ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಸೃಜನಶೀಲತೆ, ಮಾಧ್ಯಮ ಮತ್ತು ತಂತ್ರಜ್ಞಾನದ ಸಂಗಮವು ವಿಶ್ವದ ಮಾಧ್ಯಮ ಕ್ಷೇತ್ರವನ್ನು ಪರಿವರ್ತಿಸುತ್ತಿದೆ; ವೇವ್ಸ್ ಉನ್ನತ ಮೌಲ್ಯದ ಕಂಟೆಂಟ್ ರಚಿಸಲು ರಚನಕಾರರಿಗೆ ವೇದಿಕೆಯನ್ನು ಒದಗಿಸುತ್ತದೆ: ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್
ಮಾಧ್ಯಮ ಮತ್ತು ಮನರಂಜನಾ ಉದ್ಯಮದಲ್ಲಿ ಚರ್ಚೆ, ಸಹಯೋಗ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ವೇವ್ಸ್ 2025 ಒಂದು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ: ಕೇಂದ್ರ ಸಚಿವರಾದ ಡಾ. ಎಸ್. ಜೈಶಂಕರ್
ವೇವ್ಸ್ 2025 ತಾಂತ್ರಿಕ ಪ್ರಗತಿಗಳು ಮತ್ತು ಸಾಮಾಜಿಕ ಪರಿವರ್ತನೆಯಲ್ಲಿ ಮಾಧ್ಯಮದ ವಿಕಸನಗೊಳ್ಳುತ್ತಿರುವ ಪಾತ್ರವನ್ನು ಒತ್ತಿಹೇಳುವ ಆಂದೋಲನವಾಗಿದೆ: ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್
ಜಾಗತಿಕ ಮಾಧ್ಯಮ ಸಂಸ್ಥೆಗಳು ಭಾರತದ ಸೃಜನಶೀಲ ವಲಯದೊಂದಿಗೆ ತೊಡಗಿಸಿಕೊಳ್ಳಲು ವೇವ್ಸ್ ಅನುವು ಮಾಡಿಕೊಡುತ್ತದೆ: ಕೇಂದ್ರ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್
ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ 'ನವದೆಹಲಿಯಲ್ಲಿ ವಿದೇಶಿ ರಾಯಭಾರಿಗಳು ಮತ್ತು ಹೈಕಮಿಷನರ್ ಗಳಿಗಾಗಿ ವೇವ್ಸ್ 2025 ಕುರಿತು ಅಧಿವೇಶನ' ಆಯೋಜನೆ
ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಿನ ತಿಳುವಳಿಕಾ ಒಪ್ಪಂದವು ಮಾಧ್ಯಮ, ಮನರಂಜನೆ ಮತ್ತು ಡಿಜಿಟಲ್ ಸಂಪರ್ಕದಲ್ಲಿ ಸಹಯೋಗವನ್ನು ಬಲಪಡಿಸುತ್ತದೆ
Posted On:
13 MAR 2025 7:44PM by PIB Bengaluru
ಮಾಧ್ಯಮ ಮತ್ತು ಮನರಂಜನೆ (ಎಂ&ಇ) ವಲಯದಲ್ಲಿ ಜಾಗತಿಕ ಸಹಕಾರವನ್ನು ಹೆಚ್ಚಿಸುವ ಪ್ರಮುಖ ಉಪಕ್ರಮವಾಗಿ, ಭಾರತ ಸರ್ಕಾರವು ಇಂದು ನವದೆಹಲಿಯ ಚಾಣಕ್ಯಪುರಿಯ ಸುಷ್ಮಾ ಸ್ವರಾಜ್ ಭವನದಲ್ಲಿ ವೇವ್ಸ್ 2025 ಕುರಿತು ಉನ್ನತ ಮಟ್ಟದ ಅಧಿವೇಶನವನ್ನು ಆಯೋಜಿಸಿತ್ತು. ವಾರ್ತಾ ಮತ್ತು ಪ್ರಸಾರ ಸಚಿವಾಲಯ (ಎಂಐಬಿ) ಆಯೋಜಿಸಿದ್ದ ಈ ಕಾರ್ಯಕ್ರಮವು, 2025ರ ಮೇ 1 ರಿಂದ 4 ರವರೆಗೆ ಮುಂಬೈನಲ್ಲಿ ನಡೆಯಲಿರುವ ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) 2025 ಕ್ಕೆ ಮುಂಚಿತವಾಗಿ ಅಂತರರಾಷ್ಟ್ರೀಯ ಸಮುದಾಯವನ್ನು ತೊಡಗಿಸಿಕೊಳ್ಳುವುದು ಇದರ ಉದ್ದೇಶವಾಗಿತ್ತು.
