ಪ್ರಧಾನ ಮಂತ್ರಿಯವರ ಕಛೇರಿ
ಉದಯೋನ್ಮುಖ ಈಶಾನ್ಯ ಹೂಡಿಕೆದಾರರ ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
23 MAY 2025 2:03PM by PIB Bengaluru
ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿಗಳಾದ ಜ್ಯೋತಿರಾದಿತ್ಯ ಸಿಂಧಿಯಾ ಜಿ ಮತ್ತು ಸುಕಾಂತ ಮಜುಂದಾರ್ ಜಿ, ಮಣಿಪುರ ರಾಜ್ಯಪಾಲರಾದ ಅಜಯ್ ಭಲ್ಲಾ ಜಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜಿ, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಜಿ, ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಾಹಾ ಜಿ, ಮೇಘಾಲಯದ ಮುಖ್ಯಮಂತ್ರಿ ತಂಗ್ಮಾಂಗ್ ಸಿನ್ರಾಡ್ ಎಸ್. ನಾಗಾಲ್ಯಾಂಡ್ ಮುಖ್ಯಮಂತ್ರಿ ನೇಫಿಯು ರಿಯೊ ಜಿ, ಮಿಜೋರಾಮ್‌ನ ಮುಖ್ಯಮಂತ್ರಿ ಲಾಲ್ದುಹೋಮಾ ಜಿ, ಉದ್ಯಮ ರಂಗದ ದಿಗ್ಗಜರೆ, ಹೂಡಿಕೆದಾರರೆ, ಮಹಿಳೆಯರು ಮತ್ತು ಮಹನೀಯರೆ!
ಉದಯೋನ್ಮುಖ ಈಶಾನ್ಯ ಹೂಡಿಕೆದಾರರ ಶೃಂಗಸಭೆಯ ಈ ಭವ್ಯ ವೇದಿಕೆಯಲ್ಲಿ, ನನಗೆ ಹೆಮ್ಮೆ, ಬೆಚ್ಚಗಿನ ಅನುಭವ, ಇಲ್ಲಿನ ಭಾಗವಹಿಸುವಿಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಉಜ್ವಲ ಭವಿಷ್ಯದಲ್ಲಿ ಅಪಾರ ವಿಶ್ವಾಸ ಮೂಡಿದೆ. ಕೆಲವೇ ತಿಂಗಳುಗಳ ಹಿಂದೆ, ನಾವು ಭಾರತ್ ಮಂಟಪದಲ್ಲಿ ಅಷ್ಟಲಕ್ಷ್ಮಿ ಉತ್ಸವ ಆಚರಿಸಿದ್ದೇವೆ. ಇಂದು, ನಾವು ಈಶಾನ್ಯದಲ್ಲಿ ಹೂಡಿಕೆಯ ಹಬ್ಬವನ್ನು ಆಚರಿಸುತ್ತಿದ್ದೇವೆ. ಇಲ್ಲಿ ಅನೇಕ ಉದ್ಯಮ ದಿಗ್ಗಜರು ಸೇರಿದ್ದಾರೆ. ಇದು ಈಶಾನ್ಯದ ಬಗ್ಗೆ ಪ್ರತಿಯೊಬ್ಬರೂ ಹೊಂದಿರುವ ಉತ್ಸಾಹ, ಸಂಭ್ರಮ, ಉತ್ತೇಜನ ಮತ್ತು ಹೊಸ ಕನಸುಗಳನ್ನು ತೋರಿಸುತ್ತದೆ. ಈ ಸಾಧನೆಗಾಗಿ ಎಲ್ಲಾ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮ ಪ್ರಯತ್ನಗಳು ಇಲ್ಲಿ ಹೂಡಿಕೆಗೆ ಅತ್ಯುತ್ತಮ ವಾತಾವರಣವನ್ನು ಸೃಷ್ಟಿಸಿವೆ. ನನ್ನ ಮತ್ತು ಭಾರತ ಸರ್ಕಾರದ ಪರವಾಗಿ, ಈಶಾನ್ಯ ರೈಸಿಂಗ್ ಶೃಂಗಸಭೆಯ ಯಶಸ್ಸಿಗಾಗಿ ನಿಮ್ಮೆಲ್ಲರಿಗೂ ಶುಭ ಹಾರೈಸುತ್ತೇನೆ.
ಸ್ನೇಹಿತರೆ,
ಭಾರತವನ್ನು ವಿಶ್ವದ ಅತ್ಯಂತ ವೈವಿಧ್ಯಮಯ ರಾಷ್ಟ್ರವೆಂದು ಪರಿಗಣಿಸಲಾಗಿದೆ, ನಮ್ಮ ಈಶಾನ್ಯವು ಈ ವೈವಿಧ್ಯಮಯ ರಾಷ್ಟ್ರದ ಅತ್ಯಂತ ವೈವಿಧ್ಯಮಯ ಭಾಗವಾಗಿದೆ. ವ್ಯಾಪಾರ ವ್ಯವಹಾರದಿಂದ ಹಿಡಿದು ಸಂಪ್ರದಾಯದವರೆಗೆ, ಜವಳಿಯಿಂದ ಹಿಡಿದು ಪ್ರವಾಸೋದ್ಯಮದವರೆಗೆ, ಈಶಾನ್ಯದ ವೈವಿಧ್ಯತೆಯು ದೊಡ್ಡ ಶಕ್ತಿಯಾಗಿದೆ. ಈಶಾನ್ಯ ಎಂದರೆ ಜೈವಿಕ ಆರ್ಥಿಕತೆ ಮತ್ತು ಬಿದಿರು, ಈಶಾನ್ಯ ಎಂದರೆ ಚಹಾ ಉತ್ಪಾದನೆ ಮತ್ತು ಪೆಟ್ರೋಲಿಯಂ, ಈಶಾನ್ಯ ಎಂದರೆ ಕ್ರೀಡೆ ಮತ್ತು ಕೌಶಲ್ಯ, ಈಶಾನ್ಯ ಎಂದರೆ ಪರಿಸರ ಪ್ರವಾಸೋದ್ಯಮದ ಕೇಂದ್ರವಾಗಿ ಹೊರಹೊಮ್ಮುತ್ತಿದೆ, ಈಶಾನ್ಯ ಎಂದರೆ ಸಾವಯವ ಉತ್ಪನ್ನಗಳ ಹೊಸ ಜಗತ್ತನ್ನು ಪ್ರತಿನಿಧಿಸುತ್ತದೆ, ಈಶಾನ್ಯವು ಇಂಧನದ ಶಕ್ತಿಕೇಂದ್ರವಾಗಿದೆ. ಅದಕ್ಕಾಗಿಯೇ, ಈಶಾನ್ಯವು ನಮ್ಮ ಅಷ್ಟಲಕ್ಷ್ಮಿ(8 ರೂಪಗಳ ಸಮೃದ್ಧಿ). ಈ ಅಷ್ಟಲಕ್ಷ್ಮಿಯ ಆಶೀರ್ವಾದದಿಂದ, ಈಶಾನ್ಯದ ಪ್ರತಿಯೊಂದು ರಾಜ್ಯವು ಹೇಳುತ್ತಿದೆ - ನಾವು ಹೂಡಿಕೆಗೆ ಸಿದ್ಧರಿದ್ದೇವೆ, ನಾವು ಮುನ್ನಡೆಸಲು ಸಿದ್ಧರಿದ್ದೇವೆ ಎಂದು.
