ಪ್ರಧಾನ ಮಂತ್ರಿಯವರ ಕಛೇರಿ
ಸೈಪ್ರಸ್ ಅಧ್ಯಕ್ಷರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪತ್ರಿಕಾ ಹೇಳಿಕೆ
प्रविष्टि तिथि:
18 JUN 2025 9:32AM by PIB Bengaluru
ಘನತೆವೆತ್ತ ಸನ್ಮಾನ್ಯ ಅಧ್ಯಕ್ಷರೆ, ಉಭಯ ರಾಷ್ಟ್ರಗಳ ಗಣ್ಯ ಪ್ರತಿನಿಧಿಗಳೆ, ಮಾಧ್ಯಮ ಮಿತ್ರರೆ,
ನಮಸ್ಕಾರ!
ಕಲಿಮೇರಾ!
ಮೊದಲನೆಯದಾಗಿ, ಗೌರವಾನ್ವಿತ ಅಧ್ಯಕ್ಷರ ಆತ್ಮೀಯ ಸ್ವಾಗತ ಮತ್ತು ಔದಾರ್ಯಯುತ ಆತಿಥ್ಯಕ್ಕಾಗಿ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ನಿನ್ನೆ ನಾನು ಸೈಪ್ರಸ್ ನೆಲಕ್ಕೆ ಕಾಲಿಟ್ಟ ಕ್ಷಣದಿಂದ, ಅಧ್ಯಕ್ಷರು ಮತ್ತು ಈ ದೇಶದ ಜನರು ತೋರಿಸಿದ ಆತ್ಮೀಯತೆ ಮತ್ತು ವಾತ್ಸಲ್ಯವು ನಿಜವಾಗಿಯೂ ನನ್ನ ಹೃದಯವನ್ನು ಮುಟ್ಟಿದೆ.
ಸ್ವಲ್ಪ ಸಮಯದ ಹಿಂದೆ, ನನಗೆ ಸೈಪ್ರಸ್ ಪ್ರತಿಷ್ಠಿತ ಗೌರವ ಪುರಸ್ಕಾರ ನೀಡಿತು. ಈ ಪ್ರಶಸ್ತಿ ನನ್ನೊಬ್ಬನದ್ದಲ್ಲ - ಇದು 140 ಕೋಟಿ ಭಾರತೀಯರಿಗೆ ಸಂದ ಗೌರವವಾಗಿದೆ. ಇದು ಭಾರತ ಮತ್ತು ಸೈಪ್ರಸ್ ನಡುವಿನ ಶಾಶ್ವತ ಸ್ನೇಹವನ್ನು ಸಂಕೇತಿಸುತ್ತದೆ. ಈ ಗೌರವಕ್ಕಾಗಿ ನಾನು ಮತ್ತೊಮ್ಮೆ ನನ್ನ ಪ್ರಾಮಾಣಿಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಸ್ನೇಹಿತರೆ,
ಸೈಪ್ರಸ್ ಜೊತೆಗಿನ ನಮ್ಮ ಸಂಬಂಧಗಳಿಗೆ ನಾವು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ. ಪ್ರಜಾಪ್ರಭುತ್ವ ಮತ್ತು ಕಾನೂನು ನಿಯಮದಂತಹ ಮೌಲ್ಯಗಳಿಗೆ ನಮ್ಮ ಹಂಚಿಕೆಯ ಬದ್ಧತೆಯು ನಮ್ಮ ಪಾಲುದಾರಿಕೆಗೆ ಭದ್ರ ಬುನಾದಿ ಹಾಕಿದೆ. ಭಾರತ ಮತ್ತು ಸೈಪ್ರಸ್ ನಡುವಿನ ಸ್ನೇಹವು ಕೆಲವು ಸಂದರ್ಭಗಳಿಂದ ಹೊರಹೊಮ್ಮಿದ ಸ್ನೇಹವಲ್ಲ, ಅಥವಾ ಅದು ಗಡಿಗಳಿಂದ ಸೀಮಿತವಾಗಿಲ್ಲ.
