ಹಣಕಾಸು ಸಚಿವಾಲಯ
azadi ka amrit mahotsav

ಮುಂದಿನ 5 ವರ್ಷಗಳಲ್ಲಿ ದೇಶದ ಸರ್ಕಾರಿ ಶಾಲೆಗಳಲ್ಲಿ 50,000 ಅಟಲ್ ಟಿಂಕರಿಂಗ್ ಲ್ಯಾಬ್‌ಗಳ ಸ್ಥಾಪನೆ


ಡಿಜಿಟಲ್ ರೂಪದ ಭಾರತೀಯ ಭಾಷಾ ಪುಸ್ತಕಗಳನ್ನು ಒದಗಿಸಲು ಭಾರತೀಯ ಭಾಷಾ ಪುಸ್ತಕ ಯೋಜನೆ ಆರಂಭಿಸಲಾಗುವುದು

ಖಾಸಗಿ ವಲಯದ ನೇತೃತ್ವದ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ಅನುಷ್ಠಾನಕ್ಕಾಗಿ 20,000 ಕೋಟಿ ರೂ. ಹಂಚಿಕೆ ಮಾಡಲಾಗುವುದು

ಪ್ರಧಾನಮಂತ್ರಿ ಸಂಶೋಧನಾ ಫೆಲೋಶಿಪ್ ಯೋಜನೆಯಡಿ, ಐಐಟಿ ಮತ್ತು ಐಐಎಸ್ಸಿಗಳಲ್ಲಿ ತಾಂತ್ರಿಕ ಸಂಶೋಧನೆಗಾಗಿ 10,000 ಫೆಲೋಶಿಪ್‌ಗಳನ್ನು ಒದಗಿಸಲಾಗುವುದು

"ಭಾರತದಲ್ಲಿ(ಭಾರತಕ್ಕಾಗಿ) ತಯಾರಿಸಿ, ಜಗತ್ತಿಗಾಗಿ ತಯಾರಿಸಿ" ಉಪಕ್ರಮಕ್ಕೆ  ಯುವಕರನ್ನು ಸಜ್ಜುಗೊಳಿಸಲು ಕೌಶಲ್ಯದ 5 ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ

500 ಕೋಟಿ ರೂ. ಒಟ್ಟು ವೆಚ್ಚದಲ್ಲಿ ಶಿಕ್ಷಣಕ್ಕಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಶ್ರೇಷ್ಠತಾ ಕೇಂದ್ರ ಸ್ಥಾಪನೆ

Posted On: 01 FEB 2025 1:09PM by PIB Bengaluru

ಸಂಸತ್ತಿನಲ್ಲಿಂದು 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ನಾವೀನ್ಯತೆ ಉತ್ತೇಜಿಸುವ ವಿವಿಧ ಅಭಿವೃದ್ಧಿ ಕ್ರಮಗಳನ್ನು ಪ್ರಕಟಿಸಿದರು.

ಮುಂದಿನ 5 ವರ್ಷಗಳಲ್ಲಿ ದೇಶದ ಸರ್ಕಾರಿ ಶಾಲೆಗಳಲ್ಲಿ 50,000 ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸುವುದಾಗಿ ಹಣಕಾಸು ಸಚಿವರು ಘೋಷಿಸಿದರು. ಇದು ಕುತೂಹಲ ಮತ್ತು ನಾವೀನ್ಯತೆಯ ಚೈತನ್ಯ ಬೆಳೆಸಲು ಮತ್ತು ಯುವ ಮನಸ್ಸುಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಸಹಾಯ ಮಾಡುತ್ತದೆ. ಭಾರತ್‌ನೆಟ್ ಯೋಜನೆಯಡಿ, ಗ್ರಾಮೀಣ ಪ್ರದೇಶದ ಎಲ್ಲಾ ಸರ್ಕಾರಿ ಮಾಧ್ಯಮಿಕ ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಒದಗಿಸಲಾಗುವುದು ಎಂದು ಅವರು ಪ್ರಕಟಿಸಿದರು.

ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಕಳೆದ 10 ವರ್ಷಗಳಲ್ಲಿ 23 ಐಐಟಿಗಳಲ್ಲಿನ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 100% ಹೆಚ್ಚಳವಾಗಿದ್ದು, ಅದು 65,000ದಿಂದ 1.35 ಲಕ್ಷಕ್ಕೆ ಏರಿಕೆ ಕಂಡಿದೆ ಎಂದು 2025-26ರ ಕೇಂದ್ರ ಬಜೆಟ್ ಹೇಳಿದೆ. 2014ರ ನಂತರ ಪ್ರಾರಂಭವಾದ 5 ಐಐಟಿಗಳಲ್ಲಿ 6,500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಶಿಕ್ಷಣಸುಲಭಗೊಳಿಸಲು ಹೆಚ್ಚುವರಿ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ಪಾಟ್ನಾ-ಐಐಟಿಯಲ್ಲಿ ಹಾಸ್ಟೆಲ್ ಮತ್ತು ಇತರೆ ಮೂಲಸೌಕರ್ಯ ಸಾಮರ್ಥ್ಯವನ್ನು ಸಹ ವಿಸ್ತರಿಸಲಾಗುವುದು ಎಂದು ಬಜೆಟ್ ಪ್ರಸ್ತಾಪಿಸಿದೆ.

ವಿದ್ಯಾರ್ಥಿಗಳು ತಮ್ಮ ಕಲಿಕೆಯ ವಿಷಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವಂತೆ ಸಹಾಯ ಮಾಡುವ ಉದ್ದೇಶದಿಂದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು,  ಶಾಲಾ ಹಂತ ಮತ್ತು ಉನ್ನತ ಶಿಕ್ಷಣ ಹಂತದಲ್ಲಿ ಡಿಜಿಟಲ್ ರೂಪದ ಭಾರತೀಯ ಭಾಷಾ ಪುಸ್ತಕಗಳನ್ನು ಒದಗಿಸುವ ಸಲುವಾಗಿ ಭಾರತೀಯ ಭಾಷಾ ಪುಸ್ತಕ ಯೋಜನೆ ಜಾರಿಗೆ ತರುವುದಾಗಿ ಪ್ರಸ್ತಾಪಿಸಿದ್ದಾರೆ.

"ಭಾರತಕ್ಕಾಗಿ(ಭಾರತದಲ್ಲಿ) ತಯಾರಿಸಿ, ಇಡೀ ವಿಶ್ವಕ್ಕಾಗಿ ತಯಾರಿಸಿ-ಮೇಕ್ ಫಾರ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್" ಉಪಕ್ರಮಕ್ಕೆ ಅಗತ್ಯ ಕೌಶಲ್ಯಗಳೊಂದಿಗೆ ಯುವ ಸಮುದಾಯವನ್ನು ಸಜ್ಜುಗೊಳಿಸುವ ಸಲುವಾಗಿ, ಜಾಗತಿಕ ಪರಿಣತಿ ಮತ್ತು ಪಾಲುದಾರಿಕೆಗಳೊಂದಿಗೆ ಕೌಶಲ್ಯ ತರಬೇತಿಯ 5 ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಹಣಕಾಸು ಸಚಿವರು ಘೋಷಿಸಿದರು. ಈ ಪಾಲುದಾರಿಕೆಗಳು ಪಠ್ಯಕ್ರಮ ವಿನ್ಯಾಸ, ತರಬೇತುದಾರರ ತರಬೇತಿ, ಕೌಶಲ್ಯ ಪ್ರಮಾಣೀಕರಣ ಮಾರ್ಗಸೂಚಿ ಮತ್ತು ಕಾಲಾನುಕ್ರಮ ಪರಾಮರ್ಶೆ (ಪರಿಶೀಲನೆ)ಗಳನ್ನು ಒಳಗೊಂಡಿರುತ್ತವೆ.

ಶಿಕ್ಷಣಕ್ಕಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಶ್ರೇಷ್ಠತಾ ಕೇಂದ್ರ ಸ್ಥಾಪಿಸುವುದಾಗಿ ಕೇಂದ್ರ ಬಜೆಟ್ ಘೋಷಿಸಿದೆ, ಇದಕ್ಕಾಗಿ ಒಟ್ಟು 500 ಕೋಟಿ ರೂ. ವೆಚ್ಚ ಮಾಡಲಿದೆ.

ಖಾಸಗಿ ವಲಯದ ನೇತೃತ್ವದಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಗಳನ್ನು ಕಾರ್ಯಗತಗೊಳಿಸಲು 20,000 ಕೋಟಿ ರೂ. ಮೀಸಲಿಡುವುದಾಗಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಮುಂದಿನ 5 ವರ್ಷಗಳಲ್ಲಿ, ಪ್ರಧಾನ ಮಂತ್ರಿ ಸಂಶೋಧನಾ ಫೆಲೋಶಿಪ್ ಯೋಜನೆಯಡಿ, ಐಐಟಿಗಳು ಮತ್ತು ಐಐಎಸ್ಸಿಗಳಲ್ಲಿ ತಾಂತ್ರಿಕ ಸಂಶೋಧನೆಗಾಗಿ 10 ಸಾವಿರ ಫೆಲೋಶಿಪ್‌ಗಳಿಗೆ ಹೆಚ್ಚಿನ ಆರ್ಥಿಕ ಬೆಂಬಲದೊಂದಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ಪ್ರಸ್ತಾಪಿಸಿದರು.

ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ-

https://pib.gov.in/PressReleasePage.aspx?PRID=2098551

 

*****


(Release ID: 2098668) Visitor Counter : 15