ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav g20-india-2023

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ​​​​​​​ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಅಧಿಕೃತ ಭಾಷಾ ವಜ್ರ ಮಹೋತ್ಸವ ಆಚರಣೆ ಮತ್ತು 4 ನೇ ಅಖಿಲ ಭಾರತೀಯ ರಾಜಭಾಷಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು


ಹಿಂದಿ ದಿವಸ್ ಅಧಿಕೃತ ಭಾಷೆಯನ್ನು ಸಂವಹನ, ಜನರು ಹಾಗೂ ತಂತ್ರಜ್ಞಾನದ ಭಾಷೆಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ ಮತ್ತು ಅದನ್ನು ಅಂತರರಾಷ್ಟ್ರೀಯ ಭಾಷೆಯಾಗಿ ಪಸರಿಸುತ್ತದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ

ಭಾರತೀಯ ಭಾಷೆಗಳ ವಿಭಾಗವು ಮುಂದಿನ ವರ್ಷಗಳಲ್ಲಿ ಎಲ್ಲಾ ಭಾರತೀಯ ಭಾಷೆಗಳ ರಕ್ಷಣೆಯ ಕೇಂದ್ರವಾಗಲಿದೆ

ಎಲ್ಲಾ ಭಾಷೆಗಳ ನಡುವೆ ಭಾರತೀಯ ಭಾಷೆಗಳಿಗೆ ಭವಿಷ್ಯವಿದೆ

ಎಲ್ಲಾ ಭಾರತೀಯ ಭಾಷೆಗಳನ್ನು ಬಲಪಡಿಸದೆ ಮತ್ತು ಹಿಂದಿಯೊಂದಿಗೆ ಅವುಗಳ ಪರಸ್ಪರ ಹೊಂದಾಣಿಕೆಯನ್ನು ಸ್ಥಾಪಿಸದೆ, ಅಧಿಕೃತ ಭಾಷೆಯನ್ನು ಉತ್ತೇಜಿಸಲು ಸಾಧ್ಯವಿಲ್ಲ

ಹಿಂದಿ ಮತ್ತು ಇತರ ಭಾರತೀಯ ಭಾಷೆಗಳ ನಡುವೆ ಎಂದಿಗೂ ಸ್ಪರ್ಧೆ ಇರಬಾರದು, ಹಿಂದಿ ಎಲ್ಲಾ ಭಾರತೀಯ ಭಾಷೆಗಳಿಗೆ ಪೂರಕವಾಗಿದೆ

ಮುಂಬರುವ ವರ್ಷಗಳಲ್ಲಿ ಹಿಂದಿ ನಿಘಂಟು ಬೃಹತ್‌ ನಿಘಂಟು ಆಗಲಿದೆ

ಹಿಂದಿಯನ್ನು ಹೋರಾಟದಿಂದ ಅಲ್ಲ, ದಿಟ್ಟ ಸ್ವೀಕಾರದಿಂದ ಮುನ್ನಡೆಸಬೇಕಿದೆ

ತಮ್ಮ ಭಾಷೆಗಳನ್ನು ರಕ್ಷಿಸಲು ಸಾಧ್ಯವಾಗದ ದೇಶಗಳು ಅವರ ಇತಿಹಾಸ, ಸಾಹಿತ್ಯ ಮತ್ತು ಸಂಸ್ಕೃತಿಯಿಂದ ದೂರವಾಗುತ್ತವೆ

ಇಂದು, ಹಿಂದಿ ವಿಶ್ವಸಂಸ್ಥೆಯ ಭಾಷೆಯಾಗುವುದರೊಂದಿಗೆ, 10 ಕ್ಕೂ ಹೆಚ್ಚು ದೇಶಗಳಲ್ಲಿ ಎರಡನೇ ಭಾಷೆಯಾಗಿದೆ

