ಹಣಕಾಸು ಸಚಿವಾಲಯ
ಕೈಗಾರಿಕಾ ಸರಕುಗಳ ಮೇಲಿನ 7 ಸೀಮಾಸುಂಕ ದರಗಳನ್ನು ತೆಗೆದುಹಾಕಲು ಕೇಂದ್ರ ಬಜೆಟ್ 2025-26 ಪ್ರಸ್ತಾಪ
ಕ್ಯಾನ್ಸರ್ ಮತ್ತು ಇತರೆ ಅಪರೂಪದ ಕಾಯಿಲೆಗಳಿಗೆ ಸಂಬಂಧಿಸಿದ 36ಕ್ಕಿಂತ ಹೆಚ್ಚಿನ ಜೀವರಕ್ಷಕ ಔಷಧಗಳಿಗೆ ಮೂಲ ಸೀಮಾಸುಂಕದಿಂದ ವಿನಾಯಿತಿ
ಇ-ಚಲನಶೀಲತೆಗೆ ಉತ್ತೇಜನ: ಇವಿ ಬ್ಯಾಟರಿ ತಯಾರಿಕೆಯ 35 ಹೆಚ್ಚುವರಿ ಬಂಡವಾಳ ಸರಕುಗಳಿಗೆ ಮೂಲ ಸೀಮಾಸುಂಕದಿಂದ ವಿನಾಯಿತಿ ನೀಡಲಾಗಿದೆ
ರಫ್ತುಗಳ ಉತ್ತೇಜನ, ವ್ಯಾಪಾರ ಸುಗಮಗೊಳಿಸುವುದು ಮತ್ತು ಜನಸಾಮಾನ್ಯರಿಗೆ ಪರಿಹಾರ ಒದಗಿಸಲು ದೇಶೀಯ ಉತ್ಪಾದನೆ ಮತ್ತು ಮೌಲ್ಯವರ್ಧನೆ ಬೆಂಬಲಿಸುವ ಪ್ರಸ್ತಾವನೆಗಳು
Posted On:
01 FEB 2025 12:55PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು ಮಂಡಿಸಿದ 2025-26ರ ಕೇಂದ್ರ ಬಜೆಟ್ ನಲ್ಲಿ, ತೆರಿಗೆ ವ್ಯವಸ್ಥೆ(ಸುಂಕ ರಚನೆ)ಯನ್ನು ತರ್ಕಬದ್ಧಗೊಳಿಸುವ ಮತ್ತು ತೆರಿಗೆ ವ್ಯವಸ್ಥೆಗೆ ಬದಲಾವಣೆ(ಸುಂಕ ವಿಲೋಮ) ತಂದು ಪರಿಹಾರ ಒದಗಿಸುವ ಸೀಮಾಸುಂಕ ಪ್ರಸ್ತಾವನೆಗಳನ್ನು ಘೋಷಿಸಿದ್ದಾರೆ. ಈ ಪ್ರಸ್ತಾವನೆಗಳು ದೇಶೀಯ ಉತ್ಪಾದನೆ ಮತ್ತು ಮೌಲ್ಯವರ್ಧನೆಯನ್ನು ಬೆಂಬಲಿಸುವ ಮೂಲಕ ರಫ್ತುಗಳನ್ನು ಉತ್ತೇಜಿಸುತ್ತದೆ, ವ್ಯಾಪಾರವನ್ನು ಸುಗಮಗೊಳಿಸುತ್ತದೆ ಮತ್ತು ಸಾಮಾನ್ಯ ಜನರಿಗೆ ಪರಿಹಾರವನ್ನು ನೀಡುತ್ತದೆ ಎಂದು ಅವರು ಹೇಳಿದರು.
