ಹಣಕಾಸು ಸಚಿವಾಲಯ
azadi ka amrit mahotsav

ಕೈಗಾರಿಕೆ:  ವಹಿವಾಟು ಸುಧಾರಣೆಗಳತ್ತ ಒಂದು ನೋಟ


ಕೈಗಾರಿಕಾ ವಲಯವು FY25 ರಲ್ಲಿ ಶೇ 6.2ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ, ವಿದ್ಯುತ್ ಮತ್ತು ನಿರ್ಮಾಣ ವಲಯಗಳಲ್ಲಿನ ಬಲವಾದ ಬೆಳವಣಿಗೆ ಇದಕ್ಕೆ ಕಾರಣ: ಆರ್ಥಿಕ ಸಮೀಕ್ಷೆ 2024-25

ವಾಹನ, ಎಲೆಕ್ಟ್ರಾನಿಕ್ಸ್ ಮತ್ತು ಔಷಧಿಗಳಂತಹ ಗ್ರಾಹಕ-ಕೇಂದ್ರಿತ ವಲಯಗಳು ಬೆಳವಣಿಗೆಯ ಪ್ರಮುಖ ಚಾಲಕ ಶಕ್ತಿಗಳಾಗಿ ಹೊರಹೊಮ್ಮಿವೆ

ವಸತಿ, ನಗರ ಮತ್ತು ಗ್ರಾಮೀಣ ಮೂಲಸೌಕರ್ಯಗಳ ಕುರಿತಾದ ಸರ್ಕಾರದ ಉಪಕ್ರಮಗಳು ಉಕ್ಕು ಉದ್ಯಮದ ಹೆಚ್ಚುತ್ತಿರುವ ಬೇಡಿಕೆಗೆ ಕಾರಣವಾಗಿವೆ

ಎಲೆಕ್ಟ್ರಾನಿಕ್ ವಸ್ತುಗಳ ದೇಶೀಯ ಉತ್ಪಾದನೆಯು FY15 ರಿಂದ FY24 ರವರೆಗೆ ಶೇ 17.5ರಷ್ಟು CAGRನ ಗಮನಾರ್ಹ ಬೆಳವಣಿಗೆಯನ್ನು ದಾಖಲಿಸಿದೆ

ವೈದ್ಯಕೀಯ ಸಾಧನಗಳ ಉದ್ಯಮವು ಶೇ 15ರಷ್ಟು CAGRನೊಂದಿಗೆ ಕ್ಷಿಪ್ರ ಬೆಳವಣಿಗೆಯನ್ನು ಕಾಣುತ್ತಿದೆ

ಸರ್ಕಾರವು ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಇಂಡಸ್ಟ್ರಿ 4.0 ಅನ್ನು ಉತ್ತೇಜಿಸುತ್ತಿದೆ; ಸ್ಮಾರ್ಟ್ ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಮತ್ತು ರಾಪಿಡ್ ಟ್ರಾನ್ಸ್ಫಾರ್ಮೇಷನ್ ಹಬ್ (ಸಮರ್ಥ್) ಉದ್ಯೋಗ ಕೇಂದ್ರಗಳ ಸ್ಥಾಪನೆಗೆ ಬೆಂಬಲ ನೀಡುತ್ತಿದೆ

