ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಿನೀವಾದಲ್ಲಿ ನಡೆದ ʻವಿಪತ್ತು ಅಪಾಯ ತಗ್ಗಿಸಲು ಹಣಕಾಸು ನೆರವು ಕುರಿತ ಸಚಿವರ ದುಂಡುಮೇಜಿನ ಸಭೆʼಯಲ್ಲಿ ತಾಂತ್ರಿಕ ನೆರವು ಮತ್ತು ಜ್ಞಾನ ವಿನಿಮಯದ ಜೊತೆಗೆ ತ್ವರಿತಗತಿಯ ಧನಸಹಾಯಕ್ಕಾಗಿ ಜಾಗತಿಕ ವ್ಯವಸ್ಥೆಯನ್ನು ರಚಿಸುವ ನಿಟ್ಟಿನಲ್ಲಿ ದೃಢವಾದ, ಕಾಲಮಿತಿಯ ಫಲಿತಾಂಶಗಳಿಗಾಗಿ ಭಾರತ ಕರೆ ನೀಡಿತು


ಭಾರತದ ʻಡಿಆರ್‌ಆರ್‌ʼ ಹಣಕಾಸು ವ್ಯವಸ್ಥೆಯು ವಿಶ್ವದ ಅತಿದೊಡ್ಡ ರಾಷ್ಟ್ರೀಯ ಮಟ್ಟದ ಕಾರ್ಯವಿಧಾನಗಳಲ್ಲಿ ಒಂದಾಗಿ ಬೆಳೆದಿದೆ: ಡಾ. ಪಿ.ಕೆ.ಮಿಶ್ರಾ

ಬಲವಾದ ಮತ್ತು ಸ್ಪಂದನಶೀಲ ʻಡಿಆರ್‌ಆರ್‌ʼ ಹಣಕಾಸು ವ್ಯವಸ್ಥೆಯು ಸದೃಢತೆಯ ಮೂಲಾಧಾರವೆಂದು ಭಾರತ ನಂಬಿದೆ: ಡಾ. ಪಿ.ಕೆ.ಮಿಶ್ರಾ

ʻವಿಪತ್ತು ಅಪಾಯ ತಗ್ಗಿಸಲು ಹಣಕಾಸು ನೆರವುʼ ವ್ಯವಸ್ಥೆಯು ಸರ್ಕಾರದ ಒಡೆತನದಲ್ಲಿರಬೇಕು ಮತ್ತು ಸರ್ಕಾರವೇ ಮುನ್ನಡೆಸಬೇಕು, ಜೊತೆಗೆ ಅದಕ್ಕೆ ಅಂತಾರಾಷ್ಟ್ರೀಯ ಸಹಕಾರವು ಪೂರಕವಾಗಿರಬೇಕು: ಡಾ. ಪಿ.ಕೆ.ಮಿಶ್ರಾ

Posted On: 06 JUN 2025 11:27AM by PIB Bengaluru

ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರು 2025ರ ಜೂನ್ 4ರಂದು ಜಿನೀವಾದಲ್ಲಿ ನಡೆದ ʻವಿಪತ್ತು ಅಪಾಯ ತಗ್ಗಿಸಲು (ಡಿಆರ್‌ಆರ್) ಹಣಕಾಸು ನೆರವು ಕುರಿತ ಸಚಿವರ ದುಂಡುಮೇಜಿನ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ನಿರ್ಣಾಯಕ ಸಭೆಯನ್ನು ಆಯೋಜಿಸಿದ್ದಕ್ಕಾಗಿ ಅವರು ʻವಿಪತ್ತು ಅಪಾಯ ತಗ್ಗಿಸುವ ಕುರಿತಾದ ವಿಶ್ವಸಂಸ್ಥೆಯ ಕಚೇರಿʼ(ಯುಎನ್‌ಡಿಆರ್‌ಆರ್) ಮತ್ತು ಅದರ ಪಾಲುದಾರರನ್ನು ಶ್ಲಾಘಿಸಿದರು. ಜಿ20 ಅಧ್ಯಕ್ಷತೆ ಮೂಲಕ ಜಾಗತಿಕ ಸಂವಾದವನ್ನು ಮುಂದುವರಿಸುವಲ್ಲಿ ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಕೊಡುಗೆಗಳನ್ನು ಸಹ ಭಾರತ ಗುರುತಿಸಿತು.

