ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಲಖ್ಪತಿ(ಲಕ್ಷಾಧಿಪತಿ) ದೀದಿ(ಮಹಿಳೆ)ಯರೊಂದಿಗೆ ಪ್ರಧಾನ ಮಂತ್ರಿ ಅವರ ಸಂವಾದ

Posted On: 26 AUG 2024 1:46PM by PIB Bengaluru

ಪ್ರಧಾನ ಮಂತ್ರಿ: "ಲಖ್ಪತಿ ದೀದಿಗಳು" ಆದವರು ಮತ್ತು ಆಗದವರ ನಡುವೆ ಯಾವ ರೀತಿಯ ಸಂಭಾಷಣೆ ನಡೆಯುತ್ತದೆ?

ಲಖ್ಪತಿ ದೀದಿ: ಲಖ್ಪತಿ ದೀದಿಗಳಾಗಿರುವವರ ಅನುಭವಗಳು ಮತ್ತು ಜೀವನ ಪರಿಸ್ಥಿತಿ ಗಮನಾರ್ಹವಾಗಿ ವಿಭಿನ್ನವಾಗಿವೆ. ಅವರು ಸ್ವಾವಲಂಬಿಗಳಾಗುತ್ತಾರೆ, ಇದು ಅವರ ಕುಟುಂಬದ ಖರ್ಚುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಸರ್, ನನ್ನಲ್ಲಿ ಇಬ್ಬರು "ದಿವ್ಯಾಂಗ್ ದೀದಿಗಳು"(ವಿಭಿನ್ನ ಸಾಮರ್ಥ್ಯವುಳ್ಳ ಸಹೋದರಿಯರು) ಇದ್ದಾರೆ. ನಾನು ಅವರಿಗೆ ಬೆಂಬಲ ನೀಡಿದ್ದೇನೆ. ಅವರ ಪ್ರಗತಿ ಕಂಡು ನನಗೆ ಅಪಾರ ಸಂತೋಷವಾಗುತ್ತಿದೆ.

ಪ್ರಧಾನ ಮಂತ್ರಿ: ಆ ‘ದಿವ್ಯಾಂಗ್ ದೀದಿ’ಗಳು ಲಖಪತಿ ದೀದಿಗಳಾಗಿದ್ದಾರಾ?

ಲಖ್ಪತಿ ದೀದಿ: ಹೌದು, ನಿಜ. ನಾನು ಅವರಿಗೂ ಲಖ್ಪತಿಗಳಾಗಲು ಸಹಾಯ ಮಾಡಿದೆ.

ಪ್ರಧಾನ ಮಂತ್ರಿ: ಅವರು ಯಾವ ರೀತಿಯ ಕೆಲಸ ಮಾಡುತ್ತಾರೆ?

ಲಖಪತಿ ದೀದಿ: ಒಬ್ಬರು ಡೋನ ಪಟ್ಟಾಲ್ ವ್ಯಾಪಾರ ಮಾಡುತ್ತಾರೆ, ಇನ್ನೊಬ್ಬರು ದಿನಸಿ ಅಂಗಡಿ ನಡೆಸುತ್ತಿದ್ದಾರೆ. ನಾನು ಲಖ್ಪತಿ ಸಿಆರ್ ಪಿ(ಸಮುದಾಯ ಸಂಪನ್ಮೂಲ ವ್ಯಕ್ತಿ), 3.5-4 ಲಕ್ಷ ರೂಪಾಯಿ ತನಕ ಸಂಪಾದಿಸುತ್ತಿದ್ದೇನೆ. ನನ್ನ ಸಹೋದರಿಯರು ಲಖ್ಪತಿ ಸಿಆರ್‌ಪಿಯಾಗಲು ಸಹ ನಾನು ಸಹಾಯ ಮಾಡಿದ್ದೇನೆ.

ಲಖ್ಪತಿ ದೀದಿ: ನಾನು ಈಗಾಗಲೇ ಲಖ್ಪತಿ ಆಗಿದ್ದೇನೆ, ನಾನು ಇತ್ತೀಚೆಗೆ 260 ಮಹಿಳೆಯರಿಗೆ ಲಖ್ಪತಿಯಾಗಲು ಸಹಾಯ ಮಾಡಿದ್ದೇನೆ.

ಪ್ರಧಾನ ಮಂತ್ರಿ: ನೀವು ಲಖ್ಪತಿ ದೀದಿಯಾಗಿದ್ದೀರಿ, ಅಂದರೆ ನೀವು ಒಂದು ವರ್ಷದಲ್ಲಿ ಎಷ್ಟು ಸಂಪಾದಿಸುತ್ತೀರಿ?

ಲಖ್ಪತಿ ದೀದಿ: ನಾನು ವರ್ಷಕ್ಕೆ 8 ಲಕ್ಷ ರೂಪಾಯಿ ಸಂಪಾದಿಸುತ್ತೇನೆ.

ಪ್ರಧಾನ ಮಂತ್ರಿ: 8 ಲಕ್ಷ ರೂಪಾಯಿ?

ಲಖ್ಪತಿ ದೀದಿ: ಹೌದು, ಸರ್.

ಪ್ರಧಾನ ಮಂತ್ರಿ: ಅದು 2 ಪಟ್ಟು ಆದಾಯ! ಇದನ್ನು ಸಾಧಿಸಲು ನೀವು ಎಷ್ಟು ವರ್ಷ ತೆಗೆದುಕೊಂಡಿದ್ದೀರಿ?

ಲಖ್ಪತಿ ದೀದಿ: ನಾನು ಈಗಷ್ಟೇ 5 ವರ್ಷ ಪೂರೈಸಿದ್ದೇನೆ ಸರ್.

ಪ್ರಧಾನ ಮಂತ್ರಿ: ಅಸ್ಸಾಂನ ಜನರು ನಿಮ್ಮನ್ನು ಸ್ಫೂರ್ತಿಯ ಅದ್ಭುತ ಮೂಲವಾಗಿ ನೋಡಬೇಕು.

ಲಖ್ಪತಿ ದೀದಿ: ಹೌದು ಸರ್, ನಾನು ಶೂನ್ಯದಿಂದ ಹೀರೋ ಆಗಿದ್ದೇನೆ ಸರ್.

ಪ್ರಧಾನ ಮಂತ್ರಿ: ಒಳ್ಳೆಯದು!

ಲಖ್ಪತಿ ದೀದಿ: ನನ್ನ ಸ್ವ-ಸಹಾಯ ಗುಂಪಿನ ಹೆಸರು ಅತಿ-ಉತ್ತಮಮ್ ಸಖಿ ಮಂಡಲ್. ನಾವು ಮನೆಯಲ್ಲೇ ಕೈಯಿಂದ ಸೌಂದರ್ಯ ಉತ್ಪನ್ನಗಳನ್ನು ತಯಾರಿಸುತ್ತೇವೆ, ಎಲ್ಲವನ್ನೂ ಮನೆಯ ವಸ್ತುಗಳಿಂದ ತಯಾರಿಸಲಾಗಿದೆ. ಸರಸ್ ಮೇಳ, ವೈಬ್ರೆಂಟ್ ಗುಜರಾತ್, ಮತ್ತು ಮಾನ್ಸೂನ್ ಫೆಸ್ಟಿವಲ್‌ನಂತಹ ವೇದಿಕೆಗಳು ನಮಗೆ ಅಂತಹ ಉತ್ತಮ ಮಾನ್ಯತೆ ಒದಗಿಸಿವೆ, ಇದು ನಮ್ಮ ಉತ್ಪನ್ನಗಳ ಜನಪ್ರಿಯತೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಕೇವಲ ಒಂದೇ ವರ್ಷದಲ್ಲಿ 30 ಲಕ್ಷಕ್ಕೂ ಅಧಿಕ ವಹಿವಾಟು ನಡೆಸಿದ್ದೇವೆ.

ಪ್ರಧಾನ ಮಂತ್ರಿ: 30 ಲಕ್ಷ ರೂಪಾಯಿ!

ಲಖ್ಪತಿ ದೀದಿ: ನಮ್ಮ ವಹಿವಾಟು 30 ಲಕ್ಷ ರೂಪಾಯಿ ಮೀರಿದೆ, ನಮ್ಮ ನಿವ್ವಳ ಲಾಭವೇ 12 ಲಕ್ಷ ರೂ.ಗಿಂತ ಹೆಚ್ಚಿದೆ ಸರ್.

ಲಖ್ಪತಿ ದೀದಿ: 10 ಮಹಿಳೆಯರು ಜಂಟಿಯಾಗಿ ಸ್ಯಾನಿಟರಿ ನ್ಯಾಪ್ಕಿನ್ ಕಂಪನಿ ನಡೆಸುತ್ತಿದ್ದಾರೆ ಸರ್.

ಪ್ರಧಾನ ಮಂತ್ರಿ: ಲಾತೂರ್‌ನಿಂದ ನಿಮ್ಮ ಗ್ರಾಮ ಎಷ್ಟು ದೂರದಲ್ಲಿದೆ?

ಲಖ್ಪತಿ ದೀದಿ: ಇದು 20 ಕಿಲೋಮೀಟರ್ ದೂರದಲ್ಲಿದೆ ಸರ್.

ಪ್ರಧಾನ ಮಂತ್ರಿ: 20 ಕಿಲೋಮೀಟರ್. ನೀವು ಮೊದಲು ಪ್ರಾರಂಭಿಸಿದಾಗ ಎಷ್ಟು ಮಹಿಳೆಯರು ಭಾಗಿಯಾಗಿದ್ದರು?

ಲಖ್ಪತಿ ದೀದಿ: ಆರಂಭದಲ್ಲಿ ನಾವು 10 ಮಂದಿ ಇದ್ದೆವು. ಯಾರೂ ಸೇರಲು ಸಿದ್ಧರಿರಲಿಲ್ಲ, ಮತ್ತು ಜನರು ಸ್ಯಾನಿಟರಿ ನ್ಯಾಪ್ಕಿನ್‌ಗಳ ಬಗ್ಗೆ ಮಾತನಾಡಲು ಸಹ ಹಿಂಜರಿಯುತ್ತಿದ್ದರು.

ಪ್ರಧಾನ ಮಂತ್ರಿ: ನಿಮ್ಮ ಈಗಿನ ವಹಿವಾಟು ಎಷ್ಟು?

ಲಖ್ಪತಿ ದೀದಿ: ವಹಿವಾಟು 5 ಲಕ್ಷ ರೂ.

ಪ್ರಧಾನ ಮಂತ್ರಿ: ನೀವು ಹಿಂದಿಯನ್ನು ಇಷ್ಟು ನಿರರ್ಗಳವಾಗಿ ಹೇಗೆ ಮಾತನಾಡುತ್ತೀರಿ?

ಲಖ್ಪತಿ ದೀದಿ: ಇತರರೊಂದಿಗೆ ನಿತ್ಯವೂ ಮಾತನಾಡುವುದರಿಂದ ಇದು ಸಹಜವಾಗಿ ಬರುತ್ತದೆ.

ಪ್ರಧಾನ ಮಂತ್ರಿ: ನೀವು ನಿಮ್ಮ ಉತ್ಪನ್ನಗಳನ್ನು ಮಹಾರಾಷ್ಟ್ರದ ಹೊರಗೆ ಮಾರಾಟ ಮಾಡುತ್ತೀರಾ?

ಲಖ್ಪತಿ ದೀದಿ: ಇಲ್ಲ ಸರ್, ಸದ್ಯಕ್ಕೆ ನಾವು ಮಹಾರಾಷ್ಟ್ರದಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತೇವೆ. ಮಹಿಳಾ ಸಬಲೀಕರಣ ಕಾರ್ಯಕ್ರಮ ಮತ್ತು ನಾವು ಪಡೆದ ಉದ್ಯೋಗಾವಕಾಶಗಳಿಗಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ ಸರ್. ಇದರಲ್ಲಿ ನೀವು ನಿರ್ಣಾಯಕ ಪಾತ್ರ ವಹಿಸಿದ್ದೀರಿ. ನಾವು ಕೇವಲ ಮಾಧ್ಯಮವಾಗಿದ್ದೀವಿ, ನೀವು ಸಂಪೂರ್ಣ ಹಾದಿಯನ್ನು ಸುಗಮಗೊಳಿಸಿದ್ದೀರಿ. ನಾವು ಮುಂದೆ ನಡೆಯಬೇಕಷ್ಟೆ.

ಲಖ್ಪತಿ ದೀದಿ: ನಾನು 2017ರಿಂದ ಬ್ಯಾಂಕ್ ಸಖಿಯಾಗಿ ಕೆಲಸ ಮಾಡುತ್ತಿದ್ದೇನೆ.

ಪ್ರಧಾನ ಮಂತ್ರಿ: ನೀವು ಈಗ ಎಷ್ಟು ಸಂಪಾದಿಸುತ್ತೀರಿ?

ಲಖ್ಪತಿ ದೀದಿ: ನಾನು ಪ್ರಸ್ತುತ 4.5-5 ಲಕ್ಷ ರೂ. ಸರ್.

ಪ್ರಧಾನ ಮಂತ್ರಿ: ನೀವು ಈ ಪ್ರದೇಶದವರೇ?

ಲಖ್ಪತಿ ದೀದಿ: ಹೌದು ಸರ್.

ಪ್ರಧಾನ ಮಂತ್ರಿ: ಹಾಗಾದರೆ ನೀವು ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಬೇಕು.

ಲಖ್ಪತಿ ದೀದಿ: ನಾನು ಮಾಡುತ್ತೇನೆ ಸರ್. ನೀವೂ ಬರಬೇಕು.

ಪ್ರಧಾನ ಮಂತ್ರಿ: ಹೌದು, ಆದರೆ ನನ್ನನ್ನು ಯಾರು ಆಹ್ವಾನಿಸುತ್ತಾರೆ? ಯಾರೂ ಕರೆಯಲ್ಲ.

ಲಖ್ಪತಿ ದೀದಿ: ನಾನು ಪರಿಣಿತ ಸರ್. ಬ್ಯಾಂಕ್‌ಗೆ ಹೋಗಲು ಅಥವಾ ಮನೆಯಲ್ಲಿ ಸಮಸ್ಯೆಗಳನ್ನು ನಿಭಾಯಿಸಲು ಆಗಾಗ್ಗೆ ತೊಂದರೆಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ, ವಿಶೇಷವಾಗಿ ಗ್ರಾಮೀಣ ಮಹಿಳೆಯರಿಗೆ ಸಹಾಯ ಮಾಡುವುದು ನನ್ನ ಕೆಲಸ. ನಾನು ಅವರ ಮನೆಗಳಿಗೆ ಭೇಟಿ ನೀಡುತ್ತೇನೆ, ಅವರ ಬ್ಯಾಂಕ್ ಖಾತೆಗಳನ್ನು ತೆರೆಯಲು ಸಹಾಯ ಮಾಡುತ್ತೇನೆ.

ಲಖ್ಪತಿ ದೀದಿ: ಸರ್, ನಿನ್ನೆಯ ಒಂದು ಉದಾಹರಣೆ ಹಂಚಿಕೊಳ್ಳುತ್ತೇನೆ. ನನ್ನ ಮಗಳನ್ನು ಶಾಲೆಯಲ್ಲಿ ಅವಳ ತಾಯಿ ಎಲ್ಲಿದ್ದಾರೆ ಎಂದು ಕೇಳಿದರಂತೆ.

ಪ್ರಧಾನ ಮಂತ್ರಿ: ಹೌದಾ.

ಲಖ್ಪತಿ ದೀದಿ: ಸರ್, ನನ್ನ ಮಗಳು ಹೆಮ್ಮೆಯಿಂದ ಹೇಳಿದಳು, "ನನ್ನ ತಾಯಿ ಮೋದಿ ಜಿ ಅವರನ್ನು ಭೇಟಿಯಾಗಲು ಮಹಾರಾಷ್ಟ್ರಕ್ಕೆ ಹೋಗಿದ್ದಾರೆ." ಸರ್, ನೀವು ಒಮ್ಮೆ ನಹಾನ್ ಅವರನ್ನು ಭೇಟಿ ಮಾಡಿದ್ದೀರಿ. ಅಂದು ನನಗೆ ನಿಮ್ಮನ್ನು ಭೇಟಿ ಮಾಡಲು ಸಾಧ್ಯವಾಗದಿದ್ದರೂ, ಇಂದು ಈ ಅವಕಾಶ ಸಿಕ್ಕಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇದು ನನಗೆ ದೊಡ್ಡ ಗೌರವ ಸರ್.

ಪ್ರಧಾನ ಮಂತ್ರಿ: ನಾನು ಈ ಹಿಂದೆ ಸಿರ್ಮೌರ್‌ಗೆ ಆಗಾಗ್ಗೆ ಭೇಟಿ ನೀಡುತ್ತಿದ್ದೆ.

ಲಖ್ಪತಿ ದೀದಿ: 2023 ರಲ್ಲಿ ನಾವು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಆಚರಿಸಿದ್ದೇವೆ. ನಾವು ಸಿರಿಧಾನ್ಯ ಬೆಳೆಯ ತರಬೇತಿ ಪಡೆದಿದ್ದೇವೆ ಸರ್. ಅದರ ನಂತರ, ನಾವು ಕಲೆಕ್ಟರೇಟ್‌ನ ಜಿಪಂ ಕಚೇರಿ ಬಳಿ ಕಟ್ಟಡ ಪಡೆದುಕೊಂಡಿದ್ದೇವೆ, ಅಲ್ಲಿ ನಾವು ಈಗ ಸಿರಿಧಾನ್ಯ ಕೆಫೆ ನಡೆಸುತ್ತಿದ್ದೇವೆ. ಅಲ್ಲಿ ನಮ್ಮಂತೆ 38 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ.

ಪ್ರಧಾನ ಮಂತ್ರಿ: ನೀವು ಎಷ್ಟು ಸಂಪಾದಿಸುತ್ತೀರಿ?

ಲಖ್ಪತಿ ದೀದಿ: ಸರ್, ಅಲ್ಲಿ ನನ್ನ ಸಂಬಳ 30,000 ರೂ. ಹಾಗಾಗಿ ನನ್ನ ಒಟ್ಟು ವಾರ್ಷಿಕ ಆದಾಯ 3 ಲಕ್ಷದ 30 ಸಾವಿರ ರೂ.

ಲಖ್ಪತಿ ದೀದಿ: ನಾನು ಪಶು ಸಖಿ ಮತ್ತು ಗುಜರಾತ್‌ನ ಎನ್ ಡಿಡಿಗಾಗಿ ಆರೋಗ್ಯ ಕಾರ್ಯಕರ್ತೆಯಾಗಿಯೂ ಕೆಲಸ ಮಾಡುತ್ತೇನೆ. ನಾನೇ ಲಖ್ಪತಿ ದೀದಿ ಮತ್ತು ನನ್ನ ಜೊತೆಯಲ್ಲಿ 88 ಮಹಿಳೆಯರು ಕೆಲಸ ಮಾಡುತ್ತಾರೆ.

ಲಖ್ಪತಿ ದೀದಿ: ನನ್ನ ಗುಂಪನ್ನು ಜೈ ಮಾತಾ ದಿ ಎಂದು ಕರೆಯಲಾಗುತ್ತದೆ. ನಾನು ಗುಂಪಿನಲ್ಲಿ ಪಶು ಸಖಿಯಾಗಿ ಕೆಲಸ ಮಾಡುತ್ತೇನೆ, ಪತ್ರಿ ಗ್ರಾಮದಲ್ಲಿ ನಾನು 500 ರೈತರೊಂದಿಗೆ ಕೆಲಸ ಮಾಡುತ್ತೇನೆ.

ಪ್ರಧಾನ ಮಂತ್ರಿ: 500?

ಲಖ್ಪತಿ ದೀದಿ: ಹೌದು ಸರ್, 500 ರೈತರೊಂದಿಗೆ.

ಲಖ್ಪತಿ ದೀದಿ: ಎಸ್‌ಎಜಿ ದೀದಿಗಳಿಗೆ ಸಾಲ ನೀಡುವುದು ಮತ್ತು ಅವರ ಪ್ರಗತಿಗೆ ಸಹಾಯ ಮಾಡುವುದು ನನ್ನ ಪಾತ್ರ. ಇದರಿಂದ ವರ್ಷಕ್ಕೆ ಸುಮಾರು 1 ಲಕ್ಷ 50 ಸಾವಿರ ರೂ. ಸಂಪಾದಿಸುತ್ತೇನೆ.

ಪ್ರಧಾನ ಮಂತ್ರಿ: 1.50 ಲಕ್ಷ ರೂ.?

ಲಖ್ಪತಿ ದೀದಿ: ಹೌದು, ಸರ್.

ಪ್ರಧಾನ ಮಂತ್ರಿ: ವಾವ್.

ಲಖ್ಪತಿ ದೀದಿ: ಸರ್, ನಾವು ಅಮೆಡಿಯನ್ ಸಮುದಾಯಕ್ಕೆ ಸೇರಿದವರು, ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಹೊರಗೆ ಹೋಗಲು ಅವಕಾಶವಿರಲಿಲ್ಲ. ನನ್ನ ಮನೆಯವರ ಸ್ಥಿತಿ ತುಂಬಾ ಹೀನಾಯವಾಗಿತ್ತು ಸರ್. ಆದರೆ ಗುಂಪು ಸೇರಿದ ಮೇಲೆ ನನಗೆ ಪಶು ಸಖಿ ಕೆಲಸ ಸಿಕ್ಕಿತು. ಇಂದು ನಾನು ಲಖ್ಪತಿ ದೀದಿ, ಸರ್.

ಪ್ರಧಾನ ಮಂತ್ರಿ: ನೀವು ಎಲ್ಲಿಂದ ಬಂದವರು?

ಲಖ್ಪತಿ ದೀದಿ: ಮೇಘಾಲಯದಿಂದ.

ಪ್ರಧಾನ ಮಂತ್ರಿ: ಮೇಘಾಲಯದ ಎಷ್ಟು ಸಹೋದರಿಯರು ನಿಮ್ಮೊಂದಿಗೆ ಇದ್ದಾರೆ?

ಲಖ್ಪತಿ ದೀದಿ: ಗುಂಪಿನಲ್ಲಿ ನಾವು 10 ಮಂದಿ ಇದ್ದೇವೆ.

ಪ್ರಧಾನ ಮಂತ್ರಿ: ಹತ್ತು.

ಲಖ್ಪತಿ ದೀದಿ: ಹೌದು, ಆದರೆ ನಾವು ಎಸ್ಎಚ್ ಜಿ ಫಾರ್ಮಸಿಯಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದೇವೆ. ನಾನು ಕೇವಲ 3.03 ಲಕ್ಷ ರೂ. ಅನ್ನು ಎಸ್ಎಚ್ ಜಿ ಫಾರ್ಮಸಿಯಲ್ಲಿ ಹೂಡಿಕೆ ಮಾಡಿದ್ದೇನೆ.

ಲಖ್ಪತಿ ದೀದಿ: ನಾವು ಈ ಅಭಿಯಾನದ ಭಾಗವಾಗುವ ಮೊದಲು, ನಮಗೆ ಯಾವುದೇ ಹೆಸರು ಅಥವಾ ಗುರುತು ಇರಲಿಲ್ಲ. ಸೇರಿದ ನಂತರ ನಮ್ಮ ಘನತೆ ಹೆಚ್ಚಾಯಿತು. ನಾವು ಕೃಷಿ ವೈದ್ಯರಾಗಿದ್ದೇವೆ, ಕೃಷಿ ಸಖಿಗಳಾಗಿ ತರಬೇತಿ ಪಡೆದಿದ್ದೇವೆ.

ಲಖ್ಪತಿ ದೀದಿ: ಈಗ ನಮ್ಮನ್ನು ಡಾಕ್ಟರ್ ದೀದಿ ಎಂದು ಕರೆಯುತ್ತಾರೆ.

ಪ್ರಧಾನಿ: ನೀವು ಎಷ್ಟು ರಾಸುಗಳನ್ನು ನೋಡಿಕೊಳ್ಳುತ್ತೀರಿ?

