ಪ್ರಧಾನ ಮಂತ್ರಿಯವರ ಕಛೇರಿ
ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಅವರ ಭಾಷಣದ ಕನ್ನಡ ಅನುವಾದ
Posted On:
08 JAN 2025 8:10PM by PIB Bengaluru
ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ !
ಭಾರತ್ ಮಾತಾ ಕಿ ಜೈ !
ಆಂಧ್ರಪ್ರದೇಶ ರಾಜ್ಯಪಾಲರಾದ ಶ್ರೀ ಸೈಯದ್ ಅಬ್ದುಲ್ ನಜೀರ್ ಜಿ, ರಾಜ್ಯದ ಜನಪ್ರಿಯ ಮುಖ್ಯಮಂತ್ರಿ, ತನ್ನ ಆತ್ಮೀಯ ಸ್ನೇಹಿತರಾದ ಶ್ರೀ ಚಂದ್ರಬಾಬು ನಾಯ್ಡು, ನಟ-ರಾಜಕಾರಣಿ ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಜಿ, ಕೇಂದ್ರ ಸರ್ಕಾರದಲ್ಲಿನ ನನ್ನ ಸಹೋದ್ಯೋಗಿಗಳೇ, ರಾಜ್ಯ ಸರ್ಕಾರದ ಸಚಿವರುಗಳೇ, ಎಲ್ಲಾ ಸಂಸದರು ಮತ್ತು ಶಾಸಕರೇ, ಗೌರವಾನ್ವಿತ ಪ್ರಜೆಗಳು, ಸಹೋದರು ಮತ್ತು ಸಹೋದರಿಯರೇ,
आंध्र प्रजला प्रेमा मरियु अभिमा-नानकि ना कृतज्ञतलु।
ना अभिमानान्नि चुपिनचे अवकासम इप्पुडु लभिन-चिन्धि।
ಮೊದಲಿಗೆ ನಾನು ಸಿಂಹಾಚಲದ ವರಾಹ ಲಕ್ಷ್ಮೀ ನರಸಿಂಹಸ್ವಾಮಿಗೆ ನಮಿಸುತ್ತೇನೆ.
ಮಿತ್ರರೇ,
ನಿಮ್ಮೆಲ್ಲರ ಆಶೀರ್ವಾದದಿಂದಾಗಿ 60 ವರ್ಷಗಳಲ್ಲಿ ಮೊದಲ ಬಾರಿಗೆ ದೇಶವು ಮೂರನೇ ಬಾರಿಗೆ ನಮ್ಮ ಸರ್ಕಾರವನ್ನು ಆಯ್ಕೆ ಮಾಡಿದೆ ಮತ್ತು ಸರ್ಕಾರ ರಚನೆಯಾದ ನಂತರ ಆಂದ್ರಪ್ರದೇಶದಲ್ಲಿ ಇದು ನನ್ನ ಮೊದಲ ಅಧಿಕೃತ ಕಾರ್ಯಕ್ರಮವಾಗಿದೆ. ನೀವು ನನಗೆ ನೀಡಿದ ಅದ್ಭುತ ಸ್ವಾಗತ ಮತ್ತು ಗೌರವ ಮತ್ತು ಮಾರ್ಗದುದ್ದಕ್ಕೂ ಜನರು ನನ್ನನ್ನು ಆಶೀರ್ವದಿಸುತ್ತಿರುವ ರೀತಿ ಅದ್ಭುತವಾಗಿತ್ತು ಮತ್ತು ಹೃದಯ ತುಂಬಿಬಂದಿತು. ಇಂದು ಚಂದ್ರಬಾಬು ಅವರು ತಮ್ಮ ಭಾಷಣದಲ್ಲಿಎಲ್ಲಾ ಪ್ರಮುಖ ಅಂಶಗಳನ್ನು ಹಂಚಿಕೊಂಡರು. ಅವರ ಪ್ರತಿಯೊಂದು ಮಾತಿನ ಹಿಂದಿನ ಸ್ಫೂರ್ತಿ ಮತ್ತು ಭಾವನೆಯನ್ನು ನಾನು ಗೌರವಿಸುತ್ತೇನೆ ಮತ್ತು ಆಂಧ್ರದ ಜನರು ಮತ್ತು ದೇಶದ ಜನರೊಂದಿಗೆ ಒಟ್ಟಾಗಿ ನಾವು ಖಂಡಿತವಾಗಿಯೂ ಈ ಗುರಿಗಳನ್ನು ಸಾಧಿಸುತ್ತೇವೆಂಬ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ.