ʻವಿಪತ್ತು ಅಪಾಯ ತಗ್ಗಿಸಲು ಹಣಕಾಸು ನೆರವುʼ ಎಂಬುದು ಬಾಹ್ಯ ವಿಷಯವಲ್ಲ. ಬದಲಿಗೆ, ಅದು ರಾಷ್ಟ್ರೀಯ ವಿಪತ್ತು ನಿರ್ವಹಣಾ ವ್ಯವಸ್ಥೆಗಳ ಪರಿಣಾಮಕಾರಿ ಕಾರ್ಯನಿರ್ವಹಣೆಯಾಗಿದೆ.  ಜೊತೆಗೆ ಹೆಚ್ಚುತ್ತಿರುವ ಹವಾಮಾನ ಮತ್ತು ವಿಪತ್ತು ಅಪಾಯಗಳ ಹಿನ್ನೆಲೆಯಲ್ಲಿ ಅಭಿವೃದ್ಧಿ ಲಾಭಗಳನ್ನು ರಕ್ಷಿಸಲು ಇದು ಅತ್ಯಂತ ಮುಖ್ಯವಾಗಿದೆ ಎಂದು ಡಾ. ಮಿಶ್ರಾ ಒತ್ತಿಹೇಳಿದರು. ಬಲವಾದ ಮತ್ತು ಸ್ಪಂದನಶೀಲವಾದ ʻವಿಪತ್ತು ಅಪಾಯ ತಗ್ಗಿಸಲು ಹಣಕಾಸು ನೆರವುʼ ವ್ಯವಸ್ಥೆಯು ದೇಶವೊಂದರ ಸದೃಢತೆಗೆ ಮೂಲಾಧಾರವಾಗಿದೆ ಎಂಬ ಭಾರತದ ನಂಬಿಕೆಯನ್ನು ಅವರು ಪುನರುಚ್ಚರಿಸಿದರು.

ʻವಿಪತ್ತು ಅಪಾಯ ತಗ್ಗಿಸುವಿಕೆಗಾಗಿ ಹಣಕಾಸು ನೆರವುʼ ಕ್ಷೇತ್ರದಲ್ಲಿ ಭಾರತದ ಪ್ರಯಾಣವನ್ನು ಎತ್ತಿ ತೋರಿದ ಅವರು, ಈ ಮೊದಲಿನ ಹಣಕಾಸು ಆಯೋಗಗಳು ನಿಟ್ಟಿನಲ್ಲಿ 60 ದಶಲಕ್ಷ ರೂಪಾಯಿಗಳ (ಸುಮಾರು 0.7 ದಶಲಕ್ಷ ಅಮೆರಿಕನ್‌ ಡಾಲರ್‌) ಆರಂಭಿಕ ನಿಧಿ ಹಂಚಿಕೆ ಮಾಡಿವೆ ಎಂದು ಮಾಹಿತಿ ನೀಡಿದರು. ಇಂದು, 15ನೇ ಹಣಕಾಸು ಆಯೋಗದ ಅಡಿಯಲ್ಲಿ ನಿಟ್ಟಿನಲ್ಲಿ ಒಟ್ಟು ವೆಚ್ಚವು 2.32 ಲಕ್ಷ ಕೋಟಿ ರೂಪಾಯಿಗಳನ್ನು (ಸುಮಾರು 28 ಶತಕೋಟಿ ಅಮೆರಿಕನ್‌ ಡಾಲರ್‌) ಮೀರಿದೆ ಎಂದು ಹೇಳಿದರು.

ʻವಿಪತ್ತು ನಿರ್ವಹಣಾ ಕಾಯ್ದೆ-2005ʼರ ಬೆಂಬಲದೊಂದಿಗೆ ರಾಷ್ಟ್ರೀಯ ಮಟ್ಟದಿಂದ ರಾಜ್ಯ ಮತ್ತು ಜಿಲ್ಲಾ ಮಟ್ಟಗಳಿಗೆ ಪೂರ್ವನಿರ್ಧರಿತ, ನಿಯಮ ಆಧಾರಿತ ಹಂಚಿಕೆಗಳ ಮಹತ್ವವನ್ನು ಮಿಶ್ರಾ ಅವರು ಒತ್ತಿ ಹೇಳಿದರು. ಈ ರೂಪಾಂತರವು ವಿಪತ್ತು ಹಣಕಾಸು ಪ್ರತಿಕ್ರಿಯಾತ್ಮಕವಾಗಿರುವುದರ ಬದಲು, ರಚನಾತ್ಮಕ ಮತ್ತು ನಿರೀಕ್ಷಿತವಾಗಿರುವಂತೆ ಖಾತ್ರಿಪಡಿಸಿದೆ ಎಂದು ಅವರು ಹೇಳಿದರು.

ನಾಲ್ಕು ಪ್ರಮುಖ ತತ್ವಗಳ ಮೇಲೆ ನಿರ್ಮಿಸಲಾದ ಭಾರತದ ʻವಿಪತ್ತು ಅಪಾಯ ತಗ್ಗಿಸುವಿಕೆಗಾಗಿ ಹಣಕಾಸು ನೆರವುʼ ಕಾರ್ಯವಿಧಾನವನ್ನು ಅವರು ಶ್ರೀ ಮಿಶ್ರಾ ವಿವರಿಸಿದರು. ಮೊದಲನೆಯ ತತ್ವವೆಂದರೆ ಸನ್ನದ್ಧತೆ, ಅಪಾಯ ತಗ್ಗಿಸುವಿಕೆ, ಪರಿಹಾರ ಮತ್ತು ಚೇತರಿಕೆಗೆ ಮೀಸಲಾದ ಹಣಕಾಸು ನೆರವಿನ ವ್ಯವಸ್ಥೆ. ಎರಡನೆಯದ್ದು, ಅಪಾಯ ಪೀಡಿತ ಪ್ರದೇಶದ ಜನರು ಮತ್ತು ದುರ್ಬಲ ಸಮುದಾಯಗಳ ಅಗತ್ಯಗಳಿಗೆ ಆದ್ಯತೆ. ಮೂರನೆಯದು, ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಆಡಳಿತ ಸೇರಿದಂತೆ ಎಲ್ಲಾ ಸರ್ಕಾರಿ ಹಂತಗಳಲ್ಲಿ ಹಣಕಾಸು ಸಂಪನ್ಮೂಲಗಳ ಲಭ್ಯತೆ. ನಾಲ್ಕನೆಯ ತತ್ವವೆಂದರೆ ಉತ್ತರದಾಯಿತ್ವ, ಪಾರದರ್ಶಕತೆ ಮತ್ತು ಅಳೆಯಬಹುದಾದ ಫಲಿತಾಂಶಗಳು, ಈ ಫಲಿತಾಂಶಗಳೇ ಎಲ್ಲಾ ವೆಚ್ಚಗಳಿಗೆ ಮಾರ್ಗದರ್ಶನ ನೀಡುತ್ತವೆ ಎಂದು ಅವರು ವಿವರಿಸಿದರು.

ವಿಪತ್ತು ಅಪಾಯ ತಗ್ಗಿಸುವಿಕೆ ಹಣಕಾಸು ರಾಷ್ಟ್ರೀಯ ಸ್ವಾಮ್ಯದ್ದಾಗಿರಬೇಕು ಮತ್ತು ಸರ್ಕಾರದಿಂದ ಚಾಲಿತವಾಗಿರಬೇಕು. ಅಂತಾರಾಷ್ಟ್ರೀಯ ಸಹಕಾರದಿಂದ ಅದು ಪೂರಕವಾಗಿರಬೇಕು ಎಂದು ಡಾ. ಮಿಶ್ರಾ ಒತ್ತಿ ಹೇಳಿದರು. ಪ್ರತಿ ದೇಶವು ತನ್ನ ವ್ಯವಸ್ಥೆಯನ್ನು ಅದರ ಆಡಳಿತ ಚೌಕಟ್ಟು, ಹಣಕಾಸಿನ ಸಂದರ್ಭ ಮತ್ತು ಅಪಾಯದ ಪರಿಸ್ಥಿತಿಗಳಿಗೆ ಸರಿ ಹೊಂದಿಸಕು. ಆದರೆ, ಇಲ್ಲಿ ಜಾಗತಿಕ ಮಾನದಂಡಗಳು ಮತ್ತು ಮಾರ್ಗದರ್ಶನ ಅತ್ಯಗತ್ಯ ಎಂದು ತಿಳಿಸಿದರು.

