ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಯೋಗ ಮೇಳವನ್ನು ಉದ್ದೇಶಿಸಿ ಮಾತನಾಡಿದರು
ಯುವಜನರು ರಾಷ್ಟ್ರ ನಿರ್ಮಾಣಕ್ಕೆ ಸಕ್ರಿಯವಾಗಿ ಕೊಡುಗೆ ನೀಡಿದಾಗ, ದೇಶವು ವೇಗವಾಗಿ ಅಭಿವೃದ್ಧಿ ಹೊಂದುತ್ತದೆ ಮತ್ತು ಜಾಗತಿಕ ವೇದಿಕೆಯಲ್ಲಿ ಮನ್ನಣೆ ಪಡೆಯುತ್ತದೆ: ಪ್ರಧಾನಮಂತ್ರಿ
ಇಂದು, ತಮ್ಮ ಸಮರ್ಪಣೆ ಮತ್ತು ನಾವೀನ್ಯತೆಯ ಮೂಲಕ, ಭಾರತದ ಯುವಜನತೆ ನಮ್ಮಲ್ಲಿರುವ ಅಪಾರ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುತ್ತಿದ್ದಾರೆ: ಪ್ರಧಾನಮಂತ್ರಿ
ಈ ಬಜೆಟ್ ನಲ್ಲಿ ಸರ್ಕಾರ ಉತ್ಪಾದನಾ ಮಿಷನ್ ಘೋಷಿಸಿದ್ದು, ಇದು 'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ಉತ್ತೇಜನ ನೀಡುವ ಮತ್ತು ಭಾರತದ ಯುವಜನರಿಗೆ ಜಾಗತಿಕವಾಗಿ ಪ್ರಮಾಣೀಕೃತ ಉತ್ಪನ್ನಗಳನ್ನು ತಯಾರಿಸಲು ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ: ಪ್ರಧಾನಮಂತ್ರಿ
ಉತ್ಪಾದನಾ ಮಿಷನ್ ದೇಶಾದ್ಯಂತ ಲಕ್ಷಾಂತರ ಎಂ ಎಸ್ ಎಂ ಇ ಗಳು ಮತ್ತು ಸಣ್ಣ ಉದ್ಯಮಿಗಳನ್ನು ಬೆಂಬಲಿಸುವುದಲ್ಲದೆ, ದೇಶಾದ್ಯಂತ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ: ಪ್ರಧಾನಮಂತ್ರಿ
ಮುಂಬೈ ಶೀಘ್ರದಲ್ಲೇ ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) 2025 ಅನ್ನು ಆಯೋಜಿಸಲಿದೆ ಮತ್ತು ಈ ಕಾರ್ಯಕ್ರಮವು ದೇಶದ ಯುವಜನರನ್ನು ಕೇಂದ್ರೀಕರಿಸುತ್ತದೆ, ಯುವ ಸೃಜನಶೀಲರಿಗೆ ಮೊದಲ ಬಾರಿಗೆ ಅಂತಹ ವೇದಿಕೆಯನ್ನು ಒದಗಿಸುತ್ತದೆ: ಪ್ರಧಾನಮಂತ್ರಿ
ಮಾಧ್ಯಮ, ಗೇಮಿಂಗ್ ಮತ್ತು ಮನರಂಜನಾ ಕ್ಷೇತ್ರದಲ್ಲಿನ ನಾವೀನ್ಯಕಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇವ್ಸ್ ಒಂದು ಅಭೂತಪೂರ್ವ ಅವಕಾಶವಾಗಿದೆ: ಪ್ರಧಾನಮಂತ್ರಿ
ಭಾರತದ ಮಹಿಳಾ ಶಕ್ತಿಯು ಅಧಿಕಾರಶಾಹಿಯಿಂದ ಬಾಹ್ಯಾಕಾಶ ಮತ್ತು ವಿಜ್ಞಾನದವರೆಗೆ ಹೊಸ ಎತ್ತರವನ್ನು ತಲುಪುತ್ತಿದೆ, ಸರ್ಕಾರ ಗ್ರಾಮೀಣ ಮಹಿಳೆಯರ ಸಬಲೀಕರಣದತ್ತಲೂ ಗಮನಹರಿಸುತ್ತಿದೆ: ಪ್ರಧಾನಮಂತ್ರಿ
