ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ 'ಸಂವಿಧಾನ್ ಹತ್ಯಾ ದಿವಸ್' ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಿದರು


ತುರ್ತು ಪರಿಸ್ಥಿತಿಯ ದಿನವನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ, ಇದರಿಂದ ಭವಿಷ್ಯದಲ್ಲಿ ಯಾವುದೇ ವ್ಯಕ್ತಿಯು ತನ್ನ ಸರ್ವಾಧಿಕಾರಿ ಮನಸ್ಥಿತಿಯನ್ನು ಸಂವಿಧಾನದ ವಿರುದ್ಧ ಹೇರಲು ಸಾಧ್ಯವಾಗುವುದಿಲ್ಲ

ಆಗಿನ ಪ್ರಧಾನಿ ಕೇವಲ - “ರಾಷ್ಟ್ರಪತಿಗಳು ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ” ಎಂದು ಹೇಳುವ ಮೂಲಕ ಇಡೀ ಸಂವಿಧಾನದ ಆಶಯವನ್ನು ನಾಶಪಡಿಸಿದರು

ತುರ್ತು ಪರಿಸ್ಥಿತಿಯನ್ನು ನೆನಪಿಸಿಕೊಳ್ಳುವುದೆಂದರೆ ಅದು ಕೇವಲ ಇತಿಹಾಸವನ್ನು ತಿಳಿದುಕೊಳ್ಳುವುದು ಮಾತ್ರವಲ್ಲ, ಅದೊಂದು ಎಚ್ಚರಿಕೆಯೂ ಹೌದು

ತುರ್ತು ಪರಿಸ್ಥಿತಿಯ ಸಮಯದಲ್ಲಿ, ದೇಶದ ಆತ್ಮವನ್ನು ಮೂಕವಾಗಿಸಲಾಯಿತು, ನ್ಯಾಯಾಲಯಗಳನ್ನು ಕಿವುಡಾಗಿ ಮಾಡಲಾಯಿತು ಮತ್ತು ಬರಹಗಾರರ ಪೆನ್ನುಗಳನ್ನು ಮೌನವಾಗುವಂತೆ ಮಾಡಲಾಯಿತು

ರಾಷ್ಟ್ರದ ಭದ್ರತೆಗೆ ಯಾವುದೇ ಅಪಾಯವಿಲ್ಲ ಎಂದು ಇಡೀ ಜಗತ್ತಿಗೆ ತಿಳಿದಿತ್ತು, ಆದರೆ ಆಗಿನ ಪ್ರಧಾನಿಯ ಕುರ್ಚಿ ಅಪಾಯದಲ್ಲಿತ್ತು, ಆದ್ದರಿಂದ ಅದನ್ನು ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಲಾಯಿತು

ತುರ್ತು ಪರಿಸ್ಥಿತಿಯ ಸಮಯದಲ್ಲಿ ಬಂಧನ, ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ವಿಧಸಕ ಘಟನೆಗಳು ಇಡೀ ದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದವು, ಇದಕ್ಕೆ ಉದಾಹರಣೆ ಬೇರೆಲ್ಲಿಯೂ ಕಂಡುಬರುವುದಿಲ್ಲ

'ದೇಶಕ್ಕಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ಕುಟುಂಬ ದೊಡ್ಡದು, ಕುಟುಂಬಕ್ಕಿಂತ ವ್ಯಕ್ತಿ ದೊಡ್ಡವರು, ರಾಷ್ಟ್ರೀಯ ಹಿತಾಸಕ್ತಿಗಿಂತ ಅಧ

