ್ಯವಾಗಿಸಿದೆ. ಭಾರತದ ಯುವಜನರು ಉದ್ಯೋಗವನ್ನು ಕಂಡುಕೊಂಡಿದ್ದಾರೆ, ಆದರೆ ಅವರು ಅದರಲ್ಲಿಯೂ ಶ್ರೇಷ್ಠತ್ವವನ್ನು ಸಾಧಿಸಿದ್ದಾರೆ. ಈಗ, ಸರ್ಕಾರಿ ಉದ್ಯೋಗಿಗಳಾಗಿ, ಉತ್ಪಾದನಾ ವಲಯದಲ್ಲಿ ಈ ವೇಗ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳುವುದು ನಿಮ್ಮ ಕರ್ತವ್ಯ. ನಿಮ್ಮನ್ನು ಎಲ್ಲಿಗೆ ನಿಯೋಜಿಸಲಾಗಿದ್ದರೂ, ನೀವು ಉತ್ತೇಜನ ಕೊಡುವಂತಹವರಾಗಿ, ಪ್ರೋತ್ಸಾಹಕರಾಗಿ ಕಾರ್ಯನಿರ್ವಹಿಸಬೇಕು, ಅಡೆತಡೆಗಳನ್ನು ತೆಗೆದುಹಾಕಬೇಕು ಮತ್ತು ಪ್ರಕ್ರಿಯೆಗಳನ್ನು ಸರಳಗೊಳಿಸಬೇಕು. ನೀವು ವ್ಯವಸ್ಥೆಯನ್ನು  ಹೆಚ್ಚು ಸುಲಭಗೊಳಿಸುತ್ತೀರಿ, ಮತ್ತು ಅದು ದೇಶದ ಜನರಿಗೆ ಹೆಚ್ಚಿನ ಪ್ರಯೋಜನವನ್ನು ತರುತ್ತದೆ.

ಸ್ನೇಹಿತರೇ,

ಇಂದು, ನಮ್ಮ ದೇಶವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಸಾಗುತ್ತಿದೆ, ಮತ್ತು ಯಾವುದೇ ಭಾರತೀಯನು ಇದನ್ನು ಹೆಮ್ಮೆಯಿಂದ ಹೇಳಬಹುದು. ಈ ಸಾಧನೆಯು ನಮ್ಮ ಯುವಜನರ ಕಠಿಣ ಪರಿಶ್ರಮ ಹಾಗು ಬೆವರಿನ ಫಲಿತಾಂಶವಾಗಿದೆ. ಕಳೆದ 11 ವರ್ಷಗಳಲ್ಲಿ, ರಾಷ್ಟ್ರವು ಪ್ರತಿಯೊಂದು ವಲಯದಲ್ಲೂ ಪ್ರಗತಿ ಸಾಧಿಸಿದೆ. ಇತ್ತೀಚೆಗೆ, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಬಹಳ ಶ್ಲಾಘನೀಯ ವರದಿಯನ್ನು ಬಿಡುಗಡೆ ಮಾಡಿದೆ. ಕಳೆದ ದಶಕದಲ್ಲಿ ಭಾರತದ 90 ಕೋಟಿಗೂ ಹೆಚ್ಚು ನಾಗರಿಕರನ್ನು ಕಲ್ಯಾಣ ಯೋಜನೆಗಳ ಅಡಿಯಲ್ಲಿ ತರಲಾಗಿದೆ ಎಂಬುದನ್ನು ಈ ವರದಿ ಎತ್ತಿ ತೋರಿಸುತ್ತದೆ. ಇದು ಮೂಲಭೂತವಾಗಿ ಸಾಮಾಜಿಕ ಭದ್ರತೆಯ ವಿಸ್ತರಣೆಯಾಗಿದೆ. ಮತ್ತು ಈ ಯೋಜನೆಗಳ ಪರಿಣಾಮವು ಕಲ್ಯಾಣವನ್ನು ಮೀರಿದುದಾಗಿದೆ - ಅವು ಬೃಹತ್ ಸಂಖ್ಯೆಯ ಹೊಸ ಉದ್ಯೋಗಗಳನ್ನು ಸೃಷ್ಟಿಸಿವೆ. ನಾನು ನಿಮಗೆ ಒಂದು ಸರಳ ಉದಾಹರಣೆಯನ್ನು ನೀಡುತ್ತೇನೆ - ಪ್ರಧಾನ ಮಂತ್ರಿ ಆವಾಸ್ ಯೋಜನೆ. ಈ ಯೋಜನೆಯಡಿಯಲ್ಲಿ, 4 