ಕೇಂದ್ರ ವಿದೇಶಾಂಗ ಸಚಿವರಾದ ಡಾ. ಎಸ್. ಜೈಶಂಕರ್, ಕೇಂದ್ರ ವಾರ್ತಾ ಮತ್ತು ಪ್ರಸಾರ, ರೈಲ್ವೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್ ಮತ್ತು ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್, ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಸುಜಾತಾ ಸೌನಿಕ್ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾರು 100 ರಾಯಭಾರಿಗಳು ಮತ್ತು ಹೈಕಮಿಷನರ್ ಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಾಧ್ಯಮ, ಮನರಂಜನೆ ಮತ್ತು ಡಿಜಿಟಲ್ ಸಂಪರ್ಕದಲ್ಲಿ ಸಹಯೋಗವನ್ನು ಬಲಪಡಿಸುವ, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಿನ ಒಪ್ಪಂದ ವಿನಿಮಯವು ಈ ಕಾರ್ಯಕ್ರಮದ ಪ್ರಮುಖ ಅಂಶವಾಗಿತ್ತು.

ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, "ಸೃಜನಶೀಲತೆ, ಮಾಧ್ಯಮ ಮತ್ತು ತಂತ್ರಜ್ಞಾನದ ಸಂಗಮವು ವಿಶ್ವದ ಮಾಧ್ಯಮ ಕ್ಷೇತ್ರವನ್ನು ಪರಿವರ್ತಿಸುತ್ತಿದೆ ಮತ್ತು ಸಮ್ನವಯದ ಹೊಸ ಮಟ್ಟದ ತಲುಪುತ್ತಿದೆ" ಎಂದು ಹೇಳಿದರು. ಸಮಾಜದ ಎಲ್ಲಾ ವರ್ಗಗಳ ರಚನಾಕಾರ ಸಮುದಾಯವು ಹೆಚ್ಚಿನ ಮೌಲ್ಯದ ಕಂಟೆಂಟ್ ಅನ್ನು ರಚಿಸಬಹುದು ಮತ್ತು ಇದು ವೇವ್ಸ್ 2025 ರ ಮೂಲ ಪರಿಕಲ್ಪನೆಯಾಗಿದೆ ಎಂದು ಸಚಿವರು ಹೇಳಿದರು. 2025 ರ ಮೇ 1 ರಿಂದ ಮೇ 4 ರವರೆಗೆ ಮುಂಬೈನಲ್ಲಿ ನಡೆಯಲಿರುವ ವೇವ್ಸ್ 2025 ಕ್ಕೆ ನಾವು ತಂತ್ರಜ್ಞಾನ, ಮಾಧ್ಯಮ ಮತ್ತು ಮನರಂಜನೆ ಕ್ಷೇತ್ರದ ಕೆಲವು ದಿಗ್ಗಜರನ್ನು ಆಹ್ವಾನಿಸುತ್ತಿದ್ದೇವೆ" ಎಂದು ಅವರು ಹೇಳಿದರು. ಜಾಗತಿಕ ರಂಗದಲ್ಲಿ ಭಾರತದ ವಿವಿಧ ಪ್ರಯತ್ನಗಳನ್ನು ವಿವರಿಸಿದ ಸಚಿವರು, ವೇವ್ಸ್ 2025ರಲ್ಲಿ ಭಾಗವಹಿಸುವಂತೆ ಮತ್ತು ಜಾಗತಿಕ ಕ್ರಿಯೇಟರ್ ಆರ್ಥಿಕತೆಯನ್ನು ಹೆಚ್ಚಿಸುಂತೆ ಎಲ್ಲಾ ಭಾಗೀದಾರರನ್ನು ಆಹ್ವಾನಿಸಿದರು.
