ಪ್ರಧಾನ ಮಂತ್ರಿಯವರ ಕಛೇರಿ
ಸೌದಿ ಅರೇಬಿಯಾಕ್ಕೆ ಪ್ರಧಾನಮಂತ್ರಿಯವರ ಅಧಿಕೃತ ಭೇಟಿಯ ಸಮಾರೋಪದಲ್ಲಿ ನೀಡಲಾದ ಜಂಟಿ ಹೇಳಿಕೆ
Posted On:
23 APR 2025 12:44PM by PIB Bengaluru
"ಒಂದು ಐತಿಹಾಸಿಕ ಸ್ನೇಹ; ಪ್ರಗತಿಗಾಗಿ ಪಾಲುದಾರಿಕೆ"
ಸೌದಿ ಅರೇಬಿಯಾದ ಯುವರಾಜ ಮತ್ತು ಪ್ರಧಾನ ಮಂತ್ರಿ ಗೌರವಾನ್ವಿತ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರ ಆಹ್ವಾನದ ಮೇರೆಗೆ ಭಾರತ ಗಣರಾಜ್ಯದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025 ರ ಏಪ್ರಿಲ್ 22 ರಂದು ಸೌದಿ ಅರೇಬಿಯಾಕ್ಕೆ ಅಧಿಕೃತ ಭೇಟಿ ನೀಡಿದರು.
ಇದು ಸೌದಿ ಅರೇಬಿಯಾಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮೂರನೇ ಭೇಟಿಯಾಗಿದೆ. ಜಿ -20 ಶೃಂಗಸಭೆಯಲ್ಲಿ ಭಾಗವಹಿಸಲು ಮತ್ತು ಭಾರತ-ಸೌದಿ ಅರೇಬಿಯಾ ಕಾರ್ಯತಂತ್ರದ ಪಾಲುದಾರಿಕೆ ಮಂಡಳಿಯ ಮೊದಲ ಸಭೆಯ ಸಹ ಅಧ್ಯಕ್ಷತೆ ವಹಿಸಲು ಸೌದಿ ಅರೇಬಿಯಾದ ಯುವರಾಜ ಮತ್ತು ಮತ್ತು ಪ್ರಧಾನಿ ಗೌರವಾನ್ವಿತ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರು 2023 ರ ಸೆಪ್ಟೆಂಬರ್ ನಲ್ಲಿ ಭಾರತಕ್ಕೆ ನೀಡಿದ ಐತಿಹಾಸಿಕ ಅಧಿಕೃತ ಭೇಟಿಯನ್ನು ಅನುಸರಿಸಿ ಈ ಭೇಟಿ ನಡೆದಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಯುವರಾಜ ಮತ್ತು ಪ್ರಧಾನಮಂತ್ರಿ ಘನತೆವೆತ್ತ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರು ಜೆಡ್ಡಾದ ಅಲ್-ಸಲಾಂ ಅರಮನೆಯಲ್ಲಿ ಸ್ವಾಗತಿಸಿದರು. ಬಳಿಕ ಅವರು ಅಧಿಕೃತ ಮಾತುಕತೆ ನಡೆಸಿದರು, ಈ ಸಂದರ್ಭದಲ್ಲಿ ಅವರು ಭಾರತ ಗಣರಾಜ್ಯ ಮತ್ತು ಸೌದಿ ಅರೇಬಿಯಾ ನಡುವಿನ ಐತಿಹಾಸಿಕ ನಿಕಟ ಸ್ನೇಹದ ಬಲವಾದ ಬಂಧವನ್ನು ನೆನಪಿಸಿಕೊಂಡರು. ಭಾರತ ಮತ್ತು ಸೌದಿ ಅರೇಬಿಯಾ ಬಲವಾದ ಸಂಬಂಧವನ್ನು ಹೊಂದಿವೆ ಮತ್ತು ನಂಬಿಕೆ ಹಾಗು ಸದ್ಭಾವನೆಯಿಂದ ಒಡಗೂಡಿದ ಜನತೆ ಹಾಗು ಜನತೆಯ ನಡುವಿನ ನಿಕಟ ಸಂಬಂಧವನ್ನು ಹೊಂದಿವೆ. ರಕ್ಷಣೆ, ಭದ್ರತೆ, ಇಂಧನ, ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ಕೃಷಿ, ಸಂಸ್ಕೃತಿ, ಆರೋಗ್ಯ, ಶಿಕ್ಷಣ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಒಳಗೊಂಡ ಕಾರ್ಯತಂತ್ರದ ಸಹಭಾಗಿತ್ವದ ಮೂಲಕ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಭದ್ರ ಅಡಿಪಾಯವು ಮತ್ತಷ್ಟು ಬಲಗೊಂಡಿದೆ ಎಂಬುದನ್ನು ಎರಡೂ ಕಡೆಯವರು ಗಮನಿಸಿದರು. ಎರಡೂ ಕಡೆಯವರು ಪರಸ್ಪರ ಹಿತಾಸಕ್ತಿಯ ಪ್ರಸ್ತುತ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವರ್ಲ್ಡ್ ಎಕ್ಸ್ ಪೋ 2030 ಮತ್ತು ಫಿಫಾ ವಿಶ್ವಕಪ್ 2034ಕ್ಕೆ ಸೌದಿ ಅರೇಬಿಯಾ ಯಶಸ್ವಿಯಾಗಿ ಬಿಡ್ ಸಲ್ಲಿಸಿರುವುದಕ್ಕೆ ಸೌದಿ ಅರೇಬಿಯಾದ ಗೌರವಾನ್ವಿತ ಯುವರಾಜ ಮತ್ತು ಪ್ರಧಾನಮಂತ್ರಿ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರನ್ನು ಅಭಿನಂದಿಸಿದರು.
ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯನ್ನು ಬಲಪಡಿಸುವ ಮಾರ್ಗಗಳ ಬಗ್ಗೆ ಇಬ್ಬರೂ ನಾಯಕರು ರಚನಾತ್ಮಕ ಚರ್ಚೆ ನಡೆಸಿದರು. ಇಬ್ಬರೂ ನಾಯಕರು ಭಾರತ-ಸೌದಿ ಅರೇಬಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಕೌನ್ಸಿಲ್ (ಎಸ್ಪಿಸಿ) ನ ಎರಡನೇ ಸಭೆಯ ಸಹ ಅಧ್ಯಕ್ಷತೆ ವಹಿಸಿದ್ದರು. 2023 ರ ಸೆಪ್ಟೆಂಬರ್ ನಲ್ಲಿ ನಡೆದ ಕೊನೆಯ ಸಭೆಯ ನಂತರದ ಕಾರ್ಯತಂತ್ರದ ಪಾಲುದಾರಿಕೆ ಮಂಡಳಿಯ ಪ್ರಗತಿಯನ್ನು ಎರಡೂ ಕಡೆಯವರು ಪರಿಶೀಲಿಸಿದರು. ಇಬ್ಬರೂ ನಾಯಕರು ಎರಡು ಮಂತ್ರಿ ಸಮಿತಿಗಳ ಕೆಲಸದ ಫಲಿತಾಂಶಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು, ಅವುಗಳೆಂದರೆ: (ಎ) ರಾಜಕೀಯ, ಭದ್ರತೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಹಕಾರ ಸಮಿತಿ ಮತ್ತು ಅವುಗಳ ಉಪಸಮಿತಿಗಳು ಮತ್ತು (ಬಿ) ಆರ್ಥಿಕತೆ ಮತ್ತು ಹೂಡಿಕೆಯ ಸಮಿತಿ ಹಾಗು ವಿವಿಧ ಕ್ಷೇತ್ರಗಳಲ್ಲಿ ಅವುಗಳ ಜಂಟಿ ಕಾರ್ಯ ಗುಂಪುಗಳು. ಈ ನಿಟ್ಟಿನಲ್ಲಿ, ರಕ್ಷಣಾ ಸಹಕಾರ ಮತ್ತು ಪ್ರವಾಸೋದ್ಯಮ ಹಾಗು ಸಾಂಸ್ಕೃತಿಕ ಸಹಕಾರ ಕುರಿತ ಸಚಿವರ ಸಮಿತಿಗಳನ್ನು ಸೇರಿಸುವ ಮೂಲಕ ಕಾರ್ಯತಂತ್ರದ ಪಾಲುದಾರಿಕೆ ಮಂಡಳಿಯನ್ನು ನಾಲ್ಕು ಮಂತ್ರಿ ಸಮಿತಿಗಳಿಗೆ ವಿಸ್ತರಿಸಿರುವುದನ್ನು ಮಂಡಳಿಯ ಸಹ-ಅಧ್ಯಕ್ಷರು ಸ್ವಾಗತಿಸಿದರು. ಎರಡೂ ಕಡೆ ವಿಶ್ವಾಸ ಮತ್ತು ಪರಸ್ಪರ ತಿಳುವಳಿಕೆಯನ್ನು ಬೆಳೆಸಿರುವ ವಿವಿಧ ಸಚಿವಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯ ಉನ್ನತ ಮಟ್ಟದ ಭೇಟಿಗಳನ್ನು ಇಬ್ಬರೂ ನಾಯಕರು ಮೆಚ್ಚುಗೆಯಿಂದ ಉಲ್ಲೇಖಿಸಿದರು. ಸಭೆಯ ಕೊನೆಯಲ್ಲಿ, ಉಭಯ ನಾಯಕರು ಭಾರತ-ಸೌದಿ ಅರೇಬಿಯಾ ಕಾರ್ಯತಂತ್ರದ ಪಾಲುದಾರಿಕೆ ಮಂಡಳಿಯ ಎರಡನೇ ಸಭೆಯ ಟಿಪ್ಪಣಿಗಳಿಗೆ ಸಹಿ ಹಾಕಿದರು.
ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿರುವ ಸುಮಾರು 2.7 ಮಿಲಿಯನ್ ಭಾರತೀಯ ಪ್ರಜೆಗಳ ನಿರಂತರ ಕಲ್ಯಾಣಕ್ಕಾಗಿ ಭಾರತವು ಸೌದಿ ಕಡೆಯವರಿಗೆ ಮೆಚ್ಚುಗೆ ವ್ಯಕ್ತಪಡಿಸಿತು, ಇದು ಉಭಯ ದೇಶಗಳ ನಡುವೆ ಇರುವ ಬಲವಾದ ಜನರ ನಡುವಿನ ಬಂಧ ಮತ್ತು ಅಪಾರ ಸದ್ಭಾವನೆಯನ್ನು ಪ್ರತಿಬಿಂಬಿಸುತ್ತದೆ. 2024 ರಲ್ಲಿ ಹಜ್ ಯಾತ್ರೆಯನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಭಾರತವು ಸೌದಿ ಅರೇಬಿಯಾವನ್ನು ಅಭಿನಂದಿಸಿತು ಮತ್ತು ಭಾರತೀಯ ಹಜ್ ಹಾಗು ಉಮ್ರಾ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಉಭಯ ದೇಶಗಳ ನಡುವಿನ ಅತ್ಯುತ್ತಮ ಸಮನ್ವಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿತು.
ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಆರ್ಥಿಕ ಸಂಬಂಧ, ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳ ಬೆಳವಣಿಗೆಯನ್ನು ಎರಡೂ ಕಡೆಯವರು ಸ್ವಾಗತಿಸಿದರು. ವಿಷನ್ 2030 ರ ಅಡಿಯಲ್ಲಿ ನಿಗದಿಯಾದ ಗುರಿಗಳಲ್ಲಿ ಸಾಧಿಸಿದ ಪ್ರಗತಿಗಾಗಿ ಭಾರತವು ಸೌದಿ ಕಡೆಯವರನ್ನು ಅಭಿನಂದಿಸಿತು. ಭಾರತದ ಸುಸ್ಥಿರ ಆರ್ಥಿಕ ಬೆಳವಣಿಗೆ ಮತ್ತು 2047 ರ ವೇಳೆಗೆ ವಿಕ್ಷಿತ್ ಭಾರತ್ ಅಥವಾ ಅಭಿವೃದ್ಧಿ ಹೊಂದಿದ ದೇಶವಾಗುವ ಗುರಿಯ ಬಗ್ಗೆ ಸೌದಿ ಕಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ರಾಷ್ಟ್ರೀಯ ಗುರಿಗಳನ್ನು ಪೂರೈಸಲು ಮತ್ತು ಹಂಚಿಕೆಯ ಸಮೃದ್ಧಿಯನ್ನು ಸಾಧಿಸಲು ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ಎರಡೂ ಕಡೆಯವರು ಒಪ್ಪಿಕೊಂಡರು.
ಉಭಯ ದೇಶಗಳ ನಡುವೆ ಹೂಡಿಕೆಯ ಹರಿವನ್ನು ಉತ್ತೇಜಿಸಲು 2024 ರಲ್ಲಿ ರಚಿಸಲಾದ ಉನ್ನತ ಮಟ್ಟದ ಕಾರ್ಯಪಡೆ (ಎಚ್ ಎಲ್ ಟಿಎಫ್) ಅಡಿಯಲ್ಲಿ ನಡೆದ ಚರ್ಚೆಗಳಲ್ಲಿ ಆಗಿರುವ ಪ್ರಗತಿಯ ಬಗ್ಗೆ ಇಬ್ಬರೂ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಇಂಧನ, ಪೆಟ್ರೋಕೆಮಿಕಲ್ಸ್, ಮೂಲಸೌಕರ್ಯ, ತಂತ್ರಜ್ಞಾನ, ಫಿನ್ಟೆಕ್, ಡಿಜಿಟಲ್ ಮೂಲಸೌಕರ್ಯ, ದೂರಸಂಪರ್ಕ, ಔಷಧೀಯ ವಲಯ, ಉತ್ಪಾದನೆ ಮತ್ತು ಆರೋಗ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಭಾರತದಲ್ಲಿ ಹೂಡಿಕೆ ಮಾಡುವ ಸೌದಿ ಅರೇಬಿಯಾದ ಪ್ರಯತ್ನವನ್ನು ಆಧರಿಸಿ, ಉನ್ನತ ಮಟ್ಟದ ಕಾರ್ಯಪಡೆಯು ಅಂತಹ ಹೂಡಿಕೆಯ ಹರಿವನ್ನು ತ್ವರಿತವಾಗಿ ಉತ್ತೇಜಿಸುವ ಅನೇಕ ಕ್ಷೇತ್ರಗಳಲ್ಲಿ ಪರಸ್ಪರ ತಿಳುವಳಿಕೆಗೆ ಬಂದಿದೆ ಎಂಬುದನ್ನು ಗಮನಿಸಲಾಯಿತು. ಎರಡು ಸಂಸ್ಕರಣಾಗಾರಗಳನ್ನು ಸ್ಥಾಪಿಸಲು ಸಹಕರಿಸಲು ಉನ್ನತ ಮಟ್ಟದ ಕಾರ್ಯಪಡೆಯಲ್ಲಿ ಆಗಿರುವ ಒಪ್ಪಂದವನ್ನು ಅವರು ಗಮನಿಸಿದರು. ತೆರಿಗೆಯಂತಹ ಕ್ಷೇತ್ರಗಳಲ್ಲಿ ಈ ಕಾರ್ಯಪಡೆಯು ಸಾಧಿಸಿದ ಪ್ರಗತಿಯು ಭವಿಷ್ಯದಲ್ಲಿ ಹೆಚ್ಚಿನ ಸಹಕಾರಕ್ಕೆ ಪ್ರಮುಖ ಪ್ರಗತಿಯಾಗಿದೆ. ದ್ವಿಪಕ್ಷೀಯ ಹೂಡಿಕೆ ಒಪ್ಪಂದದ ಕುರಿತ ಮಾತುಕತೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವ ಬಯಕೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು. ಪಿಐಎಫ್ ನಿಂದ ಹೂಡಿಕೆ ಸೌಲಭ್ಯಕ್ಕಾಗಿ ನೋಡಲ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲು ಸಾರ್ವಜನಿಕ ಹೂಡಿಕೆ ನಿಧಿಯಲ್ಲಿ (ಪಿಐಎಫ್) ಇಂಡಿಯಾ ಡೆಸ್ಕ್ ಅನ್ನು ಪ್ರಾರಂಭಿಸಿರುವುದನ್ನು ಭಾರತೀಯ ಕಡೆಯವರು ಶ್ಲಾಘಿಸಿದರು. ಉನ್ನತ ಮಟ್ಟದ ಕಾರ್ಯಪಡೆಯ ಕೆಲಸವು ಭಾರತ ಮತ್ತು ಸೌದಿ ಅರೇಬಿಯಾ ನಡುವೆ ಬೆಳೆಯುತ್ತಿರುವ ಆರ್ಥಿಕ ಪಾಲುದಾರಿಕೆಯನ್ನು ಒತ್ತಿಹೇಳುತ್ತದೆ, ಇದು ಪರಸ್ಪರ ಆರ್ಥಿಕ ಬೆಳವಣಿಗೆ ಮತ್ತು ಸಹಯೋಗದ ಹೂಡಿಕೆಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ ಎಂಬುದನ್ನೂ ಅವರು ಗಮನಿಸಿದರು.