ಲಖ್ಪತಿ ದೀದಿ: ಸರ್, ನಮ್ಮ ಬ್ಲಾಕ್ ತುಂಬಾ ದೊಡ್ಡದಾಗಿದೆ. ನಾವು 20 ಮಂದಿ ಅಲ್ಲಿ ಕೆಲಸ ಮಾಡುತ್ತಿದ್ದೇವೆ, ಆ ಪ್ರದೇಶದಲ್ಲಿ 470 ಲಖಪತಿ ದೀದಿಗಳನ್ನು ಮಾಡಿದ್ದೇವೆ.

ಪ್ರಧಾನ ಮಂತ್ರಿ: 470?

ಲಖ್ಪತಿ ದೀದಿ: ಹೌದು ಸರ್.

ಪ್ರಧಾನ ಮಂತ್ರಿ: ವಾಹ್, ನೀವು ನಂಬಲಾಗದ ಕೆಲಸ ಮಾಡಿದ್ದೀರಿ. ನಿಮಗೆ ಅಭಿನಂದನೆಗಳು.

ಲಖ್ಪತಿ ದೀದಿ: ಸರ್, 2021 ರಲ್ಲಿ ನೀವು 10,000 ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲು ಯೋಜಿಸಿದ್ದೀರಿ. ಆ ಉಪಕ್ರಮದ ಅಡಿ, ನಾವು ಇಚ್ಛಾವರದಲ್ಲಿ ಆತ್ಮನಿರ್ಭರ್ ಮಹಿಳಾ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಸ್ಥಾಪಿಸಿದ್ದೇವೆ. ಮೊದಲ ವರ್ಷದಲ್ಲಿ ನಾವು 1,000 ರೈತ ಸಹೋದರಿಯರನ್ನು ಕಂಪನಿಗೆ ಸೇರಿಸಿದ್ದೇವೆ.

ಪ್ರಧಾನ ಮಂತ್ರಿ: 1,000?

ಲಖ್ಪತಿ ದೀದಿ: ಹೌದು, ಸರ್.

ಪ್ರಧಾನ ಮಂತ್ರಿ: ಒಂದು ವರ್ಷದಲ್ಲಿ?

ಲಖ್ಪತಿ ದೀದಿ: ಹೌದು ಸರ್.

ಲಖ್ಪತಿ ದೀದಿ: ನಮಸ್ಕಾರ ಸರ್. ನನ್ನ ಹೆಸರು ರಾಬಿಯಾ ಬಶೀರ್. ನಾನು ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯವಳು. ನಾನು ಹೈನುಗಾರಿಕೆ ವ್ಯವಹಾರ ನಡೆಸುತ್ತಿದ್ದು, ನನ್ನ ಪ್ರಸ್ತುತ ವಾರ್ಷಿಕ ಆದಾಯ 1.20 ಲಕ್ಷ ರೂ. ನಾನು ಸ್ವತಃ ಲಖ್ಪತಿ ಮತ್ತು ನಾನು 160 ಸದಸ್ಯರಿಗೆ ಲಖ್ಪತಿಗಳಾಗಲು ಸಹಾಯ ಮಾಡಿದ್ದೇನೆ.

ಪ್ರಧಾನ ಮಂತ್ರಿ: ನೀವು ಎಷ್ಟು ಜಾನುವಾರು ನೋಡಿಕೊಳ್ಳುತ್ತೀರಿ?

ಲಖ್ಪತಿ ದೀದಿ: ನಾವು ಪ್ರಸ್ತುತ 10 ಜಾನುವಾರು ನೋಡಿಕೊಳ್ಳುತ್ತೇವೆ.

ಲಖ್ಪತಿ ದೀದಿ: ಜೈ ಜೋಹರ್, ಸರ್. ಜೈ ಛತ್ತೀಸ್ ಗಢ.

ಪ್ರಧಾನ ಮಂತ್ರಿ: ಜೈ ಜೋಹರ್.

ಲಖ್ಪತಿ ದೀದಿ: ಸರ್, ನಮ್ಮಲ್ಲಿ ಎಫ್ ಪಿ ಒ(ರೈತ ಉತ್ಪಾದಕ ಸಂಸ್ಥೆ) ಇದೆ. ಈ ಯೋಜನೆಯನ್ನು ಭಾರತ ಸರ್ಕಾರ ಸ್ಥಾಪಿಸಿದೆ. ಇಲ್ಲಿಯವರೆಗೆ, ಕಿಸಾನ್ ದೀದಿಯರು ಎಂದು ಕರೆಯಲ್ಪಡುವ 15,800 ಸಹೋದರಿಯರು ನಮ್ಮೊಂದಿಗೆ ಸೇರಿಕೊಂಡಿದ್ದಾರೆ. ಪ್ರತಿ ಸಹೋದರಿ 50,000- 60,000 ರೂ. ದುಡಿಯುತ್ತಾರೆ.