ಮಿತ್ರರೇ,
ನಮ್ಮ ಆಂಧ್ರಪ್ರದೇಶ ಸಾಧ್ಯತೆಗಳು ಮತ್ತು ಅವಕಾಶಗಳ ರಾಜ್ಯ ಹಾಗೂ ಸಾಮರ್ಥ್ಯ ಮತ್ತು ಬೆಳವಣಿಗೆಯ ರಾಜ್ಯವಾಗಿದೆ. ಆಂಧ್ರದ ಈ ಸಾಧ್ಯತೆಗಳು ಸಾಕಾರಗೊಂಡಾಗ, ಆಂಧ್ರ ಅಭಿವೃದ್ಧಿ ಹೊಂದುತ್ತದೆ ಮತ್ತು ಆಗ ಮಾತ್ರ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತದೆ. ಆದ್ದರಿಂದ ಆಂಧ್ರದ ಅಭಿವೃದ್ಧಿ ನಮ್ಮ ದೂರದೃಷ್ಟಿಯಾಗಿದೆ. ಆಂಧ್ರದ ಜನರಿಗೆ ಸೇವೆ ಸಲ್ಲಿಸುವುದು ನಮ್ಮ ಬದ್ಧತೆಯಾಗಿದೆ. 2047ರ ವೇಳೆಗೆ ಆಂಧ್ರಪ್ರದೇಶವನ್ನು ಸುಮಾರು 2.5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಈ ದೂರದೃಷ್ಟಿಯನ್ನು ಸಾಕಾರಗೊಳಿಸಲು ಚಂದ್ರಬಾಬುನಾಯ್ಡುಗಾರು ಅವರ ಸರ್ಕಾರವು "ಸ್ವರ್ಣ ಆಂಧ್ರ@2047" ಉಪಕ್ರಮವನ್ನು ಆರಂಭಿಸಿದೆ. ಕೇಂದ್ರದ ಎನ್‌ಡಿಎ ಸರ್ಕಾರವು ಆಂಧ್ರಪ್ರದೇಶದ ಪ್ರತಿಯೊಂದು ಗುರಿಯನ್ನು ಸಾಧಿಸಲು ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದೆ. ಅದಕ್ಕಾಗಿಯೇ ಕೇಂದ್ರ ಸರ್ಕಾರವು ತನ್ನ ಲಕ್ಷ ಕೋಟಿ ಮೌಲ್ಯದ ಯೋಜನೆಗಳಲ್ಲಿ ಆಂಧ್ರಪ್ರದೇಶಕ್ಕೆ ವಿಶೇಷ ಆದ್ಯತೆ ನೀಡುತ್ತಿದೆ. ಇಲ್ಲಿ ಇಂದು 2 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಗುತ್ತಿದೆ. ಈ ಯೋಜನೆಗಳು ಆಂಧ್ರಪ್ರದೇಶದ ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿವೆ. ಈ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ಆಂಧ್ರಪ್ರದೇಶ ಮತ್ತು ಇಡೀ ರಾಷ್ಟ್ರವನ್ನು ಅಭಿನಂದಿಸುತ್ತೇನೆ.