ತಮ್ಮ ನೇರ ಮತ್ತು ಪರೋಕ್ಷ ಹೂಡಿಕೆ ಪಾಲುದಾರಿಕೆಯನ್ನು ಬಲಪಡಿಸುವ ಬದ್ಧತೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು. 2023 ರ ಸೆಪ್ಟೆಂಬರ್ ನಲ್ಲಿ ಹೊಸದಿಲ್ಲಿಯಲ್ಲಿ ನಡೆದ ಸೌದಿ-ಭಾರತ ಹೂಡಿಕೆ ವೇದಿಕೆಯ ಫಲಿತಾಂಶಗಳನ್ನು ಮತ್ತು ಎರಡೂ ದೇಶಗಳ ಸಾರ್ವಜನಿಕ ಮತ್ತು ಖಾಸಗಿ ವಲಯಗಳ ನಡುವೆ ಅದು ಸಾಧಿಸಿದ ಸಕ್ರಿಯ ಸಹಕಾರವನ್ನು ಅವರು ಶ್ಲಾಘಿಸಿದರು. ಸೌದಿ ಅರೇಬಿಯಾದಲ್ಲಿ ಭಾರತೀಯ ಕಂಪನಿಗಳ ಹೂಡಿಕೆ ಚಟುವಟಿಕೆಗಳ ವಿಸ್ತರಣೆಯನ್ನು ಅವರು ಶ್ಲಾಘಿಸಿದರು ಮತ್ತು ಪರಸ್ಪರ ಹೂಡಿಕೆಗಳನ್ನು ಹೆಚ್ಚಿಸುವಲ್ಲಿ ಖಾಸಗಿ ವಲಯದ ಪಾತ್ರವನ್ನು ಶ್ಲಾಘಿಸಿದರು. ಇನ್ವೆಸ್ಟ್ ಇಂಡಿಯಾ ಮತ್ತು ಸೌದಿ ಅರೇಬಿಯಾದ ಹೂಡಿಕೆ ಸಚಿವಾಲಯದ ನಡುವೆ ದ್ವಿಪಕ್ಷೀಯ ಹೂಡಿಕೆಯನ್ನು ಹೆಚ್ಚಿಸುವ ಸಹಕಾರದ ಚೌಕಟ್ಟನ್ನು ಸಕ್ರಿಯಗೊಳಿಸುವುದನ್ನು ಎರಡೂ ಕಡೆಯವರು ಮಾನ್ಯ ಮಾಡಿದರು. ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಎರಡೂ ಕಡೆಯವರು ಒಪ್ಪಿಕೊಂಡರು, ಪರಸ್ಪರ ಬೆಳವಣಿಗೆ ಮತ್ತು ನಾವೀನ್ಯತೆಗೆ ಈ ಕ್ಷೇತ್ರ ಅಪಾರ ಕೊಡುಗೆ ನೀಡಲಿದೆ.
ಇಂಧನ ಕ್ಷೇತ್ರದಲ್ಲಿ, ಜಾಗತಿಕ ತೈಲ ಮಾರುಕಟ್ಟೆಗಳ ಸ್ಥಿರತೆಯನ್ನು ಹೆಚ್ಚಿಸಲು ಮತ್ತು ಜಾಗತಿಕ ಇಂಧನ ಮಾರುಕಟ್ಟೆಯ ಚಲನಶೀಲತೆಯನ್ನು ಸಮತೋಲನಗೊಳಿಸಲು ಸೌದಿ ಅರೇಬಿಯದೊಂದಿಗೆ ಕೆಲಸ ಮಾಡಲು ಭಾರತೀಯ ಕಡೆಯವರು ಒಪ್ಪಿಕೊಂಡರು. ಜಾಗತಿಕ ಮಾರುಕಟ್ಟೆಗಳಲ್ಲಿ ಎಲ್ಲಾ ಇಂಧನ ಮೂಲಗಳಿಗೆ ಪೂರೈಕೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಕಚ್ಚಾ ತೈಲ ಮತ್ತು ಎಲ್ ಪಿಜಿ ಸೇರಿದಂತೆ ಅದರ ಉತ್ಪನ್ನಗಳ ಪೂರೈಕೆ, ಭಾರತದ ವ್ಯೂಹಾತ್ಮಕ ದಾಸ್ತಾನು ಕಾರ್ಯಕ್ರಮದಲ್ಲಿ ಸಹಯೋಗ, ಉತ್ಪಾದನೆ ಮತ್ತು ವಿಶೇಷ ಕೈಗಾರಿಕೆಗಳು ಸೇರಿದಂತೆ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ ಕ್ಷೇತ್ರದಾದ್ಯಂತ ಜಂಟಿ ಯೋಜನೆಗಳು, ಹೈಡ್ರೋಕಾರ್ಬನ್ ಗಳ ನವೀನ ಬಳಕೆಗಳು ಸೇರಿದಂತೆ ಇಂಧನ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸುವ, ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ, ಎರಡೂ ದೇಶಗಳ ನಡುವಿನ ವಿದ್ಯುತ್ ಅಂತರಸಂಪರ್ಕಕ್ಕಾಗಿ ವಿವರವಾದ ಜಂಟಿ ಅಧ್ಯಯನವನ್ನು ಪೂರ್ಣಗೊಳಿಸುವುದು, ಗ್ರಿಡ್ ಯಾಂತ್ರೀಕರಣ, ಗ್ರಿಡ್ ಸಂಪರ್ಕ, ವಿದ್ಯುತ್ ಗ್ರಿಡ್ ಭದ್ರತೆ ಮತ್ತು ಸ್ಥಿತಿಸ್ಥಾಪಕತ್ವ, ಮತ್ತು ನವೀಕರಿಸಬಹುದಾದ ಇಂಧನ ಯೋಜನೆಗಳು ಹಾಗು ಇಂಧನ ಶೇಖರಣಾ ತಂತ್ರಜ್ಞಾನಗಳಲ್ಲಿ ಪರಿಣತಿಯನ್ನು ವಿನಿಮಯ ಮಾಡಿಕೊಳ್ಳುವುದು ಮತ್ತು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಎರಡೂ ಕಡೆಯ ಕಂಪನಿಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುವುದರ ಮಹತ್ವವನ್ನು ಅವರು ಒಪ್ಪಿಕೊಂಡರು.
