ಪ್ರಧಾನ ಮಂತ್ರಿಯವರ ಕಛೇರಿ
ಅಂಗೋಲಾ ರಾಷ್ಟ್ರಪತಿ ಅವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು ನೀಡಿದ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ (ಮೇ 03, 2025)
Posted On:
03 MAY 2025 2:26PM by PIB Bengaluru
ಘನತೆವೆತ್ತ,
ರಾಷ್ಟ್ರಪತಿ ಲೊರೆನ್ಸು ಅವರೇ,
ಉಭಯ ರಾಷ್ಟ್ರಗಳ ಪ್ರತಿನಿಧಿಗಳೇ,
ಮಾಧ್ಯಮ ಮಿತ್ರರೇ,
ನಮಸ್ಕಾರ!
ಬೆಮ್ ವಿಂದು!
ನಾನು ರಾಷ್ಟ್ರಪತಿ ಲೊರೆನ್ಸು ಮತ್ತು ಅವರ ನಿಯೋಗವನ್ನು ಭಾರತಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದೊಂದು ಐತಿಹಾಸಿಕ ಕ್ಷಣವಾಗಿದೆ. 38 ವರ್ಷಗಳ ನಂತರ, ಅಂಗೋಲಾ ರಾಷ್ಟ್ರಪತಿ ಅವರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅವರ ಇ ಭೇಟಿ ಭಾರತ-ಅಂಗೋಲಾ ಸಂಬಂಧಗಳಿಗೆ ಹೊಸ ದಿಕ್ಕನ್ನು ಮತ್ತು ಆವೇಗವನ್ನು ನೀಡುತ್ತಿದೆ ಅಲ್ಲದೆ, ಭಾರತ-ಆಫ್ರಿಕಾ ಪಾಲುದಾರಿಕೆಗೂ ಶಕ್ತಿ ತುಂಬುತ್ತಿದೆ.
ಸ್ನೇಹಿತರೇ,
ಈ ವರ್ಷ, ಭಾರತ ಮತ್ತು ಅಂಗೋಲಾ ತಮ್ಮ ರಾಜತಾಂತ್ರಿಕ ಸಂಬಂಧಗಳ 40 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿವೆ. ಆದರೆ ನಮ್ಮ ಸಂಬಂಧಗಳು ಅದಕ್ಕಿಂತ ಬಹಳ ಹಳೆಯದಾದವು ಮತ್ತು ಆಳವಾದವು. ಅಂಗೋಲಾ ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾಗ, ಭಾರತವು ಅಚಲ ನಂಬಿಕೆ ಮತ್ತು ಸ್ನೇಹದಿಂದ ಅದರೊಂದಿಗೆ ನಿಂತಿತ್ತು.
ಸ್ನೇಹಿತರೇ,
ಇಂದು, ವಿವಿಧ ಕ್ಷೇತ್ರಗಳಲ್ಲಿ ನಾವು ಅಗಾಧ ಸಹಕಾರವನ್ನು ಹೊಂದಿದ್ದೇವೆ. ಭಾರತ, ಅಂಗೋಲಾದ ತೈಲ ಮತ್ತು ಅನಿಲದ ಅತಿದೊಡ್ಡ ಖರೀದಿದಾರರಲ್ಲಿ ಒಂದಾಗಿದೆ. ನಮ್ಮ ಇಂಧನ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸಲು ನಾವು ನಿರ್ಧರಿಸಿದ್ದೇವೆ. ಅಂಗೋಲಾದ ಸಶಸ್ತ್ರ ಪಡೆಗಳ ಆಧುನೀಕರಣಕ್ಕಾಗಿ $200 ದಶಲಕ್ಷ ರಕ್ಷಣಾ ಕ್ರೆಡಿಟ್ ಲೈನ್‌ನ ಅನುಮೋದನೆಯನ್ನು ಘೋಷಿಸಲು ನನಗೆ ಸಂತೋಷವಾಗಿದೆ. ರಕ್ಷಣಾ ವಲಯದ ದುರಸ್ತಿ ಮತ್ತು ಕೂಲಂಕಷ ಪರೀಕ್ಷೆ ಹಾಗೂ ಸರಬರಾಜುಗಳ ಬಗ್ಗೆಯೂ ನಾವು ಚರ್ಚಿಸಿದ್ದೇವೆ. ಅಂಗೋಲಾದ ಸಶಸ್ತ್ರ ಪಡೆಗಳ ತರಬೇತಿಯಲ್ಲಿ ಭಾರತ ಸಹಕರಿಸುತ್ತಿರುವುದು ಸಂತಸದ ಸಂಗತಿ.
ನಮ್ಮ ಅಭಿವೃದ್ಧಿ ಪಾಲುದಾರಿಕೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಾ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ಅಂಗೋಲಾದೊಂದಿಗೆ ನಮ್ಮ ಸಾಮರ್ಥ್ಯಗಳನ್ನು ಹಂಚಿಕೊಳ್ಳುತ್ತೇವೆ. ಇಂದು ನಾವು ಆರೋಗ್ಯ ರಕ್ಷಣೆ, ವಜ್ರ ಸಂಸ್ಕರಣೆ, ರಸಗೊಬ್ಬರ ಮತ್ತು ನಿರ್ಣಾಯಕ ಖನಿಜಗಳ ಕ್ಷೇತ್ರಗಳಲ್ಲಿ ನಮ್ಮ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಿದ್ದೇವೆ. ಅಂಗೋಲಾದಲ್ಲಿ ಯೋಗ ಮತ್ತು ಬಾಲಿವುಡ್‌ನ ಜನಪ್ರಿಯತೆಯು ಉಭಯ ದೇಶಗಳ ಮಧ್ಯೆ ಬಲವಾದ ಸಾಂಸ್ಕೃತಿಕ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ. ನಮ್ಮ ಜನರಿಂದ ಜನರಿಗೆ ಸಂಬಂಧಗಳನ್ನು ಬಲಪಡಿಸಲು, ನಮ್ಮ ಯುವಕರಲ್ಲಿ ಯುತ್ ಎಕ್ಸ್ಛೇಂಜ್ ಪ್ರೊಗ್ರಾಂ ಪ್ರಾರಂಭಿಸಲು ನಾವು ನಿರ್ಧರಿಸಿದ್ದೇವೆ.
ಸ್ನೇಹಿತರೇ,
ಅಂತರರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಸೇರ್ಪಡೆಗೊಳ್ಳುವ ಅಂಗೋಲಾದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಭಾರತದ ಉಪಕ್ರಮಗಳಾದ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟ, ಬಿಗ್ ಕ್ಯಾಟ್ ಅಲೈಯನ್ಸ್ ಮತ್ತು ಜಾಗತಿಕ ಜೈವಿಕ ಇಂಧನ ಒಕ್ಕೂಟಕ್ಕೆ ಸೇರಲು ಕೂಡಾ ನಾವು ಅಂಗೋಲಾವನ್ನು ಆಹ್ವಾನಿಸಿದ್ದೇವೆ.
ಸ್ನೇಹಿತರೇ,
ಭಯೋತ್ಪಾದನೆ ಮಾನವೀಯತೆಗೆ ಅತ್ಯಂತ ದೊಡ್ಡ ಬೆದರಿಕೆ ಎಂಬುದನ್ನು ನಾವಿಬ್ಬರೂ ಒಪ್ಪುತ್ತೇವೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಾದ ಜೀವಹಾನಿಗೆ ಸಂತಾಪ ವ್ಯಕ್ತಪಡಿಸಿದ ಅಧ್ಯಕ್ಷ ಲೊರೆನ್ಸು ಮತ್ತು ಅಂಗೋಲಾದ ಜನರಿಗೆ ನಾನು ಧನ್ಯವಾದ ಅರ್ಪಿಸಿದ್ದೇನೆ. ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವವರ ವಿರುದ್ಧ ದೃಢ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಲು ನಾವು ಬದ್ಧರಾಗಿದ್ದೇವೆ. ಗಡಿ ಭಾಗದ ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದಲ್ಲಿ ಅಂಗೋಲಾ ನೀಡಿದ ಬೆಂಬಲಕ್ಕಾಗಿ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ
ಸ್ನೇಹಿತರೇ,
ಆಫ್ರಿಕನ್ ಒಕ್ಕೂಟದ ಅಧ್ಯಕ್ಷತೆ ವಹಿಸಿದ್ದಕ್ಕಾಗಿ ಅಂಗೋಲಾಗೆ 14೦ ಕೋಟಿ ಭಾರತೀಯರ ಪರವಾಗಿ, ಶುಭಾಶಯಗಳನ್ನು ಸಲ್ಲಿಸುತ್ತೇನೆ. ಭಾರತದ ಜಿ 20 ಅಧ್ಯಕ್ಷತೆಯ ಅವಧಿಯಲ್ಲಿ ಆಫ್ರಿಕನ್ ಒಕ್ಕೂಟಕ್ಕೆ ಜಿ 20 ರ ಶಾಶ್ವತ ಸದಸ್ಯತ್ವವನ್ನು ನೀಡಿರುವುದು ನಮಗೆ ಬಹಳ ಹೆಮ್ಮೆಯ ವಿಷಯವಾಗಿದೆ. ಭಾರತ ಮತ್ತು ಆಫ್ರಿಕನ್ ದೇಶಗಳು ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಒಕ್ಕೊರಲಿನಿಂದ ಧ್ವನಿ ಎತ್ತಿದ್ದವು, ಪರಸ್ಪರ ಪ್ರೇರಣೆ ನೀಡಿದ್ದವು. ಇಂದು, ಜಾಗತಿಕ ದಕ್ಷಿಣದ ಹಿತಾಸಕ್ತಿಗಳು, ಭರವಸೆಗಳು, ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳನ್ನು ಸಮರ್ಥಿಸುವಲ್ಲಿ ನಾವು ಒಗ್ಗಟ್ಟಿನಿಂದ ನಿಂತಿದ್ದೇವೆ.
