ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಐ.ಎಫ್.ಎಫ್.ಐ. ನಾಳೆಯ ಪ್ರಮುಖ ಚಲನಚಿತ್ರ ನಿರ್ಮಾಪಕರಿಗೆ ವೇದಿಕೆಯಾಗಿದೆ
ಭಾರತೀಯ ಸಿನಿಮಾದ ಭವಿಷ್ಯವನ್ನು ಸಂಭ್ರಮಿಸುತ್ತಾ - 'ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ' ಯುವ ಪ್ರತಿಭೆ ಮತ್ತು ಕೇವಲ 48 ಗಂಟೆಗಳಲ್ಲಿ ರಚಿಸಲಾದ ಸೃಜನಶೀಲ ಕಥೆಗಳನ್ನು ಪ್ರದರ್ಶಿಸಿತು.
ಈ ವರ್ಷ, ಐ.ಎಫ್.ಎಫ್.ಐ.ಅನ್ನು ನಮ್ಮ ದೇಶದ ಯುವಕರು ಪ್ರತಿನಿಧಿಸುವ ಹಿಂದಿನ ಮತ್ತು ಭವಿಷ್ಯದ ದಿಗ್ಗಜರಿಗೆ ಸಮರ್ಪಿಸಲಾಗಿದೆ - ಸಂಜಯ್ ಜಾಜು, ಕಾರ್ಯದರ್ಶಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯ
'ಗುಲು' - ಅದೃಶ್ಯ ಮೊಬೈಲ್ ಫೋನ್ ಮೂಲಕ ಮನುಷ್ಯ ಮತ್ತು ತಂತ್ರಜ್ಞಾನದ ನಡುವಿನ ಸೂಕ್ಷ್ಮ ಸಂಬಂಧವನ್ನು ಚಿತ್ರಿಸಿರುವ ಚಿತ್ರವು, ಸಿ.ಎಂ.ಒ.ಟಿ. ನಲ್ಲಿ ಹೆಚ್ಚಿನ ಪ್ರಶಂಸೆಗಳಿಸಿತು
ಯುವಕರ ಉತ್ಸಾಹ, ರೋಮಾಂಚಕ ವಾತಾವರಣ ಮತ್ತು 48 ದಣಿವರಿಯದ ಆದರೆ ಮರೆಯಲಾಗದ ಗಂಟೆಗಳ ಉತ್ಸಾಹ – ಇದು ಇಂದು ಮ್ಯಾಕ್ವಿನೆಜ್ ಪ್ಯಾಲೇಸ್ ನಲ್ಲಿ ನಡೆದ 55ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐ.ಎಫ್.ಎಫ್.ಐ.) ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ (ಸಿ.ಎಂ.ಒ.ಟಿ) ಸಮಾರೋಪ ಸಮಾರಂಭದಲ್ಲಿ ಕಂಡುಬಂದ ದೃಶ್ಯವಾಗಿತ್ತು.
ಸಿ.ಎಂ.ಒ.ಟಿ ಭಾರತದ ಅತ್ಯಂತ ಭರವಸೆಯ ಯುವ ಚಲನಚಿತ್ರ ನಿರ್ಮಾಪಕರನ್ನು ಗುರುತಿಸಲು ಮತ್ತು ಪೋಷಿಸಲು ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿದೆ. ಇದು ಈ ವರ್ಷದ ಮಹತ್ವದ ಮೈಲಿಗಲ್ಲನ್ನು ಗುರುತಿಸಿದೆ. 13 ಚಲನಚಿತ್ರ ನಿರ್ಮಾಣ ವಿಭಾಗಗಳಲ್ಲಿ 100 ಯುವ ಪ್ರತಿಭೆಗಳನ್ನು ಸೇರಿಸಲು ಕಾರ್ಯಕ್ರಮವನ್ನು ವಿಸ್ತರಿಸಲಾಯಿತು. ಹಿಂದಿನ ಆವೃತ್ತಿಗಳಲ್ಲಿ ಇದ್ದ 75 ಜನ ಭಾಗವಹಿಸುವವರು ಮತ್ತು 10 ಕಥೆಗಳಿಗಿಂತ ಇದು ಗಮನಾರ್ಹ ಹೆಚ್ಚಳವಾಗಿದೆ. ಈ ಉಪಕ್ರಮವು ಅಗಾಧ ಪ್ರತಿಕ್ರಿಯೆಯನ್ನು ಪಡೆಯಿತು. ಇದು 13 ಚಲನಚಿತ್ರ ಸಂಬಂಧಿತ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಭಾರತದಾದ್ಯಂತ ಸುಮಾರು 1,070 ನಮೂದುಗಳನ್ನು ಸ್ವೀಕರಿಸಿದೆ.
