ಪ್ರಧಾನ ಮಂತ್ರಿಯವರ ಕಛೇರಿ
ರೋಜ್ ಗಾರ್ ಮೇಳದಡಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಹೊಸದಾಗಿ ನೇಮಕಗೊಂಡಿರುವ 71 ಸಾವಿರಕ್ಕೂ ಅಧಿಕ ಉದ್ಯೋಗಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ರೋಜ್‌ಗಾರ್ ಮೇಳಗಳು ಯುವಕರನ್ನು ಸಶಕ್ತಗೊಳಿಸುತ್ತಿವೆ ಮತ್ತು ಅವರ ಸಾಮರ್ಥ್ಯವನ್ನು ಸಮರ್ಪಕವಾಗಿ ಗುರುತಿಸುತ್ತಿವೆ; ಹೊಸದಾಗಿ ನೇಮಕಗೊಂಡು ಸೇರ್ಪಡೆಗೊಂಡವರಿಗೆ ಶುಭಾಶಯಗಳು: ಪ್ರಧಾನಮಂತ್ರಿ
ಇಂದಿನ ಭಾರತದ ಯುವಜನತೆ ಹೊಸ ಆತ್ಮವಿಶ್ವಾಸದಿಂದ ಕೂಡಿದ್ದು, ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ವಿಯಾಗುತ್ತಿದ್ದಾರೆ: ಪ್ರಧಾನಮಂತ್ರಿ
ನವ ಭಾರತವನ್ನು ನಿರ್ಮಿಸಲು ದಶಕಗಳಿಂದ ದೇಶವು ಆಧುನಿಕ ಶಿಕ್ಷಣ ವ್ಯವಸ್ಥೆಯ ಅಗತ್ಯತೆಯನ್ನು ಬಯಸುತ್ತಿತ್ತು, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ದೇಶವು ಈಗ ಆ ದಿಕ್ಕಿನಲ್ಲಿ ಮುನ್ನಡೆದಿದೆ: ಪ್ರಧಾನಮಂತ್ರಿ
ನಮ್ಮ ಸರ್ಕಾರದ ನೀತಿಗಳು ಮತ್ತು ನಿರ್ಧಾರಗಳಿಂದಾಗಿ ಇಂದು ಗ್ರಾಮೀಣ ಭಾರತದಲ್ಲಿಯೂ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ, ಹೆಚ್ಚಿನ ಸಂಖ್ಯೆಯ ಯುವಜನತೆ ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಪಡೆದಿದ್ದಾರೆ, ಅವರಿಗೆ ತಮ್ಮ ಆಯ್ಕೆಯ ಕೆಲಸ ಮಾಡಲು ಅವಕಾಶ ದೊರಕಿದೆ: ಪ್ರಧಾನಮಂತ್ರಿ
ಮಹಿಳೆಯರನ್ನು ಪ್ರತಿಯೊಂದು ವಲಯದಲ್ಲೂ ಸ್ವಾವಲಂಬಿಗಳನ್ನಾಗಿ ಮಾಡುವುದು ನಮ್ಮ ಪ್ರಯತ್ನ: ಪ್ರಧಾನಮಂತ್ರಿ
Posted On:
23 DEC 2024 12:54PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಪರೆನ್ಸ್ ಮೂಲಕ ರೋಜ್ ಗಾರ್ ಮೇಳವನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಹೊಸದಾಗಿ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ನೇಮಕಗೊಂಡಿರುವ ಸುಮಾರು 71 ಸಾವಿರಕ್ಕೂ ಅಧಿಕ ಯುವಜನತೆಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ರೋಜ್‌ಗಾರ್ ಮೇಳ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ಪ್ರಧಾನಮಂತ್ರಿಯವರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಇದು ರಾಷ್ಟ್ರ ನಿರ್ಮಾಣ ಮತ್ತು ಸ್ವಯಂ ಸಬಲೀಕರಣಕ್ಕೆ ಕೊಡುಗೆ ನೀಡಲು ಅರ್ಥಪೂರ್ಣ ಅವಕಾಶಗಳನ್ನು ಒದಗಿಸುವ ಮೂಲಕ ಯುವಕರನ್ನು ಸಶಕ್ತಗೊಳಿಸುತ್ತದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಕಳೆದ ರಾತ್ರಿಯಷ್ಟೇ ಕುವೈತ್‌ನಿಂದ ವಾಪಸ್ ಬಂದೆ, ಅಲ್ಲಿ ಭಾರತೀಯ ಯುವಜನತೆ ಮತ್ತು