ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2025ಕ್ಕೆ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದೆ


ನಾಮನಿರ್ದೇಶನಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜುಲೈ 31, 2025

ನಾಮನಿರ್ದೇಶನಗಳನ್ನು ಅಧಿಕೃತ ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ ಮೂಲಕ ಆನ್ ಲೈನ್ ನಲ್ಲಿ ಸಲ್ಲಿಸಬೇಕು

Posted On: 03 MAY 2025 10:44AM by PIB Bengaluru

ದೇಶಾದ್ಯಂತ ಮಕ್ಕಳ ಅಸಾಧಾರಣ ಸಾಧನೆಗಳನ್ನು ಗುರುತಿಸಲು ಭಾರತದ ರಾಷ್ಟ್ರಪತಿಯವರು ವಾರ್ಷಿಕವಾಗಿ ಪ್ರದಾನ ಮಾಡುವ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯಾದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿ ಎಂ ಆರ್ ಬಿ ಪಿ) 2025ಕ್ಕೆ ಭಾರತ ಸರ್ಕಾರ ನಾಮನಿರ್ದೇಶನಗಳನ್ನು ಆಹ್ವಾನಿಸಿದೆ.

ನಾಮನಿರ್ದೇಶನಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜುಲೈ 31, 2025. ಎಲ್ಲಾ ನಾಮನಿರ್ದೇಶನಗಳನ್ನು ಅಧಿಕೃತ ರಾಷ್ಟ್ರೀಯ ಪ್ರಶಸ್ತಿ ಪೋರ್ಟಲ್ https://awards.gov.in ಮೂಲಕ ಆನ್‌ಲೈನ್ ನಲ್ಲಿ ಸಲ್ಲಿಸಬೇಕು.

ನಾಮನಿರ್ದೇಶನಗಳು 5 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಮುಕ್ತವಾಗಿವೆ (ಜುಲೈ 31, 2025 ವರೆಗೆ ). ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಪಿ ಎಂ ಆರ್ ಬಿ ಪಿ ಗಾಗಿ ಅಸಾಧಾರಣ ಸಾಧನೆಗಳನ್ನು ಮಾಡಿರುವ ಮಕ್ಕಳನ್ನು ನಾಮನಿರ್ದೇಶನ ಮಾಡಬಹುದು. ಮಕ್ಕಳು ಸ್ವಯಂ-ನಾಮನಿರ್ದೇಶನದ ಮೂಲಕವೂ ಅರ್ಜಿ ಸಲ್ಲಿಸಬಹುದು.

ಅರ್ಜಿದಾರರು ಅರ್ಜಿ ಸಲ್ಲಿಸುವಾಗ ಮೊದಲ ಹೆಸರು, ಕೊನೆಯ ಹೆಸರು, ಜನ್ಮ ದಿನಾಂಕ, ಅರ್ಜಿದಾರರ ವಿಧಾನ (ವ್ಯಕ್ತಿ/ಸಂಸ್ಥೆ), ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಆಧಾರ್ ಸಂಖ್ಯೆ ಇತ್ಯಾದಿ ಮತ್ತು ಕ್ಯಾಪ್ಚಾ (CAPTCHA) ಪರಿಶೀಲನೆಯಂತಹ ವಿವರಗಳನ್ನು ಒದಗಿಸುವ ಮೂಲಕ ಪೋರ್ಟಲ್ ನಲ್ಲಿ ಮೊದಲು ನೋಂದಾಯಿಸಿಕೊಳ್ಳಬೇಕು ಅಥವಾ ಲಾಗಿನ್ ಆಗಬೇಕು. ನೋಂದಾಯಿಸಿದ ನಂತರ, ಅವರು ನಡೆಯುತ್ತಿರುವ ನಾಮನಿರ್ದೇಶನ ವಿಭಾಗದ ಅಡಿಯಲ್ಲಿ "ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2025" ಅನ್ನು ಆಯ್ಕೆ ಮಾಡಬೇಕು ಮತ್ತು "ನಾಮನಿರ್ದೇಶನ/ಈಗ ಸಲ್ಲಿಸಿ" (Nominate/Apply Now)ಮೇಲೆ ಕ್ಲಿಕ್ ಮಾಡಬೇಕು. ನಂತರ ಅರ್ಜಿದಾರರು ಸಂಬಂಧಿತ ಪ್ರಶಸ್ತಿ ವಿಭಾಗವನ್ನು ಆರಿಸಿಕೊಳ್ಳಬೇಕು ಮತ್ತು ನಾಮನಿರ್ದೇಶನವು ತಮಗೋ ಅಥವಾ ಬೇರೆಯವರಿಗೋ ಎಂಬುದನ್ನು ಸೂಚಿಸಬೇಕು.