ಬೇಡಿಕೆಯನ್ನು ಉತ್ತೇಜಿಸುವುದು, ಹೈಡ್ರೋಜನ್ ಸಾಗಣೆ ಮತ್ತು ಶೇಖರಣಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು, ಉತ್ತಮ ಪದ್ಧತಿ/ಅಭ್ಯಾಸಗಳನ್ನು ಕಾರ್ಯಗತಗೊಳಿಸಲು ಪರಿಣತಿ ಮತ್ತು ಅನುಭವಗಳನ್ನು ವಿನಿಮಯ ಮಾಡಿಕೊಳ್ಳುವುದು ಸೇರಿದಂತೆ ಹಸಿರು / ಶುದ್ಧ ಹೈಡ್ರೋಜನ್ ಕ್ಷೇತ್ರದಲ್ಲಿ ಸಹಕಾರದ ಮಹತ್ವವನ್ನು ಎರಡೂ ಕಡೆಯವರು ಒತ್ತಿ ಹೇಳಿದರು. ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಪೂರೈಕೆ ಸರಪಳಿಗಳು ಮತ್ತು ಯೋಜನೆಗಳನ್ನು ಅಭಿವೃದ್ಧಿಪಡಿಸುವುದು, ಕಂಪನಿಗಳ ನಡುವಿನ ಸಹಕಾರವನ್ನು ಶಕ್ತಗೊಳಿಸುವುದು, ಇಂಧನ ದಕ್ಷತೆಯ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸುವುದು ಮತ್ತು ಕಟ್ಟಡಗಳು, ಕೈಗಾರಿಕೆ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಇಂಧನ ಬಳಕೆಯನ್ನು ತರ್ಕಬದ್ಧಗೊಳಿಸುವುದು ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವನ್ನು ಎರಡೂ ಕಡೆಯವರು ಒಪ್ಪಿಕೊಂಡರು.
ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ, ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶ ಮತ್ತು ಪ್ಯಾರಿಸ್ ಒಪ್ಪಂದದ ತತ್ವಗಳಿಗೆ ಬದ್ಧವಾಗಿರುವ ಮಹತ್ವವನ್ನು ಎರಡೂ ಕಡೆಯವರು ಪುನರುಚ್ಚರಿಸಿದರು ಮತ್ತು ಇಂಧನ ಮೂಲಗಳಿಗಿಂತ ಹೊರಸೂಸುವಿಕೆಯ ಮೇಲೆ ಗಮನ ಕೇಂದ್ರೀಕರಿಸಿ ಹವಾಮಾನ ಒಪ್ಪಂದಗಳನ್ನು ಅಭಿವೃದ್ಧಿಪಡಿಸುವ ಹಾಗು ಕಾರ್ಯಗತಗೊಳಿಸುವ ಅಗತ್ಯವನ್ನು ಪುನರುಚ್ಚರಿಸಿದರು. ಸೌದಿ ಅರೇಬಿಯ "ಸೌದಿ ಗ್ರೀನ್ ಇನಿಶಿಯೇಟಿವ್" ಮತ್ತು "ಮಧ್ಯಪ್ರಾಚ್ಯ ಹಸಿರು ಉಪಕ್ರಮ" ವನ್ನು ಪ್ರಾರಂಭಿಸಿರುವುದನ್ನು ಭಾರತೀಯ ಕಡೆಯವರು ಶ್ಲಾಘಿಸಿದರು ಮತ್ತು ಹವಾಮಾನ ಬದಲಾವಣೆಯ ಕ್ಷೇತ್ರದಲ್ಲಿ ಸೌದಿ ಅರೇಬಿಯದ ಪ್ರಯತ್ನಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಹೊರಸೂಸುವಿಕೆಯನ್ನು ನಿರ್ವಹಿಸಲು ಮತ್ತು ಹವಾಮಾನ ಬದಲಾವಣೆಯ ಉದ್ದೇಶಗಳನ್ನು ಸಾಧಿಸಲು ವೃತ್ತಾಕಾರದ ಇಂಗಾಲದ ಆರ್ಥಿಕತೆಯನ್ನು ಸಾಧನವಾಗಿ ಬಳಸುವ ನೀತಿಗಳನ್ನು ಉತ್ತೇಜಿಸುವ ಮೂಲಕ ವೃತ್ತಾಕಾರದ ಇಂಗಾಲದ ಆರ್ಥಿಕತೆಯ ಅನ್ವಯಿಕೆಗಳನ್ನು ಅಭಿವೃದ್ಧಿಪಡಿಸಲು ಜಂಟಿ ಸಹಕಾರದ ಮಹತ್ವವನ್ನು ಎರಡೂ ಕಡೆಯವರು ಒತ್ತಿ ಹೇಳಿದರು. ಅಂತಾರಾಷ್ಟ್ರೀಯ ಸೌರ ಮೈತ್ರಿ, ಒನ್ ಸನ್-ಒನ್ ವರ್ಲ್ಡ್-ಒನ್ ಗ್ರಿಡ್, ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಗಳ ಒಕ್ಕೂಟ (ಸಿಡಿಆರ್ಐ) ಮತ್ತು ಪರಿಸರಕ್ಕಾಗಿ ಮಿಷನ್ ಲೈಫ್ಸ್ಟೈಲ್ (ಎಲ್ಐಎಫ್ಇ) ಹಾಗು ಗ್ಲೋಬಲ್ ಗ್ರೀನ್ ಕ್ರೆಡಿಟ್ ಇನಿಶಿಯೇಟಿವ್ನಂತಹ ಉಪಕ್ರಮಗಳ ಮೂಲಕ ಜಾಗತಿಕ ಹವಾಮಾನ ಕಾರ್ಯಕ್ರಮಕ್ಕೆ ಭಾರತದ ಕೊಡುಗೆಗಳನ್ನು ಸೌದಿ ಅರೇಬಿಯಾ ಶ್ಲಾಘಿಸಿತು.
ಇತ್ತೀಚಿನ ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರದಲ್ಲಿ ಸ್ಥಿರವಾದ ಬೆಳವಣಿಗೆಯ ಬಗ್ಗೆ ಎರಡೂ ಕಡೆಯವರು ತೃಪ್ತಿ ವ್ಯಕ್ತಪಡಿಸಿದರು, ಭಾರತವು ಸೌದಿ ಅರೇಬಿಯಾದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದೆ; ಮತ್ತು ಸೌದಿ ಅರೇಬಿಯಾ 2023-2024ರಲ್ಲಿ ಭಾರತದ ಐದನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದೆ. ತಮ್ಮ ದ್ವಿಪಕ್ಷೀಯ ವ್ಯಾಪಾರವನ್ನು ವೈವಿಧ್ಯಗೊಳಿಸಲು ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ಈ ನಿಟ್ಟಿನಲ್ಲಿ, ಉದ್ಯಮ ಮತ್ತು ವ್ಯಾಪಾರ ನಿಯೋಗಗಳ ಭೇಟಿಗಳನ್ನು ಹೆಚ್ಚಿಸುವ ಮತ್ತು ವ್ಯಾಪಾರ ಹಾಗು ಹೂಡಿಕೆ ಕಾರ್ಯಕ್ರಮಗಳನ್ನು ನಡೆಸುವ ಮಹತ್ವವನ್ನು ಎರಡೂ ಕಡೆಯವರು ಒಪ್ಪಿಕೊಂಡರು. ಭಾರತ-ಜಿಸಿಸಿ ಎಫ್ ಟಿಎ ಕುರಿತು ಮಾತುಕತೆಗಳನ್ನು ಪ್ರಾರಂಭಿಸುವ ಬಯಕೆಯನ್ನು ಉಭಯ ಕಡೆಯವರು ಪುನರುಚ್ಚರಿಸಿದರು.