ಜಾಗತಿಕವಾಗಿ ಟಾಪ್ 10 ಪೇಟೆಂಟ್ ಫೈಲಿಂಗ್ ಕಚೇರಿಗಳಲ್ಲಿ ಭಾರತವು ಆರನೇ ಸ್ಥಾನದಲ್ಲಿದೆ

Posted On: 31 JAN 2025 2:07PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ 2024-25 ರ ಪ್ರಕಾರ, GDP ಯ ಮೊದಲ ಮುಂಗಡ ಅಂದಾಜಿನ ಪ್ರಕಾರ, ವಿದ್ಯುತ್ ಮತ್ತು ನಿರ್ಮಾಣ ವಲಯಗಳಲ್ಲಿನ ಬಲವಾದ ಬೆಳವಣಿಗೆಯಿಂದಾಗಿ, ಕೈಗಾರಿಕಾ ವಲಯವು FY-25 ರಲ್ಲಿ ಶೇ 6.2 ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ. ಸಂಶೋಧನೆ ಮತ್ತು ಅಭಿವೃದ್ಧಿ (R&D) ಹೂಡಿಕೆಗಳನ್ನು ಪ್ರೋತ್ಸಾಹಿಸುವುದು, ನಾವೀನ್ಯತೆಗಳನ್ನು ಬೆಂಬಲಿಸುವುದು, ಸಣ್ಣ ಉತ್ಪಾದಕರ ಬೆಳವಣಿಗೆಯನ್ನು ಹೆಚ್ಚಿಸುವುದು ಮತ್ತು ಅವರನ್ನು ಔಪಚಾರಿಕ ವಲಯಕ್ಕೆ ತರುವುದು ಮುಂತಾದ ಕ್ರಮಗಳು ವಿವಿಧ ವಲಯಗಳಲ್ಲಿ ಬೆಳವಣಿಗೆಗೆ ಉತ್ತೇಜನ ನೀಡುತ್ತವೆ ಎಂದು ಸಮೀಕ್ಷೆ ತಿಳಿಸಿದೆ.

ಸಮೀಕ್ಷೆಯು, ವಾಹನಗಳು, ಎಲೆಕ್ಟ್ರಾನಿಕ್ಸ್ ಮತ್ತು ಔಷಧಿಗಳಂತಹ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡಿರುವ ವಲಯಗಳು ಬೆಳವಣಿಗೆಗೆ ಪ್ರೇರಕ ಶಕ್ತಿಗಳಾಗಿ ಹೊರಹೊಮ್ಮಿವೆ ಎಂದು ತಿಳಿಸಿದೆ. ಜಾಗತಿಕ ಉತ್ಪಾದನೆಯಲ್ಲಿ 2.8 ಪ್ರತಿಶತದಷ್ಟು ಪಾಲು ಹೊಂದಿರುವ ಮತ್ತು ಭಾರತ ಹಾಗೂ ಚೀನಾದಂತಹ ಅಭಿವೃದ್ಧಿಶೀಲ ರಾಷ್ಟ್ರಗಳತ್ತ ಉತ್ಪಾದನಾ ಚಟುವಟಿಕೆಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಜಾಗತಿಕ ಕೈಗಾರಿಕಾ ವೈವಿಧ್ಯೀಕರಣದ ಪ್ರವೃತ್ತಿಯಿಂದ ಭಾರತವು ಲಾಭ ಪಡೆಯುವ ಉತ್ತಮ ಅವಕಾಶ ಹೊಂದಿದೆ ಎಂದು ಆರ್ಥಿಕ ಸಮೀಕ್ಷೆಯು ಆಶಾದಾಯಕವಾಗಿ ಅಭಿಪ್ರಾಯಪಟ್ಟಿದೆ.

ಪ್ರಮುಖ ಹೂಡಿಕೆ ಕೈಗಾರಿಕೆಗಳು

 

1. ಸಿಮೆಂಟ್


ಭಾರತವು ಚೀನಾ ನಂತರ ವಿಶ್ವದ ಎರಡನೇ ಅತಿದೊಡ್ಡ ಸಿಮೆಂಟ್ ಉತ್ಪಾದಕ ಎಂದು ಸಮೀಕ್ಷೆ ಹೇಳುತ್ತದೆ. ಸರ್ಕಾರವು ಹೆದ್ದಾರಿಗಳು, ರೈಲ್ವೆಗಳು ಮತ್ತು ವಸತಿ ಯೋಜನೆಗಳಂತಹ ಬೃಹತ್ ಯೋಜನೆಗಳ ಮೇಲೆ ಗಮನ ಕೇಂದ್ರೀಕರಿಸುತ್ತಿರುವುದು, ಗ್ರಾಮೀಣಾಭಿವೃದ್ಧಿ ಮತ್ತು ಕೈಗಾರಿಕಾ ಬೆಳವಣಿಗೆಯೊಂದಿಗೆ ಸೇರಿ, ಸಿಮೆಂಟ್ ಬೇಡಿಕೆಯನ್ನು ಗಣನೀಯವಾಗಿ ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ತಿಳಿಸುತ್ತದೆ.

 

2. ಉಕ್ಕು ಕೈಗಾರಿಕೆ


ಸಮೀಕ್ಷೆಯ ಪ್ರಕಾರ, FY25ರ ಏಪ್ರಿಲ್-ನವೆಂಬರ್ ಅವಧಿಯಲ್ಲಿ ದೇಶದ ಕಚ್ಚಾ ಉಕ್ಕು ಉತ್ಪಾದನೆ ಶೇ 3.3ರಷ್ಟು ಮತ್ತು ಫಿನಿಶ್ಡ್ ಸ್ಟೀಲ್ ಉತ್ಪಾದನೆ ಶೇ 4.6ರಷ್ಟು ಬೆಳವಣಿಗೆ ಕಂಡಿದೆ. ಚಾಲ್ತಿಯಲ್ಲಿರುವ ಅಭಿವೃದ್ಧಿ ಯೋಜನೆಗಳು ಮತ್ತು ಸಾರ್ವಜನಿಕ ಮೂಲಸೌಕರ್ಯ ವೆಚ್ಚದಲ್ಲಿನ ಹೆಚ್ಚಳವು ಉಕ್ಕು ವಲಯದ ನಿರಂತರ ಬೆಳವಣಿಗೆಗೆ ಕಾರಣವಾಗಿದೆ. ವಸತಿ, ನಗರ ಮತ್ತು ಗ್ರಾಮೀಣ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸರ್ಕಾರದ ಉಪಕ್ರಮಗಳು ಹೆಚ್ಚುತ್ತಿರುವ ಬೇಡಿಕೆಗೆ ಪೂರಕವಾಗಿವೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.

 

3. ಬಂಡವಾಳ ಸರಕುಗಳು


ಸರ್ಕಾರವು ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಇಂಡಸ್ಟ್ರಿ 4.0 ಅನ್ನು ಸಕ್ರಿಯವಾಗಿ ಪ್ರೋತ್ಸಾಹಿಸುತ್ತಿದೆ, ಸ್ಮಾರ್ಟ್ ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಅಂಡ್ ರಾಪಿಡ್ ಟ್ರಾನ್ಸ್ಫಾರ್ಮೇಷನ್ ಹಬ್ (ಸಮರ್ಥ್) ಉದ್ಯೋಗ ಕೇಂದ್ರಗಳ ಸ್ಥಾಪನೆಗೆ ಬೆಂಬಲ ನೀಡುತ್ತಿದೆ.

 

4. ಆಟೋಮೊಬೈಲ್ ಉದ್ಯಮ


2024ನೇ ಹಣಕಾಸು ವರ್ಷದಲ್ಲಿ, ಉದ್ಯಮವು ಆಟೋ ಮೊಬೈಲ್ ದೇಶೀಯ ಮಾರಾಟದಲ್ಲಿ ಶೇಕಡಾ 12.5 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಈ ಕ್ಷೇತ್ರದ ಸಾಮರ್ಥ್ಯವನ್ನು ಗುರುತಿಸಿ, ಸರ್ಕಾರವು PLI ಯೋಜನೆಯನ್ನು ಒಂದು ವರ್ಷ ವಿಸ್ತರಿಸಿದೆ.

 