ನಮ್ಮ ಭಾಷೆಗಳನ್ನು ಕಳೆದುಕೊಳ್ಳುವ ದಿನ ದೇಶದ ಏಕತೆಗೆ ಅಪಾಯ ಬಂದೊದಗುತ್ತದೆ

Posted On: 14 SEP 2024 4:52PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಅಧಿಕೃತ ಭಾಷಾ ವಜ್ರ ಮಹೋತ್ಸವ ಆಚರಣೆ ಮತ್ತು 4 ನೇ ಅಖಿಲ ಭಾರತೀಯ ರಾಜಭಾಷಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಶೇಷವಾಗಿ ಸಿದ್ಧಪಡಿಸಿದ ‘ರಾಜಭಾಷಾ ಭಾರತಿ’ಪತ್ರಿಕೆಯ ವಜ್ರಮಹೋತ್ಸವ ವಿಶೇಷ ಸಂಚಿಕೆಯನ್ನು ಗೃಹ ಸಚಿವರು ಬಿಡುಗಡೆ ಮಾಡಿದರು. ವಜ್ರ ಮಹೋತ್ಸವದ ಅಂಗವಾಗಿ ಶ್ರೀ ಅಮಿತ್ ಶಾ ಅವರು ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು. ಶ್ರೀ ಶಾ ಅವರು ರಾಜಭಾಷಾ ಗೌರವ ಮತ್ತು ರಾಜಭಾಷಾ ಕೀರ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಗೃಹ ಸಚಿವರು ಭಾರತೀಯ ಭಾಷಾ ಅನುಭಾಗ್ (ಭಾರತೀಯ ಭಾಷಾ ವಿಭಾಗ) ಕ್ಕೂ ಚಾಲನೆ ನೀಡಿದರು.

ಕಳೆದ 75 ವರ್ಷಗಳ ಪ್ರಯಾಣವು ಹಿಂದಿಯನ್ನು ಅಧಿಕೃತ ಭಾಷೆಯಾಗಿ ಸ್ವೀಕರಿಸುವುದು ಮತ್ತು ಅದರ ಮೂಲಕ ದೇಶದ ಎಲ್ಲಾ ಸ್ಥಳೀಯ ಭಾಷೆಗಳನ್ನು ಸಂಪರ್ಕಿಸುವ ಮೂಲಕ ನಮ್ಮ ಸಂಪ್ರದಾಯಗಳು, ಸಂಸ್ಕೃತಿ, ಭಾಷೆಗಳು, ಸಾಹಿತ್ಯ, ಕಲೆ ಮತ್ತು ವ್ಯಾಕರಣವನ್ನು ಸಂರಕ್ಷಿಸಲು ಮತ್ತು ಉತ್ತೇಜಿಸುವುದಾಗಿದೆ ಎಂದು ಗೃಹ ಸಚಿವರು ತಮ್ಮ ಭಾಷಣದಲ್ಲಿ ಹೇಳಿದರು. ಹಿಂದಿ ಭಾಷೆಯ 75 ವರ್ಷಗಳ ಪಯಣವು ತನ್ನ ಗುರಿಗಳನ್ನು ಸಾಧಿಸುವ ಅಂತಿಮ ಹಂತದಲ್ಲಿದೆ ಎಂದು ಅವರು ಹೇಳಿದರು ಮತ್ತು ಹಿಂದಿಯನ್ನು ಸಂವಹನ, ಜನರು, ತಂತ್ರಜ್ಞಾನದ ಭಾಷೆಯಾಗಿ ಮತ್ತು ಈಗ ಅಂತರರಾಷ್ಟ್ರೀಯ ಭಾಷೆಯನ್ನಾಗಿ ಮಾಡುವ ದಿನ ಇದಾಗಿದೆ ಎಂದು ಹೇಳಿದರು.

ಇಂದು ಭಾರತೀಯ ಭಾಷೆಗಳ ವಿಭಾಗವನ್ನು ಉದ್ಘಾಟಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಒಂದು ಸಣ್ಣ ಬೀಜವನ್ನು ಬಿತ್ತುವ ರೀತಿಯ ಹೊಸ ಆರಂಭಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ ಮತ್ತು ಶೀಘ್ರದಲ್ಲೇ ಅದು ದೊಡ್ಡ ಆಲದ ಮರವಾಗಿ ಬೆಳೆಯುತ್ತದೆ ಎಂದು ಹೇಳಿದರು. ಈ ಭಾರತೀಯ ಭಾಷಾ ವಿಭಾಗವು ಮುಂದಿನ ವರ್ಷಗಳಲ್ಲಿ ನಮ್ಮ ಭಾಷೆಗಳ ರಕ್ಷಣೆಯ ಕೇಂದ್ರವಾಗಲಿದೆ ಎಂದು ಹೇಳಿದರು. ಭಾರತೀಯ ಭಾಷಾ ವಿಭಾಗವು ಅಧಿಕೃತ ಭಾಷಾ ಇಲಾಖೆಯ ಪೂರಕ ವಿಭಾಗವಾಗಲಿದೆ ಎಂದು ಅವರು ಹೇಳಿದರು, ಏಕೆಂದರೆ ನಾವು ನಮ್ಮ ಎಲ್ಲಾ ಸ್ಥಳೀಯ ಭಾಷೆಗಳನ್ನು ಬಲಪಡಿಸುವವರೆಗೆ ಮತ್ತು ಅಧಿಕೃತ ಭಾಷೆ ಮತ್ತು ಇತರ ಭಾರತೀಯ ಭಾಷೆಗಳ ನಡುವೆ ಸಂವಾದವನ್ನು ಸ್ಥಾಪಿಸುವವರೆಗೆ ಅಧಿಕೃತ ಭಾಷೆಯ ಉತ್ತೇಜನ ಸಾಧ್ಯವಾಗುವುದಿಲ್ಲ  ಎಂದು ಅವರು ಹೇಳಿದರು.

ಹಿಂದಿ ಮತ್ತು ಸ್ಥಳೀಯ ಭಾಷೆಗಳ ನಡುವೆ ಎಂದಿಗೂ ಪೈಪೋಟಿ ಇರಲಾರದು, ಏಕೆಂದರೆ ಹಿಂದಿ ಎಲ್ಲಾ ಸ್ಥಳೀಯ ಭಾಷೆಗಳ ಮಿತ್ರನಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಹಿಂದಿ ಮತ್ತು ಸ್ಥಳೀಯ ಭಾಷೆಗಳು ಒಂದಕ್ಕೊಂದು ಪೂರಕವಾಗಿದ್ದು, ಅದಕ್ಕಾಗಿಯೇ ಭಾರತೀಯ ಭಾಷೆಗಳ ವಿಭಾಗದ ಮೂಲಕ ಹಿಂದಿ ಮತ್ತು ಎಲ್ಲಾ ಸ್ಥಳೀಯ ಭಾಷೆಗಳ ನಡುವಿನ ಬಾಂಧವ್ಯವನ್ನು ಬಲಪಡಿಸಲಾಗುವುದು ಎಂದು ಹೇಳಿದರು. ಯಾವುದೇ ಲೇಖನ, ಭಾಷಣ ಅಥವಾ ಪತ್ರ ಹಿಂದಿಯಲ್ಲಿದ್ದರೆ ಅದನ್ನು ಭಾರತೀಯ ಭಾಷಾ ವಿಭಾಗವು ದೇಶದ ಎಲ್ಲಾ ಭಾಷೆಗಳಿಗೆ ಅನುವಾದಿಸುತ್ತದೆ ಎಂದು ಹೇಳಿದರು. ಅದೇ ರೀತಿ ದೇಶದ ಎಲ್ಲ ಭಾಷೆಗಳ ಸಾಹಿತ್ಯ, ಲೇಖನ, ಭಾಷಣಗಳನ್ನು ಹಿಂದಿಗೆ ಅನುವಾದಿಸಲಾಗುವುದು, ಇದು ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಸ್ವರಾಜ್ಯ, ಸ್ವಧರ್ಮ ಮತ್ತು ಸ್ವಭಾಷೆಯನ್ನು ಮೈಗೂಡಿಸಿಕೊಳ್ಳದವರು ತಮ್ಮ ಮುಂದಿನ ಪೀಳಿಗೆಯನ್ನು ಗುಲಾಮ ಮನಸ್ಥಿತಿಯಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಸ್ವರಾಜ್ಯದ ವ್ಯಾಖ್ಯಾನದಲ್ಲಿಯೇ ಸ್ವಭಾಷೆ ಸೇರಿದೆ ಎಂದರು. ದೇಶ ಮತ್ತು ಭಾಷೆಗಳನ್ನು ರಕ್ಷಿಸಲು ಸಾಧ್ಯವಾಗದ ಜನರು ತಮ್ಮ ಇತಿಹಾಸ, ಸಾಹಿತ್ಯ, ಸಂಸ್ಕೃತಿಯಿಂದ ದೂರವಾಗುತ್ತಾರೆ ಮತ್ತು ಅವರ ಮುಂದಿನ ಪೀಳಿಗೆಗಳು ಗುಲಾಮ ಮನಸ್ಥಿತಿಯಲ್ಲಿ ಬದುಕುತ್ತವೆ ಎಂದು ಹೇಳಿದರು. ಸ್ವಾತಂತ್ರ್ಯದ 75 ವರ್ಷಗಳ ನಂತರವೂ ನಾವು ಶಿವಾಜಿ ಮಹಾರಾಜರ ಸ್ವರಾಜ್, ಸ್ವಭಾಷೆ ಮತ್ತು ಸ್ವಧರ್ಮದ ತತ್ವಗಳಿಗೆ ಒತ್ತು ನೀಡುವ ಮೂಲಕ ಕೆಲಸ ಮಾಡುವುದು ಬಹಳ ಮುಖ್ಯವಾಗಿದೆ ಎಂದು ಶ್ರೀ ಶಾ ಹೇಳಿದರು. ಹೊಸ ಶಿಕ್ಷಣ ನೀತಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಲು ಒತ್ತು ನೀಡಿದ್ದಾರೆ ಎಂದು ಅವರು ಹೇಳಿದರು. ಮಗುವಿಗೆ ಭಾಷಿಕ ಅಭಿವ್ಯಕ್ತಿ, ಚಿಂತನೆ, ತಿಳುವಳಿಕೆ, ತರ್ಕ, ವಿಶ್ಲೇಷಣೆ ಮತ್ತು ನಿರ್ಧಾರಕ್ಕೆ ಬರಲು ಅತ್ಯಂತ ಸುಲಭವಾದ ಭಾಷೆ ಮಾತೃಭಾಷೆಯಾಗಿದೆ. ಈ ಕಾರಣಕ್ಕಾಗಿ ಪ್ರಧಾನಿ ಮೋದಿಯವರು ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ಹೆಚ್ಚಿನ ಒತ್ತು ನೀಡಿದ್ದಾರೆ ಎಂದು ಹೇಳಿದರು. ಇಂದು ಭಾರತದ ಎಲ್ಲಾ ಭಾಷೆಗಳನ್ನು ಬಲಪಡಿಸುವ ಮತ್ತು ಅಧಿಕೃತ ಭಾಷೆಯನ್ನು ದೇಶದ ಸಂಪರ್ಕ ಭಾಷೆಯನ್ನಾಗಿ ಮಾಡುವ ದಿನವಾಗಿದೆ ಎಂದು ಗೃಹ ಸಚಿವರು ಹೇಳಿದರು.

ನಮ್ಮ ಸ್ವಾತಂತ್ರ್ಯ ಚಳವಳಿಗೆ ಹಿಂದಿಯ ಕೊಡುಗೆ ಅಪಾರವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. 1857 ರ ಕ್ರಾಂತಿಯ ವೈಫಲ್ಯದ ಹಿಂದಿನ ಪ್ರಮುಖ ಕಾರಣವೆಂದರೆ ಸಂಪರ್ಕ ಭಾಷೆಯ ಕೊರತೆ ಎಂದು ಅವರು ಹೇಳಿದರು. ನಮ್ಮ ದೇಶವು ಭೌಗೋಳಿಕ ರಾಜಕೀಯ ದೇಶವಲ್ಲ, ಬದಲಿಗೆ ಭೌಗೋಳಿಕ-ಸಾಂಸ್ಕೃತಿಕ ದೇಶವಾಗಿದ್ದು, ನಮ್ಮ ದೇಶವನ್ನು ಸಂಪರ್ಕಿಸುವ ಕೊಂಡಿ ಸಂಸ್ಕೃತಿಯಾಗಿದೆ ಎಂದು ಹೇಳಿದರು. ನಮ್ಮ ದೇಶದ ಐಕ್ಯತೆಯು ಸಂಸ್ಕೃತಿಯ ಮೇಲೆ ನಿರ್ಮಿತವಾಗಿದೆ, ನಮ್ಮ ಸಂಸ್ಕೃತಿಯನ್ನು ಭಾಷೆಗಳಲ್ಲಿ ಜೋಡಿಸಲಾಗಿದೆ ಮತ್ತು ನಿರ್ಮಿಸಲಾಗಿದೆ ಮತ್ತು ನಾವು ನಮ್ಮ ಭಾಷೆಗಳನ್ನು ಕಳೆದುಕೊಳ್ಳುವ ದಿನ, ದೇಶದ ಏಕತೆಗೆ ದೊಡ್ಡ ಅಪಾಯ ಬಂದೊದಗಲಿದೆ ಎಂದು ಅವರು ಹೇಳಿದರು.

ಡಾ.ಭೀಮ್ ರಾವ್ ಅಂಬೇಡ್ಕರ್, ಸಿ.ರಾಜಗೋಪಾಲಾಚಾರಿ, ಮಹಾತ್ಮಾ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಕೆ.ಎಂ.ಮುನ್ಷಿ, ಲಾಲಾ ಲಜಪತ್ ರಾಯ್, ನೇತಾಜಿ ಸುಭಾಷ್ ಚಂದ್ರ ಬೋಸ್ ಅಥವಾ ಆಚಾರ್ಯ ಕೃಪಲಾನಿ ಹೀಗೆ ಹಿಂದಿಯನ್ನು ಪ್ರಚಾರ ಮಾಡಿದ ನಮ್ಮ ಬಹುತೇಕ ನಾಯಕರು ಹಿಂದಿ ಮಾತನಾಡದ ಪ್ರದೇಶಗಳಿಂದ ಬಂದವರು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಅವರೆಲ್ಲರಿಗೂ ಬೇರೆ ಬೇರೆ ಮಾತೃಭಾಷೆಗಳಿದ್ದರೂ ಹಿಂದಿ ಭಾಷೆ ದೇಶವನ್ನು ಒಗ್ಗೂಡಿಸುವ ಮಾಧ್ಯಮ ಎಂಬುದನ್ನು ಅರ್ಥಮಾಡಿಕೊಂಡು ಹಿಂದಿಯನ್ನು ರಾಷ್ಟ್ರೀಯ ಐಕ್ಯತೆಯ ಸಂಕೇತವನ್ನಾಗಿಸಿ ಅದಕ್ಕೆ ಅಧಿಕೃತ ಭಾಷೆಯ ರೂಪ ನೀಡಿದರು ಎಂದರು.

ಯಾರಿಗಾದರೂ ನಮ್ಮ ಭಾಷೆಗಳನ್ನು ಉಳಿಸಲು ಸಾಧ್ಯವಾದರೆ ಅದು ತಾಯಂದಿರು ಮಾತ್ರ ಎಂದು ಶ್ರೀ ಅಮಿತ್ ಶಾ ಹೇಳಿದರು. ಎಲ್ಲ ಪಾಲಕರು ತಮ್ಮ ಮಕ್ಕಳೊಂದಿಗೆ ಮಾತೃಭಾಷೆಯಲ್ಲಿಯೇ ಮಾತನಾಡಬೇಕು ಎಂದು ಮನವಿ ಮಾಡಿದರು. ಹೀಗೆ ಮಾಡಿದರೆ ನಮ್ಮ ಭಾಷೆಗೆ ಯಾವುದೇ ಧಕ್ಕೆಯಾಗುವುದಿಲ್ಲ. ನಮ್ಮ ಭಾಷೆಗಳು ದೇಶ ಮತ್ತು ಜಗತ್ತಿಗೆ ದೀರ್ಘಕಾಲ ಸೇವೆ ಸಲ್ಲಿಸುತ್ತಲೇ ಇರುತ್ತವೆ ಎಂದು ಶ್ರೀ ಶಾ ಹೇಳಿದರು. ಮುಂಬರುವ ಸಮಯವು ಅಧಿಕೃತ ಭಾಷೆ ಮತ್ತು ಇತರ ಭಾರತೀಯ ಭಾಷೆಗಳಿಗೆ ಸೇರಿದೆ ಎಂದು ಹೇಳಿದರು. ಈಗ ಯಾರೂ ಈ ದೇಶವನ್ನು ಯಾವುದೇ ರೀತಿಯ ಗುಲಾಮಗಿರಿಯಲ್ಲಿ ಇಡಲು ಸಾಧ್ಯವಿಲ್ಲ ಮತ್ತು ಎಂದಿಗೂ ಭಾಷೆಯ ಗುಲಾಮಗಿರಿಯಲ್ಲಿ ಇಡಲು ಸಾಧ್ಯವಿಲ್ಲ ಎಂದು ಹೇಳಿದರು.

ಹಿಂದಿಯನ್ನು ಅನುಕೂಲಕರ ಮತ್ತು ಸ್ವೀಕಾರಾರ್ಹವಾಗಿಸುವ ನಿಟ್ಟಿನಲ್ಲಿ ಅಧಿಕೃತ ಭಾಷಾ ಇಲಾಖೆ ಸಾಕಷ್ಟು ಕೆಲಸ ಮಾಡಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಹಿಂದಿಯನ್ನು ಇತರ ಭಾರತೀಯ ಭಾಷೆಯ ಪದಗಳ ಸಮ್ಮಿಲನದಿಂದ ಎಂದಿಗೂ ಕಲುಷಿತಗೊಳಿಸಲಾಗುವುದಿಲ್ಲ, ಏಕೆಂದರೆ ಹಿಂದಿ ತಾಯಿ ಗಂಗಾನದಿಯಂತೆ ಯಾವಾಗಲೂ ಪವಿತ್ರವಾಗಿ ಉಳಿಯುತ್ತದೆ ಎಂದು ಅವರು ಹೇಳಿದರು. ಅನೇಕ ಪದಗಳು ಹಿಂದಿಯಲ್ಲಿಲ್ಲ ಆದರೆ ಇತರ ಸ್ಥಳೀಯ ಭಾಷೆಗಳಲ್ಲಿವೆ ಮತ್ತು ನಾವು ಅವುಗಳನ್ನು ಸ್ವೀಕರಿಸಿದ್ದೇವೆ. ಹಿಂದಿ ಈ ಪದಗಳನ್ನು ಒಪ್ಪಿಕೊಂಡರೆ, ಹಿಂದಿಯ ಹಲವು ಪದಗಳನ್ನು ನಮ್ಮ ಸ್ಥಳೀಯ ಭಾಷೆಗಳು ಸಹ ಒಪ್ಪಿಕೊಂಡಿವೆ ಎಂದು ಅವರು ಹೇಳಿದರು. ನಾವು ಶಬ್ದ ಸಿಂಧು ನಿಘಂಟಿನಲ್ಲಿ ಭಾರತದ ಪ್ರತಿಯೊಂದು ಭಾಷೆಯ ಪದಗಳನ್ನು ಸೇರಿಸಿದ್ದೇವೆ ಎಂದು ಗೃಹ ಸಚಿವರು ಹೇಳಿದರು. ನಾವು ಹಿಂದಿಯನ್ನು ಸ್ವೀಕಾರಾರ್ಹ, ಹೊಂದಿಕೊಳ್ಳುವ ಮತ್ತು ಮಾತನಾಡಲು ಸುಲಭವಾಗುವಂತೆ ಮಾಡಬೇಕು ಎಂದು ಅವರು ಹೇಳಿದರು. ಮುಂದಿನ ಲೋಕಸಭೆ ಚುನಾವಣೆಗೂ ಮುನ್ನ ಶಬ್ದ ಸಿಂಧು ನಿಘಂಟು ವಿಶ್ವದ ಬೃಹತ್ ನಿಘಂಟು ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಶಿಕ್ಷಣ, ತಾಂತ್ರಿಕ ಶಿಕ್ಷಣ ಮತ್ತು ನ್ಯಾಯಾಂಗದಲ್ಲಿ ಹಿಂದಿ ಬಳಕೆಗೆ ಶ್ರಮಿಸುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಹಿಂದಿಯನ್ನು ಹೋರಾಟದಿಂದ ಅಲ್ಲ, ದಿಟ್ಟ ಸ್ವೀಕಾರದಿಂದ ಮುನ್ನಡೆಸಬೇಕು ಎಂದರು. ಸುಪ್ರೀಂ ಕೋರ್ಟ್‌ ನ ಹಲವು ತೀರ್ಪುಗಳನ್ನು ಹಲವು ಭಾರತೀಯ ಭಾಷೆಗಳಿಗೆ ಅನುವಾದಿಸಲಾಗಿದೆ. ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳು ಇಂದು ವೈದ್ಯಕೀಯ ಶಿಕ್ಷಣದ ಸಂಪೂರ್ಣ ಪಠ್ಯಕ್ರಮವನ್ನು ಹಿಂದಿಯಲ್ಲಿ ರೂಪಿಸಿವೆ ಎಂದು ಶ್ರೀ ಶಾ ಹೇಳಿದರು. ಭಾರತದ ಸುಮಾರು 13 ಭಾಷೆಗಳಲ್ಲಿ ಎಂಜಿನಿಯರಿಂಗ್ ಪಠ್ಯಕ್ರಮ ಸಿದ್ಧಪಡಿಸುವ ಕೆಲಸ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸಂಶೋಧನಾ ಭಾಷೆಯೂ ಹಿಂದಿಯೇ ಆಗಲಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹಿಂದಿಯ ಸ್ವೀಕಾರಾರ್ಹತೆಯನ್ನು ಹೆಚ್ಚಿಸುವ ನಮ್ಮ ಮಾರ್ಗಸೂಚಿಯು ಯಶಸ್ವಿಯಾಗಿ ಪ್ರಗತಿಯಲ್ಲಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪ್ರಧಾನಿಯವರು ವಿಶ್ವದ ಅತಿ ದೊಡ್ಡ ವೇದಿಕೆಯಲ್ಲಿ ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದ ಹಿಂದಿಯಲ್ಲಿ ಭಾಷಣ ಮಾಡುವ ಮೂಲಕ ಹಿಂದಿಯ ಸ್ವೀಕಾರವನ್ನು ಹೆಚ್ಚಿಸುವ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದಾಗ ಇಡೀ ವಿಶ್ವವೇ ಬೆರಗಾಗಿತ್ತು ಎಂದರು. ಇಂದು ಹಿಂದಿ ವಿಶ್ವಸಂಸ್ಥೆಯ ಭಾಷೆಯಾಗಿದೆ ಮತ್ತು 10 ಕ್ಕೂ ಹೆಚ್ಚು ದೇಶಗಳ ಎರಡನೇ ಭಾಷೆಯಾಗಿದೆ. ಹಿಂದಿ ಈಗ ಅಂತಾರಾಷ್ಟ್ರೀಯ ಭಾಷೆಯಾಗುವತ್ತ ಸಾಗುತ್ತಿದೆ ಎಂದು ಶ್ರೀ ಶಾ ಹೇಳಿದರು.

ಹಿಂದಿಯಿಂದ ಮಾತ್ರ ಭಾರತೀಯ ಭಾಷೆಗಳು ಬಲಗೊಳ್ಳಲು ಸಾಧ್ಯ ಮತ್ತು ಭಾರತೀಯ ಭಾಷೆಗಳಿಂದ ಮಾತ್ರ ಹಿಂದಿ ಬಲಗೊಳ್ಳಲು ಸಾಧ್ಯ ಎಂದು ಶ್ರೀ ಅಮಿತ್ ಶಾ ಹೇಳಿದರು. ಇಂದು ಗೃಹ ಸಚಿವಾಲಯ ಮತ್ತು ಸಹಕಾರ ಸಚಿವಾಲಯದಲ್ಲಿ ಕಡತಗಳು ಮತ್ತು ಪತ್ರ ವ್ಯವಹಾರಗಳನ್ನು ಹಿಂದಿಯಲ್ಲಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಭಾಷೆ ಒಂದು ಅಭಿವ್ಯಕ್ತಿಯಾಗಿದ್ದು, ಅದು ಸ್ವಂತ ಭಾಷೆಯಲ್ಲಿದ್ದಾಗ ಅಭಿವ್ಯಕ್ತಿ ಧ್ವನಿಯಾಗುತ್ತದೆ ಎಂದು ಅವರು ಹೇಳಿದರು.

 

*****



(Release ID: 2055023) Visitor Counter : 19