ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರೋಜ್ ಗಾರ್ ಮೇಳದ ಅಡಿಯಲ್ಲಿ 51,000+ ನೇಮಕಾತಿ ಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ  ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ

Posted On: 29 OCT 2024 2:11PM by PIB Bengaluru

ನಮಸ್ಕಾರ!

ದೇಶದ ವಿವಿಧ ಭಾಗಗಳಿಂದ ನಮ್ಮ ಜೊತೆಗೆ ಸೇರಿರುವ  ನನ್ನ ಸಂಪುಟ ಸಹೋದ್ಯೋಗಿಗಳು, ಸಂಸತ್ ಸದಸ್ಯರು, ವಿಧಾನಸಭೆಗಳ ಸದಸ್ಯರು, ರಾಷ್ಟ್ರದ ಯುವ ಸ್ನೇಹಿತರು, ಮಹಿಳೆಯರೇ ಮತ್ತು ಮಹನೀಯರೇ!

ಇಂದು ಧಂತೇರಸ್ ಪವಿತ್ರ ಹಬ್ಬವಾಗಿದೆ, ಮತ್ತು ಸಂದರ್ಭದಲ್ಲಿ ನಾನು ಎಲ್ಲಾ ನಾಗರಿಕರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಎರಡು ದಿನಗಳಲ್ಲಿ, ನಾವು ದೀಪಾವಳಿ ಹಬ್ಬವನ್ನು ಸಹ ಆಚರಿಸುತ್ತೇವೆ, ಮತ್ತು ವರ್ಷದ ದೀಪಾವಳಿ ಅಸಾಧಾರಣ ವಿಶೇಷವನ್ನು ಒಳಗೊಂಡಿದೆ. ದೀಪಾವಳಿ ನಾವು ವಾರ್ಷಿಕವಾಗಿ ಆಚರಿಸುವ ಹಬ್ಬವಾಗಿದೆ, ಹಾಗಿರುವಾಗ ಈ ದೀಪಾವಳಿಯ ವಿಶೇಷತೆ ಏನು ಎಂದು ನೀವು ಆಶ್ಚರ್ಯ ಪಡಬಹುದು . 500 ವರ್ಷಗಳ ನಂತರ, ಭಗವಾನ್ ಶ್ರೀ ರಾಮ (ರಾಮ್ ಲಲ್ಲಾ) ಈಗ ಅಯೋಧ್ಯೆಯ ತನ್ನ ಭವ್ಯವಾದ ದೇವಾಲಯದಲ್ಲಿ ಕುಳಿತಿದ್ದಾನೆ. ಈ ಭವ್ಯ ದೇವಾಲಯದಲ್ಲಿ ರಾಮ್ ಲಲ್ಲಾ ಸ್ಥಾಪಿಸಿದ ನಂತರ ಇದು ಮೊದಲ ದೀಪಾವಳಿಯಾಗಿದೆ, ಈ ಕ್ಷಣಕ್ಕಾಗಿ ಅಸಂಖ್ಯಾತ ತಲೆಮಾರುಗಳು ಕಾಯುತ್ತಿದ್ದವು ಮತ್ತು ಲಕ್ಷಾಂತರ ಜನರು ತ್ಯಾಗ ಮಾಡಿದ್ದಾರೆ ಹಾಗು ಕಷ್ಟಗಳನ್ನು ಸಹಿಸಿಕೊಂಡಿದ್ದಾರೆ. ಅಂತಹ ಗಮನಾರ್ಹ ಮತ್ತು ಅಸಾಧಾರಣ ದೀಪಾವಳಿಗೆ ಸಾಕ್ಷಿಯಾಗುತ್ತಿರುವ  ನಾವು ನಿಜವಾಗಿಯೂ ಅದೃಷ್ಟವಂತರು.

ಹಬ್ಬದ ಆಚರಣೆಗಳ ನಡುವೆ, ಈ ಶುಭ ದಿನದಂದು, ಈ ರೋಜ್ಗಾರ್ ಮೇಳದ ಮೂಲಕ 51,000 ಯುವಜನರಿಗೆ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪತ್ರಗಳನ್ನು ನೀಡಲಾಗುತ್ತಿದೆ. ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ದೇಶಾದ್ಯಂತ ಲಕ್ಷಾಂತರ ಯುವಜನರಿಗೆ ಶಾಶ್ವತ ಸರ್ಕಾರಿ ಉದ್ಯೋಗಗಳನ್ನು ಒದಗಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಮುಂದುವರಿಸಿದೆ. ಬಿಜೆಪಿ ಮತ್ತು ಎನ್ಡಿಎ ಆಡಳಿತವಿರುವ ರಾಜ್ಯಗಳಲ್ಲಿಯೂ ಲಕ್ಷಾಂತರ ಯುವಜನರಿಗೆ ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ಇತ್ತೀಚೆಗೆ, ಹರಿಯಾಣದಲ್ಲಿ, ಹೊಸ ಸರ್ಕಾರ ರಚನೆಯಾದ ಕೂಡಲೇ, 26,000 ಯುವಜನರಿಗೆ ಉದ್ಯೋಗದ ಉಡುಗೊರೆಯನ್ನು ನೀಡಲಾಯಿತು. ಹರಿಯಾಣದ ಬಗ್ಗೆ ತಿಳಿದಿರುವವರಿಗೆ ಪ್ರಸ್ತುತ ಅಲ್ಲಿ ಸಂಭ್ರಮದ ವಾತಾವರಣವಿದೆ ಮತ್ತು ಯುವಜನರು ಉತ್ಸಾಹದಿಂದ ತುಂಬಿದ್ದಾರೆ ಎಂಬುದು ತಿಳಿದಿರುತ್ತದೆ. ಹರಿಯಾಣದ ನಮ್ಮ ಸರ್ಕಾರವು ವಿಶಿಷ್ಟ ವಿಧಾನಕ್ಕೆ ಹೆಸರುವಾಸಿಯಾಗಿದೆ - ಇದು ಯಾವುದೇ ವೆಚ್ಚಗಳು ಅಥವಾ ಲಂಚ-ರುಷುವತ್ತುಗಳಿಲ್ಲದೆ  ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಇಂದು, ಹರಿಯಾಣ ಸರ್ಕಾರದಿಂದ ನೇಮಕಾತಿ ಪತ್ರಗಳನ್ನು ಪಡೆದ 26,000 ಯುವಜನರಿಗೆ ನಾನು ವಿಶೇಷ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ. ಹರಿಯಾಣದಲ್ಲಿ 26,000 ಹೊಸ ನೇಮಕಾತಿಗಳು ಮತ್ತು ಇಂದು 51,000 ಕ್ಕೂ ಹೆಚ್ಚು ನೇಮಕಾತಿಗಳೊಂದಿಗೆ, ನಾವು ಗಮನಾರ್ಹ ಪ್ರಗತಿಯನ್ನು ಆಚರಿಸುತ್ತಿದ್ದೇವೆ.

