ಹಣಕಾಸು ಸಚಿವಾಲಯ
ಉತ್ತಮ ಆಡಳಿತ ಸಾಧಿಸಲು 2025-26ರ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ನೇರ ತೆರಿಗೆ ಸುಧಾರಣೆಗಳ ಪಟ್ಟಿ
Posted On:
01 FEB 2025 12:53PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಇಂದು 2025-26ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಜನತೆ ಮತ್ತು ಆರ್ಥಿಕತೆಗಾಗಿ ಉತ್ತಮ ಆಡಳಿತ ಸಾಧಿಸುವ ಗುರಿಯೊಂದಿಗೆ ಕೆಲು ನೇರ ತೆರಿಗೆ ಸುಧಾರಣಾ ಕ್ರಮಗಳನ್ನು ಈ ದಾಖಲೆಯಲ್ಲಿ ಪ್ರಸ್ತಾಪಿಸಿದ್ದಾರೆ.
ನೇರ ತೆರಿಗೆ ಪ್ರಸ್ತಾವಗಳ ಉದ್ದೇಶಗಳು ಈ ಕೆಳಗಿನಂತಿವೆ.
- ಮಧ್ಯಮ ವರ್ಗದ ಮೇಲೆ ವಿಶೇಷ ಗಮನ ಹರಿಸಿ ವೈಯಕ್ತಿಕ ಆದಾಯ ತೆರಿಗೆ ಸುಧಾರಣೆಗಳು: ಹೊಸ ವ್ಯವಸ್ಥೆಯಡಿಯಲ್ಲಿ ಒಟ್ಟು ಆದಾಯ 12 ಲಕ್ಷ ರೂ.ಗಳವರೆಗೆ (ಅಂದರೆ ತಿಂಗಳಿಗೆ ಸರಾಸರಿ 1 ಲಕ್ಷ ರೂ.ವರೆಗಿನ ಬಂಡವಾಳ ಲಾಭದಂತಹ ವಿಶೇಷ ದರದ ಆದಾಯವನ್ನು ಹೊರತುಪಡಿಸಿ) ಆದಾಯ ತೆರಿಗೆಯನ್ನು ಪಾವತಿಸುವಂತಿಲ್ಲ. ವೇತನ ಪಡೆಯುವ ತೆರಿಗೆ ಪಾವತಿದಾರರಿಗೆ ಈ ಮಿತಿ 75,000 ರೂ. ನಿಗದಿತ ಕಡಿತ (ಸ್ಟಾಂಡರ್ಡ್ ಡಿಡಕ್ಷನ್ )ನಿಂದಾಗಿ 12.75 ಲಕ್ಷ ರೂ.ಗಳಾಗಿರುತ್ತದೆ.
- ಸಂಕಷ್ಟಗಳನ್ನು ನಿವಾರಿಸಲು ಟಿಡಿಎಸ್/ಟಿಸಿಎಸ್ ಅನ್ನು ಏಕರೂಪಗೊಳಿಸುವುದು: ಹಿರಿಯ ನಾಗರಿಕರಿಗೆ ಬಡ್ಡಿಯ ಮೇಲಿನ ತೆರಿಗೆ ಕಡಿತದ ಮಿತಿಯನ್ನು ಪ್ರಸ್ತುತ 50,000 ರೂ.ಗಳಿಂದ 1 ಲಕ್ಷ ರೂ.ಗಳಿಗೆ ದ್ವಿಗುಣಗೊಳಿಸಲು ಪ್ರಸ್ತಾಪಿಸಲಾಗಿದೆ. ಅದೇ ರೀತಿ, ಬಾಡಿಗೆಯ ಮೇಲಿನ ಟಿಡಿಎಸ್‌ಗೆ ವಾರ್ಷಿಕ 2.40 ಲಕ್ಷ ರೂ. ಮಿತಿಯನ್ನು 6 ಲಕ್ಷ ರೂ.