ಕೇಂದ್ರ ಸಚಿವರಾದ ಡಾ. ಎಸ್. ಜೈಶಂಕರ್ ಅವರು ಮಾತನಾಡಿ, "ಮಾಧ್ಯಮ ಮತ್ತು ಮನರಂಜನಾ ಉದ್ಯಮದಲ್ಲಿ ಚರ್ಚೆ, ಸಹಯೋಗ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ವೇವ್ಸ್ ಒಂದು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾರ್ಯಕ್ರಮವು ಅವಕಾಶಗಳನ್ನು ಅನ್ವೇಷಿಸಲು, ಸವಾಲುಗಳನ್ನು ನಿಭಾಯಿಸಲು ಮತ್ತು ಕ್ಷೇತ್ರದ ಭವಿಷ್ಯವನ್ನು ರೂಪಿಸಲು ಉದ್ಯಮದ ನಾಯಕರು, ಪಾಲುದಾರರು ಮತ್ತು ನಾವೀನ್ಯಕಾರರನ್ನು ಒಗ್ಗೂಡಿಸುತ್ತದೆ" ಎಂದು ಹೇಳಿದರು. "ಆರ್ಥಿಕ ಮತ್ತು ರಾಜಕೀಯ ಮರುಸಮತೋಲನವು ಸಾಂಸ್ಕೃತಿಕ ಸಮತೋಲನದತ್ತ ಸಾಗುತ್ತಿದೆ. ನಾವು ನಿಜವಾಗಿಯೂ ಸ್ಥಳೀಯರಾಗದಿದ್ದರೆ ನಾವು ನಿಜವಾಗಿಯೂ ಜಾಗತಿಕವಾಗಿರುವುದಿಲ್ಲ. ವೇವ್ಸ್ 2025 ಈ ಪ್ರಯತ್ನದ ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ" ಎಂದು ಸಚಿವರು ಹೇಳಿದರು. ವೇವ್ಸ್ 2025 ರ ಅಡಿಯಲ್ಲಿ ಜಾಗತಿಕ ಸಹಯೋಗಗಳ ಅವಕಾಶಗಳ ಬಗ್ಗೆ ತಮ್ಮ ಸರ್ಕಾರಗಳಿಗೆ ತಿಳಿಸುವಂತೆ ರಾಯಭಾರಿಗಳು ಮತ್ತು ಹೈಕಮಿಷನರ್ ಗಳನ್ನು ಸಚಿವ ಶ್ರೀ ಜೈಶಂಕರ್ ಒತ್ತಾಯಿಸಿದರು.

ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ವಿಶೇಷ ಭಾಷಣದಲ್ಲಿ "ಭಾರತದ ಆರ್ಥಿಕ ಮತ್ತು ಮನರಂಜನಾ ರಾಜಧಾನಿಯಾದ ಮುಂಬೈ, ವೇವ್ಸ್ 2025 ಕ್ಕೆ ಸೂಕ್ತ ಹಿನ್ನೆಲೆಯಾಗಿ ಕಾರ್ಯನಿರ್ವಹಿಸುತ್ತದೆ, ಮಾಧ್ಯಮ ಮತ್ತು ಮನರಂಜನಾ ವಲಯದಲ್ಲಿ ಸಹಯೋಗ ಮತ್ತು ಸಾಂಸ್ಕೃತಿಕ ರಾಜತಾಂತ್ರಿಕತೆಯನ್ನು ಬೆಳೆಸುತ್ತದೆ" ಎಂದು ಹೇಳಿದರು. "ವೇವ್ಸ್ 2025 ತಾಂತ್ರಿಕ ಪ್ರಗತಿ ಮತ್ತು ಸಾಮಾಜಿಕ ಪರಿವರ್ತನೆಯಲ್ಲಿ ಮಾಧ್ಯಮದ ವಿಕಸನಗೊಳ್ಳುತ್ತಿರುವ ಪಾತ್ರವನ್ನು ಒತ್ತಿಹೇಳುವ ಒಂದು ಆಂದೋಲನವಾಗಿದೆ. ಮಹಾರಾಷ್ಟ್ರವು ಹೂಡಿಕೆಯನ್ನು ಉತ್ತೇಜಿಸಲು ಮತ್ತು ನಾವೀನ್ಯತೆಗೆ ಚಾಲನೆ ನೀಡುವ ಜಾಗತಿಕ ಪಾಲುದಾರಿಕೆಗಳನ್ನು ನಿರ್ಮಿಸಲು ಬದ್ಧವಾಗಿದೆ" ಎಂದು ಅವರು ಹೇಳಿದರು. ಭಾರತೀಯ ಸೃಜನಶೀಲ ತಂತ್ರಜ್ಞಾನ ಸಂಸ್ಥೆ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜಿ) ಸ್ಥಾಪನೆಯನ್ನು ಸ್ವಾಗತಿಸಿದ ಶ್ರೀ ಫಡ್ನವೀಸ್, "ಮಾಧ್ಯಮವು ಒಳ್ಳೆಯದಕ್ಕಾಗಿ ಒಂದು ಶಕ್ತಿಯಾಗಿ ಮುಂದುವರಿಯುತ್ತದೆ, ಜಗತ್ತನ್ನು ಪ್ರೇರೇಪಿಸಲು ಮತ್ತು ಸಂಪರ್ಕಿಸಲು ತಂತ್ರಜ್ಞಾನ ಮತ್ತು ಸೃಜನಶೀಲತೆ ಸಮ್ಮಿಲನದ ಭವಿಷ್ಯವನ್ನು ರೂಪಿಸುತ್ತದೆ" ಎಂದು ಭರವಸೆ ವ್ಯಕ್ತಪಡಿಸಿದರು.
ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ ಅವರು ಸಮಾರೋಪ ಭಾಷಣದಲ್ಲಿ ಮಾತನಾಡಿ, "ವೇವ್ಸ್ ಶೃಂಗಸಭೆ 2025 ಜಂಟಿ ಉದ್ಯಮಗಳು, ಸಹ-ನಿರ್ಮಾಣಗಳು ಮತ್ತು ವ್ಯವಹಾರ ವಿಸ್ತರಣೆಗೆ ಬಾಗಿಲು ತೆರೆಯುತ್ತದೆ, ಇದು ಜಾಗತಿಕ ಮಾಧ್ಯಮ ಕಂಪನಿಗಳು ಭಾರತದ ಸೃಜನಶೀಲ ವಲಯದೊಂದಿಗೆ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ” ಎಂದು ಹೇಳಿದರು. "ಭಾರತ ಸರ್ಕಾರವು ಎಂ&ಇ ಉದ್ಯಮಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವಲ್ಲಿ, ವ್ಯವಹಾರ ಮಾಡುವುದನ್ನು ಸುಲಭಗೊಳಿಸುವಲ್ಲಿ, ಕಂಟೆಂಟ್ ನ ಸ್ಥಳೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಯನ್ನು ಬೆಂಬಲಿಸುವಲ್ಲಿ ದೃಢವಾಗಿದೆ" ಎಂದು ಅವರು ಹೇಳಿದರು.
"ವೇವ್ಸ್ ಇಡೀ ಮಾಧ್ಯಮ ಮತ್ತು ಮನರಂಜನಾ ವಲಯಕ್ಕೆ ವಿಶ್ವದ ಮೊದಲ ಸಮ್ಮಿಲನ ವೇದಿಕೆಯಾಗಿದೆ. ಸಾಂಪ್ರದಾಯಿಕ ಮತ್ತು ಉದಯೋನ್ಮುಖ ಮಾಧ್ಯಮಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದು, ಜಾಗತಿಕ ಪಾಲುದಾರಿಕೆಗಳನ್ನು ನಿರ್ಮಿಸುವುದು ಮತ್ತು ಕಂಟೆಂಟ್ ಸೃಷ್ಟಿ ಮತ್ತು ತಾಂತ್ರಿಕ ನಾವೀನ್ಯತೆಯಲ್ಲಿ ಭಾರತದ ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯಗಳನ್ನು ಬಳಸಿಕೊಳ್ಳುವುದು ನಮ್ಮ ಗುರಿಯಾಗಿದೆ" ಎಂದು ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ತಮ್ಮ ಭಾಷಣದಲ್ಲಿ ಹೇಳಿದರು.
ವೇವ್ಸ್ ನ ಮೊದಲ ಆವೃತ್ತಿಯನ್ನು ಅರ್ಥಪೂರ್ಣ ಪರಿಣಾಮವನ್ನು ಸೃಷ್ಟಿಸಲು ಬಹು ಟ್ರ್ಯಾಕ್ ಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದರು. ಜಾಗತಿಕ ಮಾಧ್ಯಮ ಸಂವಾದವು ಸಚಿವರು ಮತ್ತು ನೀತಿ ನಿರೂಪಕರನ್ನು ಒಳಗೊಂಡಿರುತ್ತದೆ, ಇದು ಮಾರ್ಗದರ್ಶಿ ನೀತಿ ದಾಖಲೆಯಾಗಿ ವೇವ್ಸ್ ಘೋಷಣೆಯಲ್ಲಿ ಕೊನೆಗೊಳ್ಳುತ್ತದೆ. ಥಾಟ್ ಲೀಡರ್ಸ್ ಟ್ರ್ಯಾಕ್ ಉದ್ಯಮ ತಜ್ಞರೊಂದಿಗೆ ಜ್ಞಾನ ಹಂಚಿಕೆ ಅಧಿವೇಶನಗಳನ್ನು ಆಯೋಜಿಸುತ್ತದೆ. ವೇವ್ಸ್ ಪ್ರದರ್ಶನವು ಕಥೆ ಹೇಳುವ ನಾವೀನ್ಯತೆಗಳು, ತಲ್ಲೀನಗೊಳಿಸುವ ಅನುಭವಗಳು ಮತ್ತು ಗೇಮಿಂಗ್ ವಲಯವನ್ನು ಪ್ರದರ್ಶಿಸುತ್ತದೆ. ಇಂಡಿಯಾ ಪೆವಿಲಿಯನ್ ಭಾರತದ ಮಾಧ್ಯಮ ಪರಂಪರೆ ಮತ್ತು ಭವಿಷ್ಯವನ್ನು ಎತ್ತಿ ತೋರಿಸುತ್ತದೆ. ವೇವ್ಸ್ ಬಜಾರ್ ವ್ಯಾಪಾರ ಜಾಲವನ್ನು ಸುಗಮಗೊಳಿಸುತ್ತದೆ, WaveXcelerator ಮಾಧ್ಯಮ ಸ್ಟಾರ್ಟ್‌ಅಪ್ ಗಳಿಗೆ ಮಾರ್ಗದರ್ಶನ ಮತ್ತು ಹಣಕಾಸು ನೆರವು ನೀಡುತ್ತದೆ ಎಂದು ಕಾರ್ಯದರ್ಶಿ ಶ್ರೀ ಜಾಜು ಹೇಳಿದರು. ವೇವ್ಸ್ ಕಲ್ಚರಲ್ಸ್ ಭಾರತೀಯ ಮತ್ತು ಅಂತರರಾಷ್ಟ್ರೀಯ ಪ್ರತಿಭೆಗಳನ್ನು ಸಂಯೋಜಿಸುವ ವೈವಿಧ್ಯಮಯ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ.
ವೇವ್ಸ್ 2025: ಡಿಜಿಟಲ್ ಯುಗದಲ್ಲಿ ಏಕೀಕೃತ ಶಕ್ತಿಯಾಗಿ ಮಾಧ್ಯಮ ಮತ್ತು ಮನರಂಜನೆ
ಮಾಧ್ಯಮ ಮತ್ತು ಮನರಂಜನೆಯ ಪರಿವರ್ತಕ ಶಕ್ತಿಯನ್ನು ಗುರುತಿಸಿ, ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆಯಲ್ಲಿ (ವೇವ್ಸ್) ಭಾಗವಹಿಸುವವರು ಮೇ 1 ರಿಂದ ಮೇ 4, 2025 ರವರೆಗೆ ಮುಂಬೈನಲ್ಲಿ ಸೇರುತ್ತಾರೆ. ಈ ಐತಿಹಾಸಿಕ ಶೃಂಗಸಭೆಯು ಜಾಗತಿಕ ನಾಯಕರು, ಮಾಧ್ಯಮ ವೃತ್ತಿಪರರು, ಕಲಾವಿದರು, ನೀತಿ ನಿರೂಪಕರು ಮತ್ತು ಉದ್ಯಮದ ಪಾಲುದಾರರನ್ನು ಒಂದೆಡೆ ಸೇರಿಸುತ್ತದೆ. ಡಿಜಿಟಲ್ ಯುಗವು ಸವಾಲುಗಳು ಮತ್ತು ಅವಕಾಶಗಳನ್ನು ಒದಗಿಸುತ್ತದೆ. ಕೃತಕ ಬುದ್ಧಿಮತ್ತೆ, ಸ್ಟ್ರೀಮಿಂಗ್ ಕ್ರಾಂತಿಗಳು, ಬೌದ್ಧಿಕ ಆಸ್ತಿ ಹಕ್ಕುಗಳು, ತಪ್ಪು ಮಾಹಿತಿ ಮತ್ತು ಮಾಧ್ಯಮ ಸುಸ್ಥಿರತೆ ಪ್ರಮುಖ ಕಾಳಜಿಗಳಾಗಿವೆ. ಈ ರೀತಿಯ ಮೊದಲ ಕಾರ್ಯಕ್ರಮವಾದ ವೇವ್ಸ್ 2025 ಸಾಂಸ್ಕೃತಿಕ ವೈವಿಧ್ಯತೆ, ನಾವೀನ್ಯತೆ ಮತ್ತು ಮಾಧ್ಯಮ ವೇದಿಕೆಗಳಿಗೆ ಸಮಾನ ಪ್ರವೇಶವನ್ನು ಉತ್ತೇಜಿಸುವ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸುತ್ತದೆ.
ಕಂಟೆಂಟ್ ರಚನೆ ಮತ್ತು ಪ್ರಸರಣದಲ್ಲಿ ಸೃಜನಶೀಲತೆ, ಒಳಗೊಳ್ಳುವಿಕೆ ಮತ್ತು ಜವಾಬ್ದಾರಿಯ ಅತ್ಯುನ್ನತ ಮಾನದಂಡಗಳನ್ನು ಶೃಂಗಸಭೆಯು ಎತ್ತಿಹಿಡಿಯುತ್ತದೆ. ಇದು ನೈತಿಕ ಕಥೆ ಹೇಳುವಿಕೆ ಮತ್ತು ನ್ಯಾಯಯುತ ಪ್ರಾತಿನಿಧ್ಯದ ಅಗತ್ಯವನ್ನು ಒತ್ತಿಹೇಳುತ್ತದೆ.