Posted On: 25 JUN 2025 7:59PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ 'ಸಂವಿಧಾನ್ ಹತ್ಯಾ ದಿವಸ್' ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೆ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್; ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ವಿನಯ್ ಕುಮಾರ್ ಸಕ್ಸೇನಾ, ದೆಹಲಿ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ ಮತ್ತು ಇತರ ಗಣ್ಯರು ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು, “ಕೆಟ್ಟ ಘಟನೆಗಳನ್ನು ಸಾಮಾನ್ಯವಾಗಿ ಜೀವನದಲ್ಲಿ ಮರೆಯಬೇಕು. ಮತ್ತು ಅದು ಸರಿಯಷ್ಠೇ.  ಆದರೆ ಅದು ಸಾಮಾಜಿಕ ಜೀವನ ಮತ್ತು ರಾಷ್ಟ್ರೀಯ ಜೀವನಕ್ಕೆ ಸಂಬಂಧಿಸಿದ್ದಾಗ, ಕೆಟ್ಟ ಘಟನೆಗಳನ್ನು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು. ಇದರಿಂದ ದೇಶದ ಯುವಕರು ಮತ್ತು ಹದಿಹರೆಯದವರು ಸುಸಂಸ್ಕೃತರಾಗಿರುತ್ತಾರೆ, ಸಂಘಟಿತರಾಗಿರುತ್ತಾರೆ ಮತ್ತು ತಮ್ಮನ್ನು  ತಾವು ರಕ್ಷಿಸಿಕೊಳ್ಳಲು ಸದಾ ಸಿದ್ಧರಾಗಿರುತ್ತಾರೆ. ಮುಂದೆ ಅಂತಹ ಕೆಟ್ಟ ಘಟನೆಗಳು ಮತ್ತೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತಾರೆ. ಈ ಚಿಂತನೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿ ವರ್ಷ ಜೂನ್ 25 ಅನ್ನು 'ಸಂವಿಧಾನ್ ಹತ್ಯಾ ದಿವಸ್' ಎಂದು ಆಚರಿಸಲು ನಿರ್ಧರಿಸಿದರು ಮತ್ತು ಕೇಂದ್ರ ಗೃಹ ಸಚಿವಾಲಯ ಇದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಹೊರಡಿಸಿದೆ,ʼʼ ಎಂದು ಹೇಳಿದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಇಡೀ ದೇಶವನ್ನೇ ಸೆರೆಮನೆಗೆ ತಳ್ಳಲಾಯಿತು. ದೇಶದ ಆತ್ಮವನ್ನು ಮೂಕವಾಗಿಸಿಸಲಾಯಿತು, ನ್ಯಾಯಾಲಯಗಳನ್ನು ಕಿವುಡಾಗಿಸಲಾಯಿತು, ಮತ್ತು ಬರಹಗಾರರ ಲೇಖನಿಗಳನ್ನು ಮೌನವಾಗುವಂತೆ ಮಾಡಲಾಯಿತು. ಈ  ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮತ್ತು ಅದರ ಬಗ್ಗೆ ಯೋಚಿಸಿದ ಬಳಿಕ, ಇಂದಿನ ದಿನವನ್ನು 'ಸಂವಿಧಾನ್ ಹತ್ಯಾ ದಿವಸ್' ಎಂದು ಆಚರಿಸಲು ನಿರ್ಧರಿಸಲಾಯಿತು. ಇದು ತುರ್ತು ಪರಿಸ್ಥಿತಿಯ ಸಮಯದಲ್ಲಿ ನಡೆದ ಘಟನೆಗಳ ಬಗ್ಗೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುತ್ತದೆ. ತುರ್ತು ಪರಿಸ್ಥಿತಿಯನ್ನು ನೆನಪಿಸಿಕೊಳ್ಳುವುದು ಕೇವಲ ಇತಿಹಾಸವನ್ನು ತಿಳಿದುಕೊಳ್ಳುವುದು ಮಾತ್ರವಲ್ಲ, ಅದು ಎಚ್ಚರಿಕೆಯೂ ಹೌದು ಎಂದು ಅವರು ಹೇಳಿದರು.