48 ಗಂಟೆಗಳಲ್ಲಿ ಸಿನಿಮಾ ಮಾಡುವ ಸವಾಲು ಈ ಕಾರ್ಯಕ್ರಮದ ಪ್ರಮುಖ ಅಂಶವಾಗಿತ್ತು. ಇದರಲ್ಲಿ ಭಾಗವಹಿಸುವವರನ್ನು 20 ಸದಸ್ಯರ ಐದು ತಂಡಗಳಾಗಿ ವಿಂಗಡಿಸಲಾಗಿದೆ. ಈ ತಂಡಗಳು "ತಂತ್ರಜ್ಞಾನದ ಯುಗದ ಸಂಬಂಧಗಳು" ವಿಷಯದ ಮೇಲೆ ಕೇಂದ್ರೀಕರಿಸಿದ ಕಿರುಚಿತ್ರಗಳನ್ನು ರಚಿಸಿದವು. ನವೆಂಬರ್ 21 ರಿಂದ 23, 2024 ರವರೆಗೆ ಪಂಜಿಮ್ ನ 4 ಕಿಮೀ ವ್ಯಾಪ್ತಿಯಲ್ಲಿರುವ 12 ಸ್ಥಳಗಳಲ್ಲಿ ಇದನ್ನು ಆಯೋಜಿಸಲಾಗಿತ್ತು. ಇದರಲ್ಲಿ ತಂಡದ ಕ್ರಿಯಾಶೀಲತೆ ಮತ್ತು ದೃಢತೆಯನ್ನು ಪರೀಕ್ಷಿಸಲಾಯಿತು.
ಈ ವರ್ಷ, ಸಿ.ಎಂ.ಒ.ಟಿ ಯಲ್ಲಿ 48 ಗಂಟೆಗಳ ಚಿತ್ರ ನಿರ್ಮಾಣದ ಸವಾಲಿನ ವಿಜೇತರು:
1. ಅತ್ಯುತ್ತಮ ಚಿತ್ರ: ಗುಲ್ಲು
ಅತ್ಯುತ್ತಮ ಚಲನಚಿತ್ರ (ರನ್ನರ್ಸ್-ಅಪ್): ವಿ ಹಿಯರ್ ದಿ ಸೇಮ್ ಮ್ಯೂಸಿಕ್
2. ಅತ್ಯುತ್ತಮ ನಿರ್ದೇಶಕ: ಅರ್ಶಲಿ ಜೋಸ್ (ಗುಲ್ಲು)
3. ಅತ್ಯುತ್ತಮ ಚಿತ್ರಕಥೆ: ಅಧಿರಾಜ್ ಬೋಸ್ (ಲವ್-ಪಿಕ್ಸ್ ಸಬಸ್ಕ್ರಿಪ್ಷನ್)
4. ಅತ್ಯುತ್ತಮ ನಟಿ: ವಿಶಾಖಾ ನಾಯರ್ (ಲವ್-ಪಿಕ್ಸ್ ಸಬಸ್ಕ್ರಿಪ್ಷನ್)
5. ಅತ್ಯುತ್ತಮ ನಟ: ಪುಷ್ಪೇಂದ್ರ ಕುಮಾರ್ (ಗುಲ್ಲು)
ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಪಡೆದ ಶ್ರೀಮತಿ ಅರ್ಶಲಿ ಜೋಸ್ ಕೃತಜ್ಞತೆ ಸಲ್ಲಿಸಿ, ಈ ಸಾಧನೆ ನನ್ನ ಇಡೀ ತಂಡದ್ದು. ಚಿತ್ರಕಥೆ ನಮ್ಮ ಚಿತ್ರದ ನಿಜವಾದ ನಾಯಕ, ಮತ್ತು ನಾನು ಅದನ್ನು ಓದಿದಾಗ ನಮಗೆ ಏನಾದರೂ ವಿಶೇಷತೆ ಇದೆ ಎಂದು ನನಗೆ ತಿಳಿಯಿತು. ಈ ಅಸಾಮಾನ್ಯ ತಂಡದೊಂದಿಗೆ ಕೆಲಸ ಮಾಡುವುದು ಮರೆಯಲಾಗದ ಅನುಭವವಾಗಿದೆ ಎಂದು ಹೇಳಿದರು.
ಕಳೆದ ವರ್ಷದ ಸಿ.ಎಂ.ಒ.ಟಿಯ ಹಳೆಯ ವಿದ್ಯಾರ್ಥಿಗಳು ಈ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಿದರು. ಅವರನ್ನು ಸಿ.ಎಂ.ಒ.ಟಿ ಚಾಂಪಿಯನ್ ಗಳಾಗಿ ಆಹ್ವಾನಿಸಲಾಗಿತ್ತು. - ಚಿದಾನಂದ್ ನಾಯಕ್, ಅಖಿಲ್ ಲೋಟ್ಲಿಕರ್, ಸುವರ್ಣ ದಾಶ್, ಅಕ್ಷಿತಾ ವೋಹ್ರಾ ಮತ್ತು ಕೃಷ್ಣ ದುಸಾನೆ .
ಭಾಗವಹಿಸಿದವರನ್ನು ಶ್ಲಾಘಿಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಜಾಜು, “ಅಪಾರ ಒತ್ತಡದಲ್ಲಿ 48 ಗಂಟೆಗಳ ಒಳಗೆ ಇಂತಹ ಮಾದರಿ ಚಲನಚಿತ್ರಗಳನ್ನು ನಿರ್ಮಿಸುವುದು ಒಂದು ಸಾಧನೆಯಾಗಿದೆ. ಇಲ್ಲಿ ಭಾಗವಹಿಸುವ ಪ್ರತಿಯೊಬ್ಬರು ವಿಜೇತರು.” ಎಂದು ಹೇಳಿದರು. “ಈ ವರ್ಷ, ನಾವು ಚಲನಚಿತ್ರೋತ್ಸವವನ್ನು ಅನ್ನು ನಮ್ಮ ದೇಶದ ಯುವಕರು ಪ್ರತಿನಿಧಿಸುತ್ತಿರುವ ಹಿಂದಿನ ಮತ್ತು ಭವಿಷ್ಯದ ದಿಗ್ಗಜರಿಗೆ ಅರ್ಪಿಸಿದ್ದೇವೆ. ಸಿ.ಎಂ.ಒ.ಟಿ, ಫಿಲ್ಮ್ ಬಜಾರ್ ಮತ್ತು ರೆಡ್ ಕಾರ್ಪೆಟ್ ನಂತಹ ಉಪಕ್ರಮಗಳು ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾಪಕರಿಗೆ ತಮ್ಮ ಕನಸುಗಳನ್ನು ನನಸಾಗಿಸಲು ಬಾಗಿಲನ್ನು ತೆರೆಯುತ್ತದೆ.
