ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು


ನವ ಭಾರತವು 'ಪರಂಪರೆಯ ಜೊತೆಗೆ ಅಭಿವೃದ್ಧಿ' ಎಂಬ ಮಂತ್ರದೊಂದಿಗೆ ಮುಂದುವರಿಯುತ್ತಿದೆ: ಪ್ರಧಾನಮಂತ್ರಿ

ನಮ್ಮ ದೇಶವು ಋಷಿಗಳು, ಜ್ಞಾನಿಗಳು ಮತ್ತು ಸಂತರುಗಳ ನಾಡು. ನಮ್ಮ ಸಮಾಜವು ಕಷ್ಟದ ಹಂತವನ್ನು ಎದುರಿಸಿದಾಗಲೆಲ್ಲಾ, ಯಾವುದಾದರೂ ಋಷಿ ಅಥವಾ ಜ್ಞಾನಿಯು ಈ ಭೂಮಿಗೆ ಅವತರಿಸಿ ಸಮಾಜಕ್ಕೆ ಹೊಸ ದಿಕ್ಕನ್ನು ನೀಡುತ್ತಾರೆ: ಪ್ರಧಾನಮಂತ್ರಿ

ಬಡವರು ಮತ್ತು ವಂಚಿತರನ್ನು ಮೇಲಕ್ಕೆತ್ತುವ ಸಂಕಲ್ಪ, 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂಬ ಮಂತ್ರ, ಈ ಸೇವಾ ಮನೋಭಾವವು ಸರ್ಕಾರದ ನೀತಿ ಮತ್ತು ಬದ್ಧತೆಯಾಗಿದೆ: ಪ್ರಧಾನಮಂತ್ರಿ

ಭಾರತದಂತಹ ರಾಷ್ಟ್ರದಲ್ಲಿ, ನಮ್ಮ ಸಂಸ್ಕೃತಿಯು ಕೇವಲ ನಮ್ಮ ಅಸ್ಮಿತೆಯೊಂದಿಗೆ ತಳುಕು ಹಾಕಿಕೊಂಡಿಲ್ಲ, ಬದಲಾಗಿ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುವುದು ನಮ್ಮ ಸಂಸ್ಕೃತಿಯೇ ಆಗಿದೆ: ಪ್ರಧಾನಮಂತ್ರಿ

Posted On: 11 APR 2025 6:04PM by PIB Bengaluru

ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಮುಂದುವರಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಗಳು ಇಂದು ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯ ಇಸಾಗರ್ಹ್ ತಹಸಿಲ್ ನ ಆನಂದಪುರ ಧಾಮಕ್ಕೆ ಭೇಟಿ ನೀಡಿದರು. ಅವರು ಗುರು ಜಿ ಮಹಾರಾಜರ ದೇವಾಲಯದಲ್ಲಿ ದರ್ಶನ ಪಡೆದು ಪೂಜೆ ಸಲ್ಲಿಸಿದರು ಮತ್ತು ಆನಂದಪುರ ಧಾಮದ ದೇವಾಲಯದ ಆವರಣವನ್ನು ವೀಕ್ಷಿಸಿದರು. ಅಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಅವರು, ದೆಹಲಿ, ಹರಿಯಾಣ, ಪಂಜಾಬ್ ಮತ್ತು ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತ ಸಮೂಹವನ್ನು ಆದರದಿಂದ ಸ್ವಾಗತಿಸಿದರು. ಶ್ರೀ ಆನಂದಪುರ ಧಾಮಕ್ಕೆ ಭೇಟಿ ನೀಡಿದ ತಮ್ಮ ಸಂತಸವನ್ನು ವ್ಯಕ್ತಪಡಿಸಿದ ಅವರು, ಗುರುಜಿ ಮಹಾರಾಜರ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಅನುಭವವು ತಮ್ಮ ಮನಸ್ಸಿಗೆ ಆನಂದವನ್ನು ನೀಡಿತು ಎಂದು ಹೇಳಿದರು.

