ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬ್ರೆಜಿಲ್ ಅಧ್ಯಕ್ಷರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ

Posted On: 09 JUL 2025 12:54AM by PIB Bengaluru

ಗೌರವಾನ್ವಿತರೇ, ನನ್ನ ಆತ್ಮೀಯ ಸ್ನೇಹಿತ ಅಧ್ಯಕ್ಷ ಲೂಲಾ ಅವರೇ, 
ಉಭಯ ದೇಶಗಳ ನಿಯೋಗದ ಸದಸ್ಯರೇ, 
ಮಾಧ್ಯಮ ಸ್ನೇಹಿತರೇ,


ನಮಸ್ಕಾರ,
"ಬೋವಾ ತಾರ್ದೆ!" (ಶುಭ ಸಂಜೆ!)

ನನ್ನ ಸ್ನೇಹಿತರಾದ ಅಧ್ಯಕ್ಷ ಲೂಲಾ ಅವರಿಗೆ ರಿಯೊ ಮತ್ತು ಬ್ರೆಸಿಲಿಯಾದಲ್ಲಿ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ನಾನು ಹೃತ್ಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತೇನೆ. ಅಮೆಜಾನ್ ನ ಸೌಂದಯರ್ಯ  ಮತ್ತು ನಿಮ್ಮ ಸೌಜನ್ಯದಿಂದ ನಾವು ನಿಜಕ್ಕೂ ಪುಳಕಿತರಾಗಿದ್ದೇವೆ.

ಇಂದು ಬ್ರೆಜಿಲ್ ಅಧ್ಯಕ್ಷರಿಂದ ಬ್ರೆಜಿಲ್ ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ನನಗೆ ಮಾತ್ರವಲ್ಲದೆ 140 ಕೋಟಿ ಭಾರತೀಯರಿಗೆ ಅತೀವ ಹೆಮ್ಮೆ ಮತ್ತು ಭಾವನಾತ್ಮಕ ಕ್ಷಣವಾಗಿದೆ. ಈ ಗೌರವಕ್ಕಾಗಿ ಅಧ್ಯಕ್ಷರಿಗೆ, ಬ್ರೆಜಿಲ್ ಸರ್ಕಾರಕ್ಕೆ ಮತ್ತು ಬ್ರೆಜಿಲ್ ಜನರಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇನೆ.

ಸ್ನೇಹಿತರೇ,

ನನ್ನ ಸ್ನೇಹಿತ ಅಧ್ಯಕ್ಷ ಲೂಲಾ ಅವರು ಭಾರತ ಮತ್ತು ಬ್ರೆಜಿಲ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ರೂವಾರಿ. ನಮ್ಮ ಸಂಬಂಧಗಳನ್ನು ಗಾಢವಾಗಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ.

ಅವರೊಂದಿಗಿನ ಪ್ರತಿ ಭೇಟಿಯೂ ನಮ್ಮ ಎರಡೂ ರಾಷ್ಟ್ರಗಳ ಪ್ರಗತಿ ಮತ್ತು ಕಲ್ಯಾಣಕ್ಕಾಗಿ ಹೆಚ್ಚು ಶ್ರಮಿಸಲು ನನಗೆ ಪ್ರೇರಣೆ ನೀಡಿದೆ. ಭಾರತದ ಬಗೆಗಿನ ಅವರ ದೃಢವಾದ ಬದ್ಧತೆ ಮತ್ತು ನಮ್ಮ ಶಾಶ್ವತ ಸ್ನೇಹಕ್ಕೆ ನಾನು ಈ ಗೌರವವನ್ನು ಅರ್ಪಿಸುತ್ತೇನೆ.