1975ರ ಜೂನ್ 24ರ ರಾತ್ರಿ ತುರ್ತು ಪರಿಸ್ಥಿತಿ ಹೇರಲಾಯಿತು ಮತ್ತು ಸರ್ವಾಧಿಕಾರಿ ಆಡಳಿತವನ್ನು ಜಾರಿಗೆ ತರಲು ಸುಗ್ರೀವಾಜ್ಞೆ ಹೊರಡಿಸಲಾಯಿತು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಇತರ ಸಂವಿಧಾನ ರಚನಾಕಾರರು 2,66,000 ಪದಗಳನ್ನು ಒಳಗೊಂಡ ಚರ್ಚೆ ಮತ್ತು ಸಮಾಲೋಚನೆ ನಂತರ ರಚಿಸಿದ ಸಂವಿಧಾನವನ್ನು ಪರಿಣಾಮಕಾರಿಯಾಗಿ ರದ್ದುಗೊಳಿಸಲಾಯಿತು.  ಮತ್ತು ಆಗಿನ ಪ್ರಧಾನಿ ಕೇವಲ - ʻರಾಷ್ಟ್ರಪತಿಗಳು ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆʼ - ಎಂದು ಹೇಳುವ ಮೂಲಕ ಇಡೀ ಸಂವಿಧಾನದ ಆಶಯವನ್ನು ನಾಶಪಡಿಸಿದರು. ಸಂವಿಧಾನದ ಸಾರವನ್ನು ಕೇವಲ ಒಂದು ವಾಕ್ಯದಿಂದ ನಾಶಪಡಿಸಲಾಯಿತು. 1975ರ ಜೂನ್ 12ರಂದು ಎರಡು ಪ್ರಮುಖ ಘಟನೆಗಳು ನಡೆದವು: ಅಂದು ಅಲಹಾಬಾದ್ ಹೈಕೋರ್ಟ್ ಪ್ರಧಾನಿ ಚುನಾವಣೆಯನ್ನು ಅಸಿಂಧುಗೊಳಿಸಿ, ಆರು ವರ್ಷಗಳ ಕಾಲ ಅವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಿತ್ತು. ನಂತರ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತಾದರೂ, ದೇಶಾದ್ಯಂತ ಆಘಾತದ ಸ್ಥಿತಿ ವ್ಯಾಪಿಸಿತು. ಅದೇ ಸಮಯದಲ್ಲಿ, ಜೂನ್ 12 ರಂದು, ʻಜನತಾ ಮೋರ್ಚಾʼ ಪ್ರಯೋಗವು ಗುಜರಾತ್‌ನಲ್ಲಿ ಯಶಸ್ವಿಯಾಯಿತು, ವಿರೋಧ ಪಕ್ಷದ ಆಡಳಿತವನ್ನು ಕೊನೆಗೊಳಿಸಿ ಜನತಾ ಪಕ್ಷದ ಸರ್ಕಾರ ರಚನೆಗೊಂಡಿತು. ಈ ಬೆಳವಣಿಗೆಗಳಿಂದ ಎಚ್ಚೆತ್ತುಕೊಂಡ ಪ್ರಧಾನಿ ಜೂನ್ 25ರಂದು ತುರ್ತು ಪರಿಸ್ಥಿತಿ ಹೇರಿದರು. ರಾಷ್ಟ್ರೀಯ ಭದ್ರತೆ ಅಪಾಯದಲ್ಲಿದೆ ಎಂಬ ಕಾರಣವನ್ನು ಆಗ ಪ್ರಧಾನಿ ನೀಡಿದರೂ, ನಿಜಕ್ಕೂ ಅಪಾಯದಲ್ಲಿದ್ದದ್ದು  ಪ್ರಧಾನ ಮಂತ್ರಿಯವರ ಅಧಿಕಾರದ ಮತ್ತು ಕುರ್ಚಿ ಎಂಬ ಸತ್ಯವು ಇಡೀ ಜಗತ್ತಿಗೆ ಗೊತ್ತಿತ್ತು ಎಂದು ಶ್ರೀ ಅಮಿತ್‌ ಶಾ ಹೇಳಿದರು.

ಜಯಪ್ರಕಾಶ್ ನಾರಾಯಣ್ ಅವರ "ಸಂಪೂರ್ಣ ಕ್ರಾಂತಿ" ಘೋಷಣೆ ಇಡೀ ರಾಷ್ಟ್ರದಲ್ಲಿ ಕ್ರಾಂತಿಯನ್ನುಂಟು ಮಾಡಿತು ಎಂದು ಶ್ರೀ ಅಮಿತ್ ಶಾ ಹೇಳಿದರು. ಗುಜರಾತ್‌ನಲ್ಲಿ ಪ್ರಾರಂಭವಾದ ಚಳವಳಿ ಬಿಹಾರವನ್ನು ತಲುಪಿತ್ತು. ಗುಜರಾತ್‌ನಲ್ಲಿ ಸರ್ಕಾರ ಪತನಗೊಂಡಿತು, ಚುನಾವಣೆಗಳು ನಡೆದವು ಮತ್ತು ಆಗಿನ ಆಡಳಿತ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯಲಾಯಿತು. ಬಳಿಕ, ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಿ ಜನತಾ ಪಕ್ಷದ ಸರ್ಕಾರವನ್ನು ರಚಿಸಿದವು, ಇದು ಆಗಿನ ಪ್ರಧಾನಿಗೆ ಪ್ರಮುಖ ಎಚ್ಚರಿಕೆ ಎಂಬಂತೆ ಕಂಡಿತು.

ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ, ತಡೆಯಾಜ್ಞೆ ನೀಡಿದ ನ್ಯಾಯಾಲಯಗಳ ದನಿ ಹತ್ತಿಕ್ಕಲಾಯಿತು, ಪತ್ರಿಕೆಗಳನ್ನು ಮೌನಗೊಳಿಸಲಾಯಿತು ಮತ್ತು ʻಆಲ್ ಇಂಡಿಯಾ ರೇಡಿಯೋʼವನ್ನು ಸಹ ಮೌನಗೊಳಿಸಲಾಯಿತು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಸುಮಾರು 1,10,000 ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರನ್ನು ಸೆರೆಮನೆಗೆ ತಳ್ಳಲಾಯಿತು. ಯಾವುದೇ ಕಾರ್ಯಸೂಚಿಯಿಲ್ಲದೆ ಬೆಳಿಗ್ಗೆ 4 ಗಂಟೆಗೆ ಸಚಿವ ಸಂಪುಟ ಸಭೆಯನ್ನು ಕರೆಯಲಾಯಿತು ಮತ್ತು ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ತುರ್ತು ಪರಿಸ್ಥಿತಿಯ ಸಮಯದಲ್ಲಿನ ಘಟನೆಗಳನ್ನು ಕೂಲಂಕಷವಾಗಿ ತನಿಖೆ ಮಾಡಿದ ʻಷಾ ಆಯೋಗʼವು ಬಂಧನ, ಬಲವಂತದ ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ವಿಧ್ವಂಸಕ ಕೃತ್ಯಗಳು ದೇಶಾದ್ಯಂತ ಭಯದ ವಾತಾವರಣವನ್ನು ಸೃಷ್ಟಿಸಿದವು. ಇಂಥ ಉದಾಹರಣೆ ಬೇರೆಲ್ಲೂ ಸಿಗದು ಎಂದು ತನ್ನ ವರದಿಯಲ್ಲಿ ಹೇಳಿತು. ಪತ್ರಿಕಾ ಕಚೇರಿಗಳನ್ನು ಮುಚ್ಚಲಾಯಿತು, 253 ಪತ್ರಕರ್ತರನ್ನು ಬಂಧಿಸಲಾಯಿತು, 29 ವಿದೇಶಿ ಪತ್ರಕರ್ತರನ್ನು ದೇಶದಿಂದ ಹೊರಹಾಕಲಾಯಿತು. ಹಲವಾರು ಪತ್ರಿಕೆಗಳು ತಮ್ಮ ಸಂಪಾದಕೀಯ ಅಂಕಣಗಳನ್ನು ಖಾಲಿ ಬಿಡುವ ಮೂಲಕ ತುರ್ತು ಪರಿಸ್ಥಿತಿಯನ್ನು ಪ್ರತಿಭಟಿಸಿದವು - ವಿಶೇಷವಾಗಿ ʻದಿ ಇಂಡಿಯನ್ ಎಕ್ಸ್‌ಪ್ರೆಸ್‌ʼ ಮತ್ತು ಜನಸತ್ತಾ ಪತ್ರಿಕೆಗಳು ದಿಟ್ಟತನ ತೋರಿದವು. ಪತ್ರಿಕೆಗಳ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಲಾಯಿತು, ಸಂಸದೀಯ ಕಾರ್ಯವಿಧಾನಗಳನ್ನು ಸೆನ್ಸಾರ್ ಮಾಡಲಾಯಿತು, ನ್ಯಾಯಾಂಗವನ್ನು ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ತರಲಾಯಿತು ಮತ್ತು ದೇಶಾದ್ಯಂತ ಪ್ರಜಾಪ್ರಭುತ್ವ ಹಕ್ಕುಗಳನ್ನು ಸಂಪೂರ್ಣವಾಗಿ ನಿಗ್ರಹಿಸಲಾಯಿತು ಎಂದು ಅಮಿತ್‌ ಶಾ ಮಾಹಿತಿ ನೀಡಿದರು.

