ರೈಲ್ವೇ ಸಚಿವಾಲಯ
azadi ka amrit mahotsav

ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ಕೋಚ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ರೈಲ್ವೆ ನಿರ್ಧಾರ


ಹೆಚ್ಚಿನ ಸುರಕ್ಷತೆಗಾಗಿ 74,000 ಕೋಚ್ ಗಳು ಮತ್ತು 15,000 ಲೋಕೋಗಳಲ್ಲಿ ಸಿಸಿಟಿವಿ ಅಳವಡಿಕೆ

ಪ್ರತಿ ಕೋಚ್ ಗೆ 4 ಸಿಸಿಟಿವಿ ಕ್ಯಾಮೆರಾ, ಲೋಕೋಮೋಟಿವ್ ಗಳಿಗೆ 6 ಕ್ಯಾಮೆರಾಗಳನ್ನು ಅಳವಡಿಸಲು ರೈಲ್ವೆ ನಿರ್ಧಾರ

ಪ್ರತಿ ಗಂಟೆಗೆ 100 ಕಿ.ಮೀ. ವೇಗ ಹಾಗೂ ಕಡಿಮೆ ಬೆಳಕಿನ ಸಂದರ್ಭದಲ್ಲಿಯೂ ಉತ್ತಮ ಗುಣಮಟ್ಟದ ದೃಶ್ಯಾವಳಿಗಳನ್ನು ನೀಡಬಲ್ಲ ಕ್ಯಾಮೆರಾಗಳನ್ನು ಅಳಡಿಸಲು ಕ್ರಮ

Posted On: 13 JUL 2025 4:02PM by PIB Bengaluru

ಪ್ರಯಾಣಿಕರ ಕೋಚ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಪ್ರಾಯೋಗಿಕ ಅಳವಡಿಕೆಯ ಸಕಾರಾತ್ಮಕ ಫಲಿತಾಂಶದ ಆಧಾರದ ಮೇಲೆ, ರೈಲ್ವೆ ಇಲಾಖೆಯು ಎಲ್ಲಾ ಕೋಚ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದೆ. ಈ ಕ್ರಮವು ಪ್ರಯಾಣಿಕರ ಸುರಕ್ಷತೆಯನ್ನು ಗಮನಾರ್ಹ ರೀತಿಯಲ್ಲಿ ಸುಧಾರಿಸಲಿದೆ. ದುಷ್ಕರ್ಮಿಗಳು ಮತ್ತು ಸಂಘಟಿತ ಕಳ್ಳರ ಗುಂಪುಗಳು ಮುಗ್ಧ ಪ್ರಯಾಣಿಕರ ಲಾಭ ಪಡೆಯುತ್ತಿವೆ. ಕ್ಯಾಮೆರಾ ಅವಳವಡಿಕೆಯಿಂದ ಅಂತಹ ಘಟನೆಗಳು ಗಣನೀಯವಾಗಿ ಕಡಿಮೆಯಾಗಲಿದೆ. ಪ್ರಯಾಣಿಕರ ಗೌಪ್ಯತೆಯನ್ನು ಕಾಪಾಡುವ ಸಲುವಾಗಿ, ಬಾಗಿಲುಗಳ ಬಳಿ ಇರುವ ಸಾಮಾನ್ಯ ಸಂಚಾರ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು.

ಶನಿವಾರ, ಜುಲೈ 12, 2025 ರಂದು ನಡೆದ ಸಭೆಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ರವನೀತ್ ಸಿಂಗ್ ಬಿಟ್ಟು, ಲೋಕೋಮೋಟಿವ್ ಗಳು ಮತ್ತು ಕೋಚ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯ ಪ್ರಗತಿಯನ್ನು ಪರಿಶೀಲಿಸಿದರು. ಸಭೆಯಲ್ಲಿ ರೈಲ್ವೆ ಮಂಡಳಿಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

360 ಡಿಗ್ರಿಯ ಕೇಂದ್ರೀಕೃತ ವ್ಯಾಪ್ತಿ

360 ಡಿಗ್ರಿ ಸಮಗ್ರ ವ್ಯಾಪ್ತಿ ರೈಲ್ವೆ ಅಧಿಕಾರಿಗಳು ಉತ್ತರ ರೈಲ್ವೆಯ ಲೋಕೋ ಎಂಜಿನ್ ಗಳು ಮತ್ತು ಕೋಚ್ ಗಳಲ್ಲಿ ಯಶಸ್ವಿ ಪ್ರಯೋಗಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದರು. ಕೇಂದ್ರ ರೈಲ್ವೆ ಸಚಿವರು ಎಲ್ಲಾ 74,000 ಕೋಚ್ ಗಳು ಮತ್ತು 15,000 ಲೋಕೋಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಅನುಮತಿ ನೀಡಿದ್ದಾರೆ. ಪ್ರತಿ ರೈಲ್ವೆ ಕೋಚ್ ಗೆ 4 ಡೋಮ್ ಮಾದರಿಯ ಸಿಸಿಟಿವಿ ಕ್ಯಾಮೆರಾಗಳು - ಪ್ರತಿ ಪ್ರವೇಶ ದ್ವಾರದಲ್ಲಿ 2 ಕ್ಯಾಮೆರಾಗಳು - ಮತ್ತು ಪ್ರತಿ ಲೋಕೋಮೋಟಿವ್ ಗೆ 6 ಸಿಸಿಟಿವಿ ಕ್ಯಾಮೆರಾಗಳು ಅಳವಡಿಸಲಾಗುತ್ತದೆ. ಇದರಲ್ಲಿ ಲೋಕೋಮೋಟಿವ್ ನ ಮುಂಭಾಗ, ಹಿಂಭಾಗ ಮತ್ತು ಎರಡೂ ಬದಿಗಳಲ್ಲಿ ತಲಾ 1 ಕ್ಯಾಮೆರಾ ಅಳವಡಿಸಲಾಗುವುದು. ಲೋಕೋಮೋಟಿವ್ ನ ಪ್ರತಿ ಕ್ಯಾಬ್ (ಮುಂಭಾಗ ಮತ್ತು ಹಿಂಭಾಗ) 1 ಡೋಮ್ ಸಿಸಿಟಿವಿ ಕ್ಯಾಮೆರಾ ಮತ್ತು 2 ಡೆಸ್ಕ್ ಮೌಂಟೆಡ್ ಮೈಕ್ರೊಫೋನ್ ಗಳನ್ನು ಅಳವಡಿಸಲಾಗುವುದು.