2024 ಜುಲೈನಲ್ಲಿ ಘೋಷಿಸಿದಂತೆ, ಸೀಮಾಸುಂಕ ವ್ಯವಸ್ಥೆ ಅಥವಾ ರಚನೆಯ ಪರಾಮರ್ಶೆ ನಡೆಸುವುದಾಗಿ ನೀಡಿದ್ದ ಭರವಸೆ ಈಡೇರಿಸಿರುವ ಸಚಿವರು, 2023-24ರ ಬಜೆಟ್‌ನಲ್ಲಿ ತೆಗೆದುಹಾಕಲಾದ 7 ಸೀಮಾಸುಂಕ ದರಗಳ ಜತೆಗೆ ಇದೀಗ, ಕೈಗಾರಿಕಾ ಸರಕುಗಳಿಗೆ ಸಂಬಂಧಿಸಿದ 7 ಸೀಮಾಸುಂಕ ತೆಗೆದುಹಾಕಲಾಗುವುದು ಎಂದು ಪ್ರಕಟಿಸಿದರು. ಇದು 'ಶೂನ್ಯ' ದರ ಸೇರಿದಂತೆ 8 ಸೀಮಾಸುಂಕ ದರಗಳು ಮಾತ್ರ ಉಳಿಯುತ್ತವೆ. ಒಂದಕ್ಕಿಂತ ಹೆಚ್ಚಿನ ಮೇಲ್ತೆರಿಗೆ(ಉಪತೆರಿಗೆ ಅಥವಾ ಸೆಸ್) ಅಥವಾ ಸರ್‌ಚಾರ್ಜ್ ವಿಧಿಸದಂತೆಯೂ ಬಜೆಟ್ ಪ್ರಸ್ತಾಪಿಸಿದೆ. ಸೆಸ್‌ಗೆ ಒಳಪಟ್ಟಿರುವ 82 ಸೀಮಾಸುಂಕ ಸರಕುಗಳ ಮೇಲೆ ಸಮಾಜ ಕಲ್ಯಾಣ ಸರ್‌ಚಾರ್ಜ್ ನಿಂದ ಇದು ವಿನಾಯಿತಿ ನೀಡುತ್ತದೆ.
ಔಷಧಗಳು/ಮೂಲಿಕೆಗಳ ಆಮದಿಗೆ ವಿನಾಯಿತಿ
ವಲಯ ನಿರ್ದಿಷ್ಟ ಪ್ರಸ್ತಾವನೆಗಳ ಪೈಕಿ, ಈ ಬಾರಿಯ ಬಜೆಟ್ ರೋಗಿಗಳಿಗೆ, ವಿಶೇಷವಾಗಿ ಕ್ಯಾನ್ಸರ್ ಸೇರಿದಂತೆ ಇತರೆ ಅಪರೂಪದ ಕಾಯಿಲೆಗಳು ಮತ್ತು ಇತರೆ ತೀವ್ರ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ದೊಡ್ಡ ಪರಿಹಾರ ಒದಗಿಸಿದೆ. ಮೂಲ(ಬೇಸಿಕ್) ಸೀಮಾಸುಂಕದಿಂದ ಸಂಪೂರ್ಣ ವಿನಾಯಿತಿ ಪಡೆದ ಔಷಧಿಗಳ ಪಟ್ಟಿಗೆ 36 ಜೀವ ರಕ್ಷಕ ಔಷಧಗಳು ಮತ್ತು ಮೂಲಿಕೆಗಳನ್ನು ಸೇರಿಸುವುದಾಗಿ ಬಜೆಟ್ ಪ್ರಸ್ತಾಪಿಸಿದೆ. ರಿಯಾಯಿತಿಯ 5% ಸೀಮಾಸುಂಕ ಅನ್ವಯವಾಗುವ ಪಟ್ಟಿಗೆ 6 ಜೀವರಕ್ಷಕ ಔಷಧಗಳನ್ನು ಸೇರಿಸುವುದಾಗಿ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ. ಮೇಲಿನ ಬೃಹತ್ ಔಷಧಗಳ ತಯಾರಿಕೆಗೆ ಪೂರ್ಣ ವಿನಾಯಿತಿ ಮತ್ತು ರಿಯಾಯಿತಿ ದರದ ಸೀಮಾಸುಂಕ ಕ್ರಮವಾಗಿ ಅನ್ವಯಿಸುತ್ತದೆ.