ಸಾರ್ವಜನಿಕ ಹಣಕಾಸಿನ ಆಚೆಗಿನ ವೈವಿಧ್ಯಮಯ ಹಣಕಾಸು ಸಾಧನಗಳ ಅಗತ್ಯವನ್ನು ಒತ್ತಿ ಹೇಳಿದ ಅವರು ರಿಸ್ಕ್‌ ಪೂಲಿಂಗ್, ವಿಮೆ ಮತ್ತು ನವೀನ ಹಣಕಾಸು ಸಾಧನಗಳಂತಹ ಕಾರ್ಯವಿಧಾನಗಳನ್ನು ಸ್ಥಳೀಯವಾಗಿ ಕೈಗೆಟುಕುವಂತೆ ಮತ್ತು ಹಣಕಾಸಿನ ಸುಸ್ಥಿರತೆಗೆ ಅನುಗುಣವಾಗಿ ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.

ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ನಿರ್ಣಾಯಕ ಅಂತರವನ್ನು ಡಾ. ಮಿಶ್ರಾ ಅವರು ಗುರುತಿಸಿದರು, ಅದೆಂದರೆ: ವಿಪತ್ತು ಅಪಾಯ ತಗ್ಗಿಸುವಿಕೆಗಾಗಿ ಹಣಕಾಸು ನೆರವು ವ್ಯವಸ್ಥೆಗಳ ಸ್ಥಾಪನೆ ಮತ್ತು ಬಲವರ್ಧನೆಯನ್ನು ಬೆಂಬಲಿಸಲು ಪ್ರತ್ಯೇಕವಾದ ಅಂತಾರಾಷ್ಟ್ರೀಯ ಹಣಕಾಸು ಕಾರ್ಯವಿಧಾನದ ಅನುಪಸ್ಥಿತಿ. ಕ್ಷಿಪ್ರಗತಿಯ ಧನಸಹಾಯ, ತಾಂತ್ರಿಕ ನೆರವು ಮತ್ತು ಜ್ಞಾನ ವಿನಿಮಯಕ್ಕೆ ವೇದಿಕೆಯನ್ನು ಒದಗಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಮತ್ತು ಬಹುಪಕ್ಷೀಯ ಹಣಕಾಸು ಸಂಸ್ಥೆಗಳ ಬೆಂಬಲದೊಂದಿಗೆ ಜಾಗತಿಕ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಲು ಅವರು ಕರೆ ನೀಡಿದರು.

ಉದ್ದೇಶಿತ ಹೇಳಿಕೆಗಳನ್ನು ಮೀರಿ ದೃಢವಾದ, ಕಾಲಮಿತಿಯ ಫಲಿತಾಂಶಗಳತ್ತ ಸಾಗುವಂತೆ ಸಚಿವರ ಮಟ್ಟದ ದುಂಡುಮೇಜಿನ ಸಭೆಯನ್ನು ಭಾರತವು ಒತ್ತಾಯಿಸಿತು. ರಾಷ್ಟ್ರೀಯ ಚಾಲಿತ ಮತ್ತು ಅಂತಾರಾಷ್ಟ್ರೀಯವಾಗಿ ಬೆಂಬಲಿತವಾದ ʻವಿಪತ್ತು ಅಪಾಯ ತಗ್ಗಿಸುವಿಕೆಗಾಗಿ ಹಣಕಾಸು ನೆರವುʼ ಚೌಕಟ್ಟನ್ನು ಅಭಿವೃದ್ಧಿಪಡಿಸುವಲ್ಲಿ ನಾಯಕತ್ವ ಮತ್ತು ಸಹಯೋಗಕ್ಕೆ ಭಾರತದ ಬದ್ಧತೆಯನ್ನು ಡಾ. ಮಿಶ್ರಾ ಅವರು ಪುನರುಚ್ಚರಿಸಿದರು.

 

 

*****


(Release ID: 2134515) Visitor Counter : 3