ವ್ಯೂಹಾತ್ಮಕ ಪಾಲುದಾರಿಕೆಯ ಪ್ರಮುಖ ಆಧಾರಸ್ತಂಭವಾಗಿ ರಕ್ಷಣಾ ಸಂಬಂಧಗಳು ಗಾಢವಾಗುತ್ತಿರುವುದನ್ನು ಎರಡೂ ಕಡೆಯವರು ಶ್ಲಾಘಿಸಿದರು ಮತ್ತು ಕಾರ್ಯತಂತ್ರದ ಪಾಲುದಾರಿಕೆ ಮಂಡಳಿಯ ಅಡಿಯಲ್ಲಿ ರಕ್ಷಣಾ ಸಹಕಾರಕ್ಕಾಗಿ ಸಚಿವರ ಸಮಿತಿಯನ್ನು ರಚಿಸಿರುವುದನ್ನು ಸ್ವಾಗತಿಸಿದರು. ಈ ಪ್ರದೇಶದ ಭದ್ರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮೊದಲ ಭೂ ಸೇನಾಪಡೆಗಳ ಸಮರಾಭ್ಯಾಸ ಸದಾ ತನ್ಸೀಕ್, ಎರಡು ಸುತ್ತಿನ ಅಲ್ ಮೊಹಮ್ಮದ್ ಅಲ್ ಹಿಂದಿ ನೌಕಾ ಸಮರಾಭ್ಯಾಸ , ಅನೇಕ ಉನ್ನತ ಮಟ್ಟದ ಭೇಟಿಗಳು ಮತ್ತು ತರಬೇತಿ ವಿನಿಮಯಗಳಂತಹ ಹಲವಾರು 'ಪ್ರಥಮಗಳು’ ಸೇರಿದಂತೆ ತಮ್ಮ ಜಂಟಿ ರಕ್ಷಣಾ ಸಹಕಾರದ ಬೆಳವಣಿಗೆಯನ್ನು ಅವರು ತೃಪ್ತಿಯಿಂದ ಉಲ್ಲೇಖಿಸಿದರು. 2024 ರ ಸೆಪ್ಟೆಂಬರ್ ನಲ್ಲಿ ರಿಯಾದ್ ನಲ್ಲಿ ನಡೆದ ರಕ್ಷಣಾ ಸಹಕಾರ ಕುರಿತ ಜಂಟಿ ಸಮಿತಿಯ 6 ನೇ ಸಭೆಯ ಫಲಿತಾಂಶಗಳನ್ನು ಅವರು ಸ್ವಾಗತಿಸಿದರು, ಎಲ್ಲಾ ಮೂರು ಸೇವೆಗಳ ನಡುವೆ ಸಿಬ್ಬಂದಿ ಮಟ್ಟದ ಮಾತುಕತೆಗಳ ಪ್ರಾರಂಭವನ್ನು ಉಲ್ಲೇಖಿಸಿದರು. ರಕ್ಷಣಾ ಉದ್ಯಮದ ಸಹಯೋಗವನ್ನು ಹೆಚ್ಚಿಸಲು ಎರಡೂ ಕಡೆಯವರು ಒಪ್ಪಿಕೊಂಡರು.
ಭದ್ರತಾ ಕ್ಷೇತ್ರಗಳಲ್ಲಿ ಸಾಧಿಸಿದ ನಿರಂತರ ಸಹಕಾರವನ್ನು ಗಮನಿಸಿದ ಎರಡೂ ಕಡೆಯವರು, ಉತ್ತಮ ಭದ್ರತೆ ಮತ್ತು ಸ್ಥಿರತೆಗಾಗಿ ಈ ಸಹಕಾರದ ಮಹತ್ವವನ್ನು ಎತ್ತಿ ತೋರಿಸಿದರು. ಸೈಬರ್ ಭದ್ರತೆ, ಕಡಲ ಗಡಿ ಭದ್ರತೆ, ಬಹುರಾಷ್ಟ್ರೀಯ/ಗಡಿಯಾಚೆಗಿನ ಅಪರಾಧ, ಮಾದಕವಸ್ತು ಮತ್ತು ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಹೋರಾಡುವ ಕ್ಷೇತ್ರಗಳಲ್ಲಿ ಎರಡೂ ಕಡೆಗಳ ನಡುವೆ ಸಹಕಾರವನ್ನು ಹೆಚ್ಚಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ 2025ರ ಏಪ್ರಿಲ್ 22 ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಎರಡೂ ಕಡೆಯವರು ಬಲವಾಗಿ ಖಂಡಿಸಿದರು. ಈ ದಾಳಿಯು ಮುಗ್ಧ ನಾಗರಿಕರನ್ನು ಬಲಿ ತೆಗೆದುಕೊಂಡಿದೆ. ಎರಡೂ ಕಡೆಯವರು ಭಯೋತ್ಪಾದನೆ ಮತ್ತು ಹಿಂಸಾತ್ಮಕ ವಿಧ್ವಂಸಕತೆಯನ್ನು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಖಂಡಿಸಿದರು ಮತ್ತು ಇದು ಮಾನವೀಯತೆಗೆ ಗಂಭೀರ ಬೆದರಿಕೆಗಳಲ್ಲಿ ಒಂದಾಗಿದೆ ಎಂದು ಒತ್ತಿ ಹೇಳಿದರು. ಯಾವುದೇ ಕಾರಣಕ್ಕೂ ಯಾವುದೇ ಭಯೋತ್ಪಾದನಾ ಕೃತ್ಯಕ್ಕೆ ಯಾವುದೇ ಸಮರ್ಥನೆ ಇರಲು ಸಾಧ್ಯವಿಲ್ಲ ಎಂದು ಅವರು ಒಪ್ಪಿಕೊಂಡರು. ಭಯೋತ್ಪಾದನೆಯನ್ನು ಯಾವುದೇ ನಿರ್ದಿಷ್ಟ ಜನಾಂಗ, ಧರ್ಮ ಅಥವಾ ಸಂಸ್ಕೃತಿಯೊಂದಿಗೆ ಜೋಡಿಸುವ ಯಾವುದೇ ಪ್ರಯತ್ನವನ್ನು ಅವರು ತಿರಸ್ಕರಿಸಿದರು. ಭಯೋತ್ಪಾದನೆ ನಿಗ್ರಹ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವುದಕ್ಕೆ ತಡೆಗೆ ಸಂಬಂಧಿಸಿದಂತೆ್ ಎರಡೂ ಕಡೆಗಳ ನಡುವಿನ ಅತ್ಯುತ್ತಮ ಸಹಕಾರವನ್ನು ಅವರು ಸ್ವಾಗತಿಸಿದರು. ಅವರು ಗಡಿಯಾಚೆಗಿನ ಭಯೋತ್ಪಾದನೆಯನ್ನು ಖಂಡಿಸಿದರು ಮತ್ತು ಇತರ ದೇಶಗಳ ವಿರುದ್ಧ ಭಯೋತ್ಪಾದನೆಯ ಬಳಕೆಯನ್ನು ತಿರಸ್ಕರಿಸುವಂತೆ, ಭಯೋತ್ಪಾದನೆ ಮೂಲಸೌಕರ್ಯ ಅಸ್ತಿತ್ವದಲ್ಲಿರುವಲ್ಲಿ ಅದನ್ನು ನಿರ್ಮೂಲನೆ ಮಾಡುವಂತೆ ಮತ್ತು ಭಯೋತ್ಪಾದನೆಯ ದುಷ್ಕರ್ಮಿಗಳನ್ನು ತ್ವರಿತವಾಗಿ ನ್ಯಾಯದ ಮುಂದೆ ತರುವಂತೆ ಎಲ್ಲಾ ದೇಶಗಳಿಗೆ ಕರೆ ನೀಡಿದರು. ಇತರ ದೇಶಗಳ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಕ್ಷಿಪಣಿಗಳು ಮತ್ತು ಡ್ರೋನ್ಗಳು ಸೇರಿದಂತೆ ಶಸ್ತ್ರಾಸ್ತ್ರಗಳ ಪ್ರವೇಶವನ್ನು ತಡೆಯುವ ಅಗತ್ಯವನ್ನು ಎರಡೂ ಕಡೆಯವರು ಒತ್ತಿ ಹೇಳಿದರು.