ವೃತ್ತಿಪರರೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಿದೆ ಎಂದರು. ಮತ್ತು ಅಲ್ಲಿಂದ ವಾಪಸ್ಸಾದ ನಂತರ ದೇಶದ ಯುವಕರೊಂದಿಗೆ ಮೊದಲ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಬಹಳ ಆಹ್ಲಾದಕರ ಹಾಗೂ ಕಾಕತಾಳೀಯವಾಗಿದೆ. “ದೇಶದ ಸಾವಿರಾರು ಯುವಕರು ಇಂದು ಹೊಸ ಆರಂಭವನ್ನು ಕಾಣುತ್ತಿದ್ದಾರೆ, ಅವರ ವರ್ಷಗಳ ಕನಸುಗಳು ನನಸಾಗಿವೆ, ವರ್ಷಗಳ ಕಠಿಣ ಪರಿಶ್ರಮವು ಫಲ ನೀಡಿದೆ. 2024ರ ಈ ನಿರ್ಗಮಿಸುತ್ತಿರುವ ವರ್ಷವು ನಿಮಗೆ ಹೊಸ ಸಂತೋಷವನ್ನು ತರುತ್ತಿದೆ. ನಿಮ್ಮೆಲ್ಲರಿಗೂ ಮತ್ತು ನಿಮ್ಮ ಕುಟುಂಬಗಳಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ’’ ಎಂದು ಪ್ರಧಾನಮಂತ್ರಿ ಹೇಳಿದರು.
ಸರ್ಕಾರ ರೋಜ್ ಗಾರ್ ಮೇಳದಂತಹ ಉಪಕ್ರಮಗಳ ಮೂಲಕ ಭಾರತದ ಯುವಜನತೆಯ ಸಂಪೂರ್ಣ ಸಾಮಥ್ಯವನ್ನು ಬಳಕೆ ಮಾಡಿಕೊಳ್ಳಲು ಆದ್ಯತೆ ನೀಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕಳೆದ 10 ವರ್ಷಗಳಿಂದೀಚೆಗೆ ಸರ್ಕಾರದ ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳಿಗೆ ಸರ್ಕಾರಿ ಉದ್ಯೋಗಗಳನ್ನು ದೊರಕಿಸಿಕೊಡಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಇಂದು 71 ಸಾವಿರಕ್ಕೂ ಅಧಿಕ ಮಂದಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ ಎಂದು ಪ್ರಧಾನಮಂತ್ರಿ ಪ್ರಮುಖವಾಗಿ ಪ್ರಸ್ತಾಪಿಸಿದರು. ಕಳೆದ ಒಂದೂವರೆ ವರ್ಷಗಳಲ್ಲಿ ಸುಮಾರು 10 ಲಕ್ಷ ಖಾಯಂ ಸರ್ಕಾರಿ ಉದ್ಯೋಗಗಳನ್ನು ನೀಡಲಾಗಿದ್ದು, ಇದು ಗಮನಾರ್ಹ ದಾಖಲೆಯಾಗಿದೆ ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. ಈ ಉದ್ಯೋಗಗಳನ್ನು ಸಂಪೂರ್ಣ ಪಾರದರ್ಶಕತೆಯೊಂದಿಗೆ ಒದಗಿಸಲಾಗುತ್ತಿದೆ ಮತ್ತು ಹೊಸದಾಗಿ ನೇಮಕಗೊಂಡವರು ರಾಷ್ಟ್ರಕ್ಕೆ ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ದೇಶದ ಅಭಿವೃದ್ಧಿಯು ಅದರ ಯುವಜನತೆಯ ಪರಿಶ್ರಮ, ಸಾಮರ್ಥ್ಯ ಮತ್ತು ನಾಯಕತ್ವದ ಮೇಲೆ ಅವಲಂಬನೆಯಾಗಿದೆ ಎಂದು ಪ್ರಧಾನಿ ಬಲವಾಗಿ ಪ್ರತಿಪಾದಿಸಿದರು. 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಬದ್ಧವಾಗಿದೆ ಏಕೆಂದರೆ ದೇಶದ ನೀತಿಗಳು ಮತ್ತು ನಿರ್ಧಾರಗಳು ತನ್ನ ಪ್ರತಿಭಾವಂತ ಯುವಕರನ್ನು ಸಬಲೀಕರಣಗೊಳಿಸುವತ್ತ ಗಮನಹರಿಸುತ್ತವೆ. ಕಳೆದ ದಶಕದಲ್ಲಿ ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತ, ಸ್ಟಾರ್ಟಪ್ ಇಂಡಿಯಾ, ಸ್ಟ್ಯಾಂಡ್-ಅಪ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದಂತಹ ಉಪಕ್ರಮಗಳು ಯುವಕರನ್ನು ಮುಂಚೂಣಿಯಲ್ಲಿ ತಂದು ನಿಲ್ಲಿಸಿವೆ ಎಂದು ಅವರು ಹೇಳಿದರು.