ಸಂತರುಗಳ ತಪಸ್ಸಿನಿಂದ ಪವಿತ್ರಗೊಂಡ, ನಿಸ್ವಾರ್ಥ ಸೇವೆಯು ಸಂಪ್ರದಾಯವಾಗಿ ಬೆಳೆದು ಬಂದಿರುವ ಮತ್ತು ಮಾನವ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುವ ದೃಢ ಸಂಕಲ್ಪವು ನೆಲೆಸಿರುವ ಈ ಭೂಮಿಯ ಮಹತ್ವವನ್ನು ಶ್ರೀ ಮೋದಿ ಅವರು ವಿವರಿಸಿದರು. ಅಶೋಕ ನಗರಕ್ಕೆ ದುಃಖ ಕಾಲಿಡಲು ಹೆದರುತ್ತದೆ ಎಂದು ಹೇಳಿದ್ದ ಸಂತರುಗಳ ಮಾತನ್ನು ಅವರು ಉಲ್ಲೇಖಿಸಿದರು. ಬೈಸಾಖಿ ಹಬ್ಬ ಮತ್ತು ಶ್ರೀ ಗುರು ಮಹಾರಾಜ್ ಜೀ ಅವರ ಜನ್ಮದಿನಾಚರಣೆಯ ಸಂಭ್ರಮದಲ್ಲಿ ಭಾಗವಹಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ಅವರು, ಪ್ರಥಮ ಪಾದಶಾಹಿ ಶ್ರೀ ಶ್ರೀ 108 ಶ್ರೀ ಸ್ವಾಮಿ ಅದ್ವೈತ ಆನಂದ ಜೀ ಮಹಾರಾಜ್ ಹಾಗೂ ಇತರ ಪಾದಶಾಹಿ ಸಂತರಿಗೆ ಶ್ರದ್ಧಾಂಜಲಿ ಅರ್ಪಿಸಿದರು. 1936 ರಲ್ಲಿ ಶ್ರೀ ದ್ವಿತೀಯ ಪಾದಶಾಹಿ ಜೀ ಅವರ ಮಹಾಸಮಾಧಿ ಮತ್ತು 1964 ರಲ್ಲಿ ಶ್ರೀ ತೃತೀಯ ಪಾದಶಾಹಿ ಜೀ ಅವರು ತಮ್ಮ ಮೂಲ ಸ್ವರೂಪದೊಂದಿಗೆ ಒಂದಾದ ಈ ದಿನದ ಐತಿಹಾಸಿಕ ಮಹತ್ವವನ್ನು ಅವರು ನೆನಪಿಸಿದರು. ಪ್ರಧಾನ ಮಂತ್ರಿಗಳು ಈ ಪೂಜ್ಯ ಗುರುಗಳಿಗೆ ತಮ್ಮ ಗೌರವಗಳನ್ನು ಸಲ್ಲಿಸಿದರು ಮತ್ತು ಮಾ ಜಾಗೇಶ್ವರಿ ದೇವಿ, ಮಾ ಬಿಜಾಸನ್ ಹಾಗೂ ಮಾ ಜಾನಕಿ ಕರಿಲಾ ಮಾತಾ ಧಾಮಕ್ಕೆ ವಂದನೆಗಳನ್ನು ಅರ್ಪಿಸಿದರು. ಬೈಸಾಖಿ ಮತ್ತು ಶ್ರೀ ಗುರು ಮಹಾರಾಜ್ ಜೀ ಅವರ ಜನ್ಮದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ತಮ್ಮ ಶುಭಾಶಯಗಳನ್ನು ತಿಳಿಸಿದರು.