ಇದು ಕಾಲದ ಪರೀಕ್ಷೆಯನ್ನು ಮತ್ತೆ ಮತ್ತೆ ಎದುರಿಸಿದೆ. ಪ್ರತಿ ಯುಗದಲ್ಲೂ, ನಾವು ಸಹಕಾರ, ಗೌರವ ಮತ್ತು ಪರಸ್ಪರ ಬೆಂಬಲದ ಮನೋಭಾವವನ್ನು ಎತ್ತಿಹಿಡಿದಿದ್ದೇವೆ. ನಾವು ಪರಸ್ಪರರ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುತ್ತೇವೆ.
ಸ್ನೇಹಿತರೆ,
ಭಾರತೀಯ ಪ್ರಧಾನ ಮಂತ್ರಿಯೊಬ್ಬರು 2 ದಶಕಗಳಲ್ಲಿ ಸೈಪ್ರಸ್‌ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಇದು ನಮ್ಮ ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯ ಬರೆಯಲು ಒಂದು ಸುವರ್ಣಾವಕಾಶ ಒದಗಿಸುತ್ತದೆ. ಇಂದು ಗೌರವಾನ್ವಿತ ಅಧ್ಯಕ್ಷರು ಮತ್ತು ನಾನು ನಮ್ಮ ಪಾಲುದಾರಿಕೆಯ ಎಲ್ಲಾ ಅಂಶಗಳ ಕುರಿತು ವ್ಯಾಪಕ ಚರ್ಚೆಗಳನ್ನು ನಡೆಸಿದ್ದೇವೆ.
ಸೈಪ್ರಸ್‌ನ “ವಿಷನ್ 2035” ಮತ್ತು “ವಿಕಸಿತ ಭಾರತ 2047”ನ ನಮ್ಮ ದೃಷ್ಟಿಕೋನದ ನಡುವೆ ಅನೇಕ ಹೋಲಿಕೆಗಳಿವೆ. ಆದ್ದರಿಂದ, ನಮ್ಮ ಹಂಚಿಕೆಯ ಭವಿಷ್ಯವನ್ನು ರೂಪಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ನಮ್ಮ ಪಾಲುದಾರಿಕೆಗೆ ಕಾರ್ಯತಂತ್ರ ನಿರ್ದೇಶನಗಳನ್ನು ಒದಗಿಸಲು, ಮುಂದಿನ 5 ವರ್ಷಗಳವರೆಗೆ ನಾವು ಸಂಕೀರ್ಣ ಮಾರ್ಗಸೂಚಿ ಅಭಿವೃದ್ಧಿಪಡಿಸುತ್ತೇವೆ.
ನಮ್ಮ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಮತ್ತಷ್ಟು ಬಲಪಡಿಸಲು, ದ್ವಿಪಕ್ಷೀಯ ರಕ್ಷಣಾ ಸಹಕಾರ ಕಾರ್ಯಕ್ರಮವು ರಕ್ಷಣಾ ಉದ್ಯಮ ಸಹಭಾಗಿತ್ವದ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಸೈಬರ್ ಮತ್ತು ಕಡಲ ಭದ್ರತೆ ಕುರಿತು ಪ್ರತ್ಯೇಕ ಸಂವಾದಗಳನ್ನು ಪ್ರಾರಂಭಿಸಲಾಗುವುದು.
ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಸೈಪ್ರಸ್‌ನ ಸ್ಥಿರ ಬೆಂಬಲಕ್ಕಾಗಿ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ಭಯೋತ್ಪಾದನೆ, ಮಾದಕವಸ್ತು ಕಳ್ಳಸಾಗಣೆ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯನ್ನು ಎದುರಿಸಲು, ನಮ್ಮ ಆಯಾ ಸಂಸ್ಥೆಗಳ ನಡುವೆ ನೈಜ-ಸಮಯದ ಮಾಹಿತಿ ವಿನಿಮಯಕ್ಕಾಗಿ ಒಂದು ಕಾರ್ಯವಿಧಾನವನ್ನು ಸ್ಥಾಪಿಸಲಾಗುವುದು. ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಹೆಚ್ಚಿಸುವಲ್ಲಿ ಅಪಾರ ಸಾಮರ್ಥ್ಯವಿದೆ ಎಂದು ನಾವಿಬ್ಬರೂ ಒಪ್ಪಿದ್ದೇವೆ.