ಸ್ನೇಹಿತರೇ,

ದೇಶಾದ್ಯಂತ ಲಕ್ಷಾಂತರ ಯುವಜನರಿಗೆ ಶಾಶ್ವತ ಸರ್ಕಾರಿ ಉದ್ಯೋಗಗಳನ್ನು ಒದಗಿಸುವ ಪ್ರಕ್ರಿಯೆಯು ಭಾರತ ಸರ್ಕಾರದ ಅಡಿಯಲ್ಲಿ ಮುಂದುವರೆದಿದೆ. ಬಿಜೆಪಿ ಮತ್ತು ಎನ್ಡಿಎ ಆಡಳಿತದ ರಾಜ್ಯಗಳಲ್ಲಿಯೂ ಲಕ್ಷಾಂತರ ಯುವಜನರಿಗೆ ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ಇತ್ತೀಚೆಗೆ, ಹರಿಯಾಣದಲ್ಲಿ, ಹೊಸ ಸರ್ಕಾರ ರಚನೆಯಾದ ನಂತರ, 26,000 ಯುವಜನರು ಉದ್ಯೋಗಾವಕಾಶಗಳನ್ನು ಪಡೆದರು. ಹರಿಯಾಣದ ಪರಿಚಯವಿರುವವರಿಗೆ ದಿನಗಳಲ್ಲಿ ಅಲ್ಲಿ ಸಂಭ್ರಮದ ವಾತಾವರಣವಿದೆ ಎಂದು ತಿಳಿದಿರುತ್ತದೆ, ಯುವಜನರು ಉದ್ಧಾರಗೊಂಡಿದ್ದಾರೆ. ಹರಿಯಾಣದ ನಮ್ಮ ಸರ್ಕಾರವು ವಿಶಿಷ್ಟ ಖ್ಯಾತಿಯನ್ನು ಹೊಂದಿದೆ - ಇದು ಯಾವುದೇ ವೆಚ್ಚ ಅಥವಾ ಪಕ್ಷಪಾತವಿಲ್ಲದೆ ಉದ್ಯೋಗಗಳನ್ನು ಒದಗಿಸುತ್ತದೆ. ಇಂದು, ಹರಿಯಾಣ ಸರ್ಕಾರದಿಂದ ನೇಮಕಾತಿ ಪತ್ರಗಳನ್ನು ಪಡೆದ 26,000 ಯುವಕರಿಗೆ ನಾನು ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇದು ಹರಿಯಾಣದಲ್ಲಿ 26,000 ಹೊಸ ಉದ್ಯೋಗಗಳನ್ನು ಮತ್ತು ಇಂದಿನ ಕಾರ್ಯಕ್ರಮದಿಂದ ಹೆಚ್ಚುವರಿ 51,000 ಉದ್ಯೋಗಗಳನ್ನು ಸೃಷ್ಟಿಸಿದೆ.

ಸ್ನೇಹಿತರೇ,

ದೇಶದ ಯುವಜನರಿಗೆ ಉದ್ಯೋಗಾವಕಾಶಗಳನ್ನು ಗರಿಷ್ಠಗೊಳಿಸುವುದು ನಮ್ಮ ಬದ್ಧತೆಯಾಗಿದೆ. ಈ ಸರ್ಕಾರದ ನೀತಿಗಳು ಮತ್ತು ನಿರ್ಧಾರಗಳು ಉದ್ಯೋಗ ಸೃಷ್ಟಿಯ ಮೇಲೆ ನೇರ ಪರಿಣಾಮ ಬೀರುತ್ತವೆ. ಇಂದು, ಎಕ್ಸ್ ಪ್ರೆಸ್ ವೇಗಳು, ಹೆದ್ದಾರಿಗಳು, ರಸ್ತೆಗಳು, ರೈಲ್ವೆಗಳು, ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ದೇಶಾದ್ಯಂತ ಫೈಬರ್ ಲೈನ್ ಗಳು ಹಾಗು ಮೊಬೈಲ್ ಟವರ್ ಗಳನ್ನು ಸ್ಥಾಪಿಸುವ ಕೆಲಸ ನಡೆಯುತ್ತಿದೆ. ನಾವು ಹೊಸ ಕೈಗಾರಿಕೆಗಳನ್ನು ದೇಶದ ಮೂಲೆ ಮೂಲೆಗೂ ವಿಸ್ತರಿಸುತ್ತಿದ್ದೇವೆ, ಹೊಸ ಕೈಗಾರಿಕಾ ನಗರಗಳನ್ನು ನಿರ್ಮಿಸುತ್ತಿದ್ದೇವೆ ಮತ್ತು ನೀರು ಮತ್ತು ಅನಿಲ ಕೊಳವೆ ಮಾರ್ಗಗಳನ್ನು ಹಾಕುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಸಹ ಸ್ಥಾಪಿಸಲಾಗುತ್ತಿದೆ. ಮೂಲಸೌಕರ್ಯದ ಮೇಲೆ  ಹೂಡಿಕೆಯ ಮೂಲಕ, ಸಾರಿಗೆ (ಲಾಜಿಸ್ಟಿಕ್ಸ್) ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಉಪಕ್ರಮಗಳು ನಾಗರಿಕರಿಗೆ ವರ್ಧಿತ ಅನುಕೂಲವನ್ನು ಒದಗಿಸುವುದಲ್ಲದೆ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ.

ಸ್ನೇಹಿತರೇ,

ನಿನ್ನೆಯಷ್ಟೇ ನಾನು ವಡೋದರಾದಲ್ಲಿದ್ದೆ, ಅಲ್ಲಿ ರಕ್ಷಣಾ ವಲಯಕ್ಕಾಗಿ ವಿಮಾನಗಳನ್ನು ಉತ್ಪಾದಿಸುವ ಕಾರ್ಖಾನೆಯನ್ನು ಉದ್ಘಾಟಿಸುವ ಅವಕಾಶ ನನಗೆ ಸಿಕ್ಕಿತು. ಈ ಕಾರ್ಖಾನೆಯೊಂದೇ  ಸಾವಿರಾರು ಜನರಿಗೆ ನೇರವಾಗಿ ಉದ್ಯೋಗ ನೀಡುತ್ತದೆ. ಆದರೆ ಇದನ್ನು ಮೀರಿ, ವಿಮಾನ ಉತ್ಪಾದನೆಗೆ ಅಗತ್ಯವಿರುವ ಅಪಾರ ಸಂಖ್ಯೆಯ ಬಿಡಿಭಾಗಗಳ ಕಾರಣದಿಂದಾಗಿ ಇದು ಸೃಷ್ಟಿಸುವ ಉದ್ಯೋಗಾವಕಾಶಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಈ ಭಾಗಗಳನ್ನು ತಯಾರಿಸಲು ಮತ್ತು ಪೂರೈಸಲು ಅನೇಕ ಸಣ್ಣ ಕಾರ್ಖಾನೆಗಳ ಜಾಲ ಹೊರಹೊಮ್ಮುತ್ತದೆ. ದೇಶಾದ್ಯಂತ ನಮ್ಮ ಎಂಎಸ್ಎಂಇಗಳು ಘಟಕಗಳನ್ನು ಉತ್ಪಾದಿಸುವಲ್ಲಿ ತೊಡಗುತ್ತವೆ, ಬೇಡಿಕೆಯನ್ನು ಪೂರೈಸಲು ಹೊಸ ಎಂಎಸ್ಎಂಇಗಳು ಸಹ ರೂಪುಗೊಳ್ಳುತ್ತವೆ. ಒಂದು ವಿಮಾನವು 15,000 ರಿಂದ 25,000 ಸಣ್ಣ ಮತ್ತು ದೊಡ್ಡ ಭಾಗಗಳನ್ನು ಹೊಂದಿರುತ್ತದೆ, ಅಂದರೆ ಪ್ರತಿ ಭಾಗವನ್ನು ಪೂರೈಸಲು ದೇಶಾದ್ಯಂತ ಸಾವಿರಾರು ಕಾರ್ಖಾನೆಗಳು ಸಕ್ರಿಯವಾಗುತ್ತವೆ. ಇದು ನಮ್ಮ ಎಂಎಸ್ಎಂಇ ವಲಯಕ್ಕೆ ಗಣನೀಯ ಉತ್ತೇಜನವನ್ನು ತರುತ್ತದೆ ಮತ್ತು ಇದು ಅಸಂಖ್ಯಾತ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಯಾರೇ ಆದರೂ  ಊಹಿಸಬಹುದು.

ಸ್ನೇಹಿತರೇ,

ಇಂದು, ನಾವು ಒಂದು ಯೋಜನೆಯನ್ನು ಪ್ರಾರಂಭಿಸಿದಾಗ, ನಮ್ಮ ಗಮನವು ಸಾರ್ವಜನಿಕರಿಗೆ ಒದಗಿಸಲಾಗುವ ಪ್ರಯೋಜನಗಳ ಮೇಲೆ ಮಾತ್ರ ಅಲ್ಲ; ನಾವು ಹೆಚ್ಚು ವಿಶಾಲವಾದ ಪರಿಣಾಮವನ್ನು ಕಲ್ಪಿಸಿಕೊಳ್ಳುತ್ತೇವೆ. ಉದ್ಯೋಗ ಸೃಷ್ಟಿಸುವ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುವ ಗುರಿಯನ್ನೂ ನಾವು ಹೊಂದಿದ್ದೇವೆ. ಉದಾಹರಣೆಗೆ, ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯನ್ನು ತೆಗೆದುಕೊಳ್ಳಿ. ಮೇಲ್ನೋಟಕ್ಕೆ, ಈ ಯೋಜನೆಯನ್ನು ಮನೆಗಳಿಗೆ ಉಚಿತ ವಿದ್ಯುತ್ ಪೂರೈಸಲು ವಿನ್ಯಾಸಗೊಳಿಸಲಾಗಿದೆ ಎಂದು ತೋರಬಹುದು, ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಇನ್ನೂ ಹೆಚ್ಚಿನದನ್ನು ಬಹಿರಂಗಪಡಿಸುತ್ತದೆ. ಕಳೆದ ಆರು ತಿಂಗಳಲ್ಲಿ ಸುಮಾರು 1.25 ರಿಂದ 1.5 ಕೋಟಿ ಗ್ರಾಹಕರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಅಗತ್ಯ ಅನುಸ್ಥಾಪನೆಗಳನ್ನು ಕೈಗೊಳ್ಳಲು 9,000 ಕ್ಕೂ ಹೆಚ್ಚು ಮಾರಾಟಗಾರರು ಸೇರಿಕೊಂಡಿದ್ದಾರೆ ಮತ್ತು ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಈ ಯೋಜನೆಯಡಿ ಮಾದರಿಯಾಗಿ ದೇಶದ ವಿವಿಧ ಭಾಗಗಳಲ್ಲಿ 800 ಸೌರಶಕ್ತಿ ಚಾಲಿತ ಗ್ರಾಮಗಳನ್ನು ಸ್ಥಾಪಿಸುವ ಯೋಜನೆ ಇದೆ. ಹೆಚ್ಚುವರಿಯಾಗಿ, ಮೇಲ್ಛಾವಣಿ ಸೌರ ಶಕ್ತಿ ಉತ್ಪಾದನಾ ಘಟಕ ಅಳವಡಿಕೆಯಲ್ಲಿ 30,000 ಜನರಿಗೆ ತರಬೇತಿ ನೀಡಲಾಗಿದೆ. ಒಟ್ಟಿನಲ್ಲಿ   ಒಂದೇ ಯೋಜನೆಯು ತಯಾರಕರು, ಮಾರಾಟಗಾರರು, ಅನುಸ್ಥಾಪಕರು (ಅಳವಡಿಕೆದಾರರು) ಮತ್ತು ದುರಸ್ತಿದಾರರಿಗೆ ಲಕ್ಷಾಂತರ ಉದ್ಯೋಗಾವಕಾಶಗಳನ್ನು ತೆರೆದಿದೆ. ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ದೇಶಾದ್ಯಂತ ಲಕ್ಷಾಂತರ ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಸಜ್ಜಾಗಿದೆ.

ಸ್ನೇಹಿತರೇ,

ನಾನು ನಿಮಗೆ ಇನ್ನೊಂದು ಉದಾಹರಣೆಯನ್ನು ನೀಡುತ್ತೇನೆ, ಮತ್ತು ಇಂದು ನಾನು ಸಣ್ಣ ಹಳ್ಳಿಗಳಿಗೆ ಸಂಬಂಧಿಸಿದ ಉದಾಹರಣೆಗಳ ಮೇಲೆ ಕೇಂದ್ರೀಕರಿಸುತ್ತಿದ್ದೇನೆ. ಸ್ವಾತಂತ್ರ್ಯ ಯುಗದಿಂದಲೂ ಖಾದಿ ನಮ್ಮ ದೇಶದಲ್ಲಿ ಚರ್ಚೆಯ ವಿಷಯವಾಗಿದೆ. ಆದರೆ ಇಂದು ಖಾದಿ ಗ್ರಾಮೋದ್ಯೋಗದ ಗಮನಾರ್ಹ ಪರಿವರ್ತನೆಯನ್ನು ಪರಿಗಣಿಸಿರಿ. ಕಳೆದ 10 ವರ್ಷಗಳಲ್ಲಿ, ನಮ್ಮ ಸರ್ಕಾರದ ನೀತಿಗಳು ಖಾದಿ ಗ್ರಾಮೋದ್ಯೋಗವನ್ನು ಸಂಪೂರ್ಣವಾಗಿ ಪುನರುಜ್ಜೀವನಗೊಳಿಸಿವೆ, ಅದರ ಚಿತ್ರಣವನ್ನು ಬದಲಾಯಿಸುವುದಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಕೆಲಸದಲ್ಲಿ ತೊಡಗಿರುವವರ ಅದೃಷ್ಟವನ್ನು/ಭವಿಷ್ಯವನ್ನು  ಪರಿವರ್ತಿಸಿವೆ. ಇಂದು, ಖಾದಿ ಗ್ರಾಮೋದ್ಯೋಗವು ವಾರ್ಷಿಕವಾಗಿ 1.5 ಲಕ್ಷ ಕೋಟಿ ರೂಪಾಯಿಗಳ ಆದಾಯವನ್ನು ಗಳಿಸುತ್ತಿದೆ. ನಾವು ಇದನ್ನು ಒಂದು ದಶಕದ ಹಿಂದಿನ ಪರಿಸ್ಥಿತಿಗೆ ಹೋಲಿಸಿ ನೋಡಿದರೆ - ಡಾ. ಜಿತೇಂದ್ರ ಸಿಂಗ್ ಇತ್ತೀಚೆಗೆ ಹಿಂದಿನ ಮತ್ತು ಪ್ರಸ್ತುತ ಸರ್ಕಾರಗಳ ಅಡಿಯಲ್ಲಿ ಸರ್ಕಾರಿ ಉದ್ಯೋಗಗಳ ಅಂಕಿಅಂಶಗಳನ್ನು ಎತ್ತಿ ತೋರಿಸಿದಂತೆ - ವ್ಯತ್ಯಾಸವು ಆಶ್ಚರ್ಯಕರವಾಗಿದೆ. ಉದಾಹರಣೆಗೆ, ಇಂದು ಖಾದಿ ಮಾರಾಟವು ಯುಪಿಎ ಸರ್ಕಾರದ ಅವಧಿಗಿಂತ ಶೇಕಡಾ 400 ರಷ್ಟು ಹೆಚ್ಚಾಗಿದೆ. ಈ ಬೆಳವಣಿಗೆಯಿಂದಾಗಿ ಕುಶಲಕರ್ಮಿಗಳು, ನೇಕಾರರು ಮತ್ತು ವ್ಯಾಪಾರಿಗಳು ಗಣನೀಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಈ ವಲಯದಲ್ಲಿ ಹೊಸ ಅವಕಾಶಗಳು ಹೊರಹೊಮ್ಮುತ್ತಿವೆ, ಹೆಚ್ಚಿನ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸುತ್ತಿವೆ.

ಅದೇ , ನಮ್ಮ ಲಕ್ಪತಿ ದೀದಿ ಯೋಜನೆ ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಮತ್ತು ಸ್ವ ಉದ್ಯೋಗದ ಹೊಸ ಮಾರ್ಗಗಳನ್ನು ಒದಗಿಸಿದೆ. ಕಳೆದ ದಶಕದಲ್ಲಿ, 10 ಕೋಟಿ ಮಹಿಳೆಯರು ಸ್ವಸಹಾಯ ಗುಂಪುಗಳನ್ನು ಸೇರಿದ್ದಾರೆ, ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ತಮ್ಮ ಕೆಲಸದ ಮೂಲಕ ಆದಾಯವನ್ನು ಗಳಿಸುತ್ತಿದ್ದಾರೆ. ಈ 10 ಕೋಟಿ ಮಹಿಳೆಯರು ಈಗ ಉದ್ಯೋಗ ಮತ್ತು ಸ್ವ ಉದ್ಯೋಗದ ಮೂಲಕ ತಮ್ಮ ಮನೆಗಳಿಗೆ ಹಣವನ್ನು ತರುತ್ತಿದ್ದಾರೆ, ಅವರ ಕಠಿಣ ಪರಿಶ್ರಮಕ್ಕೆ ಧನ್ಯವಾದಗಳು. 10 ಕೋಟಿ ಮಹಿಳೆಯರ ಪ್ರಭಾವಶಾಲಿ ಸಂಖ್ಯೆಯು ಅನೇಕರ ಗಮನಕ್ಕೆ ಬರುವುದಿಲ್ಲ. ಸರ್ಕಾರವು ಅವರಿಗೆ ಸಂಪೂರ್ಣ ಬೆಂಬಲ ನೀಡಿದೆ, ಸಂಪನ್ಮೂಲಗಳು ಮತ್ತು ಆರ್ಥಿಕ ಸಹಾಯವನ್ನು ಒದಗಿಸಿದೆ. ಈ ಮಹಿಳೆಯರು ವಿವಿಧ ರೀತಿಯ ಉದ್ಯೋಗಗಳಿಂದ ಆದಾಯವನ್ನು ಗಳಿಸುತ್ತಿದ್ದಾರೆ. ಈ ಮಹಿಳೆಯರಲ್ಲಿ 3 ಕೋಟಿ ಮಹಿಳೆಯರನ್ನು "ಲಕ್ಪತಿ ದೀದಿಗಳಾಗಲು" ಅನುವು ಮಾಡಿಕೊಡುವ ಗುರಿಯನ್ನು ನಮ್ಮ ಸರ್ಕಾರ ನಿಗದಿಪಡಿಸಿದೆ, ಇದು ಕೇವಲ ಆದಾಯವನ್ನು ಸೃಷ್ಟಿಸುವ ಗುರಿಯನ್ನು ಮಾತ್ರವೇ ಹೊಂದಿರುವುದಲ್ಲ,  ಅದನ್ನು ಹೆಚ್ಚಿಸುವ ಗುರಿಯನ್ನೂ ಹೊಂದಿದೆ. ಇಲ್ಲಿಯವರೆಗೆ, ಸುಮಾರು 1.25 ಕೋಟಿ ಮಹಿಳೆಯರು ಮೈಲಿಗಲ್ಲನ್ನು ಸಾಧಿಸಿದ್ದಾರೆ, ಪ್ರತಿ ವರ್ಷ 1 ಲಕ್ಷ ರೂ.ಗಿಂತ ಹೆಚ್ಚಿನ ವಾರ್ಷಿಕ ಆದಾಯವನ್ನು ಗಳಿಸುತ್ತಿದ್ದಾರೆ.