ಗಳಿಗೆ ಹೆಚ್ಚಿಸುವ ಪ್ರಸ್ತಾವನೆಗಳೂ ಸಹ ಸೇರಿವೆ. ಇದು ಟಿಡಿಎಸ್‌ಗೆ ಹೊಣೆಗಾರರಾಗಿರುವ ವಹಿವಾಟುಗಳ ಸಂಖ್ಯೆ ತಗ್ಗಿಸುತ್ತದೆ, ಹಾಗಾಗಿ ಸಣ್ಣ ಪಾವತಿಗಳನ್ನು ಪಡೆಯುವ ಸಣ್ಣ ತೆರಿಗೆ ಪಾವತಿದಾರರಿಗೆ ಪ್ರಯೋಜನ ಒದಗಿಸುತ್ತದೆ. ಹೆಚ್ಚಿನ ಟಿಡಿಎಸ್ ಕಡಿತದ ನಿಬಂಧನೆಗಳು ಈಗ ಪ್ಯಾನ್ ಇಲ್ಲದ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತವೆ. ಅಲ್ಲದೆ, ಆರ್‌ಬಿಐನ ಉದಾರೀಕೃತ ಸ್ವೀಕೃತಿ ಯೋಜನೆ (ಎಲ್‌ಆರ್‌ಎಸ್) ಅಡಿಯಲ್ಲಿ ಹಣ ಸ್ವೀಕೃತಿ ಮೇಲೆ ಮೂಲದಲ್ಲಿ ತೆರಿಗೆ (ಟಿಸಿಎಸ್) ಸಂಗ್ರಹಿಸುವ ಮಿತಿಯನ್ನು 7 ಲಕ್ಷ ರೂ ಗಳಿಂದ10 ಲಕ್ಷಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಅಲ್ಲದೆ, ರಿಟರ್ನ್ಸ್ ಅನ್ನು ಸಲ್ಲಿಸುವ ಅಂತಿಮ ದಿನಾಂಕದವರೆಗೆ ಟಿಸಿಎಸ್ ಪಾವತಿಗೆ ವಿಳಂಬವನ್ನು ಅಪರಾಧ ಮುಕ್ತಗೊಳಿಸಲು ಉದ್ದೇಶಿಸಲಾಗಿದೆ.
- ಸ್ವಯಂಪ್ರೇರಿತ ಅನುಸರಣೆಗೆ ಪ್ರೋತ್ಸಾಹ: ಯಾವುದೇ ಮೌಲ್ಯಮಾಪನ ವರ್ಷಕ್ಕೆ ನವೀಕರಿಸಿದ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಸಮಯ ಮಿತಿಯನ್ನು, ಪ್ರಸ್ತುತ ಎರಡು ವರ್ಷಗಳ ಮಿತಿಯಿಂದ ನಾಲ್ಕು ವರ್ಷಗಳಿಗೆ ವಿಸ್ತರಿಸುವ ಪ್ರಸ್ತಾಪವಿದೆ. ಕ್ರಿಪ್ಟೋ-ಆಸ್ತಿ ವಹಿವಾಟಿಗೆ ಸಂಬಂಧಿಸಿದ ಮಾಹಿತಿಯನ್ನು ನಿಗದಿತ ರೂಪದಲ್ಲಿ ಒದಗಿಸುವುದನ್ನು ಕಡ್ಡಾಯಗೊಳಿಸಲು ಕಾಯ್ದೆಯಲ್ಲಿ ತಿದ್ದುಪಡಿ ತರಲು ಮತ್ತಷ್ಟು ಪ್ರಸ್ತಾಪಿಸಲಾಗಿದೆ. ವರ್ಚುವಲ್ ಡಿಜಿಟಲ್ ಆಸ್ತಿಯ ವ್ಯಾಖ್ಯಾನವನ್ನು ಅದಕ್ಕೆ ಅನುಗುಣವಾಗಿ ಜೋಡಿಸಲು ಸಹ ಉದ್ದೇಶಿಸಲಾಗಿದೆ.