"ಭಾರತವು ಋಷಿಗಳು, ವಿದ್ವಾಂಸರು ಮತ್ತು ಸಂತರುಗಳ ನಾಡು. ಇವರು ಸವಾಲಿನ ಸಂದರ್ಭಗಳಲ್ಲಿ ಸಮಾಜಕ್ಕೆ ಯಾವಾಗಲೂ ಮಾರ್ಗದರ್ಶನ ನೀಡಿದ್ದಾರೆ" ಎಂದು ಪ್ರಧಾನ ಮಂತ್ರಿಗಳು ಹೇಳಿದರು. ಪೂಜ್ಯ ಸ್ವಾಮಿ ಅದ್ವೈತ ಆನಂದ ಜೀ ಮಹಾರಾಜ್ ಅವರ ಜೀವನವು ಈ ಪರಂಪರೆಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಆದಿ ಶಂಕರಾಚಾರ್ಯರಂತಹ ಆಚಾರ್ಯರು ಅದ್ವೈತ ತತ್ವದ ಆಳವಾದ ಜ್ಞಾನವನ್ನು ಸಾರಿದ ಕಾಲವನ್ನು ಅವರು ಸ್ಮರಿಸಿದರು. ವಸಾಹತುಶಾಹಿ ಆಳ್ವಿಕೆಯ ಸಮಯದಲ್ಲಿ ಸಮಾಜವು ಈ ಜ್ಞಾನದ ನಂಟನ್ನು ಕಳೆದುಕೊಳ್ಳಲಾರಂಭಿಸಿತು ಎಂದು ಅವರು ಗಮನಿಸಿದರು. ಆದಾಗ್ಯೂ, ಇದೇ ಸಂದರ್ಭದಲ್ಲಿ ಅದ್ವೈತ ತತ್ವಗಳ ಮೂಲಕ ರಾಷ್ಟ್ರದ ಅಂತರಾಳವನ್ನು ಜಾಗೃತಗೊಳಿಸಲು ಸಂತರು ಉದಯಿಸಿದರು ಎಂದು ಅವರು ಸೇರಿಸಿದರು. ಪೂಜ್ಯ ಅದ್ವೈತ ಆನಂದ ಜೀ ಮಹಾರಾಜ್ ಅವರು ಅದ್ವೈತ ಜ್ಞಾನವನ್ನು ಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವಂತೆ ಮಾಡಿ, ಅದನ್ನು ಎಲ್ಲೆಡೆ ತಲುಪಿಸುವ ಮೂಲಕ ಈ ಪರಂಪರೆಯನ್ನು ಮುಂದುವರಿಸಿದರು ಎಂದು ಅವರು ಹೇಳಿದರು.