ಸ್ನೇಹಿತರೇ,

ಇಂದು, ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಮುನ್ನಡೆಯುತ್ತಿದೆ. ಈ ಪ್ರಗತಿಯನ್ನು ನೋಡಿದ ಯುವಜನರು, ಪ್ರಸ್ತುತ ವೇಗ ಮತ್ತು ಅಭಿವೃದ್ಧಿಯ ಪ್ರಮಾಣವನ್ನು ಮೊದಲೇ ಏಕೆ ಸಾಧಿಸಲಾಗಿಲ್ಲ ಎಂದು ಸ್ವಾಭಾವಿಕವಾಗಿ ಪ್ರಶ್ನಿಸುತ್ತಾರೆ. ಉತ್ತರ ಸರಳವಾಗಿದೆ: ಹಿಂದಿನ ಸರ್ಕಾರಗಳು ಅಗತ್ಯವಾದ ನೀತಿಗಳು ಮತ್ತು ಉದ್ದೇಶ ಎರಡನ್ನೂ ಹೊಂದಿರಲಿಲ್ಲ.

ಸ್ನೇಹಿತರೇ,

ಭಾರತವು ಹಲವಾರು ಕ್ಷೇತ್ರಗಳಲ್ಲಿ, ವಿಶೇಷವಾಗಿ ತಂತ್ರಜ್ಞಾನದಲ್ಲಿ ಹೇಗೆ ಹಿಂದುಳಿದಿತ್ತು ಎಂಬುದನ್ನು ನೀವು ನೆನಪಿಸಿಕೊಳ್ಳಬಹುದು. ಜಾಗತಿಕವಾಗಿ ಹೊಸ ತಂತ್ರಜ್ಞಾನಗಳು ಹೊರಹೊಮ್ಮಿದರೂ, ಅವು ಅಂತಿಮವಾಗಿ ಯಾವಾಗ ನಮ್ಮನ್ನು ತಲುಪುತ್ತವೆ ಎಂದು ಯೋಚಿಸುತ್ತಾ ಭಾರತವು ಕಾಯಬೇಕಾಗಿತ್ತು. ಅದು ಬರುವ ಹೊತ್ತಿಗೆ, ಈ ತಂತ್ರಜ್ಞಾನಗಳು ಆಗಲೇ ಪಶ್ಚಿಮದಲ್ಲಿ ಹಳತಾಗಿರುತ್ತಿದ್ದವು. ನಮ್ಮ ದೇಶದಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂಬ ಮನಸ್ಥಿತಿ ಇತ್ತು, ಮತ್ತು ಗ್ರಹಿಕೆ ಅಪಾರ ನಷ್ಟವನ್ನುಂಟುಮಾಡಿತು. ಭಾರತವು ಆಧುನಿಕ ಅಭಿವೃದ್ಧಿಯ ಓಟದಲ್ಲಿ ಹಿಂದುಳಿದಿದೆ ಮಾತ್ರವಲ್ಲ, ಗಮನಾರ್ಹ ಉದ್ಯೋಗ ಮೂಲಗಳನ್ನು ಕಳೆದುಕೊಂಡಿದೆ. ಆಧುನಿಕ, ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳಿಲ್ಲದೆ, ನಾವು ಉದ್ಯೋಗಗಳನ್ನು ಹೇಗೆ ಸೃಷ್ಟಿಸಲು ಸಾಧ್ಯ? ಆದ್ದರಿಂದ, ಹಿಂದಿನ ಸರ್ಕಾರಗಳ ಹಳೆಯ ಆಲೋಚನೆಯಿಂದ ದೇಶವನ್ನು ಮುಕ್ತವಾಗಿಸಲು  ನಾವು ಕೆಲಸ ಮಾಡಲು ಪ್ರಾರಂಭಿಸಿದ್ದೇವೆ. ಬಾಹ್ಯಾಕಾಶ ವಲಯದಿಂದ ಅರೆವಾಹಕಗಳವರೆಗೆ, ಎಲೆಕ್ಟ್ರಾನಿಕ್ಸ್ ನಿಂದ ಎಲೆಕ್ಟ್ರಿಕ್ ವಾಹನಗಳವರೆಗೆ, ನಾವು ಪ್ರತಿಯೊಂದು ಹೊಸ ತಾಂತ್ರಿಕ ಕ್ಷೇತ್ರಗಳಲ್ಲಿ 'ಮೇಕ್ ಇನ್ ಇಂಡಿಯಾ'ವನ್ನು ಉತ್ತೇಜಿಸಿದ್ದೇವೆ. ನಾವು ಆತ್ಮನಿರ್ಭರ ಭಾರತವಾಗಿಸುವತ್ತ ಕೆಲಸ ಮಾಡಿದ್ದೇವೆ ಮತ್ತು ಹೊಸ ತಂತ್ರಜ್ಞಾನಗಳು ಹಾಗು  ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸಲು ಪಿಎಲ್ಐ ಯೋಜನೆಯನ್ನು ಪ್ರಾರಂಭಿಸಿದ್ದೇವೆ. 'ಮೇಕ್ ಇನ್ ಇಂಡಿಯಾ' ಉಪಕ್ರಮ ಮತ್ತು ಪಿಎಲ್ಐ ಯೋಜನೆ ಒಟ್ಟಾಗಿ ಉದ್ಯೋಗ ಸೃಷ್ಟಿಯನ್ನು ನಾಟಕೀಯವಾಗಿ ವೇಗಗೊಳಿಸಿದೆ. ಇಂದು, ಪ್ರತಿಯೊಂದು ಕ್ಷೇತ್ರದಲ್ಲೂ ಕೈಗಾರಿಕೆಗಳು ವೇಗವನ್ನು ಪಡೆಯುತ್ತಿವೆ, ವಿವಿಧ ಕ್ಷೇತ್ರಗಳಲ್ಲಿ ಯುವಜನರಿಗೆ ಹೊಸ ಅವಕಾಶಗಳನ್ನು ತೆರೆಯುತ್ತಿವೆ. ಬೃಹತ್ ಹೂಡಿಕೆಗಳನ್ನು ಮಾಡಲಾಗುತ್ತಿದೆ, ಮತ್ತು ದಾಖಲೆ ಮುರಿಯುವ ಅವಕಾಶಗಳು ಹೊರಹೊಮ್ಮುತ್ತಿವೆ. ಕಳೆದ ಎಂಟು ವರ್ಷಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ನವೋದ್ಯಮಗಳನ್ನು (ಸ್ಟಾರ್ಟ್ಅಪ್ಗಳನ್ನು)  ಪ್ರಾರಂಭಿಸಲಾಗಿದ್ದು, ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯನ್ನಾಗಿ ಮಾಡಿದೆ. ಈ ಎಲ್ಲಾ ಬೆಳವಣಿಗೆಗಳ ಮೂಲಕ, ನಮ್ಮ ಯುವಜನರಿಗೆ ಪ್ರಗತಿ ಸಾಧಿಸಲು ಮತ್ತು ಉದ್ಯೋಗವನ್ನು ಪಡೆಯಲು ಅವಕಾಶಗಳು ಲಭಿಸುತ್ತಿವೆ.  