- ಅನುಸರಣೆ ಹೊರೆಯನ್ನು ತಗ್ಗಿಸುವುದು: ಸಣ್ಣ ದತ್ತಿ ಟ್ರಸ್ಟ್‌ಗಳು/ಸಂಸ್ಥೆಗಳ ನೋಂದಣಿ ಅವಧಿಯನ್ನು 5 ವರ್ಷದಿಂದ 10 ವರ್ಷಗಳಿಗೆ ಹೆಚ್ಚಿಸುವ ಮೂಲಕ ಅನುಸರಣೆ ಹೊರೆ ತಗ್ಗಿಸುವ ಪ್ರಸ್ತಾಪವಿದೆ. ಅಲ್ಲದೆ, ಯಾವುದೇ ಷರತ್ತುಗಳಿಲ್ಲದೆ ಎರಡು ಸ್ವಯಂ ಬಳಕೆ ಆಸ್ತಿಗಳ ವಾರ್ಷಿಕ ಮೌಲ್ಯವನ್ನು ಶೂನ್ಯ ಎಂದು ಕ್ಲೈಮ್ ಮಾಡುವ ಪ್ರಯೋಜನವನ್ನು ಅನುಮತಿಸಲು ಉದ್ದೇಶಿಸಲಾಗಿದೆ. ಐವತ್ತು ಲಕ್ಷಕ್ಕಿಂತ ಅಧಿಕ ಮೌಲ್ಯದ ನಿರ್ದಿಷ್ಟ ಸರಕುಗಳ ಮಾರಾಟದ ಮೇಲೆ ಮೂಲದಲ್ಲಿ ಯಾವುದೇ ತೆರಿಗೆಯನ್ನು ಸಂಗ್ರಹಿಸಲಾಗುವುದಿಲ್ಲ ಎಂದು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ.
- ವ್ಯವಹಾರವನ್ನು ಸುಲಭಗೊಳಿಸುವುದು: ವರ್ಗಾವಣೆ ಬೆಲೆ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮತ್ತು ಜಾಗತಿಕ ಅತ್ಯುತ್ತಮ ಪದ್ದತಿಗಳಿಗೆ ಅನುಗುಣವಾಗಿ ವಾರ್ಷಿಕ ಪರಿಶೀಲನೆಗೆ ಪರ್ಯಾಯವನ್ನು ಒದಗಿಸಲು, ಮೂರು ವರ್ಷಗಳ ಬ್ಲಾಕ್ ಅವಧಿಗೆ ಅಂತಾರಾಷ್ಟ್ರೀಯ ವಹಿವಾಟಿನ ಆರ್ಮ್'ಸ್ ಲೆಂಗ್ತ್ ಬೆಲೆಯನ್ನು ನಿರ್ಧರಿಸಲು ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ವ್ಯಾಜ್ಯಗಳನ್ನು ತಗ್ಗಿಸಲು ಮತ್ತು ಅಂತಾರಾಷ್ಟ್ರೀಯ ತೆರಿಗೆಯಲ್ಲಿ ಖಚಿತತೆಯನ್ನು ಒದಗಿಸುವ ಉದ್ದೇಶದಿಂದ, ಸುರಕ್ಷಿತ ಬಂದರು ನಿಯಮಗಳ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತಿದೆ. ಅನಿವಾಸಿ ಭಾರತೀಯರಿಂದ ಸೆಕ್ಯುರಿಟಿಗಳ ವರ್ಗಾವಣೆಯ ಮೇಲಿನ ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆಯ ದರಗಳಲ್ಲಿ ಸಮಾನತೆಯನ್ನು ಪ್ರಸ್ತಾಪಿಸಲಾಗಿದೆ. ಅಲ್ಲದೆ, 2024ರ ಆಗಸ್ಟ್ 29 ರಂದು ಅಥವಾ ನಂತರ ವ್ಯಕ್ತಿಗಳು ರಾಷ್ಟ್ರೀಯ ಉಳಿತಾಯ ಯೋಜನೆಯ ಖಾತೆಗಳಿಂದ ಪಡೆದಿರುವ ಹಣ ವಾಪಸ್ಸಾತಿಗೆ ವಿನಾಯಿತಿ ನೀಡುವ ಪ್ರಸ್ತಾಪವನ್ನು ಮಾಡಲಾಗಿದೆ ಮತ್ತು ಒಟ್ಟಾರೆ ಮಿತಿಗಳಿಗೆ ಒಳಪಟ್ಟು ಎನ್ ಪಿಎಸ್ ವಾತ್ಸಲ್ಯ ಖಾತೆಗಳಿಗೂ ಅದೇ ರೀತಿಯಲ್ಲಿ ಪರಿಗಣಿಸಲು ಅನುಮತಿ ನೀಡಲು ಪ್ರಸ್ತಾಪಿಸಲಾಗಿದೆ.