ಪ್ರಧಾನ ಮಂತ್ರಿ: ನಿಮ್ಮೊಂದಿಗೆ ಎಷ್ಟು ಸಹೋದರಿಯರು ಇದ್ದಾರೆ?

ಲಖ್ಪತಿ ದೀದಿ: ಪ್ರಸ್ತುತ ನಮ್ಮೊಂದಿಗೆ 100-500 ಮಹಿಳೆಯರಿದ್ದಾರೆ.

ಪ್ರಧಾನ ಮಂತ್ರಿ: ಸರಿ.

ಲಖ್ಪತಿ ದೀದಿ: ನಾನು ಡ್ರೋನ್ ದೀದಿ.

ಪ್ರಧಾನಮಂತ್ರಿ: ಹಾಗಾದರೆ ಗ್ರಾಮದ ಎಲ್ಲರೂ ನಿಮ್ಮನ್ನು ಡ್ರೋನ್ ಪೈಲಟ್ ಎಂದು ಕರೆಯುತ್ತಾರಾ?

ಲಖ್ಪತಿ ದೀದಿ: ಹೌದು ಸರ್, ನಮ್ಮ ಜಿಲ್ಲೆಯಲ್ಲಿ 3 ಡ್ರೋನ್ ಪೈಲಟ್‌ಗಳಿದ್ದಾರೆ, ಅವರಲ್ಲಿ ನಾನೂ ಒಬ್ಬಳು.

ಲಖ್ಪತಿ ದೀದಿ: ನಾನು 2019ರಿಂದ ಸ್ವಸಹಾಯ ಗುಂಪು ಜೀವನ್ ಸ್ವಯಂ ಸಹಾಯತಾದ ಸದಸ್ಯಳಾಗಿದ್ದೇನೆ. ಸರ್, ನಮ್ಮೊಂದಿಗೆ 1,500 ಮಹಿಳೆಯರಿದ್ದಾರೆ.

ಪ್ರಧಾನ ಮಂತ್ರಿ: 1,500?

ಲಖ್ಪತಿ ದೀದಿ: ಹೌದು, ಸರ್. ನಾನು ಮರಾಠಿ ಮಾತನಾಡುತ್ತೇನೆ. ನನಗೆ ಹಿಂದಿ ಹೆಚ್ಚು ಬರುವುದಿಲ್ಲ ಸರ್.

ಪ್ರಧಾನ ಮಂತ್ರಿ: ನೀವು ಮರಾಠಿಯಲ್ಲಿ ಮಾತನಾಡಬಹುದು.

ಲಖ್ಪತಿ ದೀದಿ: ನನ್ನ ಹೊಲದಲ್ಲಿ ಮಹುವ ಮರಗಳಿವೆ. ನಾನು ಮಹುವಾ ಮಾರಾಟ ಮಾಡುವ ವ್ಯಾಪಾರ ನಡೆಸುತ್ತಿದ್ದೇನೆ, ನನ್ನ ಗುಂಪಿನ ಮಹಿಳೆಯರಿಂದ ಮಹುವಾ ಖರೀದಿಸುತ್ತೇನೆ. ಕೇವಲ 2 ತಿಂಗಳಲ್ಲಿ ನಾನು 2-2.5 ಲಕ್ಷ ರೂ. ಸಂಪಾದಿಸುತ್ತೇನೆ.

ಪ್ರಧಾನ ಮಂತ್ರಿ: 2 ಲಕ್ಷ ರೂಪಾಯಿ?

ಲಖ್ಪತಿ ದೀದಿ: ಹೌದು ಸರ್.

ಪ್ರಧಾನ ಮಂತ್ರಿ: ಒಟ್ಟು ಎಷ್ಟು ಮಹಿಳೆಯರಿದ್ದಾರೆ? ಐನೂರ?

ಲಖ್ಪತಿ ದೀದಿ: 538

ಲಖ್ಪತಿ ದೀದಿ: ಸರ್, ನಾನು ಮರಾಠಿಯಲ್ಲಿ ಮಾತನಾಡುತ್ತಿದ್ದೇನೆ.

ಪ್ರಧಾನ ಮಂತ್ರಿ: ಹೌದು, ಅದು ಚೆನ್ನಾಗಿದೆ.

ಲಖ್ಪತಿ ದೀದಿ: ನನಗೂ ಪ್ರವಾಸೋದ್ಯಮ ವ್ಯಾಪಾರವಿದೆ. ನಾನು 2 ಪ್ರವಾಸಿ ದೋಣಿಗಳನ್ನು ಹೊಂದಿದ್ದೇನೆ, ಪ್ರವಾಸಿಗರನ್ನು ಸವಾರಿ ಮಾಡಿಸುತ್ತೇನೆ. ನಾನು ಕೇರಳಕ್ಕೆ ಹೋಗಿ ಅವರ ಪ್ರವಾಸೋದ್ಯಮ ವ್ಯವಹಾರ ಗಮನಿಸಿದೆ. ಇಲ್ಲಿ ನಾವು ಮಹಿಳೆಯರೇ ಸೇರಿ ಈ ವ್ಯವಹಾರ ನಡೆಸುತ್ತೇವೆ. ನಾನು ಕಳೆದ 3 ವರ್ಷಗಳಿಂದ ನನ್ನ ಸ್ವಂತ ಪ್ರವಾಸಿ ದೋಣಿ ನಿರ್ವಹಿಸುತ್ತಿದ್ದೇನೆ, ಅದರಿಂದ ವಾರ್ಷಿಕ 1-1.5 ಲಕ್ಷ ರೂ. ನಡುವೆ ಗಳಿಸುತ್ತಿದ್ದೇನೆ.