ಮಿತ್ರರೇ,
ಆಂಧ್ರಪ್ರದೇಶವು ತನ್ನ ನವೀನ ಸ್ವಭಾವದಿಂದಾಗಿ ಐಟಿ ಮತ್ತು ತಂತ್ರಜ್ಞಾನಕ್ಕೆ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ. ಸದ್ಯ ಆಂಧ್ರವು ಹೊಸ ಭವಿಷ್ಯದ ತಂತ್ರಜ್ಞಾನಗಳ ಕೇಂದ್ರವಾಗುವ ಸಮಯ. ಸದ್ಯ ಅಭಿವೃದ್ಧಿಪಡಿಸಲಾಗುತ್ತಿರುವ ತಂತ್ರಜ್ಞಾನಗಳಲ್ಲಿ, ನಾವು ಆರಂಭದಿಂದಲೇ ಮುಂಚೂಣಿಯಲ್ಲಿರಬೇಕು. ಇಂದು ಹಸಿರು ಹೈಡ್ರೋಜನ್ ಬಳಕೆಯು ಉದಯೋನ್ಮುಖ ಕ್ಷೇತ್ರವಾಗಿದೆ. ದೇಶವು 2023 ರಲ್ಲಿ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅನ್ನು ಆರಂಭಿಸಿದೆ. 2030ರ ವೇಳೆಗೆ 5 ಮಿಲಿಯನ್ ಮೆಟ್ರಿಕ್ ಟನ್ ಹಸಿರು ಹೈಡ್ರೋಜನ್ ಉತ್ಪಾದಿಸುವುದು ನಮ್ಮ ಗುರಿ! ಆರಂಭಿಕ ಹಂತದಲ್ಲಿ ಎರಡು ಹಸಿರು ಜಲಜನಕ ಕೇಂದ್ರಗಳನ್ನು ಸ್ಥಾಪಿಸಲಾಗುವುದು, ಅವುಗಳಲ್ಲಿ ಒಂದು ನಮ್ಮ ವಿಶಾಖಪಟ್ಟಣವಾಗಿರುತ್ತದೆ. ಭವಿಷ್ಯದಲ್ಲಿ, ವಿಶಾಖಪಟ್ಟಣಂ ಇಷ್ಟು ದೊಡ್ಡ ಪ್ರಮಾಣದ ಹಸಿರು ಹೈಡ್ರೋಜನ್ ಉತ್ಪಾದನಾ ಸೌಲಭ್ಯವನ್ನು ಹೊಂದಿರುವ ವಿಶ್ವದ ಕೆಲವೇ ನಗರಗಳಲ್ಲಿ ಒಂದಾಗಲಿದೆ. ಈ ಹಸಿರು ಹೈಡ್ರೋಜನ್ ಕೇಂದ್ರವು ಹಲವು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಹೆಚ್ಚುವರಿಯಾಗಿ, ಆಂಧ್ರಪ್ರದೇಶದಲ್ಲಿ ಉತ್ಪಾದನೆಗೆ ಪೂರಕ ವ್ಯವಸ್ಥೆಯನ್ನೂ ಸಹ ಅಭಿವೃದ್ಧಿಗೊಳ್ಳುತ್ತದೆ
ಮಿತ್ರರೇ,
ನಕ್ಕಪಲ್ಲಿಯಲ್ಲಿ ಬೃಹತ್ ಔಷಧ (ಬಲ್ಕ್ ಡ್ರಗ್ ) ಪಾರ್ಕ್ ಯೋಜನೆಗೆ ಇಂದು ಶಂಕುಸ್ಥಾಪನೆ ನೆರವೇರಿಸುವ ಅವಕಾಶ ನನಗೆ ದೊರಕಿತ್ತು. ದೇಶದಲ್ಲಿ ಇಂತಹ ಪಾರ್ಕ್ ಸ್ಥಾಪನೆಯಾಗುತ್ತಿರುವ ಮೂರು ರಾಜ್ಯಗಳಲ್ಲಿ ಆಂಧ್ರಪ್ರದೇಶವೂ ಒಂದು. ಈ ಪಾರ್ಕ್ ಔಷಧ ಉತ್ಪಾದನೆ ಮತ್ತು ಸಂಶೋಧನೆಗೆ ಅತ್ಯುತ್ತಮ ಮೂಲಸೌಕರ್ಯವನ್ನು ಹೊಂದಿರುತ್ತದೆ. ಇದು ಹೂಡಿಕೆದಾರರ ಉತ್ಸಾಹವನ್ನು ಹೆಚ್ಚಿಸುತ್ತದೆ ಮತ್ತು ಇಲ್ಲಿನ ಔಷಧ ಕಂಪನಿಗಳಿಗೆ ಪ್ರಯೋಜನವನ್ನು ನೀಡುತ್ತದೆ.