5. ಎಲೆಕ್ಟ್ರಾನಿಕ್ಸ್ ಉದ್ಯಮ 


ಆರ್ಥಿಕ ಸಮೀಕ್ಷೆಯು, ಎಲೆಕ್ಟ್ರಾನಿಕ್ ವಸ್ತುಗಳ ದೇಶೀಯ ಉತ್ಪಾದನೆಯು FY15 ರಲ್ಲಿ ₹1.90 ಲಕ್ಷ ಕೋಟಿಯಿಂದ FY24 ರಲ್ಲಿ ₹9.52 ಲಕ್ಷ ಕೋಟಿಗೆ ಗಣನೀಯವಾಗಿ ಏರಿಕೆಯಾಗಿದೆ, ಅಂದರೆ ಶೇ 17.5ರಷ್ಟು ವಾರ್ಷಿಕ ಸರಾಸರಿ ಬೆಳವಣಿಗೆ ದರವನ್ನು (CAGR) ದಾಖಲಿಸಿದೆ ಎಂದು ಗಮನಿಸಿದೆ ತಿಳಿಸಿದೆ. "ಮೇಕ್ ಇನ್ ಇಂಡಿಯಾ" ಮತ್ತು "ಡಿಜಿಟಲ್ ಇಂಡಿಯಾ"ದಂತಹ ಕಾರ್ಯಕ್ರಮಗಳು, ಉತ್ತಮ ಮೂಲಸೌಕರ್ಯ, ವ್ಯವಹಾರ ಸುಲಭತೆ ಮತ್ತು ವಿವಿಧ ಪ್ರೋತ್ಸಾಹಕಗಳು ದೇಶೀಯ ಉತ್ಪಾದನೆಯನ್ನು ಹೆಚ್ಚಿಸಿವೆ ಮತ್ತು ವಿದೇಶಿ ಹೂಡಿಕೆಗಳನ್ನು ಆಕರ್ಷಿಸಿವೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

 

6. ಜವಳಿ


ಜವಳಿ ಉದ್ಯಮವು ಪ್ರಮುಖ ಉದ್ಯೋಗ ಸೃಷ್ಟಿಕರ್ತವಾಗಿದೆ ಮತ್ತು ಇದು ಭಾರತದ ಉತ್ಪಾದನಾ GVA ಯ ಸುಮಾರು 11 ಪ್ರತಿಶತವನ್ನು ಹೊಂದಿದೆ ಎಂದು ಸಮೀಕ್ಷೆ ಹೇಳುತ್ತದೆ. ಭಾರತವು ಸೆಣಬಿನ ಪ್ರಮುಖ ಉತ್ಪಾದಕವಾಗಿದೆ ಮತ್ತು ಹತ್ತಿ, ರೇಷ್ಮೆ ಮತ್ತು ಮಾನವ ನಿರ್ಮಿತ ನಾರು ಉತ್ಪಾದನೆಯಲ್ಲಿ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ ಎಂದು ಸಮೀಕ್ಷೆ ಹೇಳುತ್ತದೆ.

 

7. ಔಷಧಗಳು


ಭಾರತೀಯ ಔಷಧೋದ್ಯಮವು ಪರಿಮಾಣದ ಪ್ರಕಾರ ವಿಶ್ವದಲ್ಲೇ ಮೂರನೇ ಅತಿದೊಡ್ಡದು ಎಂದು ಸಮೀಕ್ಷೆ ಎತ್ತಿ ತೋರಿಸುತ್ತದೆ. ಈ ಉದ್ಯಮವು ಜೆನೆರಿಕ್ ಔಷಧಿಗಳು, ಬಲ್ಕ್ ಡ್ರಗ್ಸ್, ಓವರ್-ದಿ-ಕೌಂಟರ್ ಮೆಡಿಕೇಶನ್ಸ್, ಲಸಿಕೆಗಳು, ಬಯೋಸಿಮಿಲರ್ ಗಳು ಮತ್ತು ಬಯೋಲಾಜಿಕ್ಸ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಒಳಗೊಂಡಿದೆ. ಇದು ಜಾಗತಿಕವಾಗಿ ತನ್ನ ಪ್ರಬಲ ಅಸ್ತಿತ್ವವನ್ನು ಸ್ಥಾಪಿಸಿದೆ. FY24 ರಲ್ಲಿ ಒಟ್ಟು ವಾರ್ಷಿಕ ವಹಿವಾಟು ₹4.17 ಲಕ್ಷ ಕೋಟಿ ಆಗಿದ್ದು, ಕಳೆದ ಐದು ವರ್ಷಗಳಲ್ಲಿ ಸರಾಸರಿ ಶೇ 10.1 ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಸಮೀಕ್ಷೆ ತಿಳಿಸುತ್ತದೆ. ಇದಲ್ಲದೆ, ಭಾರತದ ವೈದ್ಯಕೀಯ ಸಾಧನಗಳ ಉದ್ಯಮವು ಸುಮಾರು ಶೇ 15ರಷ್ಟು CAGRನೊಂದಿಗೆ ಕ್ಷಿಪ್ರ ಬೆಳವಣಿಗೆಯನ್ನು ಕಾಣುತ್ತಿದೆ ಎಂದು ಸಮೀಕ್ಷೆ ಹೇಳುತ್ತದೆ.