ಪ್ರಧಾನ ಮಂತ್ರಿ: ವಾವ್!

ಲಖ್ಪತಿ ದೀದಿ: ಈ ವ್ಯವಹಾರ ವಿಸ್ತರಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ.

ಲಖ್ಪತಿ ದೀದಿ: ನಾನು ಗೊಂಡಿಯಾ ಜಿಲ್ಲೆಯವಳು, ಸಲೇಕಸ ಬುಡಕಟ್ಟು ಪ್ರದೇಶದವಳು. ನಾನು ಬುಡಕಟ್ಟು ಮಹಿಳೆ, ನಾನು ಇ-ರಿಕ್ಷಾ ಹೊಂದಿದ್ದೇನೆ, ಅದನ್ನು ನಾನೇ ಓಡಿಸುತ್ತೇನೆ. ನಾನು ಹಳ್ಳಿಯಲ್ಲಿ ವಸ್ತುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಸಹ ಬಳಸುತ್ತೇನೆ. ನಾನು ತಿಂಗಳಿಗೆ 10,000-12,000 ರೂ.ವರೆಗೆ ಲಾಭ ಗಳಿಸುತ್ತೇನೆ.

ಪ್ರಧಾನ ಮಂತ್ರಿ: ನಿಮ್ಮೆಲ್ಲರ ಮಾತುಗಳನ್ನು ಕೇಳಿದ ನಂತರ ದೇಶದಲ್ಲಿ ಲಖ್ಪತಿ ದೀದಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿದೆ ಎಂದು ನನಗೆ ಅನಿಸುತ್ತಿದೆ. ಜನರು ನಿಮ್ಮ ಕಥೆಗಳನ್ನು ಓದಿದಾಗ ಮತ್ತು ಕೇಳಿದಾಗ, ಅವರು ಸ್ಫೂರ್ತಿ ಹೊಂದುತ್ತಾರೆ. ನಿಮ್ಮ ಅನುಭವಗಳನ್ನು ನೀವು ಇತರರೊಂದಿಗೆ ಹಂಚಿಕೊಳ್ಳಬೇಕು - ಅದು ಹೇಗೆ? ನೀವು ಎಷ್ಟು ಸ್ವಾವಲಂಬಿಯಾಗಿದ್ದೀರಿ? ನಿಮ್ಮ ಇಡೀ ಕುಟುಂಬವನ್ನು ನೀವು ಎಷ್ಟು ಬೆಂಬಲಿಸಬಹುದು? ಇದಲ್ಲದೆ, ನಿಮ್ಮ ಸಬಲೀಕರಣವು ನಿಮ್ಮ ಸುತ್ತಲಿನ ಪರಿಸರಕ್ಕೆ ಗಮನಾರ್ಹ ಬದಲಾವಣೆಗಳನ್ನು ತರುತ್ತದೆ. ನನ್ನ ಗುರಿ ಏನು ಗೊತ್ತಾ? ನೀವು ನೋಡಿ, 1 ಕೋಟಿ ದೀದಿಗಳು ಈಗಾಗಲೇ ಲಖಪತಿ ದೀದಿಗಳಾಗಿದ್ದಾರೆ. ನಾನು 3 ಕೋಟಿ ಲಖಪತಿ ದೀದಿಗಳನ್ನು ಮಾಡುವ ಗುರಿ ಹೊಂದಿದ್ದೇನೆ. ಆದ್ದರಿಂದ ನೀವು ಇದನ್ನು ಇತರರಿಗೆ ವಿವರಿಸಲು ಸಹಾಯ ಮಾಡಬೇಕು. ನೀವು ಅದನ್ನು ಮಾಡುತ್ತೀರಾ?

ಲಖ್ಪತಿ ದೀದಿ: ಹೌದು, ಸರ್.

ಪ್ರಧಾನ ಮಂತ್ರಿ: ನಿಮಗೆ ಖಚಿತವಾಗಿದೆಯೇ?

ಲಖ್ಪತಿ ದೀದಿ: ಹೌದು.

ಪ್ರಧಾನ ಮಂತ್ರಿ: ಒಳ್ಳೆಯದು, ಚೆನ್ನಾಗಿದೆ. ಧನ್ಯವಾದಗಳು.

 

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****

 

 

 

 

 

 

 

 

 

 


(Release ID: 2050049) Visitor Counter : 56