ಭಾರತವು ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಮತ್ತು ಮೂರನೇ ಅತಿದೊಡ್ಡ ನವೋದ್ಯಮ ಪೂರಕ ಪರಿಸರ ವ್ಯವಸ್ಥೆಯನ್ನು ಹೊಂದಿದೆ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು. ಭಾರತೀಯ ಯುವಕರು ಇಂದು ಹೊಸ ಆತ್ಮವಿಶ್ವಾಸದಿಂದ ಕೂಡಿದ್ದಾರೆ, ಅವರು ಎಲ್ಲಾ ಕ್ಷೇತ್ರಗಳಲ್ಲಿಯೂ ಮಿಂಚುತ್ತಿದ್ದಾರೆ. ಇಂದು ನವೋದ್ಯಮಗಳನ್ನು (ಸ್ಟಾರ್ಟ್‌ಅಪ್‌ಗಳನ್ನು) ಆರಂಭಿಸುತ್ತಿರುವ ಯುವ ಉದ್ಯಮಿಗಳು ಉತ್ಕೃಷ್ಟ ಬೆಂಬಲ ವ್ಯವಸ್ಥೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಅಂತೆಯೇ, ಕ್ರೀಡೆಯಲ್ಲಿ ವೃತ್ತಿಜೀವನವನ್ನು ಅನುಸರಿಸುವ ಯುವಕರು ತಾವು ವಿಫಲರಾಗುವುದಿಲ್ಲ ಎಂಬ ವಿಶ್ವಾಸ ಹೊಂದಿದ್ದಾರೆ, ಏಕೆಂದರೆ ಅವರು ಈಗ ಆಧುನಿಕ ತರಬೇತಿ ಸೌಲಭ್ಯಗಳು ಮತ್ತು ಪಂದ್ಯಾವಳಿಗಳಿಂದ ಬೆಂಬಲ ಪಡೆಯುತ್ತಿದ್ದಾರೆ ಎಂದರು. ದೇಶವು ಹಲವು ಕ್ಷೇತ್ರಗಳಲ್ಲಿ ಪರಿವರ್ತನೆಗೆ ಒಳಗಾಗುತ್ತಿದ್ದು, ಮೊಬೈಲ್ ಉತ್ಪಾದನೆಯಲ್ಲಿ ಎರಡನೇ ಅತಿ ದೊಡ್ಡ ದೇಶವಾಗುತ್ತಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಭಾರತವು ನವೀಕರಿಸಬಹುದಾದ ಇಂಧನ, ಸಾವಯವ ಕೃಷಿ, ಬಾಹ್ಯಾಕಾಶ, ರಕ್ಷಣೆ, ಪ್ರವಾಸೋದ್ಯಮ ಮತ್ತು ಯೋಗಕ್ಷೇಮದಲ್ಲಿ ದಾಪುಗಾಲು ಹಾಕುತ್ತಿದ್ದು, ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಮತ್ತು ಪ್ರತಿ ಕ್ಷೇತ್ರದಲ್ಲೂ ಹೊಸ ಎತ್ತರಕ್ಕೇರುತ್ತಿದೆ ಎಂದು ಅವರು ಹೇಳಿದರು.