ಭೌತಿಕ ಪ್ರಗತಿಯ ನಡುವೆಯೂ ಹೆಚ್ಚುತ್ತಿರುವ ಯುದ್ಧ, ಸಂಘರ್ಷ ಮತ್ತು ಮಾನವೀಯ ಮೌಲ್ಯಗಳ ಅವನತಿಯಂತಹ ಜಾಗತಿಕ ಕಳವಳಗಳ ಕುರಿತು ಮಾತನಾಡಿದ ಶ್ರೀ ಮೋದಿ ಅವರು, ಈ ಸವಾಲುಗಳಿಗೆಲ್ಲಾ ಮುಖ್ಯ ಕಾರಣವೆಂದರೆ "ನಾನು" ಮತ್ತು "ಇತರರು" ಎಂಬ ಬೇಧಭಾವದ ಮನೋಭಾವ. ಇದು ಮನುಷ್ಯರನ್ನು ಪರಸ್ಪರ ದೂರ ಮಾಡುತ್ತದೆ ಎಂದು ಅವರು ವಿವರಿಸಿದರು. "ಈ ಸಮಸ್ಯೆಗಳಿಗೆಲ್ಲಾ ಪರಿಹಾರವಿರುವುದು ಅದ್ವೈತ ತತ್ವದಲ್ಲಿ. ಅದ್ವೈತವು ಯಾವುದೇ ಭೇದಭಾವವನ್ನು ಕಾಣುವುದಿಲ್ಲ" ಎಂದು ಅವರು ಒತ್ತಿ ಹೇಳಿದರು. ಅದ್ವೈತವೆಂದರೆ ಪ್ರತಿಯೊಂದು ಜೀವಿಯಲ್ಲಿಯೂ ದೈವವನ್ನು ಕಾಣುವುದು ಮತ್ತು ಇಡೀ ಸೃಷ್ಟಿಯನ್ನು ಆ ದೈವದ ಅಭಿವ್ಯಕ್ತಿಯಾಗಿ ಗ್ರಹಿಸುವುದು ಎಂಬ ನಂಬಿಕೆ ಎಂದು ಅವರು ತಿಳಿಸಿದರು. ಪರಮಹಂಸ ದಯಾಳ್ ಮಹಾರಾಜ್ ಅವರು ಈ ತತ್ವವನ್ನು ಅತ್ಯಂತ ಸರಳವಾಗಿ, 'ನೀನು ಏನಾಗಿದ್ದೀಯೋ, ನಾನು ಅದೇ' ಎಂದು ಹೇಳಿದ್ದಾರೆ ಎಂದು ಅವರು ಉಲ್ಲೇಖಿಸಿದರು. "ನಾನು ಮತ್ತು ನನ್ನದು" ಎಂಬ ಭೇದವನ್ನು ಇಲ್ಲವಾಗಿಸುವ ಈ ಆಲೋಚನೆಯ ಆಳವನ್ನು ಅವರು ಕೊಂಡಾಡಿದರು. ಇದನ್ನು ಜಾಗತಿಕವಾಗಿ ಅಳವಡಿಸಿಕೊಂಡರೆ ಎಲ್ಲಾ ಸಂಘರ್ಷಗಳಿಗೂ ಮುಕ್ತಿ ದೊರೆಯಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಪ್ರಧಾನ ಮಂತ್ರಿಗಳು ಛೇಟೆ ಪಾದಶಾಹಿ ಸ್ವಾಮಿ ಶ್ರೀ ವಿಚಾರ ಪೂರ್ಣ ಆನಂದ ಜೀ ಮಹಾರಾಜರೊಂದಿಗೆ ತಾವು ನಡೆಸಿದ ಹಿಂದಿನ ಸಂವಾದದ ಬಗ್ಗೆ ತಿಳಿಸಿದರು. ಆ ಸಂವಾದದಲ್ಲಿ, ಅವರು ಪ್ರಥಮ ಪಾದಶಾಹಿ ಪರಮಹಂಸ ದಯಾಳ್ ಮಹಾರಾಜ್ ಜೀ ಅವರ ಬೋಧನೆಗಳು ಮತ್ತು ಆನಂದಪುರ ಧಾಮದ ಸೇವಾ ಚಟುವಟಿಕೆಗಳ ಕುರಿತು ಮಾತನಾಡಿದ್ದರು. ಆನಂದಪುರ ಧಾಮದಲ್ಲಿ ಸ್ಥಾಪಿಸಲಾಗಿರುವ ಧ್ಯಾನದ ಐದು ತತ್ವಗಳನ್ನು ಅವರು ವಿವರಿಸಿದರು ಮತ್ತು ನಿಸ್ವಾರ್ಥ ಸೇವೆಯು ಅವುಗಳಲ್ಲಿ ಪ್ರಮುಖವಾದದ್ದು ಎಂದು ಒತ್ತಿ ಹೇಳಿದರು. ಯಾವುದೇ ಸ್ವಾರ್ಥವಿಲ್ಲದೆ ಹಿಂದುಳಿದವರಿಗೆ ಸೇವೆ ಸಲ್ಲಿಸುವ ಉದಾತ್ತ ಮನೋಭಾವವನ್ನು ಅವರು ಪ್ರಶಂಸಿಸಿದರು. ಮಾನವ ಸೇವೆಯಲ್ಲಿ ನಾರಾಯಣನ ದರ್ಶನವನ್ನು ಕಾಣುವುದು ಭಾರತೀಯ ಸಂಸ್ಕೃತಿಯ ಮೂಲಭೂತ ತತ್ವವಾಗಿದೆ ಎಂದು ಅವರು ನುಡಿದರು. ಆನಂದಪುರ ಟ್ರಸ್ಟ್ ಈ ಸೇವಾ ಸಂಸ್ಕೃತಿಯನ್ನು ನಿಷ್ಠೆಯಿಂದ ಮುಂದುವರೆಸುತ್ತಿರುವುದಕ್ಕೆ ಅವರು ಹರ್ಷ ವ್ಯಕ್ತಪಡಿಸಿದರು. ಆ ಟ್ರಸ್ಟ್ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳನ್ನು ನಡೆಸುತ್ತಿದೆ, ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತಿದೆ, ಗೋವುಗಳ ಕಲ್ಯಾಣಕ್ಕಾಗಿ ಆಧುನಿಕ ಗೋಶಾಲೆಯನ್ನು ನಿರ್ವಹಿಸುತ್ತಿದೆ ಮತ್ತು ಹೊಸ ಪೀಳಿಗೆಯ ಭವಿಷ್ಯಕ್ಕಾಗಿ ಶಾಲೆಗಳನ್ನು ನಡೆಸುತ್ತಿದೆ ಎಂದು ಅವರು ಉಲ್ಲೇಖಿಸಿದರು. ಪರಿಸರ ಸಂರಕ್ಷಣೆಯ ಮೂಲಕ ಆನಂದಪುರ ಧಾಮವು ಮಾನವ ಕುಲಕ್ಕೆ ನೀಡುತ್ತಿರುವ ಗಣನೀಯ ಕೊಡುಗೆಯನ್ನು ಅವರು ಶ್ಲಾಘಿಸಿದರು. ಆಶ್ರಮದ ಅನುಯಾಯಿಗಳು ಸಾವಿರಾರು ಎಕರೆ ಬರಡು ಭೂಮಿಯನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡುವಲ್ಲಿನ ಪ್ರಯತ್ನಗಳನ್ನು ಅವರು ಮುಕ್ತಕಂಠದಿಂದ ಹೊಗಳಿದರು. ಆಶ್ರಮದಿಂದ ನೆಡಲಾದ ಸಾವಿರಾರು ವೃಕ್ಷಗಳು ಈಗ ನಿಸ್ವಾರ್ಥ ಸೇವೆಗೆ ಸಮರ್ಪಿತವಾಗಿವೆ ಎಂದು ಅವರು ಹೇಳಿದರು.