ಸರ್ಕಾರದ ವಿರುದ್ಧ ತೀರ್ಪುಗಳನ್ನು ನೀಡಿದ್ದ ನ್ಯಾಯಾಧೀಶರು ಮುಂದೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗುವುದನ್ನು ತಡೆಯಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಗಾಯಕ ಕಿಶೋರ್ ಕುಮಾರ್ ಮತ್ತು ನಟ ಮನೋಜ್ ಕುಮಾರ್ ಅವರ ಚಲನಚಿತ್ರಗಳನ್ನು ನಿಷೇಧಿಸಲಾಯಿತು. ನಟ ದೇವಾನಂದ್ ಅವರನ್ನು ದೂರದರ್ಶನದಲ್ಲಿ ಕಾಣಿಸಿಕೊಳ್ಳದಂತೆ ನಿರ್ಬಂಧಿಸಲಾಯಿತು ಮತ್ತು ʻಆಂಧಿʼ ಮತ್ತು ʻಕಿಸ್ಸಾ ಕುರ್ಸಿ ಕಾʼ ಚಲನಚಿತ್ರಗಳನ್ನು ಸಹ ನಿಷೇಧಿಸಲಾಯಿತು ಎಂದು ಅಮಿತ್‌ ಶಾ ಮಾಹಿತಿ ನೀಡಿದರು.

ತುರ್ತು ಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲಿ, ದೇಶದಲ್ಲಿ ಮೊದಲ ಬಾರಿಗೆ ಸಂಪೂರ್ಣ ಬಹುಮತದೊಂದಿಗೆ ಕಾಂಗ್ರೆಸೇತರ ಸರ್ಕಾರ ಅಧಿಕಾರಕ್ಕೆ ಬಂದಿತು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಭವಿಷ್ಯದಲ್ಲಿ ಯಾರೂ ದೇಶದ ಸಂವಿಧಾನದ ಮೇಲೆ ಸರ್ವಾಧಿಕಾರಿ ಮನಸ್ಥಿತಿಯನ್ನು ಹೇರಲು ಸಾಧ್ಯವಾಗದಂತೆ ದಿನವನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ತುರ್ತು ಪರಿಸ್ಥಿತಿಯ ಸಮಯದಲ್ಲಿ, ರಾಷ್ಟ್ರಕ್ಕಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ಕುಟುಂಬ ದೊಡ್ಡದು, ಕುಟುಂಬಕ್ಕಿಂತ ವ್ಯಕ್ತಿಯೇ ದೊಡ್ಡವರು ಮತ್ತು ರಾಷ್ಟ್ರೀಯ ಹಿತಾಸಕ್ತಿಗಿಂತ ಅಧಿಕಾರವೇ ಮುಖ್ಯ ಎಂಬ ಮನಸ್ಥಿತಿ ಬೆಳೆದಿತ್ತು ಎಂದು ಅವರು ಹೇಳಿದರು. ಇದಕ್ಕೆ ವ್ಯತಿರಿಕ್ತವಾಗಿ, ಇಂದು, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, "ರಾಷ್ಟ್ರ ಮೊದಲು" ಎಂಬ ಕಲ್ಪನೆಯು ಜನರ ಹೃದಯದಲ್ಲಿ ಆಳವಾಗಿ ಪ್ರತಿಧ್ವನಿಸುತ್ತದೆ. 19 ತಿಂಗಳು ಜೈಲಿನಲ್ಲಿ ಕಳೆದ ಪ್ರಜಾಪ್ರಭುತ್ವದ ಸಾವಿರಾರು ಯೋಧರ ಹೋರಾಟದಿಂದಾಗಿ ಪರಿವರ್ತನೆ ಸಾಧ್ಯವಾಗಿದೆ. ಇಂದು, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, 140 ಕೋಟಿ ಭಾರತೀಯರು 2047ರ ವೇಳೆಗೆ ಭಾರತವನ್ನು ಜಾಗತಿಕವಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ನಂ. 01 ಮಾಡುವ ಬದ್ಧತೆಯೊಂದಿಗೆ ಶ್ರಮಿಸುತ್ತಿದ್ದಾರೆ, ಆ ಗುರಿಯತ್ತ ದೃಢನಿಶ್ಚಯದಿಂದ ಮುಂದುವರಿಯುತ್ತಿದ್ದಾರೆ ಎಂದು ಗೃಹ ಸಚಿವರು ಹೇಳಿದರು.

 

*****


(Release ID: 2139872)