ಸ್ನೇಹಿತರೆ,
‘ವಿಕಸಿತ ಭಾರತ’(ಅಭಿವೃದ್ಧಿ ಹೊಂದಿದ ಭಾರತ) ನಿರ್ಮಾಣಕ್ಕಾಗಿ ಪೂರ್ವ ಭಾರತವು ಅಭಿವೃದ್ಧಿ ಹೊಂದುವುದು ಅತ್ಯಗತ್ಯ. ಈಶಾನ್ಯವು ಪೂರ್ವ ಭಾರತದ ಪ್ರಮುಖ ಭಾಗವಾಗಿದೆ. ನಮಗೆ, ಪೂರ್ವವು ಕೇವಲ ಒಂದು ನಿರ್ದೇಶನವಲ್ಲ - ಇದು ಸಬಲೀಕರಣ, ಕಾರ್ಯ, ಬಲವರ್ಧನೆ ಮತ್ತು ಪರಿವರ್ತನೆಯನ್ನು ಸೂಚಿಸುತ್ತದೆ. ಇದು ಪೂರ್ವ ಭಾರತಕ್ಕೆ ನಮ್ಮ ಸರ್ಕಾರದ ನೀತಿಯಾಗಿದೆ. ಇದೇ ನೀತಿ, ಇದೇ ಆದ್ಯತೆಯು ಪೂರ್ವ ಭಾರತವನ್ನು - ಮತ್ತು ನಮ್ಮ ಈಶಾನ್ಯವನ್ನು - ಬೆಳವಣಿಗೆಯ ಕೇಂದ್ರ ಹಂತಕ್ಕೆ ತಂದಿದೆ.
ಸ್ನೇಹಿತರೆ,
ಕಳೆದ 11 ವರ್ಷಗಳಲ್ಲಿ ಈಶಾನ್ಯ ಕಂಡಿರುವ ಪರಿವರ್ತನೆಯು ಕೇವಲ ಸಂಖ್ಯೆಯ ಬಗ್ಗೆ ಅಲ್ಲ, ಇದು ನೆಲದ ಮೇಲೆ ಅನುಭವಿಸಬಹುದಾದ ಬದಲಾವಣೆಯಾಗಿದೆ. ನಾವು ಸರ್ಕಾರಿ ಯೋಜನೆಗಳ ಮೂಲಕ ಈಶಾನ್ಯದೊಂದಿಗೆ ಸಂಪರ್ಕ ನಿರ್ಮಿಸದೆ, ನಾವು ಹೃದಯದಿಂದ ಬಾಂಧವ್ಯವನ್ನು ನಿರ್ಮಿಸಿದ್ದೇವೆ. ಈ ವಿಷಯ ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು, ನಮ್ಮ ಕೇಂದ್ರ ಸರ್ಕಾರದ ಸಚಿವರು ಈಶಾನ್ಯಕ್ಕೆ 700ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದಾರೆ. ಇದು ಭೇಟಿ ಮತ್ತು ಇಲ್ಲಿಗೆ ಹೊರಡುವುದು ಮಾತ್ರವಲ್ಲ, ರಾತ್ರಿಯಿಡೀ ಇಲ್ಲೇ ಉಳಿಯುವುದು ನಿಯಮವಾಗಿತ್ತು. ಅವರು ಈ ಭೂಮಿಯ ನಿಜವಾದ ಸತ್ವವನ್ನು ಅನುಭವಿಸಿದರು, ಜನರ ದೃಷ್ಟಿಯಲ್ಲಿ ಇರುವ ಭರವಸೆಯನ್ನು ನೋಡಿದರು, ಅವರು ಆ ನಂಬಿಕೆಯನ್ನು ಅಭಿವೃದ್ಧಿ-ಚಾಲಿತ ನೀತಿಯಾಗಿ ಪರಿವರ್ತಿಸಿದರು. ನಾವು ಮೂಲಸೌಕರ್ಯ ಅಭಿವೃದ್ಧಿಯನ್ನು ಕೇವಲ ಇಟ್ಟಿಗೆ ಮತ್ತು ಸಿಮೆಂಟ್ ಮೂಲಕ ನೋಡಲಿಲ್ಲ, ನಾವು ಅದನ್ನು ಭಾವನಾತ್ಮಕ ಸಂಪರ್ಕದ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದೇವೆ. ನಾವು “ಲುಕ್ ಈಸ್ಟ್ ನೀತಿ”ಯನ್ನು ಮೀರಿ “ಆಕ್ಟ್ ಈಸ್ಟ್” ಎಂಬ ಮಂತ್ರವನ್ನು ಅಳವಡಿಸಿಕೊಂಡಿದ್ದೇವೆ. ಇಂದು ನಾವು ಅದರ ಫಲಿತಾಂಶಗಳನ್ನು ನೋಡುತ್ತಿದ್ದೇವೆ. ಈಶಾನ್ಯವನ್ನು ಕೇವಲ ಗಡಿ ಪ್ರದೇಶ ಎಂದು ಕರೆಯುತ್ತಿದ್ದ ಕಾಲವಿತ್ತು. ಇಂದು ಅದು ಬೆಳವಣಿಗೆಯ ಮುಂಚೂಣಿಯಲ್ಲಿದೆ.