ಆರೋಗ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಸಹಕಾರ ಮತ್ತು ಪ್ರಸ್ತುತ ಹಾಗು ಭವಿಷ್ಯದ ಆರೋಗ್ಯ ಅಪಾಯಗಳು ಮತ್ತು ಆರೋಗ್ಯ ಸವಾಲುಗಳನ್ನು ಎದುರಿಸುವ ಪ್ರಯತ್ನಗಳನ್ನು ಎರಡೂ ಕಡೆಯವರು ಗಮನಿಸಿದರು. ಈ ನಿಟ್ಟಿನಲ್ಲಿ, ಎರಡೂ ದೇಶಗಳ ನಡುವೆ ಆರೋಗ್ಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿರುವುದನ್ನು ಅವರು ಸ್ವಾಗತಿಸಿದರು. 2024 ರ ನವೆಂಬರ್ ನಲ್ಲಿ ಜೆಡ್ಡಾದಲ್ಲಿ ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ಕುರಿತ ನಾಲ್ಕನೇ ಸಚಿವರ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಸೌದಿ ಅರೇಬಿಯಾವನ್ನು ಭಾರತೀಯ ಕಡೆಯವರು ಅಭಿನಂದಿಸಿದರು. ಸೌದಿ ಅರೇಬಿಯಾದಲ್ಲಿ ಭಾರತೀಯ ಔಷಧಿಗಳ ತ್ವರಿತ ನೋಂದಣಿ ಮತ್ತು ಬೆಲೆ ನಿಗದಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸೌದಿ ಆಹಾರ ಮತ್ತು ಔಷಧ ಪ್ರಾಧಿಕಾರ ಕೈಗೊಂಡ ಉಪಕ್ರಮಗಳನ್ನು ಭಾರತ ಸ್ವಾಗತಿಸಿತು. ಸೌದಿ ಆಹಾರ ಮತ್ತು ಔಷಧ ಪ್ರಾಧಿಕಾರ ಮತ್ತು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್ ಸಿಒ) ನಡುವೆ ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ಕ್ಷೇತ್ರದಲ್ಲಿನ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದವನ್ನು ಇನ್ನೂ ಐದು ವರ್ಷಗಳ ಅವಧಿಗೆ ವಿಸ್ತರಿಸಿರುವುದನ್ನು ಎರಡೂ ಕಡೆಯವರು ಸ್ವಾಗತಿಸಿದರು.
ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಅರೆವಾಹಕಗಳು ಮುಂತಾದ ಹೊಸ ಮತ್ತು ಉದಯೋನ್ಮುಖ ಕ್ಷೇತ್ರಗಳು (ಡೊಮೇನ್ ಗಳು) ಸೇರಿದಂತೆ ತಂತ್ರಜ್ಞಾನದಲ್ಲಿ ಸಹಕಾರದ ಮಹತ್ವವನ್ನು ಎರಡೂ ಕಡೆಯವರು ಒತ್ತಿ ಹೇಳಿದರು. ಡಿಜಿಟಲ್ ಆಡಳಿತದ ಮಹತ್ವವನ್ನು ಒತ್ತಿಹೇಳುತ್ತಾ, ಎರಡೂ ಕಡೆಯವರು ಈ ಕ್ಷೇತ್ರದಲ್ಲಿ ಸಹಯೋಗವನ್ನು ಅನ್ವೇಷಿಸಲು ಒಪ್ಪಿಕೊಂಡರು. ನಿಯಂತ್ರಣ ಮತ್ತು ಡಿಜಿಟಲ್ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಮತ್ತು ಸೌದಿ ಅರೇಬಿಯಾದ ಸಂವಹನ, ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಆಯೋಗದ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿರುವುದಕ್ಕೆ ಅವರು ತೃಪ್ತಿ ವ್ಯಕ್ತಪಡಿಸಿದರು.
ಈ ಭೇಟಿಯ ವೇಳೆ ಅಂಕಿತ ಹಾಕಲಾದ ಬಾಹ್ಯಾಕಾಶ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದವು ಉಡಾವಣಾ ವಾಹನಗಳು, ಬಾಹ್ಯಾಕಾಶ ನೌಕೆ, ಭೂ ವ್ಯವಸ್ಥೆಗಳ ಬಳಕೆ ಸೇರಿದಂತೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೆಚ್ಚಿನ ಸಹಕಾರಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಎರಡೂ ಕಡೆಯವರು ಗಮನಿಸಿದರು. ಬಾಹ್ಯಾಕಾಶ ತಂತ್ರಜ್ಞಾನದ ಬಳಕೆ, ಪ್ರಯೋಜನಗಳು; ಸಂಶೋಧನೆ ಮತ್ತು ಅಭಿವೃದ್ಧಿ; ಶೈಕ್ಷಣಿಕ ತೊಡಗಿಸಿಕೊಳ್ಳುವಿಕೆ ಮತ್ತು ಉದ್ಯಮಶೀಲತೆಗೆ ಇದು ಅವಕಾಶ ಮಾಡಿಕೊಡಲಿದೆ.
ಪರಂಪರೆ, ಚಲನಚಿತ್ರ, ಸಾಹಿತ್ಯ ಮತ್ತು ಪ್ರದರ್ಶಕ ಹಾಗು ದೃಶ್ಯ ಕಲೆಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಕ್ರಿಯ ತೊಡಗಿಸಿಕೊಳ್ಳುವಿಕೆಯ ಮೂಲಕ ಸೌದಿ ಅರೇಬಿಯಾ ಮತ್ತು ಭಾರತ ಗಣರಾಜ್ಯದ ನಡುವೆ ಸಾಂಸ್ಕೃತಿಕ ಸಹಕಾರದ ಬೆಳವಣಿಗೆಯನ್ನು ಎರಡೂ ಕಡೆಯವರು ಗಮನಿಸಿದರು. ವ್ಯೂಹಾತ್ಮಕ ಪಾಲುದಾರಿಕೆ ಮಂಡಳಿಯ ಅಡಿಯಲ್ಲಿ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಸಹಕಾರಕ್ಕಾಗಿ ಸಚಿವರ ಸಮಿತಿಯನ್ನು ರಚಿಸಿರುವುದು ಈ ಪಾಲುದಾರಿಕೆಯನ್ನು ಆಳಗೊಳಿಸುವ ಮಹತ್ವದ ಹೆಜ್ಜೆಯಾಗಿದೆ.
ಸಾಮರ್ಥ್ಯ ವರ್ಧನೆ ಮತ್ತು ಸುಸ್ಥಿರ ಪ್ರವಾಸೋದ್ಯಮ ಸೇರಿದಂತೆ ಪ್ರವಾಸೋದ್ಯಮದಲ್ಲಿ ಸಹಕಾರವನ್ನು ಹೆಚ್ಚಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ಮಾಧ್ಯಮ, ಮನರಂಜನೆ ಮತ್ತು ಕ್ರೀಡೆಗಳಲ್ಲಿ ವಿವಿಧ ಅವಕಾಶಗಳ ವಿಸ್ತರಣೆಯನ್ನು ಅವರು ಗಮನಿಸಿದರು, ಇದು ಉಭಯ ದೇಶಗಳ ಜನತೆ ಮತ್ತು ಜನತೆಯ ನಡುವಿನ ಬಲವಾದ ಸಂಬಂಧದಿಂದ ಬೆಂಬಲಿತವಾಗಿದೆ.