Posted On:
26 APR 2025 12:13PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಯೋಗ ಮೇಳವನ್ನುದ್ದೇಶಿಸಿ ಮಾತನಾಡಿದರು ಮತ್ತು ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡ 51,000 ಕ್ಕೂ ಹೆಚ್ಚು ಯುವಜನರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಈ ಯುವಜನರಿಗೆ ಇಂದು ಹೊಸ ಜವಾಬ್ದಾರಿಗಳ ಆರಂಭವಾಗಿದೆ ಎಂದು ಒತ್ತಿ ಹೇಳಿದರು. ದೇಶದ ಆರ್ಥಿಕ ರಚನೆಯನ್ನು ಬಲಪಡಿಸುವುದು, ಆಂತರಿಕ ಭದ್ರತೆಯನ್ನು ಬಲಪಡಿಸುವುದು, ಆಧುನಿಕ ಮೂಲಸೌಕರ್ಯಗಳ ನಿರ್ಮಾಣಕ್ಕೆ ಕೊಡುಗೆ ನೀಡುವುದು ಮತ್ತು ಕಾರ್ಮಿಕರ ಜೀವನದಲ್ಲಿ ಪರಿವರ್ತನೆಯ ಬದಲಾವಣೆಗಳನ್ನು ತರುವುದು ಅವರ ಕರ್ತವ್ಯಗಳಲ್ಲಿ ಸೇರಿವೆ ಎಂದು ಅವರು ಹೇಳಿದರು. ಅವರು ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಭಾಯಿಸುವುದು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ಪ್ರಯಾಣದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಯುವಜನರು ತಮ್ಮ ಕರ್ತವ್ಯಗಳನ್ನು ಸಂಪೂರ್ಣ ಸಮರ್ಪಣಾಭಾದಿಂದ ನಿರ್ವಹಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
"ಯಾವುದೇ ರಾಷ್ಟ್ರದ ಪ್ರಗತಿ ಮತ್ತು ಯಶಸ್ಸಿನ ಅಡಿಪಾಯ ಅದರ ಯುವಜನರ ಮೇಲೆ ನಿಂತಿದೆ. ಯುವಕರು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ, ರಾಷ್ಟ್ರವು ವೇಗವಾಗಿ ಅಭಿವೃದ್ಧಿ ಹೊಂದುತ್ತದೆ ಮತ್ತು ಜಾಗತಿಕ ವೇದಿಕೆಯಲ್ಲಿ ತನ್ನ ಗುರುತನ್ನು ಸ್ಥಾಪಿಸುತ್ತದೆ" ಎಂದು ಶ್ರೀ ಮೋದಿ ಒತ್ತಿ ಹೇಳಿದರು. "ಭಾರತದ ಯುವಜನತೆ ತಮ್ಮ ಕಠಿಣ ಪರಿಶ್ರಮ ಮತ್ತು ನಾವೀನ್ಯತೆಯ ಮೂಲಕ ತಮ್ಮ ಅಗಾಧ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುತ್ತಿದ್ದಾರೆ" ಎಂದು ಅವರು ಹೇಳಿದರು. ದೇಶದ ಯುವಜನರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಅವಕಾಶಗಳು ಹೆಚ್ಚುವುದನ್ನು