ಔಷಧಿ ಕಂಪನಿಗಳು ನಡೆಸುವ “ರೋಗಿಗೆ ನೆರವು ಕಾರ್ಯಕ್ರಮ”ಗಳ ಅಡಿ, ನಿರ್ದಿಷ್ಟಪಡಿಸಿದ ಔಷಧಗಳು ಮತ್ತು ಮೂಲಿಕೆಗಳನ್ನು ರೋಗಿಗಳಿಗೆ ಉಚಿತವಾಗಿ ಪೂರೈಸಿದರೆ, ಅವುಗಳಿಗೆ ಮೂಲ ಸೀಮಾಸುಂಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗುತ್ತದೆ. ಹೊಸದಾದ 13 “ರೋಗಿಗೆ ನೆರವು ಕಾರ್ಯಕ್ರಮ”ಗಳ ಜತೆಗೆ 37 ಹೆಚ್ಚುವರಿ ಔಷಧಿಗಳನ್ನು ಪಟ್ಟಿಗೆ ಸೇರಿಸಲು ಬಜೆಟ್ ಪ್ರಸ್ತಾಪಿಸಿದೆ.
ದೇಶೀಯ ಉತ್ಪಾದನೆ ಮತ್ತು ಮೌಲ್ಯವರ್ಧನೆಗೆ ಬೆಂಬಲ
ಇವಿ ಬ್ಯಾಟರಿ ತಯಾರಿಕೆಗೆ 35 ಹೆಚ್ಚುವರಿ ಬಂಡವಾಳ ಸರಕುಗಳು ಮತ್ತು ಮೊಬೈಲ್ ಫೋನ್ ಬ್ಯಾಟರಿ ತಯಾರಿಕೆಗೆ 28 ಹೆಚ್ಚುವರಿ ಬಂಡವಾಳ ಸರಕುಗಳನ್ನು ವಿನಾಯಿತಿ ಪಡೆದ ಬಂಡವಾಳ ಸರಕುಗಳ ಪಟ್ಟಿಗೆ ಸೇರಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. "ಇದು ಮೊಬೈಲ್ ಫೋನ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಲಿಥಿಯಂ-ಐಯಾನ್ ಬ್ಯಾಟರಿಯ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ" ಎಂದು ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್, ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.
ಕೋಬಾಲ್ಟ್ ಪುಡಿ ಮತ್ತು ತ್ಯಾಜ್ಯ, ಲಿಥಿಯಂ-ಐಯಾನ್ ಬ್ಯಾಟರಿ, ಸೀಸ, ಸತು ಮತ್ತು ಇನ್ನೂ 12 ನಿರ್ಣಾಯಕ ಖನಿಜಗಳ ಸ್ಕ್ರ್ಯಾಪ್(ರದ್ಧಿ) ಮೇಲಿನ ಮೂಲ ಸೀಮಾಸುಂಕಕ್ಕೆ ಸಂಪೂರ್ಣ ವಿನಾಯಿತಿ ನೀಡಲು ಬಜೆಟ್ ಪ್ರಸ್ತಾಪಿಸಿದೆ. ಇದು ಭಾರತದಲ್ಲಿ ಉತ್ಪಾದನೆಗೆ ಅವುಗಳ ಲಭ್ಯತೆ ಖಚಿತಪಡಿಸಿಕೊಳ್ಳಲು ಮತ್ತು ನಮ್ಮ ಯುವಕರಿಗೆ ಹೆಚ್ಚಿನ ಉದ್ಯೋಗಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ಹಣಕಾಸು ಸಚಿವರು ಹೇಳಿದರು. 2024ರ ಜುಲೈ ಬಜೆಟ್‌ನಲ್ಲಿ ಮೂಲ ಸೀಮಾಸುಂಕ(ಬಿಸಿಡಿ)ದಿಂದ ಸಂಪೂರ್ಣ ವಿನಾಯಿತಿ ಪಡೆದ 25 ನಿರ್ಣಾಯಕ ಖನಿಜಗಳ ಜೊತೆಗೆ ಇವು ಸೇರಿವೆ.