ಸ್ನೇಹಿತರೇ,

ಇಂದಿನ ನಮ್ಮ ಚರ್ಚೆಗಳಲ್ಲಿ, ಎಲ್ಲಾ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸಲು ನಾವು ಒಪ್ಪಿಕೊಂಡಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು 20 ಶತಕೋಟಿ ಡಾಲರ್ ಗೆ ಹೆಚ್ಚಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ಕ್ರಿಕೆಟ್ ಭಾರತೀಯರಿಗೆ ಹೇಗೆ ಇಷ್ಟವೋ, ಹಾಗೆಯೇ ಫುಟ್ ಬಾಲ್ ಬ್ರೆಜಿಲ್ ನ ಹೆಮ್ಮೆಯಾಗಿದೆ. ಚೆಂಡನ್ನು ಬೌಂಡರಿ ದಾಟಿಸುವುದಿರಲಿ ಅಥವಾ ಗೋಲು ಪೆಟ್ಟಿಗೆಗೆ ಸೇರಿಸುವುದಿರಲಿ, ಇಬ್ಬರೂ ಒಂದೇ ತಂಡದಲ್ಲಿದ್ದಾಗ, 20 ಶತಕೋಟಿ ಡಾಲರ್ ಪಾಲುದಾರಿಕೆಯನ್ನು ಸಾಧಿಸುವುದು ಕಷ್ಟವೇನಲ್ಲ. ಒಟ್ಟಾಗಿ, ನಾವು ಭಾರತ-ಮೆರ್ಕೊಸೂರ್ (MERCOSUR) ಆದ್ಯತೆಯ ವ್ಯಾಪಾರ ಒಪ್ಪಂದ (PTA) ವನ್ನು ವಿಸ್ತರಿಸುವ ನಿಟ್ಟಿನಲ್ಲಿಯೂ ಕೆಲಸ ಮಾಡುತ್ತೇವೆ.

ಸ್ನೇಹಿತರೇ,

ಇಂಧನ ಕ್ಷೇತ್ರದಲ್ಲಿ ನಮ್ಮ ಸಹಕಾರ ನಿರಂತರವಾಗಿ ಬೆಳೆಯುತ್ತಿದೆ. ನಮ್ಮ ಎರಡೂ ದೇಶಗಳು ಪರಿಸರ ಮತ್ತು ಸ್ವಚ್ಛ ಇಂಧನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತವೆ. ಈ ಕ್ಷೇತ್ರದಲ್ಲಿ ಸಹಯೋಗವನ್ನು ಹೆಚ್ಚಿಸಲು ಇಂದು ಸಹಿ ಮಾಡಲಾದ ಒಪ್ಪಂದವು ನಮ್ಮ ಹಸಿರು ಗುರಿಗಳಿಗೆ ಹೊಸ ದಿಕ್ಕು ಮತ್ತು ಉತ್ತೇಜನ ನೀಡಲಿದೆ. ಈ ವರ್ಷದ ಕೊನೆಯಲ್ಲಿ ಬ್ರೆಜಿಲ್ ನಲ್ಲಿ ನಡೆಯಲಿರುವ COP-30 ಶೃಂಗಸಭೆಗಾಗಿ ಅಧ್ಯಕ್ಷ ಲೂಲಾ ಅವರಿಗೆ ನನ್ನ ಶುಭ ಹಾರೈಕೆಗಳು.

ಸ್ನೇಹಿತರೇ,

ರಕ್ಷಣಾ ಕ್ಷೇತ್ರದಲ್ಲಿ ನಮ್ಮ ಹೆಚ್ಚುತ್ತಿರುವ ಸಹಕಾರವು ನಮ್ಮ ಎರಡೂ ದೇಶಗಳ ನಡುವಿನ ಆಳವಾದ ಪರಸ್ಪರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ರಕ್ಷಣಾ ಕೈಗಾರಿಕೆಗಳನ್ನು ಸಂಪರ್ಕಿಸಲು ಮತ್ತು ಈ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ನಾವು ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ.

ಕೃತಕ ಬುದ್ಧಿಮತ್ತೆ (Artificial Intelligence) ಮತ್ತು ಸೂಪರ್ ಕಂಪ್ಯೂಟರ್ ಗಳ ಕ್ಷೇತ್ರಗಳಲ್ಲಿ ನಮ್ಮ ಸಹಯೋಗ ವಿಸ್ತರಿಸುತ್ತಿದೆ. ಇದು ಸಮಗ್ರ ಅಭಿವೃದ್ಧಿ ಮತ್ತು ಮಾನವ ಕೇಂದ್ರಿತ ಆವಿಷ್ಕಾರದ ನಮ್ಮ ಹಂಚಿಕೆಯ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.

ಬ್ರೆಜಿಲ್ ನಲ್ಲಿ ಯುಪಿಐ (UPI) ಅಳವಡಿಕೆ ಕುರಿತು ಉಭಯ ದೇಶಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (Digital Public Infrastructure) ಮತ್ತು ಬಾಹ್ಯಾಕಾಶದಂತಹ ಕ್ಷೇತ್ರಗಳಲ್ಲಿ ಭಾರತದ ಯಶಸ್ವಿ ಅನುಭವವನ್ನು ಬ್ರೆಜಿಲ್ ನೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ.

ಕೃಷಿ ಮತ್ತು ಪಶುಸಂಗೋಪನೆ ಕ್ಷೇತ್ರಗಳಲ್ಲಿ ನಮ್ಮ ಸಹಕಾರ ಹಲವಾರು ದಶಕಗಳಿಂದಲೂ ಇದೆ. ಕೃಷಿ ಸಂಶೋಧನೆ ಮತ್ತು ಆಹಾರ ಸಂಸ್ಕರಣೆಯಂತಹ ಕ್ಷೇತ್ರಗಳಲ್ಲಿಯೂ ನಾವು ಈಗ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಆರೋಗ್ಯ ಕ್ಷೇತ್ರದಲ್ಲಿಯೂ, ನಾವು ನಮ್ಮ ಗೆಲುವು-ಗೆಲುವು ಸಹಯೋಗವನ್ನು ಹೆಚ್ಚಿಸುತ್ತಿದ್ದೇವೆ. ಬ್ರೆಜಿಲ್ ನಲ್ಲಿ ಆಯುರ್ವೇದ ಮತ್ತು ಸಾಂಪ್ರದಾಯಿಕ ವೈದ್ಯಕೀಯದ ವಿಸ್ತರಣೆಗೂ ನಾವು ಒತ್ತು ನೀಡಿದ್ದೇವೆ.

ಸ್ನೇಹಿತರೇ,

ನಮ್ಮ ಸಂಬಂಧಗಳಿಗೆ ಜನ-ಜನರ ನಡುವಿನ ಬಾಂಧವ್ಯವು ಅತ್ಯಂತ ಮಹತ್ವದ ಆಧಾರಸ್ತಂಭವಾಗಿದೆ. ಎರಡೂ ದೇಶಗಳಲ್ಲಿ ಕ್ರೀಡೆಯ ಬಗ್ಗೆ ಇರುವ ನಮ್ಮ ಹಂಚಿಕೆಯ ಉತ್ಸಾಹವು ನಮ್ಮನ್ನು ದೃಢವಾಗಿ ಬೆಸೆಯುವ ಶಕ್ತಿಯುತ ಕೊಂಡಿಯಾಗಿದೆ.

ಭಾರತ-ಬ್ರೆಜಿಲ್ ಸಂಬಂಧಗಳು ಕಾರ್ನಿವಲ್ ನಷ್ಟು ಉತ್ಸಾಹಭರಿತವಾಗಿ, ಫುಟ್ ಬಾಲ್ ನಷ್ಟು ಭಾವನಾತ್ಮಕವಾಗಿ, ಮತ್ತು ಸಾಂಬಾದಷ್ಟು ಹೃದಯಗಳನ್ನು ಬೆಸೆಯುವಂತಿರಲಿ – ಇದೆಲ್ಲವೂ ವೀಸಾ ಕೌಂಟರ್ ಗಳಲ್ಲಿ ಉದ್ದನೆಯ ಕ್ಯೂ ನಿಲ್ಲುವ ತೊಂದರೆಯಿಲ್ಲದೆ! ಈ ಸ್ಪೂರ್ತಿಯೊಂದಿಗೆ, ನಮ್ಮ ಎರಡೂ ರಾಷ್ಟ್ರಗಳ ನಡುವೆ, ವಿಶೇಷವಾಗಿ ಪ್ರವಾಸಿಗರು, ವಿದ್ಯಾರ್ಥಿಗಳು, ಕ್ರೀಡಾಪಟುಗಳು ಮತ್ತು ವ್ಯಾಪಾರಸ್ಥರಿಗೆ ಜನ-ಜನರ ವಿನಿಮಯವನ್ನು ಸುಲಭಗೊಳಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ.