ಮಿತ್ರರೇ,
ನಮ್ಮ ಸರ್ಕಾರ ನಗರೀಕರಣವನ್ನು ಒಂದು ಅವಕಾಶವೆಂದು ಪರಿಗಣಿಸುತ್ತದೆ. ನಾವು ಆಂಧ್ರಪ್ರದೇಶವನ್ನು ಹೊಸ ಯುಗದ ನಗರೀಕರಣಕ್ಕೆ ಮಾದರಿಯನ್ನಾಗಿ ಮಾಡಲು ಬಯಸುತ್ತೇವೆ. ಈ ದೂರದೃಷ್ಟಿಯನ್ನು ಸಾಕಾರಗೊಳಿಸಲು ಇಂದು, ಕ್ರಿಸ್ ಸಿಟಿ ಎಂದೂ ಕರೆಯಲ್ಪಡುವ ಕೃಷ್ಣಪಟ್ಟಣ ಕೈಗಾರಿಕಾ ಪ್ರದೇಶಕ್ಕೆ ಅಡಿಪಾಯ ಹಾಕಲಾಗಿದೆ. ಈ ಸ್ಮಾರ್ಟ್ ಸಿಟಿ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ನ ಭಾಗವಾಗಲಿದೆ. ಇದು ಆಂಧ್ರಪ್ರದೇಶಕ್ಕೆ ಸಾವಿರಾರು ಕೋಟಿ ಹೂಡಿಕೆಯನ್ನು ತರುತ್ತದೆ ಮತ್ತು ಲಕ್ಷಾಂತರ ಕೈಗಾರಿಕಾ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ಮಿತ್ರರೇ,
ಆಂಧ್ರಪ್ರದೇಶವು ಶ್ರೀ ಸಿಟಿಯೊಂದಿಗೆ ಉತ್ಪಾದನಾ ಕೇಂದ್ರವಾಗಿರುವುದರಿಂದ ಈಗಾಗಲೇ ಪ್ರಯೋಜನ ಪಡೆಯುತ್ತಿದೆ. ಕೈಗಾರಿಕಾ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ಆಂಧ್ರಪ್ರದೇಶವನ್ನು ದೇಶದ ಅಗ್ರ ರಾಜ್ಯಗಳಲ್ಲಿ ಒಂದನ್ನಾಗಿ ಮಾಡುವುದು ನಮ್ಮ ಪ್ರಯತ್ನ. ಉತ್ಪಾದನೆಯನ್ನು ಉತ್ತೇಜಿಸಲು, ನಮ್ಮ ಸರ್ಕಾರ ಪಿಎಲ್ ಐ ನಂತಹ ಯೋಜನೆಗಳನ್ನು ನಡೆಸುತ್ತಿದೆ. ಅದರ ಪರಿಣಾಮವಾಗಿ ಇಂದು ಭಾರತವು ಹಲವು ಬಗೆಯ ಉತ್ಪನ್ನಗಳ ತಯಾರಿಕೆಯಲ್ಲಿ ವಿಶ್ವದ ಅಗ್ರ ರಾಷ್ಟ್ರಗಳಲ್ಲಿ ಒಂದಾಗಿದೆ.