ಸರ್ಕಾರ ಪ್ರತಿ ಹಂತದಲ್ಲೂ ಖಚಿತಪಡಿಸುತ್ತಿದೆ ಎಂದು ಅವರು ಹೇಳಿದರು. ಕೌಶಲ್ಯ ಭಾರತ, ಸ್ಟಾರ್ಟ್ಅಪ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದಂತಹ ಉಪಕ್ರಮಗಳು ಯುವಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಹೇಳಿದರು. ಈ ಅಭಿಯಾನಗಳ ಮೂಲಕ ಸರ್ಕಾರವು ಭಾರತದ ಯುವಜನತೆಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮುಕ್ತ ವೇದಿಕೆಯನ್ನು ಒದಗಿಸುತ್ತಿದೆ. ಈ ಪ್ರಯತ್ನಗಳ ಫಲವಾಗಿ, ಈ ದಶಕದಲ್ಲಿ, ಭಾರತದ ಯುವಜನರು ತಂತ್ರಜ್ಞಾನ, ದತ್ತಾಂಶ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ರಾಷ್ಟ್ರವನ್ನು ಮುಂಚೂಣಿಗೆ ತಂದಿದ್ದಾರೆ ಎಂದು ಶ್ರೀ ಮೋದಿ ಹೇಳಿದರು. ಯುಪಿಐ, ಒ ಎನ್ ಡಿ ಸಿ ಮತ್ತು ಜಿಇಎಂ (ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್) ನಂತಹ ಡಿಜಿಟಲ್ ಪ್ಲಾಟ್‌ಫಾರ್ಮ್ ಗಳ ಯಶಸ್ಸನ್ನು ಅವರು ಎತ್ತಿ ತೋರಿಸಿದರು, ಇದು ಯುವಜನರು ಡಿಜಿಟಲ್ ಆರ್ಥಿಕತೆಯಲ್ಲಿ ಪರಿವರ್ತನೆಯ ಬದಲಾವಣೆಗಳನ್ನು ಹೇಗೆ ಮುನ್ನಡೆಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಭಾರತವು ಈಗ ನೈಜ-ಸಮಯದ ಡಿಜಿಟಲ್ ವಹಿವಾಟಿನಲ್ಲಿ ಜಗತ್ತನ್ನು ಮುನ್ನಡೆಸುತ್ತಿದೆ ಮತ್ತು ಈ ಸಾಧನೆಯ ಗಮನಾರ್ಹ ಭಾಗವು ಯುವಜನರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.
"ಈ ಬಜೆಟ್‌ನಲ್ಲಿ ಘೋಷಿಸಲಾದ ಉತ್ಪಾದನಾ ಮಿಷನ್ 'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ಉತ್ತೇಜನ ನೀಡುವ ಮತ್ತು ಭಾರತದ ಯುವಕರಿಗೆ ಜಾಗತಿಕವಾಗಿ ಪ್ರಮಾಣೀಕೃತ ಉತ್ಪನ್ನಗಳನ್ನು ತಯಾರಿಸಲು ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಉಪಕ್ರಮವು ದೇಶಾದ್ಯಂತ ಲಕ್ಷಾಂತರ ಎಂ ಎಸ್ ಎಂ ಇ ಗಳು ಮತ್ತು ಸಣ್ಣ ಉದ್ಯಮಿಗಳನ್ನು ಬೆಂಬಲಿಸುವುದಲ್ಲದೆ, ದೇಶಾದ್ಯಂತ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ" ಎಂದು ಪ್ರಧಾನಿ ಹೇಳಿದರು, ಇದು ಭಾರತದ ಯುವಕರಿಗೆ ಅಭೂತಪೂರ್ವ ಅವಕಾಶಗಳ ಸಮಯ ಎಂದು ಅವರು ಹೇಳಿದರು. ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಉಳಿಯುತ್ತದೆ ಎಂದು ಐಎಂಎಫ್ ಇತ್ತೀಚೆಗೆ ವರದಿ ಮಾಡಿದೆ ಎಂದು ಅವರು ಹೇಳಿದರು. ಈ ಬೆಳವಣಿಗೆಗೆ ಹಲವು ಅಂಶಗಳಿವೆ ಎಂದು ಅವರು ಒತ್ತಿ ಹೇಳಿದರು, ಅವುಗಳಲ್ಲಿ ಪ್ರಮುಖವಾದದ್ದು ಮುಂಬರುವ ದಿನಗಳಲ್ಲಿ ಎಲ್ಲಾ ವಲಯಗಳಲ್ಲಿ ಉದ್ಯೋಗಾವಕಾಶಗಳ ಹೆಚ್ಚಳ. ಇತ್ತೀಚಿನ ದಿನಗಳಲ್ಲಿ, ಆಟೋಮೊಬೈಲ್ ಮತ್ತು ಪಾದರಕ್ಷೆಗಳ ಉದ್ಯಮಗಳು ಉತ್ಪಾದನೆ ಮತ್ತು ರಫ್ತುಗಳಲ್ಲಿ ಹೊಸ ದಾಖಲೆಗಳನ್ನು ಸಾಧಿಸಿವೆ, ಯುವಕರಿಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ ಎಂದು ಪ್ರಧಾನಿ ಹೇಳಿದರು. ಇದೇ ಮೊದಲ ಬಾರಿಗೆ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ವಹಿವಾಟು ₹1.70 ಲಕ್ಷ ಕೋಟಿ ದಾಟಿದ್ದು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ಹೊಸ ಉದ್ಯೋಗಗಳನ್ನು ಸೃಷ್ಟಿಸಿವೆ ಎಂದು ಅವರು ಹೇಳಿದರು. ಒಳನಾಡು ಜಲ ಸಾರಿಗೆಯಲ್ಲಿನ ಇತ್ತೀಚಿನ ಸಾಧನೆಗಳ ಕುರಿತು ಮಾತನಾಡಿದ ಅವರು, 2014 ಕ್ಕಿಂತ ಮೊದಲು, ಒಳನಾಡಿನ ಜಲ ಸಾರಿಗೆಯ ಮೂಲಕ ವಾರ್ಷಿಕವಾಗಿ ಕೇವಲ 18 ಮಿಲಿಯನ್ ಟನ್ ಸರಕುಗಳನ್ನು ಸಾಗಿಸಲಾಗುತ್ತಿತ್ತು ಎಂದು ಹೇಳಿದರು. ಈ ವರ್ಷ, ಸರಕು ಸಾಗಣೆ 145 ಮಿಲಿಯನ್ ಟನ್ ಗಳನ್ನು ಮೀರಿದೆ. ಈ ಯಶಸ್ಸಿಗೆ ಭಾರತದ ಸ್ಥಿರ ನೀತಿ ನಿರೂಪಣೆ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆ ಕಾರಣ ಎಂದು ಅವರು ಹೇಳಿದರು. ದೇಶದಲ್ಲಿ ರಾಷ್ಟ್ರೀಯ ಜಲಮಾರ್ಗಗಳ ಸಂಖ್ಯೆ 5 ರಿಂದ 110 ಕ್ಕೆ ಏರಿದೆ ಮತ್ತು ಈ ಜಲಮಾರ್ಗಗಳ ಕಾರ್ಯಾಚರಣೆಯ ಉದ್ದವು ಸುಮಾರು 2,700 ಕಿ.ಮೀ.ಗಳಿಂದ ಸುಮಾರು 5,000 ಕಿ.ಮೀ.ಗಳಿಗೆ ಹೆಚ್ಚಾಗಿದೆ ಎಂದು ಪ್ರಧಾನಿ ಹೇಳಿದರು. ಈ ಸಾಧನೆಗಳು ದೇಶಾದ್ಯಂತ ಯುವಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಒತ್ತಿ ಹೇಳಿದರು.