ರಸಗೊಬ್ಬರಗಳ ವ್ಯಾಪಾರ ಸೇರಿದಂತೆ ಕೃಷಿ ಮತ್ತು ಆಹಾರ ಭದ್ರತೆ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ದೀರ್ಘಕಾಲೀನ ಸಹಕಾರವನ್ನು ಎರಡೂ ಕಡೆಯವರು ಶ್ಲಾಘಿಸಿದರು. ಈ ಕ್ಷೇತ್ರದಲ್ಲಿ ದೀರ್ಘಕಾಲೀನ ಕಾರ್ಯತಂತ್ರದ ಸಹಕಾರವನ್ನು ನಿರ್ಮಿಸುವ ನಿಟ್ಟಿನಲ್ಲಿ ಪೂರೈಕೆ, ಪರಸ್ಪರ ಹೂಡಿಕೆಗಳು ಮತ್ತು ಜಂಟಿ ಯೋಜನೆಗಳ ಭದ್ರತೆಗಾಗಿ ದೀರ್ಘಕಾಲೀನ ಒಪ್ಪಂದಗಳನ್ನು ಮುಂದುವರಿಸಲು ಅವರು ಒಪ್ಪಿಕೊಂಡರು.
ಎರಡೂ ದೇಶಗಳ ನಡುವೆ ಶೈಕ್ಷಣಿಕ ಮತ್ತು ವೈಜ್ಞಾನಿಕ ಸಹಯೋಗದಲ್ಲಿ ವೇಗ ಹೆಚ್ಚುತ್ತಿರುವುದನ್ನು ಎರಡೂ ಕಡೆಯವರು ಶ್ಲಾಘಿಸಿದರು, ನಾವೀನ್ಯತೆ, ಸಾಮರ್ಥ್ಯ ವರ್ಧನೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಅದರ ಕಾರ್ಯತಂತ್ರದ ಮಹತ್ವವನ್ನು ಒತ್ತಿಹೇಳಿದರು. ಪ್ರಮುಖ ಭಾರತೀಯ ವಿಶ್ವವಿದ್ಯಾಲಯಗಳು ಸೌದಿ ಅರೇಬಿಯಾದಲ್ಲಿ ಉಪಸ್ಥಿತಿಯನ್ನು ಹೊಂದುವ ಅವಕಾಶಗಳನ್ನು ಸೌದಿ ಕಡೆಯವರು ಸ್ವಾಗತಿಸಿದರು. ಕಾರ್ಮಿಕ ಮತ್ತು ಮಾನವ ಸಂಪನ್ಮೂಲದಲ್ಲಿ ಸಹಕಾರವನ್ನು ವಿಸ್ತರಿಸುವ ಮತ್ತು ಸಹಯೋಗದ ಅವಕಾಶಗಳನ್ನು ಗುರುತಿಸುವ ಮೌಲ್ಯವನ್ನು ಎರಡೂ ಕಡೆಯವರು ಒತ್ತಿ ಹೇಳಿದರು.
ಸೌದಿ ಅರೇಬಿಯಾದ ಯುವರಾಜ ಮತ್ತು ಪ್ರಧಾನ ಮಂತ್ರಿ ಗೌರವಾನ್ವಿತ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ 2023 ರ ಸೆಪ್ಟೆಂಬರ್ ನಲ್ಲಿ ಇತರ ದೇಶಗಳೊಂದಿಗೆ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ತತ್ವಗಳ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದನ್ನು ಎರಡೂ ಕಡೆಯವರು ನೆನಪಿಸಿಕೊಂಡರು ಮತ್ತು ಕಾರಿಡಾರ್ ನಲ್ಲಿ ಕಲ್ಪಿಸಲಾಗಿರುವಂತೆ ಸಂಪರ್ಕದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಒಟ್ಟಾಗಿ ಕೆಲಸ ಮಾಡುವ ಪರಸ್ಪರ ಬದ್ಧತೆಯನ್ನು ವ್ಯಕ್ತಪಡಿಸಿದರು. ಸರಕು ಮತ್ತು ಸೇವೆಗಳ ಸಾಗಣೆಯನ್ನು ಹೆಚ್ಚಿಸಲು ರೈಲ್ವೆ ಮತ್ತು ಬಂದರು ಸಂಪರ್ಕಗಳನ್ನು ಒಳಗೊಂಡಿರುವ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಮಧ್ಯಸ್ಥಗಾರರ ನಡುವೆ ವ್ಯಾಪಾರವನ್ನು ಹೆಚ್ಚಿಸುವುದು ಮತ್ತು ಡೇಟಾ ಸಂಪರ್ಕ ಹಾಗು ವಿದ್ಯುತ್ ಗ್ರಿಡ್ ಅಂತರಸಂಪರ್ಕವನ್ನು ಹೆಚ್ಚಿಸುವುದು ಇದರಲ್ಲಿ ಒಳಗೊಂಡಿದೆ.. ಈ ನಿಟ್ಟಿನಲ್ಲಿ, 2023ರ ಅಕ್ಟೋಬರ್ ನಲ್ಲಿ ಅಂಕಿತ ಹಾಕಲಾದ ವಿದ್ಯುತ್ ಅಂತರಸಂಪರ್ಕಗಳು, ಶುದ್ಧ/ಹಸಿರು ಜಲಜನಕ ಮತ್ತು ಪೂರೈಕೆ ಸರಪಳಿಗಳ ಕುರಿತ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ ಆಗಿರುವ ಪ್ರಗತಿಯನ್ನು ಎರಡೂ ಕಡೆಯವರು ಸ್ವಾಗತಿಸಿದರು. ಉಭಯ ದೇಶಗಳ ನಡುವಿನ ಹಡಗು ಮಾರ್ಗಗಳ ಹೆಚ್ಚಳದ ಬಗ್ಗೆ ಎರಡೂ ಕಡೆಯವರು ತೃಪ್ತಿ ವ್ಯಕ್ತಪಡಿಸಿದರು.
ಜಾಗತಿಕ ಆರ್ಥಿಕತೆ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸುವ ಪ್ರಯತ್ನಗಳನ್ನು ಹೆಚ್ಚಿಸಲು ಜಿ 20, ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್ ಸೇರಿದಂತೆ ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ವೇದಿಕೆಗಳಲ್ಲಿ ಉಭಯ ದೇಶಗಳ ನಡುವೆ ಸಹಕಾರ ಮತ್ತು ಸಮನ್ವಯವನ್ನು ಹೆಚ್ಚಿಸುವ ಮಹತ್ವವನ್ನು ಎರಡೂ ಕಡೆಯವರು ಒತ್ತಿ ಹೇಳಿದರು. ರಿಯಾದ್ ಶೃಂಗಸಭೆ 2020 ರಲ್ಲಿ ಜಿ 20 ನಾಯಕರು ಅನುಮೋದಿಸಿದ ಸಾಲ ಸೇವಾ ಅಮಾನತು ಉಪಕ್ರಮ (ಡಿಎಸ್ಎಸ್ಐ) ಮೀರಿ ಸಾಲ ವ್ಯವಸ್ಥೆಗೆ ಸಾಮಾನ್ಯ ಚೌಕಟ್ಟಿನೊಳಗೆ ತಮ್ಮ ನಡುವೆ ಅಸ್ತಿತ್ವದಲ್ಲಿರುವ ಸಹಕಾರವನ್ನು ಅವರು ಶ್ಲಾಘಿಸಿದರು. ಅರ್ಹ ದೇಶಗಳ ಸಾಲದ ಸಮಸ್ಯೆಯನ್ನು ಪರಿಹರಿಸಲು ಅಧಿಕೃತ ಸಾಲಗಾರರು (ಅಭಿವೃದ್ಧಿಶೀಲ ದೇಶದ ಸಾಲಗಾರರು ಮತ್ತು ಪ್ಯಾರಿಸ್ ಕ್ಲಬ್ ಸಾಲಗಾರರು) ಮತ್ತು ಖಾಸಗಿ ವಲಯದ ನಡುವಿನ ಸಮನ್ವಯಕ್ಕಾಗಿ ಸಾಮಾನ್ಯ ಚೌಕಟ್ಟಿನ ಅನುಷ್ಠಾನವನ್ನು ಮುಖ್ಯ ಮತ್ತು ಸಮಗ್ರ ವೇದಿಕೆಯಾಗಿ ಹೆಚ್ಚಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.