ಸ್ನೇಹಿತರೇ,

ಜಾಗತಿಕ ಮಟ್ಟದಲ್ಲಿ, ಭಾರತ ಮತ್ತು ಬ್ರೆಜಿಲ್ ಯಾವಾಗಲೂ ನಿಕಟ ಸಮನ್ವಯದಿಂದ ಕಾರ್ಯನಿರ್ವಹಿಸಿವೆ. ಎರಡು ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ, ನಮ್ಮ ಸಹಕಾರವು ಗ್ಲೋಬಲ್ ಸೌತ್ ಗೆ ಮಾತ್ರವಲ್ಲದೆ, ಇಡೀ ಮಾನವಕುಲಕ್ಕೂ ಮುಖ್ಯವಾಗಿದೆ. ಗ್ಲೋಬಲ್ ಸೌತ್ನ ಕಳವಳಗಳು ಮತ್ತು ಆದ್ಯತೆಗಳನ್ನು ಜಾಗತಿಕ ವೇದಿಕೆಯ ಮುಂಚೂಣಿಗೆ ತರುವುದು ನಮ್ಮ ನೈತಿಕ ಜವಾಬ್ದಾರಿ ಎಂದು ನಾವು ದೃಢವಾಗಿ ನಂಬುತ್ತೇವೆ.

ಇಂದು, ಪ್ರಪಂಚವು ಉದ್ವಿಗ್ನತೆ ಮತ್ತು ಅನಿಶ್ಚಿತತೆಯ ಅವಧಿಯನ್ನು ಹಾದುಹೋಗುತ್ತಿರುವಾಗ… ನನ್ನ ಸ್ನೇಹಿತರು ಈಗಾಗಲೇ ಇದನ್ನು ವಿವರವಾಗಿ ವಿವರಿಸಿದ್ದಾರೆ, ಆದ್ದರಿಂದ ನಾನು ಅದನ್ನು ಪುನರಾವರ್ತಿಸುವುದಿಲ್ಲ… ಭಾರತ-ಬ್ರೆಜಿಲ್ ಪಾಲುದಾರಿಕೆಯು ಸ್ಥಿರತೆ ಮತ್ತು ಸಮತೋಲನದ ಪ್ರಮುಖ ಆಧಾರಸ್ತಂಭವಾಗಿ ನಿಂತಿದೆ. ಎಲ್ಲಾ ವಿವಾದಗಳನ್ನು ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಬಗೆಹರಿಸಬೇಕು ಎಂದು ನಾವು ಸಂಪೂರ್ಣವಾಗಿ ಒಪ್ಪುತ್ತೇವೆ.

ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ನಾವು ಸಾಮಾನ್ಯ ವಿಧಾನವನ್ನು ಹಂಚಿಕೊಳ್ಳುತ್ತೇವೆ – ಶೂನ್ಯ ಸಹಿಷ್ಣುತೆ ಮತ್ತು ಶೂನ್ಯ ದ್ವಂದ್ವ ನೀತಿ. ಭಯೋತ್ಪಾದನೆಯ ವಿಷಯದಲ್ಲಿ ದ್ವಂದ್ವ ನೀತಿಗೆ ಯಾವುದೇ ಸ್ಥಾನವಿಲ್ಲ ಎಂದು ನಾವು ದೃಢವಾಗಿ ನಂಬುತ್ತೇವೆ. ಭಯೋತ್ಪಾದನೆ ಮತ್ತು ಅದನ್ನು ಬೆಂಬಲಿಸುವವರನ್ನು ನಾವು ಬಲವಾಗಿ ವಿರೋಧಿಸುತ್ತೇವೆ.

ಗೌರವಾನ್ವಿತರೇ,

ಮತ್ತೊಮ್ಮೆ, 1.4 ಶತಕೋಟಿ ಭಾರತೀಯರ ಪರವಾಗಿ, ಈ ಅತ್ಯುನ್ನತ ರಾಷ್ಟ್ರೀಯ ಗೌರವಕ್ಕಾಗಿ ಮತ್ತು ನಿಮ್ಮ ಶಾಶ್ವತ ಸ್ನೇಹಕ್ಕಾಗಿ ನಾನು ನಿಮಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಸಂದರ್ಭದಲ್ಲಿ ನಾನು ನಿಮ್ಮನ್ನು ಭಾರತಕ್ಕೆ ಭೇಟಿ ನೀಡಲು ಆಹ್ವಾನಿಸುತ್ತೇನೆ.

ಧನ್ಯವಾದಗಳು.
 

"ಮುಯಿಟೊ ಒಬ್ರಿಗಾಡೊ!" (ತುಂಬಾ ಧನ್ಯವಾದಗಳು!)

 

*****
 


(Release ID: 2143376)