ಸ್ನೇಹಿತರೇ,

ಭಾರತದ ಯುವಜನರ ಸಾಮರ್ಥ್ಯವನ್ನು ಹೆಚ್ಚಿಸಲು, ಸರ್ಕಾರವು ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಿದೆ. ಇದು ಸ್ಕಿಲ್ ಇಂಡಿಯಾದಂತಹ ಉಪಕ್ರಮಗಳ ಪ್ರಾರಂಭಕ್ಕೆ ಕಾರಣವಾಯಿತು. ಇಂದು, ಯುವಜನರು ದೇಶಾದ್ಯಂತ ನೂರಾರು ಕೌಶಲ್ಯ ಅಭಿವೃದ್ಧಿ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ನಮ್ಮ ಯುವಜನರು ಅನುಭವ ಮತ್ತು ಅವಕಾಶಗಳನ್ನು ಪಡೆಯಲು ಹೆಣಗಾಡಬೇಕಾಗಿಲ್ಲ ಎಂಬುದನ್ನು ನಾವು ಖಚಿತಪಡಿಸಿದ್ದೇವೆ. ಪ್ರಧಾನ್ ಮಂತ್ರಿ ಇಂಟರ್ನ್ಶಿಪ್ ಯೋಜನೆ ಅಡಿಯಲ್ಲಿ, ಭಾರತದ ಅಗ್ರ 500 ಕಂಪನಿಗಳಲ್ಲಿ ಪಾವತಿಸಿದ ಇಂಟರ್ನ್ಶಿಪ್ಗೆ ಅವಕಾಶ ಕಲ್ಪಿಸಲಾಗಿದೆ, ಇದರಡಿ ಪ್ರತಿ ತರಬೇತಿ ಪಡೆಯುವ ವ್ಯಕ್ತಿ ಒಂದು ವರ್ಷದವರೆಗೆ ತಿಂಗಳಿಗೆ 5,000 ರೂ. ಪಡೆಯುತ್ತಾರೆ.  ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಯುವಜನರು ಇಂಟರ್ನ್ಶಿಪ್ ಅವಕಾಶಗಳಿಂದ ಪ್ರಯೋಜನ ಪಡೆಯಬೇಕು ಎನ್ನುವುದು ನಮ್ಮ ಗುರಿಯಾಗಿದೆ, ಇದು ವಿವಿಧ ಕ್ಷೇತ್ರಗಳಲ್ಲಿ ನೈಜ-ಪ್ರಪಂಚದ ವ್ಯವಹಾರ ಪರಿಸರದೊಂದಿಗೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ. ಈ ಅನುಭವವು ಅವರ ವೃತ್ತಿಜೀವನಕ್ಕೆ ಅಮೂಲ್ಯವಾಗಿರುತ್ತದೆ.

ಸ್ನೇಹಿತರೇ,

ಯುವ ಭಾರತೀಯರಿಗೆ ವಿದೇಶದಲ್ಲಿ ಸುಲಭವಾಗಿ ಉದ್ಯೋಗ ಪಡೆಯುವುದಕ್ಕೆ ಸಹಾಯ ಮಾಡಲು ಭಾರತ ಸರ್ಕಾರ ಹೊಸ ಅವಕಾಶಗಳನ್ನು ತೆರೆಯುತ್ತಿದೆ. ಇತ್ತೀಚೆಗೆ, ಜರ್ಮನಿ, ನೀವು ಪತ್ರಿಕೆಗಳಲ್ಲಿ ಇದನ್ನು ಓದಿರಬಹುದು, ಭಾರತಕ್ಕಾಗಿ ನಿರ್ದಿಷ್ಟವಾಗಿ ನುರಿತ ಕೌಶಲ್ಯಯುಕ್ತ ಕಾರ್ಯಪಡೆ ಕಾರ್ಯತಂತ್ರವನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಜರ್ಮನಿ ವಾರ್ಷಿಕವಾಗಿ 20,000 ನುರಿತ ಭಾರತೀಯ ಯುವಜನರಿಗೆ ವೀಸಾ ನೀಡುತ್ತಿತ್ತು. ಈಗ, ಅವರು ಸಂಖ್ಯೆಯನ್ನು 90,000 ಕ್ಕೆ ಹೆಚ್ಚಿಸಲು ನಿರ್ಧರಿಸಿದ್ದಾರೆ, ಅಂದರೆ ಪ್ರತಿ ವರ್ಷ 90,000 ಯುವಜನರಿಗೆ ಜರ್ಮನಿಯಲ್ಲಿ ಕೆಲಸ ಮಾಡುವ ಅವಕಾಶವಿರುತ್ತದೆ, ಇದು ನಮ್ಮ ಯುವಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಇತ್ತೀಚಿನ ವರ್ಷಗಳಲ್ಲಿ, ಭಾರತವು ಗಲ್ಫ್ ರಾಷ್ಟ್ರಗಳು ಮತ್ತು ಆರ್ಥಿಕವಾಗಿ ಮುಂದುವರಿದ ದೇಶಗಳಾದ ಜಪಾನ್, ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಮಾರಿಷಸ್, ಇಸ್ರೇಲ್, ಯುಕೆ ಮತ್ತು ಇಟಲಿ ಸೇರಿದಂತೆ 21 ದೇಶಗಳೊಂದಿಗೆ ವಲಸೆ ಮತ್ತು ಉದ್ಯೋಗ ಒಪ್ಪಂದಗಳಿಗೆ ಸಹಿ ಹಾಕಿದೆ. ಪ್ರತಿ ವರ್ಷ, 3,000 ಭಾರತೀಯರು ಯುಕೆಯಲ್ಲಿ ಎರಡು ವರ್ಷಗಳ ಕೆಲಸ ಮತ್ತು ಅಧ್ಯಯನ ವೀಸಾಕ್ಕೆ ಅರ್ಹರಾಗಿದ್ದಾರೆ ಮತ್ತು 3,000 ಭಾರತೀಯ ವಿದ್ಯಾರ್ಥಿಗಳಿಗೆ ಆಸ್ಟ್ರೇಲಿಯಾದಲ್ಲಿ ಅಧ್ಯಯನ ಮಾಡಲು ಅವಕಾಶವಿದೆ. ಭಾರತದ ಪ್ರತಿಭೆಯು ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವುದಲ್ಲದೆ, ಜಗತ್ತಿನ ಪ್ರಗತಿಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿದೆ, ಮತ್ತು ನಾವು ಆ ನಿಟ್ಟಿನಲ್ಲಿ ಮುಂದುವರಿಯುತ್ತಿದ್ದೇವೆ.