ನಿನ್ನೆ ಗೌರವಾನ್ವಿತ ಅಧ್ಯಕ್ಷರೊಂದಿಗಿನ ನನ್ನ ಸಂವಾದ ಸಮಯದಲ್ಲಿ, ನಮ್ಮ ಆರ್ಥಿಕ ಸಂಬಂಧಗಳ ಕುರಿತು ವ್ಯಾಪಾರ ಸಮುದಾಯದಲ್ಲಿ ಹೆಚ್ಚಿನ ಉತ್ಸಾಹ ಮತ್ತು ಶಕ್ತಿಯನ್ನು ನಾನು ಅನುಭವಿಸಿದೆ. ವರ್ಷದ ಅಂತ್ಯದ ವೇಳೆಗೆ ಪರಸ್ಪರ ಪ್ರಯೋಜನಕಾರಿ ಭಾರತ-ಯುರೋಪ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವತ್ತ ನಾವು ಕೆಲಸ ಮಾಡುತ್ತಿದ್ದೇವೆ.
ಈ ವರ್ಷ, "ಭಾರತ-ಸೈಪ್ರಸ್-ಗ್ರೀಸ್ ವ್ಯಾಪಾರ ಮತ್ತು ಹೂಡಿಕೆ ಮಂಡಳಿ"ಯನ್ನು ಸಹ ಪ್ರಾರಂಭಿಸಲಾಗಿದೆ. ಇಂತಹ ಉಪಕ್ರಮಗಳು ನಮ್ಮ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುತ್ತವೆ.
ತಂತ್ರಜ್ಞಾನ, ನಾವೀನ್ಯತೆ, ಆರೋಗ್ಯ, ಕೃಷಿ, ನವೀಕರಿಸಬಹುದಾದ ಇಂಧನ ಮತ್ತು ಹವಾಮಾನ ನ್ಯಾಯದಂತಹ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಕುರಿತು ನಾವು ವಿವರವಾದ ಚರ್ಚೆಗಳನ್ನು ನಡೆಸಿದ್ದೇವೆ. ಸೈಪ್ರಸ್‌ನಲ್ಲಿ ಯೋಗ ಮತ್ತು ಆಯುರ್ವೇದದ ಹೆಚ್ಚುತ್ತಿರುವ ಜನಪ್ರಿಯತೆಯಿಂದ ನಾವು ಪ್ರೋತ್ಸಾಹಿತರಾಗಿದ್ದೇವೆ.
ಭಾರತೀಯ ಪ್ರವಾಸಿಗರಿಗೆ ಸೈಪ್ರಸ್ ಕೂಡ ಆದ್ಯತೆಯ ತಾಣವಾಗಿದೆ. ಅವರ ಪ್ರಯಾಣವನ್ನು ಸುಗಮಗೊಳಿಸಲು ನೇರ ವಾಯು ಸಂಪರ್ಕ ಕಲ್ಪಿಸಲು ನಾವು ಕೆಲಸ ಮಾಡುತ್ತೇವೆ. ಮೊಬಿಲಿಟಿ ಒಪ್ಪಂದವನ್ನು ತ್ವರಿತವಾಗಿ ಅಂತಿಮಗೊಳಿಸಲು ನಾವು ನಿರ್ಧರಿಸಿದ್ದೇವೆ.
ಸ್ನೇಹಿತರೆ,
ಐರೋಪ್ಯ ಒಕ್ಕೂಟದೊಳಗೆ, ಸೈಪ್ರಸ್ ನಮ್ಮ ವಿಶ್ವಾಸಾರ್ಹ ಪಾಲುದಾರನಾಗಿದೆ. ಮುಂದಿನ ವರ್ಷ ಐರೋಪ್ಯ ಒಕ್ಕೂಟದ ಮುಂಬರುವ ಅಧ್ಯಕ್ಷತೆ ವಹಿಸಲಿರುವ ಸೈಪ್ರಸ್‌ಗೆ ನಮ್ಮ ಶುಭಾಶಯಗಳನ್ನು ತಿಳಿಸುತ್ತೇವೆ. ನಿಮ್ಮ ನಾಯಕತ್ವದಲ್ಲಿ, ಭಾರತ-ಐರೋಪ್ಯ ಒಕ್ಕೂಟ ಸಂಬಂಧಗಳು ಹೊಸ ಎತ್ತರವನ್ನು ತಲುಪುತ್ತವೆ ಎಂಬ ವಿಶ್ವಾಸ ನಮಗಿದೆ.