ಸ್ನೇಹಿತರೆ,
ಆಧನೀಕ ಮೂಲಸೌಕರ್ಯವು ಪ್ರವಾಸೋದ್ಯಮವನ್ನು ಹೆಚ್ಚು ಆಕರ್ಷಕವಾಗಿಸುತ್ತದೆ. ಬಲಿಷ್ಠ ಮೂಲಸೌಕರ್ಯ ಇರುವಲ್ಲಿ, ಹೂಡಿಕೆದಾರರು ಹೆಚ್ಚಿನ ವಿಶ್ವಾಸ ಗಳಿಸುತ್ತಾರೆ. ಉತ್ತಮ ರಸ್ತೆಗಳು, ಸದೃಢವಾದ ವಿದ್ಯುತ್ ಮೂಲಸೌಕರ್ಯ ಮತ್ತು ಪರಿಣಾಮಕಾರಿ ಸರಕು ಸಾಗಣೆ ಜಾಲವು ಯಾವುದೇ ಉದ್ಯಮದ ಬೆನ್ನೆಲುಬಾಗಿದೆ. ತಡೆರಹಿತ ಸಂಪರ್ಕ ಇರುವಲ್ಲಿ ವ್ಯಾಪಾರವು ಅಭಿವೃದ್ಧಿ ಹೊಂದುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಗುಣಮಟ್ಟದ ಮೂಲಸೌಕರ್ಯವು ಯಾವುದೇ ರೀತಿಯ ಅಭಿವೃದ್ಧಿಗೆ ಭದ್ರ ಬುನಾದಿ ಮತ್ತು ಮೊದಲ ಅವಶ್ಯಕತೆಯಾಗಿದೆ. ಅದಕ್ಕಾಗಿಯೇ ನಾವು ಈಶಾನ್ಯದಲ್ಲಿ ಮೂಲಸೌಕರ್ಯ ಕ್ರಾಂತಿಯನ್ನೇ ಆರಂಭಿಸಿದ್ದೇವೆ. ದೀರ್ಘಕಾಲದವರೆಗೆ, ಈಶಾನ್ಯವು ನಿರ್ಲಕ್ಷ್ಯಕ್ಕೊಳಗಾಗಿತ್ತು. ಆದರೆ ಈಗ, ಈಶಾನ್ಯವು ಅವಕಾಶಗಳ ಭೂಮಿಯಾಗುತ್ತಿದೆ. ನಾವು ಈಶಾನ್ಯದಲ್ಲಿ ಸಂಪರ್ಕ ಮೂಲಸೌಕರ್ಯದಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಹೂಡಿಕೆ ಮಾಡಿದ್ದೇವೆ. ನೀವು ಅರುಣಾಚಲ ಪ್ರದೇಶಕ್ಕೆ ಹೋದರೆ, ನೀವು ಸೆಲಾ ಸುರಂಗದಂತಹ ಮೂಲಸೌಕರ್ಯ ಯೋಜನೆಗಳನ್ನು ನೋಡುತ್ತೀರಿ. ಅಸ್ಸಾಂನಲ್ಲಿ, ಭೂಪೇನ್ ಹಜಾರಿಕಾ ಸೇತುವೆಯಂತಹ ಬೃಹತ್ ಯೋಜನೆಗಳನ್ನು ನೀವು ವೀಕ್ಷಿಸುತ್ತೀರಿ. ಕೇವಲ 1 ದಶಕದಲ್ಲಿ, ನಾವು ಈಶಾನ್ಯದಲ್ಲಿ 11,000 ಕಿಲೋಮೀಟರ್ ಹೊಸ ಹೆದ್ದಾರಿಗಳನ್ನು ನಿರ್ಮಿಸಿದ್ದೇವೆ. ನೂರಾರು ಕಿಲೋಮೀಟರ್ ಹೊಸ ರೈಲ್ವೆ ಮಾರ್ಗಗಳನ್ನು ನಿರ್ಮಿಸಲಾಗಿದೆ. ಈಶಾನ್ಯದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಂಡಿದೆ. ಬ್ರಹ್ಮಪುತ್ರ ಮತ್ತು ಬರಾಕ್ ನದಿಗಳಲ್ಲಿ ಜಲಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ನೂರಾರು ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲಾಗಿದೆ, ಅಷ್ಟೇ ಅಲ್ಲ, 1,600 ಕಿಲೋಮೀಟರ್ ಉದ್ದದ ಪೈಪ್‌ಲೈನ್, ಈಶಾನ್ಯ ಗ್ಯಾಸ್ ಗ್ರಿಡ್ ಅನ್ನು ಸಹ ಸ್ಥಾಪಿಸಲಾಗಿದೆ. ಇದು ಕೈಗಾರಿಕೆಗಳಿಗೆ ವಿಶ್ವಾಸಾರ್ಹ ಅನಿಲ ಪೂರೈಕೆಯನ್ನು ಖಚಿತಪಡಿಸುತ್ತದೆ. ಸಂಕ್ಷಿಪ್ತವಾಗಿ, ಹೆದ್ದಾರಿಗಳು, ರೈಲ್ವೆಗಳು, ಜಲಮಾರ್ಗಗಳು ಮತ್ತು ಎಕ್ಸ್ ಪ್ರೆಸ್ ವೇಗಳು - ಈಶಾನ್ಯದಲ್ಲಿ ಪ್ರತಿಯೊಂದು ರೂಪದಲ್ಲೂ ಸಂಪರ್ಕವನ್ನು ಬಲಪಡಿಸಲಾಗುತ್ತಿದೆ. ಈಶಾನ್ಯದಲ್ಲಿಮೂಲಸೌಕರ್ಯದ ಭೂಮಿಕೆಯನ್ನು ಸಿದ್ಧಪಡಿಸಲಾಗಿದೆ. ನಮ್ಮ ಕೈಗಾರಿಕೆಗಳು ಮುಂದೆ ಬಂದು ಈ ಅವಕಾಶದ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು.