ಸಮಾರಂಭದಲ್ಲಿ ಉಪಸ್ಥಿತರಿದ್ದ ನಟ ಅಮಿತ್ ಸಾಧ್, ರಾಷ್ಟ್ರದಾದ್ಯಂತದ ಯುವ ಚಲನಚಿತ್ರ ನಿರ್ಮಾಪಕರು ಮತ್ತು ನಟರಿಗೆ ನೇರವಾಗಿ ಚಲನಚಿತ್ರೋದ್ಯಮದ ಅವಕಾಶಗಳನ್ನು ತಂದಿದ್ದಕ್ಕಾಗಿ ಐ.ಎಫ್.ಎಫ್.ಐ.ಅನ್ನು ಶ್ಲಾಘಿಸಿದರು. ಈ ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವಿಶೇಷ ಕಾರ್ಯದರ್ಶಿ ನೀರ್ಜಾ ಶೇಖರ್, ಪೃಥುಲ್ ಕುಮಾರ್, ಪ್ರಸಾರದ ಜಂಟಿ ಕಾರ್ಯದರ್ಶಿ ಮತ್ತು ಎಂ.ಡಿ., ಎನ್.ಎಫ್.ಡಿ.ಸಿ; ಚಲನಚಿತ್ರಗಳ ಜಂಟಿ ಕಾರ್ಯದರ್ಶಿ ವೃಂದ ದೇಸಾಯಿ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮಾಜಿ ಕಾರ್ಯದರ್ಶಿ ಅಪೂರ್ವ ಚಂದ್ರ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಖ್ಯಾತ ಬರಹಗಾರ ಮತ್ತು ಗ್ರ್ಯಾಂಡ್ ಜ್ಯೂರಿ ಸದಸ್ಯ ಸಾಮ್ರಾಟ್ ಚಕ್ರವರ್ತಿ ಅವರೂ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಉತ್ಸಾಹಭರಿತ ಪ್ರೇಕ್ಷಕರ ನಡುವೆ ವಿಜೇತರನ್ನು ಘೋಷಿಸುತ್ತಿದ್ದಂತೆ, ಶಾರ್ಟ್ಸ್ ಇಂಟರ್ನ್ಯಾಶನಲ್ ನ ಸಂಸ್ಥಾಪಕ ಮತ್ತು ಸಿಇಒ ಕಾರ್ಟರ್ ಪಿಲ್ಚರ್ ಭಾಗವಹಿಸಿದವರನ್ನು ಅಭಿನಂದಿಸಿದರು. ಈ ವರ್ಷ ತಯಾರಾದ ಚಿತ್ರಗಳ ಗುಣಮಟ್ಟ ಹಾಗೂ ವಿಷಯವು ಉತ್ತಮವಾಗಿದೆ ಎಂದರು.
ಯುಕೆ ಮೂಲದ ನೆಟ್ವರ್ಕ್ ಶಾರ್ಟ್ಸ್ ಇಂಟರ್ ನ್ಯಾಶನಲ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ, 48 ಗಂಟೆಗಳ ಚಿತ್ರ ನಿರ್ಮಾಣದ ಸವಾಲನ್ನು ಯುವ ಚಲನಚಿತ್ರ ನಿರ್ಮಾಪಕರಿಗೆ ತಮ್ಮ ಸೃಜನಶೀಲತೆ, ಕಥೆ ಹೇಳುವ ಕೌಶಲ್ಯ ಮತ್ತು ತಂಡವಾಗಿ ಕೆಲಸ ಮಾಡುವುದನ್ನು ತೀವ್ರವಾದ ಸಮಯದ ನಿರ್ಬಂಧಗಳ ಅಡಿಯಲ್ಲಿ ಪರೀಕ್ಷಿಸಲು ಒಂದು ಅನನ್ಯ ಅವಕಾಶವನ್ನು ನೀಡುತ್ತದೆ. ಸಿ.ಎಂ.ಒ.ಟಿಯಲ್ಲಿ ಈ ಚಲನಚಿತ್ರಗಳ ಸಂಪೂರ್ಣ ಪೂರ್ವ-ನಿರ್ಮಾಣ, ನಿರ್ಮಾಣ ಮತ್ತು ನಿರ್ಮಾಣ ನಂತರದ ಕಾರ್ಯವನ್ನು ಶಾರ್ಟ್ಸ್ ಟಿವಿ ಸಹ ವಹಿಸಿಕೊಂಡಿತ್ತು.
ಈ ವರ್ಷ, ಸಿ.ಎಂ.ಒ.ಟಿಯು ಯುವ ಚಲನಚಿತ್ರ ನಿರ್ಮಾಪಕರ ರೋಮಾಂಚಕ ಪ್ರತಿಭೆಯನ್ನು ಆಚರಿಸಿದ್ದು ಮಾತ್ರವಲ್ಲದೆ ಈ ಚಲನಚಿತ್ರ ನಿರ್ಮಾಪಕರಿಗೆ ವೇದಿಕೆಯಾಗಿ ಐ.ಎಫ್.ಎಫ್.ಐ. ಚಿತ್ರೋತ್ಸವದ ಪಾತ್ರವನ್ನು ಭದ್ರಪಡಿಸಿದೆ.
*****
(Release ID: 2076846)
Visitor Counter : 28
Read this release in:
English
,
Urdu
,
Hindi
,
Marathi
,
Konkani
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam