ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಮೊದಲ ಏಷ್ಯಾ ಬೌದ್ಧ ಶೃಂಗಸಭೆಯಲ್ಲಿ  ಭಾರತದ ರಾಷ್ಟ್ರಪತಿಗಳು ಭಾಗಿ

Posted On: 05 NOV 2024 12:40PM by PIB Bengaluru

ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟದ (ಐಬಿಸಿ) ಸಹಯೋಗದೊಂದಿಗೆ ನವದೆಹಲಿಯಲ್ಲಿ ಆಯೋಜಿಸಿದ್ದ ಮೊದಲ ಏಷ್ಯಾ ಬೌದ್ಧ ಶೃಂಗಸಭೆಯಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ನವೆಂಬರ್ 5, 2024) ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಭಾರತವು ಧರ್ಮದ ಪುಣ್ಯಭೂಮಿ. ಪ್ರತಿ ಯುಗದಲ್ಲೂ, ಭಾರತದಲ್ಲಿ ಮಹಾನ್ ಗುರುಗಳು ಮತ್ತು ಅತೀಂದ್ರಿಯ ಶಕ್ತಿಯುಳ್ಳವರು, ದಾರ್ಶನಿಕರು ಮತ್ತು ಸಂಶೋಧಕರು/ಅನ್ವೇಷಕರು ಮಾನವಕುಲಕ್ಕೆ ಆಂತರಿಕ ಶಾಂತಿ ಮತ್ತು ಬಾಹ್ಯ ಸಾಮರಸ್ಯವನ್ನು ಕಂಡುಕೊಳ್ಳುವ ಮಾರ್ಗವನ್ನು ತೋರಿಸಿದ್ದಾರೆ. ಈ ಮಾರ್ಗದರ್ಶಕರಲ್ಲಿ ಬುದ್ಧನಿಗೆ ವಿಶಿಷ್ಟ ಸ್ಥಾನವಿದೆ. ಬೋಧ್ ಗಯಾದ ಬೋಧಿವೃಕ್ಷದ ಕೆಳಗೆ ಸಿದ್ಧಾರ್ಥ ಗೌತಮನಿಗೆ ಜ್ಞಾನೋದಯವಾದದ್ದು ಇತಿಹಾಸದಲ್ಲಿ ಅಪೂರ್ವವಾದ ಘಟನೆಯಾಗಿದೆ. ಅವರು ಮಾನವನ ಮನಸ್ಸಿನ ಅತ್ಯದ್ಭುತ ಆಲೋಚನೆಗಳನ್ನು ಕಂಡುಕೊಂಡರು, ಅಲ್ಲದೇ ಅದನ್ನು  "ಬಹುಜನ ಸುಖಾಯ ಬಹುಜನ ಹಿತಾಯ ಚ" ಎಂಬಂತೆ  ಜನಸಾಮಾನ್ಯರ ಕಲ್ಯಾಣಕ್ಕಾಗಿ ಅವುಗಳನ್ನು ಎಲ್ಲಾ ಜನರೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದರು. 

ಶತಶತಮಾನಗಳಿಂದಲೂ ವಿವಿಧ ಸಾಧಕರು ಬುದ್ಧನ ಪ್ರವಚನಗಳಲ್ಲಿ ವಿಭಿನ್ನ ಅರ್ಥಗಳನ್ನು ಕಂಡುಕೊಳ್ಳುವುದರಿಂದ ಸ್ವಾಭಾವಿಕವಾದ್ದರಿಂದ ವಿವಿಧ ಪಂಥಗಳು ಹುಟ್ಟಿಕೊಂಡಿವೆ ಎಂದು ಹೇಳಿದ ರಾಷ್ಟ್ರಪತಿಗಳು, ವಿಶಾಲ ವರ್ಗೀಕರಣದಲ್ಲಿ, ಇಂದು ನಾವು ಥೇರವಾಡ, ಮಹಾಯಾನ ಮತ್ತು ವಜ್ರಯಾನ ಸಂಪ್ರದಾಯಗಳನ್ನು ಹೊಂದಿದ್ದೇವೆ; ಅವುಗಳಲ್ಲಿ ಪ್ರತಿಯೊಂದರಲ್ಲೂ ಅನೇಕ ಪಂಕ್ತಿಗಳು ಮತ್ತು ಪಂಗಡಗಳಿವೆ ಎಂದರು. ಇದಲ್ಲದೆ, ಪ್ರವರ್ಧಮಾನಕ್ಕೆ ಬರುತ್ತಿದ್ದ ಬೌದ್ಧ ಧರ್ಮವು ಹಲವು ದಿಕ್ಕುಗಳಲ್ಲಿ ಪ್ರಚುರಗೊಂಡಿದ್ದನ್ನು ಇತಿಹಾಸದ ವಿವಿಧ ಅವಧಿಗಳಲ್ಲಿ ಗಮನಿಸಬಹುದು. ವೈವಿಧ್ಯಮಯ ಭೌಗೋಳಿಕ ಪ್ರದೇಶದಲ್ಲಿ ವಿಸ್ತರಿಸುತ್ತಿರುವ ಈ ಧಮ್ಮದ ಹರಡುವಿಕೆಯು ಒಂದು ಸಮುದಾಯವನ್ನು, ದೊಡ್ಡ ಸಂಘವನ್ನು ಸೃಷ್ಟಿಸಿತು. ಒಂದರ್ಥದಲ್ಲಿ, ಭಾರತವು ಬುದ್ಧನ ಜ್ಞಾನೋದಯದ ಕೇಂದ್ರವಾಗಿದೆ. ಅಲ್ಲದೇ, ದೇವರ ಬಗ್ಗೆ ಹೇಳಿರುವುದು ಈ ದೊಡ್ಡ ಬೌದ್ಧ ಸಂಘದ ಬಗ್ಗೆಯೂ ನಿಜವಾಗಿದೆ; ಅಂದರೆ ಅದರ ಕೇಂದ್ರವು ಎಲ್ಲೆಡೆಯೂ ಇದೆ ಆದರೆ ಸುತ್ತಲ ಗಡಿ ಎಲ್ಲಿಯೂ ಇಲ್ಲ.

ಇಂದು ಜಗತ್ತಿನ ಅನೇಕ ರಂಗಗಳು ಅಸ್ತಿತ್ವವಾದದ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ಕಲಹ, ಜಗಳಗಳಲ್ಲದೇ ಹವಾಮಾನ ಬಿಕ್ಕಟ್ಟನ್ನು ಸಹ ಎದುರಿಸುತ್ತಿರುವಾಗ, ದೊಡ್ಡ ಬೌದ್ಧ ಸಮುದಾಯವು ಮಾನವಕುಲಕ್ಕೆ ಹೆಚ್ಚಿನ ಕೊಡುಗೆ ನೀಡಬಹುದಾಗಿದೆ ಎಂದು ರಾಷ್ಟ್ರಪತಿ ಹೇಳಿದ್ದಾರೆ.  ಬೌದ್ಧಧರ್ಮದ ವಿವಿಧ ಪಂಗಡಗಳು ಸಂಕುಚಿತ ಪಂಥವನ್ನು ಹೇಗೆ ನಿಗ್ರಹಿಸಬೇಕೆಂದು ಜಗತ್ತಿಗೆ ತೋರಿಸುತ್ತವೆ. ಅವರ ಪ್ರಮುಖ ಸಂದೇಶವು ಶಾಂತಿ ಮತ್ತು ಅಹಿಂಸೆಯ ಮೇಲೆ ಕೇಂದ್ರೀಕೃತವಾಗಿದೆ. ಒಂದು ಪದವು ಬುದ್ಧ ಧಮ್ಮವನ್ನು ಹಿಡಿದಿಡಲು ಸಾಧ್ಯವಾದರೆ, ಅದು 'ದಯೆ' ಅಥವಾ ‘ಕರುಣೆ’; ಇಂದು ಈ ಜಗತ್ತಿಗೆ ಬೇಕಾಗಿರುವುದು ಕೂಡ ಅದೇ.