ದೇಶದ ಪ್ರಗತಿಗೆ ಚಾಲನೆ ನೀಡಲು ಮತ್ತು ನವ ಭಾರತವನ್ನು ನಿರ್ಮಿಸಲು ಯುವ ಪ್ರತಿಭೆಗಳನ್ನು ಪೋಷಿಸುವುದು ಅತ್ಯಗತ್ಯ ಮತ್ತು ಈ ಜವಾಬ್ದಾರಿಯು ಶಿಕ್ಷಣ ವ್ಯವಸ್ಥೆಯ ಮೇಲಿದೆ ಎಂದು ಪ್ರಧಾನಿ ಬಲವಾಗಿ ಪ್ರತಿಪಾದಿಸಿದರು. ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ ಇಪಿ) ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳನ್ನು ಒದಗಿಸುವ ಆಧುನಿಕ ಶಿಕ್ಷಣ ವ್ಯವಸ್ಥೆಯೆಡೆಗೆ ಭಾರತವನ್ನು ಮುನ್ನಡೆಸುತ್ತಿದೆ. ಈ ಹಿಂದೆ ವ್ಯವಸ್ಥೆಗೆ ನಿರ್ಬಂಧವಿತ್ತು, ಆದರೆ ಈಗ ಅದು ಅಟಲ್ ಚಿಂತನಾ ಪ್ರಯೋಗಾಲಯ (ಟಿಂಕರಿಂಗ್ ಲ್ಯಾಬ್ಸ್) ಮತ್ತು ಪಿಎಂ-ಶ್ರೀ ಶಾಲೆಗಳಂತಹ ಉಪಕ್ರಮಗಳ ಮೂಲಕ ನಾವೀನ್ಯತೆಯನ್ನು ಉತ್ತೇಜಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಮಾತೃಭಾಷೆಯಲ್ಲಿ ಕಲಿಕೆ ಮತ್ತು ಪರೀಕ್ಷೆಗಳನ್ನು ಅನುಮತಿಸುವ ಮೂಲಕ ಮತ್ತು 13 ಭಾಷೆಗಳಲ್ಲಿ ನೇಮಕ ಪರೀಕ್ಷೆಗಳನ್ನು ಒದಗಿಸುವ ಮೂಲಕ ಗ್ರಾಮೀಣ ಯುವಕರು ಮತ್ತು ದುರ್ಬಲ ಸಮುದಾಯಗಳಿಗೆ ಭಾಷಾ ಅಡೆತಡೆಗಳನ್ನು ಸರ್ಕಾರ ಪರಿಹರಿಸಿದೆ. ಹೆಚ್ಚುವರಿಯಾಗಿ, ಕಾಯಂ ಸರ್ಕಾರಿ ಉದ್ಯೋಗಗಳಿಗಾಗಿ ವಿಶೇಷ ನೇಮಕಾತಿ ಅಭಿಯಾನಗಳಲ್ಲಿ ಗಡಿ ಪ್ರದೇಶಗಳ ಯುವಕರಿಗೆ ಕೋಟಾಗಳ ಮಿತಿಯನ್ನು ಹೆಚ್ಚಳ ಮಾಡಲಾಗಿದೆ. 50 ಸಾವಿರಕ್ಕೂ ಅಧಿಕ ಯುವಕರು ಇಂದು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಂದ ನೇಮಕಾತಿ ಪತ್ರಗಳನ್ನು ಸ್ವೀಕರಿಸಿದ್ದಾರೆ, ಇದು ಗಮನಾರ್ಹ ಸಾಧನೆಯನ್ನು ಗುರುತಿಸುತ್ತದೆ’’ ಎಂದು ಪ್ರಧಾನಮಂತ್ರಿ ತಿಳಿಸಿದರು.
ಇಂದು ಚೌಧರಿ ಚರಣ್ ಸಿಂಗ್ ಜಿ ಅವರ ಜಯಂತಿ, ಆ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ಈ ವರ್ಷ ಅವರಿಗೆ ಪ್ರತಿಷ್ಠಿತ ಭಾರತ ರತ್ನ ಗೌರವ ನೀಡುತ್ತಿರುವುದು ಸರ್ಕಾರಕ್ಕೆ ಹೆಮ್ಮೆಯ ಭಾವನೆ ತಂದಿದೆ ಎಂದರು. “ನಾವು ಈ ದಿನವನ್ನು ರೈತರ ದಿನವನ್ನಾಗಿ ಆಚರಿಸುತ್ತೇವೆ, ನಮಗೆ ಅನ್ನ ನೀಡುವ ರೈತರಿಗೆ ಗೌರವ ಸಲ್ಲಿಸುತ್ತೇವೆ. ಭಾರತದ ಪ್ರಗತಿಯು ಗ್ರಾಮೀಣ ಭಾರತದ ಪ್ರಗತಿಯನ್ನು ಅವಲಂಬಿಸಿದೆ ಎಂದು ಚೌಧರಿ ಸಾಹೇಬ್ ನಂಬಿದ್ದರು. ನಮ್ಮ ಸರ್ಕಾರದ ನೀತಿಗಳು ಗ್ರಾಮೀಣ ಪ್ರದೇಶಗಳಲ್ಲಿ, ವಿಶೇಷವಾಗಿ ಕೃಷಿಯಲ್ಲಿ ಯುವಕರಿಗೆ ಹೊಸ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ" ಎಂದು ಪ್ರಧಾನಮಂತ್ರಿ ಹೇಳಿದರು.