ಸ್ನೇಹಿತರೇ,

ಇಂದು, ಪ್ರತಿಯೊಬ್ಬ ಯುವ ವ್ಯಕ್ತಿಗೆ ಅವಕಾಶಗಳಿಗೆ ಪ್ರವೇಶವಿರುವ ಮತ್ತು ಅವರ ಆಕಾಂಕ್ಷೆಗಳನ್ನು ಪೂರೈಸುವ ಆಧುನಿಕ ವ್ಯವಸ್ಥೆಯನ್ನು ರಚಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದ್ದರಿಂದ, ನೀವು ಯಾವುದೇ ಸ್ಥಾನದಲ್ಲಿದ್ದರೂ, ಯುವಜನರು ಮತ್ತು ನಾಗರಿಕರಿಗೆ ಗರಿಷ್ಠ ಬೆಂಬಲ ಮತ್ತು ಸೌಲಭ್ಯಗಳನ್ನು ಒದಗಿಸುವುದು ನಿಮ್ಮ ಗುರಿಯಾಗಿರಬೇಕು.

ಸ್ನೇಹಿತರೇ,

ದೇಶದ ತೆರಿಗೆದಾರರು ಮತ್ತು ನಾಗರಿಕರು ನಿಮಗೆ ಸರ್ಕಾರಿ ಸ್ಥಾನವನ್ನು ಪಡೆಯಲು ಅನುವು ಮಾಡಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಮ್ಮ ಸ್ಥಾನಗಳು ಮತ್ತು ಅವಕಾಶಗಳಿಗೆ ನಾವು ಅವರಿಗೆ ಋಣಿಯಾಗಿದ್ದೇವೆ ಮತ್ತು ನಮ್ಮ ನೇಮಕಾತಿಗಳು ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಮಾತ್ರ. ಖರ್ಚು ಮತ್ತು ಪ್ರಭಾವದಿಂದ ಮುಕ್ತವಾದ ಅರ್ಹತೆ ಆಧಾರಿತ ಉದ್ಯೋಗಗಳ ಹೊಸ ಸಂಸ್ಕೃತಿಯು ಜವಾಬ್ದಾರಿಯೊಂದಿಗೆ ಬರುತ್ತದೆ: ಈ ಸಾಲವನ್ನು ನಾಗರಿಕರ ಜೀವನದಲ್ಲಿನ ಸವಾಲುಗಳನ್ನು ಸರಾಗಗೊಳಿಸುವ ಮರುಪಾವತಿಸಬೇಕಾಗುತ್ತದೆ. ಪೋಸ್ಟ್ ಮ್ಯಾನ್ ಆಗಿ ಅಥವಾ ಪ್ರೊಫೆಸರ್ ಆಗಿ ನಮ್ಮ ಸ್ಥಾನ ಅಥವಾ ಪಾತ್ರ ಏನೇ ಇರಲಿ, ಈ ರಾಷ್ಟ್ರದ ಜನರಿಗೆ, ವಿಶೇಷವಾಗಿ ಬಡವರಿಗೆ, ಸಮಾಜದ ಅಂಚಿನಲ್ಲಿರುವವರಿಗೆ, ತುಳಿತಕ್ಕೊಳಗಾದವರಿಗೆ, ಬುಡಕಟ್ಟು ಜನಾಂಗದವರಿಗೆ, ಮಹಿಳೆಯರಿಗೆ ಮತ್ತು ಯುವಜನರಿಗೆ ಸೇವೆ ಸಲ್ಲಿಸುವುದು ನಮ್ಮ ಕರ್ತವ್ಯ. ನಮಗೆ ಯಾರ ಸೇವೆಮಾಡಲು ಅವಕಾಶವಿದೆಯೋ, ಅದನ್ನು ನಮ್ಮ ಸುಯೋಗವೆಂದು ಪರಿಗಣಿಸೋಣ ಮತ್ತು ಅದಕ್ಕೆ ನಮ್ಮನ್ನು ಸಮರ್ಪಿಸಿಕೊಳ್ಳೋಣ.

ರಾಷ್ಟ್ರವು ನವ ಭಾರತವನ್ನು ಅಭಿವೃದ್ಧಿಪಡಿಸಲು ಬದ್ಧವಾಗಿರುವ ಸಮಯದಲ್ಲಿ ನೀವು ಭಾರತ ಸರ್ಕಾರವನ್ನು ಸೇರುತ್ತಿದ್ದೀರಿ. ಇದನ್ನು ಸಾಧಿಸಲು, ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಉತ್ಕೃಷ್ಟರಾಗಿರಬೇಕು, ಮತ್ತು ನಿಮ್ಮಂತಹ ಯುವ ಸಹೋದ್ಯೋಗಿಗಳ ಕೊಡುಗೆಯಿಲ್ಲದೆ ಇದು ಸಾಧ್ಯವಿಲ್ಲ. ಆದ್ದರಿಂದ, ನಿಮ್ಮ ಗುರಿ ಉತ್ತಮವಾಗಿ ಕೆಲಸ ಮಾಡುವುದು ಮಾತ್ರವಲ್ಲ, ಅಸಾಧಾರಣವಾಗಿ ಕೆಲಸ ಮಾಡುವುದು. ನಮ್ಮ ದೇಶದ ಸರ್ಕಾರಿ ನೌಕರರು ವಿಶ್ವಾದ್ಯಂತ ಗುರುತಿಸಲ್ಪಡುವಂತಹ  ಉದಾಹರಣೆಗಳನ್ನು ಸ್ಥಾಪಿಸುವಂತಾಗಬೇಕು. ಸ್ವಾಭಾವಿಕವಾಗಿ, ದೇಶವು ನಮ್ಮಿಂದ ನಿರೀಕ್ಷೆಗಳನ್ನು ಹೊಂದಿದೆ, ಮತ್ತು ಮಹತ್ವಾಕಾಂಕ್ಷೆಯ ಆಶೋತ್ತರಗಳ  ಭಾರತದ ಸ್ಫೂರ್ತಿಯೊಂದಿಗೆ, ಈ ನಿರೀಕ್ಷೆಗಳು ಇನ್ನೂ ಹೆಚ್ಚಾಗುತ್ತವೆ. ಆದಾಗ್ಯೂ, ಈ ನಿರೀಕ್ಷೆಗಳು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತವೆ, ರಾಷ್ಟ್ರದ ಪ್ರಗತಿಗೆ ಉತ್ತೇಜನ ನೀಡುತ್ತವೆ. ಈ ನಂಬಿಕೆಯು ಜನರ ಭರವಸೆಗಳಿಗೆ ಅನುಗುಣವಾಗಿ ಬದುಕುವ ಜವಾಬ್ದಾರಿಯನ್ನು ನಮ್ಮ ಮೇಲೆ ಇರಿಸಿದೆ..