ಸ್ನೇಹಿತರೆ,
ಮುಂಬರುವ ದಶಕದಲ್ಲಿ, ಈಶಾನ್ಯದ ವ್ಯಾಪಾರ ಸಾಮರ್ಥ್ಯವು ಹಲವು ಪಟ್ಟು ಬೆಳೆಯಲಿದೆ. ಇಂದು ಭಾರತ ಮತ್ತು ಆಸಿಯಾನ್ ನಡುವಿನ ವ್ಯಾಪಾರ ಪ್ರಮಾಣವು ಸುಮಾರು 125 ಶತಕೋಟಿ ಡಾಲರ್ ಗೆ ಏರಿಕೆ ಕಂಡಿದೆ. ಮುಂಬರುವ ವರ್ಷಗಳಲ್ಲಿ, ಇದು 200 ಶತಕೋಟಿ ಡಾಲರ್ ದಾಟುತ್ತದೆ. ಈಶಾನ್ಯವು ಈ ವ್ಯಾಪಾರಕ್ಕೆ ಬಲವಾದ ಸಂಪರ್ಕ ಸೇತುವಾಗಲಿದೆ. ಆಸಿಯಾನ್‌ಗೆ ಇದು ಪ್ರವೇಶ ದ್ವಾರ. ಈ ದೃಷ್ಟಿಕೋನವನ್ನು ಬೆಂಬಲಿಸಲು ನಾವು ಅಗತ್ಯ ಮೂಲಸೌಕರ್ಯವನ್ನು ವೇಗವಾಗಿ ಅಭಿವೃದ್ಧಿಪಡಿಸುತ್ತಿದ್ದೇವೆ. ಭಾರತ-ಮ್ಯಾನ್ಮಾರ್-ಥಾಯ್ಲೆಂಡ್ ತ್ರಿಪಕ್ಷೀಯ ಹೆದ್ದಾರಿಯು ಮ್ಯಾನ್ಮಾರ್ ಮೂಲಕ ಥಾಯ್ಲೆಂಡಿಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಇದು ಥಾಯ್ಲೆಂಡ್, ವಿಯೆಟ್ನಾಂ ಮತ್ತು ಲಾವೋಸ್‌ನಂತಹ ದೇಶಗಳೊಂದಿಗೆ ಭಾರತದ ಸಂಪರ್ಕವನ್ನು ಸುಲಭಗೊಳಿಸುತ್ತದೆ. ನಮ್ಮ ಸರ್ಕಾರವು ಕೋಲ್ಕತ್ತಾ ಬಂದರನ್ನು ಮ್ಯಾನ್ಮಾರ್‌ನ ಸಿಟ್ವೆ ಬಂದರಿಗೆ ಸಂಪರ್ಕಿಸುವ ಮತ್ತು ಮಿಜೋರಾಂ ಮೂಲಕ ಈಶಾನ್ಯದ ಉಳಿದ ಭಾಗಗಳನ್ನು ಮತ್ತಷ್ಟು ಸಂಪರ್ಕಿಸುವ ಕಲಾಡನ್ ಮಲ್ಟಿಮೋಡಲ್ ಟ್ರಾನ್ಸಿಟ್ ಯೋಜನೆಯನ್ನು ಪೂರ್ಣಗೊಳಿಸಲು ತ್ವರಿತವಾಗಿ ಕೆಲಸ ಮಾಡುತ್ತಿದೆ. ಇದು ಪಶ್ಚಿಮ ಬಂಗಾಳ ಮತ್ತು ಮಿಜೋರಾಂ ನಡುವಿನ ಅಂತರವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ, ಕೈಗಾರಿಕೆ ಮತ್ತು ವ್ಯಾಪಾರಕ್ಕೆ ಪ್ರಮುಖ ವರದಾನವಾಗಿದೆ.
ಸ್ನೇಹಿತರೆ,
ಇಂದು ಗುವಾಹಟಿ, ಇಂಫಾಲ್ ಮತ್ತು ಅಗರ್ತಲಾ ನಗರಗಳನ್ನು ಬಹು-ಮಾದರಿ ಸರಕು ಸಾಗಣೆ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಮೇಘಾಲಯ ಮತ್ತು ಮಿಜೋರಾಂನಲ್ಲಿ, ಭೂ ಕಸ್ಟಮ್ಸ್ ಕೇಂದ್ರಗಳು ಈಗ ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಹೊಸ ಉತ್ತೇಜನ ನೀಡುತ್ತಿವೆ. ಈ ಎಲ್ಲಾ ಪ್ರಯತ್ನಗಳಿಂದಾಗಿ, ಈಶಾನ್ಯವು ಇಂಡೋ-ಪೆಸಿಫಿಕ್ ದೇಶಗಳೊಂದಿಗೆ ವ್ಯಾಪಾರ ವಹಿವಾಟಿದಲ್ಲಿ ಹೊಸ ಹೆಸರಾಗಿ ಹೊರಹೊಮ್ಮುತ್ತಿದೆ. ಅಂದರೆ ಈಶಾನ್ಯದಲ್ಲಿ ನಿಮಗಾಗಿ ಹೊಸ ಸಾಧ್ಯತೆಗಳ ಆಕಾಶ ತೆರೆದುಕೊಳ್ಳುತ್ತಿದೆ.