"ಮುಂಬೈ ಶೀಘ್ರದಲ್ಲೇ ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) 2025 ಅನ್ನು ಆಯೋಜಿಸಲಿದೆ. ಈ ಕಾರ್ಯಕ್ರಮವು ಯುವ ಕೇಂದ್ರಿತವಾಗಿದ್ದು, ಯುವ ಸೃಷ್ಟಿಕರ್ತರಿಗೆ ಅಂತಹ ವೇದಿಕೆಯನ್ನು ಒದಗಿಸುತ್ತದೆ. ಮಾಧ್ಯಮ, ಗೇಮಿಂಗ್ ಮತ್ತು ಮನರಂಜನಾ ಕ್ಷೇತ್ರಗಳಲ್ಲಿನ ನಾವೀನ್ಯಕಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಶೃಂಗಸಭೆಯು ಅಭೂತಪೂರ್ವ ಅವಕಾಶವನ್ನು ನೀಡುತ್ತದೆ" ಎಂದು ಶ್ರೀ ಮೋದಿ ಹೇಳಿದರು. ಮನರಂಜನಾ ನವೋದ್ಯಮಗಳು ಹೂಡಿಕೆದಾರರು ಮತ್ತು ಉದ್ಯಮದ ನಾಯಕರೊಂದಿಗೆ ಸಂಪರ್ಕ ಸಾಧಿಸಲು ಅವಕಾಶವನ್ನು ಪಡೆಯುತ್ತವೆ, ಇದು ಜಗತ್ತಿಗೆ ತಮ್ಮ ಆಲೋಚನೆಗಳನ್ನು ಪ್ರದರ್ಶಿಸಲು ಅತಿದೊಡ್ಡ ವೇದಿಕೆಯಾಗಲಿದೆ ಎಂದು ಅವರು ಹೇಳಿದರು. ಈ ಕಾರ್ಯಕ್ರಮದ ಸಮಯದಲ್ಲಿ ಆಯೋಜಿಸಲಾದ ವಿವಿಧ ಕಾರ್ಯಾಗಾರಗಳ ಮೂಲಕ ಯುವಕರು ಎಐ, ಎಕ್ಸ್ ಆರ್ ಮತ್ತು ತಲ್ಲೀನಗೊಳಿಸುವ ಮಾಧ್ಯಮಗಳ ಬಗ್ಗೆ ಜ್ಞಾನವನ್ನು ಪಡೆಯುತ್ತಾರೆ ಎಂದು ಅವರು ಒತ್ತಿ ಹೇಳಿದರು. "ಭಾರತದ ಡಿಜಿಟಲ್ ಕಂಟೆಂಟ್ ಭವಿಷ್ಯಕ್ಕೆ ವೇವ್ಸ್ ಶಕ್ತಿ ತುಂಬುತ್ತದೆ" ಎಂದು ಅವರು ಹೇಳಿದರು. ಭಾರತದ ಯುವಕರ ಒಳಗೊಳ್ಳುವಿಕೆಯನ್ನು ಶ್ಲಾಘಿಸಿದ ಅವರು, ಸಮಾಜದ ಪ್ರತಿಯೊಂದು ವರ್ಗವೂ ದೇಶದ ಸಾಧನೆಗಳಿಗೆ ಕೊಡುಗೆ ನೀಡುತ್ತಿದೆ ಎಂದು ಒತ್ತಿ ಹೇಳಿದರು. ಇತ್ತೀಚಿನ ಯು ಪಿ ಎಸ್ ಸಿ ಫಲಿತಾಂಶಗಳನ್ನು ಉಲ್ಲೇಖಿಸಿದ ಅವರು, ಭಾರತದ ಹೆಣ್ಣುಮಕ್ಕಳು ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು. ಅಲ್ಲಿ ಮೊದಲ ಎರಡು ಸ್ಥಾನಗಳನ್ನು ಮಹಿಳೆಯರು ಪಡೆದುಕೊಂಡಿದ್ದಾರೆ ಮತ್ತು ಮೊದಲ ಐದು ಸ್ಥಾನಗಳಲ್ಲಿ ಮೂವರು ಮಹಿಳೆಯರಾಗಿದ್ದಾರೆ ಎಂದರು. "ಅಧಿಕಾರಶಾಹಿಯಿಂದ ಹಿಡಿದು ಬಾಹ್ಯಾಕಾಶ ಮತ್ತು ವಿಜ್ಞಾನದವರೆಗೆ ಮಹಿಳೆಯರು ಹೊಸ ಎತ್ತರವನ್ನು ಏರುತ್ತಿದ್ದಾರೆ. ನಮ್ಮ ಸರ್ಕಾರವು ಸ್ವಸಹಾಯ ಗುಂಪುಗಳು, ವಿಮಾ ಸಖಿಗಳು, ಬ್ಯಾಂಕ್ ಸಖಿಗಳು ಮತ್ತು ಕೃಷಿ ಸಖಿಗಳಂತಹ ಉಪಕ್ರಮಗಳ ಮೂಲಕ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವತ್ತ ಗಮನಹರಿಸುತ್ತಿದೆ, ಇದು ಹೊಸ ಅವಕಾಶಗಳನ್ನು ಸೃಷ್ಟಿಸಿದೆ" ಎಂದು ಶ್ರೀ ಮೋದಿ ಹೇಳಿದರು. ಸಾವಿರಾರು ಮಹಿಳೆಯರು ಈಗ ಡ್ರೋನ್ ದೀದಿಯಾಗಿ ಕೆಲಸ ಮಾಡುತ್ತಿದ್ದಾರೆ, ಅವರ ಕುಟುಂಬಗಳು ಮತ್ತು ಗ್ರಾಮಗಳ ಸಮೃದ್ಧಿಯನ್ನು ಖಚಿತಪಡಿಸುತ್ತಿದ್ದಾರೆ ಎಂದು ಅವರು ಹೇಳಿದರು. ದೇಶದಲ್ಲಿ 90 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳು ಸಕ್ರಿಯವಾಗಿವೆ, ಇದರಲ್ಲಿ 10 ಕೋಟಿಗೂ ಹೆಚ್ಚು ಮಹಿಳೆಯರು ಸೇರಿದ್ದಾರೆ ಎಂದು ಅವರು ಹೇಳಿದರು. ಈ ಗುಂಪುಗಳನ್ನು ಬಲಪಡಿಸಲು, ಸರ್ಕಾರವು ಅವರ ಬಜೆಟ್ ಅನ್ನು ಐದು ಪಟ್ಟು ಹೆಚ್ಚಿಸಿದೆ ಮತ್ತು 20 ಲಕ್ಷ ರೂ.ಗಳವರೆಗೆ ಗ್ಯಾರಂಟಿ ರಹಿತ ಸಾಲಗಳಿಗೆ ಅವಕಾಶ ಕಲ್ಪಿಸಿದೆ. ಮುದ್ರಾ ಯೋಜನೆಯ ಅತಿದೊಡ್ಡ ಫಲಾನುಭವಿಗಳು ಮಹಿಳೆಯರು ಮತ್ತು ದೇಶದಲ್ಲಿ 50,000 ಕ್ಕೂ ಹೆಚ್ಚು ನವೋದ್ಯಮಗಳು ಮಹಿಳಾ ನಿರ್ದೇಶಕರನ್ನು ಹೊಂದಿವೆ ಎಂದು ಹೇಳಿದರು. ವಿವಿಧ ವಲಯಗಳಲ್ಲಿನ ಇಂತಹ ಪರಿವರ್ತನಾಶೀಲ ಬದಲಾವಣೆಗಳು ಭಾರತದ ಅಭಿವೃದ್ಧಿಯ ಸಂಕಲ್ಪವನ್ನು ಬಲಪಡಿಸುತ್ತಿವೆ ಮತ್ತು ಹೆಚ್ಚಿನ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಪ್ರಧಾನಿ ಹೇಳಿದರು.
ಇಂದು ನೇಮಕಾತಿ ಪತ್ರಗಳನ್ನು ಸ್ವೀಕರಿಸಿದ ಯುವಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ವ್ಯಕ್ತಿಗಳು ಸಾಧಿಸಿದ ಸ್ಥಾನಗಳು ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಫಲವಾಗಿರುತ್ತದೆ ಎಂದು ಒತ್ತಿ ಹೇಳಿದರು. ಈಗ ಅವರು ತಮ್ಮ ಜೀವನದ ಮುಂದಿನ ಹಂತಗಳನ್ನು ತಮಗಾಗಿ ಮಾತ್ರವಲ್ಲದೆ ರಾಷ್ಟ್ರಕ್ಕೂ ಅರ್ಪಿಸಿಕೊಳ್ಳುವ ಸಮಯ ಇದೀಗ ಬಂದಿದೆ. ಸಾರ್ವಜನಿಕ ಸೇವಾ ಮನೋಭಾವವು ಅತ್ಯುನ್ನತವಾಗಿರಬೇಕು ಎಂದು ಅವರು ಹೇಳಿದರು. ಒಬ್ಬ ವ್ಯಕ್ತಿಯು ತನ್ನ ಸೇವೆಗೆ ಅತ್ಯಂತ ಗೌರವದಿಂದ ಕೆಲಸ ಮಾಡಿದಾಗ, ಅವರ ಪ್ರಯತ್ನಗಳು ರಾಷ್ಟ್ರವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುವ ಶಕ್ತಿಯನ್ನು ಪಡೆಯುತ್ತವೆ ಎಂದು ಪ್ರಧಾನಿ ಹೇಳಿದರು. ಭಾರತದ ಪ್ರತಿಯೊಬ್ಬ ನಾಗರಿಕನ ಜೀವನವನ್ನು ಸುಧಾರಿಸುವಲ್ಲಿ ವ್ಯಕ್ತಿಗಳ ಕರ್ತವ್ಯ, ನಾವೀನ್ಯತೆ ಮತ್ತು ಬದ್ಧತೆಯು ನೇರವಾಗಿ ಕೊಡುಗೆ ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು.
ಒಬ್ಬರು ಜವಾಬ್ದಾರಿಯುತ ಹುದ್ದೆಗಳಿಗೆ ಏರಿದಾಗ, ನಾಗರಿಕರಾಗಿ ಅವರ ಕರ್ತವ್ಯಗಳು ಮತ್ತು ಪಾತ್ರಗಳು ಇನ್ನಷ್ಟು ಮುಖ್ಯವಾಗುತ್ತವೆ ಎಂದು ಹೇಳಿದ ಶ್ರೀ ಮೋದಿ, ಈ ದಿಕ್ಕಿನಲ್ಲಿ ಜಾಗೃತಿಯ ಅಗತ್ಯವನ್ನು ಒತ್ತಿ ಹೇಳಿದರು. ಅವರು 'ಏಕ್ ಪೇಡ್ ಮಾ ಕೆ ನಾಮ್' ಅಭಿಯಾನವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು ಮತ್ತು ಪ್ರಕೃತಿಗೆ ಕೃತಜ್ಞತೆ ಮತ್ತು ಸೇವೆಯ ಸಂಕೇತವಾಗಿ ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಿನಲ್ಲಿ ಗಿಡವನ್ನು ನೆಡುವಂತೆ ಪ್ರೋತ್ಸಾಹಿಸಿದರು. ತಮ್ಮ ಕೆಲಸದ ಸ್ಥಳಗಳಲ್ಲಿ ಈ ಅಭಿಯಾನದಲ್ಲಿ ಹೆಚ್ಚು ಹೆಚ್ಚು ಜನರನ್ನು ತೊಡಗಿಸಿಕೊಳ್ಳುವಂತೆ ಅವರು ಒತ್ತಾಯಿಸಿದರು. ಜೂನ್ ನಲ್ಲಿ ಬರಲಿರುವ ಅಂತರರಾಷ್ಟ್ರೀಯ ಯೋಗ ದಿನವು ಯಶಸ್ವಿ ವೃತ್ತಿಜೀವನದ ಜೊತೆಗೆ ಆರೋಗ್ಯಕರ ಜೀವನವನ್ನು ಪ್ರಾರಂಭಿಸಲು ಉತ್ತಮ ಅವಕಾಶವಾಗಿದೆ ಎಂದು ಹೇಳಿದ ಅವರು, ಆರೋಗ್ಯವು ವ್ಯಕ್ತಿಗಳಿಗೆ ಮಾತ್ರವಲ್ಲದೆ ಕೆಲಸದ ದಕ್ಷತೆ ಮತ್ತು ದೇಶದ ಉತ್ಪಾದಕತೆಗೆ ಸಹ ಮುಖ್ಯವಾಗಿದೆ ಎಂದು ಒತ್ತಿ ಹೇಳಿದರು. ಜನರು ತಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸಲು ಮಿಷನ್ ಕರ್ಮಯೋಗಿ ಉಪಕ್ರಮವನ್ನು ಬಳಸಿಕೊಳ್ಳುವಂತೆ ಪ್ರಧಾನಿ ಕರೆ ನೀಡಿದರು. ತಮ್ಮ ಪಾತ್ರದ ಉದ್ದೇಶ ಕೇವಲ ಹುದ್ದೆಯನ್ನು ಅಲಂಕರಿಸುವುದಲ್ಲ, ಬದಲಾಗಿ ಭಾರತದ ಪ್ರತಿಯೊಬ್ಬ ನಾಗರಿಕರಿಗೂ ಸೇವೆ ಸಲ್ಲಿಸುವುದು ಮತ್ತು ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವುದು ಎಂದು ಅವರು ಹೇಳಿದರು. ನಾಗರಿಕ ಸೇವಾ ದಿನದಂದು ಹಂಚಿಕೊಂಡ 'ನಾಗರಿಕ ದೇವೋ ಭವ' ಮಂತ್ರವನ್ನು ನೆನಪಿಸಿಕೊಳ್ಳುತ್ತಾ, ನಾಗರಿಕರಿಗೆ ಸೇವೆ ಸಲ್ಲಿಸುವುದು ದೇವರನ್ನು ಪೂಜಿಸುವುದಕ್ಕೆ ಸಮಾನ ಎಂದು ಒತ್ತಿ ಹೇಳಿದರು. ಪ್ರಾಮಾಣಿಕತೆ ಮತ್ತು ಸಮರ್ಪಣೆಯಿಂದ ಭಾರತವು ಅಭಿವೃದ್ಧಿ ಹೊಂದಿದ ಮತ್ತು ಸಮೃದ್ಧ ರಾಷ್ಟ್ರವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. 140 ಕೋಟಿ ಭಾರತೀಯರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಸಾಧಿಸಲು ಯುವಜನತೆ ಶ್ರಮಿಸಬೇಕೆಂದು ಅವರು ಕರೆ ನೀಡಿದರು.
ಹಿನ್ನೆಲೆ
ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಧಾನಮಂತ್ರಿಯವರ ಬದ್ಧತೆಗೆ ಅನುಗುಣವಾಗಿ, 15ನೇ ಉದ್ಯೋಗ ಮೇಳವನ್ನು ದೇಶಾದ್ಯಂತ 47 ಸ್ಥಳಗಳಲ್ಲಿ ಆಯೋಜಿಸಲಾಗುವುದು. ಇದು ಯುವಜನರನ್ನು ಸಬಲೀಕರಣಗೊಳಿಸಲು ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಅರ್ಥಪೂರ್ಣ ಅವಕಾಶಗಳನ್ನು ಒದಗಿಸುತ್ತದೆ.
ದೇಶಾದ್ಯಂತ ಆಯ್ಕೆಯಾದ ಹೊಸ ಉದ್ಯೋಗಿಗಳು ಕಂದಾಯ ಇಲಾಖೆ, ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ, ಅಂಚೆ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ರೈಲ್ವೆ ಸಚಿವಾಲಯ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸೇರಿದಂತೆ ವಿವಿಧ ಸಚಿವಾಲಯಗಳು/ಇಲಾಖೆಗಳಲ್ಲಿ ಕೇಂದ್ರ ಸರ್ಕಾರವನ್ನು ಸೇರಲಿದ್ದಾರೆ.
*****
(Release ID: 2124547)
Visitor Counter : 10
Read this release in:
Tamil
,
English
,
Urdu
,
Marathi
,
Hindi
,
Nepali
,
Manipuri
,
Bengali
,
Assamese
,
Punjabi
,
Gujarati
,
Odia
,
Malayalam