ಸ್ನೇಹಿತರೇ,

ನೇಮಕಾತಿಯೊಂದಿಗೆ, ನೀವು ನಿಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೀರಿ. ನಾವು ಸೇವಕರು, ಆಡಳಿತಗಾರರಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ವಿನಮ್ರರಾಗಿರಿ ಎಂದು ನಾನು ನಿಮ್ಮನ್ನು ಆಗ್ರಹಿಸುತ್ತೇನೆ. ಈ ಪ್ರಯಾಣದುದ್ದಕ್ಕೂ, ಕಲಿಕೆಯನ್ನು ಎಂದಿಗೂ ನಿಲ್ಲಿಸಬೇಡಿ; ಹೊಸ ಕೌಶಲ್ಯಗಳನ್ನು ಪಡೆಯುತ್ತಲೇ ಇರಿ. ಸರ್ಕಾರಿ ನೌಕರರಿಗೆ, ಕೇಂದ್ರ ಸರ್ಕಾರವು ಐಜಿಒಟಿ ಕರ್ಮಯೋಗಿ ವೇದಿಕೆಯಲ್ಲಿ ವಿವಿಧ ಕೋರ್ಸ್ಗಳನ್ನು ನೀಡುತ್ತದೆ. ನೀವು ಡಿಜಿಟಲ್ ತರಬೇತಿ ಮಾಡ್ಯೂಲ್ ಗಳನ್ನು ಆನ್ ಲೈನ್ ನಲ್ಲಿ ಪ್ರವೇಶಿಸಬಹುದು, ನಿಮಗೆ ಸಮಯ ಸಿಕ್ಕಾಗಲೆಲ್ಲಾ ನಿಮ್ಮ ಆಸಕ್ತಿಯ ವಿಷಯಗಳ ಕೋರ್ಸ್ ಗಳನ್ನು ಪೂರ್ಣಗೊಳಿಸಬಹುದು. ನಿಮ್ಮ ಜ್ಞಾನವನ್ನು ವಿಸ್ತರಿಸಲು ಸಂಪನ್ಮೂಲಗಳ ಸಂಪೂರ್ಣ ಲಾಭವನ್ನು ಪಡೆಯಿರಿ.

ಸ್ನೇಹಿತರೇ,

ನಿಮ್ಮ ಪ್ರಯತ್ನಗಳ ಮೂಲಕ ಭಾರತವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರದ ಸ್ಥಾನಮಾನವನ್ನು ತಲುಪಲಿದೆ ಎಂಬ ವಿಶ್ವಾಸ ನನಗಿದೆ. ಇಂದು, ನೀವು 20, 22, ಅಥವಾ 25 ವರ್ಷ ವಯಸ್ಸಿನವರಾಗಿರಬಹುದು; ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾದಾಗ ನೀವು ನಿಮ್ಮ ವೃತ್ತಿಜೀವನದ ಪ್ರಮುಖ ಹಂತದಲ್ಲಿರುತ್ತೀರಿ. ಆಗ ನಿಮ್ಮ 25 ವರ್ಷಗಳ ಕಠಿಣ ಪರಿಶ್ರಮವು ಅಭಿವೃದ್ಧಿ ಹೊಂದಿದ ಭಾರತವನ್ನು ರೂಪಿಸಲು ಸಹಾಯ ಮಾಡಿದೆ ಎಂದು ನೀವು ಹೆಮ್ಮೆಯಿಂದ ಹೇಳಲು ಸಾಧ್ಯವಾಗುತ್ತದೆ. ಇದು ಎಂತಹ ಅದ್ಭುತ ಅವಕಾಶ ಮತ್ತು ಗೌರವ! ನೀವು ಕೇವಲ ಉದ್ಯೋಗವನ್ನು ಮಾತ್ರವೇ ಗಳಿಸಿರುವುದಲ್ಲ; ನೀವು ಸಮೃದ್ಢವಾದ ಅವಕಾಶವನ್ನು ಪಡೆದುಕೊಂಡಿದ್ದೀರಿ. ಈ ಅವಕಾಶವನ್ನು ಬಳಸಿಕೊಳ್ಳಲು, ನಿಮ್ಮ ಕನಸುಗಳನ್ನು ಬಲಪಡಿಸಲು ಮತ್ತು ಸಂಕಲ್ಪದೊಂದಿಗೆ ಬದುಕಲು ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ. ಅಭಿವೃದ್ಧಿ ಹೊಂದಿದ ಭಾರತದ ನಮ್ಮ ಕನಸು ನನಸಾಗುವವರೆಗೂ ನಾವು ವಿರಮಿಸುವುದಿಲ್ಲ. ಸಮರ್ಪಿತ ಸಾರ್ವಜನಿಕ ಸೇವೆಯ ಮೂಲಕ ನಾವು ನಮ್ಮ ಜವಾಬ್ದಾರಿಯನ್ನು ಪೂರೈಸುತ್ತೇವೆ.

ಇಂದು ತಮ್ಮ ನೇಮಕಾತಿ ಪತ್ರಗಳನ್ನು ಸ್ವೀಕರಿಸಿದ ಎಲ್ಲಾ ಸ್ನೇಹಿತರಿಗೆ ನಾನು ಮತ್ತೊಮ್ಮೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮುಂದಿನ ಉಜ್ವಲ ಭವಿಷ್ಯಕ್ಕಾಗಿ ನಾನು ನಿಮಗೆ ಎಲ್ಲಾ ಯಶಸ್ಸನ್ನು ಬಯಸುತ್ತೇನೆ. ಇಂದು, ನಿಮ್ಮ ಕುಟುಂಬಗಳು ಸಹ ವಿಶೇಷ ಸಂತೋಷದಲ್ಲಿ ಭಾಗವಹಿಸುತ್ತಿವೆ, ಮತ್ತು ನಾನು ಅವರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ದೀಪಾವಳಿ ಮತ್ತು ಹೊಸ ಅವಕಾಶದೊಂದಿಗೆ, ಇದು ನಿಜವಾಗಿಯೂ ನಿಮಗೆ ದುಪ್ಪಟ್ಟು ಸಂಭ್ರಮದ ಆಚರಣೆಯಾಗಿದೆ. ಸ್ನೇಹಿತರೇ, ಈ ಕ್ಷಣವನ್ನು ಆನಂದಿಸಿ. ಎಲ್ಲರಿಗೂ ಒಳ್ಳೆಯದಾಗಲಿ.

ಧನ್ಯವಾದಗಳು.

 

*****


(Release ID: 2069932) Visitor Counter : 52