ಸ್ನೇಹಿತರೆ,
ಭಾರತವನ್ನು ಜಾಗತಿಕ ಆರೋಗ್ಯ ಮತ್ತು ಯೋಗಕ್ಷೇಮ ಪರಿಹಾರದ ಪೂರೈಕೆದಾರರಾಗಿ ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ. "ಭಾರತದಲ್ಲಿ ಗುಣಪಡಿಸು(ಆರೈಕೆ)" ಎಂಬ ಮಂತ್ರವನ್ನು ಜಾಗತಿಕ ಮಂತ್ರವನ್ನಾಗಿ ಮಾಡುವುದು ನಮ್ಮ ಧ್ಯೇಯವಾಗಿದೆ. ಈಶಾನ್ಯವು ಪ್ರಕೃತಿಯಲ್ಲಿ ಶ್ರೀಮಂತವಾಗಿದೆ, ಆದರೆ ಇದು ಸಾವಯವ ಜೀವನಶೈಲಿಗೆ ಪರಿಪೂರ್ಣ ತಾಣವಾಗಿದೆ. ಅದರ ಜೀವವೈವಿಧ್ಯತೆ, ಅದರ ಹವಾಮಾನವು ಯೋಗಕ್ಷೇಮಕ್ಕಾಗಿ ನೈಸರ್ಗಿಕ ಔಷಧದಂತೆ ಕಾರ್ಯ ನಿರ್ವಹಿಸುತ್ತವೆ. ಅದಕ್ಕಾಗಿಯೇ “ಹೀಲ್ ಇನ್ ಇಂಡಿಯಾ” ಮಿಷನ್‌ನಲ್ಲಿ ಹೂಡಿಕೆ ಅವಕಾಶಗಳಿಗಾಗಿ ಈಶಾನ್ಯವನ್ನು ಅನ್ವೇಷಿಸುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ.
ಸ್ನೇಹಿತರೆ,
ಸಂಗೀತ, ನೃತ್ಯ ಮತ್ತು ಆಚರಣೆಯನ್ನು ಈಶಾನ್ಯದ ಸಂಸ್ಕೃತಿಯಲ್ಲೇ ಹೆಣೆಯಲಾಗಿದೆ. ಅದು ಜಾಗತಿಕ ಸಮ್ಮೇಳನಗಳು, ಸಂಗೀತ ಕಚೇರಿಗಳು ಮತ್ತು ಗಮ್ಯಸ್ಥಾನ ವಿವಾಹ(ಡೆಸ್ಟಿನೇಷನ್ ವೆಡ್ಡಿಂಗ್)ಗಳಿಗೆ ಅದ್ಭುತ ತಾಣವನ್ನಾಗಿ ಮಾಡುತ್ತದೆ. ಹಲವು ವಿಧಗಳಲ್ಲಿ, ಈಶಾನ್ಯವು ಪ್ರವಾಸೋದ್ಯಮಕ್ಕೆ ಸಂಪೂರ್ಣ ಪ್ಯಾಕೇಜ್ ಆಗಿದೆ. ಈಗ ಅಭಿವೃದ್ಧಿಯ ಪ್ರಯೋಜನಗಳು ಈಶಾನ್ಯದ ಪ್ರತಿಯೊಂದು ಮೂಲೆಯನ್ನು ತಲುಪುತ್ತಿರುವುದರಿಂದ, ಪ್ರವಾಸೋದ್ಯಮದ ಮೇಲೂ ನಾವು ಸಕಾರಾತ್ಮಕ ಪರಿಣಾಮವನ್ನು ನೋಡುತ್ತಿದ್ದೇವೆ. ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದೆ, ಇದು ಕೇವಲ ಸಂಖ್ಯೆಗಳಿಗೆ ಸೀಮಿತವಾಗಿಲ್ಲ, ಹಳ್ಳಿಗಳಲ್ಲಿ ಹೋಂ ಸ್ಟೇಗಳನ್ನು ನಿರ್ಮಿಸಲಾಗುತ್ತಿದೆ, ಯುವಕರು ಮಾರ್ಗದರ್ಶಕರಾಗಿ ಹೊಸ ಅವಕಾಶಗಳನ್ನು ಪಡೆಯುತ್ತಿದ್ದಾರೆ, ಪೂರ್ಣ ಪ್ರವಾಸ ಮತ್ತು ಪ್ರಯಾಣ ಪರಿಸರ ವ್ಯವಸ್ಥೆಯು ಅಭಿವೃದ್ಧಿ ಹೊಂದುತ್ತಿದೆ. ಈಗ ನಾವು ಇದನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಬೇಕು. ಪರಿಸರ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮದಲ್ಲಿ ನಿಮ್ಮೆಲ್ಲರಿಗೂ ಸಾಕಷ್ಟು ಹೊಸ ಹೂಡಿಕೆ ಅವಕಾಶಗಳು ಕಾಯುತ್ತಿವೆ.