"ಸರ್ಕಾರದ ಪ್ರತಿಯೊಂದು ಉಪಕ್ರಮದ ತಿರುಳಿನಲ್ಲಿಯೂ ಸೇವಾ ಮನೋಭಾವವಿದೆ" ಎಂದು ಶ್ರೀ ಮೋದಿ ಅವರು ನುಡಿದರು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಮೂಲಕ, ಪ್ರತಿಯೊಬ್ಬ ನಿರ್ಗತಿಕನೂ ಆಹಾರದ ಆತಂಕದಿಂದ ಬಿಡುಗಡೆ ಹೊಂದಿದ್ದಾನೆ ಎಂದು ಅವರು ಒತ್ತಿ ಹೇಳಿದರು. ಅಂತೆಯೇ, ಆಯುಷ್ಮಾನ್ ಭಾರತ್ ಯೋಜನೆಯು ಬಡವರು ಮತ್ತು ಹಿರಿಯ ನಾಗರಿಕರ ಆರೋಗ್ಯದ ಚಿಂತೆಯನ್ನು ದೂರ ಮಾಡಿದೆ, ಹಾಗೂ ಪಿಎಂ ಆವಾಸ್ ಯೋಜನೆಯು ಹಿಂದುಳಿದವರಿಗೆ ಭದ್ರವಾದ ವಸತಿಯನ್ನು ಒದಗಿಸುತ್ತಿದೆ. ಜಲ್ ಜೀವನ್ ಮಿಷನ್ ಹಳ್ಳಿಗಳ ನೀರಿನ ಸಮಸ್ಯೆಗೆ ಪರಿಹಾರ ನೀಡುತ್ತಿದೆ. ಅಲ್ಲದೆ, ದಾಖಲೆಯ ಪ್ರಮಾಣದಲ್ಲಿ ಹೊಸ ಏಮ್ಸ್, ಐಐಟಿ ಮತ್ತು ಐಐಎಂಗಳನ್ನು ಸ್ಥಾಪಿಸಲಾಗುತ್ತಿದ್ದು, ಇದು ಅತ್ಯಂತ ಬಡ ಮಕ್ಕಳಿಗೂ ತಮ್ಮ ಕನಸುಗಳನ್ನು ನನಸಾಗಿಸಲು ನೆರವಾಗುತ್ತಿದೆ ಎಂದು ಅವರು ತಿಳಿಸಿದರು. 'ಏಕ್ ಪೇಡ್ ಮಾ ಕೆ ನಾಮ್' ಅಭಿಯಾನದ ಮೂಲಕ ಪರಿಸರ ಸಂರಕ್ಷಣೆಗೆ ಸರ್ಕಾರವು ಬದ್ಧವಾಗಿದೆ ಎಂಬುದನ್ನು ಅವರು ಪುನರುಚ್ಚರಿಸಿದರು. ಈ ಅಭಿಯಾನದಡಿ ದೇಶಾದ್ಯಂತ ಕೋಟಿಗಟ್ಟಲೆ ಮರಗಳನ್ನು ನೆಡಲಾಗಿದೆ. ಈ ಸಾಧನೆಗಳ ಅಗಾಧ ಪ್ರಮಾಣಕ್ಕೆ ಸೇವಾ ಮನೋಭಾವವೇ ಕಾರಣ ಎಂದು ಪ್ರಧಾನ ಮಂತ್ರಿಗಳು ಅಭಿಪ್ರಾಯಪಟ್ಟರು. 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂಬ ಮಂತ್ರದೊಂದಿಗೆ ಬಡವರು ಮತ್ತು ಅಂಚಿನಲ್ಲಿರುವವರನ್ನು ಉದ್ಧರಿಸುವ ಸರ್ಕಾರದ ಸಂಕಲ್ಪವನ್ನು ಅವರು ಮತ್ತೊಮ್ಮೆ ದೃಢಪಡಿಸಿದರು. "ಈ ಸೇವಾ ಮನೋಭಾವವು ಸರ್ಕಾರದ ನೀತಿಯೂ ಹೌದು ಮತ್ತು ಬದ್ಧತೆಯೂ ಹೌದು" ಎಂದು ಅವರು ಸ್ಪಷ್ಟಪಡಿಸಿದರು.