ಬುದ್ಧನ ಬೋಧನೆಗಳ ಸಂರಕ್ಷಣೆ ನಮ್ಮೆಲ್ಲರ ದೊಡ್ಡ ಸಾಮೂಹಿಕ ಪ್ರಯತ್ನವಾಗಿದೆ ಎಂದು ಹೇಳಿದ ರಾಷ್ಟ್ರಪತಿಗಳು, ಭಾರತ ಸರ್ಕಾರವು ಇತರ ಭಾಷೆಗಳ ಜೊತೆಗೆ ಪಾಲಿ ಮತ್ತು ಪ್ರಾಕೃತ ಭಾಷೆಗಳಿಗೆ 'ಶಾಸ್ತ್ರೀಯ ಭಾಷೆ' ಸ್ಥಾನಮಾನವನ್ನು ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಈಗ ಪಾಲಿ ಮತ್ತು ಪ್ರಾಕೃತಗಳಿಗೆ ಆರ್ಥಿಕ ಬೆಂಬಲ ಸಿಗಲಿದ್ದು, ಇದು ಆ ಭಾಷೆಗಳ ಸಾಹಿತ್ಯ ಸಂಪತ್ತಿನ ಸಂರಕ್ಷಣೆಗೆ ಮತ್ತು ಅವುಗಳ ಪುನರುಜ್ಜೀವನಕ್ಕೆ ಗಮನಾರ್ಹವಾಗಿ ಕೊಡುಗೆ ನೀಡಬಲ್ಲದಾಗಿದೆ.

ಏಷ್ಯಾವನ್ನು ಬಲಪಡಿಸುವಲ್ಲಿ ಬುದ್ಧ ಧರ್ಮದ ಪಾತ್ರದ ಬಗ್ಗೆ ನಾವು ಚರ್ಚಿಸಬೇಕಾಗಿದೆ ಎಂದು ರಾಷ್ಟ್ರಪತಿ ಅಭಿಪ್ರಾಯಪಟ್ಟಿದ್ದಾರೆ. ವಾಸ್ತವವಾಗಿ, ಬೌದ್ಧ ಧರ್ಮವು ಏಷ್ಯಾ ಮತ್ತು ಜಗತ್ತಿಗೆ ಶಾಂತಿ, ಭೌತಿಕ ಹಿಂಸಾಚಾರ ಮುಕ್ತ ಮಾತ್ರವಲ್ಲದೇ ಬುದ್ಧನ ಪ್ರಕಾರ ನಮ್ಮ ಎಲ್ಲಾ ದುಃಖಗಳಿಗೆ ಮೂಲ ಕಾರಣವಾದ ಲೋಭ ಮತ್ತು ದ್ವೇಷಗಳಿಂದ ಮುಕ್ತವಾಗಿ ನೈಜ ಶಾಂತಿಯನ್ನು ಹೇಗೆ ತರಬಲ್ಲದು ಎಂಬ ಬಗ್ಗೆ ನಾವು ಚರ್ಚೆಯನ್ನು ವಿಸ್ತರಿಸಬೇಕಾಗಿದೆ. ಬುದ್ಧನ ಬೋಧನೆಗಳ ನಮ್ಮ ಹಂಚಿತ ಪರಂಪರೆಯ ಆಧಾರದ ಮೇಲೆ ನಮ್ಮ ಸಹಕಾರವನ್ನು ಬಲಪಡಿಸುವಲ್ಲಿ ಶೃಂಗಸಭೆಯು ಪ್ರಮುಖ ಪಾತ್ರ ವಹಿಸಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರಪತಿಗಳ ಭಾಷಣವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ -

 

*****

 


(Release ID: 2071029) Visitor Counter : 30