ವಿಶ್ವಸಂಸ್ಥೆಯನ್ನು ಹೆಚ್ಚು ಪ್ರತಿನಿಧಿಸುವಂತೆ ಮಾಡಲು ಅದನ್ನು ಸುಧಾರಿಸುವ ಅಗತ್ಯತೆಯ ಬಗ್ಗೆ ಎರಡೂ ರಾಷ್ಟ್ರಗಳು ಸಾಮಾನ್ಯ ಅಭಿಪ್ರಾಯಗಳನ್ನು ಹಂಚಿಕೊಂಡಿವೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯುವ ಭಾರತದ ಇಚ್ಛೆಗೆ ಬೆಂಬಲ ನೀಡಿದ್ದಕ್ಕಾಗಿ ನಾವು ಸೈಪ್ರಸ್‌ಗೆ ಕೃತಜ್ಞರಾಗಿರುತ್ತೇವೆ.
ಪಶ್ಚಿಮ ಏಷ್ಯಾ ಮತ್ತು ಯುರೋಪಿನಲ್ಲಿ ನಡೆಯುತ್ತಿರುವ ಸಂಘರ್ಷಗಳ ಬಗ್ಗೆ ನಾವು ಕಳವಳ ವ್ಯಕ್ತಪಡಿಸಿದ್ದೇವೆ. ಈ ಸಂಘರ್ಷಗಳ ಪ್ರತಿಕೂಲ ಪರಿಣಾಮವು ಆಯಾ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ, ಇದು ಯುದ್ಧದ ಯುಗವಲ್ಲ ಎಂದು ನಾವಿಬ್ಬರೂ ಒಪ್ಪಿದ್ದೇವೆ.
ಸಂವಾದ ಮತ್ತು ಸ್ಥಿರತೆಯ ಮರುಸ್ಥಾಪನೆ ಮಾನವತೆಯ ಕರೆಗಳಾಗಿವೆ. ಮೆಡಿಟರೇನಿಯನ್ ಪ್ರದೇಶದೊಂದಿಗೆ ಸಂಪರ್ಕ ಹೆಚ್ಚಿಸುವ ಬಗ್ಗೆಯೂ ನಾವು ಚರ್ಚಿಸಿದ್ದೇವೆ. ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಈ ಪ್ರದೇಶದಲ್ಲಿ ಶಾಂತಿ ಮತ್ತು ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ ಎಂದು ನಾವು ಒಪ್ಪಿದ್ದೇವೆ.
ಗೌರವಾನ್ವಿತ ಅಧ್ಯಕ್ಷರೆ,
ಭಾರತಕ್ಕೆ ಭೇಟಿ ನೀಡುವಂತೆ ನಾನು ನಿಮಗೆ ಹೃತ್ಪೂರ್ವಕ ಆಹ್ವಾನ ನೀಡುತ್ತೇನೆ. ನಿಮ್ಮನ್ನು ಆದಷ್ಟು ಬೇಗ ಭಾರತಕ್ಕೆ ಸ್ವಾಗತಿಸಲು ನಾನು ಎದುರು ನೋಡುತ್ತಿದ್ದೇನೆ.
ಮತ್ತೊಮ್ಮೆ, ಅಸಾಧಾರಣ ಆತಿಥ್ಯ ಮತ್ತು ಗೌರವ ನೀಡಿದ್ದಕ್ಕಾಗಿ ನಾನು ನಿಮಗೆ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
(रिलीज़ आईडी: 2137176)
आगंतुक पटल : 21
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam