ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ವಿಶ್ವಸಂಸ್ಥೆಯ 'ಭವಿಷ್ಯದ ಶೃಂಗಸಭೆ'ಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಹೇಳಿಕೆಗಳ ಕನ್ನಡ ಅವತರಣಿಕೆ

Posted On: 23 SEP 2024 10:12PM by PIB Bengaluru

ಮಹನೀಯರೇ,

ಭಾರತದ ಪರವಾಗಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು 1.4 ಶತಕೋಟಿ ಭಾರತೀಯರ ಪರವಾಗಿ, ನಿಮ್ಮೆಲ್ಲರಿಗೂ ಶುಭಾಶಯಗಳು. ಇತ್ತೀಚಿಗೆ ಜೂನ್ ನಲ್ಲಿ ನಡೆದ ಮಾನವ ಇತಿಹಾಸದಲ್ಲೇ ಅತಿ ದೊಡ್ಡ ಚುನಾವಣೆಗಳಲ್ಲಿ, ಭಾರತದ ಜನರು ಸತತ ಮೂರನೇ ಅವಧಿಗೆ ತಮ್ಮ ಸೇವೆ ಮಾಡುವ ಅವಕಾಶವನ್ನು ನನಗೆ ನೀಡಿದ್ದಾರೆ. ಮತ್ತು ಇಂದು ನಾನು ಈ ಜಗತ್ತಿನ ಮಾನವೀಯತೆಯ ಆರನೇ ಒಂದು ಭಾಗದ ಧ್ವನಿಯನ್ನು ನಿಮ್ಮ ಮುಂದೆ ತರುತ್ತೇನೆ. ,

ಸ್ನೇಹಿತರೇ,

ನಾವು ಜಾಗತಿಕ ಭವಿಷ್ಯವನ್ನು ಚರ್ಚಿಸುತ್ತಿರುವಾಗ, ಮಾನವ ಕೇಂದ್ರಿತ ವಿಧಾನಕ್ಕೆ ನಾವು ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡುವಾಗ, ನಾವು ಮಾನವ ಕಲ್ಯಾಣ, ಆಹಾರ ಮತ್ತು ಆರೋಗ್ಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು. ಭಾರತದಲ್ಲಿ 250 ದಶಲಕ್ಷ ಜನರನ್ನು ಬಡತನದಿಂದ ಮೇಲೆತ್ತುವ ಮೂಲಕ, ಸುಸ್ಥಿರ ಅಭಿವೃದ್ಧಿ ಯಶಸ್ವಿಯಾಗಬಹುದೆಂದು ನಾವು ಮಾಡಿ ತೋರಿಸಿಕೊಟ್ಟಿದ್ದೇವೆ. ಮತ್ತು ನಮ್ಮ ಯಶಸ್ಸಿನ ಅನುಭವವನ್ನು ಇಡೀ ಜಾಗತಿಕ ದಕ್ಷಿಣದ ದೇಶಗಳೊಂದಿಗೆ ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ. ,

ಸ್ನೇಹಿತರೇ,

ಮಾನವೀಯತೆಯ ಯಶಸ್ಸು ನಮ್ಮ ಸಾಮೂಹಿಕ ಶಕ್ತಿಯಲ್ಲಿದೆ, ಯುದ್ಧಭೂಮಿಯಲ್ಲಿ ಅಲ್ಲ. ಮತ್ತು ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗಾಗಿ, ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳು ಅತ್ಯಗತ್ಯ. ಸುಧಾರಣೆಯು ಪ್ರಸ್ತುತತೆಯ ಕೀಲಿಕೈಯಾಗಿದೆ! ನವದೆಹಲಿಯ ಶೃಂಗಸಭೆಯಲ್ಲಿ ಆಫ್ರಿಕನ್ ಯೂನಿಯನ್ ಗೆ ಜಿ20 ಯ ಶಾಶ್ವತ ಸದಸ್ಯತ್ವವು ಈ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಒಂದೆಡೆ, ಭಯೋತ್ಪಾದನೆಯು ಜಾಗತಿಕ ಶಾಂತಿ ಮತ್ತು ಭದ್ರತೆಗೆ ಗಂಭೀರ ಬೆದರಿಕೆಯಾಗಿ ಮುಂದುವರಿದರೆ, ಮತ್ತೊಂದೆಡೆ, ಸೈಬರ್, ಸಮುದ್ರ ಮತ್ತು ಬಾಹ್ಯಾಕಾಶದಂತಹ ಕ್ಷೇತ್ರಗಳು ಸಂಘರ್ಷದ ಹೊಸ ರಂಗಭೂಮಿಗಳಾಗಿ ಹೊರಹೊಮ್ಮುತ್ತಿವೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ, ನಾನು ಒತ್ತಿ ಹೇಳುತ್ತೇನೆ, ಜಾಗತಿಕ ಕ್ರಿಯೆಯು ಜಾಗತಿಕ ಮಹತ್ವಾಕಾಂಕ್ಷೆಗೆ ಹೊಂದಿಕೆಯಾಗಬೇಕು!,

ಸ್ನೇಹಿತರೇ,

ತಂತ್ರಜ್ಞಾನದ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಗಾಗಿ ಸಮತೋಲಿತ ನಿಯಂತ್ರಣದ ಅವಶ್ಯಕತೆಯಿದೆ. ನಮಗೆ ಜಾಗತಿಕ ಡಿಜಿಟಲ್ ಆಡಳಿತದ ಅಗತ್ಯವಿದೆ, ಇದು ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುತ್ತದೆ ಎಂದು ಖಚಿತಪಡಿಸುತ್ತದೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಸೇತುವೆಯಾಗಬೇಕು, ತಡೆಗೋಡೆಯಲ್ಲ! ಜಾಗತಿಕ ಒಳಿತಿಗಾಗಿ, ಭಾರತವು ತನ್ನ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ವ್ಯವಸ್ಥೆಯನ್ನು ಇಡೀ ಪ್ರಪಂಚದೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಿದೆ.

ಸ್ನೇಹಿತರೇ,

ಭಾರತಕ್ಕೆ, "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಎಂಬುದು ಒಂದು ಬದ್ಧತೆಯಾಗಿದೆ. ಈ ಬದ್ಧತೆಯು ನಮ್ಮ ಉಪಕ್ರಮಗಳಾದ "ಒಂದು ಭೂಮಿ, ಒಂದು ಆರೋಗ್ಯ" ಮತ್ತು "ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್" ಗಳಲ್ಲಿಯೂ ಪ್ರತಿಫಲಿಸುತ್ತದೆ. ಭಾರತವು ಈ ವಿಷಯದಲ್ಲಿ ಇನ್ನೂ ಮುಂದುವರಿಯುತ್ತಾ,  ಎಲ್ಲಾ ಮಾನವೀಯತೆಯ ಹಕ್ಕುಗಳನ್ನು ರಕ್ಷಿಸಲು ಮತ್ತು ಜಾಗತಿಕ ಸಮೃದ್ಧಿಗಾಗಿ ಚಿಂತನೆ, ಮಾತುಗಳು ಮತ್ತು ಕಾರ್ಯಗಳಲ್ಲಿ ಕೆಲಸ ಮಾಡಲು ಯೋಚಿಸಿ, ಪ್ರಯತ್ನಿಸುತ್ತಿದೆ.

ತುಂಬಾ ಧನ್ಯವಾದಗಳು.

ಹಕ್ಕು ನಿರಾಕರಣೆ - ಇದು ಪ್ರಧಾನಮಂತ್ರಿಯವರ ಹೇಳಿಕೆಯ (ಟಿಪ್ಪಣಿ)  ಅಂದಾಜು ಕನ್ನಡ ಅನುವಾದವಾಗಿದೆ. ಮೂಲ ಹೇಳಿಕೆಯನ್ನು ಹಿಂದಿಯಲ್ಲಿ ಮಾಡಲಾಗಿದೆ.

 

***** 



(Release ID: 2058418) Visitor Counter : 12