ಉನ್ನತ ಸಂಶೋಧನೆ ಮತ್ತು ಅಭಿವೃದ್ಧಿಯ ಆಕಾಂಕ್ಷೆಗಳ ನಡುವೆ ಬೆಳೆಯುತ್ತಿರುವ ನಾವೀನ್ಯತೆ

 

ಆರ್ಥಿಕ ಸಮೀಕ್ಷೆಯು ಭಾರತವು ಬಲಿಷ್ಠ ಬೌದ್ಧಿಕ ಆಸ್ತಿ ಪರಿಸರ ವ್ಯವಸ್ಥೆಯನ್ನು ಹೊಂದಿದೆ ಎಂದು ಹೇಳುತ್ತದೆ. WIPO 2022ರ ವರದಿಯ ಪ್ರಕಾರ, ಜಾಗತಿಕವಾಗಿ ಟಾಪ್ 10 ಪೇಟೆಂಟ್ ಫೈಲಿಂಗ್ ಕಚೇರಿಗಳಲ್ಲಿ ಭಾರತವು ಆರನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕುಗಳ ನೀತಿ 2016 ರಿಂದೀಚೆಗೆ, ಪೇಟೆಂಟ್ ಗಳು, ವಿನ್ಯಾಸಗಳು, ಹಕ್ಕುಸ್ವಾಮ್ಯಗಳು ಮತ್ತು ಟ್ರೇಡ್ಮಾರ್ಕ್ಗಳನ್ನು ನಿಯಂತ್ರಿಸುವ ನಿಯಮಗಳಿಗೆ ತಿದ್ದುಪಡಿಗಳನ್ನು ತರಲಾಗಿದ್ದು, ಇದರಿಂದ ಅರ್ಜಿ ಪ್ರಕ್ರಿಯೆಗಳು ಸುಗಮವಾಗಿವೆ ಮತ್ತು ಅನುಸರಣೆಯ ತೊಂದರೆಗಳು ಕಡಿಮೆಯಾಗಿವೆ ಎಂದು ಸಮೀಕ್ಷೆ ತಿಳಿಸುತ್ತದೆ. 2024 ರ ಪೇಟೆಂಟ್ (ತಿದ್ದುಪಡಿ) ನಿಯಮಗಳು ಪೇಟೆಂಟ್ ಪ್ರಕ್ರಿಯೆ, ಫೈಲಿಂಗ್ ಮತ್ತು ನಿರ್ವಹಣೆಯನ್ನು ಮತ್ತಷ್ಟು ಸರಳಗೊಳಿಸಿವೆ ಎಂದು ಸಮೀಕ್ಷೆ ಸೇರಿಸುತ್ತದೆ.

ಭಾರತವು ಉತ್ಪಾದನಾ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಸಾಧಿಸಲು, ಸರ್ಕಾರಗಳ ಎಲ್ಲಾ ಹಂತಗಳು, ಖಾಸಗಿ ವಲಯ, ಕೌಶಲ್ಯ ಅಭಿವೃದ್ಧಿ ಪರಿಸರ ವ್ಯವಸ್ಥೆ, ಶಿಕ್ಷಣ ಸಂಸ್ಥೆಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು ಮತ್ತು ಹಣಕಾಸು ಪಾಲುದಾರರ ಸಮನ್ವಯಿತ ಪ್ರಯತ್ನಗಳು ಅತ್ಯಗತ್ಯ ಎಂದು ಆರ್ಥಿಕ ಸಮೀಕ್ಷೆಯು ಆಶಾದಾಯಕವಾಗಿ ಪ್ರತಿಪಾದಿಸಿದೆ.


(Release ID: 2098310) Visitor Counter : 8