ಸ್ನೇಹಿತರೆ,
ಯಾವುದೇ ಪ್ರದೇಶದ ಅಭಿವೃದ್ಧಿಗೆ, ಅತ್ಯಂತ ಮುಖ್ಯವಾದ ಅವಶ್ಯಕತೆಯೆಂದರೆ ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆ. ಅದು ಭಯೋತ್ಪಾದನೆಯಾಗಿರಲಿ ಅಥವಾ ಮಾವೋವಾದಿ ಹಾವಳಿಯಾಗಿರಲಿ, ನಮ್ಮ ಸರ್ಕಾರವು ಶೂನ್ಯ ಸಹಿಷ್ಣುತಾ ನೀತಿಯನ್ನು ಅನುಸರಿಸುತ್ತಿದೆ. ಈಶಾನ್ಯವು ಬಾಂಬ್‌ಗಳು, ಬಂದೂಕುಗಳು ಮತ್ತು ದಿಗ್ಬಂಧನಗಳೊಂದಿಗೆ ಸಂಬಂಧ ಹೊಂದಿದ್ದ ಒಂದು ಕಾಲವಿತ್ತು. ಈಶಾನ್ಯದ ಉಲ್ಲೇಖವು ಈ ಚಿತ್ರಗಳನ್ನು ಮನಸ್ಸಿಗೆ ತರುತ್ತಿತ್ತು. ಇದು ಈ ಪ್ರದೇಶದ ಯುವಕರಿಗೆ ಅಪಾರ ನಷ್ಟ ಉಂಟುಮಾಡಿತು, ಲೆಕ್ಕವಿಲ್ಲದಷ್ಟು ಅವಕಾಶಗಳು ಅವರ ಕೈಯಿಂದ ಜಾರಿಹೋದವು. ಆದರೆ ನಮ್ಮ ಗಮನವು ಈಶಾನ್ಯದ ಯುವಕರ ಭವಿಷ್ಯದ ಮೇಲೆ. ಅದಕ್ಕಾಗಿಯೇ ನಾವು ಒಂದರ ನಂತರ ಒಂದರಂತೆ ಶಾಂತಿ ಒಪ್ಪಂದಗಳಿಗೆ ಸಹಿ ಹಾಕಿದ್ದೇವೆ, ಯುವಜನರು ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರಲು ಅವಕಾಶ ನೀಡುತ್ತಿದ್ದೇವೆ. ಕಳೆದ 10–11 ವರ್ಷಗಳಲ್ಲಿ, 10,000ಕ್ಕೂ ಹೆಚ್ಚು ಯುವಕರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸುವ ಮೂಲಕ ಶಾಂತಿಯ ಹಾದಿ ಆರಿಸಿಕೊಂಡಿದ್ದಾರೆ. ಇಂದು ಈಶಾನ್ಯದ ಯುವಕರು ತಮ್ಮ ಸ್ವಂತ ಪ್ರದೇಶಗಳಲ್ಲೇ ಉದ್ಯೋಗ ಮತ್ತು ಸ್ವ-ಉದ್ಯೋಗಕ್ಕಾಗಿ ಹೊಸ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಮುದ್ರಾ ಯೋಜನೆಯ ಮೂಲಕ ಈಶಾನ್ಯದ ಲಕ್ಷಾಂತರ ಯುವಕರು ಸಾವಿರಾರು ಕೋಟಿ ರೂಪಾಯಿ ಮೊತ್ತದ ಆರ್ಥಿಕ ಸಹಾಯ ಪಡೆದಿದ್ದಾರೆ. ಹೆಚ್ಚುತ್ತಿರುವ ಶಿಕ್ಷಣ ಸಂಸ್ಥೆಗಳು ಈ ಯುವಕರಿಗೆ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತಿವೆ. ಈಗ ಈಶಾನ್ಯದ ಯುವಕರು ಕೇವಲ ಇಂಟರ್ನೆಟ್ ಬಳಕೆದಾರರಾಗದೆ, ಅವರು ಡಿಜಿಟಲ್ ನಾವೀನ್ಯಕಾರರಾಗುತ್ತಿದ್ದಾರೆ. 13,000 ಕಿಲೋಮೀಟರ್‌ಗಳಿಗೂ ಹೆಚ್ಚು ಆಪ್ಟಿಕಲ್ ಫೈಬರ್, 4ಜಿ ಮತ್ತು 5ಜಿ ವ್ಯಾಪ್ತಿ ಮತ್ತು ತಂತ್ರಜ್ಞಾನದಲ್ಲಿ ಉದಯೋನ್ಮುಖ ಅವಕಾಶಗಳೊಂದಿಗೆ, ಯುವಜನರು ಈಗ ತಮ್ಮದೇ ಆದ ಪಟ್ಟಣಗಳಿಂದ ದೊಡ್ಡ ಪ್ರಮಾಣದ ಸ್ಟಾರ್ಟಪ್‌ಗಳನ್ನು ಪ್ರಾರಂಭಿಸುತ್ತಿದ್ದಾರೆ. ಈಶಾನ್ಯವು ಭಾರತದ ಡಿಜಿಟಲ್ ಪ್ರವೇಶ ದ್ವಾರವಾಗುತ್ತಿದೆ.
ಸ್ನೇಹಿತರೆ,
ಬೆಳವಣಿಗೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಕೌಶಲ್ಯಗಳು ಎಷ್ಟು ಮುಖ್ಯ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಈಶಾನ್ಯವು ಇದಕ್ಕೆ ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ. ಕೇಂದ್ರ ಸರ್ಕಾರವು ಈ ಪ್ರದೇಶದ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಪರಿಸರ ವ್ಯವಸ್ಥೆಯಲ್ಲಿ ಬೃಹತ್ ಹೂಡಿಕೆಗಳನ್ನು ಮಾಡುತ್ತಿದೆ. ಕಳೆದ ದಶಕದಲ್ಲಿ, ಈಶಾನ್ಯದ ಶಿಕ್ಷಣ ಕ್ಷೇತ್ರದಲ್ಲಿ 21,000 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. ಸುಮಾರು 850 ಹೊಸ ಶಾಲೆಗಳನ್ನು ಸ್ಥಾಪಿಸಲಾಗಿದೆ. ಈಶಾನ್ಯದಲ್ಲಿ ಮೊದಲ ಏಮ್ಸ್(ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ಈಗ ಕಾರ್ಯ ನಿರ್ವಹಿಸುತ್ತಿದೆ. 9 ಹೊಸ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ 2 ಹೊಸ ಐಐಐಟಿಗಳನ್ನು(ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ) ಸ್ಥಾಪಿಸಲಾಗಿದೆ. ಮಿಜೋರಾಂನಲ್ಲಿ ಭಾರತೀಯ ಸಮೂಹ ಸಂವಹನ ಸಂಸ್ಥೆಯ ಕ್ಯಾಂಪಸ್ ಸ್ಥಾಪಿಸಲಾಗಿದೆ. ಈಶಾನ್ಯದಾದ್ಯಂತ ಸುಮಾರು 200 ಹೊಸ ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ದೇಶದ ಮೊದಲ ಕ್ರೀಡಾ ವಿಶ್ವವಿದ್ಯಾಲಯವನ್ನು ಸಹ ಅಲ್ಲಿ ನಿರ್ಮಿಸಲಾಗುತ್ತಿದೆ. ಖೇಲೋ ಇಂಡಿಯಾ ಕಾರ್ಯಕ್ರಮದಡಿ, ಈಶಾನ್ಯದಲ್ಲಿ ನೂರಾರು ಕೋಟಿ ರೂಪಾಯಿ ಮೊತ್ತದ ಯೋಜನೆಗಳು ನಡೆಯುತ್ತಿವೆ. ಈ ಪ್ರದೇಶದಲ್ಲೇ 8 ಖೇಲೋ ಇಂಡಿಯಾ ಶ್ರೇಷ್ಠತಾ ಕೇಂದ್ರಗಳು ಮತ್ತು 250ಕ್ಕೂ ಹೆಚ್ಚು ಖೇಲೋ ಇಂಡಿಯಾ ಕೇಂದ್ರಗಳಿವೆ. ಇದರರ್ಥ ಈಶಾನ್ಯದ ಎಲ್ಲಾ ವಲಯಗಳಲ್ಲಿ ಅತ್ಯುತ್ತಮ ಪ್ರತಿಭೆಗಳು ಲಭ್ಯವಿವೆ, ನೀವು ಈ ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ಸ್ನೇಹಿತರೆ,
ಇಂದು ಸಾವಯವ ಆಹಾರಕ್ಕಾಗಿ ಜಾಗತಿಕ ಬೇಡಿಕೆ ಹೆಚ್ಚುತ್ತಿದೆ. ಸಮಗ್ರ ಆರೋಗ್ಯ ರಕ್ಷಣೆಯತ್ತ ಒಲವು ಹೆಚ್ಚುತ್ತಿದೆ, ನನಗೊಂದು ಕನಸು ಇದೆ - ಜಗತ್ತಿನ ಪ್ರತಿಯೊಂದು ಊಟದ ಮೇಜಿನ ಮೇಲೂ ಕನಿಷ್ಠ ಒಂದು ಭಾರತೀಯ ಆಹಾರದ ಬ್ರಾಂಡ್ ಇರಬೇಕು. ಈ ಕನಸನ್ನು ನನಸಾಗಿಸುವಲ್ಲಿ ಈಶಾನ್ಯವು ನಿರ್ಣಾಯಕ ಪಾತ್ರ ವಹಿಸುತ್ತದೆ. ಕಳೆದ ದಶಕದಲ್ಲಿ, ಈಶಾನ್ಯದಲ್ಲಿ ಸಾವಯವ ಕೃಷಿಯ ವ್ಯಾಪ್ತಿ ದ್ವಿಗುಣಗೊಂಡಿದೆ. ನಮ್ಮ ಪ್ರದೇಶವು ಚಹಾ, ಅನಾನಸ್, ಕಿತ್ತಳೆ, ನಿಂಬೆಹಣ್ಣು, ಅರಿಶಿನ ಮತ್ತು ಶುಂಠಿಯಂತಹ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ, ಅವುಗಳ ರುಚಿ ಮತ್ತು ಗುಣಮಟ್ಟವು ನಿಜವಾಗಿಯೂ ಅಸಾಧಾರಣವಾಗಿದೆ. ಈ ಉತ್ಪನ್ನಗಳಿಗೆ ಬೇಡಿಕೆ ಜಾಗತಿಕವಾಗಿ ಹೆಚ್ಚುತ್ತಿದೆ, ಈ ಬೆಳೆಯುತ್ತಿರುವ ಬೇಡಿಕೆಯು ನಿಮ್ಮೆಲ್ಲರಿಗೂ ಉತ್ತಮ ಅವಕಾಶಗಳನ್ನು ತೆರೆಯುತ್ತದೆ.
ಸ್ನೇಹಿತರೆ,
ಈಶಾನ್ಯದಲ್ಲಿ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದನ್ನು ಸುಲಭಗೊಳಿಸಲು ಸರ್ಕಾರ ಕೆಲಸ ಮಾಡುತ್ತಿದೆ. ಸುಧಾರಿತ ಸಂಪರ್ಕವು ಈಗಾಗಲೇ ಸಹಾಯ ಮಾಡುತ್ತಿದೆ. ಅದರ ಜತೆಗೆ, ನಾವು ಬೃಹತ್ ಆಹಾರ ಪಾರ್ಕ್‌ಗಳನ್ನು ನಿರ್ಮಿಸುತ್ತಿದ್ದೇವೆ, ಕೋಲ್ಡ್ ಸ್ಟೋರೇಜ್ ಜಾಲವನ್ನು ವಿಸ್ತರಿಸುತ್ತಿದ್ದೇವೆ ಮತ್ತು ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸುತ್ತಿದ್ದೇವೆ. ಸರ್ಕಾರವು ತಾಳೆಎಣ್ಣೆ ಮಿಷನ್ ಅನ್ನು ಸಹ ಪ್ರಾರಂಭಿಸಿದೆ. ಈಶಾನ್ಯದ ಮಣ್ಣು ಮತ್ತು ಹವಾಮಾನವು ತಾಳೆಎಣ್ಣೆ ಕೃಷಿಗೆ ಹೆಚ್ಚು ಸೂಕ್ತವಾಗಿದೆ. ಇದು ನಮ್ಮ ರೈತರಿಗೆ ಗಮನಾರ್ಹ ಆದಾಯದ ಮೂಲವಾಗಬಹುದು, ಇದು ಖಾದ್ಯ ತೈಲಗಳ ಆಮದು ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತಾಳೆಎಣ್ಣೆ ಕೃಷಿ ನಮ್ಮ ಕೈಗಾರಿಕೆಗಳಿಗೂ ಒಂದು ದೊಡ್ಡ ಅವಕಾಶವಾಗಿದೆ.