ಯೆಮೆನ್ ಬಿಕ್ಕಟ್ಟಿಗೆ ಸಮಗ್ರ ರಾಜಕೀಯ ಪರಿಹಾರವನ್ನು ಸಾಧಿಸುವ ಗುರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಪ್ರಯತ್ನಗಳಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ಎರಡೂ ಕಡೆಯವರು ಪುನರುಚ್ಚರಿಸಿದರು. ಯೆಮೆನ್ ಪಕ್ಷಗಳ ನಡುವೆ ಸಂವಾದವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಸೌದಿ ಅರೇಬಿಯದ ಅನೇಕ ಉಪಕ್ರಮಗಳನ್ನು ಮತ್ತು ಯೆಮೆನ್ ನ ಎಲ್ಲಾ ಪ್ರದೇಶಗಳಿಗೆ ಮಾನವೀಯ ನೆರವು ಒದಗಿಸುವಲ್ಲಿ ಮತ್ತು ಸುಗಮಗೊಳಿಸುವಲ್ಲಿ ಅದರ ಪಾತ್ರವನ್ನು ಭಾರತೀಯ ಕಡೆಯವರು ಶ್ಲಾಘಿಸಿದರು. ಯೆಮೆನ್ ಗೆ ಮಾನವೀಯ ನೆರವು ನೀಡುವಲ್ಲಿ ಭಾರತದ ಪ್ರಯತ್ನವನ್ನು ಸೌದಿ ಕಡೆಯವರು ಶ್ಲಾಘಿಸಿದರು. ಸಮುದ್ರದ ಕಾನೂನು ಕುರಿತ ವಿಶ್ವಸಂಸ್ಥೆಯ ಸಮಾವೇಶಕ್ಕೆ (ಯುಎನ್ ಸಿಎಲ್ ಒಎಸ್) ಅನುಗುಣವಾಗಿ ಜಲಮಾರ್ಗಗಳ ಭದ್ರತೆ ಮತ್ತು ಸುರಕ್ಷತೆ ಹಾಗು ನೌಕಾಯಾನದ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳುವ ಮಾರ್ಗಗಳನ್ನು ಉತ್ತೇಜಿಸುವ ಸಹಕಾರದ ಮಹತ್ವವನ್ನು ಎರಡೂ ಕಡೆಯವರು ಒಪ್ಪಿಕೊಂಡರು.
ಭೇಟಿಯ ವೇಳೆ ಈ ಕೆಳಗಿನ ತಿಳಿವಳಿಕೆ ಒಪ್ಪಂದಗಳಿಗೆ ಅಂಕಿತ ಹಾಕಲಾಯಿತು:
• ಶಾಂತಿಯುತ ಉದ್ದೇಶಗಳಿಗಾಗಿ ಬಾಹ್ಯಾಕಾಶ ಚಟುವಟಿಕೆಗಳ ಕ್ಷೇತ್ರದಲ್ಲಿ ಭಾರತದ ಬಾಹ್ಯಾಕಾಶ ಇಲಾಖೆ ಮತ್ತು ಸೌದಿ ಬಾಹ್ಯಾಕಾಶ ಸಂಸ್ಥೆ ನಡುವೆ ತಿಳುವಳಿಕಾ ಒಡಂಬಡಿಕೆ.
• ಭಾರತ ಗಣರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯದ ನಡುವೆ ಆರೋಗ್ಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ.
• ಭಾರತದ ಅಂಚೆ ಇಲಾಖೆ ಮತ್ತು ಸೌದಿ ಪೋಸ್ಟ್ ಕಾರ್ಪೊರೇಷನ್ (ಎಸ್ ಪಿಎಲ್) ನಡುವೆ ಆಂತರಿಕ ವಿದೇಶಿ ಮೇಲ್ಮೈ ಪಾರ್ಸೆಲ್ ಗಾಗಿ ದ್ವಿಪಕ್ಷೀಯ ಒಪ್ಪಂದ.
• ಭಾರತದ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (ನಾಡಾ) ಮತ್ತು ಸೌದಿ ಅರೇಬಿಯಾದ ಉದ್ದೀಪನ ಮದ್ದು ತಡೆ ಸಮಿತಿ (ಎಸ್ ಎಎಡಿಸಿ) ನಡುವೆ ಡೋಪಿಂಗ್ ವಿರೋಧಿ ಮತ್ತು ತಡೆಗಟ್ಟುವಿಕೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ. ವ್ಯೂಹಾತ್ಮಕ ಪಾಲುದಾರಿಕೆ ಮಂಡಳಿಯ ಮುಂದಿನ ಸಭೆಯನ್ನು ಪರಸ್ಪರ ಒಪ್ಪಿತ ದಿನಾಂಕದಂದು ನಡೆಸಲು ಎರಡೂ ಕಡೆಯವರು ಒಪ್ಪಿಕೊಂಡರು. ಉಭಯ ರಾಷ್ಟ್ರಗಳು ತಮ್ಮ ತಮ್ಮ ದೇಶಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗಳೊಂದಿಗೆ ಮುಂದುವರಿಯುತ್ತಿರುವಂತೆಯೇ, ವಿವಿಧ ಕ್ಷೇತ್ರಗಳಲ್ಲಿ ಸಂವಹನ, ಸಮನ್ವಯ ಮತ್ತು ಸಹಕಾರವನ್ನು ಮುಂದುವರಿಸಲು ನಿರ್ಧರಿಸಿದರು.
ಭೇಟಿಯ ಕೊನೆಯಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತಮಗೆ ಮತ್ತು ಜೊತೆಗಿರುವ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತ ಮತ್ತು ಉದಾರ ಆತಿಥ್ಯಕ್ಕಾಗಿ ರಾಜಕುಮಾರ ಮತ್ತು ಪ್ರಧಾನಮಂತ್ರಿ ಘನತೆವೆತ್ತ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರಿಗೆ ತಮ್ಮ ಹೃತ್ಪೂರ್ವಕ ಕೃತಜ್ಞತೆ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು. ಸೌದಿ ಅರೇಬಿಯಾದ ಸ್ನೇಹಪರ ಜನರ ನಿರಂತರ ಪ್ರಗತಿ ಮತ್ತು ಸಮೃದ್ಧಿಗಾಗಿ ಅವರು ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಭಾರತದ ಸ್ನೇಹಪರ ಜನರಿಗೆ ಮತ್ತಷ್ಟು ಪ್ರಗತಿ ಮತ್ತು ಸಮೃದ್ಧಿಗಾಗಿ ಘನತೆವೆತ್ತ ರಾಜಕುಮಾರರು ತಮ್ಮ ಪ್ರಾಮಾಣಿಕ ಶುಭಾಶಯಗಳನ್ನು ತಿಳಿಸಿದರು.
*****
(Release ID: 2124293)
Visitor Counter : 9
Read this release in:
English
,
Urdu
,
Hindi
,
Nepali
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Malayalam