ಆಧುನಿಕ ಸಮಸ್ಯೆಗಳಿಗೆ ಆಧುನಿಕ ಕಣ್ಗಾವಲು

ಸಿಸಿಟಿವಿ ಕ್ಯಾಮೆರಾಗಳು ಇತ್ತೀಚಿನ ಆಧುನಿಕ ವಿಶೇಷತೆಗಳನ್ನು ಹೊಂದಿರುತ್ತವೆ ಮತ್ತು ಎ.ಸ್ಟಿ.ಕ್ಯೂ.ಸಿ (STQC) ಪ್ರಮಾಣೀಕೃತವಾಗಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತ್ಯುತ್ತಮ ದರ್ಜೆಯ ಉಪಕರಣಗಳನ್ನು ಅಳವಡಿಸಲು ಕೇಂದ್ರ ರೈಲ್ವೆ ಸಚಿವರು ಒತ್ತಾಯಿಸಿದ್ದಾರೆ. ಪ್ರತಿ ಗಂಟೆಗೆ 100 ಕಿ.ಮೀ ಹೆಚ್ಚಿನ ವೇಗದಲ್ಲಿ ಚಲಿಸುವ ರೈಲುಗಳಿಗೆ ಮತ್ತು ಕಡಿಮೆ ಬೆಳಕಿನ ಪರಿಸ್ಥಿತಿಗಳಲ್ಲಿಯೂ ಉತ್ತಮ ಗುಣಮಟ್ಟದ ದೃಶ್ಯಾವಳಿ ಲಭ್ಯವಾಗುವಂತಹ  ಕ್ಯಾಮೆರಾಗಳ  ಅಳವಡಿಕೆಯಾಗಬೇಕು ಎಂದು ರೈಲ್ವೆ ಅಧಿಕಾರಿಗಳಿಗೆ ಅವರು ಒತ್ತಾಯಿಸಿದರು. ಇಂಡಿಯಾ ಎಐ (IndiaAI) ಮಿಷನ್ ನ ಸಹಯೋಗದೊಂದಿಗೆ ಸಿಸಿಟಿವಿ ಕ್ಯಾಮೆರಾಗಳು ಸೆರೆಹಿಡಿದ ಡೇಟಾಗಳಲ್ಲಿ ಎಐ (AI) ಬಳಕೆಯನ್ನು ಮಾಡುವಂತೆ ಕೇಂದ್ರ ರೈಲ್ವೆ ಸಚಿವರು ಅಧಿಕಾರಿಗಳನ್ನು ಪ್ರೋತ್ಸಾಹಿಸಿದರು.

ಡೇಟಾ ಗೌಪ್ಯತೆಗೆ ಆದ್ಯತೆ

ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಸುಧಾರಿಸುವ ಉದ್ದೇಶದಿಂದ ಕೋಚ್ ಗಳ ಸಾಮಾನ್ಯ ಸಂಚಾರ ಪ್ರದೇಶಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವ ನಿರ್ಧಾರವನ್ನು ಮಾಡಲಾಗಿದೆ. ಗೌಪ್ಯತೆಯನ್ನು ಕಾಪಾಡುವುದರ ಜೊತೆಗೆ ಈ ಕ್ಯಾಮೆರಾಗಳು ದುಷ್ಕರ್ಮಿಗಳನ್ನು ಗುರುತಿಸಲು ಸಹಾಯ ಮಾಡುತ್ತವೆ. ಭಾರತೀಯ ರೈಲ್ವೆಯ ಆಧುನೀಕರಣದ ಪ್ರಯತ್ನಗಳು ಸುರಕ್ಷಿತ, ಸುಭದ್ರ ಮತ್ತು ಪ್ರಯಾಣಿಕ ಸ್ನೇಹಿ ಪ್ರಯಾಣದ ಅನುಭವಕ್ಕೆ ಅದರ ಬದ್ಧತೆಯ ಪ್ರತಿಬಿಂಬವಾಗಿದೆ.

 

*****
 


(Release ID: 2144387)