ಜೈವಿಕ ಅನಿಲ ಘಟಕಗಳನ್ನು ಸ್ಥಾಪಿಸುವ ಆ ಮೂಲಕ ಇಂಧನ ವಲಯದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಗೋಬರ್ ಧನ್ ಯೋಜನೆಯಂತಹ ಉಪಕ್ರಮಗಳ ಕುರಿತು ಪ್ರಧಾನಿ ಶ್ರೀ ನರೇಂದ್ರ ಮೋದಿ ಪುನರುಚ್ಚರಿಸಿದರು. ಕೃಷಿ ಮಾರುಕಟ್ಟೆಗಳನ್ನು ಸಂಪರ್ಕಿಸುವ ಇ-ನ್ಯಾಮ್ ಯೋಜನೆಯು ಹೊಸ ಉದ್ಯೋಗದ ಮಾರ್ಗಗಳನ್ನು ತೆರೆದಿದೆ ಮತ್ತು ಎಥೆನಾಲ್ ಮಿಶ್ರಣದ ಹೆಚ್ಚಳವು ರೈತರಿಗೆ ಲಾಭದಾಯಕವಾಗಿದೆ ಮತ್ತು ಸಕ್ಕರೆ ವಲಯದಲ್ಲಿ ಉದ್ಯೋಗಗಳನ್ನು ಸೃಷ್ಟಿಸಿದೆ. ಸುಮಾರು 9,000 ರೈತ ಉತ್ಪಾದಕ ಸಂಸ್ಥೆಗಳ (ಎಫ್‌ಪಿಒ) ಸ್ಥಾಪನೆಯು ಮಾರುಕಟ್ಟೆ ಲಭ್ಯತೆಯನ್ನು ಸುಧಾರಿಸಿದೆ ಮತ್ತು ಗ್ರಾಮೀಣ ಉದ್ಯೋಗಗಳನ್ನು ಹೇಗೆ ಸೃಷ್ಟಿಸಲಾಗುತ್ತಿದೆ ಎಂಬುದನ್ನು ಪ್ರಧಾನಮಂತ್ರಿ ಯೋಜನೆಗಳ ಸಹಿತ ವಿವರಿಸಿದರು. ಅಲ್ಲದೆ, ಸಾವಿರಾರು ಧಾನ್ಯ ಸಂಗ್ರಹ ಗೋದಾಮುಗಳನ್ನು ನಿರ್ಮಿಸಲು ಸರ್ಕಾರವು ಬೃಹತ್ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಇದರಿಂದ ಗಮನಾರ್ಹ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಅವಕಾಶಗಳನ್ನು ಒದಗಿಸುತ್ತದೆ ಎಂದರು.