ಕೋಟಿ ಹೊಸ ಪಕ್ಕಾ (ಶಾಶ್ವತ) ಮನೆಗಳನ್ನು ಈಗಾಗಲೇ ನಿರ್ಮಿಸಲಾಗಿದೆ ಮತ್ತು ಪ್ರಸ್ತುತ 3 ಕೋಟಿ ಮನೆಗಳ ನಿರ್ಮಾಣ ನಡೆಯುತ್ತಿದೆ. ಈಗ, ಇಷ್ಟು ದೊಡ್ಡ ಸಂಖ್ಯೆಯ ಮನೆಗಳನ್ನು ನಿರ್ಮಿಸುತ್ತಿರುವಾಗ, ಮೇಸ್ರಿಗಳು, ಕಾರ್ಮಿಕರು, ಕಚ್ಚಾ ವಸ್ತುಗಳ ಪೂರೈಕೆದಾರರು, ಸಾರಿಗೆ ನಿರ್ವಾಹಕರು, ಸ್ಥಳೀಯ ಅಂಗಡಿಯವರು ಮತ್ತು ಟ್ರಕ್ ಚಾಲಕರು - ಎಲ್ಲರಿಗೂ ಕೆಲಸ ಸಿಗುತ್ತದೆ. ಇದರ ಮೂಲಕ ಸೃಷ್ಟಿಯಾದ ಅಗಾಧ ಸಂಖ್ಯೆಯ ಉದ್ಯೋಗಗಳನ್ನು ಊಹಿಸಿ! ಇನ್ನೂ ಹೆಚ್ಚಿನ ಸಂತೋಷದ ಸಂಗತಿಯೆಂದರೆ, ಈ ಉದ್ಯೋಗಗಳಲ್ಲಿ ಹೆಚ್ಚಿನವು ಗ್ರಾಮೀಣ ಪ್ರದೇಶಗಳಲ್ಲಿವೆ, ಆದ್ದರಿಂದ ಜನರು ನಗರಗಳಿಗೆ ವಲಸೆ ಹೋಗುವ ಅಗತ್ಯವಿಲ್ಲ. ಅದೇ ರೀತಿ, ದೇಶಾದ್ಯಂತ 12 ಕೋಟಿ ಹೊಸ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದು ನಿರ್ಮಾಣ ಕ್ಷೇತ್ರದಲ್ಲಿ ಮಾತ್ರವಲ್ಲದೆ ನಮ್ಮ ವಿಶ್ವಕರ್ಮ ಸಮುದಾಯದ ಪ್ಲಂಬರ್‌ಗಳು, ಬಡಗಿಗಳು ಮತ್ತು ನುರಿತ ಕೆಲಸಗಾರರಿಗೂ ಕೆಲಸವನ್ನು ಸೃಷ್ಟಿಸಿದೆ. ಉದ್ಯೋಗ ಸೃಷ್ಟಿ ಹೇಗೆ ವಿಸ್ತರಿಸುತ್ತದೆ ಮತ್ತು ನಿಜವಾದ ಪರಿಣಾಮವನ್ನು ಬೀರುತ್ತದೆ ಎಂಬುದಕ್ಕೆ ಇದು ಉದಾಹರಣೆ. ಅದೇ ರೀತಿ, ಉಜ್ವಲ ಯೋಜನೆಯಡಿಯಲ್ಲಿ 10 ಕೋಟಿಗೂ ಹೆಚ್ಚು ಹೊಸ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸಲಾಗಿದೆ. ಇದನ್ನು ಬೆಂಬಲಿಸಲು, ಹೆಚ್ಚಿನ ಸಂಖ್ಯೆಯ ಬಾಟಲ್ ಪ್ಲಾಂಟ್‌ಗಳನ್ನು ಸ್ಥಾಪಿಸಲಾಗಿದೆ, ಇದು ಸಿಲಿಂಡರ್ ತಯಾರಕರು, ವಿತರಣಾ ಸಂಸ್ಥೆಗಳು ಮತ್ತು ವಿತರಣಾ ಸಿಬ್ಬಂದಿಗೆ ಉದ್ಯೋಗವನ್ನು ಸೃಷ್ಟಿಸುತ್ತದೆ. ಪ್ರತಿಯೊಂದು ಉಪಕ್ರಮವು - ನೀವು ಸೂಕ್ಷ್ಮವಾಗಿ ಪರಿಶೀಲಿಸಿದರೆ - ಬಹು ಹಂತದ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಅಂತಹ ಉಪಕ್ರಮಗಳಿಂದ ಲಕ್ಷಾಂತರ ಜನರು ಹೊಸ ಉದ್ಯೋಗಗಳನ್ನು ಗಳಿಸಿದ್ದಾರೆ.

ಸ್ನೇಹಿತರೇ,

ನಾನು ಇನ್ನೊಂದು ಯೋಜನೆಯನ್ನು ಉಲ್ಲೇಖಿಸಲು ಬಯಸುತ್ತೇನೆ, ಅದು ನಿಜವಾಗಿಯೂ ದುಪ್ಪಟ್ಟು ಪ್ರಯೋಜನವನ್ನು ತರುತ್ತದೆ - ನಾವು ಹೇಳುವಂತೆ ಪ್ರತಿಯೊಬ್ಬರ ಕೈಯಲ್ಲಿ ಲಡ್ಡು ಇದ್ದಂತೆ. ಆ ಯೋಜನೆ ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ. ಈ ಯೋಜನೆಯಡಿಯಲ್ಲಿ, ಸರ್ಕಾರವು ಪ್ರತಿ ಮನೆಗೆ ಮೇಲ್ಛಾವಣಿಯ ಸೌರ ಫಲಕಗಳನ್ನು ಸ್ಥಾಪಿಸಲು ಸರಾಸರಿ 75,000 ರೂಪಾಯಿಗಳಿಗಿಂತ ಹೆಚ್ಚಿನ ಸಬ್ಸಿಡಿಯನ್ನು ನೀಡುತ್ತಿದೆ. ಇದು ಮೂಲಭೂತವಾಗಿ ನಿಮ್ಮ ಛಾವಣಿಯನ್ನು ವಿದ್ಯುತ್ ಸ್ಥಾವರವನ್ನಾಗಿ ಪರಿವರ್ತಿಸುತ್ತದೆ - ನಿಮ್ಮ ಸ್ವಂತ ಬಳಕೆಗೆ ಮಾತ್ರವಲ್ಲದೆ, ಹೆಚ್ಚುವರಿ ಇದ್ದರೆ ಗ್ರಿಡ್‌ಗೆ ಮಾರಾಟ ಮಾಡಲು ಸಹ ವಿದ್ಯುತ್ ಉತ್ಪಾದಿಸುತ್ತದೆ. ಇದು ವಿದ್ಯುತ್ ಬಿಲ್‌ಗಳನ್ನು ಶೂನ್ಯಕ್ಕೆ ತರುತ್ತದೆ ಮತ್ತು ಕುಟುಂಬಗಳಿಗೆ ಗಮನಾರ್ಹ ಹಣವನ್ನು ಉಳಿಸುತ್ತದೆ. ಸ್ಥಾವರಗಳನ್ನು ಸ್ಥಾಪಿಸಲು ಎಂಜಿನಿಯರ್‌ಗಳು ಮತ್ತು ತಂತ್ರಜ್ಞರು ಅಗತ್ಯವಿದೆ. ಸೌರ ಫಲಕ ಉತ್ಪಾದನಾ ಕಾರ್ಖಾನೆಗಳು ಮತ್ತು ಕಚ್ಚಾ ವಸ್ತುಗಳ ಪೂರೈಕೆದಾರರು ಬೆಳೆಯುತ್ತಿದ್ದಾರೆ. ವಸ್ತುಗಳನ್ನು ಸಾಗಿಸಲು ಸಾರಿಗೆ ನಿರ್ವಾಹಕರನ್ನು ನೇಮಿಸಿಕೊಳ್ಳಲಾಗುತ್ತದೆ. ಈ ವ್ಯವಸ್ಥೆಗಳ ನಿರ್ವಹಣೆ ಮತ್ತು ದುರಸ್ತಿಗಾಗಿ ಒಂದು ಸಂಪೂರ್ಣ ಹೊಸ ಉದ್ಯಮ ಹೊರಹೊಮ್ಮುತ್ತಿದೆ. ಊಹಿಸಿ - ಪ್ರಯೋಜನಗಳು ನಾಗರಿಕರಿಗೆ ಸಹಾಯ ಮಾಡುವುದಲ್ಲದೆ, ಲಕ್ಷಾಂತರ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ.

ಸ್ನೇಹಿತರೇ,

‘ನಮೋ ಡ್ರೋನ್ ದೀದಿ’ ಉಪಕ್ರಮವು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಆದಾಯವನ್ನು ಹೆಚ್ಚಿಸಿದೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಈ ಯೋಜನೆಯಡಿಯಲ್ಲಿ, ಲಕ್ಷಾಂತರ ಗ್ರಾಮೀಣ ಮಹಿಳೆಯರಿಗೆ ಡ್ರೋನ್ ಪೈಲಟ್‌ಗಳಾಗಿ ತರಬೇತಿ ನೀಡಲಾಗುತ್ತಿದೆ. ಲಭ್ಯವಿರುವ ವರದಿಗಳು ನಮ್ಮ ಹಳ್ಳಿಗಳ ತಾಯಂದಿರು ಮತ್ತು ಸಹೋದರಿಯರು ಡ್ರೋನ್ ಆಧಾರಿತ ಕೃಷಿ ಸೇವೆಗಳನ್ನು ಒಪ್ಪಂದದ ಆಧಾರದ ಮೇಲೆ ನೀಡುವ ಮೂಲಕ ಒಂದೇ ಕೃಷಿ ಋತುವಿನಲ್ಲಿ ಲಕ್ಷಾಂತರ ರೂಪಾಯಿಗಳನ್ನು ಗಳಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತವೆ. ಅಷ್ಟೇ ಅಲ್ಲ, ಈ ಉಪಕ್ರಮವು ದೇಶದಲ್ಲಿ ಡ್ರೋನ್ ಉತ್ಪಾದನಾ ವಲಯಕ್ಕೆ ದೊಡ್ಡ ಉತ್ತೇಜನವನ್ನು ನೀಡುತ್ತಿದೆ. ಕೃಷಿಯಲ್ಲಾಗಲಿ ಅಥವಾ ರಕ್ಷಣೆಯಲ್ಲಾಗಲಿ, ಡ್ರೋನ್ ಉತ್ಪಾದನೆಯು ನಮ್ಮ ದೇಶದ ಯುವಜನರಿಗೆ ಹೊಸ ಅವಕಾಶಗಳನ್ನು, ಮಾರ್ಗಗಳನ್ನು ತೆರೆಯುತ್ತಿದೆ.

ಸ್ನೇಹಿತರೇ,

3 ಕೋಟಿ ಲಕ್ಷಪತಿ ದೀದಿಗಳನ್ನು ಸೃಷ್ಟಿಸುವ ಅಭಿಯಾನ ನಡೆಯುತ್ತಿದೆ. ಇವರಲ್ಲಿ 1.5 ಕೋಟಿ ಮಹಿಳೆಯರು ಈಗಾಗಲೇ ಈ ಮೈಲಿಗಲ್ಲು ಸಾಧಿಸಿದ್ದಾರೆ. ಮತ್ತು ನಿಮಗೆ ತಿಳಿದಿರುವಂತೆ, ಲಕ್ಷಪತಿ ದೀದಿಯಾಗುವುದು ಎಂದರೆ ಪ್ರತಿ ವರ್ಷ ಕನಿಷ್ಠ 1 ಲಕ್ಷ ರೂಪಾಯಿಗಳನ್ನು ನಿರಂತರವಾಗಿ ಗಳಿಸುವುದು - ಒಮ್ಮೆ ಮಾತ್ರವಲ್ಲ. ಅದೇ ಮಾನದಂಡ. 1.5 ಕೋಟಿ ಲಕ್ಷಪತಿ ದೀದಿಗಳು! ಇಂದು, ನೀವು ಹಳ್ಳಿಗಳಿಗೆ ಭೇಟಿ ನೀಡಿದರೆ, ನೀವು ಹೆಚ್ಚಾಗಿ ಬ್ಯಾಂಕ್ ಸಖಿಗಳು, ಬಿಮಾ ಸಖಿಗಳು, ಕೃಷಿ ಸಖಿಗಳು, ಪಶು ಸಖಿಗಳು ಮುಂತಾದ ಪದಗಳನ್ನು ಕೇಳುತ್ತೀರಿ - ಇವು ಹಳ್ಳಿಗಳಲ್ಲಿನ ನಮ್ಮ ತಾಯಂದಿರು ಮತ್ತು ಸಹೋದರಿಯರು ಉದ್ಯೋಗಾವಕಾಶಗಳನ್ನು ಪಡೆದಿರುವ ವಿವಿಧ ಯೋಜನೆಗಳಾಗಿವೆ. ಅದೇ ರೀತಿ, ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿಯಲ್ಲಿ, ಬೀದಿ ವ್ಯಾಪಾರಿಗಳು ಮತ್ತು ಕೈಗಾಡಿ ವ್ಯಾಪಾರಿಗಳಿಗೆ ಮೊದಲ ಬಾರಿಗೆ ಬೆಂಬಲ ನೀಡಲಾಯಿತು. ಲಕ್ಷಾಂತರ ಜನರು ಇದರ ಲಾಭ ಪಡೆದಿದ್ದಾರೆ. ಡಿಜಿಟಲ್ ಪಾವತಿಗಳಿಂದಾಗಿ, ರಸ್ತೆಬದಿಯ ವ್ಯಾಪಾರಿಗಳು ಸಹ ಈಗ ನಗದುಗಿಂತ ಯು.ಪಿ.ಐ.(UPI) ಬಯಸುತ್ತಾರೆ. ಏಕೆ? ಏಕೆಂದರೆ ಅದು ಅವರಿಗೆ ಬ್ಯಾಂಕಿನಿಂದ ಹೆಚ್ಚಿನ ಸಾಲಕ್ಕೆ ತ್ವರಿತ ಪ್ರವೇಶವನ್ನು ನೀಡುತ್ತದೆ. ಬ್ಯಾಂಕುಗಳು ಅವರನ್ನು ಹೆಚ್ಚು ನಂಬುತ್ತವೆ ಮತ್ತು ಅವರಿಗೆ ಕಾಗದಪತ್ರಗಳ ಅಗತ್ಯವಿಲ್ಲ. ಇದರರ್ಥ ವಿನಮ್ರ ಬೀದಿ ವ್ಯಾಪಾರಿ ಕೂಡ ಈಗ ವಿಶ್ವಾಸ ಮತ್ತು ಹೆಮ್ಮೆಯಿಂದ ಮುಂದುವರಿಯುತ್ತಾನೆ. ಉದಾಹರಣೆಗೆ, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ತೆಗೆದುಕೊಳ್ಳಿ. ಇದು ಸಾಂಪ್ರದಾಯಿಕ, ಪೂರ್ವಜರಿಂದ ಬಳುವಳಿಯಾಗಿ ಬಂದ  ಹಾಗು ಕುಟುಂಬ ಆಧಾರಿತ ಕರಕುಶಲ ವಸ್ತುಗಳು ಮತ್ತು ವ್ಯಾಪಾರಗಳನ್ನು ಆಧುನೀಕರಿಸುವ ಮತ್ತು ಮೇಲ್ದರ್ಜೆಗೇರಿಸುವತ್ತ ಗಮನಹರಿಸುತ್ತದೆ. ಇದು  ಆಧುನಿಕ ಉಪಕರಣಗಳನ್ನು ಒದಗಿಸುತ್ತದೆ, ಕರಕುಶಲಕರ್ಮಿಗಳು, ಕುಶಲಕರ್ಮಿಗಳು ಮತ್ತು ಸೇವಾ ಪೂರೈಕೆದಾರರಿಗೆ ತರಬೇತಿ ನೀಡುತ್ತದೆ, ಸುಲಭದಲ್ಲಿ  ಸಾಲಗಳನ್ನು ಒದಗಿಸುತ್ತದೆ. ಬಡವರನ್ನು ಉನ್ನತೀಕರಿಸಲು ಮತ್ತು ಯುವಜನರು ಉದ್ಯೋಗವನ್ನು ಕಂಡುಕೊಂಡಿರುವ ಇಂತಹ ಲೆಕ್ಕವಿಲ್ಲದಷ್ಟು ಯೋಜನೆಗಳಿವೆ. ಈ ಎಲ್ಲಾ ಉಪಕ್ರಮಗಳ ಪರಿಣಾಮವು ಎಷ್ಟು ಮಹತ್ವದ್ದಾಗಿದೆ ಎಂದರೆ, ಕೇವಲ 10 ವರ್ಷಗಳಲ್ಲಿ, 25 ಕೋಟಿ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ. ಅದರ ಬಗ್ಗೆ ಯೋಚಿಸಿ - ಅವರು ಉದ್ಯೋಗವನ್ನು ಕಂಡುಕೊಳ್ಳದಿದ್ದರೆ, ಕುಟುಂಬದಲ್ಲಿ ಯಾವುದೇ ಆದಾಯವಿಲ್ಲದಿದ್ದರೆ, ಮೂರು