ಕಳೆದ ದಶಕದಲ್ಲಿ ಆಫ್ರಿಕನ್ ದೇಶಗಳೊಂದಿಗಿನ ನಮ್ಮ ಸಹಕಾರವು ವೇಗ ಪಡೆದಿದೆ. ಪರಸ್ಪರ ವ್ಯಾಪಾರವು ಸುಮಾರು $100 ಶತಕೋಟಿ ತಲುಪಿದೆ. ರಕ್ಷಣಾ ಸಹಕಾರ ಮತ್ತು ಕಡಲ ಭದ್ರತೆಯಲ್ಲಿ ಪ್ರಗತಿ ಕಂಡುಬಂದಿದೆ.
ಕಳೆದ ತಿಂಗಳು, ಭಾರತ ಮತ್ತು ಆಫ್ರಿಕಾ ನಡುವೆ ಮೊದಲ ನೌಕಾ ಕಡಲ ವ್ಯಾಯಾಮ "AIKEYME" ಕೈಗೊಳ್ಳಲಾಯಿತು. ಕಳೆದ ದಶಕದಲ್ಲಿ, ನಾವು ಆಫ್ರಿಕಾದಾದ್ಯಂತ 17 ಹೊಸ ರಾಯಭಾರ ಕಚೇರಿಗಳ ಸ್ಥಾಪನೆ ಮಾಡಲಾಗಿದೆ. $12 ಶತಕೋಟಿಗಿಂತ ಹೆಚ್ಚಿನ ಮೌಲ್ಯದ ಕ್ರೆಡಿಟ್ ಲೈನ್‌ಗಳನ್ನು ಆಫ್ರಿಕಾಕ್ಕೆ ಹಂಚಿಕೆ ಮಾಡಲಾಗಿದೆ. ಅಲ್ಲದೆ, ಆಫ್ರಿಕನ್ ದೇಶಗಳಿಗೆ $700 ದಶಲಕ್ಷ ಅನುದಾನ ಸಹಾಯವನ್ನು ನೀಡಲಾಗಿದೆ. 8 ಆಫ್ರಿಕನ್ ದೇಶಗಳಲ್ಲಿ ವೃತ್ತಿಪರ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ. ನಾವು ಐದು ಆಫ್ರಿಕನ್ ದೇಶಗಳೊಂದಿಗೆ . ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸಹಕರಿಸುತ್ತಿದ್ದೇವೆ. ವಿಪತ್ತಿನ ಸಮಯದಲ್ಲಿ, ಆಫ್ರಿಕಾದ ಜನರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತು 'ಫಸ್ಟ್ ರೇಸ್ಪೊಂಡರ್' ರೂಪದಲ್ಲಿ ಸೇವೆ ಸಲ್ಲಿಸುವ ಸೌಭಾಗ್ಯ ನಮ್ಮದಾಗಿದೆ.
ಭಾರತ ಮತ್ತು ಆಫ್ರಿಕನ್ ಒಕ್ಕೂಟವು ಪ್ರಗತಿಯಲ್ಲಿರುವ ಪಾಲುದಾರರು. ನಾವು ಜಾಗತಿಕ ದಕ್ಷಿಣದ ಸ್ತಂಭಗಳಾಗಿದ್ದೇವೆ. ಅಂಗೋಲಾದ ನಾಯಕತ್ವದಲ್ಲಿ, ಭಾರತ ಮತ್ತು ಆಫ್ರಿಕನ್ ಒಕ್ಕೂಟದ ಮಧ್ಯೆ ಸಂಬಂಧ ಹೊಸ ಉತ್ತುಂಗಕ್ಕೇರಲಿದೆ ಎಂಬ ಅಚಲ ವಿಶ್ವಾಸವಿದೆ.
ಗೌರವಾನ್ವಿತರೆ,
ನಾನು ನಿಮಗೆ ಮತ್ತು ನಿಮ್ಮ ನಿಯೋಗಕ್ಕೆ ಮತ್ತೊಮ್ಮೆ ಭಾರತಕ್ಕೆ ಆತ್ಮೀಯ ಸ್ವಾಗತವನ್ನು ನೀಡುತ್ತೇನೆ.
ಅನಂತ ಧನ್ಯವಾದಗಳು.
ಒಬ್ರಿಗಾಡೊ.
ಹಕ್ಕು ನಿರಾಕರಣೆ - ಇದು ಪ್ರಧಾನಮಂತ್ರಿಯವರ ಹೇಳಿಕೆಗಳ ಅಂದಾಜು ಅನುವಾದವಾಗಿದೆ. ಮೂಲ ಹೇಳಿಕೆಗಳನ್ನು ಹಿಂದಿಯಲ್ಲಿ ನೀಡಲಾಯಿತು.
*****
(Release ID: 2126833)
Visitor Counter : 8
Read this release in:
Malayalam
,
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu