ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
100 ಗಿಗಾವ್ಯಾಟ್ ಸೌರ ವಿದ್ಯುತ್ ಸಾಮರ್ಥ್ಯ ಸಾಧಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ ಭಾರತ
100 ಗಿಗಾವ್ಯಾಟ್ ಸೌರ ವಿದ್ಯುತ್ ಸಾಧನೆ ಮೂಲಕ ಭಾರತ ಇಂಧನ ಸ್ವಾವಲಂಬಿ ಮತ್ತು ಹಸಿರು ಭವಿಷ್ಯದತ್ತ ಸಾಗುತ್ತಿದೆ: ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ
Posted On:
07 FEB 2025 2:17PM by PIB Bengaluru
ಭಾರತವು 100 ಗಿಗಾವ್ಯಾಟ್ ಸ್ಥಾಪಿತ ಸೌರಶಕ್ತಿ ಸಾಮರ್ಥ್ಯವನ್ನು ತಲುಪುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ ಮತ್ತು ನವೀಕರಿಸಬಹುದಾದ ಇಂಧನ ವಲಯದಲ್ಲಿ ಜಾಗತಿಕ ನಾಯಕನಾಗಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಈ ಗಮನಾರ್ಹ ಸಾಧನೆಯು ಸ್ವಚ್ಛ, ಹಸಿರು ಭವಿಷ್ಯಕ್ಕಾಗಿ ರಾಷ್ಟ್ರದ ಬದ್ಧತೆಗೆ ಸಾಕ್ಷಿಯಾಗಿದೆ ಮತ್ತು ಇದು 2030ರ ವೇಳೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿಗದಿಪಡಿಸಿದ 500 ಗಿಗಾವ್ಯಾಟ್ ನವೀಕರಿಸಬಹುದಾದ ಮೂಲಗಳನ್ನು ಆಧರಿಸಿದ ಇಂಧನ ಸಾಮರ್ಥ್ಯದ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸುವತ್ತ ಮಹತ್ವದ ಹೆಜ್ಜೆ ಇಟ್ಟಿರುವುದನ್ನು ಸೂಚಿಸುತ್ತದೆ.
“ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಭಾರತದ ಇಂಧನ ಪಯಣವು ಐತಿಹಾಸಿಕ ಮತ್ತು ಸ್ಪೂರ್ತಿದಾಯಕವಾಗಿದೆ. ಸೌರ ಫಲಕಗಳು, ಸೋಲಾರ್ ಪಾರ್ಕ್ ಗಳು ಮತ್ತು ಸೌರಶಕ್ತಿ ಮೇಲ್ಛಾವಣಿ ಯೋಜನೆಗಳಂತಹ ಉಪಕ್ರಮಗಳು ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿವೆ. ಇದರ ಪರಿಣಾಮ ಭಾರತವು ಇಂದು 100 ಗಿಗಾವ್ಯಾಟ್ ಸೌರಶಕ್ತಿ ಉತ್ಪಾದನೆಯ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದೆ. ಹಸಿರು ಇಂಧನ ಕ್ಷೇತ್ರದಲ್ಲಿ, ಭಾರತವು ಸ್ವಾವಲಂಬಿಯಾಗುವುದಲ್ಲದೆ, ಜಗತ್ತಿಗೆ ಹೊಸ ಹಾದಿಯನ್ನು ತೋರಿಸುತ್ತಿದೆ" ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಶುದ್ಧ ಮತ್ತು ಹಸಿರು ಭವಿಷ್ಯದತ್ತ ನಿರಂತರ ಬದ್ಧತೆಯಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಹೇಳಿದರು. ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯು ಸೌರಶಕ್ತಿ ಮೇಲ್ಛಾವಣಿಯನ್ನು ಮನೆಯ ವಾಸ್ತವವನ್ನಾಗಿ ಮಾಡುತ್ತಿದೆ ಮತ್ತು ಸುಸ್ಥಿರ ಇಂಧನದಲ್ಲಿ ಪಥ ಪರಿವರ್ತಕ (ಗೇಮ್ ಚೇಂಜರ್) ಆಗಿದ್ದು, ಪ್ರತಿಯೊಂದು ಮನೆಯೂ ಶುದ್ಧ ಇಂಧನದಿಂದ ಸಬಲೀಕರಣಗೊಳಿಸುತ್ತಿದೆ ಎಂದು ಸಚಿವರು ಹೇಳಿದರು
ಸೌರ ವಲಯದಲ್ಲಿ ಅನಿರೀಕ್ಷಿತ ಪ್ರಗತಿ
ಕಳೆದ ದಶಕದಲ್ಲಿ ಭಾರತದ ಸೌರಶಕ್ತಿ ವಲಯವು ಅಸಾಧಾರಣವಾಗಿ ಶೇ.3450ರಷ್ಟು ಸಾಮರ್ಥ್ಯದ ಹೆಚ್ಚಳವನ್ನು ಕಂಡಿದ್ದು, 2014ರಲ್ಲಿ 2.82 ಗಿಗಾವ್ಯಾಟ್ ನಿಂದ 2025 ರಲ್ಲಿ 100 ಗಿಗಾವ್ಯಾಟ್ ಗೆ ಏರಿದೆ. 2025ರ ಜನವರಿ 31ರ ವೇಳೆಗೆ ಭಾರತದ ಒಟ್ಟು ಸ್ಥಾಪಿತ ಸೌರಶಕ್ತಿ ಸಾಮರ್ಥ್ಯವು 100.33 ಗಿಗಾವ್ಯಾಟ್ ಆಗಿದ್ದು 84.10 ಗಿಗಾವ್ಯಾಟ್ ಉತ್ಪಾದನೆ ಯೋಜನೆ ಅನುಷ್ಠಾನ ಹಂತದಲ್ಲಿದೆ ಮತ್ತು ಹೆಚ್ಚುವರಿಯಾಗಿ 47.49 ಗಿಗಾವ್ಯಾಟ್ ಸಾಮರ್ಥ್ಯದ ಯೋಜನೆಗಳು ಟೆಂಡರ್ ಹಂತದಲ್ಲಿದೆ. ದೇಶದ ಹೈಬ್ರಿಡ್ ಮತ್ತು ರೌಂಡ್-ದಿ-ಕ್ಲಾಕ್ (ಆರ್ ಟಿಸಿ) ನವೀಕರಿಸಬಹುದಾದ ಇಂಧನ ಯೋಜನೆಗಳು ಸಹ ವೇಗವಾಗಿ ಮುಂದುವರಿಯುತ್ತಿವೆ, 64.67 ಗಿಗಾವ್ಯಾಟ್ ಅನುಷ್ಠಾನ ಮತ್ತು ಟೆಂಡರ್ ಹಂತದಲ್ಲಿವೆ, ಇದು ಸೌರ ಮತ್ತು ಹೈಬ್ರಿಡ್ ಯೋಜನೆಗಳ ಒಟ್ಟು ಉತ್ಪಾದನೆಯನ್ನು 296.59 ಗಿಗಾವ್ಯಾಟ್ ಗೆ ತಲುಪಿಸುತ್ತದೆ.
ಭಾರತದ ನವೀಕರಿಸಬಹುದಾದ ಇಂಧನ ಬೆಳವಣಿಗೆಗೆ ಸೌರಶಕ್ತಿ ಪ್ರಮುಖ ಕೊಡುಗೆ ನೀಡುತ್ತಿದ್ದು, ಒಟ್ಟು ಸ್ಥಾಪಿಸಲಾದ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಶೇ.47 ರಷ್ಟಿದೆ. 2024 ರಲ್ಲಿ, ದಾಖಲೆಯ 24.5 ಗಿಗಾವ್ಯಾಟ್ ಸೌರ ಸಾಮರ್ಥ್ಯ ಸೇರ್ಪಡೆಯಾಯಿತು.ಇದು 2023 ಕ್ಕೆ ಹೋಲಿಸಿದರೆ ಸೌರಶಕ್ತಿ ಉತ್ಪಾದನೆಯಲ್ಲಿ ಎರಡು ಪಟ್ಟು ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ. ಕಳೆದ ವರ್ಷ 18.5 ಗಿಗಾವ್ಯಾಟ್ ಯುಟಿಲಿಟಿ-ಸ್ಕೇಲ್ ಸೌರ ಸಾಮರ್ಥ್ಯದ ಹೆಚ್ಚಳವನ್ನು ಕಂಡಿತ್ತು, ಇದು 2023ಕ್ಕೆ ಹೋಲಿಸಿದರೆ ಸುಮಾರು 2.8 ಪಟ್ಟು ಹೆಚ್ಚಾಗಿದೆ. ರಾಜಸ್ಥಾನ, ಗುಜರಾತ್, ತಮಿಳುನಾಡು, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳು ಉನ್ನತ ಕಾರ್ಯಕ್ಷಮತೆಯ ರಾಜ್ಯಗಳಲ್ಲಿ ಸೇರಿವೆ. ಇದು ಭಾರತದ ಒಟ್ಟು ಬಳಕೆ ವ್ಯಾಪ್ತಿ (ಯುಟಿಲಿಟಿ-ಸ್ಕೇಲ್ ) ಸೌರ ಫಲಕಗಳ ಸ್ಥಾಪನೆಗಳಿಗೆ ಗಮನಾರ್ಹ ಕೊಡುಗೆ ನೀಡುತ್ತಿವೆ.
ಭಾರತದಲ್ಲಿ ಸೌರಶಕ್ತಿ ಮೇಲ್ಛಾವಣಿ ವಲಯವು 2024ರಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, 4.59 ಗಿಗಾವ್ಯಾಟ್ ಹೊಸ ಸಾಮರ್ಥ್ಯವನ್ನು ಸ್ಥಾಪಿಸಲಾಗಿದ್ದು, 2023ಕ್ಕೆ ಹೋಲಿಸಿದರೆ ಆ ಪ್ರಮಾಣ ಶೇ.53 ರಷ್ಟು ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ. ಈ ಬೆಳವಣಿಗೆಯ ಪ್ರಮುಖ ಚಾಲನಾಶಕ್ತಿ ಎಂದರೆ, 2024ರಲ್ಲಿ ಆರಂಭಿಸಲಾದ ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ, ಇದು ಈಗ 9 ಲಕ್ಷ ಸೌರಶಕ್ತಿ ಮೇಲ್ಛಾವಣಿ ಅಳವಡಿಕೆಗಳ ಸಮೀಪದಲ್ಲಿದೆ, ಇದು ದೇಶಾದ್ಯಂತ ಮನೆಗಳು ಶುದ್ಧ ಇಂಧನ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಭಾರತವು ಸೌರ ಉತ್ಪಾದನೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. 2014 ರಲ್ಲಿ ದೇಶವು ಕೇವಲ 2 ಗಿಗಾವ್ಯಾಟ್ ನ ಸೀಮಿತ ಸೌರ ಮಾದರಿ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿತ್ತು. ಕಳೆದ ದಶಕದಲ್ಲಿ ಇದು 2024 ರಲ್ಲಿ 60 ಗಿಗಾವ್ಯಾಟ್ ಗೆ ಹೆಚ್ಚಳವಾಗಿದ್ದು, ಭಾರತವನ್ನು ಸೌರ ಉತ್ಪಾದನೆಯಲ್ಲಿ ಜಾಗತಿಕ ನಾಯಕನ ಸ್ಥಾನಕ್ಕೇರಿಸಿದೆ. ನಿರಂತರ ನೀತಿ ಬೆಂಬಲದೊಂದಿಗೆ ಭಾರತವು 2030ರ ವೇಳೆಗೆ 100 ಗಿಗಾವ್ಯಾಟ್ ಸೌರ ಮಾದರಿ ಉತ್ಪಾದನಾ ಸಾಮರ್ಥ್ಯವನ್ನು ಸಾಧಿಸುವ ಹಾದಿಯಲ್ಲಿದೆ.
ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರ ಮಾರ್ಗದರ್ಶನದಲ್ಲಿ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂ ಎನ್ ಆರ್ ಇ) ಭಾರತದಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಮುಖ ಉಪಕ್ರಮಗಳನ್ನು ಜಾರಿಗೊಳಿಸುತ್ತಿದೆ. ಸೌರಶಕ್ತಿಯಲ್ಲಿನ ಈ 100 ಗಿಗಾವ್ಯಾಟ್ ಮೈಲಿಗಲ್ಲು, ನವೀಕರಿಸಬಹುದಾದ ಇಂಧನ ಶಕ್ತಿ ಕೇಂದ್ರವಾಗಿ ಭಾರತದ ಪಾತ್ರವನ್ನು ಒತ್ತಿಹೇಳುತ್ತದೆ, ಜತೆಗೆ ಲಕ್ಷಾಂತರ ಜನರಿಗೆ ಶುದ್ಧ, ಸುಸ್ಥಿರ ಮತ್ತು ಕೈಗೆಟುಕುವ ಇಂಧನ ಲಭ್ಯತೆಯನ್ನು ಖಾತ್ರಿಪಡಿಸುತ್ತದೆ ಮತ್ತು ಸ್ವಾವಲಂಬಿ ಇಂಧನ ಭವಿಷ್ಯವನ್ನು ರೂಪಿಸುತ್ತದೆ.
*****
(Release ID: 2100668)
Visitor Counter : 25