ಸಾಮರಸ್ಯದ ಮಸೂರದಿಂದ ಜಗತ್ತನ್ನು ನೋಡುವ ಮೂಲಕ, ವೇವ್ಸ್ 2025 ಅರ್ಥಪೂರ್ಣ ಸಂಪರ್ಕಗಳು, ಸಹಯೋಗದ ಪ್ರಗತಿ ಮತ್ತು ಸಾಂಸ್ಕೃತಿಕ ಏಕತೆಯನ್ನು ಪ್ರೇರೇಪಿಸಲು ಬಯಸುತ್ತದೆ. ಡಿಜಿಟಲ್ ಯುಗದಲ್ಲಿ ದೇಶದಿಂದ ದೇಶಕ್ಕೆ, ಜನರು - ಜನರ ನಡುವೆ ಮತ್ತು ಸಂಸ್ಕೃತಿ- ಸಂಸ್ಕೃತಿಯ ನಡುವೆ ಅತಿದೊಡ್ಡ ಏಕೀಕರಣ ಅಂಶವಾಗಿ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಪಾತ್ರವನ್ನು ಬಲಪಡಿಸುವಲ್ಲಿ ಈ ಅಧಿವೇಶನವು ನಿರ್ಣಾಯಕ ಹೆಜ್ಜೆಯಾಗಲಿದೆ. ಸಮಾನ ಕಾಳಜಿಗಳು, ಮಾನವೀಯತೆ ಎದುರಿಸುತ್ತಿರುವ ಸವಾಲುಗಳು, ಸಮಾನ ಅವಕಾಶಗಳು, ಸಹಯೋಗದ ಬೆಳವಣಿಗೆ ಮತ್ತು ಪ್ರಗತಿಯ ಮೇಲೆ ಕೇಂದ್ರೀಕರಿಸುವ ಮೂಲಕ ವೇವ್ಸ್ 2025 ಏಕತೆಯ ಶಕ್ತಿಯನ್ನು ಒತ್ತಿಹೇಳುತ್ತದೆ. ಈ ದೃಷ್ಟಿಕೋನವು ವೇವ್ಸ್ 2025 ಅನ್ನು ಸಾಮರಸ್ಯಕ್ಕಾಗಿ ಜಾಗತಿಕ ವೇದಿಕೆಯಾಗಿಸುತ್ತದೆ, ಅರ್ಥಪೂರ್ಣ ಸಂವಾದ ಮತ್ತು ಗಡಿಗಳನ್ನು ಮೀರಿದ ಕ್ರಿಯೆಯನ್ನು ಉತ್ತೇಜಿಸುತ್ತದೆ.
ಆರೆಂಜ್ ಎಕಾನಮಿ (ಸೃಜನಶೀಲ ಆರ್ಥಿಕತೆ) ಯೊಳಗೆ ವೇವ್ಸ್ 2025ರ ಏಕೀಕರಣವು ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗಾಗಿ ಮಾಧ್ಯಮ ಮತ್ತು ಮನರಂಜನಾ ಉದ್ಯಮಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಅದರ ಪಾತ್ರವನ್ನು ಎತ್ತಿ ತೋರಿಸುತ್ತದೆ. ಸೃಜನಶೀಲ ಉದ್ಯಮಗಳು ಸಾಂಸ್ಕೃತಿಕ ವಿನಿಮಯ ಮತ್ತು ಏಕತೆಗೆ ಪ್ರಬಲ ಸಾಧನಗಳಾಗಿ ಕಾರ್ಯನಿರ್ವಹಿಸುವುದರಿಂದ ಇದು ಸಂಪೂರ್ಣವಾಗಿ ಜಾಗತಿಕ ಸಾಮರಸ್ಯದ ಧ್ಯೇಯಕ್ಕೆ ಅನುಗುಣವಾಗಿರುತ್ತದೆ.
ಮುಂಬೈನಲ್ಲಿ ವೇವ್ಸ್ 2025 ಅನ್ನು ಆಯೋಜಿಸುವ ಮೂಲಕ, ಈ ಶೃಂಗಸಭೆಯು ಚಿಂತನಾ ನಾಯಕರಿಗೆ ಒಂದು ವೇದಿಕೆಯನ್ನು ಒದಗಿಸುತ್ತದೆ. ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಮಾಧ್ಯಮ ಉದ್ಯಮವು ಹೇಗೆ ಮಹಾನ್ ಒಗ್ಗೂಡಿಸುವ ಅಂಶವಾಗಿ ಕಾರ್ಯನಿರ್ವಹಿಸಬಹುದು ಎಂಬುದನ್ನು ಅವರು ಚರ್ಚಿಸುತ್ತಾರೆ. ಈ ವಲಯವು ಸಾಂಸ್ಕೃತಿಕ ರಾಜತಾಂತ್ರಿಕತೆಗೆ ಪ್ರಬಲ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ಜನರು, ಸಂಸ್ಕೃತಿಗಳು ಮತ್ತು ರಾಷ್ಟ್ರಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.
*****
(Release ID: 2111365)
Visitor Counter : 18
Read this release in:
Odia
,
English
,
Urdu
,
Nepali
,
Hindi
,
Marathi
,
Bengali
,
Assamese
,
Gujarati
,
Tamil
,
Telugu
,
Malayalam