ಅಥವಾ ನಾಲ್ಕು ತಲೆಮಾರುಗಳಿಂದ ಬಡವನಾಗಿದ್ದ ವ್ಯಕ್ತಿಯು ಆ ಕತ್ತಲೆಯಿಂದ ಹೊರಬರುವುದನ್ನು ಊಹಿಸಿಕೊಳ್ಳಲು ಹೇಗೆ ಸಾಧ್ಯವಿತ್ತು.? ಅವರಿಗೆ, ಪ್ರತಿ ದಿನವೂ ಬದುಕುಳಿಯುವುದೇ ಹೋರಾಟವಾಗಿತ್ತು ಮತ್ತು ಜೀವನವು ಒಂದು ಹೊರೆಯಂತೆ ಭಾಸವಾಗಿರುತ್ತಿತ್ತು. ಆದರೆ ಇಂದು, ಅವರು ತಮ್ಮ ಶಕ್ತಿ ಮತ್ತು ಧೈರ್ಯದಿಂದ ಬಡತನವನ್ನು ಸೋಲಿಸಿದ್ದಾರೆ. ಈ 25 ಕೋಟಿ ಸಹೋದರ ಸಹೋದರಿಯರು ವಿಜಯಶಾಲಿಗಳಾಗಿ ಹೊರಹೊಮ್ಮಿದ್ದಾರೆ ಮತ್ತು ನಾನು ಅವರ ದೃಢಸಂಕಲ್ಪಕ್ಕೆ ವಂದಿಸುತ್ತೇನೆ. ಅವರು ಸರ್ಕಾರದ ಯೋಜನೆಗಳನ್ನು ಸಾಧನಗಳಾಗಿ ಬಳಸಿಕೊಂಡರು, ಸುತ್ತು ಕುಳಿತುಕೊಂಡು  ದೂರು ನೀಡಲಿಲ್ಲ - ಅವರು ಬಡತನದ ವಿರುದ್ಧ ಹೋರಾಡಿದರು, ಅದನ್ನು ಬೇರು ಸಹಿತ ಕಿತ್ತುಹಾಕಿದರು ಮತ್ತು ಅದನ್ನು ಜಯಿಸಿದರು. ಈಗ ಊಹಿಸಿ, ಈ 25 ಕೋಟಿ ಜನರಲ್ಲಿ ಮೂಡಿರುವ  ಹೊಸ ಆತ್ಮ ವಿಶ್ವಾಸ! ಒಬ್ಬ ವ್ಯಕ್ತಿಯು ಬಿಕ್ಕಟ್ಟಿನಿಂದ ಹೊರಬಂದಾಗ , ಹೊಸ ಶಕ್ತಿ ಹೊರಹೊಮ್ಮುತ್ತದೆ. ಈ ಹೊಸ ಶಕ್ತಿ ನನ್ನ ದೇಶದಲ್ಲಿಯೂ ಹೊರಹೊಮ್ಮಿದೆ ಮತ್ತು ಅದು ದೇಶವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮತ್ತು ನಾನು ಒಂದನ್ನು ಸ್ಪಷ್ಟಪಡಿಸುತ್ತೇನೆ- ಇದನ್ನು ಕೇವಲ ಸರ್ಕಾರ ಹೇಳುತ್ತಿರುವುದಲ್ಲ. ಇಂದು, ವಿಶ್ವಬ್ಯಾಂಕ್‌ನಂತಹ ಜಾಗತಿಕ ಸಂಸ್ಥೆಗಳು ಭಾರತವನ್ನು ಈ ಸಾಧನೆಗಾಗಿ ಬಹಿರಂಗವಾಗಿ ಹೊಗಳುತ್ತಿವೆ. ಜಗತ್ತು ಭಾರತವನ್ನು ಮಾದರಿಯಾಗಿ ಪ್ರಸ್ತುತಪಡಿಸುತ್ತಿದೆ. ಸಮಾನತೆಯ ವಿಷಯದಲ್ಲಿ ಭಾರತವು ಈಗ ವಿಶ್ವದ ಅಗ್ರ ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ - ಅಂದರೆ ಅಸಮಾನತೆ ವೇಗವಾಗಿ ಕಡಿಮೆಯಾಗುತ್ತಿದೆ ಮತ್ತು ನಾವು ಹೆಚ್ಚಿನ ಸಮಾನತೆಯತ್ತ ಸಾಗುತ್ತಿದ್ದೇವೆ. ಜಗತ್ತು ಈಗ ಈ ರೂಪಾಂತರವನ್ನು ಗಮನಿಸುತ್ತಿದೆ.