ಮಿತ್ರರೇ,
ಹೊಸ ವಿಶಾಖಪಟ್ಟಣಂ ನಗರದಲ್ಲಿ ಇಂದು ದಕ್ಷಿಣ ಕರಾವಳಿ ರೈಲ್ವೆ ವಲಯದ ಪ್ರಧಾನ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಆಂಧ್ರಪ್ರದೇಶದ ಅಭಿವೃದ್ಧಿಗೆ ಇದು ಬಹಳ ಮುಖ್ಯ. ಬಹಳ ದಿನಗಳಿಂದ ಪ್ರತ್ಯೇಕ ರೈಲ್ವೆ ವಲಯದ ಬೇಡಿಕೆ ಇತ್ತುಮತ್ತು ಇಂದು ಈ ಕನಸು ನನಸಾಗುತ್ತಿದೆ. ದಕ್ಷಿಣ ಕರಾವಳಿ ರೈಲ್ವೆ ವಲಯದ ಪ್ರಧಾನ ಕಚೇರಿ ಸ್ಥಾಪನೆಯಾದ ನಂತರ, ಕೃಷಿ ಮತ್ತು ವ್ಯಾಪಾರ ಸಂಬಂಧಿತ ಚಟುವಟಿಕೆಗಳು ಈ ಪ್ರದೇಶದಾದ್ಯಂತ ಮತ್ತಷ್ಟು ವಿಸ್ತರಣೆಗೊಳ್ಳಲಿವೆ. ಹೆಚ್ಚುವರಿಯಾಗಿ, ಪ್ರವಾಸೋದ್ಯಮ ವಲಯ ಮತ್ತು ಸ್ಥಳೀಯ ಆರ್ಥಿಕತೆಯು ಬೆಳವಣಿಗೆಗೆ ಹೊಸ ಅವಕಾಶಗಳನ್ನು ಪಡೆಯುತ್ತದೆ. ಸಾವಿರಾರು ಕೋಟಿ ಮೌಲ್ಯದ ಸಂಪರ್ಕ ಸಂಬಂಧಿತ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕೂಡ ಇಂದು ಇಲ್ಲಿ ನಡೆದಿದೆ. ರೈಲ್ವೆ ವಲಯದಲ್ಲಿ ಶೇ.100ರಷ್ಟು ವಿದ್ಯುದೀಕರಣ ಪೂರ್ಣಗೊಂಡ ರಾಜ್ಯಗಳಲ್ಲಿ ಆಂಧ್ರಪ್ರದೇಶವೂ ಸೇರಿದೆ. ಅಮೃತ ಭಾರತ ನಿಲ್ದಾಣ ಯೋಜನೆಯಡಿಯಲ್ಲಿ ಆಂಧ್ರಪ್ರದೇಶದಲ್ಲಿ 70ಕ್ಕೂ ಅಧಿಕ ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆಂಧ್ರ ಪ್ರದೇಶದ ಜನರ ಪ್ರಯಾಣದ ಅನುಕೂಲಕ್ಕಾಗಿ ಏಳು ವಂದೇ ಭಾರತ್ ರೈಲುಗಳು ಮತ್ತು ಅಮೃತ್ ಭಾರತ್ ರೈಲುಗಳನ್ನು ಸಹ ಓಡಿಸಲಾಗುತ್ತಿದೆ.
ಮಿತ್ರರೇ,
ಆಂಧ್ರಪ್ರದೇಶದಲ್ಲಿ ಈ ಮೂಲಸೌಕರ್ಯ ಕ್ರಾಂತಿಯು ಉತ್ತಮ ಸಂಪರ್ಕ ಮತ್ತು ಸುಧಾರಿತ ಸೌಲಭ್ಯಗಳೊಂದಿಗೆ ರಾಜ್ಯದ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಲಿದೆ. ಇದು ಸುಗಮ ಜೀವನ ಮತ್ತು ವ್ಯಾಪಾರ ಮಾಡುವ ಉತ್ತಮ ವಾತಾವರಣವನ್ನು ಸೃಷ್ಟಿಸುತ್ತದೆ. ಇದು ಆಂಧ್ರಪ್ರದೇಶದ 2.5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿಗೆ ಅಡಿಪಾಯ ಹಾಕಲಿದೆ.
ಮಿತ್ರರೇ,
ಶತಮಾನಗಳಿಂದಲೂ ವಿಶಾಖಪಟ್ಟಣಂ ಮತ್ತು ಆಂಧ್ರಪ್ರದೇಶದ ಕರಾವಳಿ ಭಾರತದ ವ್ಯಾಪಾರಕ್ಕೆ ಹೆಬ್ಬಾಗಿಲುಗಳಾಗಿವೆ. ಇಂದಿಗೂ ಸಹ ವಿಶಾಖಪಟ್ಟಣಂ ಅದೇ ಮಟ್ಟದ ಪ್ರಾಮುಖ್ಯತೆ ಹೊಂದಿದೆ. ಸಾಗರಕ್ಕೆ ಸಂಬಂಧಿಸಿದ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ನಾವು ನೀಲಿ ಆರ್ಥಿಕತೆಯನ್ನು ಮಿಷನ್ ಮೋಡ್(ಸಮರೋಪಾದಿಯಲ್ಲಿ)ನಲ್ಲಿ ಉತ್ತೇಜಿಸುತ್ತಿದ್ದೇವೆ. ಅದಕ್ಕಾಗಿ ವಿಶಾಖಪಟ್ಟಣಂ ಮೀನುಗಾರಿಕಾ ಬಂದರನ್ನು ಆಧುನೀಕರಿಸಲಾಗುತ್ತಿದೆ. ಆಂಧ್ರಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ತೊಡಗಿರುವ ನಮ್ಮ ಸಹೋದರ ಸಹೋದರಿಯರ ಆದಾಯ ಮತ್ತು ವ್ಯಾಪಾರ ಬೆಳೆಯುವುದನ್ನು ಖಾತ್ರಿಪಡಿಸಿಕೊಳ್ಳಲು ನಾವು ಸಂಪೂರ್ಣ ಸೂಕ್ಷ್ಮತೆಯಿಂದ ಕೆಲಸ ಮಾಡುತ್ತಿದ್ದೇವೆ. ನಾವು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ನಂತಹ ಸೌಲಭ್ಯಗಳನ್ನು ಒದಗಿಸಿದ್ದೇವೆ. ಸಾಗರದಲ್ಲಿ ಸುರಕ್ಷತೆಗಾಗಿ ನಾವು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ.
ಮಿತ್ರರೇ,
ದೇಶದ ಪ್ರತಿಯೊಂದು ವಲಯದಲ್ಲೂ ಎಲ್ಲರನ್ನೂ ಒಳಗೊಂಡ ಮತ್ತು ಸಮಗ್ರ ಅಭಿವೃದ್ಧಿಯಾಗಬೇಕು, ಇದರಿಂದ ಅಭಿವೃದ್ಧಿಯ ಪ್ರಯೋಜನಗಳು ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪುತ್ತವೆ ಎಂಬುದು ನಮ್ಮ ಪ್ರಯತ್ನವಾಗಿದೆ. ಅದನ್ನು ಸಾಧಿಸಲು, ಎನ್‌ಡಿಎ ಸರ್ಕಾರವು ಸಮೃದ್ಧ ಮತ್ತು ಆಧುನಿಕ ಆಂಧ್ರಪ್ರದೇಶದ ಸೃಷ್ಟಿಗೆ ಬದ್ಧವಾಗಿದೆ. ಇಂದು ಉದ್ಘಾಟನೆಯಾಗುತ್ತಿರುವ ಯೋಜನೆಗಳು ಆಂಧ್ರದ ಜನರ ಸಮೃದ್ಧಿಯನ್ನು ಖಾತ್ರಿಪಡಿಸುತ್ತವೆ. ಮತ್ತೊಮ್ಮೆ, ಈ ಯೋಜನೆಗಳಿಗಾಗಿ ನಿಮ್ಮೆಲ್ಲರನ್ನೂ ನಾನು ಅಭಿನಂದಿಸುತ್ತೇನೆ.
ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು!
ಘೋಷಣೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಯಥಾವತ್ ಅನುವಾದವಲ್ಲ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಮಾತನಾಡಿದರು.
*****
(Release ID: 2091703)
Visitor Counter : 7