ದೇಶದ ಪ್ರತಿಯೊಬ್ಬ ಪ್ರಜೆಗೂ ವಿಮಾ ವ್ಯಾಪ್ತಿಯನ್ನು ಒದಗಿಸಲು ಬಿಮಾ ಸಖಿ ಯೋಜನೆಯನ್ನು ಸರ್ಕಾರ ಆರಂಭಿಸಿದೆ ಎಂದ ಪ್ರಧಾನಮಂತ್ರಿ ಅವರು, ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಅಸಂಖ್ಯಾತ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದೆ ಎಂದರು. ಡ್ರೋಣ್ ದೀದಿ, ಲಖ್ ಪತಿ ದೀದಿ ಮತ್ತು ಬ್ಯಾಂಕ್ ಸಖಿ ಯೋಜನೆಗಳಂತಹ ಉಪಕ್ರಮಗಳು ಕೃಷಿ ಮತ್ತು ಗ್ರಾಮೀಣ ವಲಯಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತಿವೆ. "ಸಾವಿರಾರು ಮಹಿಳೆಯರು ಇಂದು ನೇಮಕಾತಿ ಪತ್ರಗಳನ್ನು ಸ್ವೀಕರಿಸಿದ್ದಾರೆ ಮತ್ತು ಅವರ ಯಶಸ್ಸು ಇತರರಿಗೆ ಸ್ಫೂರ್ತಿ ನೀಡುತ್ತದೆ. ಮಹಿಳೆಯರನ್ನು ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಾವಲಂಬಿಗಳನ್ನಾಗಿ ಮಾಡಲು ಸರ್ಕಾರ ಬದ್ಧವಾಗಿದೆ. 26 ವಾರಗಳ ಹೆರಿಗೆ ರಜೆ ನೀಡಲಾರಂಭಿಸಿರುವುದು ಲಕ್ಷಾಂತರ ಮಹಿಳೆಯರ ವೃತ್ತಿಜೀವನವನ್ನು ಕಾಪಾಡಿದೆ”ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಹಿಂದೆ ಪ್ರತ್ಯೇಕ ಶೌಚಾಲಯಗಳ ಕೊರತೆಯಿಂದಾಗಿ ಅನೇಕ ವಿದ್ಯಾರ್ಥಿನಿಯರು ಶಾಲೆಯಿಂದ ಹೊರಗುಳಿಯುವ ಪರಿಸ್ಥಿತಿ ಇತ್ತು, ಆದರೆ ಇಂದು ಸ್ವಚ್ಛ ಭಾರತ ಅಭಿಯಾನವು ಮಹಿಳೆಯರ ಪ್ರಗತಿಗೆ ಇದ್ದ ಅಡೆತಡೆಗಳನ್ನು ಹೇಗೆ ನಿವಾರಿಸಿದೆ ಎಂಬುದನ್ನು ಪ್ರಧಾನಮಂತ್ರಿ ವಿವರಿಸಿದರು. ಸುಕನ್ಯಾ ಸಮೃದ್ಧಿ ಯೋಜನೆಯು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುತ್ತಿದೆ ಎಂದು ಅವರು ಹೇಳಿದರು. ಅಲ್ಲದೆ, 30 ಕೋಟಿ ಮಹಿಳೆಯರಿಗೆ ಜನ್ ಧನ್ ಖಾತೆಗಳನ್ನು ತೆರೆದಿದ್ದು, ಅವರು ಸರ್ಕಾರದ ಯೋಜನೆಗಳಿಂದ ನೇರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದರು. “ಮುದ್ರಾ ಯೋಜನೆಯ ಮೂಲಕ ಮಹಿಳೆಯರು ಈಗ ಮೇಲಾಧಾರ ರಹಿತ( ಕೊಲ್ಯಾಟರಲ್ ಫ್ರೀ) ಸಾಲಗಳನ್ನು ಪಡೆಯಬಹುದು. ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಹಂಚಿಕೆಯಾದ ಹೆಚ್ಚಿನ ಮನೆಗಳು ಮಹಿಳೆಯರ ಹೆಸರಿನಲ್ಲಿವೆ ಎಂಬುದನ್ನು ಖಾತ್ರಿಪಡಿಸಲಾಗಿದೆ. ಪೋಷಣ್ ಅಭಿಯಾನ, ಸುರಕ್ಷಿತ ಮಾತೃತ್ವ ಅಭಿಯಾನ ಮತ್ತು ಆಯುಷ್ಮಾನ್ ಭಾರತದಂತಹ ಉಪಕ್ರಮಗಳು ಮಹಿಳೆಯರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುತ್ತವೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ನಾರಿ ಶಕ್ತಿ ವಂದನ ಅಧಿನಿಯಮವು ಮಹಿಳೆಯರಿಗೆ ವಿಧಾನಸಭೆಗಳು ಮತ್ತು ಲೋಕಸಭೆಯಲ್ಲಿ ಮೀಸಲಾತಿಯನ್ನು ಖಾತ್ರಿಪಡಿಸಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಲವಾಗಿ ಪ್ರತಿಪಾದಿಸಿ, ಇದು ರಾಷ್ಟ್ರದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಮುನ್ನಡೆಸುತ್ತದೆ ಎಂದರು.