ಅರ್ಜಿ ನಮೂನೆಯಲ್ಲಿ ನಾಮನಿರ್ದೇಶಿತರ ವಿವರಗಳು, ಸಾಧನೆ ಮತ್ತು ಅದರ ಪ್ರಭಾವವನ್ನು ವಿವರಿಸುವ ಸಂಕ್ಷಿಪ್ತ ನಿರೂಪಣೆ (ಗರಿಷ್ಠ 500 ಪದಗಳು) ಮತ್ತು ಪೂರಕ ದಾಖಲೆಗಳನ್ನು (ಪಿಡಿಎಫ್ ಸ್ವರೂಪ, ಗರಿಷ್ಠ 10 ದಾಖಲೆಗಳು) ಮತ್ತು ಇತ್ತೀಚಿನ ಭಾವಚಿತ್ರ (jpg/jpeg/png ಸ್ವರೂಪದಲ್ಲಿ) ಅಪ್ಲೋಡ್  ಮಾಡಬೇಕು.  ಅರ್ಜಿಗಳನ್ನು ಡ್ರಾಫ್ಟ್ ಗಳಾಗಿ ಉಳಿಸಬಹುದು ಮತ್ತು ಅಂತಿಮ ಸಲ್ಲಿಕೆಗೆ ಮೊದಲು ತಿದುಪಡಿ ಮಾಡಬಹುದು. ಒಮ್ಮೆ ಪರಿಶೀಲಿಸಿದ ಮತ್ತು ಸಲ್ಲಿಸಿದ ನಂತರ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. 

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ (ಜುಲೈ 31, 2025 ರಂತೆ) ಮಕ್ಕಳನ್ನು ಗೌರವಿಸುತ್ತದೆ, ಅವರು ಈ ಕೆಳಗಿನ ಆರು ವಿಭಾಗಗಳಲ್ಲಿ ಶ್ರೇಷ್ಠತೆಯನ್ನು ಪ್ರದರ್ಶಿಸಿರಬೇಕು: ಶೌರ್ಯ, ಸಮಾಜ ಸೇವೆ, ಪರಿಸರ, ಕ್ರೀಡೆ, ಕಲೆ-ಸಂಸ್ಕೃತಿ ಮತ್ತು ವಿಜ್ಞಾನ-ತಂತ್ರಜ್ಞಾನ.

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗಳ ಉದ್ದೇಶಗಳು ವೈವಿಧ್ಯಮಯ ಕ್ಷೇತ್ರಗಳಲ್ಲಿ ಭಾರತದ ಮಕ್ಕಳ ಸಾಧನೆಗಳನ್ನು ಆಚರಿಸುವುದು ಮತ್ತು ಉತ್ತೇಜಿಸುವುದು, ನಿಜ ಜೀವನದ ಮಾದರಿಗಳನ್ನು ಪ್ರದರ್ಶಿಸುವ ಮೂಲಕ ದೇಶಾದ್ಯಂತದ ತಮ್ಮ ಸಮವಯಸ್ಕರನ್ನು ಪ್ರೇರೇಪಿಸುವುದು ಮತ್ತು ಮಕ್ಕಳ ಸಮಗ್ರ ಬೆಳವಣಿಗೆಗೆ ಅನುವು ಮಾಡಿಕೊಡುವ ವಾತಾವರಣವನ್ನು ಬೆಳೆಸುವುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ನಾಮನಿರ್ದೇಶನ ಮಾಡಲು, ದಯವಿಟ್ಟು https://awards.gov.in ಗೆ ಭೇಟಿ ನೀಡಿ.

 

 

*****


(Release ID: 2126563) Visitor Counter : 12