ಎ. ಎಲೆಕ್ಟ್ರಾನಿಕ್ಸ್ ಉತ್ಪಾದನಾ ಯೋಜನೆಗಳಿಗೆ ತೆರಿಗೆ ಖಚಿತತೆ: ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸುವ ಅಥವಾ ನಿರ್ವಹಿಸುವ ಸ್ಥಾನಿಕ ಕಂಪನಿಗೆ ಸೇವೆಗಳನ್ನು ಒದಗಿಸುವ ಅನಿವಾಸಿಗಳಿಗೆ ಪೂರ್ವಭಾವಿ ತೆರಿಗೆ ಪದ್ಧತಿಯನ್ನು ಒದಗಿಸುವ ಪ್ರಸ್ತಾಪವಿದೆ. ಅಲ್ಲದೆ, ನಿರ್ದಿಷ್ಟ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕಗಳಿಗೆ ಪೂರೈಕೆಗಾಗಿ ಘಟಕಗಳನ್ನು ಸಂಗ್ರಹಿಸುವ ಅನಿವಾಸಿಗಳಿಗೆ ತೆರಿಗೆ ಖಚಿತತೆಗಾಗಿ ಸುರಕ್ಷಿತ ಬಂದರನ್ನು ಪರಿಚಯಿಸುವ ಪ್ರಸ್ತಾಪವಿದೆ.
ಬಿ. ಒಳನಾಡಿನ ಹಡಗುಗಳಿಗೆ ಟನ್ ತೆರಿಗೆ ಯೋಜನೆ: ದೇಶದಲ್ಲಿ ಒಳನಾಡಿನ ಜಲ ಸಾರಿಗೆಯನ್ನು ಉತ್ತೇಜಿಸಲು ಭಾರತೀಯ ಹಡಗುಗಳ ಕಾಯ್ದೆ, 2021ರ ಅಡಿಯಲ್ಲಿ ನೋಂದಾಯಿಸಲಾದ ಒಳನಾಡಿನ ಹಡಗುಗಳಿಗೆ ವಿಸ್ತರಿಸಲು ಪ್ರಸ್ತಾಪಿಸಲಾದ ಅಸ್ತಿತ್ವದಲ್ಲಿರುವ ಟನ್ ತೆರಿಗೆ ಯೋಜನೆಯ ಪ್ರಯೋಜನಗಳು.
ಸಿ. ಸ್ಟಾರ್ಟ್-ಅಪ್‌ಗಳ ಸಂಯೋಜನೆಗೆ ವಿಸ್ತರಣೆ: ಭಾರತೀಯ ಸ್ಟಾರ್ಟ್-ಅಪ್ ಪೂರಕ ವ್ಯವಸ್ಥೆಯನ್ನು ಬೆಂಬಲಿಸಲು, 01.04.2030 ಕ್ಕಿಂತ ಮೊದಲು ಸಂಯೋಜಿಸಲಾದ ಸ್ಟಾರ್ಟ್-ಅಪ್‌ಗಳಿಗೆ ಲಭ್ಯವಿರುವ ಪ್ರಯೋಜನವನ್ನು ಅನುಮತಿಸಲು, ಸಂಯೋಜನೆಯ ಅವಧಿಯನ್ನು 5 ವರ್ಷಗಳವರೆಗೆ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ.