ಇಂದು ನೇಮಕಾತಿ ಪತ್ರಗಳನ್ನು ಸ್ವೀಕರಿಸುತ್ತಿರುವ ಯುವ ವ್ಯಕ್ತಿಗಳು ಹೊಸದಾಗಿ ಬದಲಾಗಿರುವ ಸರ್ಕಾರಿ ವ್ಯವಸ್ಥೆಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ಕಳೆದೊಂದು ದಶಕದಲ್ಲಿ ಸರ್ಕಾರಿ ನೌಕರರ ಬದ್ಧತೆ ಮತ್ತು ಕಠಿಣ ಪರಿಶ್ರಮದಿಂದಾಗಿ ಸರ್ಕಾರಿ ಕಚೇರಿಗಳು ದಕ್ಷತೆ ಮತ್ತು ಉತ್ಪಾದಕತೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ಕಂಡಿವೆ ಎಂದರು.
ಹೊಸ ನೇಮಕಗೊಂಡವರು ತಮ್ಮ ಕಲಿಯುವ ಮತ್ತು ಬೆಳೆಯುವ ಉತ್ಸುಕತೆಯಿಂದಾಗಿ ಈ ಗುರಿಯನ್ನು ತಲುಪಿದ್ದಾರೆ ಮತ್ತು ಅವರ ಜೀವನದುದ್ದಕ್ಕೂ ಈ ಮನೋಭಾವವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ ಎಂದು ಪ್ರಧಾನಿ ಹೇಳಿದರು. ಐಗಾಟ್ (iGOT) ಕರ್ಮಯೋಗಿ ಪ್ಲಾಟಫಾರಂನಡಿ ಸರ್ಕಾರಿ ಉದ್ಯೋಗಿಗಳಿಗೆ ವಿವಿಧ ಕೋರ್ಸ್‌ಗಳ ಲಭ್ಯತೆಯನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು ಮತ್ತು ಈ ಡಿಜಿಟಲ್ ತರಬೇತಿ ಮಾದರಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವಂತೆ ಉತ್ತೇಜನ ನೀಡಿದರು. ಅಲ್ಲದೆ, ”ಇಂದು ನೇಮಕ ಪತ್ರಗಳನ್ನು ಸ್ವೀಕರಿಸುತ್ತಿರುವ ಅಭ್ಯರ್ಥಿಗಳನ್ನು ನಾನು ಮತ್ತೊಮ್ಮೆ ಅಭಿನಂದಿಸುತ್ತೇನೆ" ಎಂದು ಹೇಳಿ ಪ್ರಧಾನಮಂತ್ರಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಹಿನ್ನೆಲೆ
ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಧಾನಮಂತ್ರಿ ಅವರ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ ರೋಜ್‌ಗಾರ್ ಮೇಳವು ಒಂದು ಮಹತ್ವದ ಹೆಜ್ಜೆಯಾಗಿದೆ. ಇದು ರಾಷ್ಟ್ರ ನಿರ್ಮಾಣ ಮತ್ತು ಸ್ವಯಂ ಸಬಲೀಕರಣದಲ್ಲಿ ಭಾಗವಹಿಸಲು ಯುವಜನರಿಗೆ ಅರ್ಥಪೂರ್ಣ ಅವಕಾಶಗಳನ್ನು ಒದಗಿಸುತ್ತದೆ.
ರೋಜ್ ಗಾರ್ ಮೇಳ ದೇಶಾದ್ಯಂತ 45 ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆಯಿತು. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ನೇಮಕಾತಿಗಳು ನಡೆಯುತ್ತಿವೆ. ದೇಶಾದ್ಯಂತ ಹೊಸದಾಗಿ ಆಯ್ಕೆಯಾದ ಅಭ್ಯರ್ಥಿಗಳು ಗೃಹ ಸಚಿವಾಲಯ, ಅಂಚೆ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ ಸೇರಿದಂತೆ ವಿವಿಧ ಸಚಿವಾಲಯಗಳು/ಇಲಾಖೆಗಳಿಗೆ ಸೇರ್ಪಡೆಯಾಗಲಿದ್ದಾರೆ.
*****
(Release ID: 2087261)
Visitor Counter : 23
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Bengali-TR
,
Punjabi
,
Gujarati
,
Odia
,
Tamil
,
Telugu
,
Malayalam