ಸ್ನೇಹಿತರೇ,

ಪ್ರಸ್ತುತ ನಡೆಯುತ್ತಿರುವ ಅಭಿವೃದ್ಧಿಯ ಮಹಾನ್ ಆಂದೋಲನ, ಬಡವರ ಕಲ್ಯಾಣ ಮತ್ತು ಉದ್ಯೋಗ ಸೃಷ್ಟಿಗಾಗಿ ಚಳುವಳಿ - ಇಂದಿನಿಂದ ಅದನ್ನು ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿಯನ್ನು ನೀವು ಹಂಚಿಕೊಳ್ಳುತ್ತೀರಿ. ಸರ್ಕಾರ ಎಂದಿಗೂ ಅಡಚಣೆಯಾಗಬಾರದು; ಅದು ಯಾವಾಗಲೂ ಬೆಳವಣಿಗೆಗೆ ಅನುಕೂಲ ಮಾಡಿಕೊಡಬೇಕು. ಪ್ರತಿಯೊಬ್ಬ ವ್ಯಕ್ತಿಯು ಮುಂದುವರಿಯಲು ಅವಕಾಶಕ್ಕೆ ಅರ್ಹರು. ಸಹಾಯ ಹಸ್ತ ಚಾಚುವುದು ನಮ್ಮ ಪಾತ್ರ. ಮತ್ತು ನೀವು, ನನ್ನ ಸ್ನೇಹಿತರು, ಯುವಜನರು. ನನಗೆ ನಿಮ್ಮ ಮೇಲೆ ಅಪಾರ ನಂಬಿಕೆ ಇದೆ. ನನಗೆ ನಿಮ್ಮಿಂದ ಹೆಚ್ಚಿನ ನಿರೀಕ್ಷೆಗಳಿವೆ. ನಿಮ್ಮನ್ನು ಎಲ್ಲೇ ನಿಯೋಜಿಸಿದರೂ, ನೀವು ಸದಾ ನಾಗರಿಕರಿಗೆ ಮೊದಲ ಸ್ಥಾನ ನೀಡಬೇಕು. ಅವರಿಗೆ ಸಹಾಯ ಮಾಡುವುದು, ಅವರ ಕಷ್ಟಗಳನ್ನು ನಿವಾರಿಸುವುದು –ಅದರಿಂದ ಮಾತ್ರ ರಾಷ್ಟ್ರವನ್ನು ವೇಗವಾಗಿ ಮುನ್ನಡೆಸಲು ಸಾಧ್ಯವಾಗುತ್ತದೆ. ನೀವು ಭಾರತದ ಅಮೃತ ಕಾಲದಲ್ಲಿ ಸಕ್ರಿಯವಾಗಿ ಭಾಗವಹಿಸುವವರಾಗಬೇಕು - ಈ ಅವಕಾಶದ ಸುವರ್ಣ ಅವಧಿ. ಮುಂದಿನ 20 ರಿಂದ 25 ವರ್ಷಗಳು, ನಿಮ್ಮ ವೃತ್ತಿಜೀವನಕ್ಕೆ ಮಾತ್ರವಲ್ಲ, ಇಡೀ ದೇಶದ ಭವಿಷ್ಯಕ್ಕೂ ನಿರ್ಣಾಯಕವಾಗಿವೆ. ಇವು 'ವಿಕಸಿತ ಭಾರತ' (ಅಭಿವೃದ್ಧಿ ಹೊಂದಿದ ಭಾರತ) ನಿರ್ಮಿಸಲು ನಿರ್ಣಾಯಕ ವರ್ಷಗಳು. ಅದಕ್ಕಾಗಿಯೇ, ನಿಮ್ಮ ಕೆಲಸ, ನಿಮ್ಮ ಕರ್ತವ್ಯಗಳು ಮತ್ತು ನಿಮ್ಮ ಗುರಿಗಳನ್ನು 'ವಿಕಸಿತ ಭಾರತ'ವನ್ನು ರಚಿಸುವ ಸಂಕಲ್ಪದೊಂದಿಗೆ ಜೋಡಿಸಬೇಕು. 'ನಾಗರಿಕ ದೇವೋ ಭವೋ' (ನಾಗರಿಕನೇ ದೇವರು) ಎಂಬ ಮಂತ್ರವು ನಿಮ್ಮ ರಕ್ತನಾಳಗಳಲ್ಲಿ ಹರಿಯಬೇಕು, ನಿಮ್ಮ ಹೃದಯ ಮತ್ತು ಮನಸ್ಸಿನಲ್ಲಿ ನೆಲೆಸಬೇಕು ಮತ್ತು ನಿಮ್ಮ ವರ್ತನೆ ಮತ್ತು ನಡವಳಿಕೆಯಲ್ಲಿ ಪ್ರತಿಫಲಿಸಬೇಕು. ಮತ್ತು ನನ್ನ ಸ್ನೇಹಿತರೇ, ಕಳೆದ 10 ವರ್ಷಗಳಿಂದ ಈ ಯುವ ಶಕ್ತಿ ದೇಶವನ್ನು ಮುನ್ನಡೆಸುವಲ್ಲಿ ನನ್ನೊಂದಿಗೆ ನಿಂತಿದೆ ಎಂಬುದರ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಅವರು ನನ್ನ ಪ್ರತಿಯೊಂದು ಮಾತುಗಳನ್ನು ಹೃದಯಕ್ಕೆ ತೆಗೆದುಕೊಂಡು ದೇಶಕ್ಕಾಗಿ ತಮ್ಮಿಂದ ಸಾಧ್ಯವಾದದ್ದನ್ನು ಮಾಡಿದ್ದಾರೆ - ಅವರು ಎಲ್ಲಿದ್ದರೂ, ಯಾವುದೇ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಅದನ್ನು ಮಾಡಿದ್ದಾರೆ. ಈಗ ನಿಮಗೆ ಈ ಅವಕಾಶ ನೀಡಲಾಗಿದೆ, ನಿಮ್ಮಿಂದ ನಿರೀಕ್ಷೆಗಳು ಹೆಚ್ಚಿವೆ. ನಿಮ್ಮ ಜವಾಬ್ದಾರಿ ಹೆಚ್ಚಾಗಿದೆ. ಮತ್ತು ನಾನು ನಂಬುತ್ತೇನೆ - ನೀವು ಸಂದರ್ಭಕ್ಕೆ ತಕ್ಕಂತೆ ಎದ್ದು ನಿಂತು ಅದನ್ನು ಸಾಧಿಸುವಿರಿ. ಮತ್ತೊಮ್ಮೆ, ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಉಜ್ವಲ ಮತ್ತು ಸಮೃದ್ಧ ಭವಿಷ್ಯಕ್ಕೆ ಅರ್ಹರಾಗಿರುವ ನಿಮ್ಮ ಕುಟುಂಬಗಳಿಗೆ ನಾನು ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ನೀವೆಲ್ಲರೂ ಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುವಂತಾಗಲಿ. ಐ.ಜಿ.ಒ.ಟಿ (iGOT) ವೇದಿಕೆಯ ಮೂಲಕ ನಿರಂತರವಾಗಿ ನಿಮ್ಮನ್ನು ಉನ್ನತೀಕರಿಸುತ್ತಾ ಹೋಗಿ. ಈಗ ನೀವು ನಿಮ್ಮ ಸ್ಥಾನವನ್ನು ಪಡೆದುಕೊಂಡಿದ್ದೀರಿ, ಹಿಂದೆ ಕುಳಿತುಕೊಳ್ಳಬೇಡಿ. ದೊಡ್ಡ ಕನಸು ಕಾಣಿರಿ, ಉನ್ನತ ಗುರಿಯನ್ನು ಹೊಂದಿರಿ. ಕಠಿಣ ಪರಿಶ್ರಮ, ನಿರಂತರ ಕಲಿಕೆ ಮತ್ತು ಹೊಸ ಫಲಿತಾಂಶಗಳನ್ನು ತರುವ ಮೂಲಕ, ಮುಂದುವರಿಯಿರಿ. ನಿಮ್ಮ ಪ್ರಗತಿ ದೇಶದ ಹೆಮ್ಮೆ ಮತ್ತು ನಿಮ್ಮ ಬೆಳವಣಿಗೆ ನನ್ನ ತೃಪ್ತಿ. ಅದಕ್ಕಾಗಿಯೇ, ಇಂದು, ನೀವು ಜೀವನದಲ್ಲಿ ಈ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ, ನಿಮ್ಮೊಂದಿಗೆ ಮಾತನಾಡಲು, ನಿಮ್ಮನ್ನು ಆಶೀರ್ವದಿಸಲು ಮತ್ತು ಅನೇಕ ಕನಸುಗಳನ್ನು ಈಡೇರಿಸುವಲ್ಲಿ ನನ್ನ ಪಾಲುದಾರನಾಗಿ ನಿಮ್ಮನ್ನು ಸ್ವಾಗತಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಒಬ್ಬ ಆಪ್ತ ಮತ್ತು ವಿಶ್ವಾಸಾರ್ಹ ಒಡನಾಡಿಯಾಗಿ, ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ತುಂಬಾ ಧನ್ಯವಾದಗಳು, ಮತ್ತು ನಿಮ್ಮೆಲ್ಲರಿಗೂ ಶುಭಾಶಯಗಳು.

ಹಕ್ಕು ನಿರಾಕರಣೆ - ಇದು ಪ್ರಧಾನಮಂತ್ರಿಯವರ ಹೇಳಿಕೆಯ ಸರಿಸುಮಾರಾದ ಭಾಷಾಂತರವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

 

*****


(Release ID: 2144467)