ಸ್ನೇಹಿತರೆ,
ನಮ್ಮ ಈಶಾನ್ಯವು ಇನ್ನೂ 2 ವಲಯಗಳಿಗೆ ಪ್ರಮುಖ ತಾಣವಾಗಿ ಹೊರಹೊಮ್ಮುತ್ತಿದೆ: ಇಂಧನ ಮತ್ತು ಸೆಮಿಕಂಡಕ್ಟರ್. ಅದು ಜಲವಿದ್ಯುತ್ ಆಗಿರಲಿ ಅಥವಾ ಸೌರಶಕ್ತಿಯಾಗಿರಲಿ, ಸರ್ಕಾರವು ಈಶಾನ್ಯದ ಪ್ರತಿಯೊಂದು ರಾಜ್ಯದಲ್ಲೂ ಪ್ರಮುಖ ಹೂಡಿಕೆಗಳನ್ನು ಮಾಡುತ್ತಿದೆ. ಸಾವಿರಾರು ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಈಗಾಗಲೇ ಅನುಮೋದಿಸಲಾಗಿದೆ. ನಿಮಗೆ ಸ್ಥಾವರಗಳು ಮತ್ತು ಮೂಲಸೌಕರ್ಯಗಳಲ್ಲಿ ಹೂಡಿಕೆ ಅವಕಾಶಗಳು ಮಾತ್ರವಲ್ಲದೆ, ಉತ್ಪಾದನೆಯಲ್ಲಿ ಸುವರ್ಣಾವಕಾಶವೂ ಒದಗಿ ಬರುತ್ತದೆ. ಅದು ಸೌರ ಮಾಡ್ಯೂಲ್‌ಗಳು, ಕೋಶಗಳು, ಸಂಗ್ರಹಾಗಾರಗಳು ಅಥವಾ ಸಂಶೋಧನೆಯಾಗಿರಲಿ, ನಮಗೆ ಹೆಚ್ಚಿನ ಹೂಡಿಕೆಗಳು ಬೇಕಾಗುತ್ತವೆ. ಇದು ನಮ್ಮ ಭವಿಷ್ಯವಾಗಿದೆ. ಇಂದು ನಾವು ಇದರಲ್ಲಿ ಹೆಚ್ಚು ಹೂಡಿಕೆ ಮಾಡಿದಷ್ಟೂ, ನಾವು ವಿದೇಶಗಳ ಮೇಲೆ ಕಡಿಮೆ ಅವಲಂಬಿತರಾಗುತ್ತೇವೆ. ಇಂದು, ಈಶಾನ್ಯ - ವಿಶೇಷವಾಗಿ ಅಸ್ಸಾಂ - ದೇಶದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಶೀಘ್ರದಲ್ಲೇ, ಈಶಾನ್ಯದಲ್ಲಿರುವ ಸೆಮಿಕಂಡಕ್ಟರ್ ಘಟಕದಿಂದ ಮೊದಲ ಮೇಡ್-ಇನ್-ಇಂಡಿಯಾ ಚಿಪ್ ದೇಶಕ್ಕೆ ಲಭ್ಯವಾಗಲಿದೆ. ಈ ಘಟಕವು ಸೆಮಿಕಂಡಕ್ಟರ್ ವಲಯ ಮತ್ತು ಈ ಪ್ರದೇಶದಲ್ಲಿ ಇತರೆ ಅತ್ಯಾಧುನಿಕ ತಂತ್ರಜ್ಞಾನಗಳಿಗೆ ಅವಕಾಶದ ಬಾಗಿಲುಗಳನ್ನು ತೆರೆದಿದೆ.
ಉದಯೋನ್ಮುಖ ಈಶಾನ್ಯ ಹೂಡಿಕೆದಾರರ ಶೃಂಗಸಭೆಯು ಕೇವಲ ಹೂಡಿಕೆದಾರರ ಸಮಾವೇಶ ಆಗಿರದೆ, ಇದು ಒಂದು ಚಳುವಳಿಯಾಗಿದೆ. ಇದು ಕ್ರಿಯೆ ಅಥವಾ ಕ್ರಮಕ್ಕೆ ನೀಡಿರುವ ಕರೆಯಾಗಿದೆ. ಈಶಾನ್ಯದ ಉಜ್ವಲ ಭವಿಷ್ಯದ ಮೂಲಕ ಭಾರತದ ಭವಿಷ್ಯವು ಹೊಸ ಎತ್ತರಕ್ಕೆ ಏರುತ್ತದೆ. ನನಗೆ ಎಲ್ಲಾ ಉದ್ಯಮ ನಾಯಕರ ಮೇಲೆ ಸಂಪೂರ್ಣ ನಂಬಿಕೆ ಇದೆ. ಬನ್ನಿ, ನಾವೆಲ್ಲರೂ ಒಟ್ಟಾಗಿ ನಮ್ಮ ಅಷ್ಟಲಕ್ಷ್ಮಿಯನ್ನು 'ವಿಕಸಿತ ಭಾರತ'ಕ್ಕೆ ಸ್ಫೂರ್ತಿಯನ್ನಾಗಿ ಮಾಡೋಣ. ಇಂದಿನ ಸಾಮೂಹಿಕ ಪ್ರಯತ್ನಗಳು, ನಿಮ್ಮ ಉತ್ಸಾಹ ಮತ್ತು ನಿಮ್ಮ ಬದ್ಧತೆಯು ಭರವಸೆಯನ್ನು ನಂಬಿಕೆಯಾಗಿ ಪರಿವರ್ತಿಸುತ್ತಿದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ನಾವು 2ನೇ ರೈಸಿಂಗ್ ಈಶಾನ್ಯ ಶೃಂಗಸಭೆಯನ್ನು ನಡೆಸುವ ಹೊತ್ತಿಗೆ, ನಾವು ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತೇವೆ ಎಂಬುದು ನನಗೆ ಖಚಿತವಾಗಿದೆ. ನಿಮಗೆಲ್ಲರಿಗೂ ಶುಭ ಹಾರೈಸುತ್ತೇನೆ.
ತುಂಬು ಧನ್ಯವಾದಗಳು!
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
(Release ID: 2131047)
Read this release in:
Odia
,
Tamil
,
English
,
Urdu
,
Hindi
,
Marathi
,
Bengali
,
Assamese
,
Punjabi
,
Gujarati
,
Telugu
,
Malayalam