ಸೇವೆಯ ಸಂಕಲ್ಪವನ್ನು ಅಳವಡಿಸಿಕೊಳ್ಳುವುದರಿಂದ ಇತರರಿಗೆ ಮಾತ್ರವಲ್ಲದೆ ವ್ಯಕ್ತಿಯ ವ್ಯಕ್ತಿತ್ವವೂ ವೃದ್ಧಿಸುತ್ತದೆ ಮತ್ತು ದೃಷ್ಟಿಕೋನವೂ ವಿಸ್ತಾರವಾಗುತ್ತದೆ ಎಂಬುದನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿಗಳು,  ಸೇವಾ ಮನೋಭಾವವು ವ್ಯಕ್ತಿಗಳನ್ನು ಸಮಾಜದ, ರಾಷ್ಟ್ರದ ಮತ್ತು ಮಾನವ ಕುಲದ ಉದಾತ್ತ ಗುರಿಗಳಿಗೆ ಬೆಸೆಯುತ್ತದೆ ಎಂದು ಹೇಳಿದರು. ಸೇವೆಯಲ್ಲಿ ತೊಡಗಿರುವವರ ಸಮರ್ಪಣಾ ಮನೋಭಾವವನ್ನು ಅವರು ಶ್ಲಾಘಿಸಿದರು. ನಿಸ್ವಾರ್ಥ ಸೇವೆಯ ಕಾರ್ಯಗಳ ಮೂಲಕ ಸಂಕಷ್ಟಗಳನ್ನು ಎದುರಿಸುವುದು ಹೇಗೆ ಸಹಜ ಗುಣವಾಗುತ್ತದೆ ಎಂಬುದನ್ನು ಅವರು ವಿವರಿಸಿದರು. ಸೇವೆಯು ಒಂದು ಆಧ್ಯಾತ್ಮಿಕ ತಪಸ್ಸು ಎಂದು ವರ್ಣಿಸಿದ ಅವರು, ಪ್ರತಿಯೊಬ್ಬರೂ ಪುಣ್ಯಸ್ನಾನ ಮಾಡಬೇಕಾದ ಪವಿತ್ರ ಗಂಗೆಗೆ ಅದನ್ನು ಹೋಲಿಸಿದರು. ರಾಷ್ಟ್ರಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ ಅಶೋಕನಗರ ಮತ್ತು ಆನಂದಪುರ ಧಾಮದಂತಹ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಗುರುತರ ಜವಾಬ್ದಾರಿಯ ಕುರಿತು ಅವರು ಮಾತನಾಡಿದರು. ಈ ಭಾಗಗಳ ಕಲೆ, ಸಂಸ್ಕೃತಿ ಮತ್ತು ನೈಸರ್ಗಿಕ ಸೊಬಗಿನ ಶ್ರೀಮಂತ ಪರಂಪರೆಯನ್ನು ಅವರು ಸ್ಮರಿಸಿದರು ಮತ್ತು ಅವುಗಳ ಅಭಿವೃದ್ಧಿ ಹಾಗೂ ಪರಂಪರೆಯ ಅಗಾಧ ಸಾಮರ್ಥ್ಯವನ್ನು ಗುರುತಿಸಿದರು. ಮಧ್ಯಪ್ರದೇಶ ಮತ್ತು ಅಶೋಕನಗರದ ಪ್ರಗತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೈಗೊಂಡಿರುವ ಪ್ರಯತ್ನಗಳನ್ನು ಪ್ರಧಾನ ಮಂತ್ರಿಗಳು ಮತ್ತಷ್ಟು ವಿವರಿಸಿದರು. ಚಂದೇರಿ ಸೀರೆಗಳಿಗೆ ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ನೀಡುವ ಮೂಲಕ ಚಂದೇರಿ ಕೈಮಗ್ಗಕ್ಕೆ ಮನ್ನಣೆ ನೀಡುವುದು ಮತ್ತು ಈ ಪ್ರದೇಶದ ಆರ್ಥಿಕ ಅಭಿವೃದ್ಧಿಯನ್ನು ತ್ವರಿತಗೊಳಿಸಲು ಪ್ರಾನ್ ಪುರದಲ್ಲಿ ಕರಕುಶಲ ಮತ್ತು ಕೈಮಗ್ಗ ಪ್ರವಾಸೋದ್ಯಮ ಗ್ರಾಮವನ್ನು ಸ್ಥಾಪಿಸುವುದು ಈ ಕಾರ್ಯಕ್ರಮಗಳಲ್ಲಿ ಸೇರಿವೆ. ಮಧ್ಯಪ್ರದೇಶ ಸರ್ಕಾರವು ಈಗಾಗಲೇ ಉಜ್ಜಯಿನಿ ಸಿಂಹಸ್ಥ ಮೇಳದ ಸಿದ್ಧತೆಗಳನ್ನು ಆರಂಭಿಸಿದೆ ಎಂದು ಅವರು ತಿಳಿಸಿದರು.

ಇತ್ತೀಚೆಗೆ ವಿಜೃಂಭಣೆಯಿಂದ ಆಚರಿಸಲಾದ ರಾಮ ನವಮಿಯ ಮಹೋತ್ಸವವನ್ನು ನೆನಪಿಸಿಕೊಂಡ ಶ್ರೀ ಮೋದಿ ಅವರು, "ರಾಮ್ ವನ್ ಗಮನ್ ಪಥ್" ನ ಅಭಿವೃದ್ಧಿ ಕಾರ್ಯವು ಸಾಗುತ್ತಿದೆ ಎಂದು ತಿಳಿಸಿದರು. ಈ ಪಥದ ಬಹುಮುಖ್ಯ ಭಾಗವು ಮಧ್ಯಪ್ರದೇಶದ ಮೂಲಕ ಹಾದುಹೋಗಲಿದೆ ಎಂದರು. ಮಧ್ಯಪ್ರದೇಶದ ಅದ್ಭುತ ಮತ್ತು ಅನನ್ಯ ಗುರುತಿನ ಕುರಿತು ಮಾತನಾಡಿದ ಅವರು, ಈ ಯೋಜನೆಗಳು ಅದರ ವಿಶಿಷ್ಟತೆಯನ್ನು ಇನ್ನಷ್ಟು ಹೆಚ್ಚಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿಗಳು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಪುನರುಚ್ಚರಿಸಿದರು ಮತ್ತು ಅದನ್ನು ಸಾಧಿಸುವ ಬಗ್ಗೆ ತಮ್ಮ ದೃಢ ವಿಶ್ವಾಸವನ್ನು ವ್ಯಕ್ತಪಡಿಸಿದರು. ಈ ಪಯಣದ ಸಂದರ್ಭದಲ್ಲಿ ಭಾರತದ ಪ್ರಾಚೀನ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಅವರು ಪ್ರತಿಪಾದಿಸಿದರು. ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವಾಗ ಅನೇಕ ರಾಷ್ಟ್ರಗಳು ತಮ್ಮ ಸಂಪ್ರದಾಯಗಳ ನಂಟನ್ನು ಕಳೆದುಕೊಂಡಿವೆ, ಆದರೆ ಭಾರತವು ತನ್ನ ಪರಂಪರೆಯನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಬೇಕು ಎಂದು ಅವರು ನುಡಿದರು. "ಭಾರತದ ಸಂಸ್ಕೃತಿಯು ಕೇವಲ ನಮ್ಮ ಅಸ್ಮಿತೆಗೆ ಮಾತ್ರ ಸೀಮಿತವಾಗಿಲ್ಲ, ಅದು ನಮ್ಮ ಸಾಮರ್ಥ್ಯಗಳನ್ನೂ ಬಲಪಡಿಸುತ್ತದೆ" ಎಂದು ಪ್ರಧಾನ ಮಂತ್ರಿಗಳು ನುಡಿದರು. ಈ ವಿಷಯದಲ್ಲಿ ಆನಂದಪುರ ಧಾಮ ಟ್ರಸ್ಟ್ ನೀಡುತ್ತಿರುವ ಮಹತ್ವದ ಕೊಡುಗೆಗಳನ್ನು ಅವರು ಕೊಂಡಾಡಿದರು ಮತ್ತು ಟ್ರಸ್ಟ್ನ ಸೇವಾ ಉಪಕ್ರಮಗಳು ವಿಕಸಿತ್ ಭಾರತ್ ನ ಕನಸಿಗೆ ಹೊಸ ಹುರುಪನ್ನು ನೀಡಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬೈಸಾಖಿ ಮತ್ತು ಶ್ರೀ ಗುರು ಮಹಾರಾಜ್ ಜೀ ಅವರ ಜನ್ಮದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ತಮ್ಮ ಶುಭಾಶಯಗಳನ್ನು ತಿಳಿಸುತ್ತಾ ಅವರು ತಮ್ಮ ಮಾತುಗಳನ್ನು ಮುಗಿಸಿದರು.

ಮಧ್ಯಪ್ರದೇಶದ ರಾಜ್ಯಪಾಲರಾದ ಶ್ರೀ ಮಂಗುಭಾಯಿ ಪಟೇಲ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಮೋಹನ್ ಯಾದವ್, ಕೇಂದ್ರ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಇತರ ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ 

ಆನಂದಪುರ ಧಾಮವನ್ನು ಆಧ್ಯಾತ್ಮಿಕ ಹಾಗೂ ಲೋಕೋಪಕಾರಿ ಧ್ಯೇಯಗಳಿಗಾಗಿ ಸ್ಥಾಪಿಸಲಾಗಿದೆ. ಸುಮಾರು 315 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಇದು, 500 ಕ್ಕೂ ಹೆಚ್ಚು ಗೋವುಗಳನ್ನು ಹೊಂದಿರುವ ಆಧುನಿಕ ಗೋಶಾಲೆ ಮತ್ತು ಶ್ರೀ ಆನಂದಪುರ ಟ್ರಸ್ಟ್ ಆವರಣದಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸುತ್ತದೆ. ಟ್ರಸ್ಟ್ ಸುಖಪುರ ಗ್ರಾಮದಲ್ಲಿ ಒಂದು ದತ್ತಿ ಆಸ್ಪತ್ರೆ, ಸುಖಪುರ ಮತ್ತು ಆನಂದಪುರದಲ್ಲಿ ಶಾಲೆಗಳು ಮತ್ತು ದೇಶಾದ್ಯಂತ ವಿವಿಧ ಸತ್ಸಂಗ ಕೇಂದ್ರಗಳನ್ನು ನಡೆಸುತ್ತಿದೆ.

 

 

*****


(Release ID: 2121376) Visitor Counter : 13