ಡಿ. ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರ (IFSC): ಐ ಎಫ್ ಎಸ್ ಸಿ ಯಲ್ಲಿ ಹೆಚ್ಚುವರಿ ಚಟುವಟಿಕೆಗಳನ್ನು ಆಕರ್ಷಿಸಲು ಮತ್ತು ಉತ್ತೇಜಿಸಲು, IFSC ನಲ್ಲಿ ಸ್ಥಾಪಿಸಲಾದ ಜಾಗತಿಕ ಕಂಪನಿಗಳ ಹಡಗು-ಗುತ್ತಿಗೆ ಘಟಕಗಳು, ವಿಮಾ ಕಚೇರಿಗಳು ಮತ್ತು ಖಜಾನೆ ಕೇಂದ್ರಗಳಿಗೆ ನಿರ್ದಿಷ್ಟ ಪ್ರಯೋಜನಗಳನ್ನು ಬಜೆಟ್ ಪ್ರಸ್ತಾಪಿಸಿದೆ. ಅಲ್ಲದೆ, ಪ್ರಯೋಜನಗಳನ್ನು ಪಡೆಯಲು IFSCಯಲ್ಲಿ ಆರಂಭವಾಗುವ ಕಟ್-ಆಫ್ ದಿನಾಂಕವನ್ನು ಐದು ವರ್ಷಗಳವರೆಗೆ ಅಂದರೆ 31.03.2030 ರವರೆಗೆ ವಿಸ್ತರಿಸಲಾಗಿದೆ.
ಇ. ಪರ್ಯಾಯ ಹೂಡಿಕೆ ನಿಧಿಗಳು (ಎಐಎಫ್ ಗಳು): ಸೆಕ್ಯುರಿಟಿಗಳಿಂದ ಬರುವ ಲಾಭಗಳ ಮೇಲೆ ಮೂಲಸೌಕರ್ಯ ಮತ್ತು ಅಂತಹ ಇತರ ವಲಯಗಳಲ್ಲಿ ಹೂಡಿಕೆಗಳನ್ನು ಕೈಗೊಳ್ಳುತ್ತಿರುವ ವರ್ಗ I ಮತ್ತು ವರ್ಗ II ಎಐಎಫ್ ಗಳಿಗೆ ತೆರಿಗೆಯ ಖಚಿತತೆಯನ್ನು ಒದಗಿಸಲು ಉದ್ದೇಶಿಸಲಾಗಿದೆ.
ಎಫ್. ಸಾರ್ವಭೌಮ ಮತ್ತು ಪಿಂಚಣಿ ನಿಧಿಗಳಿಗೆ ಹೂಡಿಕೆ ದಿನಾಂಕದ ವಿಸ್ತರಣೆ: ಸಾವರಿನ್ ಸಂಪತ್ತು ನಿಧಿಗಳು ಮತ್ತು ಪಿಂಚಣಿ ನಿಧಿಗಳಿಂದ ಮೂಲಸೌಕರ್ಯ ವಲಯಕ್ಕೆ ಹಣವನ್ನು ಉತ್ತೇಜಿಸಲು ಹೂಡಿಕೆ ಮಾಡುವ ದಿನಾಂಕವನ್ನು 31.03.2030 ರವರೆಗೆ ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸುವ ಪ್ರಸ್ತಾಪವಿದೆ.
ಈ ಎಲ್ಲಾ ಪ್ರಸ್ತಾವನೆಗಳಿಂದಾಗಿ ನೇರ ತೆರಿಗೆಗಳ ಮೂಲಕ ಸುಮಾರು 1 ಲಕ್ಷ ಕೋಟಿ ರೂ.ಗಳ ಆದಾಯ ಕಡಿಮೆಯಾಗಲಿದೆ ಎಂದು ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣವನ್ನು ಮುಕ್ತಾಯಗೊಳಿಸುತ್ತಾ ಮಾಹಿತಿ ನೀಡಿದ್ದಾರೆ.
*****
(Release ID: 2098621)
Visitor Counter : 32
Read this release in:
English
,
Urdu
,
Hindi
,
Nepali
,
Marathi
,
Bengali
,
Punjabi
,
Gujarati
,
Odia
,
Tamil
,
Telugu
,
Malayalam