ಕೃಷಿ-ಜವಳಿ, ವೈದ್ಯಕೀಯ ಜವಳಿ ಮತ್ತು ಪಾಲಿಮರ್(ಜಿಯೊ) ಜವಳಿ ಮುಂತಾದ ತಾಂತ್ರಿಕ ಜವಳಿ ಉತ್ಪನ್ನಗಳ ದೇಶೀಯ ಉತ್ಪಾದನೆಯನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಉತ್ತೇಜಿಸಲು, ಸಂಪೂರ್ಣವಾಗಿ ವಿನಾಯಿತಿ ಪಡೆದ ಜವಳಿ ಯಂತ್ರೋಪಕರಣಗಳ ಪಟ್ಟಿಗೆ ಇನ್ನೂ 2 ವಿಧದ ಶಟಲ್-ಲೆಸ್ ಲೂಮ್(ಸುಧಾರಿತ ನೆಯ್ಗೆ ಯಂತ್ರ)ಗಳನ್ನು ಸೇರಿಸಲು ಬಜೆಟ್ ಪ್ರಸ್ತಾಪಿಸಿದೆ. "9 ಸುಂಕ ದರಗಳಿಂದ ಒಳಗೊಂಡ ಹೆಣೆದ ಬಟ್ಟೆಗಳ ಮೇಲಿನ ಮೂಲ ಸೀಮಾಸುಂಕ(ಬಿಸಿಡಿ) ದರವನ್ನು "10% ಅಥವಾ 20%"ನಿಂದ "20% ಅಥವಾ ಪ್ರತಿ ಕೆಜಿಗೆ 115 ರೂ., ಇವುಗಳಲ್ಲಿ ಯಾವುದು ಹೆಚ್ಚಿರುತ್ತದೋ ಆ ದರಕ್ಕೆ ಪರಿಷ್ಕರಿಸಲು ನಾನು ಪ್ರಸ್ತಾಪಿಸುತ್ತೇನೆ" ಎಂದು ಹಣಕಾಸು ಸಚಿವರು, ತಮ್ಮ ಭಾಷಣದಲ್ಲಿ ಹೇಳಿದರು.
'ಮೇಕ್ ಇನ್ ಇಂಡಿಯಾ' ನೀತಿಗೆ ಅನುಗುಣವಾಗಿ, ಇಂಟರಾಕ್ಟಿವ್ ಫ್ಲಾಟ್ ಪ್ಯಾನಲ್ ಡಿಸ್ ಪ್ಲೇ(ಐಎಫ್ ಪಿಡಿ) ಮೇಲಿನ ಬಿಸಿಡಿಯನ್ನು 10%ನಿಂದ 20%ಗೆ ಹೆಚ್ಚಿಸಲು ಮತ್ತು ಓಪನ್ ಸೆಲ್ ಮತ್ತು ಇತರ ಘಟಕಗಳ ಮೇಲಿನ ಬಿಸಿಡಿಯನ್ನು 5%ಗೆ ಇಳಿಸಲು ಬಜೆಟ್ ಪ್ರಸ್ತಾಪಿಸಿದೆ. ಇದು ಏರಿಕೆಯ(ಅತ್ಯಧಿಕ) ಮಟ್ಟದಲ್ಲಿರುವ ತೆರಿಗೆ ದರಗಳನ್ನು ಸರಿಪಡಿಸುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಹಡಗು ನಿರ್ಮಾಣದ ದೀರ್ಘಾವಧಿ ಪರಿಗಣಿಸಿ, ಹಡಗುಗಳ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳು, ಘಟಕಗಳು, ಉಪಭೋಗ್ಯ ವಸ್ತುಗಳು ಅಥವಾ ಬಿಡಿಭಾಗಗಳ ಮೇಲಿನ ಬಿಸಿಡಿ ವಿನಾಯಿತಿಯನ್ನು ಇನ್ನೂ 10 ವರ್ಷಗಳ ಕಾಲ ಮುಂದುವರಿಸಲು ಬಜೆಟ್ ಪ್ರಸ್ತಾಪಿಸಿದೆ. ಹಡಗು ಒಡೆದುಹಾಕುವುದನ್ನು ಅಥವಾ ವಿಚ್ಛೇದನವನ್ನು ಮತ್ತಷ್ಟು ಸ್ಪರ್ಧಾತ್ಮಕವಾಗಿಸಲು ಬಜೆಟ್, ಹಡಗು ಬಿಡಿಭಾಗಗಳನ್ನು ಬೇರ್ಪಡಿಸುವುದಕ್ಕೂ ಅದೇ ವಿನಾಯಿತಿ ಪ್ರಸ್ತಾಪಿಸಿದೆ.
ಕ್ಯಾರಿಯರ್ ಗ್ರೇಡ್ ಈಥರ್ನೆಟ್ ಸ್ವಿಚ್‌ಗಳ ಮೇಲಿನ ಬಿಸಿಡಿಯನ್ನು 20%ನಿಂದ 10%ಗೆ ಇಳಿಸಲು ಬಜೆಟ್ ಪ್ರಸ್ತಾಪಿಸಿದೆ, ಇದು ವಾಹಕವಲ್ಲದ ದರ್ಜೆಯ ಈಥರ್ನೆಟ್ ಸ್ವಿಚ್‌ಗಳಿಗೆ ಸಮನಾಗಿರುತ್ತದೆ. ಇದು ವರ್ಗೀಕರಣ ವಿವಾದಗಳನ್ನು ತಡೆಯುತ್ತದೆ ಎಂದು ಹಣಕಾಸು ಸಚಿವರು ಹೇಳಿದರು.
ರಫ್ತು ಉತ್ತೇಜನ
ರಫ್ತು ವಹಿವಾಟು ಉತ್ತೇಜಿಸಲು ಬಜೆಟ್ ನಲ್ಲಿ ಕೆಲವು ತೆರಿಗೆ ಪ್ರಸ್ತಾಪಗಳನ್ನು ಮಾಡಲಾಗಿದೆ. ಕರಕುಶಲ ವಸ್ತುಗಳ ರಫ್ತಿಗೆ ಅನುಕೂಲವಾಗುವಂತೆ, ರಫ್ತಿನ ಸಮಯವನ್ನು 6 ತಿಂಗಳಿಂದ 1 ವರ್ಷಕ್ಕೆ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ, ಅಗತ್ಯವಿದ್ದರೆ ಇನ್ನೂ 3 ತಿಂಗಳು ವಿಸ್ತರಿಸಬಹುದು. ತೆರಿಗೆ ಮುಕ್ತ ಸರಕುಗಳ ಪಟ್ಟಿಗೆ 9 ಕರಕುಶಲ ವಸ್ತುಗಳನ್ನು ಸೇರಿಸಲು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ.
ಸಣ್ಣ ಚರ್ಮ ಉದ್ದಿಮೆದಾರರ ರಫ್ತು ವಹಿವಾಟು ಉತ್ತೇಜಿಸುವ ಸಲುವಾಗಿ, ಕ್ರಸ್ಟ್(ತೊಗಟೆ ಚರ್ಮ) ಲೆದರ್ ಗೆ 20% ರಫ್ತು ಸುಂಕದಿಂದ ವಿನಾಯಿತಿ ನೀಡಲು ಬಜೆಟ್ ಪ್ರಸ್ತಾಪಿಸಿದೆ. ಅದೇ ಸಮಯದಲ್ಲಿ ದೇಶೀಯ ಮೌಲ್ಯವರ್ಧನೆ ಮತ್ತು ಉದ್ಯೋಗಕ್ಕಾಗಿ ಆಮದುಗಳನ್ನು ಸುಗಮಗೊಳಿಸಲು ವೆಟ್ ಬ್ಲೂ ಲೆದರ್ ಮೇಲಿನ ಮೂಲ ಸೀಮಾಸುಂಕಕ್ಕೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಜಾಗತಿಕ ಸಮುದ್ರಾಹಾರ ಮಾರುಕಟ್ಟೆಯಲ್ಲಿ ಭಾರತದ ಸ್ಪರ್ಧಾತ್ಮಕತೆ ಹೆಚ್ಚಿಸುವ ನಿಟ್ಟಿನಲ್ಲಿ, ಬಜೆಟ್ ತನ್ನ ಸಾದೃಶ(ಅನಲಾಗ್) ಉತ್ಪನ್ನಗಳ ತಯಾರಿಕೆ ಮತ್ತು ರಫ್ತಿಗೆ ಬಳಸುವ ಫ್ರೋಜನ್ ಫಿಶ್ ಪೇಸ್ಟ್ (ಸುರಿಮಿ) ಮೇಲಿನ ಬಿಸಿಡಿಯನ್ನು 30%ನಿಂದ 5%ಗೆ ಇಳಿಸುವುದಾಗಿ ಪ್ರಸ್ತಾಪಿಸಿದೆ. ಮೀನು ಮತ್ತು ಸೀಗಡಿ ಆಹಾರಗಳ ತಯಾರಿಕೆಗೆ ಬಳಸುವ ಮೀನು ಹೈಡ್ರೊಲೈಜೇಟ್ ಮೇಲಿನ ಬಿಸಿಡಿಯನ್ನು 15%ನಿಂದ 5%ಗೆ ಇಳಿಸುವುದಾಗಿ ಪ್ರಸ್ತಾಪಿಸಿದೆ.
ವಿಮಾನ ಮತ್ತು ಹಡಗುಗಳ ದೇಶೀಯ “ನಿರ್ವಹಣೆ, ರಿಪೇರಿ ಮತ್ತು ಕಾರ್ಯಾಚರಣೆ( ಎಂಆರ್‌ಒ) ಉತ್ತೇಜಿಸಲು 2024ರ ಜುಲೈ ಬಜೆಟ್ ನಲ್ಲಿ, ದುರಸ್ತಿಗಾಗಿ ಆಮದು ಮಾಡಿಕೊಳ್ಳಲಾದ ವಿದೇಶಿ ಮೂಲದ ಸರಕುಗಳ ರಫ್ತಿನ ಸಮಯ ಮಿತಿಯನ್ನು 6 ತಿಂಗಳಿಂದ 1 ವರ್ಷಕ್ಕೆ ವಿಸ್ತರಿಸಲಾಗಿತ್ತು, ಅದನ್ನು ಇದೀಗ 1 ವರ್ಷಕ್ಕೆ ವಿಸ್ತರಿಸಲಾಗುತ್ತದೆ. 2025-26ರ ಬಜೆಟ್ ರೈಲ್ವೆ ಸರಕುಗಳ ವಿತರಣೆ ಅವಧಿಯನ್ನು 1 ವರ್ಷಕ್ಕೆ ವಿಸ್ತರಿಸುವುದಾಗಿ ಪ್ರಸ್ತಾಪಿಸಿದೆ.
ವ್ಯಾಪಾರ ಮತ್ತು ವ್ಯವಹಾರ ಸುಗಮಗೊಳಿಸುವಿಕೆ
ಪ್ರಸ್ತುತ, 1962ರ ಸೀಮಾಸುಂಕ ಕಾಯಿದೆಯು ತಾತ್ಕಾಲಿಕ ಮೌಲ್ಯಮಾಪನಗಳನ್ನು ಅಂತಿಮಗೊಳಿಸಲು ಯಾವುದೇ ಸಮಯ ಮಿತಿ ಒದಗಿಸಿಲ್ಲ, ಇದು ಅನಿಶ್ಚಯ ಮತ್ತು ವ್ಯಾಪಾರ ವೆಚ್ಚಕ್ಕೆ ಕಾರಣವಾಗುತ್ತದೆ. ಸುಗಮವಾದ ವ್ಯವಹಾರ ಉತ್ತೇಜಿಸುವ ಕ್ರಮವಾಗಿ, ತಾತ್ಕಾಲಿಕ ಮೌಲ್ಯಮಾಪನ ಅಂತಿಮಗೊಳಿಸಲು ಬಜೆಟ್ ಇದನ್ನು 1 ವರ್ಷ ವಿಸ್ತರಿಸಿ, 2 ವರ್ಷಗಳ ಕಾಲಮಿತಿ ನಿಗದಿಪಡಿಸುವುದಾಗಿ ಪ್ರಸ್ತಾಪಿಸಿದೆ,.
ಆಮದುದಾರರು ಅಥವಾ ರಫ್ತುದಾರರು ಸರಕುಗಳ ಕ್ಲಿಯರೆನ್ಸ್ ನಂತರ, ಸ್ವಯಂಪ್ರೇರಣೆಯಿಂದ ವಸ್ತು ಸಂಗತಿಗಳನ್ನು ಘೋಷಿಸಲು ಮತ್ತು ಬಡ್ಡಿಯೊಂದಿಗೆ ಆದರೆ ದಂಡವಿಲ್ಲದೆ ಸುಂಕ ಪಾವತಿಸಲು ಅನುವು ಮಾಡಿಕೊಡುವ ಹೊಸ ನಿಬಂಧನೆಯನ್ನು ಪರಿಚಯಿಸಲು ಬಜೆಟ್ ಪ್ರಸ್ತಾಪಿಸಿದೆ. "ಇದು ಸ್ವಯಂಪ್ರೇರಿತ ತೆರಿಗೆ ಪಾವತಿ ಅನುಸರಣೆಯನ್ನು ಉತ್ತೇಜಿಸುತ್ತದೆ. ಆದಾಗ್ಯೂ, ಇಲಾಖೆ ಈಗಾಗಲೇ ಆಡಿಟ್ ಅಥವಾ ತನಿಖಾ ಪ್ರಕ್ರಿಯೆಗಳನ್ನು ಪ್ರಾರಂಭಿಸಿರುವ ಸಂದರ್ಭಗಳಲ್ಲಿ ಇದು ಅನ್ವಯಿಸುವುದಿಲ್ಲ" ಎಂದು ಸಚಿವೆ ಶ್ರೀಮತಿ ಸೀತಾರಾಮನ್ ಹೇಳಿದರು.
ಸಂಬಂಧಿಸಿದ ನಿಯಮಗಳಲ್ಲಿ ಆಮದು ಮಾಡಿಕೊಂಡ ಸರಕುಗಳ ಅಂತಿಮ ಬಳಕೆಗೆ ಇರುವ ಕಾಲಮಿತಿಯನ್ನು 6 ತಿಂಗಳಿಂದ 1 ವರ್ಷಕ್ಕೆ ವಿಸ್ತರಿಸುವುದಾಗಿ ಬಜೆಟ್ ಪ್ರಸ್ತಾಪಿಸಿದೆ. ಇದು ಉದ್ಯಮಕ್ಕೆ ತಮ್ಮ ಆಮದುಗಳನ್ನು ಉತ್ತಮವಾಗಿ ಯೋಜಿಸಲು ಅನುವು ಮಾಡಿಕೊಡುವುದಲ್ಲದೆ, ಪೂರೈಕೆಯ ವೆಚ್ಚ ಮತ್ತು ಅನಿಶ್ಚಯದ ದೃಷ್ಟಿಯಿಂದ ಕಾರ್ಯಾಚರಣೆಯ ನಮ್ಯತೆ(ಹೊಂದಾಣಿಕೆ)ಯನ್ನು ಸಹ ಒದಗಿಸುತ್ತದೆ. ಇದಲ್ಲದೆ, ಅಂತಹ ಆಮದುದಾರರು ಈಗ ಮಾಸಿಕ ಸ್ಟೇಟ್ ಮೆಂಟ್ ಗಳಿಗೆ ಬದಲಾಗಿ ತ್ರೈಮಾಸಿಕ ಸ್ಟೇಟ್ ಮೆಂಟ್ ಗಳನ್ನು ಮಾತ್ರ ಸಲ್ಲಿಸಬೇಕಾಗುತ್ತದೆ.
*****
(Release ID: 2098650)
Visitor Counter : 18
Read this release in:
Gujarati
,
Odia
,
Khasi
,
English
,
Urdu
,
Marathi
,
Hindi
,
Punjabi
,
Tamil
,
Telugu
,
Malayalam